ಅಂಕಣ

೦೬೬. ದುಂದುಗಾರನವನೆಂದರೆ, ನೀ ಮಂದದೃಷ್ಟಿಯವನಾಗುವೆ ಮರುಳೆ..!

ಮಂಕುತಿಮ್ಮನ ಕಗ್ಗ ಟಿಪ್ಪಣಿ  :

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ ? |

ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ ? ||

ಕರ್ತನಾಲೋಚಿಸದ ದುಂದಿನವನೆಂಬ ನುಡಿ |

ಯರ್ಧದೃಷ್ಟಿಯ ವಿವರ – ಮಂಕುತಿಮ್ಮ || ೦೬೬ ||

ಸೃಷ್ಟಿಯ ವೈವಿಧ್ಯತೆಯೆ ಅಪಾರ. ಸೃಷ್ಟಿ ಕಿರೀಟವಾದ ನರಮಾನವನಿಂದ ಹಿಡಿದು ಕ್ಷುದ್ರ ಹುಳು ಹುಪ್ಪಟೆ, ಕ್ರಿಮಿಕೀಟಗಳತನಕ ಇಲ್ಲಿ ಎಲ್ಲವು ಸಲ್ಲುವಂತಹ ಅಸ್ತಿತ್ವವೆ. ಆದರೆ ಯಾಕೀ ಅಗಾಧ ವೈವಿಧ್ಯ, ಅಂತರ ಈ ಸೃಷ್ಟಿಯಲಿ ? ಇದರಲ್ಲಿ ಎಳ್ಳೆಷ್ಟು, ಜೊಳ್ಳೆಷ್ಟು ? ಸ್ಪಷ್ಟ ಉದ್ದೇಶದಿಂದಾದ ಪಾಲೆಷ್ಟು, ವ್ಯರ್ಥಸೃಷ್ಟಿಯೆನಿಸಿದ ಪಾಲೆಷ್ಟು ? ಎಂತೆಲ್ಲಾ ಪ್ರಶ್ನೆಗಳು ಮಂಕುತಿಮ್ಮನನ್ನು ಕಾಡಿವೆ ಈ ಕಗ್ಗದಲ್ಲಿ.

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ ? |

ಯಾವುದೊ ಒಂದಷ್ಟು ಮೂಲವಸ್ತುವನ್ನಿಟ್ಟುಕ್ಕೊಂಡು, ಯುಗಯುಗಾಂತರ ಸಮಯವನ್ನು ವ್ಯಯಿಸಿ, ಏನೆಲ್ಲಾ ವಸ್ತು-ಪದಾರ್ಥಗಳನ್ನು ಬಳಸಿ ಸೃಷ್ಟಿಸಿದ ಈ ಜಗವನ್ನು ನೋಡಿದರೆ ನಾವು ಮಾನವರು ಇದರ ಅತಿಸಣ್ಣ ಭಾಗಾಂಶ ಮಾತ್ರ. ನಮ್ಮನ್ನದೆಷ್ಟೊ ಪಟ್ಟು ಮೀರಿಸಿದ ಕ್ರಿಮಿಕೀಟದಂತಹ ಜಂತುಗಳೆ ಲೆಕ್ಕದಲ್ಲಿ ಅಗಣಿತ ಕೋಟಿ ಕೋಟಿ. ಅಷ್ಟೊಂದು ಸಂಖ್ಯೆಯಲ್ಲಿ, ಅಷ್ಟೊಂದು ವೈವಿಧ್ಯಮಯವಾಗಿ ಬೇರೆಲ್ಲವನ್ನೂ ಸೃಷ್ಟಿಸಿದರು, ಸೃಷ್ಟಿಕರ್ತನ ಅದ್ಭುತ ಸೃಷ್ಟಿ ಈ ನರಮಾನವ ಮಾತ್ರವೆಂಬ ವಾದ ಹಿಡಿದು ಹೋದಾಗ, ಅವನ ಮಿಕ್ಕಸೃಷ್ಟಿಯ ಬಹುತೇಕ ಭಾಗ ವ್ಯರ್ಥವೆಂದೆ ಭಾಸವಾಗುವುದಿಲ್ಲವೆ ?

ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ ? ||

ಯಾಕವನು ಅಷ್ಟೊಂದು ಸಂಖ್ಯೆಯಲ್ಲಿ ಆ ಕ್ರಿಮಿಕೀಟಾದಿ ಜೀವಿಗಳನ್ನೆಲ್ಲ ಸೃಷ್ಟಿಸಿದ ? ಯಾವ ಪುರುಷಾರ್ಥಕ್ಕೆ ಬೇಕಿತ್ತು ಈ ಮಹಾನ್ ಯಜ್ಞ ? ಅದರ ರಚನೆಯ ಹಿನ್ನಲೆಯಲ್ಲೂ ನಾವರಿಯಲಾಗದ ಒಗಟಿನ, ನಮಗೆಟುಕದದಾವುದೋ ಮತ್ತೊಂದು ಗುಟ್ಟಿನ ತುಣುಕಿದೆಯೆ? ಏನು ಅರ್ಥವಿರಬಹುದು ಈ ರಚನಾ ಕ್ರಮದಲ್ಲಿ? ಎಲ್ಲಾ ಸುಖಾಸುಮ್ಮನೆ ಸೃಷ್ಟಿಯಾಗಿದ್ದು ಮಾತ್ರವಲ್ಲ , ತಂತಮ್ಮ ವೈವಿಧ್ಯಗಳನ್ನು ವಿಸ್ತರಿಸಿಕೊಂಡು, ಬೆಳೆಸಿಕೊಂಡು ಹೋಗುತ್ತಾ ನಿಯಂತ್ರಿಸಲೇ ಆಗದ ಸಂಕೀರ್ಣತೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿರುವಂತಿದೆಯಲ್ಲಾ? ಏನಿದರ ರೇಖಾಲೇಖಾ?

ಕರ್ತನಾಲೋಚಿಸದ ದುಂದಿನವನೆಂಬ ನುಡಿ |

ಇದೆಲ್ಲವನ್ನು ನೋಡಿದರೆ ಆ ಸೃಷ್ಟಿಕರ್ತ ‘ಹಿಂದುಮುಂದು ಆಲೋಚಿಸದ, ಲೆಕ್ಕಾಚಾರವಿಡದ ದುಂದುವೆಚ್ಚ ಮಾಡುವ ಮನೋಭಾವದವನೆಂಬ ಹಾಗೆ ಕಾಣುವುದಿಲ್ಲವೆ? ಯಾವುದೊ ಗೊತ್ತುಗುರಿಯಿಲ್ಲದ ಅಥವ ಅವನ ಹತೋಟಿ, ನಿಯಂತ್ರಣ, ಮೇಲುಸ್ತುವಾರಿಕೆ ಮೀರಿ ಸೃಷ್ಟಿಯಾದ ರಚನೆಗಳಂತೆ ಕಾಣುವುದಿಲ್ಲವೆ?’ ಎಂದೆಲ್ಲಾ ಆಲೋಚನೆಗಳು ಬರುತ್ತವೆ ಚಿಕಿತ್ಸಕ ಮನದ ದೃಷ್ಟಿಗೆ. ಆ ವಿಚಾರ ಬಂದಾಗ ಸೃಷ್ಟಿಕರ್ತನ ಸರ್ವಶಕ್ತತೆಯ ಬಗೆಗೂ ಅನುಮಾನ ಆರಂಭವಾಗಿಬಿಡುತ್ತದೆ. ತಾನೇ ಸೃಜಿಸಿದ ಸೃಷ್ಟಿಯಲ್ಲಿ ತಾನಿಟ್ಟುಕೊಂಡ ಗುರಿಯತ್ತ ನಡೆಯುವಾಗ ಒಂದೋ ಲೆಕ್ಕಾಚಾರವಿಡದ ದುಂದುವೆಚ್ಚದವನಾಗಿ ಕಾಣಿಸುತ್ತಾನೆ ಅಥವಾ ತಾನೇನು ಮಾಡುತ್ತಿರುವೆನೆಂಬ ಅರಿವಿಲ್ಲದ ಗೊಂದಲವಿರುವವನಂತೆ ಭಾಸವಾಗುತ್ತಾನೆ. ನಿಜಕ್ಕೂ ಅವನು ಅಂತಹ ದುಂದುಗಾರನೇ? ಗೊತ್ತು ಗುರಿಯಿಲ್ಲದೆ ಸೃಷ್ಟಿಕ್ರಿಯೆ ಮಾಡಲ್ಹೊರಟು ಕೊನೆಗೇನೇನೋ ಸೃಜಿಸುವ ಅನಿವಾರ್ಯಕ್ಕೊಳಗಾದವನೇ ? ಅಥವಾ ಸೃಷ್ಟಿಕಾರ್ಯದ ರಸದಲ್ಲಿ ಮಿಕ್ಕುಳಿಯುತಿದ್ದ ಕಸವನ್ನು ಎಸೆಯದೆ ಅದಕ್ಕೂ ಕ್ರಿಮಿಕೀಟಗಳ ಹೆಸರಲ್ಲಿ ಸೃಷ್ಟಿರೂಪವನಿತ್ತು ಸಂಪನ್ಮೂಲವನ್ನು ಸಾರ್ಥವಾಗಿ ಬಳಸಿಕೊಂಡ ತಜ್ಞ ಅಭಿಯಂತರ ಶ್ರೇಷ್ಠನೇ ? ಇದೆಲ್ಲಾ ಆಯಾಮಗಳ ಸಾಧ್ಯತೆಯಿರುವಾಗ ಅವನನ್ನು ಬರಿಯ ದುಂದುಗಾರನೆಂಬ ಹಣೆಪಟ್ಟಿಯಲ್ಲಿ ಬಂಧಿಸುವುದು ಎಷ್ಟು ಸೂಕ್ತ? ಆ ತೀರ್ಮಾನ ಸಾಧುವೇ ಎನ್ನುವ ಜಿಜ್ಞಾಸೆ ಮಂಕುತಿಮ್ಮನನ್ನು ಕಾಡಿದೆ, ಈ ಸಾಲಿನಲ್ಲಿ.

