ಸಹ್ಯಾದ್ರಿಯ ಮಡಿಲಿನಲ್ಲಿ ತಣ್ಣಗೆ ಮಲಗಿದ ಪುಣ್ಯಕ್ಷೇತ್ರ ಮಂಜುಗುಣಿ ಉತ್ತರಕನ್ನಡ ಜಿಲ್ಲೆ ಶಿರಸಿಯಿಂದ ಸುಮಾರು 27-28 ಕಿ.ಮಿ. ಹಾಗೂ ಅಂಕೋಲದಿಂದ 31-32 ಕಿ.ಮಿ. ದೂರದಲ್ಲಿದೆ. ಚಳಿಗಾಲದಲ್ಲಿ ಸುತ್ತುವರಿಯುವ ದಟ್ಟಮಂಜಿನಿಂದಾಗಿ ‘ಮಂಜುಗುಣಿ’ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಅರಣ್ಯದಿಂದ ಸುತ್ತುವರಿದ ಈ ಕ್ಷೇತ್ರವನ್ನು ‘ಕರ್ನಾಟಕದ ತಿರುಪತಿ’ ಎಂದೇ ಹೇಳುತ್ತಾರೆ.
‘ಶ್ರೀ ವೆಂಕಟೇಶ ಮಹಾತ್ಮ್ಯಾ’ದ ಪ್ರಕಾರ ಈ ಕ್ಷೇತ್ರದ ಸ್ಥಾಪಕರು ಶ್ರೀ ತಿರುಮಲ ಯೋಗಿ’ ಎನ್ನುವವರು. ಅವರು ತಿರುಗಾಡುತ್ತಾ ಮಂಜುಗುಣೀ ಗೆ ಸಮೀಪ ಬಂದು, ಇಲ್ಲಿನ ಸಮೀಪದ ಗಿಳಿಗುಂಡಿಯ ಬೆಟ್ಟದ ಗುಹೆಯೊಂದರಲ್ಲಿ ತಪಸ್ಸು ಮಾಡುತ್ತಿದ್ದರಂತೆ. ವೆಂಕಟರಮಣ ದೇವರು ಅವರಿಗೆ ಕನಸಿನಲ್ಲಿ ಬಂದು ತನ್ನ ಸ್ವಯಂಭೂ ಮೂರ್ತಿಯನ್ನು ಮಂಜುಗುಣೀ ಯಲ್ಲಿ ಸ್ಥಾಪಿಸುವಂತೆ ಆದೇಶಿಸಿದ ಪ್ರಕಾರ ಈ ಸ್ಥಳದಲ್ಲಿ ವೆಂಕಟರಮಣ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿನ ಪ್ರಸಿದ್ಧ ರಥೋತ್ಸವದ ದಿನದಂದು ತಿರುಪತಿಯಲ್ಲಿ ದೇವಾಲಯವನ್ನು ಈ ಮುಂಚೆ ಒಂದು ದಿನ ಮುಚ್ಚಿರುತ್ತಿದ್ದರಂತೆ; ಈಗ ಒಂದು ತಾಸು ಮುಚ್ಚಿರುತ್ತಾರೆ ಎನ್ನುತ್ತಾರೆ. ಆ ವೇಳೆಗೆ ದೇವರು ಮಂಜುಗುಣೀ ಗೆ ಆಗಮಿಸಿರುತ್ತಾನೆ ಎನ್ನುವ ನಂಬಿಕೆ ಈ ರೂಢಿಯ ಹಿಂದೆ ಇದೆ. ಈಗಲೂ ಆ ಗುಹೆ ಇದ್ದು ತೆವಳಿಕೊಂಡೇ ಸಾಗಬೇಕು ಎನ್ನುತ್ತಾರೆ.
