ಅಂಕಣ

ಜುಲೈ ಇಪ್ಪತ್ತಾರು..

ಜುಲೈ ಇಪ್ಪತ್ತಾರು ಬಂತೆಂದರೆ ಎಲ್ಲೆಲ್ಲೂ ಕಾರ್ಗಿಲ್ ವಿಜಯದ ಸಂಭ್ರಮಾಚರಣೆ. ಆದರೆ ಪ್ರಸಾದನಿಗೆ ಮಾತ್ರ 1999 ಗೆ ಬದಲಾಗಿ 2005 ನೆನಪಾಗುತ್ತದೆ. ಅವನೊಬ್ಬನೇ ಅಲ್ಲ, ಮುಂಬೈಯಲ್ಲಿ ಆವತ್ತಿದ್ದ ಎಲ್ಲರಿಗೂ ಅಷ್ಟೆ. ಒಮ್ಮೆಯಾದರೂ ಆದಿನ ನಡೆದ ಘಟಣೆಗಳು ಕಣ್ಣೆದುರಿಗೆ ಹಾದುಹೋಗುತ್ತವೆ.

ಪ್ರಸಾದ, ಏರ್ ಇಂಡಿಯಾದಲ್ಲಿ ಎಂಜಿನಿಯರ್. ಹೆಂಡತಿ ಮಂಜರಿ ಹಾಗೂ ಮಗಳು ನಿಧಿಯೊಂದಿಗೆ ಥಾಣೆಯಲ್ಲಿ ವಾಸ. ಮೂಲ ಊರು ಬಳ್ಳಾರಿಯ ಹತ್ತಿರದ ಒಂದು ಹಳ್ಳಿ. ಶಾಂತವಾದ ಊರಿನಿಂದ ಬಂದವನಿಗೆ ಮುಂಬೈಯ ಗಿಜಿಗಿಜಿತನ ಇಷ್ಟವಾಗಿರಲಿಲ್ಲ.  ಲೋಕಲ್ ಟ್ರೇನಿಗೆ ಹೊಂದಿಕೊಳ್ಳಲಾರದೆ ಬೈಕ್ ಖರೀದಿಸಿದ್ದ. ಅತೀ ಕಡಿಮೆ ಮಳೆಯಾಗುವ ಊರು ಅವನದಾದ್ದರಿಂದ ಮುಂಬೈಯ ಮಳೆ ಮಾತ್ರ ಖುಷಿ ಕೊಡುತ್ತಿತ್ತು.

ಜುಲೈ 26, 2005: ಆ ದಿನ ಬೆಳಗಿನ ಶಿಫ್ಟ್ ನಲ್ಲಿದ್ದ ಪ್ರಸಾದನ ಲಕ್ಷವೆಲ್ಲಾ ಕಿಟಕಿಯತ್ತಲೇ ಇತ್ತು.

“ಇವತ್ತ್ಯಾಕೋ ಮಳೆ ಜೋರಾಗಿದೆ. ನಾಲ್ಕೈದು ದಿನದಿಂದ ಸಣ್ಣಗೆ ಬೀಳುತ್ತಿದ್ದರೂ ಇವತ್ತು ಬೆಳಗಿನಿಂದ ಮಾತ್ರ ಧೋ ಅಂತ ಸುರಿಯುತ್ತಿದೆ, ಇನ್ನೊಂದೆರಡು ಗಂಟೆ ಹೀಗೇ ಸುರಿದರೆ ನಾಳೆ ರಜ ಸಿಗಬಹುದು”, ಪ್ರಸಾದನ ಯೋಚನಾಸರಣಿ ಹೀಗೇ ಸಾಗಿತ್ತು. ಅಷ್ಟರಲ್ಲಿ ಹೊರಗೆ ಹೋಗಿದ್ದ ಅವಿನಾಶ್ ಬಂದು ” ಪ್ರಸಾದ್, ಶಾಯದ್ ಆಜ್ ಟ್ರೇನ್ ಕ್ಯಾನ್ಸಲ್ ಹೋಗಿ, ಮೈ ತುಮ್ಹಾರೆ ಸಾಥ್ ಬೈಕ್ ಸೆ ಆತಾಹೂಂ”.

