2009ರ ಮಾತು. ನಂದನ್ ನಿಲೇಕಣಿ ಮತ್ತು ಆಗಿನ ಯುಪಿಎ ಸರಕಾರದ ಕನಸಿನ ಕೂಸಾಗಿದ್ದ ಆಧಾರ್ ಎನ್ನುವ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಲಾಂಚ್ ಆಗಿದ್ದ ಸಮಯ. ಆಧಾರ್ ಯಾಕೆ ಬೇಕು ಅನ್ನುವುದನ್ನು ತಿಳಿಯದೇ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ದೇಶಾದ್ಯಂತ ಜನರು ಆಧಾರ್ ಕಾರ್ಡ್ ಮಾಡಿಸಿದರು. ಕೆಲವು ಕಡೆ ಡಾಟಾಬೇಸ್ ಕೈಕೊಟ್ಟರೆ, ಇನ್ನು ಕೆಲವೆಡೆ ಸರ್ವರ್ ಡೌನ್, ಮತ್ತೊಂದು ಕಡೆ ಬೆರಳಚ್ಚು ಯಂತ್ರ ಕೈಕೊಡುವುದು, ಇನ್ನೊಂದು ಕಡೆ ಭಾವಚಿತ್ರ ತೆಗೆಯುವ ಉಪಕರಣ ಕೆಲಸ ಮಾಡದಿರುವುದು. ಇಲ್ಲವೋ ಇದೆಲ್ಲ ಸರಿ ಇದ್ದರೂ ಆಧಾರ್ ಸಿಬ್ಬಂದಿಗೆ ಕಂಪ್ಯೂಟರ್ ಆಪರೇಟ್ ಮಾಡಲು ಸರಿಯಾಗಿ ಬರದೇ ಸರದಿಯಲ್ಲಿದ್ದ ಜನಕ್ಕೆ ಪಿಳ್ಳೆ ನೆವ ನೀಡಿ ಗಂಟೆಗಟ್ಟಲೇ ಕಾಯಿಸುತ್ತಿದ್ದರು. ಅಂತೂ ಗಜಪ್ರಸವದ ರೀತಿ ಭಾಸವಾಗಿದ್ದ ಆಧಾರ್ ಕಾರ್ಡ್ ಪ್ರಕ್ರಿಯೆ ಒಂದು ಮಟ್ಟಿಗೆ ಮುಗಿದಂತೆ ಅನಿಸಿದ್ದು ವರ್ಷದ ಬಳಿಕ ಆಧಾರ್ ಕಾರ್ಡ್ ಮನೆಗೆ ಬಂದಾಗಲೇ. ಅದಾದ ಮೇಲೂ ಜನರ ಸಂಕಷ್ಟ ಕಮ್ಮಿಯಾಯಿತೇ? ಖಂಡಿತಾ ಇಲ್ಲ. ಡಾಟಾ ಎಂಟ್ರಿಯಲ್ಲಿ ಆದ ಎಡವಟ್ಟುಗಳ ಪರಿಣಾಮ ಜನ ಮತ್ತೆ ಆಧಾರ್ ಕೇಂದ್ರಗಳಿಗೆ ಎಡತಾಕುವಂತಾಯಿತು. ಸಿಬಂದಿಗಳಿಗೆ ಮಾಹಿತಿಯ ಕೊರತೆಯೋ ಅಥವಾ ಧಿಮಾಕೋ ಜನರಿಗೆ ಮತ್ತೆ ಕಾಯುವುದೇ ಮಾಮೂಲಿಯಾಗಿ ಬಿಟ್ಟಿತು. ಒಂದು ಸಣ್ಣ ವಿಳಾಸ ಬದಲಾವಣೆಗೂ ಜನ ಬಹಳ ಕಷ್ಟ ಪಡಬೇಕಾಯಿತು. ಆದರೆ ತಂತ್ರಜ್ಞಾನ ಮುಂದುವರಿದ ಪರಿಣಾಮ ಕಾಲ ಕ್ರಮೇಣ ಆಧಾರ್ ಕೆಲಸಗಳು ಹಿಂದಿಗಿಂತ ತ್ವರಿತವಾಗಿ ಆಗಲಾರಂಭಿಸಿದವು.