ಶಿರಸಿ ಕುಮಟಾ ರಾಜ್ಯ ಹೆದ್ದಾರಿಯ ಮೂಲಕ ಹೋಗುವಾಗ ಕೂರ್ಸೆ ಕ್ರಾಸ್‍ನಿಂದ ಬಲಕ್ಕೆ ತಿರುಗಿ ಸುಮಾರು 5-6 ಕಿ.ಮಿ. ಒಳಗೆ ಹೋದರೆ ಮಂಜುಗುಣೀ ತಲಪಬಹುದು. ಪ್ರವೇಶದಲ್ಲೇ ಮರಗಿಡಗಳಿಂದ ಸುತ್ತುವರಿದ ‘ಶ್ರೀ ಚಕ್ರತೀರ್ಥ’ವೆನ್ನುವ ದೊಡ್ಡ ಪುಷ್ಕರಣ ಇದೆ. ಅದರ ಬುಡದಲ್ಲಿ ಅರಳಿಮರಗಳು ತಂಪಾಗಿ ಗಾಳಿ ಬೀಸುತ್ತಿರುತ್ತದೆ. ಅಲ್ಲೇ ಹನುಮಂತನ ಪುಟ್ಟ ಗುಡಿಯೂ ಇದೆ. ದೇವಸ್ಥಾನದ ಬಾಗಿಲಲ್ಲೇ ದೊಡ್ಡ ಮರದ ರಥವಿದ್ದು, ದ್ವಾರದಲ್ಲಿ ಕಲ್ಲಿನ ಆಮೆ ದೇವರಿಗೆ ಮುಖ ಮಾಡಿ ಕೆತ್ತಲ್ಪಟ್ಟಿದೆ. ಶ್ರೀ ವಾದಿರಾಜ ತೀರ್ಥರು ಸ್ಥಾಪಿಸಿದ ದೊಡ್ಡ ಧ್ವಜಸ್ಥಂಭ ದಾಟಿ ಒಳಹೊಕ್ಕರೆ ಕಲ್ಲಿನ ದೇವಸ್ಥಾನದ ಮೊದಲ ಹಂತ ಮಾಧ್ವಮಂಟಪ ಎದುರಾಗುತ್ತದೆ. ಮುಂದಿನ ಹಂತದವರೆಗೆ ಭಕ್ತರು ಹೋಗಬಹುದು, ಗುಬ್ಬಿಗಳ ಚಿಲಿಪಿಲಿ ರವದಲ್ಲಿ ದೇವರ ಭಕ್ತಿ ಇನ್ನಷ್ಟು ಹೆಚ್ಚುತ್ತದೆ. ಅಲ್ಲಿಂದ ಮೂರು ಬಾಗಿಲು ದಾಟಿದ ಬಳಿಕ ಗರ್ಭಗುಡಿಯ ಸುಂದರ ವೆಂಕಟರಮಣನ ಮೂರ್ತಿ ನಮ್ಮ ಭಕ್ತಿಭಾವವನ್ನು ಹೆಚ್ಚಿಸುತ್ತದೆ. ಕಲ್ಲಿನ ದೇವಸ್ಥಾನದ ಪಕ್ಕದಲ್ಲೇ ಪದ್ಮಾವತಿ ಗುಡಿಯಿದ್ದು ಕುಂಕುಮದ ಪ್ರಸಾದವನ್ನು ಹಂಚಲಾಗುತ್ತದೆ.
ಇಲ್ಲಿ ಚೌಲಕಾರ್ಯ, ಮುಂಜಿಯಂತಹ ಕಾರ್ಯವನ್ನೂ ನೆರವೇರಿಸುವ ವ್ಯವಸ್ಥೆಯಿದೆ. ಈ ಒಂದುವರ್ಷದಿಂದ ದಿನಾಲೂ ಅನ್ನಸಂತರ್ಪಣೆ ನಡೆಯುತ್ತದೆ. ಮಧ್ಯಾನ್ಹ ಬಸ್ಸಿಗೆ ಬರುವವರೆಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎನ್ನುತ್ತಾರೆ ಅಲ್ಲಿನ ಕಾರ್ಯಕರ್ತರು.
ಸುತ್ತಮುತ್ತಲ ಅನೇಕ ಗ್ರಾಮದ ಮನೆಯವರ ಮನೆದೇವರು ಮಂಜುಗುಣಿ ವೆಂಕಟರಮಣನಾಗಿದ್ದು, ಭಕ್ತರೊಬ್ಬರು “ಇಲ್ಲಿ ಪೂಜೆ ನೆರವೇರಿಸುವ ರೀತಿಯೆ ತುಂಬ ಸುಂದರವಾಗಿದ್ದು, ಪೂಜೆಗಾಗಲಿ, ಪ್ರಸಾದ ವಿತರಣೆಯಲ್ಲಾಗಲಿ ಸ್ವಲ್ಪವೂ ಅವಸರವಿಲ್ಲ. ಮನಸ್ಸಿಗೂ ಸಮಾಧಾನವೆನಿಸುತ್ತದೆ” ಎಂದು ತಮ್ಮ ಅನುಭವ ಹೇಳಿಕೊಳ್ಳುತ್ತಾರೆ. ಈ ದೇವರಿಗೆ ಹರಕೆಯನ್ನೂ ಮಾಡಿಕೊಳ್ಳುತ್ತಾರೆ.
ತಿರುಪತಿಯ ಒಂದು ಅಂಶವಾದ ಈ ಕ್ಷೇತ್ರ ದರ್ಶನದಿಂದ ತಿರುಪತಿಯನ್ನೇ ನೋಡಿದ ಭಾವ ಉಂಟಾಗುವುದರಲ್ಲಿ ಸಂಶಯವಿಲ್ಲ.