ಹನ್ನೆರಡು ಗಂಟೆಯತನಕವೂ ಬಿಡದ ಮಳೆಯಿಂದಾಗಿ ಎಲ್ಲರೂ ಕಂಗೆಟ್ಟರು. ರಸ್ತೆಯಲ್ಲೆಲ್ಲಾ ಬರೀ ನೀರು. ರನ್ ವೇ ಸಹ ನೀರಿನಿಂದ ತುಂಬಿಹೋಗಿತ್ತು. ಬಾಂಬೆ ಏರ್ ಪೋರ್ಟಿಗೆ ಬರುವ, ಇಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಯಿತು. ಟೂ ವ್ಹೀಲರ್ ಗಳನ್ನು ನಡೆಸುವುದು ಅಪಾಯವೆಂದು ಏರ್ ಇಂಡಿಯಾದ ಸ್ಟಾಫ್ ಬಸ್ಸುಗಳನ್ನು ಕುರ್ಲಾದವರೆಗೆ ಬಿಡುವುದಾಗಿ ತಿಳಿಸಲಾಯಿತು. ಅಲ್ಲಿಂದ ಮುಂದೆ ಟ್ರೇನ್, ಅಥವಾ ಬಸ್ಸಿನಲ್ಲಿ ಹೋಗಬಹುದಿತ್ತು. ದೂರದ ಡೊಂಬಿವಲಿ, ಅಂಬರನಾಥ್ ನಲ್ಲಿ ಇರುವ ಎಷ್ಟೋ ಜನ ತಾವು ಮನೆಗೆ ಹೋಗದೆ ಆಫೀಸಿನಲ್ಲೆ ಇರುವುದಾಗಿ ನಿರ್ಧರಿಸಿದರು. ಈ ಮಳೆಯಲ್ಲಿ ಟ್ರೇನು, ಬಸ್ಸು ಬದಲಿಸುತ್ತ ಹೋಗಿ ಮಧ್ಯದಲ್ಲೆ ಎಲ್ಲಿಯಾದರು ಸಿಕ್ಕಿಕೊಳ್ಳುವುದಕ್ಕಿಂತ ಆಫೀಸೇ ಸುರಕ್ಷಿತ ತಾಣವೆನಿಸಿತ್ತವರಿಗೆ. ಕೆಲವೇ ನಿಮಿಷಗಳಲ್ಲಿ ಗ್ರೌಂಡ್ ಫ್ಲೋರಿನ ಕಾಗದಪತ್ರಗಳನ್ನು, ಕಂಪ್ಯೂಟರುಗಳನ್ನು ಮೇಲಿನ ಅಂತಸ್ತಿಗೆ ಸಾಗಿಸಲಾಯಿತು. ಒಂದೊಂದಾಗಿ ಸ್ಟಾಫ್ ಬಸ್ಸುಗಳು ಹೊರಟವು. ರಸ್ತೆಯಲ್ಲಾಗಲೇ ಐದಾರು ಇಂಚು ನೀರು ನಿಂತಿತ್ತು. ಪ್ರಸಾದ ಮತ್ತು ಮಿತ್ರರು ಹೊರಡುವವರೆಗೆ ಮೂರು ಗಂಟೆಯೇ ಆಯಿತು. ನೀರಿನಲ್ಲೇ ಅತ್ಯಂತ ಕಡಿಮೆ ವೇಗದಿಂದ ಸಾಗುತ್ತಿದ್ದ ಬಸ್ಸಿನ ಕಿಟಕಿ ಬಾಗಿಲುಗಳೆಲ್ಲ ಮುಚ್ಚಿದ್ದರೂ, ಮಳೆಯ ರಭಸ, ಟಾಪಿನ ಮೇಲಿನ ಹನಿಗಳ ಸದ್ದಿನಿಂದ, ಗ್ಲಾಸಿನ ಮೇಲಿಳಿಯುವ ನೀರಿನಿಂದ ಭಯ ಹುಟ್ಟಿಸುತ್ತಿತ್ತು.

