ವರ್ಷ 1997. ಮುಂಬೈ ನಗರದ ಬಾಡಿಗೆ ಮನೆಯೊಂದರ ಕೋಣೆಯಲ್ಲಿ ಚಿತ್ರಕಥೆಯೊಂದಕ್ಕೆ ಅಂತಿಮ ಸ್ಪರ್ಶ ದೊರೆತಿತ್ತು. ಆ ಕಥೆಯ ಜನಕ ಒಬ್ಬ ನಿರ್ದೇಶಕನೂ ಹೌದು. ನಿರ್ದೇಶಕನಾಗಿ ತಾನು ಮಾಡಿದ ಎರಡು ಚಿತ್ರಗಳ ಫಲಿತಾಂಶಕ್ಕೆ ಆತನ ಬಾಡಿಗೆ ಮನೆಯೇ ಸಾಕ್ಷಿ. ಆದರೆ ಅಂದು ಬರೆದು ಮುಗಿಸಿದ ಚಿತ್ರಕಥೆಯ ಮೇಲೆ ಎಲ್ಲಿಲ್ಲದ ವಿಶ್ವಾಸ ಆತನಿಗೆ. ಕಥೆ ಅಂದಿಗೆ ಸುಮಾರು ನೂರು ವರ್ಷಗಳ ಹಿಂದಿನ ಕಾಲದ್ದು. ಅದ್ಯಾಕೆ ತಾನು ಅಂತದೊಂದು ಚಿತ್ರಕಥೆಗೆ ಕೈ ಹಾಕಿದೆ ಎಂಬುದು ಸ್ವತಃ ಆತನಿಗೂ ತಿಳಿದಿರಕ್ಕಿಲ್ಲ. ಹಿಂದಿ ಚಿತ್ರರಂಗದ ಭವಿತವ್ಯದ ಅದ್ಭುತ ದಿನಗಳನ್ನು ವಿಶ್ವ ಮಟ್ಟದಲ್ಲಿ ಕಂಗೊಳಿಸಲು ಹೊರಟಿದ್ದ ಚಿತ್ರ ಅದಾಗಿದ್ದಿತು. ಗಟ್ಟಿ ಮನಸ್ಸು ಮಾಡಿ ಕತೆಯನ್ನು ಹೊತ್ತು ಚಿತ್ರವನ್ನು ಕಟ್ಟುವ ಕನಸಿನಲ್ಲಿ ಆತ ಮನೆಯಿಂದ ಹೊರನಡೆದ.
ಅಲ್ಲಿಂದ ಅಶುತೋಷ್ ಗೋವಾರಿಕರ್’ನ ಪಯಣ ಅಂದಿನ ರೈಸಿಂಗ್ ಸ್ಟಾರ್ ಶಾರುಖ್ ಖಾನನ ಮನೆಗೆ. ದೃಶ್ಯ ಮಾಧ್ಯಮದಲ್ಲಿ ಪರದಾಡುತ್ತಿದ್ದ ಕಾಲದಿಂದಲೂ ಶಾರುಖ್’ನನ್ನು ಬಲ್ಲವನಾಗಿದ್ದರಿಂದ ತನ್ನ ಚಿತ್ರಕ್ಕೆ ಒಲ್ಲೆ ಎನ್ನನು ಎಂಬ ಆತ್ಮವಿಶ್ವಾಸದಲ್ಲಿ ಆತನ ಮನೆಯ ಕದವನ್ನು ತಟ್ಟಿದ್ದ. ನಾಯಕನ ಒಪ್ಪಿಗೆಯ ರುಜುವಾತನ್ನು ಕಾಣಲು ಒಳ ನಡೆದ ಆತ ಕೆಲಸಮಯದಲ್ಲೇ ಹ್ಯಾಪೆ ಮೋರೆಯನ್ನು ಹೊತ್ತು ಹೊರಬರಬೇಕಾಯಿತು. ಶಾರುಖ್ ಕಾರಣಾಂತರಗಳಿಂದ ಚಿತ್ರವನ್ನು