ಕಳೆದ ನೂರೇ ದಿನಗಳಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಪ್ರತಿ ತಿರುವಿನಲ್ಲೂ ಇವತ್ತು ಬಂದೋಬಸ್ತು ಇರುವ ಚೆಕ್ ಪೋಸ್ಟು್ಗಳಿದ್ದು ಅಲ್ಲಿರುವ ಸೈನಿಕರ ಶಸ್ತ್ರಾಸ್ತ್ರಗಳು ಎಂಥಾ ಪರಿಸ್ಥಿತಿಗೂ ಸನ್ನದ್ಧವೇ ಇರುತ್ತವೆ. ಆದರೂ ಹೇಗೆ ಪ್ರತಿ ವಾರಕ್ಕಿಂತಿಷ್ಟು ಎಂಬಂತೆ ಪಾತಕಿಗಳು ಸೈನಿಕರಿಗೆ, ಪೊಲೀಸರಿಗೆ ಎದಿರಾಗಿ ಸತ್ತು ಬೀಳುತ್ತಿದ್ದಾರೆ..? ಎಲ್ಲಿಂದ ಬರುತ್ತಾರೆ..? ಬರುಬರುತ್ತಾ ಅಷ್ಟು ವರಚ್ಚಾಗಿ ಈ ಆಂತಕವಾದಿ ನುಸುಳುಕೋರರು ಹೇಗೆ ಒಳ ನುಸುಳುತ್ತಿದ್ದಾರೆ..? ಅದಕ್ಕೆಲ್ಲಾ ನಿಸರ್ಗ ಕಲ್ಪಿಸಿರುವ ಸಂಕೀರ್ಣ ಭೌ ಗೋಳಿಕ ಪರಿಸ್ಥಿತಿ ಒಳಗೆ ಬರಲು ಅನುಕೂಲವಾದರೆ, ಹಾಗೆ ಒಮ್ಮೆ ಈಚೆಗೆ ಬಂದವರೆಲ್ಲರಿಗೂ ನೀರು, ನೆರಳು, ಶಸ್ತ್ರಾಸ್ತ್ರ ಎತ್ತಿ ಕೊಟ್ಟು ನಮ್ಮ ಸೈನಿಕರು, ಪೊಲೀಸರು ಮತ್ತು ನಾಗರಿಕರ ಮೇಲೆ ಛೂ ಬಿಡುತ್ತಿರುವವರು ಮಾತ್ರ ನಮ್ಮ ಕಡೆಯವರೇ ಎನ್ನುವುದೀಗ ರಹಸ್ಯವಾಗುಳಿದೇ ಇಲ್ಲ. ಆವತ್ತು ಉರಿ ಸೇನಾ ಕ್ಯಾಂಪ್ ಮೇಲೆ ದಾಳಿಯಾಯಿತಲ್ಲ. ಅದರ ನಂತರ ಸಾಲುಸಾಲಾಗಿ ಗಡಿಯಲ್ಲಿ ಉಗ್ರರ ಹೆಣ ಬೀಳತೊಡಗಿದವು. ಅಸಲಿಗೆ ನಮಗೆ ಲೆಕ್ಕಕ್ಕೆ ಸಿಗುವುದಕ್ಕಿಂತ ಕೈಗೆ ದೇಹ ಸಿಕ್ಕದಂತೆ ಹುರಿದು ಹೋಗುವುದನ್ನು ಅಲ್ಲಲ್ಲೆ ಎಳೆದು ಹಾಕಿ ಬಿಡುವ ಮಿಲಿಟರಿ ಲೆಕ್ಕಾಚಾರ ಬೇರೆಯದೇ ಇರುತ್ತದೆ. ಅದಾಚೆಗಿರಲಿ ಅದನ್ನು ಚರ್ಚಿಸುವುದೂ ತರವಲ್ಲ. ಆದರೆ ಹಾಗೆ ಅಷ್ಟು ಸಲೀಸಾಗಿ ಈ ಪಾತಕಿಗಳು ಹೇಗೆ ಗಡಿಯನ್ನು ದಾಟಿ ಶ್ರೀನಗರ, ಪಹಲ್ಗಾಮ್ ಮತ್ತು ಇತರ ಪ್ರಮುಖ ಸ್ಥಳಗಳನ್ನು ಸುರಕ್ಷಿತವಾಗಿ ತಲುಪುತ್ತಾರೆ..?
