ಅಂಕಣ

ನಿಸರ್ಗ ಪಸರಿಸಿದ ರಸಗಂಧ, ಉಸಿರಾಡಲಿದೆಯೆ ನಿರ್ಬಂಧ ?

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೬೯.

ಹೆಸರನರಿಯದ ಸಸಿಯೊಳಿರವೆ ರಸಗಂಧಗಳು ? |
ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ ? ||
ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು ? |
ಉಸಿರುತಿಹೆವದ ನಾವು – ಮಂಕುತಿಮ್ಮ || ೦೬೯||

ಹೆಸರನರಿಯದ ಸಸಿಯೊಳಿರವೆ ರಸಗಂಧಗಳು ? |

ನಾವು ನಮ್ಮ ಸುತ್ತಲ ಬದುಕಿನಲ್ಲಿ ಅದೆಷ್ಟೋ ತರದ ಪ್ರಾಣಿ-ಸಸ್ಯ ಜೀವರಾಶಿ ಸಂಕುಲಗಳನ್ನು ಕಾಣುತ್ತೇವೆ. ಅದರಲ್ಲಿ ಎಷ್ಟೊಂದರ ಪರಿಚಯವೆ ನಮಗಿರುವುದಿಲ್ಲ, ನಿತ್ಯ ನೋಡುತ್ತಿದ್ದರು ಸಹ. ನಮ್ಮ ದೈನಂದಿನ ಜಂಜಾಟದ ಆದ್ಯತೆಗಳ ಕಾರಣದಿಂದ ಅದರತ್ತ ಗಮನ ಕೂಡ ಹರಿಸಿರುವುದಿಲ್ಲ. ಅದರಲ್ಲಿ ಎಷ್ಟೊಂದರ ಹೆಸರು ಕೂಡಾ ಗೊತ್ತಿರುವುದಿಲ್ಲ ಎಲ್ಲರಿಗು. ಅದ್ಭುತ ಔಷಧೀಯ ಗುಣವಿಶೇಷಗಳಂತಹ ರಸಗಂಧ ಸೂಸುವ ಸಸ್ಯ ಸಂಕುಲವದೆಷ್ಟೋ ಇದ್ದರೂ ಎಲ್ಲರಿಗೂ ಅದರ ಮಾಹಿತಿ, ಅರಿವು ಇರುವುದಿಲ್ಲ. ಆದರೆ ಈ ಸೃಷ್ಟಿಯೆಂತಹ ಸ್ವಯಂಭು-ಸವ್ಯಸಾಚಿಯೆಂದರೆ, ಅದು ತನ್ನ ನಿರಂತರ ಪ್ರಕ್ರಿಯೆಯನ್ನು ಯಾರು ಪರಿಗಣಿಸಲಿ-ಬಿಡಲಿ, ನೋಡಲಿ-ನೋಡದಿರಲಿ ತನ್ನ ಪಾಡಿಗೆ ತಾನು ಮುಂದುವರೆಸಿಕೊಂಡು ಹೋಗುತ್ತದೆ. ಹೆಸರು ಕುಲ ಗೊತ್ತಿರದ ಯಾವುದೊ ಅನಾಮಧೇಯ ಸಸ್ಯವೊಂದನ್ನು ಗಣನೆಗೆ ತೆಗೆದುಕೊಂಡರು ಗೊತ್ತಿರುವ ಸಸ್ಯ ಸಂಕುಲದಲ್ಲಿರುವಂತಹ ಅದೇ ರೀತಿಯ ರಸಗಂಧಗಳು, ಗುಣವಿಶೇಷಗಳು ಅದರಲ್ಲಿಯೂ ಇರುವುದು ಸಹಜ ಸಾಮಾನ್ಯ ಸಂಗತಿ.

ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ ? ||

ಅಂತಹ ಸಸಿ ಸಹ ಇತರ ಸಸಿಗಳಂತೆ ಬಿಸಿಲಿನೊಡಲಿಂದ ಬಸಿದ ಸೂರ್ಯನ ಬೆಳಕನ್ನು ಬಳಸಿಕೊಂಡು ದ್ಯುತಿ ಸಂಶ್ಲೇಷನ ಕ್ರಿಯೆ ನಡೆಸಿ ಆಹಾರ ತಯಾರಿಸಿಕೊಳ್ಳುವ-ಹೂಬಿಡುವ-ಹಣ್ಣಾಗುವ ಮೂಲಕ ತಾನೂ ಬೆಳೆಯುತ್ತ , ಪಕ್ವತೆಯತ್ತ ಸಾಗುವ ಪ್ರಕ್ರಿಯೆ ನಡೆದೇ ಇರುತ್ತದೆ. ಸೃಷ್ಟಿಯ ಪರಿಕರಗಳು ಅದಾವ ಸಸ್ಯ, ಅದಾವ ಪ್ರಭೇಧ ಎಂದೆಲ್ಲ ಬೇಧವೆಣಿಸದೆ ಸಮಾನ ಭಾವದಲ್ಲಿ ತಮ್ಮ ಸಂಪನ್ಮೂಲಗಳನ್ನು ಹಂಚುತ್ತವೆ. ಎಲ್ಲ ಸಸ್ಯಗಳಲ್ಲು ಭೂಮಿಯಿಂದ ಹೀರಿಕೊಂಡ ಸಾರದ ಜತೆಗೆ ಸೂರ್ಯನ ಬಿಸಿಲನ್ನು ಬಳಸಿಕೊಂಡು ಆಹಾರ ತಯಾರಿಸುವುದು ಎಲೆಯ ಕಾರ್ಯ. ಆ ಬಿಸಿಲು ಯಾವ ಸಸಿಯೆಂದು ತಾರತಮ್ಯ ಮಾಡದೆ ತನ್ನನ್ನೆ ಸಮಾನವಾಗಿ ಹಂಚಿಕೊಳ್ಳುತ್ತದೆ. ಪ್ರತಿಸಸಿಯೂ ತಂತಮ್ಮ ಸಾಮರ್ಥ್ಯ, ಗುಣವಿಶೇಷಣದನುಸಾರ ತಂತಮ್ಮ ರಸಗಂಧಗಳನ್ನು ಸೂಸುವಂತೆ ಮಾಡಲು ಬಿಸಿಲು ಮೂಲಶಕ್ತಿಯಾಗಿ ತಾರತಮ್ಯವಿಲ್ಲದೆ ಕಾರ್ಯ ನಿರ್ವಹಿಸುತ್ತದೆ.

ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು ? |
ಉಸಿರುತಿಹೆವದ ನಾವು – ಮಂಕುತಿಮ್ಮ ||