ನಿರಾಕರಿಸಿದ್ದ. ಪಾದರಸದಂತಹ ನಟನೊಬ್ಬ ಚಿತ್ರಕ್ಕೆ ನಾಯಕನಾದರೆ ನಿರ್ಮಾಪಕರನ್ನು ಆರಾಮಾಗಿ ಸೆಳೆಯಬಹುದು ಎಂಬ ಆತನ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ಮುಂದೆ ಮತ್ತೊಬ್ಬ ನಾಯಕನ ಜೊತೆಗೆ ನಿರ್ಮಾಪಕನನ್ನೂ ಒಲಿಸಬೇಕಾದ ಅನಿವಾರ್ಯತೆ. ಶಾರುಖ್ ಅಂದು ಚಿತ್ರವನ್ನು ನಿರಾಕರಿಸಿದ್ದಲ್ಲದೆ ಆ ಪಾತ್ರಕ್ಕೆ ದಿ ಪರ್ಫೆಕ್ಷನಿಸ್ಟ್ ಆಮಿರ್ ಖಾನ್’ನನ್ನು ಹಾಕಿಕೊಳ್ಳಬೇಕೆಂಬ ಸಲಹೆಯನ್ನು ನೀಡುತ್ತಾನೆ. ಅಂತೆಯೇ ಆಶುತೋಷ್ ಅಂದು ಆಮಿರ್’ನ ಮನೆಯ ಮುಂದೆ ಬಂದು ನಿಲ್ಲುತ್ತಾನೆ. ಅಂದು ಹೆಚ್ಚಿನ ಜನರು ಈತನ ಚಿತ್ರಕಥೆಯನ್ನು ನಿರಾಕರಿಸಲು ಮುಖ್ಯ ಕಾರಣ ಕಥೆಯ ಕಾಲಘಟ್ಟ. ಸುಮಾರು ಶತಮಾನಗಳ ಹಿಂದೆ ನಡೆದಿರಬಹುದಾದ ಕತೆಯೆಂದು ಪ್ರಾರಂಭವಾಗುವ ಚಿತ್ರವನ್ನು ಕಂಡು ನೋಡುಗ ಚಿತ್ರದ ಆರಂಭದಲ್ಲಿಯೇ ಖಿನ್ನತೆಗೆ ಒಳಪಡಬಹುದು. ಅಲ್ಲದೆ ಚಿತ್ರದ ಸಮಯ ಮೂರು ತಾಸಿಗೂ ಮಿಗಿಲಾಗುವ ಸಂಭವವಿತ್ತು. ಕಥೆಯ ಸಾರಾಂಶ ಅದೆಷ್ಟೇ ಅರ್ಥಪೂರ್ಣವಾಗಿದ್ದರೂ, ಮೇನ್ ಸ್ಟ್ರೀಮ್ ಚಿತ್ರಗಳ ಹೋಲಿಕೆಗೆ ಅದೆಷ್ಟೇ ಭಿನ್ನವಾಗಿದ್ದರೂ ಅದನ್ನು ಕೇಳಿ ಒಪ್ಪಿಕೊಳ್ಳುವ ನಟ ಹಾಗು ನಿರ್ಮಾಪಕ ಅಷ್ಟೇ ಸೃಜನಶೀಲನಾಗಿರಬೇಕು. ಆಗ ಮಾತ್ರ ಆ ಚಿತ್ರ ಸೆಟ್ಟೇರಲ್ಪಡುತ್ತಿತ್ತು. ಆದ ಕಾರಣದಿಂದಲೇ ಏನೋ ಆಮಿರ್ ಅಂದು ಚಿತ್ರವನ್ನು ಒಪ್ಪಿಕೊಂಡಿದ್ದಲ್ಲದೆ ಆ ಚಿತ್ರದ ನಿರ್ಮಾಣಕ್ಕೂ ಸೈ ಎಂದದ್ದು.
ಚಿತ್ರದ ಅಡಿಪಾಯವೇನೋ ಭದ್ರವಾಯಿತು. ಆದರೆ ಚಿತ್ರೀಕರಣ ಸ್ಥಳ? ಎಲ್ಲೆಂದರಲ್ಲಿ ಚಿತ್ರಿಸಿ ಬಿಸಾಡಲು ಅದು ಶತಮಾನಗಳ ಹಳೆಯ ಬ್ರಿಟಿಷರ ಆಧಿಕಾರಶಾಹಿ ನೀತಿಯಿಂದ ಬಳಲಿದ ಕಾಲ. ಅರೆಬರೆ ಹೊದ್ದ ದೇಹಗಳು, ಬರಡಾದ ನೆಲ, ಚಚ್ಚಿ ಹೊಡೆಯುವ ಬಿಸಿಲು, ಪೊದೆ ಜಿಗ್ಗುಗಳು, ಕಲ್ಲಿನ ಗುಡ್ಡಗಳು, ಹುಲ್ಲಿನ ಗುಡಿಸಲುಗಳು ಹಾಗು ಒಂದು ಕ್ರಿಕೆಟ್ ಮೈದಾನ. ಚಿತ್ತದಲ್ಲಿ ಅರಳಿದ ಕನಸ್ಸನ್ನು ಕಣ್ಣ ಮುಂದೆ ಬಿಡಿಸಬೇಕಿತ್ತು. ಆದರೆ ಅದೆಲ್ಲಿ ಹುಡುಕುವುದು ಇಂತಹ ಒಂದು ಸ್ಥಳವನ್ನು? ಪ್ರಸ್ತುತ ದಿನಗಳಲ್ಲಾದರೆ ಅಷ್ಟೂ ಚಿತ್ರವನ್ನು ಕಂಪ್ಯೂಟರ್ನ ಪರದೆಯ ಒಳಗೇ ಶುರು ಮಾಡಿ ಅಲ್ಲಿಯೇ ಇತಿಶ್ರೀ ಹಾಡಿ ಬಿಡಬಹುದಿತ್ತು. ಆದರೆ ಆಶುತೋಷ್ ತಾನು ಮಾಡುತ್ತಿರುವ ಚಿತ್ರ ಯಾಂತ್ರಿಕವಾಗಿರದೆ ಇಂಚಿಚ್ಚು ನ್ಯಾಚುರಲ್ ಆಗಿ ಮೂಡಬೇಕೆಂಬ ಆಸೆಯನ್ನು ಕಟ್ಟಿಕೊಂಡವನು. ಆದ ಕಾರಣ ಒಂದು ಪಕ್ಷ ಅಂದು ‘ಗ್ರೀನ್ ಸ್ಕ್ರೀನ್’ ಟೆಕ್ನಾಲಜಿಯನ್ನು ಬಳಸಲು ಅವಕಾಶವಿದ್ದರೂ ಆಶುತೋಷ್ ಒಲ್ಲೆ ಎಂದಿರುತ್ತಿದ್ದ. ಆ ಮಟ್ಟಿನ ಸಹಜತೆ ತನ್ನ ಸೃಷ್ಟಿಯ ಚಿತ್ರದಲ್ಲಿ ಆತನಿಗೆ ಬೇಕಿದ್ದಿತ್ತು.
ತನ್ನ ಕಲ್ಪನಾ ಲೋಕದ ಆ ಸ್ಥಳವನ್ನು ಅರಸುತ್ತ ಹೊರಟ ಆಶುತೋಷ್ 1998 ರ ಕೊನೆಯಲ್ಲಿ ಬಂದಿಳಿದಿದ್ದು ಗುಜರಾತ್’ನ ಕುಚ್ ಜಿಲ್ಲೆಯಲ್ಲಿ. ಅಲ್ಲಿಂದ ಮುಂದೆ ಭುಜ್ ಎಂಬ ಹಳ್ಳಿಯ ಸಮೀಪ ಇಂಥದ್ದೇ ಒಂದು ಬರಡು ಜಾಗವಿದೆಯೆಂದು ತಿಳಿದು ಕೂಡಲೇ ಅಲ್ಲಿಗೆ ಧಾವಿಸಿತ್ತಾನೆ. ಅಲ್ಲಿನ ವಾತಾವರಣವೆಲ್ಲವೂ ತಾನು ಅಂದುಕೊಂಡಂತೆ ಇದ್ದಿತು. ಹಲವು ವಾರಗಳ ಅಲೆದಾಟಕ್ಕೆ ಕೊನೆಗೂ ಜಯ ಸಿಕ್ಕಿತ್ತು. ಚಿತ್ರದಲ್ಲಿನ ಚಂಪಾನೇರ್ ಹಳ್ಳಿಯೇ ಈ ಬರಡು ಜಾಗ.
