ಅಂಕಣ

ನಮ್ಮ ದೇವರ ಈ ಪಟದ ಮೇಲೆ ಅನ್ಯಕೋಮಿನವರ ಲೆಕ್ಕವೂ ಅಡಗಿದೆ!

ದೇಶದಲ್ಲಿ ಮಹಿಳೆಯರ ಮೇಲೆ ಯಾವುದಾದರೊಂದು ದೌರ್ಜನ್ಯ ಪ್ರಕರಣ ಹೆಚ್ಚು ಸದ್ದು ಮಾಡಿದಾಗ ಈ ರೀತಿಯ ಒಂದಷ್ಟು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವೊಂದಷ್ಟು ಪತ್ರಿಕೆಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತವೆ.ಬಹುಷಃ ಅದನ್ನು ಆಗಾಗ ನಾವು ನೀವೆಲ್ಲರೂ ನೋಡಿಯೇ ಇರುತ್ತೇವೆ.ಆ ಚಿತ್ರಗಳಲ್ಲಿ ಲಕ್ಷ್ಮಿ,ಸರಸ್ವತಿ,ದುರ್ಗೆ ಸೇರಿದಂತೆ ನಮ್ಮ ಹಲವು ದೇವಾನುದೇವತೆಯರ ಮೈ ಮೇಲೆ ಅಲ್ಲಲ್ಲಿ ತರಚಿದ ಗಾಯಗಳಿರುತ್ತವೆ.ಬಟ್ಟೆಗಳು ಹರಿದಿರುತ್ತವೆ.ಆ ಚಿತ್ರಗಳ ಮೇಲೆ ‘ಹೆಣ್ಣನ್ನು ದೇವತೆಯೆಂದು ಪೂಜಿಸುವ ಭಾರತದಲ್ಲಿ ದಿನಕ್ಕೆ 92 ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ’ ಎನ್ನುವಂತಹಾ ವಿವರಣೆಗಳಿರುತ್ತವೆ.

ಅದನ್ನು ನೋಡಿದ ಕೂಡಲೇ ಒಂದು ಕ್ಷಣ ನಮಗೂ ‘ಹೌದಲ್ಲವೇ’ಎನ್ನಿಸುವುದು ಸುಳ್ಳಲ್ಲ.ಹಾಗಾಗಿಯೇ ನಾವು ಕೂಡಾ ಹುಚ್ಚು ಹಿಡಿದವರಂತೆ ಮತ್ತಷ್ಟು ಜನ ಸ್ನೇಹಿತರೊಂದಿಗೆ ಆ ಚಿತ್ರಗಳನ್ನು ಹಂಚಿಕೊಳ್ಳುತ್ತೇವೆ.ಆ ನಮ್ಮ ಸ್ನೇಹಿತರಿಗೂ ಒಂದು ಕ್ಷಣ  ‘ಹೌದಲ್ಲವೇ’ ಎನ್ನಿಸುತ್ತದೆ.ಅವರೂ ಮತ್ತಷ್ಟು ಜನ ಸ್ನೇಹಿತರೊಂದಿಗೆ ಆ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ನೋಡ ನೋಡುತ್ತಲೇ ಕೆಲವೇ ಗಂಟೆಗಳಲ್ಲಿ ಆ ಚಿತ್ರಗಳು ಮತ್ತೊಮ್ಮೆ ವೈರಲ್ ಆಗುತ್ತವೆ. ಕೆಲವು ಸಮಯದ ನಂತರ ದೇಶದಲ್ಲಿ ಯಾವುದಾದರೂ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣವೊಂದು ಹೆಚ್ಚು ಸದ್ದು ಮಾಡಿದರೆ ಮತ್ತೆ ಮೇಲೆ ಹೇಳಿದ ಘಟನೆ ಪುನರಾವರ್ತನೆಯಾಗುತ್ತದೆ.ತರಚಿದ ಗಾಯದ,ಹರಿದ ಬಟ್ಟೆಯ ನಮ್ಮ ದೇವಾನುದೇವತೆಗಳ ಚಿತ್ರ ಮತ್ತೊಮ್ಮೆ ವೈರಲ್ ಆಗುತ್ತದೆ.