ಏರೋಡ್ರೋಮ್ ಕಾಲನಿ ರೋಡಿನಿಂದ ಲಾಲ್ ಬಹಾದ್ದೂರ್ ಶಾಸ್ತ್ರಿ ರೋಡಿಗೆ ಬರುವ ವೇಳೆಗೆ ಟ್ರಾಫಿಕ್ ಜಾಮ್ ಆಗಿತ್ತು. ಸರಿಸುಮಾರು ಎಲ್ಲ ಆಫೀಸುಗಳಿಂದಲೂ ಒಮ್ಮೆಲೇ ಜನ ಹೊರಟಿದ್ದರಿಂದ ಸುಮಾರು ಮುರ್ನಾಲ್ಕು ಕಿಲೋಮೀಟರುಗಳ ಉದ್ದದ ರಸ್ತೆಯಲ್ಲಿ ಸಾವಿರಾರು ವಾಹನಗಳು ನಿಂತಿದ್ದವು. ಹಿಂದೆ ಸಹ ನೂರಾರು ಕಾರು ಬಸ್ಸುಗಳು. ನೀರಿನ ಮಟ್ಟ ಮಾತ್ರ ಏರುತ್ತಲೆ ಇತ್ತು.

ಹೀಗೇ ಒಂದು ಗಂಟೆ ಕಳೆಯುವಷ್ಟರಲ್ಲಿ, ಬಸ್ಸಿನ ಎರಡು ಮೆಟ್ಟಿಲುಗಳು ಮುಳುಗಿದವು. “ಇನ್ನೊಂದು ಅಡಿ ನೀರು ಏರಿದರೆ ನೀನು ಮುಳುಗುತ್ತೀಯೋ ಪ್ರಸಾದ್…” ಆರೂವರೆ ಅಡಿಯ ಶ್ರೀಕಾಂತ್ ಐದೂಕಾಲಡಿ ಇರುವ ಪ್ರಸಾದನಿಗೆ ಗೇಲಿಮಾಡಿದ.

“ಇದು ನಗುವ ಸಮಯವಲ್ಲ, ಬೀ ಸೀರಿಯಸ್” ಗದರುತ್ತಲೇ ಪ್ರಸಾದ್ ಅತ್ತಿತ್ತ ಕಣ್ಣಾಡಿಸಿದ. ಹೆಂಗಳೆಯರೂ ಸಹ ತಮ್ಮ ಸಹಜವಾದ ಹರಟೆಯನ್ನು ಬಿಟ್ಟು ದಂಗಾಗಿ ಕುಳಿತಿದ್ದರು. ಭೀತಿ ಅವರ ಕಣ್ಣುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಮಳೆ ಲೆಕ್ಕಿಸದೇ ಪ್ರಸಾದ್ ಕಿಟಕಿಯಿಂದ ತಲೆ ಹೊರಗೆ ಹಾಕಿ ನೋಡಿದ. ಶ್ರೀಕಾಂತ್ ಹೇಳಿದ್ದು ಎಲ್ಲಿ ನಿಜವಾಗಿ ಬಿಡುತ್ತದೆಯೋ ಎಂದು ಒಂದು ಕ್ಷಣ ಅವನಿಗೆ ಗಾಬರಿಯಾಯಿತು.

ಇನ್ನೂ ಹೀಗೇ ಕುಳಿತಿರುವುದರಲ್ಲಿ ಯಾವ ಅರ್ಥವೂ ಇರಲಿಲ್ಲ. ಪ್ರಸಾದ್, ಅವಿನಾಶ್ ಹಾಗೂ ಇನ್ನಿಬ್ಬರು ಕತ್ತಲಾಗುವುದರ ಒಳಗಾಗಿ ನಡೆದುಕೊಂಡು ಆಫೀಸಿಗೇ ಹೋಗಿಬಿಡುವುದೆಂದು ನಿರ್ಧರಿಸಿದರು. “ಟಿಂಗೂ..” ಎಂದು ಛೇಡಿಸುತ್ತಲೇ ಶ್ರೀಕಾಂತ್ ಸಹ ಜೊತೆಗೂಡಿದ. ಮೆಟ್ಟಿಲು ಇಳಿಯುತ್ತಿದ್ದಂತೆ ಪ್ರಸಾದನಿಗೆ ಸೊಂಟದ ತನಕ ನೀರು. ಕೈ ಕೈ ಹಿಡಿದುಕೊಂಡು, ಬೆನ್ನನ್ನು ಬಸ್ಸು ಕಾರುಗಳಿಗೆ ತಾಕಿಸುತ್ತ ಮುನ್ನಡೆದರು. ಇವರನ್ನು ನೋಡಿ ಮತ್ತೊಂದಿಷ್ಟು ಜನ ನೀರಿಗಿಳಿದರು.