ಬರಗಾಲದ ಛಾಯೆ ಇರುವ ನೆಲವೇನೋ ಧಕ್ಕಿತು ಆದರೆ ಮನೆ, ಬಾವಿ, ದೇವಾಲಯಗಳಿರುವ ಚಂಪಾನೇರ್’ನನ್ನು ಹೇಗೆ ಕಟ್ಟುವುದು? ಮರು ಯೋಚಿಸದೆ ಆಮಿರ್’ನ ಮುಂದೆ ತನ್ನ ಯೋಜನೆಯನ್ನು ಬಿಚ್ಚಿಟ್ಟ ಆಶುತೋಷ್ ತಾನು ಚಿತ್ರಕ್ಕಾಗಿ ಹಳ್ಳಿಯೊಂದನ್ನು ಕಟ್ಟಬೇಕೆಂದಿದ್ದೇನೆ ಎನ್ನುತ್ತಾನೆ! ಬೇರ್ಯಾವ ನಿರ್ಮಾಪಕನೇ ಆಗಿದ್ದರೂ ತುಸು ಉಗಿದು ಬೇರೆ ಯಾವುದಾದರೂ ಪರ್ಯಾಯ ಮಾರ್ಗವನ್ನು ಹುಡುಕಲು ಹೇಳುತ್ತಿದ್ದರೇನೋ. ಆದರೆ ಅಶುತೋಷ್’ನ ಧೈರ್ಯವನ್ನು ಮೆಚ್ಚಿದ ಆಮಿರ್ ಆಗಲಿ ಎನ್ನುತ್ತಾನೆ. ಚಿತ್ರವೆಂದರೆ ಹಣ, ಹಣಕ್ಕಾಗಿಯೇ ಚಿತ್ರ ಎನಿಸಿಕೊಂಡಿರುವ ಪ್ರಸ್ತುತ ಕಾಲದಲ್ಲಿ ಹೀಗೆ ಕಲಾಭಿರುಚಿಯ ನಟರು ನಿರ್ಮಾಪಕರಾದರೆ ಯಾವುದೇ ಕಾಂಪ್ರೊಮೈಸ್’ಗಳಿಲ್ಲದೆ ಉತ್ತಮ ಚಿತ್ರಗಳನ್ನು ತೆಗೆಯಲು ನಿರ್ದೇಶಕರಿಗೆ ಸಾಧ್ಯವಾಗಬಹುದು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. ಒಟ್ಟಿನಲ್ಲಿ 40 ರಿಂದ 50 ಡಿಗ್ರಿ ಯಷ್ಟು ಉರಿಯುವ ರಣಬಿಸಿಲಿನಲ್ಲಿ ತಿಂಗಳುಗಳ ಕಾಲ ಚಿತ್ರ ತೆಗೆಯಲು ಅಲ್ಲಿ ತಂಗಿದ್ದ ಚಿತ್ರತಂಡದವರನ್ನು ಕಂಡು ‘ಇವರಿಗೇನೋ ತಲೆ ನೆಟ್ಟಗಿಲ್ಲ’ ಎಂದು ಭುಜ್’ನ ಜನ ಮಾತಾಡಿಕೊಂಡಿರಬಹುದು. ಮೇ 1999 ರಲ್ಲಿ ಶುರುವಾದ ಚಿತ್ರೀಕರಣ ಪೂರ್ಣಗೊಳಿಸಲು ವರ್ಷಕ್ಕೂ ಮಿಗಿಲಾದ ಸಮಯ ಆ ಮರುಭೂಮಿಯಲ್ಲಿ ಬೇಕಾಗಿದೆ ಎಂದು ಮೊದಲೇ ತಿಳಿದಿದ್ದರೆ ಬಹುಶಃ ಅರ್ಧಕ್ಕಿಂತ ಹೆಚ್ಚಿನ ಸದಸ್ಯರು ಕಾಣೆಯಾಗುತ್ತಿದ್ದರೇನೋ!
ನೂರಾರು ಜನರ ತಂಡವೊಂದನ್ನು ವರ್ಷಗಳ ಕಾಲ ಸುಡುಬಿಸಿಲಿನಲ್ಲಿ ನಟಿಸಿ, ಚಿತ್ರಿಸಿ, ಕುಣಿಸಿ, ಮುನ್ನೆಡೆಸುವುದು ಸುಲಭವಾದ ಮಾತಾಗಿರಲಿಲ್ಲ. ಬಹುಷಃ ಅಲ್ಲಿಯವರೆಗೂ ಬಾಲಿವುಡ್ ನ ಬೇರ್ಯಾವ ನಿರ್ದೇಶಕನೂ ಅಂತಹದೊಂದು ಎದೆಗಾರಿಕೆಯ ನಿರ್ದೇಶನಕ್ಕೆ ಕೈ ಹಾಕುವ ಧೈರ್ಯವನ್ನು