ಬಹುಶ: ಹೆಚ್ಚಿನ ಭಾರತೀಯರಿಗೆ ಕಣಿವೆಯ ಅತೀವ ಏರಿಳಿತದ ಬಗ್ಗೆ ಅಂದಾಜಿಲ್ಲ. ಶ್ರೀನಗರದ ಅದರಲ್ಲೂ ಉತ್ತರ ಕಾಶ್ಮೀರದ ಭಾಗದಲ್ಲಿ ನೆಲ ಸರಿಯಾಗಿ ಅರ್ಧ ಕಿ.ಮೀ. ಕೂಡಾ ನೇರಾನೇರಕ್ಕೆ ದಕ್ಕುವುದಿಲ್ಲ. ಲೇಹ್ ಮತ್ತು ಶ್ರೀನಗರ ಹೆದ್ದಾರಿ ಮೇಲೆ ಗಾಂಧಾರ್ಬಾಲ್ ದಾಟಿಬಿಟ್ಟರೆ ಮತ್ತೇನಿದ್ದರೂ ಪರ್ವತದ ಸೆರಗು ಕೊರೆದು ರೂಪಿಸಿದ ಕಡಿದಾದ ಅಂಚಿನ ಪ್ರದೇಶ ಮತ್ತು ಅಪ್ಪಟ ಕಣ ವೆಯ ಏರಿಳಿತ. ಏನಿದ್ದರೂ ನಾಲ್ಕು ಹೆಜ್ಜೆ ಮೇಲೆ ಹೋದರೆ ಇನ್ನಾಲ್ಕು ಕೆಳಕ್ಕೆ ಅದಕ್ಕೂ ಮೊದಲೇ ನದಿಯ ಸಣ್ಣ ತೊರೆಯೊಂದು ಬಾಯ್ದೆರೆದು ಅಲ್ಲಲ್ಲಿ ಹಾಯ್ದು ಹೋಗುತ್ತಿರುತ್ತದೆ. ಸಂಪೂರ್ಣ ಕಣ ವೆಯನ್ನು ಹೀಗೆ ಕೊರಕಲಾಗಿಸಿ ಗುಡ್ಡಗಳ ಏರಿಳಿತ ಮತ್ತು ನಿರಂತರ ಭೂ ಕುಸಿತದಂತಹ ವೈಪರಿತ್ಯಗಳಿಗೆ ಒಡ್ಡಿದ್ದೆ ಇಂತಹ ನೀರಿನ ಸೆಲೆಗಳು. ತೀರ ಆವತ್ತು ಗಡಿ ದಾಟಿ ಬಂದು ಉರಿ ಸೆಕ್ಟರಿನ ಅಡುಗೆ ದಾಸ್ತಾನಿನ ಕೋಣೆಯ ಕಡೆಯಿಂದ ದಾಳಿ ಮಾಡಿದರಲ್ಲ. ಅದರ ಆಸುಪಾಸೇ ಎಷ್ಟು ನಾಲಾಗಳು ಮತ್ತು ಕಾಲುವೆಗಳಿವೆ ಎಂದರೆ ಒಬ್ಬ ಸಲೀಸಾಗಿ ಅದರ ಕೊರಕಲಿನಲ್ಲಿ ತೆವಳಿಕೊಂಡೆ ಕಿ.ಮೀ.ಗಟ್ಟಲೆ ಭಾರತದೊಳಕ್ಕೆ ಕ್ರಮಿಸಿಬಿಡುತ್ತಾನೆ.