ಸುಮಾರು ಒಂದು ಗಂಟೆ ನಡಿಗೆಯ ನಂತರ ಬಾಂಬೆ ಏರ್ ಪೋರ್ಟಿನ ಮಹಾದ್ವಾರ ಕಾಣಿಸಿ ಎಲ್ಲರೂ ಹರ್ಷದಿಂದ ಕೇಕೆ ಹಾಕಿದರು. ಆದರೆ ಈ ಹರ್ಷ ತುಂಬಾ ವೇಳೆ ಉಳಿಯಲಿಲ್ಲ. ಕ್ಯಾಂಪಸ್ಸಿನಲ್ಲಿ ಕಾಲಿಡುತ್ತಿದ್ದಂತೆಯೇ ಒಂದು ಕ್ಷಣ ಎಲ್ಲರೂ ದಂಗಾದರು. ಇಷ್ಟು ಹೊತ್ತು ನೀರಿನಲ್ಲೇ ಇದ್ದರೂ, ಸಾವಿರಾರು ವಾಹನಗಳ ನಡುವಿನಿಂದ ಬಂದವರಿಗೆ ಏರ್ ಪೋರ್ಟಿನ ಮೈದಾನವೆಲ್ಲಾ ನೀರಿನಿಂದ ತುಂಬಿ ಅಗಾಧ ಸಮುದ್ರದಂತೆ ಭಾಸವಾಯಿತು. ಆಧಾರಕ್ಕಿರುವ ದೊಡ್ಡ ಗೋಡೆಯೊಂದನ್ನೇ ಹಿಡಿದುಕೊಂಡು ಎಲ್ಲರೂ ಮುನ್ನಡೆದರು. ಅಂತೂ ಇಂತೂ ಆಫೀಸ್ ತಲುಪುವ ವೇಳೆಗೆ ಎಲ್ಲರೂ ಸುಸ್ತಾಗಿದ್ದರು.

ಒಮ್ಮೊಮ್ಮೆ ಎರಡೆರಡು ದಿನ ಡ್ಯೂಟಿ ಇರುತ್ತಿದ್ದರಿಂದ ಎಲ್ಲರ ಒಂದೊಂದು ಜೊತೆ ಬಟ್ಟೆ ಆಫೀಸಿನಲ್ಲೆ ಇತ್ತು. ಹಾಗಾಗಿ ಒದ್ದೆ ಬಟ್ಟೆಗಳ ಕಷ್ಟವಿರಲಿಲ್ಲ. ಬಟ್ಟೆ ಬದಲಿಸಿ ಫ್ರೆಶ್ ಆಗುವಷ್ಟರಲ್ಲಿ ಕರೆಂಟ್ ಹೋಗಿತ್ತು. ಹೊರಗಾಗಲೇ ನಸುಗತ್ತಲು. ಪ್ರಸಾದ್ ಮಂಜರಿಗೆ ಫೋನ್ ಮಾಡಿ ಕ್ಷೇಮಸಮಾಚಾರ ತಿಳಿಸಿದ. ಥಾಣೆಯಲ್ಲೂ ವಿಪರೀತ ಮಳೆ ಇರುವುದಾಗಿಯೂ, ನಿಧಿಯನ್ನು ಮಧ್ಯಾನ್ಹವೇ ಶಾಲೆಯಿಂದ ಕರೆದುಕೊಂಡು ಬಂದಿರುವುದಾಗಿಯೂ ಅವಳು ಹೇಳಿದಳು.