ತೋರಿರಲಿಲ್ಲ. ಅಂದಿನ ಕಾಲಕ್ಕೆ ಸುಮಾರು ಇಪ್ಪತ್ತರಿಂದ ಇಪ್ಪತೈದು ಕೋಟಿಯಷ್ಟು ಹಣವನ್ನು ಸುರಿದು, ನೋಡುಗರನ್ನು ದಿಕ್ಕುತಪ್ಪಿಸಿ ಹಣ ಪೀಕುವ ಬೇರ್ಯಾವ ಅಂಶಗಳು ಚಿತ್ರಗಳಲ್ಲಿಲ್ಲದೆ, ಕೇವಲ ಕಥೆಯನ್ನೇ ಬಂಡವಾಳವಾಗಿಸಿಕೊಂಡು ಅಷ್ಟೂ ದುಡ್ಡನ್ನು ಹಿಂಪಡೆಯುವ ಧೈರ್ಯ ಪುಳ್ಳಂಗೋವಿ ನಿರ್ದೇಶಕ ನಿರ್ಮಾಪಕರಿಗಂತೂ ಸಾಧ್ಯವೇ ಇರುತ್ತಿರಲಿಲ್ಲ. ಆದ ಕಾರಣಕ್ಕೆ ಆಶುತೋಷ್ ಇನ್ನೆಲ್ಲ ವಿಚಾರದಲ್ಲಿ ಇತರ ನಿರ್ದೇಶಕರಿಗೆ ಹೋಲಿಸಿದಾಗ ಭಿನ್ನವೆನಿಸುವುದು. ಆತನ ಕಥೆಯ ಕಾಲಘಟ್ಟ, ಅದಕ್ಕೆ ಬೇಕಾದ ತಯಾರಿ, ಚಿತ್ರೀಕರಣದ ಕೊನೆಯವರೆಗೂ ಬತ್ತದ ಸ್ಪೂರ್ತಿ, ಚಿತ್ರದಲ್ಲಿ ಮೂಡುವ ಸಮಾಜಮುಖಿ ಸಂದೇಶಗಳು ಇತ್ತೀಚಿನ ಚಿತ್ರಗಳಲಂತೂ ಸಿಗುವುದು ಬಲು ಅಪೂರ್ವ. ‘ಬಾಕ್ಸ್ ಆಫೀಸ್’ ಎಂಬ ಭ್ರಮೆಯಲ್ಲಿ ಈತನ ಚಿತ್ರಗಳು ಅದೆಷ್ಟೇ ಸೋತರೂ ನೋಡುಗನ ಮನಸ್ಸಿನ ಆಫೀಸಿನಲ್ಲಿ ಅಮರವಾಗಿ ಉಳಿಯುತ್ತವೆ. ‘ಲಗಾನ್’ ಚಿತ್ರದ ಚಿತ್ರೀಕರಣಕ್ಕೂ ಮುನ್ನ ಆಶುತೋಷ್’ನ ತಲೆಯ ತುಂಬ ಮುತ್ತಿದ್ದ ಗುಂಗುರು ಕೂದಲುಗಳು ಚಿತ್ರೀಕರಣದ ಕೊನೆಗೆ ಕಾಣೆಯಾಗಿ, ತಲೆ ಕಾದ ಬಾಣಲೆಯಾಗಿ, ವರ್ಷದ ಕೆಳಗೆ ನೋಡಿರುವವರು ಸಡನ್ನಾಗಿ ಈತನನ್ನು ಕಂಡರೆ ಯಾರೋ ಬೇರೊಬ್ಬ ವ್ಯಕ್ತಿಯೆಂದು ಅಂದುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಅಶುತೋಷ್ ತನ್ನನು ಚಿತ್ರಕ್ಕಾಗಿ ಸಮರ್ಪಿಸಿಕೊಂಡಿದ್ದ. ಮುನ್ನೂರು ಜನರ ತಂಡವನ್ನು ಸಂಭಾಳಿಸುವುದು ಸುಲಭದ ಮಾತಾಗಿರಲಿಲ್ಲ. ಚಿತ್ರೀಕರಣದ ಕೊನೆಯಲ್ಲಿ ‘ಸ್ಲಿಪ್ ಡಿಸ್ಕ್’ ತೊಂದರೆಯಿಂದ ಅತಿಯಾಗಿ ಬಳಲಿದ ಈತ ಯಾವುದೇ ಕಾರಣಕ್ಕೂ ಚಿತ್ರವನ್ನು ನಿಲ್ಲಿಸಬಾರದೆಂದು ಒಂದು ಹಾಸಿಗೆಯ ಮೇಲೆ ಮಲಗಿಕೊಂಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದುಂಟು!