ಪಕ್ವತೆಯ ಫಲಿತವಾಗಿ ಅರಳಿದ ಹೂವಿನ ಗಂಧವನ್ನು, ಹಣ್ಣಿನ ಬೀಜವನ್ನು ಯಾವ ಬೇಧವೆಣಿಸದೆ ಗಾಳಿಯೂ ಕೂಡ ದಿಕ್ಕುದಿಕ್ಕುಗಳೆಡೆ ಪಸರಿಸುತ್ತದೆ – ನಿರ್ಲಿಪ್ತವಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿರುವಂತೆ. ಹೀಗೆ ಗಾಳಿಯಲ್ಲಿ ಹರಡಿದ ಸುಗಂಧವೂ ಗಾಳಿಯಲ್ಲೆ ಬೆರೆತು ಹೋಗಿದೆ; ನಾವು ಉಸಿರಾಡುವಾಗ ನಮ್ಮರಿವಿಲ್ಲದೆ ಆ ಫಲಿತವನ್ನು ಸೇವಿಸುತ್ತಿದ್ದೇವೆ. ಸೃಷ್ಟಿ ಹೀಗೆ ಎಲ್ಲವನ್ನು ಯಾವುದಾವುದೊ ರೀತಿಯಲ್ಲಿ ತನ್ನ ಸರಳ, ಸಹಜ ಮತ್ತು ಅನಿವಾರ್ಯ ಕ್ರಿಯೆಗಳ ಮೂಲಕ ಬೆಸೆದಿಟ್ಟಿದೆ – ನೇರವಾಗಿಯೊ, ಪರೋಕ್ಷವಾಗಿಯೊ. ಅದರಿಂದಾಗಿ ಯಾವುದನ್ನೂ ನಮಗೆ ಸಂಬಂಧಿಸಿದ್ದಲ್ಲ, ನಮ್ಮ ಪರಸ್ಪರಾವಲಂಬನೆಯ ಪರಿಧಿಯಲ್ಲಿಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಲು ಆಗದು. ಸೃಷ್ಟಿ ಅದೆಷ್ಟು ಸಹಜವಾಗಿ ಎಲ್ಲವನ್ನು ನಿರ್ಮಿಸಿದೆಯೆಂದರೆ, ಪರಸ್ಪರ ಅವಲಂಬನೆಯ ಸೂಕ್ಷ್ಮವೂ ಮೇಲ್ನೋಟಕ್ಕೆ ಸುಲಭದಲ್ಲಿ ಗೋಚರವಾಗುವುದಿಲ್ಲ. ನಮ್ಮೊಡನೆ ನೇರ ಒಡನಾಟ, ಸಂಬಂಧವಿರದ ಎಲ್ಲಿಂದಲೊ ತೇಲಿಕೊಂಡು ಬಂದ ಯಾವುದೋ ಸಸಿಯ ಗಾಳಿಯನ್ನು ನಾವು ಉಸಿರಾಡುತ್ತಿರುತ್ತೇವೆ – ಅದರ ಕುರಿತು ಕಿಂಚಿತ್ತೂ ಗಮನಿಸದೆ ಅಥವಾ ಆಲೋಚಿಸದೆ. ಅಷ್ಟರ ಮಟ್ಟಿಗಿನ ಸರಳತೆ, ಸ್ವಾಭಾವಿಕತೆಯನ್ನು ಸಾಧಿಸಿದ ವ್ಯವಸ್ಥೆಯಲ್ಲಿ ನಾವು ಕಣ್ಮುಚ್ಚಿಕೊಂಡು ನಿರಳಾವಾಗಿ ಬದುಕುತ್ತಿದ್ದೇವೆ ಎನ್ನುವುದು ಇದರ ಭಾವವಾಗಿದೆ.