…ನುಡಿ | ಯರ್ಧದೃಷ್ಟಿಯ ವಿವರ – ಮಂಕುತಿಮ್ಮ || ೦೬೬ ||

ಹೀಗಾಗಿ ಅದು ಕೇವಲ ಅರ್ಧದೃಷ್ಟಿಯ ಅಪಕ್ವ ವಿವರಣೆ ಎಂದು ವಿಶ್ಲೇಷಿಸುತ್ತದೆ ಕವಿಮನ. ಯಾಕೆಂದರೆ ಇದು ನಮ್ಮ ಕಡೆಯ , ನಮ್ಮಳತೆಯ ಮಿತಿಯೊಳಗಿರುವ ದೃಷ್ಟಿಕೋನ. ಸೃಷ್ಟಿಯ ಕುರಿತಾದ ನಮಗಿರುವ ಅರಿವೇ ಸೀಮಿತಮಟ್ಟದ್ದು. ಹೀಗಾಗಿ ಸೃಷ್ಟಿಕರ್ತನ ಅಗತ್ಯಾಗತ್ಯಗಳ, ಆಲೋಚನೆಗಳ, ಧ್ಯೇಯೋದ್ದೇಶಗಳ ಅರಿವಿಲ್ಲದೆ ಮಾಡುವ ಏಕಪಕ್ಷೀಯ ತೀರ್ಮಾನವಿದು. ಉದಾಹರಣೆಗೆ ಈ ಇಡಿ ಜೀವ ಜಗತ್ತು ನಿರಂತರವಾಗಿ ತಂತಾನೆ ನಡೆಸಿಕೊಂಡು ಮುಂದುವರೆಯುವಂತೆ ಮಾಡಿರುವ ಒಂದು ಕಾರ್ಯಕಾರಣ ಸಂಗತಿ – ಆಹಾರ ಸರಪಳಿ. ಸೂಕ್ಷ್ಮ ಜೀವಾಣುಜಗದಿಂದ, ಸಸ್ಯಜಗ ಮತ್ತು ಪ್ರಾಣಿಜಗಗಳೆಲ್ಲವು ಒಂದರ ಮೇಲೆ ಮತ್ತೊಂದು ಪರಸ್ಪರ ಅವಲಂಬಿತವಾಗಿ ಈ ಪ್ರಕ್ರಿಯೆ ನಿರಂತರವಾಗಿರುವಂತೆ ನೋಡಿಕೊಂಡಿವೆ. ಅರ್ಥಾತ್ ಈ ರೀತಿಯ ಇರುವಿಕೆಯಿಂದ ಸೃಷ್ಟಿ ತನ್ನನ್ನು ತಾನೆ ಸ್ವಯಂಚಾಲಿತವಾಗಿ ಸಮತೋಲಿಸಿಕೊಂಡು, ಪೋಷಿಸಿಕೊಂಡು ಹೋಗಲಿಕ್ಕೆ ಸಾಧ್ಯವಾಗಿದೆ, ಯಾರ ಕೈವಾಡದ ನೆರವು ಇಲ್ಲದೆ. ಈ ಸರಪಳಿ ಕ್ರಿಯೆ ಇರದಿದ್ದರೆ ಜೀವಸಂತತಿಗಳೆಲ್ಲ ನಶಿಸಿಯೆ ಹೋಗುತ್ತಿತ್ತೇನೊ ಕಾಲುನುಕ್ರಮದಲ್ಲಿ. ಬಹುಶಃ ಸೃಷ್ಟಿಕರ್ತ ಈ ಸಮತೋಲನದ ಅಗತ್ಯವನ್ನು ಯೋಚಿಸಿಯೆ ಈ ಎಲ್ಲಾ ಜೀವಿಗಳ ಸೃಷ್ಟಿ ಮಾಡಿರಬೇಕು. ಅದು ಬಿಟ್ಟು ಬರಿ ಮನುಜರೆ ಇದ್ದ ಜಗವೊಂದನ್ನು ಮಾತ್ರ ಸೃಷ್ಟಿಸಿದ್ದರೆ ಅವರೆಲ್ಲ ತಂತಮ್ಮಲ್ಲೆ ಪರಸ್ಪರ ಹೊಡೆದಾಡಿ, ಬಡಿದಾಡಿಕೊಂಡು, ತಮ್ಮನ್ನೆ ಆಹಾರವಾಗಿಸಿಕೊಳ್ಳುತ್ತ ಒಂದಲ್ಲಾ ಒಂದು ದಿನ ನಾಮಾವಶೇಷವಾಗಿ ಕೊನೆಗಾಣಬೇಕಾಗುತ್ತಿತ್ತು. ಆದರೆ ಹಾಗಾಗಲು ಬಿಡದೆ ಕಾಪಾಡಿದ್ದು ಈ ಜೀವ ವೈವಿಧ್ಯದ ಸರಪಳಿ ವ್ಯವಸ್ಥೆ ಮತ್ತು ಜೀವವಿಕಾಸದ ಸ್ವಯಂಭು ತತ್ತ್ವ. ಹೀಗಾಗಿ ಸೃಷ್ಟಿಯ ಪ್ರತಿಯೊಂದು ರಚನೆಗು ಅರ್ಥವಿದೆಯೆ ಹೊರತು ವ್ಯರ್ಥವಲ್ಲ ಎಂಬ ಇಂಗಿತ ಭಾವ ಇಲ್ಲಿ ವ್ಯಕ್ತವಾಗಿದೆ.

ಸಾರಾಂಶದಲ್ಲಿ ಹೇಳುವುದಾದರೆ, ಅಗಾಧ ಸೃಷ್ಟಿಯ ಮೇಲೊಂದು ವಿವೇಚಿತ ತೀರ್ಪು ತೀರ್ಮಾನ ಮಾಡುವಷ್ಟು ಮಟ್ಟಿಗಿನ ಪಕ್ವತೆ, ಪ್ರಬುದ್ಧತೆ ಮನುಕುಲಕ್ಕಿನ್ನು ಸಿದ್ಧಿಸಿಲ್ಲ. ಸಿದ್ಧಿಸುವುದೋ ಬಿಡುವುದೋ ಅದು ಬೇರೆಯ ಪ್ರಶ್ನೆ ; ನಮಗಿರುವ ಅರ್ಧದೃಷ್ಟಿ ನಮ್ಮ ಲೌಕಿಕ ಮತ್ತು ಐಹಿಕ ಜಗಕಷ್ಟೇ ಕನ್ನಡಿಯಾಗಬಲ್ಲದೆ ಹೊರತು ನಾವು ಕಾಣದ ಪಾರಮಾರ್ಥಿಕ ಲೋಕಕ್ಕೆ ಬೆಳಕು ಹಿಡಿಯದು. ಆ ಪರಿಪಕ್ವತೆಯಿಲ್ಲದ ಮನಸ್ಥಿತಿಯಲ್ಲಿ, ಅರೆಬರೆ ಜ್ಞಾನದಲ್ಲಿ ಸೃಷ್ಟಿಯನ್ನು, ಸೃಷ್ಟಿಕರ್ತನನ್ನು ವಿನಾಕಾರಣ ಟೀಕಿಸುವ ಬದಲು ಅದರ ಅಸ್ತಿತ್ವವನ್ನು ಗೌರವಿಸುವ ಮನೋಭಾವ ಒಳಿತು. ಅದರಿಂದ ಆ ಸತ್ಯದ ಮೂಲವನ್ನು ಅರಿತುಕೊಳ್ಳುವ ಸಾಧ್ಯತೆಯೂ ಹೆಚ್ಚು ಎನ್ನುವುದು ಇಲ್ಲಿನ ಅಂತರಾರ್ಥ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!