ಉರಿಯ ಪಕ್ಕದಲ್ಲೇ ಮಹೌರ್ರ ಎನ್ನುವ ಇನ್ನೊಂದು ಪ್ರದೇಶವಿದೆ. ಅದರ ಪಕ್ಕೆಗೆ ಆತುಕೊಂಡು ಹರಿಯುವುದೇ ಸಲಮ್ನಾಲಾ ಎಂಬ ಹಳ್ಳ. ಹತ್ಯಾನನಾಲಾ, ಜಂಖಾನಾಲಾ, ಧಿಕೋಟಿನಾಲಾದಂಥ ಹತ್ತಾರು ಹಳ್ಳಗಳು ಹರಿದು ಝೀಲಂ ನದಿಯನ್ನು ತಲುಪುತ್ತವೆ. ನಿಮಗೆ ಗೊತ್ತಿರಲಿ ಈ ಝೀಲಂ ನದಿ ಇವತ್ತು ಅನಾಮತ್ತಾಗಿ ಕಿ.ಮೀ.ಗಟ್ಟಲೇ ಅಗಲವೂ, ಆಳವೂ ಅಲ್ಲದೆ ಹಲವು ಭಾಗದಲ್ಲಿ ನಮ್ಮ ಪ್ರದೇಶವನ್ನೆ ನಮಗೆ ಅಪರಿಚಿತವನ್ನಾಗಿಸುವಷ್ಟು ದಂಡೆಗಳನ್ನು ಬಾಚಿ ತಬ್ಬಿ ಉಬ್ಬಿ ಹರಿಯುತ್ತಿರುವ ಉಮೇದಿನ ನದಿ ಇದು. ಇಂತಹದ್ದೊಂದು ನದಿಯನ್ನು ಪಳಗಿಸುವುದು ಅತ್ಲಾಗಿರಲಿ, ಸುಮ್ಮನೆ ದಂಡೆಯನ್ನೇ ಹಿಡಿತಕ್ಕಿಟ್ಟುಕೊಳ್ಳುವುದು ಕಷ್ಟ ಕಷ್ಟ. ಇಂತಹ ತುಂಬ ದುರ್ಗಮ ಪ್ರದೇಶಗಳು ಸರಹದ್ದಿನುದ್ದಕ್ಕೂ ಸಾಲು ಸಾಲಾಗಿವೆ. ಇಂಥಲ್ಲಿಂದಲೇ ಉಗ್ರರು ನುಸುಳುತ್ತಾರೆ ಎನ್ನುವದು ಲೆಕ್ಕಾಚಾರ. ಜೊತೆಗೆ ಪಾಕ್ ಮತ್ತು ಭಾರತದ ಗಡಿಯಲ್ಲಿ ಅನಾಮತ್ತು ಐದು ಗೇಟುಗಳಿವೆ. ಇದ್ದುದರಲ್ಲೇ ದೊಡ್ಡ ಊರಾದ ಚಕೋತಿ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ದಾರಿಯಾಗಿದೆ. ಅದರಾಚೆಗೆ ಕೊಟ್ಟಕೊನೆಯಲ್ಲಿ ತೀರ ಸರಹದ್ದಿನ ಬೇಲಿಗೆ ಆತುಕೊಂಡಿರುವುದೇ ಮುಝಪ್ಪರಾಬಾದ್.
