ಮಂಕುತಿಮ್ಮನ ಕಗ್ಗ ೦೬೭.
ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ |
ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ||
ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ ? |
ಕ್ಲಿಷ್ಟದ ಸಮಸ್ಯೆಯದು – ಮಂಕುತಿಮ್ಮ || ೦೬೭ ||
ಸಣ್ಣದೊಂದು ಮನೆ ಕಟ್ಟುವುದಿದ್ದರು ಅದರ ವಿನ್ಯಾಸ, ಅಳತೆ, ಆಕಾರ, ಆಯಾಮಗಳನ್ನು ಪರಿಗಣಿಸಿ ಯೋಜನೆ ಹಾಕುವ ಕಾಲಮಾನ ನಮ್ಮದು. ಅಂತದ್ದರಲ್ಲಿ ಆ ಸೃಷ್ಟಿಕರ್ತ ಇಡೀ ಸೃಷ್ಟಿಯನ್ನು ಸೃಜಿಸಹೊರಟಾಗ ಎಂಥಾ ಅಗಾಧ ಯೋಜನೆ ಹಾಕಿರಬೇಕು ? ಎಷ್ಟೆಲ್ಲಾ ಯೋಚನೆ ಮಾಡಿ, ವಿನ್ಯಾಸಗಳನ್ನು ಪರಿಗಣಿಸಿ – ಪರಿಷ್ಕರಿಸಿ ಅಂತಿಮ ರೂಪುರೇಷೆಯನ್ನು ನಿರ್ಧರಿಸಿರಬೇಕು ? ಆ ಅದ್ಭುತ ಅಭಿಯಂತರ (ಇಂಜಿನಿಯರಿಂಗ್) ಕಾರ್ಯವನ್ನು ಮಾಡ ಹೊರಟಾಗ ಅದರ ಸಿದ್ದತೆಯನ್ನು ಸಂಕಲ್ಪ ರೂಪದಲ್ಲಿ ಮಾತ್ರವಲ್ಲದೆ ವಿವರವಾದ ಬರಹ (ಲಿಪಿ) ರೂಪದಲ್ಲೂ ತಯಾರಿಸಿಕೊಂಡೆ ಮುಂದುವರೆದಿರಬೇಕೆನ್ನುವುದು ಸಹಜವಾಗಿ ತರ್ಕಿಸಬಹುದಾದ ವಿಷಯ. ಆ ಹಿನ್ನಲೆಯೊಡನೆ ಅನಾವರಣಗೊಂಡ ಕಗ್ಗವಿದು.
ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ |
ಅದೆಷ್ಟೆಲ್ಲ ವೈವಿಧ್ಯತೆ, ನಿಗೂಢತೆ, ಸಂಕೀರ್ಣತೆಗಳೆಲ್ಲದರ ಮೊತ್ತವಾಗಿರುವ ಸೃಷ್ಟಿಯನ್ನು ರಚಿಸಿದ ಆ ಸೃಷ್ಟಿಕರ್ತ (= ಸ್ರಷ್ಟು), ಆ ಕಾರ್ಯಕ್ಕಿಳಿಯಲು ಸಂಕಲ್ಪಿಸಿದಾಗ ಆ ಸಂಕಲ್ಪದ ಸಿದ್ದಾಂತ, ರೂಪುರೇಷೆಗಳನ್ನೆಲ್ಲ ಮೊದಲೆ ನಿರ್ಧರಿಸಿಕೊಂಡು ಯೋಜನಬದ್ದವಾಗಿ, ವ್ಯವಸ್ಥಾಬದ್ಧವಾಗಿಯೆ ತನ್ನ ಕೆಲಸವನ್ನು ಆರಂಭಿಸಿರಬೇಕು. ಆದರೆ ಅದೇನೇ ಸಿದ್ದತೆ, ಯೋಜನೆಗಳನ್ನು ಅನುಕರಿಸಿದ್ದರು ಅದನ್ನೆಲ್ಲ ದಾಖಲಿಸಿಟ್ಟಿರಬಹುದಾದ ಲಿಪಿಗಳಾಗಲಿ (ಬರಹ), ಸ್ಮೃತಿ ತುಣುಕುಗಳಾಗಲಿ ನಮ್ಮೆದುರಿಗಿಲ್ಲ. ಇಂದ್ರೀಯ ಗ್ರಾಹ್ಯ ಸಾಕ್ಷ್ಯಾಧಾರವಿಲ್ಲದೆ, ಕಾರ್ಯಕಾರಣ ಸಂಬಂಧವನ್ನು ಅಮೂಲಾಗ್ರವಾಗಿ ನಿರೂಪಿಸಬಲ್ಲ ವಿವರಣೆಯಿಲ್ಲದೆ ಸ್ರುಷ್ಟುವಿನ ಈ ಸಂಕೀರ್ಣ ರಚನೆಯನ್ನು ಅರ್ಥ ಮಾಡಿಕೊಳ್ಳುವುದಾದರೂ ಎಂತು ? ಪ್ರತಿಯೊಂದನ್ನು ನಿರಾಕರಿಸಲಾಗದ, ತಿರಸ್ಕರಿಸಲಾಗದ, ಸಂದಿಗ್ದಕ್ಕೆಡೆಮಾಡಿಕೊಡದ ಸಾಕ್ಷಿಯಿದ್ದರೆ ಮಾತ್ರ ನಂಬುವ ನಮ್ಮ ಜಗದಲ್ಲಿ ಇದೊಂದು ದೊಡ್ಡ ಕೊರೆಯಂತೆ ಕಾಣಿಸುವುದರಲ್ಲಿ ಅಚ್ಚರಿಯೇನು ಇಲ್ಲ. ಅದೆಂತೆ ಇದ್ದರು ನಮಗೆ ಕಾಣಿಸದ್ದು, ನಾವಾರಿಯಲಾಗದ್ದು ಸಾಕಷ್ಟಿದೆ ಎನ್ನುವುದು ನಿರ್ವಿವಾದ.
ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ||
ಹಾಗೆಂದು ಕಾಣುವಂತದ್ದು, ಗೋಚರಿಸುವಂತದ್ದು ಏನೂ ಇಲ್ಲವೇ ಇಲ್ಲಾ – ಬರಿ ಶೂನ್ಯ ಸಂಪಾದನೆ ಎಂದು ಹೇಳುವಂತಿಲ್ಲ. ಏಕೆಂದರೆ ಜೋಡಿಸಲಾಗದ ಒಗಟಿನ ತುಣುಕುಗಳಂತೆ ಅಲ್ಲಷ್ಟು, ಇಲ್ಲಷ್ಟು ಏನಾದರೊಂದು ಸಾಕ್ಷ್ಯವೋ, ಬರಹವೋ ಕಣ್ಣಿಗೆ ಬೀಳುತ್ತಿರುತ್ತದೆ. ನಂಬಿಕೆ ಅಪನಂಬಿಕೆಯ ನಡುವಿನ ತೆಳುಹಾಳೆಯ ಪರದೆಯಲ್ಲಿ ಒಂದಷ್ಟು ಗ್ರಾಹ್ಯ ಸರಕು ಸಿಕ್ಕುವುದಂತೂ ನಿಜ. ನಮ್ಮ ಗೋಚರದೃಷ್ಟಿಗೆ ಆ ದಾಖಲಾತಿ, ಸ್ಮೃತಿಲಿಪಿಗಳ ಅಷ್ಟಿಷ್ಟು ಕುರುಹುಗಳು, ತುಣುಕುಗಳು ಕಾಣಿಸಿಕೊಂಡರು ಕೂಡ ಅವು ಇಡೀ ಲಿಪಿಯ ಕೇವಲ ಒಂದು ಅಸ್ಪಷ್ಟ, ