ಅಂಕಣ

ಸಾಮಾಜಿಕ ಜಾಲತಾಣಗಳು ಹಾಗೂ ಅನವಶ್ಯಕ ಕಲಹಗಳು…

ಸಾಮಾಜಿಕ ಜಾಲತಾಣಗಳು ಆಧುನಿಕ ಜನಜೀವನದ ಒಂದು ಅವಿಭಾಜ್ಯ ಅಂಗ. ಇಂದು ದಿನಚರಿಯ ಪ್ರತಿಯೊಂದನ್ನೂ ಮನೆಯವರ ಬಳಿ ಹಂಚಿಕೊಳ್ಳುತ್ತೇವೋ, ಇಲ್ಲವೋ ಅರಿಯೆ. ಜಾಲತಾಣಗಳಾದಂತಹ ಫೇಸ್ಬುಕ್, ಟ್ವಿಟರ್ ಗಳಲ್ಲಿ ಮಾತ್ರ ನಿರಂತರ ಸ್ಟೇಟಸ್ ಅಪ್ಡೇಟ್’ಗಳನ್ನು ಹಾಕುತ್ತಲೇ ಇರುತ್ತೇವೆ. “ಹ್ಯಾಪ್ಪಿ ಬರ್ತಡೇ ಅಪ್ಪಾ!!!” ಎಂದು ಅಪ್ಪನ ಪಕ್ಕದಲ್ಲೇ ಕೂತು, ಫೇಸಬುಕ್’ನಲ್ಲಿ ಸಂದೇಶ ಕಳಿಸುವ ಕಾಲ ಇದು. ಅಷ್ಟರಮಟ್ಟಿಗೆ ಈ ಜಾಲತಾಣಗಳಿಗೆ ನಾವು ಮಾರು ಹೋಗಿದ್ದೇವೆ. ಇನ್ನು ನಮ್ಮ ಸುದ್ದಿ ಮಾಧ್ಯಮಗಳು ಕೂಡ ತಮ್ಮದೇ ಜಾಲತಾಣ ಪುಟಗಳನ್ನು ಆರಂಭಿಸಿ, ಆ ಮೂಲಕ ಕೂಡ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಮಾಡುತ್ತಿವೆ. ಇಡೀ ಜಗತ್ತಿನ ಸುದ್ದಿಗಳೆಲ್ಲ ಅರೆಕ್ಷಣದಲ್ಲಿ ಅರಿವಿಗೆ ಬರುತ್ತದೆ. ಇದೇ ಜಾಲತಾಣಗಳಿಂದಲೇ ಅದೆಷ್ಟೋ ಬಾಲ್ಯದ ಗೆಳೆಯರು ಮತ್ತೆ ಸಿಗುವಂತಾಗಿದೆ. ಅದೆಷ್ಟೋ ದೂರದಲ್ಲಿರುವ ಸಂಬಂಧಿಗಳೊಂದಿಗೆ, ಕೂತಲ್ಲಿಯೇ ಮಾತುಕತೆ ನಡೆಸುವಂತಾಗಿದೆ. ಹೀಗೆ ಇನ್ನೂ ಹತ್ತು ಹಲವು ಉಪಯೋಗಗಳಾಗಿವೆ. ಆದರೆ ಇವೆಲ್ಲದರ ನಡುವೆ ಕೆಲವು ಆತಂಕದ ಸಂಗತಿಗಳು ಸಹ ಗೋಚರವಾಗುತ್ತಿವೆ.

ತಮ್ಮ ಫೇಸ್’ಬುಕ್ ಗೋಡೆಗಳ ಮೇಲೆ ಏನು ಬೇಕಾದರೂ ಬರೆದುಕೊಳ್ಳಬಹುದು ಎಂಬ ಸ್ವಾತಂತ್ರ್ಯವನ್ನು ಕೆಲವರು ಸ್ವೇಚ್ಛೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇನ್ನೊಬ್ಬರ ವ್ಯಕ್ತಿತ್ವದ ಕುರಿತು ಅವಹೇಳನಕಾರಿಯಾಗಿ ಬರೆಯುವುದು, ತಮಗೆ ಯಾರ ಮೇಲಾದರೂ ಇರುವ ವೈಯಕ್ತಿಕ ದ್ವೇಶಗಳನ್ನು ತೀರಿಸಿಕೊಳ್ಳಲು ಅವರ ವಿರುದ್ಧ ಇಲ್ಲಸಲ್ಲದ‌ ಆರೋಪಗಳನ್ನು ಮಾಡುವುದು, ಎಲ್ಲೋ ನಡೆದ ಅಪಘಾತಗಳನ್ನೋ ಅಥವಾ ಇನ್ನೇನೋ ಅಹಿತಕರ ಘಟನೆಗಳನ್ನೋ, ಇನ್ನೆಲ್ಲೋ ಆದದ್ದೆಂದು ಗುಲ್ಲೆಬ್ಬಿಸುವುದು, ಆ ಮೂಲಕ ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಸುವುದು, ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳುವ ಮೊದಲೇ ಅವುಗಳಿಗೆ ಪ್ರತಿಕ್ರಿಯಿಸುವುದು, ಯಾವುದೋ ಸಣ್ಣ ವಿಚಾರಕ್ಕೆ ಆರಂಭವಾದ ಆರೋಗ್ಯಕರ ಚರ್ಚೆಗೆ, ಅಸಂಬದ್ಧ ಕಮೆಂಟುಗಳ ಮೂಲಕ ಚರ್ಚೆಯ ದಿಕ್ಕು ತಪ್ಪಿಸಿ ಶಾಂತಿ ಕದಡುವುದು, ತಮಗೆ ಸಂಬಂಧವೇ ಇರದ ವಿಚಾರಗಳಿಗೂ ‘ನಂದೆಲ್ಲಿಡಲಿ’ ಎನ್ನುವಂತೆ ಏನಾದರೊಂದು ಕಮೆಂಟಿಸುವುದು, ಪ್ರತಿಯೊಂದು ವಿಚಾರಕ್ಕೂ ಎಲ್ಲಿಂದಲೋ ಒಂದು ರಾಜಕೀಯದ ಎಳೆ ತಂದು ಜೋಡಿಸಿ ಹೊಸ ಗಲಭೆಗಳನ್ನೆಬ್ಬಿಸುವುದು; ಹೀಗೆ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಜನ ದಿನೇ ದಿನೇ ಹೆಚ್ಚುತ್ತಿದ್ದಾರೇನೋ ಅನಿಸುತ್ತಿದೆ. ಇನ್ನೊಂದು ಬೇಸರದ ಸಂಗತಿಯೆಂದರೆ, ಯಾರೋ ಒಂದಷ್ಟು ಜನ ಒಂದೇ ಪದದ ಹ್ಯಾಶ್’ಟ್ಯಾಗ್’ಗಳನ್ನು ಬಳಸಿ ಒಂದಾದ ಮೇಲೊಂದರಂತೆ ಪೋಸ್ಟುಗಳನ್ನೋ, ಟ್ವೀಟ್’ಗಳನ್ನೋ ಹಾಕಿ ಬಿಟ್ಟರೆ ಅದೇ ಒಂದು ದೊಡ್ಡ ಆಂದೋಲನದಂತೆ ಬಿಂಬಿತವಾಗುವುದು.

ಕಣ್ಣಿಗೆ ರಾಚುವಂತೆ ಸಮಾಜದಲ್ಲಿ ಅದೆಷ್ಟೋ ಸಮಸ್ಯೆಗಳು ತಾಂಡವವಾಡುತ್ತಿದ್ದರೂ, ಜಾಲತಾಣಗಳಲ್ಲಿ ಸುದ್ದಿ ಮಾಡುವ ಸಮಸ್ಯೆಗಳೇ  ಬೇರೆಯಾಗಿರುತ್ತವೆ. ಇದ್ದಕ್ಕಿದ್ದಂತೆ ದೇಶಕ್ಕೆ ಲಗ್ಗೆ ಇಡುವ ಹೊಸ ಸಾಂಕ್ರಾಮಿಕ ರೋಗದಂತೆ ಈ ಜಾಲತಾಣಗಳ ಹ್ಯಾಶ್’ಟ್ಯಾಗ್ ಸಮಸ್ಯೆಗಳು ಕಂಡು ಬರುತ್ತವೆ ನನಗೆ. ಆ ಸಮಸ್ಯೆಯ‌ ಕುರಿತಾಗೋ ಇಲ್ಲ ಹೋರಾಟದ ಕುರಿತಾಗೋ ಬಿತ್ತರವಾಗುವ ಪೋಸ್ಟ್’ಗಳಲ್ಲಿ ಅಥವಾ ಟ್ವೀಟ್’ಗಳಲ್ಲಿ, ಸಮಯ ಕಳೆದಂತೆ, ಶುರುವಾದಾಗ ಇದ್ದ ಸಮಸ್ಯೆಯ ಕುರಿತಾದ ಚರ್ಚೆಯ ಸುಳಿವೇ ಅಲ್ಲಿ ಇರುವುದಿಲ್ಲ. ಯಾವದೋ ವಿಚಾರಕ್ಕೆ, ಯಾರ್ಯಾರೋ ಜಗಳ ಆಡಿಕೊಳ್ಳುತ್ತ ಅನವಶ್ಯಕ ದ್ವೇಷ ಸಾಧಿಸುತ್ತಿರುತ್ತಾರೆ. ಈ ಆನ್’ಲೈನ್ ದ್ವೇಷ ತೀರಾ ಅಗತ್ಯವಿಲ್ಲದ್ದು ಎನಿಸುತ್ತದೆ. ಕೆಲವೊಮ್ಮೆ ಇಬ್ಬರು ವ್ಯಕ್ತಿಗಳು ಒಂದೇ ಉದ್ದೇಶಕ್ಕಾಗಿ ಹೋರಾಡುತ್ತಿದ್ದರೂ, ಅವರು ಅನುಸರಿಸಿದ ದಾರಿ ಬೇರೆ ಎಂಬ ಕಾರಣಕ್ಕೆ ಕಿತ್ತಾಡುತ್ತಿರುತ್ತಾರೆ. ಇಂತಹ ಪ್ರಚಾರಗಳು, ಅದರ ಜೊತೆ ಹುಟ್ಟಿಕೊಳ್ಳುವ ವೈಮನಸ್ಸುಗಳು ಇವೆಲ್ಲ ನಿಜಕ್ಕೂ ಅವಶ್ಯವೇ?

ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಂಡಿದ್ದೇ ಆದಲ್ಲಿ ಸಮಾಜದ ಅದೆಷ್ಟೋ ಸಮಸ್ಯೆಗಳಿಗೆ ಸಂಘಟಿತ ಹೋರಾಟ ನಡೆಸಿ ಇಲ್ಲವೇ ಒಗ್ಗೂಡಿ ಅವುಗಳ ಪರಿಹಾರಕ್ಕೆ ಅಗತ್ಯವಾದ ಹಾದಿಗಳ ಬಗ್ಗೆ ಚರ್ಚಿಸಿ ಆ ಮೂಲಕ ಒಂದಷ್ಟು ಸಮಾಜಮುಖಿ ಕಾರ್ಯಗಳಿಗೆ ತೊಡಗಿಸಿಕೊಳ್ಳಬಹುದಲ್ಲವೇ? ಆದರೆ ಇತ್ತೀಚೆಗೆ ಸಮಸ್ಯೆ ಹಾಗೂ ಅದರ ಪರಿಹಾರಗಳ ಕುರಿತು ತೋರುವ ಆಸಕ್ತಿಗಿಂತ ಸಮಸ್ಯೆಗಳ ಕುರಿತು ಕೊಡುವ ಹೇಳಿಕೆಗಳ ಮೇಲೆ ನಮ್ಮ ಗಮನ ಕೇಂದ್ರಿತವಾಗುತ್ತಿರುವುದು ವಿಷಾದನೀಯ. ಯಾವುದೇ ವಿಚಾರಗಳ ಮೇಲೆ ಯಾರೋ ಕೊಡುವ ಹೇಳಿಕೆಗಳು ಸಮಸ್ಯೆಯ ಪರಿಹಾರ ಮಾಡಲಾರವು, ಬದಲಾಗಿ ಅದನ್ನು ನಿವಾರಿಸುವ ಕಡೆಗಿನ ನಮ್ಮ ಪ್ರಯತ್ನ ಮುಖ್ಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ಕೆಲವೊಮ್ಮೆ, ನಮಗೆ ಕೆಲವೊಂದು ಹೇಳಿಕೆಗಳು ತೀರಾ ಅಸಂಬದ್ಧ ಎನಿಸಬಹುದು. ಹಾಗೆನಿಸಿದಾಗ ಅದನ್ನು ಅಲ್ಲಿಗೇ ಬಿಟ್ಟು ಬಿಡೋಣ. ಆ ಅಸಂಬದ್ಧ ಹೇಳಿಕೆಗಳು ನಮ್ಮ ನಿಲುವನ್ನೋ, ಅಥವಾ ನಾವು ಕೈಗೊಳ್ಳುವ ಕಾರ್ಯಗಳನ್ನೋ ತಡೆಯಬಲ್ಲವೇ? ಖಂಡಿತ ಇಲ್ಲ. ಅಂತಹ ಹೇಳಿಕೆಗಳು ಅವರ ಬುದ್ಧಿಗೇಡಿತನವನ್ನು ತೋರಿಸುತ್ತವೆಯೇ ಹೊರತು ಇನ್ನೇನೂ ಅಲ್ಲ. ಅದನ್ನು ಬಿಟ್ಟು, ಅವರಂತೆ ಇನ್ನೊಂದು ಅಸಂಬದ್ಧ ಹೇಳಿಕೆ ಕೊಡುವ ಮೂಲಕ ನಾವು ಕೂಡ ಬುದ್ಧಿಗೇಡಿಗಳೇ ಎಂದು ನಿರೂಪಿಸುವ ಹುಚ್ಚುತನವೇಕೆ? ಎಂಬುದು ನನ್ನ ಅಭಿಪ್ರಾಯ. ಅದರಲ್ಲೂ ಕೆಲ ಪ್ರಚಾರಪ್ರಿಯರು, ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ಧಿಯಾಗುವ ಹುನ್ನಾರ ನಡೆಸುತ್ತಾರೆ. ಅಂತಹವರಿಗೆ ಯಾರಾದರೂ ತಮ್ಮ ಹೇಳಿಕೆಗಳಿಗೆ ಪ್ರತಿಕ್ರಿಯಿಸದರೆ ಅವರ ಉದ್ದೇಶ‌ ಸಫಲವಾದಂತೆ. ಅದು ಧನಾತ್ಮಕವಾಗಲಿ, ಋಣಾತ್ಮಕವಾಗಲಿ, ಅವರಿಗೆ ಅದು ಮುಖ್ಯವಲ್ಲ. ಎರಡರಿಂದಲೂ ಅವರ ಹೆಸರು ಜಾಲತಾಣಗಳಲ್ಲಿ ಸದ್ದು ಮಾಡುತ್ತದೆ. ಹಾಗಾಗಿ ಅಂತಹವರನ್ನು ಅವರ ಪಾಡಿಗೆ ಹೇಳಲು ಬಿಟ್ಟು ನಾವು ನಮ್ಮ ಕೆಲಸಗಳನ್ನು ಮುಂದುವರೆಸುವುಸು ಒಳ್ಳೆಯದು.

ಒಮ್ಮೆ ಆಲೋಚಿಸಿ ಗೆಳೆಯರೆ, ಈ ಜಾಲತಾಣಗಳ ಮೂಲ ಉದ್ದೇಶ ಹೊಸ ಗೆಳೆಯರನ್ನು ಸಂಪಾದಿಸುವುದು ಇಲ್ಲವೇ ಇರುವ ಗೆಳೆಯರು ದೂರದೂರುಗಳಲ್ಲಿದ್ದರೂ ಅವರ ಜೊತೆ ನಿರಂತರ ಒಡನಾಟ ಇಟ್ಟುಕೊಳ್ಳುವುದು. ಆ ಮೂಲಕ ಪರಸ್ಪರ ಪರಿಚಯಗಳ ವಿನಿಮಯವಾಗಿ, ಸಂಪರ್ಕ ಏರ್ಪಟ್ಟು ಸ್ನೇಹ ಸೌಹಾರ್ದತೆಗಳು ಬೆಳೆಯಲಿ ಎಂದಲ್ಲವೇ? ಯಾವುದೇ ಜಾಲತಾಣಗಳಲ್ಲಿ ‘Add friend’ ಎಂದಿರುತ್ತದೆಯೇ ಹೊರತು ‘Add Enemy’ ಎಂದಲ್ಲ. ಆದರೆ ನಾವು ಮಾಡುತ್ತಿರುವುದೇನು? ದಿನೇ ದಿನೇ ಹೊಸ ಹೊಸ ವೈರಿಗಳನ್ನು ಹುಟ್ಟು ಹಾಕಿಕೊಳ್ಳುತ್ತಿದ್ದೇವೆ. ಅಲ್ಲಿಗೆ ಜಾಲತಾಣಗಳ ಮೂಲ ಉದ್ದೇಶಕ್ಕೇ ಕೊಡಲಿ ಏಟು ಬಿದ್ದಂತಾಯಿತಲ್ಲ. ಅದರರ್ಥ, ಸ್ನೇಹ ಸಂಪಾದಿಸಲು ಮಾಡಿಕೊಟ್ಟ ಅತಿ ಸುಲಭದ ವ್ಯವಸ್ಥೆಯನ್ನು ಸಹ ಉಪಯೋಗಿಸಲು ಬಾರದ ಮೂರ್ಖರು ನಾವು ಎಂದು ನಿರೂಪಿಸುತ್ತಿದ್ದೇವೆ ಅನಿಸುತ್ತದೆ ನನಗೆ. ಇಂತಹ ಮೂರ್ಖತನ ಬೇಕೇ ನಮಗೆ? ಇದರಿಂದ ಯಾರಿಗೆ ಒಳ್ಳೆಯದಾಗುತ್ತದೆ; ಯಾರಿಗೂ ಇಲ್ಲ. ಅದರ ಬದಲಾಗಿ ಸ್ನೇಹಪರ, ಸಮಾಜಮುಖಿ ಚಿಂತನೆಗಳಿಂದ, ಒಂದಷ್ಟು ಬದುಕಿನ ಸಿಹಿ ಕ್ಷಣಗಳ ನೆನಪುಗಳಿಂದ ನಮ್ಮ ಜಾಲತಾಣಗಳ ಗೋಡೆಬರಹಗಳು ತುಂಬಿದ್ದರೆ ಎಷ್ಟು ಚಂದ ಅಲ್ಲವೇ? ಪದೇ ಪದೇ ಅನ್ಯರ ಕಾರ್ಯಗಳನ್ನೋ, ಅವರ ನಿಲುವುಳನ್ನೋ ಖಂಡಿಸುತ್ತಲೇ ಸಾಗುವ ಬದಲು ನಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿ ಅದಕ್ಕೆ ಸೂಕ್ತ ಕಾರಣಗಳನ್ನು ಒದಗಿಸಿ ಅವಕ್ಕೆ ವ್ಯಕ್ತವಾಗುವ ಪ್ರಚೋದನಕಾರಿ ಪ್ರತಿಕ್ರಿಯೆಗಳ ಬಗ್ಗೆ ತಲೆ‌ಕೆಡಿಸಿಕೊಳ್ಳದೇ “ಅವರವರ ಭಾವಕ್ಕೆ, ಅವರವರ ಭಕುತಿಗೆ” ಎಂದು ಭಾವಿಸಿ,  ನಮ್ಮ‌ ಜವಾಬ್ದಾರಿಗಳತ್ತವಷ್ಟೇ ಗಮನಕೊಟ್ಟರೆ ಅದೆಷ್ಟೋ ಅನವಶ್ಯಕ ಕಲಹಗಳನ್ನು ತಪ್ಪಿಸಬಹುದಲ್ಲವೇ?

ಉದಾಹರಣೆಗೆ ನಮ್ಮ ಕನ್ನಡ ಪರ ಹೋರಾಟಗಳನ್ನೇ ಪರಿಗಣಿಸಿ. ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂಬ ಹೋರಾಟಗಳು ಒಂದು ರೀತಿಯಲ್ಲಿ ಅವಶ್ಯ. ಆದರೆ ಅದು ಕೇವಲ ಹ್ಯಾಶ್’ಟ್ಯಾಗ್’ಗಳಿಂದ ಬಗೆಹರಿಯುವ ಸಮಸ್ಯೆ‌ ಎಂದು ನನಗನಿಸುವುದಿಲ್ಲ. ಕನ್ನಡದ ಬಳಕೆ ಹೆಚ್ಚು ಹೆಚ್ಚು ಆದಾಗ ಮಾತ್ರ ಅದು ಸಾಧ್ಯ. ಒಂದು ರೀತಿ ಆಲೋಚಿಸುವಾಗ ಕನ್ನಡವನ್ನು ಉಳಿಸಲು ಕನ್ನಡಕ್ಕೇನೂ ಆಗಿಲ್ಲ. ಆಗಿರುವುದು ನಮ್ಮ ಮನಸ್ಥಿತಿಗಳಿಗೆ ಅನಿಸುತ್ತದೆ. ಜಯಂತ್ ಕಾಯ್ಕಿಣಿ ಒಂದು ಸಂದರ್ಶನದಲ್ಲಿ ಹೇಳುತ್ತಾರೆ: “ಯಾರೋ ಒಬ್ಬ ನದಿಯ ಮೇಲಿನ ಸಿಟ್ಟಿಗೆ, ಸ್ನಾನ ಮಾಡೋದನ್ನ ಬಿಟ್ಟಿದ್ನಂತೆ, ಇದರಿಂದ ನದಿಗೇನೂ ನಷ್ಟವಿಲ್ಲ, ನಷ್ಟ ಆಗುವುದು ಸ್ನಾನ ಮಾಡದವನಿಗೆ. ಹಾಗೆಯೇ ಕನ್ನಡ ಬಳಸದೇ ಅಥವಾ ಮಾತನಾಡದೇ ಹೋದರೆ, ನಮಗೆ ನಷ್ಟವೇ ಹೊರತು ಕನ್ನಡಕ್ಕಲ್ಲ.” ಎಷ್ಟು ಸತ್ಯ ಅಲ್ಲವೇ ಅವರ ಮಾತು!!! ಕನ್ನಡದ ಸಾಹಿತ್ಯ ಅತ್ಯಂತ ಶ್ರೀಮಂತವಾದದ್ದು. ಕನ್ನಡವನ್ನು ನಾವು ಉಳಿಸಬೇಕಾದ್ದಿಲ್ಲ. ಆದರೆ ಅವುಗಳ ಅಧ್ಯಯನದಿಂದ ನಾವು ಪಡೆಯಬೇಕಾದದ್ದು ಬಹಳಷ್ಟಿವೆ. ಹಾಗಾಗಿ ಕನ್ನಡ ಸಾಹಿತ್ಯದ ಕುರಿತು ನಾವು ಆಸಕ್ತಿ ಬೆಳೆಸಿಕೊಳ್ಳಬೇಕು, ಇತರರಿಗೂ ಆಸಕ್ತಿ ಮೂಡುವಂತೆ ಮಾಡಬೇಕು. ಅ ನಿಟ್ಟಿನಲ್ಲಿ ಜಾಲತಾಣಗಳನ್ನು ನಾವು ಸಮರ್ಪಕವಾಗಿ ಬಳಸಿಕೊಂಡು ಕನ್ನಡ ಸಾಹಿತ್ಯದ ಗಂಧವನ್ನು ಹೆಚ್ಚು ಹೆಚ್ಚು ಪಸರಿಸಬಹುದು. “ಕನ್ನಡ ಉಳಿಸಿ, ಬೆಳೆಸಿ” ಎಂದು ಪದೇ‌ಪದೇ ಹೇಳುವುದಕ್ಕಿಂತ, ನಾವೇ ಅದನ್ನು ಹೆಚ್ಚು ಹೆಚ್ಚು ಬಳಸಿ, ಅಥವಾ ಸಾಹಿತ್ಯವನ್ನು ಅಭ್ಯಸಿಸಿ ಅದರಿಂದ ನಮಗೆ ತಿಳಿದ ಉತ್ತಮ ವಿಚಾರಳನ್ನ ಇದೇ ಜಾಲತಾಣಗಳ ಮೂಲಕ ಹಂಚಿಕೊಂಡಾಗ ಬಹುಷಃ ಇತರರಲ್ಲಿಯೂ ಕನ್ನಡದ ಕುರಿತಾದ ಆಸಕ್ತಿ ಮೂಡುವ ಸಂಭವಗಳು ಜಾಸ್ತಿ ಎನ್ನುವುದು ನನ್ನ ನಂಬಿಕೆ. ಈಗಾಗಲೇ ಕೆಲವು ಜಾಲತಾಣದ ಪುಟಗಳು ಈ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಹಾಗೆಯೇ ನಾವು ಕೂಡ “ಅವರು ಕನ್ನಡ ಮಾತನಾಡುವುದಿಲ್ಲ, ಇವರು ಕನ್ನಡ ಮಾತನಾಡುವುದಿಲ್ಲ, ಅಲ್ಲಿ ಕನ್ನಡ ಇಲ್ಲ, ಇಲ್ಲಿ ಕನ್ನಡ ಇಲ್ಲ” ಎನ್ನುತ್ತಲೇ ಕೂರುವುದಕ್ಕಿಂತ ಆದಷ್ಟು ಕನ್ನಡದ ಇತಿಹಾಸ, ಲೇಖಕರು, ಕವಿಗಳು ಅವರ ಕೃತಿಗಳ ಕುರಿತಾಗಿ ಹೆಚ್ಚು ಹೆಚ್ಚು ತಿಳಿದುಕೊಂಡು ನಮ್ಮ ಮುಂದಿನ ಪೀಳಿಗೆಗೆ ಆ ವಿಷಯಗಳ ಕುರಿತು ತಿಳಿಸಿ ಹೇಳುವುದು ಅವಶ್ಯ. ಆ ಮೂಲಕ ಯಾರದೋ ಒತ್ತಾಯಕ್ಕೆ ಕನ್ನಡ ಕಲಿಯುವಂತಾಗದೇ, ತಾವಾಗೇ ಕನ್ನಡದತ್ತ ಆಕರ್ಷಿತರಾಗಿ ಕಲಿಯುವಂತಾಗಬೇಕು. ಆ ನಿಟ್ಟಿನಲ್ಲಿ ಜಾಲತಾಣಗಳ ಆಂದೋಲನಗಳು ರೂಪುಗೊಳ್ಳಲಿ, #ಶ್ರೀರಾಮಾಯಣ_ದರ್ಶನಂ, #ನಾಕುತಂತಿ, #ಮೂಕಜ್ಜಿಯ_ಕನಸುಗಳು ಹೀಗೆ ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳ ಹ್ಯಾಶ್’ಟ್ಯಾಗ್ ಮೆರವಣಿಗೆಗಳು ಆರಂಭವಾಗಿ ಅದರ ಕುರಿತಾದ ಮಾಹಿತಿಗಳು ಜನಮಾನಸವನ್ನು ತಲುಪುವಂತಾಗಲಿ ಎಂಬುದು ನನ್ನ ಆಶಯ.

ಹಾಗೆಯೇ, ಕನ್ನಡದ ಪರ ಹೋರಾಟ ಒಂದು ಉದಾಹರಣೆಯಷ್ಟೇ, ಇದರಂತೆ ಜಾಲತಾಣಗಳಲ್ಲಿ ನಡೆಯುವ ಎಲ್ಲ ಸಮಾಜಮುಖಿ ಹೋರಾಟಗಳು ಜನರಿಗೆ ಅರಿವು ಮೂಡಿಸುವತ್ತ ಸಾಗಲಿ, ಯಾವುದೇ ವೈಯಕ್ತಿಕ ಜಿದ್ದಾಜಿದ್ದಿಗೆ ವೇದಿಕೆಯಾಗದಿರಲಿ. ಬದಲಾಗಿ, ಸಮಸ್ಯೆಗಳಿಗೆ ಸ್ಪಂದಿಸುವ, ಹೊಸ ಹೊಸ ಸಮಾಜಮುಖಿ ಚಿಂತನೆಗಳನ್ನು, ನಮ್ಮ ನಾಡು, ನುಡಿ, ಸಂಸ್ಕೃತಿಗಳ ಕುರಿತಾದ ಮಾಹಿತಿಯನ್ನು, ಜ್ಞಾನವನ್ನು ಪಸರಿಸುವ, ಸೌಹಾರ್ದಯುತ ಚರ್ಚೆಗಳಿಗೆ ಅವಕಾಶ ಕಲ್ಪಿಸುವ ವೇದಿಕೆಯಾಗಲಿ.  ದ್ವೇಷ, ಅಸೂಯೆ, ಪ್ರಚಾರಪ್ರಿಯರ ಹಾವಳಿಗಳಿಗೆ  ಜಾಲತಾಣಗಳು ನಲುಗದಿರಲಿ. ಬದಲಾಗಿ ಸ್ನೇಹದ ಕಡಲಾಗಲಿ, ನೆನಪಿನ ದೋಣಿಯಾಗಲಿ ಎಂಬುದೇ ಈ ಲೇಖನದ ಆಶಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!