ಸ್ವಲ್ಪ ಹೊತ್ತಿನಲ್ಲೇ ಇಡೀ ಮುಂಬೈನ ಎಲ್ಲಾ ಲ್ಯಾಂಡ್ ಲೈನ್, ಮೊಬೈಲ್ ಗಳು ಬಂದ್ ಆದವು. ಶಾರ್ಟ್ ಸರ್ಕೀಟಿನ ಭಯದಿಂದಾಗಿ ಜನರೇಟರ್ ಉಪಯೋಗಿಸುವಂತಿರಲಿಲ್ಲ. ಗಾಜಿನ ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಸಿ, ಟೇಬಲ್ ಒರೆಸುವ ಬಟ್ಟೆ ಹರಿದು, ಬತ್ತಿ ಮಾಡಿ ದೀಪ ಹೊತ್ತಿಸಿದರು. ಅಷ್ಟು ಹೊತ್ತಿಗೆ ಕ್ಯಾಂಟೀನಿನಿಂದ ಬಿಸಿ ಬಿಸಿ ಅನ್ನ ಸಾರಿನ ಸರಬರಾಜಾಯಿತು. ಸುಮಾರು ಇನ್ನೂರು ಜನ ಆಫೀಸಿನಲ್ಲಿದ್ದರು. ಹೊಟ್ಟೆ ತುಂಬುತ್ತಿದ್ದಂತೆ ಎಲ್ಲರೂ ಗುಂಪುಗುಂಪಾಗಿ ಹರಟೆ ಹೊಡೆಯುತ್ತ ಕುಳಿತರು.

ಅವಿನಾಶ ಹೇಳಿದ, ” ಇಷ್ಟೊಂದು ನೀರು ಏರ್ ಪೋರ್ಟಿನಲ್ಲಿ ನಿಂತಿದ್ದು ಇದೇ ಮೊದಲಿರಬೇಕು”.

ರಾತ್ರಿ ಯಾರೂ ಸರಿಯಾಗಿ ನಿದ್ದೆ ಮಾಡಲೇ ಇಲ್ಲ. ಮಳೆ ನಿಂತಿರಲಿಲ್ಲ. ಕರೆಂಟ್, ಟೀವಿ, ಫೋನ್, ಕೊನೆಗೆ ಪೇಪರ್ ಸಹ ಇಲ್ಲದ ಮುಂಜಾವು. ಬೆಳಕು ಹರಿದಂತೆ ಮಳೆ ಕಡಿಮೆಯಾಯಿತು. ನಾಕು ಗಂಟೆಯವರೆಗೆ ನೀರು ಸಹ ಸಾಕಷ್ಟು ಹರಿದು ಹೋಯಿತು. ಎಲ್ಲರಿಗೂ ಮನೆಗೆ ಹೋಗುವ ತವಕ. ಇದ್ದ ಒಂದಡಿ ನೀರಿನಲ್ಲೇ ನಡೆದುಕೊಂಡು ಕುರ್ಲಾದವರೆಗೂ ಬಂದರು. ಟ್ರೇನುಗಳೆಲ್ಲಾ ಕ್ಯಾನ್ಸಲ್ ಆಗಿ ಥಾಣೆಯ ವರೆಗಿನ ಕೆಲವು ಬಸ್ಸುಗಳು ಮಾತ್ರ ಚಾಲನೆಯಲ್ಲಿದ್ದವು. ಶ್ರೀಕಾಂತ್ ಹಾಗು ಅವಿನಾಶ್ ಪ್ರಸಾದನ ಮನೆಯಲ್ಲಿಯೇ ಉಳಿದುಕೊಂಡರು.

ಹಿಂದಿನ ರಾತ್ರಿ ಮಂಜರಿ ಪಟ್ಟ ಬವಣೆ ಅಪಾರ. ಗ್ರೌಂಡ್ ಫ್ಲೋರಿನಲ್ಲಿರುವ ಅವರ ಮನೆಯ ಮೆಟ್ಟಿಲವರೆಗೆ ನೀರು ಬಂದಿತ್ತು. ನಿಧಿಯನ್ನು ಕರೆದುಕೊಂಡು ಮಂಜರಿ ರಾತ್ರಿ ಮೇಲಿನ ಮನೆಗೆ ಹೋಗಿದ್ದಳು. ಮಧ್ಯಾಹ್ನ ಇಳಿದು ಕೆಳಗೆ ಬಂದಾಗ ಮನೆಯೊಳಗೆ ಹೆಚ್ಚು ನೀರು ಹೋಗಿರದಿದ್ದರೂ, ಎಲ್ಲ ಸ್ವಚ್ಛಗೊಳಿಸುವಷ್ಟರಲ್ಲಿ ಸಾಯಂಕಾಲವಾಗಿತ್ತು.