ಇದರ ಕೆಳಗೇ ತಾವಗಿ, ಅಪೂಟು ಪಾಕಿಗಳ ಪಕ್ಕೆಗೆ ಆತುಕೊಂಡಿರುವ ಕೋಹಲಾ, ಕೊಂಚ ಎಡಕ್ಕೆ ಬಿದ್ದರೆ ಮುನಾಸಾ, ಮಾಲೋಂಚಾ, ಅದಕ್ಕೂ ಕೆಳಗೆ ನೀಲಾಭಟ್ಟಿ, ಮಗ್ಗುಲಲ್ಲೇ ತೀನ್ಭಾಗ್ಲಿ ಅದರ ಪಾದದಲ್ಲೇ ನಟೋರಿಯಸ್ ಊರು ಅಜಮನಗರ್, ಕೊನೆಯಲ್ಲಿ ಸಹೀಲನ್ ಹೀಗೆ ಉರಿಯ ಸುತ್ತಮುತ್ತ ಸರಹದ್ದಿನ ಸೆರಗಿಗೆ ಚುಂಗಿನಂತೆ ಆವರಿಸಿಕೊಂಡಿರುವ ಹತ್ತಾರು ಮನೆಗಳ ನೂರಾರು ಹಳ್ಳಿಗಳಿವೆ. ಇವೆಲ್ಲದಕ್ಕೂ ಕಳಸವಿಟ್ಟಂತೆ ಫೀರ್ಪಂಜಾಲ್ ಪರ್ವತ ಶ್ರೇಣ ಎರಡೂ ಮಗ್ಗುಲಲೂ ಯಥೇಚ್ಚವಾಗಿ ಕನಿಷ್ಠ ಸಾವಿರ ಅಡಿಯ ಎತ್ತರದ ಪರ್ವತಾಗ್ರಹಗಳನ್ನು ಹೊಂದಿದ್ದು ಯಾವ ಕಡೆಯ ದೃಶ್ಯವನ್ನೂ ನಿರುಕಿಸಬಹುದಾಗಿದೆ. ಹೀಗೆ ಆವರಿಸಿಕೊಂಡಿರುವ ತುದಿಗಳ ಮೇಲೆನೆ ಎರಡೂ ಕಡೆಯ ಸೈನಿಕರು ಅರೆಗಳನ್ನು ಹುಡುಕಿ ಬಂಕರು ನಿರ್ಮಿಸಿಕೊಂಡು ಗಡಿ ಕಾಯುತ್ತಾರೆ. ಹಾಗೆ ಎರಡೂ ಬಂಕರ್ಗಳ ಮಧ್ಯದ ಪ್ರದೇಶವನ್ನು ನೋಮ್ಯಾನ್ಸ್ ಲ್ಯಾಂಡ್ ಎಂದು ಕರೆಯುತ್ತಾರೆ. ಅಸಲಿಗೆ ಬರೀ ಕಣ್ಣಿಗೆ ಮತ್ತು ನೇರ ನೋಟಕ್ಕೆ ಅಲ್ಲಿ ಯಾರೂ ದಕ್ಕುವುದೂ ಇಲ್ಲ. ಏನಿದ್ದರೂ ಆ ಕೊರಕಲುಗಳಲ್ಲೇ ಕಾಲು ಹರಿಸುತ್ತಾರೆ.
ಅಲ್ಲಿ ಯಾವ ಕಡೆಯಿಂದ ಚಲಿಸಿದರೂ ಗುಂಡು ಹೊಡೆಯಲು ಕಾಯಲೇಬೇಕಿಲ್ಲ. ಆದರೆ ಹಾಗೆ ಅಂತಹ ಪ್ರದೇಶಗಳಿಂದ ಇತ್ತ ಚಲಿಸಲಾರಂಭಿಸುತ್ತಿದ್ದಂತೆ ನಮ್ಮ ಬಂಕರುಗಳಿಂದ ಕಣ್ಣು ನೆಟ್ಟ ಕೂತ ಸೈನಿಕರ ಲಕ್ಷ್ಯವನ್ನು ಬೇರೆಡೆಗೆ ಸೆಳೆಯಲು ಪಾಕಿ ಸೈನಿಕರು ಗುಂಡು