ಸ್ವಾಭಾವಿಕವಾಗಿ ಚಿತ್ರ ಮೂಡಿಬರಬೇಕೆಂಬ ಆಸೆ ನಿರ್ದೇಶಕನದ್ದಾಗಿದ್ದರಿಂದ ದೊಡ್ಡ ಸಮಸ್ಯೆಯೊಂದು ಚಿತ್ರತಂಡಕ್ಕೆ ಉದ್ಭವಿಸಿತ್ತು. ಲಗಾನ್ ಚಿತ್ರವನ್ನು ನೋಡಿರುವವರು ಚಿತ್ರದ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಸುತ್ತಲೂ ಬೆಟ್ಟಗುಡ್ಡಗಳ ಮೇಲೆ ಕೂತು ಕೇಕೆ ಹಾಕುವ ಗುಂಪು ಗುಂಪು ಜನರನ್ನೂ ಗಮನಿಸಿರಬಹುದು. ಅಂಕಿ ಅಂಶಗಳ ಮುಖೇನ ಹೇಳುವುದಾದರೆ ಆ ಗುಂಪಿನ ಜನರ ಸಂಖ್ಯೆ ಹತ್ತು ಸಾವಿರಕ್ಕೂ ಹೆಚ್ಚು! ಕ್ರಿಕೆಟ್ ಪಂದ್ಯದ ಚಿತ್ರೀಕರಣದ ಮೊದಲು ಆಶುತೋಷ್ ಆಮಿರ್ ನ ಬಳಿಗೆ ಬಂದು ತನಗೆ ಇಷ್ಟು ಜನರ ಆವಶ್ಯಕತೆ ಇದೆ ಎಂದಾಗ ಈತ ಒಂದು ಕ್ಷಣ ತಬ್ಬಿಬ್ಬಾಗಿದಂತೂ ಸುಳ್ಳಲ್ಲ. ಆದರೆ, ದಿ ಪೆರ್ಫೆಕ್ಷನಿಸ್ಟ್ ನಟನಿಗೆ ತನ್ನ ನಿರ್ದೇಶಕನ ಅಳಲನ್ನು ಅರಿಯಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಆದರೆ ವಾರಗಳ ಕಾಲ ಆ ಬರಡು ಭೂಮಿಯ ಕಾದ ಸುಣ್ಣದಂತಹ ನೆಲದ ಮೇಲೆ ತಮ್ಮೆಲ್ಲ ಕೆಲಸವನ್ನು ಬಿಟ್ಟು ನಿರ್ದೇಶಕನ ‘ಕಟ್, ಕಟ್’ ಎಂಬ ಅರಚುವಿಕೆಯನ್ನು ಕೇಳಲು ಅದೆಷ್ಟು ಜನ ಮುಂದೆ ಬಂದಾರು? ಆದರೂ ಧೃತಿಗೆಡದ ಚಿತ್ರತಂಡ ಹಗಲು ರಾತ್ರಿಯೆನ್ನದೆ ಜನರ ಅನ್ವೇಷಣೆಯಲ್ಲಿ ತೊಡಗುತ್ತದೆ. ಬಹುಶಃ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಇಷ್ಟೊಂದು ಜನರ ಒಗ್ಗೂಡಿಸುವಿಕೆ ಅದೇ ಮೊದಲೇನೋ. ಅಲ್ಲದೆ ಅಷ್ಟೂ ಜನರ ವೇಷಭೂಷಣ, ಊಟ ಉಪಚಾರ, ಸಾರಿಗೆ ವ್ಯವಸ್ಥೆ ಹುಡುಗಾಟಿಕೆಯ ವಿಷಯವಾಗಿರಲಿಲ್ಲ. ಅಂತೂ ಚಿತ್ರತಂಡ ಆ ಕಾರ್ಯದಲ್ಲೂ ಯಶಸ್ಸನ್ನು ಕಂಡಿತು.