ಮರುದಿನ ಸಹ ಟ್ರೇನು, ಬಸ್ಸುಗಳ ಸೇವೆ ಲಭ್ಯವಿರಲಿಲ್ಲ. ಅವಿನಾಶ್ ಹಾಗೂ ಶ್ರೀಕಾಂತ್ ಡೋಂಬಿವಲಿವರೆಗೆ ನಡೆದುಕೊಂಡೇ ಹೋದರು. ಅಂದು ಸಾಯಂಕಾಲ ಕರೆಂಟ್ ಬಂತು, ಟೀವಿ, ಫೋನುಗಳಿಗೆ ಜೀವಬಂತು. ಮಂಜರಿ, ಪ್ರಸಾದ್ ಮೊದಲು ಮಾಡಿದ ಕೆಲಸವೆಂದರೆ, ಎಲ್ಲ ಬಂಧು ಮಿತ್ರರಿಗೆ ಫೋನ್ ಮಾಡಿ ಅವರ ಯೋಗಕ್ಷೇಮ ತಿಳಿದುಕೊಂಡಿದ್ದು.

ಟೀವಿ ನ್ಯೂಸ್ ಅಕ್ಷರಶಃ ನೀರಿನಲ್ಲಿ ಮುಳುಗಿತ್ತು. ಎಲ್ಲ ಚಾನೆಲ್ ಗಳಲ್ಲೂ ಮಳೆಯ ಸುದ್ದಿಯೇ. ಎಷ್ಟೋ ಜನ ಕೈಕೈ ಹಿಡಿದುಕೊಂಡು ಮಾನವ ಸರಪಳಿ ನಿರ್ಮಿಸಿ ರೇಲ್ವೆ ಟ್ರಾಕಿನ ಮೇಲೆ ನಡೆದು ಮನೆ ಸೇರಿದ್ದರು. ಮನೆಗೆ ಹೋಗಲಾಗದೆ ರೇಲ್ವೆ ಸ್ಟೇಶನ್ನಿನಲ್ಲಿ ಉಳಿದವರಿಗೆ ಮಳೆಯನ್ನೂ ಲೆಕ್ಕಿಸದೆ ಊಟ ಪೂರೈಸಿ ಮಾನವೀಯತೆ ಮೆರೆದವರೆಷ್ಟೋ ಜನ. ಅನೇಕ ಕಡೆ ಹರಿಯುವ ಸಣ್ಣ ಸಣ್ಣ ಝರಿ, ಮ್ಯಾನ್ ಹೋಲಿನ ಮುಖಾಂತರ ಅನೇಕರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಥಾಣೆ ಜಿಲ್ಲೆಯೊಂದರಲ್ಲೇ  ಇನ್ನೂರು ಜನ ಮರಣಿಸಿದ್ದರು. ಒಟ್ಟು ಸಾವಿನ ಸಂಖ್ಯೆ ಐದು ಸಾವಿರದಷ್ಟಿರಬಹುದೆಂಬ ಅಂದಾಜು. ನೂರಾರು ಎಮ್ಮೆಗಳು ಜಲಸಮಾಧಿಯಾದ ದೃಶ್ಯ ನೋಡಲಿಕ್ಕಾಗದೇ ಮಂಜರಿ ಕಣ್ಣುಮುಚ್ಚಿ ಕುಳಿತಳು. ಯಾರೊಂದಿಗೋ ಫೋನಿನಲ್ಲಿ ಮಾತಾಡುತ್ತಿದ್ದ ಪ್ರಸಾದ್ ರಿಸೀವರ್ ಕೆಳಗಿಟ್ಟು ಹೇಳಿದ ” ಮೊನ್ನೆ ನಾವು ನೀರಿನಲ್ಲೇ ಆಫೀಸಿಗೆ ಹೋಗಿದ್ದು ಒಳ್ಳೆಯದಾಯಿತು. ರಾತ್ರಿಯ ತನಕ ಬಸ್ಸಿನ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿತಂತೆ. ಎಲ್ಲರೂ ಟಾಪಿನ ಮೇಲೆ ಒಬ್ಬರಿಗೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ಮಳೆಯಲ್ಲಿ ನೆನೆಯುತ್ತ, ದೇವರನ್ನು ಸ್ಮರಿಸುತ್ತ ಕುಳಿತಿದ್ದರಂತೆ. ಬೆಳಗಾಗುವ ತನಕ ಎಲ್ಲರೂ ಚಳಿಯಿಂದಾಗಿ ನೀಲಿಗಟ್ಟಿಹೋಗಿದ್ದರಂತೆ.”

