ಅಂಕಣ

‘ಕರ’ಕರೆಯಿಂದ ಮುಕ್ತಿ

 

ಏಕತೆಯ ಮಂತ್ರಕ್ಕೆ ಸದ್ಯ ಏಕರೂಪ ತೆರಿಗೆ ವ್ಯವಸ್ಥೆ ಒಂದು ಹೊಸ ಸೇರ್ಪಡೆ.  ಶಾಸಕಾಂಗವೆಂಬ ಮುಳ್ಳಿನ ಪೊದೆಯಲ್ಲಿ ಸಿಕ್ಕಿಕೊಂಡಿದ್ದ ಜಿ.ಎಸ್.ಟಿಗೆ ಈಗ ಬಿಡುಗಡೆಯ ಸುಯೋಗ. ‘ಸರಕು ಮತ್ತು ಸೇವಾ ತೆರಿಗೆ’ ಎಂಬ ಹೆಸರಿನೊಂದಿಗೆ ಒಂದು ದೇಶ, ಒಂದು ತೆರಿಗೆ ವ್ಯವಸ್ಥೆ ಜಾರಿಗೆ ಬರುತ್ತಿರುವುದು  ‘ಒಂದೇ ತಾಯಿಯ ಮಕ್ಕಳು’ ನಾವು ಎಂಬ ಘೋಷಣೆಯ ರೂಪವೇ ಆದಂತಿದೆ. ವಿಶೇಷವೆಂದರೆ ಅಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೂ ಮಧ್ಯರಾತ್ರಿಯಲ್ಲಿಯೇ, ಇಂದು ‘ಕರ’ಕರೆಯಿಂದ ಮುಕ್ತವಾಗುವ ಕರ ಸ್ವಾತಂತ್ರ್ಯ ದೊರಕಿದ್ದೂ ಮಧ್ಯರಾತ್ರಿಯಲ್ಲಿಯೇ. ಎಲ್ಲರೂ ಮಲಗಿರುವ ಸಮಯ ನೋಡಿ ಹೊಂಚು ಹಾಕಿ ಮಧ್ಯರಾತ್ರಿಯಲ್ಲಿಯೇ ಇದನ್ನು ಜಾರಿಗೆ ತರುತ್ತಿದ್ದಾರೆಂದರೆ ಖಂಡಿತವಾಗಿಯೂ ಇದು ಜನವಿರೋಧಿಯೇ ಆಗಿದೆ ಎಂದು ನಂಬಿಸಬಹುದೆನ್ನುವುದು ಕೆಲವು ವಿಘ್ನಸಂತೋಷಿಗಳ ಲೆಕ್ಕಾಚಾರ. ಆದರೆ ದೇಶದ ಬಗ್ಗೆ ಕಾಳಜಿ ಹಾಗೂ ಆಗು ಹೋಗುಗಳ ಬಗ್ಗೆ ಆಸಕ್ತಿಯುಳ್ಳವರು ಆ ನಡುರಾತ್ರಿಯಲ್ಲೂ ಎಚ್ಚರವಾಗಿದ್ದರೆಂಬ ಸಂಗತಿ ಮಾತ್ರ ಅಂತವರಿಗೆ ತಿಳಿದಿಲ್ಲವಷ್ಟೇ!