ಇನ್ನು ಚಿತ್ರದ ಕಥೆ ಸ್ವಾತಂತ್ರ್ಯ ಪೂರ್ವ ಭಾರತದ ಬ್ರಿಟಿಷ್ ಅಧಿಕಾರಿಶಾಯಿ ಪದ್ದತಿಗೆ ವಿರುದ್ಧವಾಗಿ ಧ್ವನಿಯೆತ್ತುತ್ತಿದ್ದ ಯೋಧರ ನೆನಪನ್ನು ತರಿಸದಿರದು. ಆದರೆ ಆಗೆಲ್ಲ ಸತ್ಯಾಗ್ರಹ, ಲೂಟಿ, ಚಳುವಳಿ ಎಂಬಿತ್ಯಾದಿ ಅಂಶಗಳೇ ಧ್ವನಿಯಾಗಿದ್ದವೆ ವಿನಃ ಈ ರೀತಿ ಕ್ರಿಕೆಟ್ ಪಂದ್ಯವೊಂದರ ಮೂಲಕವಂತೂ ವ್ಯಕ್ತವಾಗುತ್ತಿರಲಿಲ್ಲ. ಕಥೆ ಅದೆಷ್ಟೇ ಕಾಲ್ಪನಿಕವಾದರೂ ದರ್ಪದ ಬ್ರಿಟಿಷ್ ಅಧಿಕಾರಿಗಳನ್ನು ಎದುರಿಸುವುದು ರೀತಿ, ಕ್ರಿಕೆಟ್ ಎಂಬ ಪದವನ್ನೇ ತಮ್ಮ ಜೀವಮಾನದಲ್ಲಿ ಕಂಡು ಕೇಳರಿಯದ ಜನರಿಗೆ ಆಡುವುದನ್ನು ಕಲಿಸುವ ಬಗೆ, ಒಬ್ಬ ನಾಯಕನಿಗಿರಬೇಕಾದ ತಂಡವನ್ನು ಕಟ್ಟುವ ಕಲೆ, ತನ್ನ ವಿರುದ್ಧ ತಮ್ಮವರೇ ವಿರುದ್ದವಾದರೂ ಬೆಂಬಿಡದ ಆತನ ಗುರಿ ಛಲ, ಹೀಗೆ ಅಸಾದ್ಯವೆಂಬೊಂದು ಅಂಶವನ್ನು ಕತೆ ಸಾಧ್ಯತೆಯ ಗಡಿಯನ್ನು ದಾಟಿಸುತ್ತದೆ. ನಿಜವಾದ ಕ್ರಿಕೆಟ್ ಪಂದ್ಯವನ್ನು ನೋಡುವುದಕ್ಕಿಂತಲೂ ಅಂದು ಪ್ರೇಕ್ಷಕ ಲಗಾನ್ ಚಿತ್ರದ ಈ ರೋಚಕ ಪಂದ್ಯವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಲು ಇಚ್ಛಿಸುತ್ತಿದ್ದ.
ಲಗಾನ್ ಚಿತ್ರದ ಆರಂಭಿಕ ‘ರನ್ ಟೈಮ್’ ಸುಮಾರು ಏಳು ತಾಸು!! ಇಂದು ಅಷ್ಟು ಸಮಯದಲ್ಲಿ ನಮ್ಮ ನಿರ್ದೇಶಕರು ಕೊನೆ ಪಕ್ಷ ನಾಲ್ಕು ಚಿತ್ರಗಳನ್ನಾದರೂ ಮಾಡಿ ಬದಿಗಿಡಬಹುದು ಎಂಬುದು ಸೋಜಿಗದ ಸಂಗತಿ. ನಾಲ್ಕು ವರ್ಷದ, ಮುನ್ನೂರು ಜನರ ಅವಿರತ ಪರಿಶ್ರಮವನ್ನು ಮುಲಾಜಿಲ್ಲದೆ ತುಂಡುಮಾಡುವುದು (ಎಡಿಟಿಂಗ್) ನಿರ್ದೇಶಕನಿಗಂತೂ ಒಪ್ಪಲಾಗದ ಕೆಲಸ. ಅಂತೂ ಅಷ್ಟುದ್ದದ ಚಿತ್ರವನ್ನು ಕೊನೆಗೆ ಮೂರುವರೆ ತಾಸಿಗೆ ಇಳಿಸಲಾಯಿತು. ಈ ಮೂರುವರೆ ತಾಸಿನಲ್ಲಿ ಕ್ರಿಕೆಟ್ ಪಂದ್ಯವೇ ಸುಮಾರು ಒಂದೂವರೆ ತಾಸಿನಷ್ಟಿದೆ ಎಂಬುದು ಮಹತ್ವವಾದ ವಿಷಯ.