ಹಾರಿಸತೊಡಗುತ್ತಾರೆ. ನಮ್ಮವರೂ ಅದಕ್ಕೆ ಉತ್ತರಿಸುವಾಗ ಎಲ್ಲೆಲ್ಲಿಂದಲೊ ಪಾಕಿ ಬೆಂಬಲಿತ ಅರೆಬರೆ ತರಬೇತಿಯ ಹುಂಬ ಹುಡುಗರು ನೆಲದ ಮೇಲೆ ಬಿದ್ದು ಹೊರಳುತ್ತಾ, ನಾಲಾಗಳ ಕೊರಕಲಿಗೆ ಇಳಿದು ಸರಿಯುತ್ತಾ ಗಡಿ ದಾಟಿ ಒಳಬರುತ್ತಾರೆ. ನೆನಪಿರಲಿ ಹಾಗೆ ಬರುವ ಹೆಚ್ಚಿನ ಉಗ್ರರ ಬಳಿ ಸಣ್ಣ ಪುಟ್ಟ ಆಯುಧ ಬಿಟ್ಟರೆ ಬೇರೇನೂ ಇರುವುದಿಲ್ಲ. ಸರಿಯಾದ “ಲಗೇಜು” ಏನಿದ್ದರೂ ಗಡಿಯ ಈಚೆಯಲ್ಲೇ ಪೂರೈಸಲಾಗುತ್ತದೆ ಎಂದರೆ ಅದಿನ್ನೆಂಥಾ ಬೆಂಬಲ ನಮ್ಮ ಗಡಿಗಳಲ್ಲಿ ನಮ್ಮವರಿಂದಲೇ ಸಿಕ್ಕುತ್ತಿರಬಹುದು ಊಹಿಸಿ.
ಇದೆಲ್ಲದರೊಂದಿಗೆ ಪ್ರತಿ ಗಡಿಯ ಹತ್ತಿರವೇ ಅಪ್ಪಟ ಬುಡಕಟ್ಟು ಮುಸ್ಲಿಂ ಕುಟುಂಬಗಳು ಗ್ವಾಲೆಗಳಂತೆ ಸಾಲುಸಾಲಾಗಿ ಬದುಕು ಕಟ್ಟಿಕೊಂಡಿದ್ದು ನುಸುಳುಕೋರರು ಮೊದಲು ಅಶ್ರಯ ಪಡೆಯುವುದೇ ಈ ಮನೆಗಳಲ್ಲಿ. ಒಂದು ವಿಷಯ ಗೊತ್ತಿರಲಿ ಸರಿಯಾಗಿ ಅರ್ಧ ಕೆ.ಜಿ. ಹೆಚ್ಚಿಗೆ ಅಕ್ಕಿ ಹೆಚ್ಚುಕೊಂಡರೂ ಆ ಮನೆಯಲ್ಲಿ ಹೊಸ ಅಥಿತಿಯ ಅಗಮನವಾಗಿದೆಯಾ ಎಂದು ಊಹಿಸಿಯೇ ಬಯೋನೆಟ್ ಮುಂದೆಮಾಡಿ ಸೈನಿಕರು ಕೂಂಬಿಂಗ್ ಮಾಡುತ್ತಿರುತ್ತಾರೆ. ಒಣಗಲು ಹಾಕುವ ಬಟ್ಟೆಗಳು, ಅಡುಗೆಯ ಪದಾರ್ಥದ ವ್ಯತ್ಯಾಸ, ಮನೆಯ ಬಳಿಯಲ್ಲಿ ಬದಲಾಗುವ ಚಟುವಟಿಕೆ, ಇದ್ದಕ್ಕಿದ್ದಂತೆ ಕೆಲವು ಮನೆಗಳ ಹೆಂಗಸರು ಗುಳೆ ಹೋದಂತೆ ಗಡಿ ಕಡೆಯಿಂದ ಒಳಭಾಗದ ಸಂಬಂಧಿಕರ ಮನೆಗಳಿಗೆ ತೆರಳಿಬಿಡುವುದು, ಯಾವ ಹೊತ್ತಿಗೂ ಬಾಗಿಲು ಹಾಕಿಕೊಂಡೆ ಇರುವ ಮನೆಗಳು ಹೀಗೆ ಸೈನಿಕರು