ಇಂತಹ ಮಹತ್ವದ ವಿಚಾರದಲ್ಲೂ ನಮ್ಮ ರಾಜಕೀಯ ಪಕ್ಷಗಳಲ್ಲಿ  ಐಕ್ಯತೆ ಇಲ್ಲವಲ್ಲ ಎನ್ನುವುದು ವಿಷಾದನೀಯ ಸಂಗತಿ. ಅಂದು ಈ ಮಸೂದೆಯ ಜಾರಿಗೆ ಒಲವು ವ್ಯಕ್ತಪಡಿಸಿದ್ದ ಅಂದಿನ ಆಡಳಿತ ಪಕ್ಷ, ಈಗಿನ ವಿರೋಧ ಪಕ್ಷ ಇಂದು ಅನಾವಶ್ಯಕ ವರಾತ ತೆಗೆಯುತ್ತಿದ್ದರೆ, ಆಗ ಜಾರಿ ಆಗ ಕೂಡದು ಎಂದಿದ್ಥ ಅಂದಿನ ವಿರೋಧ ಪಕ್ಷ ಇಂದು ಆಡಳಿತ ಪಕ್ಷವಾಗಿ ಅದರ ಅನುಷ್ಠಾನಕ್ಕೆ ಇನ್ನಿಲ್ಲದ ಆಸಕ್ತಿ ತೋರಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ನಮ್ಮಲ್ಲಿ ರಾಜಕೀಯ ಪಕ್ಷಗಳ ಸ್ಥಾನ ಅದಲು ಬದಲಾದಂತೆ ಅವುಗಳ ಆದ್ಯತೆ, ಆಗ್ರಹ ಹಾಗೂ ಆಸಕ್ತಿಗಳೂ ಬುಡಮೇಲಾಗುತ್ತವೆ. ಇನ್ನು ವಿರೋಧ ಪಕ್ಷಗಳಂತೂ ನಡುರಾತ್ರಿಯಲ್ಲಿ ನಡೆದ ಆ ಕಾರ್ಯಕ್ರಮವನ್ನೇ ಬಹಿಷ್ಕರಿಸಿವೆ. ಅದನ್ನು ತಪ್ಪು ಎನ್ನಲಾಗದು ಮತ್ತು ಅದರಲ್ಲಿ ಒಪ್ಪಬಹುದಾದ ಒಂದು ಲಾಜಿಕ್ ಕೂಡಾ ಇದೆ. ಹಗಲಿನಲ್ಲಿ ನಡೆಯುವ ಕಾರ್ಯಕ್ರಮ, ಅಧಿವೇಶನಗಳಲ್ಲೇ ಗಡದ್ದಾಗಿ ನಿದ್ದೆ ಹೊಡೆಯುವವರಿರುವಾಗ ಇನ್ನು ಮಧ್ಯರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಎಚ್ಚರದಿಂದ ಇರುವುದಾದರೂ ಹೇಗೆ? ಅದಕ್ಕೇ ಭಾಗವಹಿಸಿರಲಿಕ್ಕಿಲ್ಲ ಬಿಡಿ.

ಒಂದು ವಸ್ತುವಿನ ದರ ದೇಶಾದ್ಯಂತ ಎಲ್ಲೇ ಖರೀದಿಸಿದರೂ ಸಾಮಾನ್ಯವಾಗಿ ಒಂದೇ ಆಗಲಿದೆ ಎನ್ನುವುದೂ ಇದರ ವೈಶಿಷ್ಟ್ಯವಂತೆ. ಹಲವಾರು ಕರ ವಿಧಿಸಿ, ಅದನ್ನು ತಪ್ಪಿಸಲೆಂದೇ ಬಗೆ ಬಗೆಯ ಬಿಲ್ವಿದ್ಯೆ (ಬಿಲ್-ವಿದ್ಯೆ) ಪ್ರದರ್ಶಿಸುವ ಮೂಲಕ ಕೆಲವು ಮಾರಾಟಗಾರರು, ಸೇವಾ ಪೂರೈಕೆದಾರರು ತೊಡಗಿಸಿಕೊಂಡಿದ್ದ ವೈಟ್ ಕಾಲರ್ ವಂಚನೆಗೂ ಇದರಿಂದ ಬ್ರೇಕ್ ಬೀಳಲಿದೆ ಎನ್ನಲಾಗಿದೆ. “ಧನವಂತರೆಲ್ಲಾ ತೆರಿಗೆದಾರರಲ್ಲ, ತೆರಿಗೆ ಕಟ್ಟುವವರೆಲ್ಲಾ ಹಣವಂತರೇನಲ್ಲಾ!” ಎಂಬಂಥ ಸ್ಥಿತಿ ಬದಲಾದರೆ ಸಾಕೆನ್ನುವುದು ಸಾಮಾನ್ಯ ಜನರ ನಿರೀಕ್ಷೆ.