ಈ ಮದ್ಯೆ ಚಿತ್ರೀಕರಣ ಮುಗಿದು ಎಡಿಟಿಂಗ್ ಕಾರ್ಯ ನಡೆಯುತ್ತಿರುವಾಗಲೇ ಇತ್ತ ಕಡೆ ಗುಜರಾತ್’ನ ಕುಚ್ ಜಿಲ್ಲೆ ಅಕ್ಷರ ಸಹ ಸಾವಿನ ಸಂತೆಯಾಯಿತು. ದೇಶ ಹಿಂದೆದೂ ಕೇಳರಿಯದ ಭೂಕಂಪ ಅಂದು ಬಂದೆರೆಗಿತ್ತು. ಚಿತ್ರದ ಚಿತ್ರೀಕರಣ ಮುಗಿಯಲೆಂದೇ ಜವರಾಯ ಕಾದು ಕುಳಿತ್ತಿತ್ತೇನೋ ಎಂಬ ಊಹೆ ಚಿತ್ರತಂಡದ ಎಲ್ಲರ ಮನದಲ್ಲೂ ಅಂದು. ಶತಮಾನಗಳ ಹಿಂದಿನ ಜನಜೀವನ, ಬ್ರಿಟಿಷರ ದಬ್ಬಾಳಿಕೆ, ಮುದ್ದಾದ ಪ್ರೇಮಕಹಾನಿ ಎಲ್ಲಕಿಂತ ಮಿಗಿಲಾಗಿ ಛಲ, ಹುರುಪು ಹಾಗು ಒಗ್ಗಟ್ಟನ್ನು ನೋಡುಗನ ಮನದಲ್ಲಿ ಬಿತ್ತಿದ್ದ ಸ್ಥಳವೊಂದು ಅಂದು ಭೂಕಂಪನದ ರಭಸಕ್ಕೆ ಮೂಕ ಸಮಾಧಿಯಾಗಿ ಮಲಗಿತ್ತು.
2001 ರ ಜೂನ್’ನಲ್ಲಿ ತೆರೆಕಂಡ ಚಿತ್ರ ಭಾರತೀಯರ ರೋಮು ರೋಮುಗಳನ್ನು ನಿಮಿರಿ ನಿಲ್ಲಿಸಿತು. ಅದೊಂದು ಕಾಲ್ಪನಿಕ ಕತೆಯಾದರೂ ನೋಡುಗರಲ್ಲಿ ದೇಶಪ್ರೇಮದ ಜ್ವಾಲೆಯನ್ನು ಹುಟ್ಟಿಸಿತು. ತೆರೆಕಂಡ ಎಲ್ಲೆಡೆ ಭರ್ಜರಿ ಪ್ರದರ್ಶನವನ್ನು ಕಂಡಿತು. ಸ್ವತಃ ಚಿತ್ರತಂಡಕ್ಕೆ ಆ ಮಟ್ಟಿನ ಯಶಸ್ಸಿನ ನಿರೀಕ್ಷೆ ಇದ್ದಿರಕ್ಕಿಲ್ಲ. ಫಿಲಂಫೇರ್’ನ ಸುಮಾರು 8 ಪ್ರಶಸ್ತಿಗಳನ್ನು ಚಿತ್ರ ಗೆದ್ದದ್ದಲ್ಲದೆ, ಆಸ್ಕರ್’ಗಾಗಿ ಭಾರತದಿಂದ ಆಯ್ಕೆಯಾಗಿ, ಉತ್ತಮ ಪರಭಾಷಾ ಚಿತ್ರಗಳ ಸಾಲಿನಲ್ಲಿ ನಾಮನಿರ್ದೇಶನಗೊಂಡಿತು. ಈ ರೀತಿ ನಾಮನಿರ್ದೇಶನಗೊಳ್ಳುತ್ತಿದ್ದ ಭಾರತದ ಮೂರನೇ ಸಿನಿಮಾ ಅದಾಗಿದ್ದಿತು. ಅಂದು ಲಗಾನ್ ಚಿತ್ರಕ್ಕೆ ಆಸ್ಕರ್’ನ ಪ್ರಶಸ್ತಿ ಗ್ಯಾರೆಂಟಿ ಎಂದು ಕಾದುಕುಳಿತವರಿಗೆ ಕೊನೆಗೆ ನಿರಾಸೆ ಆದದಂತೂ ಸುಳ್ಳಲ್ಲ. ಪ್ರಶಸ್ತಿ ಪಡೆಯದಿದ್ದರೂ ವಿಶ್ವದ ಮೂಲೆ ಮೂಲೆಯಿಂದ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆಗಳು ಬರತೊಡಗಿದವು.
ಉತ್ತಮ ಕತೆಗಳ ರೆಕ್ಕೆ ಪುಕ್ಕ ಕತ್ತರಿಸಿ ಚಿತ್ರದ ಎತ್ತರವನ್ನೇ ಕುಗ್ಗಿಸುವ ಇಂದಿನ ಕಾಲದಲ್ಲಿ ಯಾವುದೇ ರಾಜಿಯಿಲ್ಲದೆ ಅಂದುಕೊಂಡಿದ್ದನ್ನು ಸಾಧಿಸಿ ತೂರಿಸಿದ ಚಿತ್ರತಂಡ ಮುಂಬಂದ ಅದೆಷ್ಟೋ ಚಿತ್ರಗಳಿಗೆ ಸ್ಫೂರ್ತಿಯಾಯಿತು.