ಹುಡುಕುವ ರೀತಿಯೇ ಅಂದಾಜಿಗೆ ದಕ್ಕುವುದಿಲ್ಲ. ಅಲ್ಲೆಲ್ಲಾ ಪ್ರತಿ ತಿರುವಿನಲ್ಲೂ, ಪ್ರತಿ ಪರ್ವತದ ಬುಡಕ್ಕೂ ಆತುಕೊಂಡು ಅಕ್ಷರಶ: ಆಯುಧವೇ ವಸ್ತ್ರ ಎನ್ನುವಂತೆ ಮೈ ತುಂಬಾ ಬಂದೂಕು, ಬಾಂಬು, ಗ್ರೇನೆಡು ಹೊತ್ತ ಸೈನಿಕರು ಕಾಲೂರಿ ನಿಂತು ಕಾಯುತ್ತಿರುತ್ತಾರೆ. ಅದರೆ ಆ ಉದ್ದಾನು ಉದ್ದದ ಕಣ ವೆ ಮತ್ತು ಸಾಲು ಸಾಲು ಪರ್ವತದ ಪ್ರದೇಶದ ಕಾವಲಿಗೆ ಅದೆಷ್ಟಾದರೂ ಸೈನಿಕರನ್ನು ಹಾಕಿದರೂ ಎಲ್ಲಿ ಈಡಾಗಬೇಕು..? ಅಲ್ಲಲ್ಲಿ ಫೀರ್ಪಂಜಾಲ್ ಪರ್ವತ ಶ್ರೇಣ ಯ ಗಾಢತೆ ಇಂತಹ ಪಾತಕಿಗಳಿಗೆ ಆಸರೆಯಾಗುತ್ತದೆ. ಹಾಗೆ ದಾಟುವವರನ್ನು ಮೊದಲು ತಮ್ಮ ಮನೆಗಳಲ್ಲಿ ಒಂದೆರಡು ದಿನ ಮಟ್ಟಿಗೆ ಸಾಕುವ ಸ್ಥಳೀಯರು, ಸುತ್ತಲಿನ ಪರಿಸ್ಥಿತಿ ನೋಡಿಕೊಂಡು ಅವರನ್ನು ಒಳಭಾಗಕ್ಕೆ ಕಳಿಸುತ್ತಾರೆ. ಒಳ ಪ್ರವೇಶಿಸಿದವರ ಅಗತ್ಯಕ್ಕೆ ತಕ್ಕಷ್ಟು ಆಯುಧಗಳ ದಾಸ್ತಾನು ಮೊದಲೆ ತಲುಪಿರುತ್ತದೆ. ಅದು ಕೈಗೆ ಬರುತ್ತಿದ್ದಂತೆ ಆಚೆಯವರೊಂದಿಗೆ ಮಾತುಕತೆಗೆ ಶುರುವಿಟ್ಟುಕೊಂಡು ಮಾರಣಹೋಮಕ್ಕೆ ರೆಡಿಯಗುತ್ತಾರೆ. ಅದರೆ ರಸ್ತೆಗಿಳಿಯುವ ಮೊದಲೇ ಅವರ ಇರುವಿನ ಬಗ್ಗೆ ಟಿಪ್ಸು ಕೊಟ್ಟು ಸೈನಿಕರ ಕೈಯಲ್ಲಿ ಹೊಡೆಸಿ ಹಾಕುವ ಅವರದೇ ಮನುಶ್ಯ ಲಕ್ಷಾಂತರ ಬಹುಮಾನ ಎಣ ಸುತ್ತಾ ಹುಳ್ಳಗೆ ನಗುತ್ತಾನೆ. ಅವನ ಹೆಸರಲ್ಲಿ ದೊಂಬಿಗಿಳಿಯುವ ಹುಂಬ ಹುಡುಗರನ್ನು ಮಿಲಿಟರಿ ನೋಡುತ್ತಿದ್ದಂತೆ ಕೊಂದು ಕೆಡುವುತ್ತದೆ. ಕಾಶ್ಮೀರ ಖಾಲಿಯಾದೇ ಏನು ಮಾಡೀತು…?