ನಮಗೆಲ್ಲ ತಿಳಿದ ಹಾಗೆ ನಾವು ಉಸಿರಾಡಲು ಬೇಕಿರುವುದು ಆಮ್ಲಜನಕ. ಆಗ ನಾವು ಹೊರಹಾಕುವುದು ಇಂಗಾಲದ ಡೈಯಾಕ್ಸೈಡ್. ಸಸಿಗಳಿಗೆ ಉಸಿರಾಟಕ್ಕೆ ಬೇಕಾದ ವಸ್ತು ನಾವು ಮಲಿನವಾಗಿಸಿ ಹೊರತಳ್ಳಿದ ಅದೇ ಇಂಗಾಲದ ಡೈಯಾಕ್ಸೈಡ್. ಅದರ ಬದಲಿಗೆ ಅದು ವಾಪಸ್ಸು ನೀಡುವುದು ನಮಗೆ ಉಸಿರಾಡಲು ಬೇಕಾದ ಜೀವಾನಿಲ ಅಮ್ಲಜನಕ. ಆದರೆ ಈ ವಿನಿಮಯ ಪ್ರಕ್ರಿಯೆಯಲ್ಲಿ ಯಾವುದೇ ಸಸಿ ಮತ್ತು ಮಾನವ ಜೀವಿಗಳ ನಡುವೆ ‘ತಮ್ಮಿಬ್ಬರ ನಡುವೆ ಮಾತ್ರವೇ’ ವಿನಿಮಯ ನಡೆಯಬೇಕೆಂಬ ವೈಯಕ್ತಿಕ ಮಟ್ಟದ ಒಪ್ಪಂದವಾಗಿರುವುದಿಲ್ಲ. ಅದೆಲ್ಲಾ ನಮ್ಮ ಮಾನವ ಜಗದ ಕೃತಕ ವ್ಯವಹಾರದಲಷ್ಟೇ ಸಕ್ರೀಯ. ನಿಸರ್ಗದ್ದೇನಿದ್ದರು ಸಮಷ್ಟಿ ಮಟ್ಟದ ಲೆಕ್ಕಾಚಾರ. ಎಲ್ಲಾ ಸಸ್ಯಗಳು ನೀಡಿದ ರಸಗಂಧಗಳು ಪ್ರಕೃತಿಯ ಬಯಲಿನ ಪಾತ್ರೆಯಲ್ಲಿ ಸಂಗ್ರಹಿತವಾಗುವುದು ಮಾತ್ರವಲ್ಲದೆ ಯಾವುದು ಯಾವ ಸಸಿಯಿಂದ ಬಂದಿದ್ದು ಎನ್ನುವುದೇ ಗೊತ್ತಾಗದ ಹಾಗೆ ಒಂದರೊಡನೊಂದು ಮಿಳಿತವಾಗಿಬಿಡುತ್ತವೆ. ಅದೂ ಸಾಲದು ಎನ್ನುವಂತೆ ಗಾಳಿಯ ಪ್ರಭಾವದಲ್ಲಿ ಎಲ್ಲೆಲ್ಲೊ ಪಸರಿಸಿಕೊಂಡು ಯಾವುದರ ಮೂಲ ಎಲ್ಲಿತ್ತೆನ್ನುವುದರ ಕುರುಹನ್ನೂ ಆಳಿಸಿಹಾಕಿಬಿಡುತ್ತದೆ. ಕೊನೆಗೆ ಅದನ್ನು ಬಳಸುವ ಜೀವಸಂಕುಲಕ್ಕು ಆಯ್ಕೆಯ ಪ್ರಶ್ನೆಯೆ ಉದಿಸುವುದಿಲ್ಲ – ತಮ್ಮ ಸುತ್ತಲ ಪರಿಸರದಲ್ಲಿ ಸಿಕ್ಕಿದ್ದನ್ನು ಸ್ವೀಕರಿಸುವ ಹೊರತಾಗಿ. ಹೆಸರು ಕುಲ ಗೊತ್ತಿರದ ಯಾವ ಸಸಿಯ ಜೀವಾನಿಲ ನಮ್ಮ ಉಸಿರಾಟದ ಮೂಲಕ ನಮ್ಮನ್ನು ಸೇರಿಕೊಳ್ಳುತ್ತಿದೆಯೊ ಹೇಳಬಲ್ಲವರಾದರೂ ಯಾರು ? ಈ ಸೃಷ್ಟಿಯಲ್ಲಿರುವ ಪ್ರತಿಯೊಂದರ ನಿಸ್ವಾರ್ಥ, ಅವಿನಾಭಾವ ಸಂಬಂಧದ ಸೊಗಡು ಇದರ ಮೂಲ ಇಂಗಿತವೆನ್ನಬಹುದು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯವಾದ ಅಂಶವೆಂದರೆ ಅಂತಿಮ ಸರಕಿನ (ಉದಾಹರಣೆಗೆ ರಸಗಂಧಗಳು) ಉತ್ಪಾದನೆಯಾಗುವತನಕವಷ್ಟೆ ಉತ್ಪಾದಕನಿಗೆ ಅದರ ಮೇಲಿನ ನಿಯಂತ್ರಣ ಸಾಧ್ಯ. ಉತ್ಪಾದಿಸಿ ಪ್ರಕೃತಿಗೆ ನೀಡಿದ ಮೇಲೆ ವ್ಯಾಪಾರ ನಡೆಸುವಂತಿಲ್ಲ – ಅದು ಪ್ರಕೃತಿಯಲ್ಲಿ ಮತ್ತಾರೊ ವಹಿಸಿಕೊಂಡ , ನಿಭಾಯಿಸುವ ಜವಾಬ್ದಾರಿ. ಅಂದರೆ ಪ್ರಕೃತಿಯಲ್ಲಿ ಪ್ರತಿಯೊಂದೂ ಫಲಾಪೇಕ್ಷೆಗಳ ಗೊಡವೆಯಿಲ್ಲದೆ ತಂತಮ್ಮ ಕರ್ತವ್ಯ ನಿರ್ವಹಿಸುವ ಕರ್ಮ ಸಿದ್ಧಾಂತಕ್ಕೆ ಬದ್ಧವಾಗಿವೆ. ಅದರ ಫಲಾನುಭವಿಗಳಲ್ಲಿ ಒಬ್ಬರಾದ ನಾವೂ ಸಹ ಅದರಲ್ಲಿ ಪಾಲುದಾರರು. ಆದರೆ ಬದುಕಿನ ಮಿಕ್ಕೆಲ್ಲಾ ಆಯಾಮಗಳಲ್ಲಿ ಇದಕ್ಕೆ ತದ್ವಿರುದ್ದವಾದ ‘ನಾನು, ನನ್ನದೂ’ ಎನ್ನುವ ಸ್ವಾರ್ಥದಿಂದ ಕೂಡಿದ ವ್ಯಾಪಾರೀ ಜಗದಲ್ಲಿ ತೊಳಲಾಡುವ ವಿಪರ್ಯಾಸ ನಮ್ಮದು ! ಉತ್ಪಾದನೆ, ವಿನಿಮಯ ಮತ್ತು ನಿರ್ವಹಣೆಯ ಅತ್ಯುತ್ತಮ ಮಾದರಿಯನ್ನು ನಿಸರ್ಗ ಸದಾಕಾಲವೂ ನಮ್ಮ ಮುಂದೆ ಇಟ್ಟಿದೆ. ಆದರೆ ಮಾಯಾಜಗದ ವಾತಾವರಣದಲ್ಲಿ ನೈಸರ್ಗಿಕತೆಯ ಬಲಿನೀಡಿ ಕೃತಕತೆಯ ಬೆನ್ನಟ್ಟಿ ನಡೆದಿದೆ ಮನುಕುಲ – ಕಣ್ಣಿಗೆ ರಾಚುವಂತಹ ನೈಸರ್ಗಿಕ ಉದಾಹರಣೆಗಳಿದ್ದರೂ ಸಹ. ಇದರ ಮತ್ತೊಂದು ಆತಂಕಕಾರಿ ಬೆಳವಣಿಗೆಯೆಂದರೆ ನಾವು ಮಾಡುತ್ತಿರುವ ಕ್ರಿಯೆಗಳು ಪರಿಸರದ ಆಸಮತೋಲನಕ್ಕೂ ಕಾರಣವಾಗಿ ನಮ್ಮ ಮೂಲಶಕ್ತಿಯ ಬುಡಕ್ಕೇ ಕೊಡಲಿ ಹಾಕುವ ಮಟ್ಟಕ್ಕಿಳಿಯುತ್ತಿರುವುದು. ಇಲ್ಲೆಲ್ಲ ನಿಸರ್ಗದ ನಿಸ್ವಾರ್ಥ ನಿಯಮವೇ ಅನ್ವಯವಾಗುವಂತಿದ್ದರೆ ಮಾನವ ಜಗದ ಬದುಕು ಸರಳ – ಸುಂದರವಾಗಿರುತ್ತಿತ್ತೆನ್ನುವುದು ಮಾತ್ರ ನಿರ್ವಿವಾದ.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!