ಹಿಂದಿ ಹೇರಿಕೆಯ ಬಗ್ಗೆ ಹೇವರಿಕೆ ಹುಟ್ಟಿಸುವಷ್ಟು ಚರ್ಚೆ ನಡೆಯುತ್ತಿರುವಾಗಲೇ ಬೆಲೆಗಳ ದರ ಏರಿಕೆ ಹಾಗೂ ಇಳಿಕೆಯ ಬಗ್ಗೆ ಚಿಂತಿಸುವಂತೆ ಮಾಡಿದೆ ಈ ಜಿ.ಎಸ್.ಟಿ. ಮಹಿಳೆಯರದ್ದು, “ಅಯ್ಯೋ, ಚಿನ್ನದ ದರ ಹೆಚ್ಚಾಗುತ್ತಂತೆ?” ಎಂಬ ಒಂದೇ ಸಂಕಟ. ಧಾರ್ಮಿಕ ಚಟುವಟಿಕೆ ಸಂಬಂಧಿ ವಸ್ತುಗಳನ್ನು ತೆರಿಗೆರಹಿತವಾಗಿಸಿದ್ದನ್ನೇ ನೆಪವಾಗಿಟ್ಟುಕೊಂಡು ಈ ಸರ್ಕಾರ ಬ್ರಾಹ್ಮಣಶಾಹಿ ಎಂದು ಕೆಲವರು ಕಣ್ಣು ಕೆಂಪು ಮಾಡಲಿಕ್ಕೂ ಸಾಕು. ಎಲ್ಲರೊಳಗೂ ಒಬ್ಬ ಆರ್ಥಿಕ ತಜ್ಞನಿದ್ದಾನೆ, ಬಜೆಟ್, ವಿತ್ತ ಸುಧಾರಣಾ ಕ್ರಮಗಳು ಜಾರಿಗೆ ಬಂದಾಗಲೆಲ್ಲಾ ಆತ ಫೇಸ್’ಬುಕ್, ಟ್ವಿಟ್ಟರ್’ಗಳ ಮೂಲಕ ಹೊರಬರುತ್ತಾನೆಯೋ ಏನೋ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಭಾರೀ ಚರ್ಚೆ ನಡೆಯುತ್ತಿದೆ. ಏನೇ ಆದರೂ ಆರ್ಥಶಾಸ್ತ್ರದ ಅರ್ಥವೇ ಗೊತ್ತಿಲ್ಲದವರೂ ಅದರ ಬಗ್ಗೆ ವಿಶ್ಲೇಷಣೆಗಿಳಿಯುವುದರಿಂದಲೇ ಕೆಲವು ಆರ್ಥಿಕ ಸುಧಾರಣಾ ಕ್ರಮಗಳೂ ವ್ಯರ್ಥ ಅನರ್ಥಕ್ಕೆ ಈಡಾಗುವುದು ಎನ್ನುವುದನ್ನು ಮಾತ್ರ ಮರೆಯಬಾರದು.

ಓವರ್ ಡೋಸ್: ಎಲ್ಲಿ ಪರಿಶಿಷ್ಟ ವರ್ಗದವರ ವಿರೋಧಿ ಎನಿಸಿಕೊಳ್ಳುತ್ತೇವೆಯೋ ಎಂಬ ಸಂದಿಗ್ಧತೆಯೊಂದು ಜಿ.ಎಸ್.ಟಿ ವಿರೋಧಿಗಳನ್ನು, ಕಾಡುತ್ತಿದೆಯಂತೆ. ಏಕೆಂದರೆ ಅದರಲ್ಲಿ “ಎಸ್.ಟಿ” ಎಂದಿದೆಯಲ್ಲಾ.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!