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಆಧಾರ್ ಕಾರ್ಡ್ ಇತ್ತೀಚಿಗೆ ಸದಾ ಸುದ್ದಿಯಲ್ಲಿದೆ ಮತ್ತು ಸರಕಾರದ ಒಂದಿಲ್ಲೊಂದು ಯೋಜನೆಗಳು ಆಧಾರ್ ಕೇಂದ್ರೀಕೃತವೇ ಆಗಿವೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಾವಿರಾರು ಕೋಟಿ ವ್ಯಯಿಸಲಾಗಿದ್ದ ಆಧಾರ್ ಪ್ರಾಜೆಕ್ಟನ್ನು ಸಮರ್ಪಕವಾಗಿ ಉಪಯೋಗಿಸಿತು ಅಂದರೆ ತಪ್ಪಾಗಲಾರದು ಅನ್ನಿಸುತ್ತೆ. ಜನಧನ್ ಯೋಜನೆ ಮತ್ತು ಎಲ್‌ಪಿಜಿ ಸಬ್ಸಿಡಿ ಪಡೆಯಲು ಆಧಾರ್ ಲಿಂಕ್ ಮಾಡುವುದು ಅನಿವಾರ್ಯ ಮಾಡುವ ಮೂಲಕ ಆಧಾರ್ ಕಾರ್ಡ್ ಅನಿವಾರ್ಯತೆಯನ್ನು ಜನಸಾಮಾನ್ಯರಿಗೆ ತಿಳಿಸಲಾಯಿತು. ಆಧಾರ್ ಕಾರ್ಡ್ ಒಂದಿದ್ದರೆ ಬರೇ ಹತ್ತು ದಿನದಲ್ಲಿ ಪಾಸ್ಪೋರ್ಟ್ ಸಿಗುವ ಹಾಗೆ ಆಯಿತು. ಆಧಾರ್ ಕಾರ್ಡ್ ಮೂಲಕ ಕೇಂದ್ರ ಸರಕಾರದ ಡಿಜಿಲಾಕರ್ ಕೂಡಾ ಉಪಯೋಗಿಸುವಂತಾಯಿತು. ಪ್ರಾವಿಡೆಂಟ್ ಫಂಡ್, ಬ್ಯಾಂಕ್ ಲೋನ್, ಪೆನ್ಷನ್ ಮುಂತಾದವುಗಳಲ್ಲಿಯೂ ಆಧಾರ್ ಬೇಕಾಗಿ ಬಂತು. ಜೀವನ ಪ್ರಮಾಣ ಅನ್ನುವ ಆಧಾರ್ ಯುಕ್ತ ಡಿಜಿಟಲ್ ಲೈಫ್ ಸರ್ಟಿಫಿಕೇಶನ್ ಯೋಜನೆಯನ್ನು ಕೇಂದ್ರ ಸರಕಾರ ಜಾರಿಮಾಡಿತು. ಇದಲ್ಲದೇ ಇನ್ನೂ ಹತ್ತು ಹಲವು ಯೋಜನೆಗಳಲ್ಲಿ ಆಧಾರ್ ಅನಿವಾರ್ಯವಾಯಿತು. ಆದರೆ ಯಾವಾಗ ದೇಶದ ಅರ್ಥ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಮೋದಿ ಸರಕಾರ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಹೊರಟಿತೋ ತೆರಿಗೆ ವಂಚಕರು ಬೆಚ್ಚಿಬಿದ್ದರು. ಅದಲ್ಲದೇ ಬ್ಯಾಂಕ್‌ಗಳಲ್ಲಿ 50000ಕ್ಕಿಂತ ಜಾಸ್ತಿ ವ್ಯವಹಾರಗಳಲ್ಲಿ ಆಧಾರ್ ಕಡ್ದಾಯ ಅನ್ನುವ ನಿಯಮ ಕೂಡಾ ಬಂದಿದೆ. ಆಧಾರ್ ಯೋಜನೆಗೆ ಬಿಜೆಪಿ ಮೊದಲು ವಿರೋಧಿಸಿ ಈಗ ಎಲ್ಲದರಲ್ಲೂ ಆಧಾರ್ ಕಡ್ದಾಯ ಮಾಡುತ್ತಿರುವುದು ಎಷ್ಟು ಸಮಂಜಸ ಎನ್ನುವ ಕೂಗು ಮತ್ತು ಆಧಾರ್ ಡಾಟಾಬೇಸ್ ಎಷ್ಟು ಸುರಕ್ಷಿತ ಅನ್ನುವ ಅನುಮಾನ ಕೆಲವರಲ್ಲಿ ಮನೆಮಾಡಿದೆ.