ಹಾಗಾದರೆ ಭಾರತದಲ್ಲಿ ಹೆಣ್ಣನ್ನು ದೇವತೆಯೆಂದು ಪೂಜಿಸುವುದು ಸುಳ್ಳೇ,ಅದೇ ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತಿರುವುದು ಸುಳ್ಳೇ ಎಂದು ನೀವು ಕೇಳಬಹುದು. ಹೌದು.ನಮ್ಮ ದೇಶದಲ್ಲಿ ಹಿಂದೂಗಳು ಹೆಣ್ಣನ್ನು ದೇವತೆಯೆಂದು ಪೂಜಿಸುವುದು ನೂರಕ್ಕೆ ನೂರರಷ್ಟು ನಿಜ.ಹಾಗೆಯೇ ಇದೇ ದೇಶದಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದೂ ನಿಜ.ಆದರೆ ಅದಕ್ಕೆ ಹಿಂದೂಗಳು ಮಾತ್ರ ಕಾರಣವೇ?ಈ ದೇಶದಲ್ಲಿ ಹಿಂದೂಗಳು ಮಾತ್ರ ಇದ್ದಾರೆಯೇ?ಈ ದೇಶದಲ್ಲಿ ಪ್ರತೀ ದಿನ 92 ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ವ್ಯಕ್ತಿಗಳೆಲ್ಲಾ ಕೇವಲ ಹಿಂದೂಗಳೇ? ಹಾಗೆ ಪ್ರತೀ ದಿನ 92 ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ವ್ಯಕ್ತಿಗಳೆಲ್ಲಾ ಹಿಂದೂಗಳಾಗಿದ್ದು ದೇವರೆಂದು ಪೂಜಿಸುವ ಮನೋಭಾವ ಹೊಂದಿದವರೇ ಆಗಿದ್ದಾರೆಯೇ? ಹೌದೆಂದು ಯಾರಾದರೂ ಸಾಬೀತುಪಡಿಸಬಲ್ಲರೇ?

ಹೇಳಿ ಕೇಳಿ ಇದೊಂದು ಜಾತ್ಯತೀತ ದೇಶ.ಇಲ್ಲಿ ಎಲ್ಲಾ ಧರ್ಮದವರೂ ಬದುಕುತ್ತಿದ್ದಾರೆ. ಹಾಗೆಯೇ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವವರಲ್ಲಿಯೂ ಎಲ್ಲಾ ಧರ್ಮದವರೂ ಇದ್ದಾರೆ. ಹೆಣ್ಣನ್ನು ದೇವತೆಯೆಂದು ನಂಬದವರು, ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧರು, ಹಿಂದೂಗಳ ಆಚರಣೆಗಳನ್ನು ವಿರೋಧಿಸಿ ಇತರ ಧರ್ಮಕ್ಕೆ ಪಲಾಯನ ಮಾಡಿದ ನವ ಬೌದ್ಧರು,ನವ ಕ್ರಿಶ್ಚಿಯನ್ನರು ಮುಂತಾದವರು ಕೂಡಾ ಅತ್ಯಾಚಾರ ಮಾಡಿದ ಉದಾಹರಣೆಗಳು ಸಾಕಷ್ಟಿವೆ.ಆದರೆ ಅಂಕಿ ಅಂಶ ನೀಡುವಾಗ ಮಾತ್ರ ಈ ಕಲಾವಿದರಿಗೆ ಹಿಂದೂ ದೇವತೆಗಳು ಮಾತ್ರ ಕಾಣಿಸುತ್ತಾರೆ!

ಬೇರೆ ಧರ್ಮದ ದೇವರುಗಳ ಚಿತ್ರವನ್ನು ವಿರೂಪಗೊಳಿಸಿ ಅದರ ಮೇಲೆ ಇಂತಹಾ ಅಂಕಿ ಅಂಶಗಳನ್ನು ಪ್ರಕಟಿಸುವ ಧೈರ್ಯ ಬಹುಷಃ ಯಾವ ಕಲಾವಿದನೂ ಮಾಡಲಿಕ್ಕಿಲ್ಲ.ಏಕೆಂದರೆ ತಮ್ಮ ದೇವರನ್ನು ಅವಮಾನ ಮಾಡಿದ ಕಲಾವಿದರ ಕತ್ತು ಕತ್ತರಿಸಿದ,ಅವರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಗಳು ಹಾಗೆ ಬರೆಯಲು ಮನಸ್ಸು ಮಾಡುವ ಕಲಾವಿದರ ಕಣ್ಣ ಮುಂದೆ ಒಂದು ಕ್ಷಣ ಬಂದು ಹೋಗುತ್ತವೆ.ಹಾಗಾಗಿಯೇ ಆ ಕಲಾವಿದರು ಸುಲಭದ ದಾರಿಯಾದ ಹಿಂದೂ ದೇವತೆಗಳನ್ನು ಬಳಸಿಕೊಂಡು ತಮ್ಮ ಆ ಕ್ಷಣದ ವ್ಯಸನ ತೀರಿಸಿಕೊಳ್ಳುತ್ತಾರೆ.ಆ ಮೂಲಕ ಹಿಂದೂಗಳೇ ಇಂತಹಾ ದೌರ್ಜನ್ಯಕ್ಕೆಲ್ಲಾ ಕಾರಣ ಎಂದು ಪರೋಕ್ಷವಾಗಿ ಬಿಂಬಿಸುತ್ತಾರೆ.ನಾವು ಮೂರ್ಖರಂತೆ ಅದನ್ನು ಹಂಚಿಕೊಂಡು ವೈರಲ್ ಆಗಿಸುತ್ತೇವೆ.ಆ ಮೂಲಕ ಅಂತಹಾ ದೌರ್ಜನ್ಯಗಳೆಲ್ಲಾ ಹಿಂದೂಗಳಿಂದಲೇ ಆಗುತ್ತಿರುವುದು ಎಂದು ವಿವೇಚನೆಯಿಲ್ಲದೇ ಒಪ್ಪಿಕೊಳ್ಳುತ್ತೇವೆ.

ಇದು ಒಂದಾದರೆ ಹೀಗೆ ಹಿಂದೂಗಳ ಒಳ್ಳೆಯ ಆಚರಣೆಗಳನ್ನೇ ಬಳಸಿಕೊಂಡು ಅದನ್ನೇ ಅವಹೇಳನ ಮಾಡಿ ಅದನ್ನು ಹಿಂದೂಗಳ ಕೈಯಿಂದಲೇ ಪ್ರಚಾರ ಮಾಡಿಸುವುದು ಆ ಕಲಾವಿದರ ಇನ್ನೊಂದು ಉದ್ದೇಶ.

ಹಾಗಾದರೆ ಹೆಣ್ಣನ್ನು ದೇವತೆಯೆಂದು ಪೂಜಿಸುತ್ತಿದ್ದ ಹಿಂದೂ ಬದಲಾಗಿದ್ದು ಹೇಗೆ?

ಹೆಣ್ಣನ್ನು ದೇವತೆಯೆಂದು ಪೂಜಿಸುತ್ತಿದ್ದ ಹಿಂದೂ ಈಗಲೂ ಬದಲಾಗಿಲ್ಲ.ಅಂತಹಾ ಹಿಂದೂಗಳು ಈಗಲೂ ಹೆಣ್ಣನ್ನು ಗೌರವದಿಂದಲೇ ಕಾಣುತ್ತಿದ್ದಾರೆ.ಬದಲಾಗಿದ್ದು ಹಿಂದೂಗಳ ಆಚರಣೆಗಳೆಲ್ಲವೂ ಮೌಢ್ಯ ಎಂದು ಬಿಂಬಿಸಿ ಅಂತಹಾ ಸರಕುಗಳನ್ನೇ ಪಠ್ಯಪುಸ್ತಕಗಳಲ್ಲೂ ತುಂಬಿಸಿದ ವಿಚಾರವಾದಿಗಳ ಮಾತಿಗೆ ಮರುಳಾಗಿ ಹಿಂದೂ ಪರಂಪರೆಯನ್ನು ಮರೆತಿರುವ ಕೆಲವು ಅಪ್ರಬುದ್ಧರು ಮಾತ್ರ.ಅಂಥವರೇ ಹೆಣ್ಣಿಗೆ ಗೌರವವ ನೀಡದಂತೆ ನಡೆದುಕೊಳ್ಳುತ್ತಿರುವುದು.

ಒಮ್ಮೆ ನೀವೇ ಯೋಚಿಸಿ.ಕೆಲವೇ ದಶಕಗಳ ಹಿಂದೆ ಪರನಾರೀ ಸಹೋದರಿ ಎನ್ನುವ ಭಾವನೆ ಬಹುತೇಕ ಹಿಂದೂಗಳಲ್ಲಿತ್ತು.ಆಗ ಹೆಣ್ಣಿನ ಮೇಲಿನ ದೌರ್ಜನ್ಯ ಪ್ರಕರಣಗಳು ತುಂಬಾ ಕಡಿಮೆ ಇದ್ದವು. ಹಿಂದೂಗಳಲ್ಲಿ ಗುರು ಪತ್ನಿ ಮಾತೃ ಸಮಾನ ಎಂದು ಹೇಳಿ ಕೊಡಲಾಗುತ್ತಿತ್ತು.ಈಗ ಸಂವಿಧಾನದಲ್ಲಿ ಕೊಡ ಮಾಡಲಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಿನಿಮಾಗಳಲ್ಲಿ ನಮ್ ‘ಮೇಷ್ಟ್ರ ಹೆಂಡತಿ ಸಖತ್ ಫಿಗರ್ ಅಲ್ವಾ..?’ಎನ್ನುವಂತಹಾ ಕೀಳು ಅಭಿರುಚಿಯ ಸಂಭಾಷಣೆಗಳನ್ನು ಬಳಸಿ ಹಿಂದೂಗಳ ಪವಿತ್ರ ಭಾವನೆಗಳನ್ನು ಹಾಳು ಮಾಡಿ ಅವರ ಮನಸ್ಸನ್ನು ಬದಲಾಯಿಸಲಾಗುತ್ತಿದೆ. ಹಿಂದೂಗಳಲ್ಲಿ ಕೆಲವೇ ದಶಕಗಳ ಹಿಂದೆ ಒಂದೇ ಗೋತ್ರದ ಯುವಕ ಯುವತಿಯರು ಅಣ್ಣ ತಂಗಿಯರು ಎನ್ನುವ ಭಾವನೆಯನ್ನು ಮೂಡಿಸಲಾಗುತ್ತಿತ್ತು.ಆದರೆ ಯಾವಾಗ ಈ ದೇಶದಲ್ಲಿ ವಿಚಾರವಾದಿಗಳ ಪ್ರಾಬಲ್ಯ ಶುರುವಾಯಿತೋ ಆಗ ಯಾವ ಹೆಣ್ಣನ್ನು ಬೇಕಾದರೂ ನೀನು ಕಾಮ ದೃಷ್ಟಿಯಲ್ಲಿ ನೋಡಬಹುದು ಎಂದು ಅವರು ಹಿಂದೂ ಯುವಕರ ತಲೆಗೆ ತುಂಬಿದರು.ಇದರಿಂದಾಗಿ ಅವರು ಮಹಿಳೆಯರನ್ನು ನೋಡುವ ದೃಷ್ಟಿಯೇ ಬದಲಾಗಿ ಹೋಯಿತು.ಕೆಲವೇ ದಶಕಗಳ ಹಿಂದೆ ನಿನಗಿಂತಾ ಒಂದು ದಿನ ಮೊದಲು ಹುಟ್ಟಿದಾಕೆಯೂ ನಿನ್ನ ಅಕ್ಕನ ಸಮಾನ ಎಂದು ಹೇಳಿಕೊಡಲಾಗುತ್ತಿತ್ತು.ಆದರೆ ಯಾವಾಗ ಈ ದೇಶದಲ್ಲಿ ವಿಚಾರವಾದ ಮತ್ತು ಕಾನೂನಿನ ಹೆಸರಿನಲ್ಲಿ ವಿಕೃತಿ ಮೇಲುಗೈ ಸಾಧಿಸತೊಡಗಿತೋ ಆಗ ನೀನು ಯಾವುದೇ ಹೆಣ್ಣಿನೊಂದಿಗೂ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಹಿಂದೂ ಯುವಕರ ತಲೆಗೆ ತುಂಬಲಾಯಿತು.ಹೀಗೆ ಸಂಸ್ಕೃತಿಯನ್ನು ಕಳೆದುಕೊಂಡ ಕೆಲವರು ಸಮಾನ ಮನಸ್ಕ ಮಹಿಳೆಯರೊಂದಿಗೆ ತಮ್ಮ ಆವಶ್ಯಕತೆ ತೀರಿಸಿಕೊಂಡರೆ ಅಂತಹಾ ಅವಕಾಶ ಸಿಗದ ಸಂಸ್ಕೃತಿ ಕಳೆದುಕೊಂಡ ಕೆಲವರು ಅತ್ಯಾಚಾರಿಗಳಾಗಿ ಬದಲಾಗಿರಬಹುದು.

ಅಷ್ಟೇ ಏಕೆ,ಸರ್ಕಾರವೇ ಊರೂರುಗಳಲ್ಲಿ ಕಂಡ ಕಂಡಲ್ಲಿ ಉಚಿತ ಕಾಂಡೋಮ್ ಬಾಕ್ಸ್ ಗಳನ್ನು ಇರಿಸಿ ನೀನು ಯಾರನ್ನು ಬೇಕಾದರೂ ಕಾಮಿಸು,ಆದರೆ ಖಾಯಿಲೆ ಬರಿಸಿಕೊಳ್ಳಬೇಡ ಎನ್ನುವ ಘೋಷಣೆ ಹೊರಡಿಸಿತು! ಸರ್ಕಾರವೇ ಇಷ್ಟು ಪ್ರೋತ್ಸಾಹ ಕೊಟ್ಟಾಗ ಕಾಮುಕರು ಸುಮ್ಮನಿರುತ್ತಾರೆಯೇ?ಯಾರೂ ಸಿಗದಿದ್ದಾಗ ಒಂಟಿ ಮಹಿಳೆಯರನ್ನು ಅತ್ಯಾಚಾರವೆಸಗತೊಡಗಿದರು.

ಇದರಿಂದಾಗಿ ತಿಳಿಯುವುದೇನೆಂದರೆ ಈ ದೇಶದಲ್ಲಿ ಹೆಣ್ಣನ್ನು ದೇವತೆಯೆಂದು ಪೂಜಿಸುವ ಹಿಂದೂಗಳು ಈಗಲೂ ಹೆಣ್ಣನ್ನು ದೇವತೆಯೆಂದೇ ಪೂಜಿಸುತ್ತಿದ್ದಾರೆ. ಭಾರತದಲ್ಲಿ ನಿಜವಾಗಿಯೂ ದಿನಕ್ಕೆ 92 ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದ್ದರೆ ಆ 92 ರಲ್ಲಿ ಒಬ್ಬನೇ ಒಬ್ಬನೂ ನಿಜವಾದ ಹಿಂದೂವಿಲ್ಲ.ಆ 92 ರಲ್ಲಿ ಇರುವುದು ವಿಚಾರವಾದ ಮತ್ತು ಭಾರತೀಯ ಕಾನೂನುಗಳ ಪ್ರಭಾವದಿಂದ ಸಂಪೂರ್ಣವಾಗಿ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡಿರುವ ಹಿಂದೂಗಳಲ್ಲದ ಹಿಂದೂಗಳು ಮತ್ತು ಉಳಿದವರು ಅನ್ಯ ಧರ್ಮದವರು.ಪಾಪ ಪುಣ್ಯಗಳೆಲ್ಲಾ ಸುಳ್ಳು,ದೇವರು ಪುನರ್ಜನ್ಮ ಎಲ್ಲಾ ಸುಳ್ಳು ಎನ್ನುತ್ತಾ ಹಿಂದೂಗಳಲ್ಲಿದ್ದ ನೈತಿಕತೆಯನ್ನು ಹಾಳು ಮಾಡಿ ಕಾನೂನೇ ಎಲ್ಲಾ ಎಂದು ಬಿಂಬಿಸಿದಾಗಲೇ ಸಾಕ್ಷಿ ನಾಶ ಮಾಡುವ ಸಲುವಾಗಿ ಕೊಲೆ ಮಾಡುವವರ ಸಂಖ್ಯೆ ಈ ದೇಶದಲ್ಲಿ ಹೆಚ್ಚಾಗಿದ್ದು ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು.ಏಕೆಂದರೆ ನಮ್ಮ ಜಾತ್ಯತೀತ ದೇಶದ ಕಾನೂನಿಗೆ ಸಾಕ್ಷಿಯೇ ಮುಖ್ಯವಲ್ಲವೇ?

ಹಾಗಾಗಿ ಇನ್ನೊಮ್ಮೆ ಯಾವಾಗಲಾದರೂ ನಿಮ್ಮ ಮುಂದೆ ಇಂತಹಾ ಚಿತ್ರಗಳು ಕಾಣಿಸಿಕೊಂಡರೆ ಅದನ್ನು ಇನ್ನೊಬ್ಬ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೊದಲು ಮೇಲೆ ಹೇಳಿದ ಎಲ್ಲಾ ವಿಚಾರಗಳನ್ನೂ ಒಮ್ಮೆ ಯೋಚಿಸಿ.ಜೊತೆಗೆ ಹೆಣ್ಣನ್ನು ದೇವತೆಯೆಂದು ಪೂಜಿಸುವ ಭಾರತದಲ್ಲಿ ದಿನಕ್ಕೆ ಇಂತಿಷ್ಟು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ ಎನ್ನುವ ವಿವರವಿರುವ ಚಿತ್ರಗಳನ್ನು ನಿಮಗೆ ಕಳಿಸಿದ ವ್ಯಕ್ತಿಗಳಿಗೆ ಅದರಲ್ಲಿ ಯಾವ ಯಾವ ಧರ್ಮದವರು ಎಷ್ಟೆಷ್ಟಿದ್ದಾರೆ ಎನ್ನುವುದನ್ನೂ ಮರೆಯದೇ ಕೇಳಿ.

-ಪ್ರವೀಣ್ ಕುಮಾರ್ ಮಾವಿನಕಾಡು

Facebook ಕಾಮೆಂಟ್ಸ್

ಲೇಖಕರ ಕುರಿತು

Praven Kumar Mavinakadu

ಮೂಲತಃ ಪರಿಸರಪ್ರೇಮಿ.ಹವ್ಯಾಸೀ ಬರಹಗಾರ.
ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಪರಿಸರ ಸ್ನೇಹಿ ಸೋಲಾರ್ ಅಡುಗೆ ಉಪಕರಣಗಳ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ಮುಂದೆ ಅವುಗಳನ್ನು ದೇಶದ ಮನೆಮನೆಗೂ ಮುಟ್ಟಿಸಬೇಕೆನ್ನುವ ಕನಸಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!