ಏನೋ ನೆನಪಾದವಳಂತೆ ಮಂಜರಿ ಹೇಳಿದಳು, ” ಹದಿಮೂರು ಅಪಶಕುನ ಅಂತಾರಲ್ಲ, ಇಪ್ಪತ್ತಾರು ಅಂದ್ರೆ ಡಬಲ್ ಅಪಶಕುನ ಇರಬೇಕು”.

ಪ್ರಸಾದ್ ಅರ್ಥವಾಗದಂತೆ ಅವಳತ್ತ ನೋಡಿದ.

“ಮತ್ತಿನ್ನೇನು, ಜನೆವರಿ 26 2000, ಗುಜರಾತಿನಲ್ಲಿ ಭೂಕಂಪ, ಡಿಸೆಂಬರ್ 26 2004, ಸುನಾಮಿ, ಈಗ ಈ ಪ್ರಳಯಕಾರಕ ಮಳೆ”

ಹಳೆಯ ನೆನಪನ್ನು ಮೆಲುಕುಹಾಕುತ್ತ ಕುಳಿತಿದ್ದ ಪ್ರಸಾದನಿಗೆ ಈ ಪಟ್ಟಿ ಇನ್ನೂ ಬೆಳೆಯುತ್ತಿದೆಯೆಂದೆನಿಸಿತು. ಕೈಯಲ್ಲಿದ್ದ ಮೊಬೈಲಲ್ಲಿ ಗೂಗಲ್ ಮಾಡಿದಾಗ ಅವನಿಗೆ ಕಂಡಿದ್ದು:

ಜುಲೈ 26 2008 ಅಹಮದಾಬಾದ್ ಬಾಂಬ್ ಸ್ಫೋಟ

ನವೆಂಬರ್ 26 2008 ಮುಂಬೈ ತಾಜ್ ಹೋಟೆಲಿನ ಮೇಲೆ ಭಯೋತ್ಪಾದಕ ದಾಳಿ.

ತನ್ನ ಅನಿಸಿಕೆಗೆ ತಾನೇ ನಕ್ಕ. ಇರೋದು 365 ದಿನಗಳು, ಪ್ರತಿದಿನ ಏನಾದರೊಂದು ಘಟನೆ ಆಗೇ ಇರುತ್ತದೆ. ವಿಕಿಪೀಡಿಯಾದಲ್ಲಿ ಹಾಗೇ ಕಣ್ಣಾಡಿಸಿದಾಗ ವರುಷದ ಪ್ರತಿ ತಾರೀಖಿನಂದು ಕಳೆದ 2000ಕ್ಕೂ ಹೆಚ್ಚು ವರ್ಷಗಳಲ್ಲಿ ನಡೆದ ಘಟನೆಗಳ ಸಂಗ್ರಹ ಕಂಡುಬಂದಿತು. ಕಿಸಾಗೌತಮಿಯ ಕಥೆಯನ್ನು ನೆನಪಿಸುವಂತೆ ಯಾವ ದಿನದಲ್ಲೂ ಬರಿ ಒಳ್ಳೆಯ ಘಟನೆಗಳು ನಡೆದ ಉದಾಹರಣೆ ಇಲ್ಲ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Usha Jogalekar

ಉತ್ತರ ಕರ್ನಾಟಕದ ಗದಗಿನಲ್ಲಿ ಬೆಳೆದಿದ್ದು. ಸದ್ಯಕ್ಕೆ ಪುಣೆಯಲ್ಲಿ ವಾಸ. ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಿ ಕಾಲೇಜೊಂದರಲ್ಲಿ ಅಸಿಸ್ಟಂಟ್ ಪ್ರೊಫೆಸರ್. ಓದು, ಭರತನಾಟ್ಯ, ಪ್ರವಾಸ ಆಸಕ್ತಿಯ ವಿಷಯಗಳು. ಚಿಕ್ಕ ಕಥೆ, ಲೇಖನ ಬರೆಯುವ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!