2017ರ ಹಣಕಾಸು ಕಾಯ್ದೆಯ ಪ್ರಕಾರ ಐಟಿ(ಆದಾಯ ತೆರಿಗೆ) ರಿಟರ್ನ್ಸ್ ಸಲ್ಲಿಸಲು ಆಧಾರ್ ಜೊತೆ ಪಾನ್ ಸಂಖ್ಯೆ ಲಿಂಕ್ ಮಾಡುವುದು ಅವಶ್ಯಕವಾಗಿದೆ. 2017ರ ಡಿಸೆಂಬರ್ ಅಂತ್ಯದೊಳಗೆ ಲಿಂಕ್ ಮಾಡದಿದ್ದಲ್ಲಿ ಪಾನ್ ಸಂಖ್ಯೆಯನ್ನು ರದ್ದು ಮಾಡಲಾಗುವುದು ಎಂಬ ಅಂಶವೂ ಕಾಯ್ದೆಯಲ್ಲಿದೆ. ದೇಶದ ನಾಗರಿಕರ ಅಕೌಂಟ್‌ಗಳಿಗೆ ಹಣ ಎಲ್ಲಿಂದ ಬರುತ್ತಿದೆ ಮತ್ತು ಆ ಹಣ ಯಾವ ರೀತಿಯಲ್ಲಿ ಖರ್ಚಾಗುತ್ತಿದೆ ಎನ್ನುವ ಮಾಹಿತಿಯನ್ನು ಸರಕಾರ ತಿಳಿದುಕೊಂಡರೆ ತಪ್ಪೇನಿದೆ? ಇಲ್ಲಿ ಭಯ ಯಾರಿಗಾಗುತ್ತೋ ಅವರು ಸರಿಯಾಗಿ ಆದಾಯ ತೆರಿಗೆ ಕಟ್ಟುತ್ತಿಲ್ಲ ಅನ್ನುವುದು ಸ್ಪಷ್ಟ. ಕಾನೂನು ಬಾಹಿರ ಹಣಕಾಸಿನ ವ್ಯವಹಾರಗಳು, ತೆರಿಗೆ ವಂಚನೆ ತಡೆಗಟ್ಟುವಲ್ಲಿ ಇದು ಖಂಡಿತಾ ಸಹಕಾರಿ. ರಿಯಲ್ ಎಸ್ಟೇಟ್, ಚಿನ್ನ, ಸಹಕಾರಿ ರಂಗ, ವಿಮಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಆದಾಯ ಇಲಾಖೆಯ ಕಣ್ಣು ತಪ್ಪಿಸುತ್ತಿದ್ದವರಿಗೆ ಇನ್ನು ಸ್ವಲ್ಪ ಕಷ್ಟ. ಹಾಗೆ ನೋಡಿದರೆ ಸರಕಾರದ ಅನೇಕ ಸವಲತ್ತುಗಳು ಸಿಗಬೇಕಾದದ್ದು ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ಮಾತ್ರ, ಆದರೆ ವಾಸ್ತವದಲ್ಲಿ ಸರಕಾರದ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ಉಳ್ಳವರ ಪಾಲಾಗುತ್ತದೆ. ಭವಿಷ್ಯದಲ್ಲಿ ಆಧಾರ್ ಕೇಂದ್ರಿತ ವ್ಯವಸ್ಥೆ ಪ್ರತಿ ವ್ಯಕ್ತಿಯ ಆದಾಯದ ವಿವರವನ್ನು ದಾಖಲೆ ಸಮೇತ ಸಂಬಂಧಿಸಿದ ಸರಕಾರಿ ಇಲಾಖೆಯ ಕೈಯಲ್ಲಿರಿಸುತ್ತದೆ ಮತ್ತು ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ದೊಡ್ಡ ನಷ್ಟ ತಪ್ಪುತ್ತದೆ.
ಎಷ್ಟೋ ಜನ ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಹೊಂದಿದವರಿದ್ದಾರೆ. ನಕಲಿ ದಾಖಲೆಗಳ ಮೂಲಕ ಪೆನ್ಷನ್ ಪಡೆದು ಸರ್ಕಾರಕ್ಕೆ ಯಾಮಾರಿಸುವವರೂ ಇದ್ದಾರೆ. ನಕಲಿ ದಾಖಲೆ ಮೂಲಕ ಕೃಷಿ ಸಾಲ ಪಡೆದು ಅದನ್ನು ಬೇರೆಯದೇ ಉದ್ದೇಶಗಳಿಗೆ ಉಪಯೋಗಿಸುವ ಜನರೂ ಇದ್ದಾರೆ. ಸರ್ಕಾರದ ವೈದ್ಯಕೀಯ ಸೌಲಭ್ಯಗಳು, ಪಡಿತರ ವಿತರಣೆಗೂ ಆಧಾರ್ ಕಡ್ದಾಯವಾಗಬೇಕು. ಕೃಷಿ ಸಾಲ ಮನ್ನಾ ಮತ್ತು ಪೆನ್ಷನ್ ಯೋಜನೆಯಲ್ಲಿ ಹೆಚ್ಚಿನ ರಾಜ್ಯಗಳು ಆಧಾರ್ ಖಡ್ಡಾಯ ಮಾಡಿವೆ. ಹೀಗಾದಲ್ಲಿ ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಲು ಸುಲಭ. ವೋಟರ್ ಕಾರ್ಡುಗಳಿಗೆ ಆಧಾರ್ ಲಿಂಕ್ ಮಾಡುವ ಮೂಲಕ ನಕಲಿ ಮತದಾನ ತಡೆಯುವ ಉಪಾಯ ಸರಕಾರದ್ದು. ಇದಲ್ಲದೇ ಇ-ಕೆವೈಸಿ ಮೂಲಕ ದಸ್ತಾವೇಜನ್ನು ಸರಳ ಮಾಡಿಸಿದರೆ ಎಲ್ಲರಿಗೂ ಅನುಕೂಲವಲ್ಲವೇ? ಆಧಾರ್ ಒಂತರಾ ಸಿಂಗಲ್ ವಿಂಡೋದ ಹಾಗೆ. ಬ್ಯಾಂಕ್ ಖಾತೆ ತೆರೆಯಲು ಮತ್ತು ಸಿಮ್ ಕಾರ್ಡ್ ಕೊಳ್ಳಲು ರಾಶಿ ರಾಶಿ ದಾಖಲೆಗಳನ್ನು ಕೊಂಡೊಯ್ಯುವ ಅವಶ್ಯಕತೆ ಇಲ್ಲ. ಒಂದಕ್ಕಿಂತ ಹೆಚ್ಚು ಆಧಾರ್ ಅಥವಾ ಪಾನ್ ಹೊಂದಿದ್ದವರು ಸಿಕ್ಕಿಹಾಕಿಕೊಳ್ಳುವುದರ ಜೊತೆಗೆ, ಸರ್ಕಾರಕ್ಕೆ ತೆರಿಗೆವಂಚನೆ ಮಾಡುವುದು ಕಷ್ಟ.
ನಂಬಲರ್ಹ ಮೂಲಗಳ ಪ್ರಕಾರ ಸದ್ಯದಲ್ಲಿಯೇ ಬಹುತೇಕ ವಿಮಾ ಕಂಪನಿಗಳು ಆಧಾರ್ ಆಧಾರಿತ ಮೊಬೈಲ್ ಅ್ಯಪ್ ಹೊರ ತರಲಿವೆ. ವಿಮಾ ಏಜೆಂಟ್ ಕೇವಲ ತನ್ನಲ್ಲಿರುವ ಆ್ಯಪ್ಗೆ ಪಾಲಿಸಿದಾರನ ಆಧಾರ್ ಬಯೋಮೆಟ್ರಿಕ್ ದಾಖಲೆ ಕನೆಕ್ಟ್ ಮಾಡಿದರೆ ಆಯಿತು, ಆತನ ಎಲ್ಲ ಮಾಹಿತಿ ಸಹಿತ ಎಷ್ಟು ವಿಮೆಗೆ ಅರ್ಹ ಎಂಬ ವಿವರ ಸ್ಕ್ರೀನ್ ಮೇಲೆ ಬರುತ್ತದೆ. ಹಣಕಾಸು ಅಂಡರರೈಂಟಿಗ್ ಕಾರ್ಯದಲ್ಲಿ ವಿಮೆ ಕಂಪೆನಿಗಳಿಗೆ ಬಹುದೊಡ್ಡ ಲಾಭ ಇದು. ಈಗಾಗಲೇ ಆನ್ಲೈನ್ ಮೂಲಕ ಆಧಾರ್ ಆಧಾರಿತ ಬ್ಯಾಂಕ್ ಖಾತೆ ಹಾಗೂ ಸಾಲಕ್ಕೆ ಅರ್ಜಿ ಪಡೆಯಲು ಅನೇಕ ಫೈನಾನ್ಸ್ ಹಾಗೂ ಬ್ಯಾಂಕ್ಗಳು ಮುಂದಾಗಿವೆ. ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆಧಾರ್ ಬೇಸ್ಡ್ ಎಂಟ್ರಿ ಅದಾಗಲೇ ಜಾರಿಗೆ ಬಂದಾಗಿದೆ. ಏರ್ಪೋರ್ಟ್ ಒಳಗೆ ಹೋಗಲು ಗುರುತಿನ ಪತ್ರವನ್ನು ಭದ್ರತಾ ಸಿಬ್ಬಂದಿಗೆ ತೋರಿಸಿ ತುಂಬಾ ಹೊತ್ತು ವ್ಯಯಿಸಬೇಕಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರಗಳಿಗೂ ಆಧಾರ್ ಕಡ್ಡಾಯ ಅನ್ನುವ ಕಾನೂನು ಬಂದರೆ ಉತ್ತಮ. ಆಧಾರ್ ಎಲ್ಲಾ ಕಡೆ ಜಾರಿಯಾದ್ರೆ ವ್ಯಕ್ತಿಯ ಅಪರಾಧ ಹಿನ್ನೆಲೆ ಕ್ಷಣಾರ್ಧದಲ್ಲಿ ಪೊಲೀಸ್ ಇಲಾಖೆಯ ಕೈಯಲ್ಲಿರಬಹುದು.
ಆಧಾರ್ ಸೆಂಟ್ರಲೈಸ್ಡ್ ಡಾಟಾಬೇಸ್ ಆಗಿರುವುದರಿಂದ ಸುರಕ್ಷತೆ ಬಹುಮುಖ್ಯ. ಸೈಬರ್ ಅಟ್ಯಾಕ್ಸ್ ಬಗ್ಗೆ ಬಹಳ ಎಚ್ಚರಿಕೆ ವಹಿಸುವುದು ಅತ್ಯಾವಶ್ಯ. ಬ್ಯಾಂಕಿಂಗ್, ಇನ್ಸೂರೆನ್ಸ್, ಮತ್ತು ಎನರ್ಜಿ ಕ್ಷೇತ್ರದ ಡಾಟಾಬೇಸ್‌ಗಳು ಕ್ರಿಟಿಕಲ್ ಡಾಟಾಬೇಸ್ ವಿಭಾಗದಲ್ಲಿ ಬರುತ್ತವೆ. ಕ್ರಿಟಿಕಲ್ ಡಾಟಾಬೇಸ್‌ಗಳು ಹ್ಯಾಕ್ ಆಗೋದು ಕಷ್ಟಸಾಧ್ಯ. ಆದ್ದರಿಂದ ಆಧಾರ್ ಡಾಟಾಬೇಸ್ ಕೂಡಾ ಇದೆ ವ್ಯಾಪ್ತಿಗೆ ಬಂದರೆ ಬಹಳ ದೊಡ್ಡ ತಲೆನೋವು ನಿವಾರಣೆ ಆದಂತೆಯೇ ಸರಿ. ಆಧಾರ್ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳುವಂತ ಬಹುದೊಡ್ಡ ಸವಾಲು ಸರ್ಕಾರದ ಮುಂದಿದೆ. ಅದಾಗ್ಯೂ ಸಧ್ಯ ಅಧಾರ್ ಡಾಟಾ ಸುರಕ್ಷಿತವಾಗಿಯೇ ಇದೆ. ಅಲ್ಲದೇ ಆಧಾರ್ ಮತ್ತು ಪಾನ್ ಲಿಂಕಿಂಗ್ ಪಾರದರ್ಶಕವಾಗಿರಬೇಕು. ಮರಿ ರಾಜಕಾರಣಿಯಿಂದ ಹಿಡಿದು ಹಿರಿ ರಾಜಕಾರಣಿ ಕೂಡಾ ಖಡ್ಡಾಯವಾಗಿ ಇದನ್ನು ಮಾಡಬೇಕು. ನಿಯಮಗಳು ಕೇವಲ ಜನ ಸಾಮಾನ್ಯರು ಮಾತ್ರ ಪಾಲನೆ ಮಾಡಿದರೆ ಸಾಲದು.
ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಆಧಾರ್ ಯೋಜನೆಯನ್ನು ವಿರೋಧಿಸಿತ್ತು ನಿಜ. ಆದರೆ ಸಾವಿರಾರು ಕೋಟಿ ವ್ಯಯಿಸಿದ ಯೋಜನೆಯನ್ನು ಕೇವಲ ವಿರೋಧಿಸಲೇ ಬೇಕು ಅನ್ನುವ ರೀತಿಯಲ್ಲಿ ವಿರೋಧಿಸದೇ ಅದೇ ಆಧಾರ್ ಮೂಲಕ ಜಡ್ಡು ಹಿಡಿದು ಹೋಗಿರುವ ದೇಶದ ವ್ಯವಸ್ಥೆಯನ್ನು ಸ್ವಲ್ಪವಾದರೂ ಸರಿದಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮೋದಿ ಸರ್ಕಾರದ್ದು! ವಿಪರ್ಯಾಸವೆಂದರೆ ಜಿಯೋ ಸಿಮ್ ಕೊಳ್ಳುವಾಗ ಆಧಾರ್ ಕಾರ್ಡ್ ವಿವರವನ್ನು ಹಿಂದೂ ಮುಂದೂ ನೋಡದೆ ಕೊಟ್ಟಿದ್ದ ನಾವು ಈಗ ಆದಾಯ ತೆರಿಗೆ ಮತ್ತು ಬ್ಯಾಂಕ್ ನಲ್ಲಿ 50000 ಕ್ಕಿಂತ ಜಾಸ್ತಿ ವ್ಯವಹಾರ ಮಾಡುವಾಗ ಆಧಾರ್ ಕಡ್ದಾಯ ಅಂದಾಗ ಲಬೋ ಲಬೋ ಅಂತ ಬಾಯಿ ಬಡ್ಕೋಳ್ತೀವಿ! ಹೆಚ್ಚಿನ ಯೋಜನೆಗಳಿಗೆ ಆಧಾರ್ ಕಡ್ಡಾಯವಾಗಿರುವುದರಿಂದ ನಿಮ್ಮ ಬಳಿ ಎಷ್ಟು ಬ್ಯಾಂಕ್ ಖಾತೆಗಳಿವೆ, ಎಷ್ಟು ಸಿಮ್ ಗಳಿವೆ, ಗ್ಯಾಸ್ ಕನೆಕ್ಷನ್ ಎಷ್ಟಿವೆ ಎನ್ನುವುದನ್ನು ಕ್ಷಣಮಾತ್ರದಲ್ಲಿ ಪತ್ತೆಹಚ್ಚಲು ಸುಲಭ.ಆಧಾರ್ ಮೇನಿಯಾದಿಂದಾಗಿ ವೋಟರ್ ಐಡಿ, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಬದಲು ಆಧಾರ್ ಕಾರ್ಡ್ ಅನ್ನುವ ಒಂದೇ ಗುರುತಿನ ಸಾಧನ ಪತ್ರ ಬರುವ ದಿನ ಬಹಳ ದೂರವಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಆಧಾರ್ ಕಾರ್ಡ್ ಭವಿಷ್ಯದಲ್ಲಿ ದೇಶದ ಏಕೈಕ ಗುರುತಿನ ಪತ್ರವಾಗುವ ಎಲ್ಲಾ ಸಾಧ್ಯತೆಗಳು ಬಹಳ ನಿಚ್ಚಳವಾಗಿ ಗೋಚರಿಸುತ್ತಿದೆ.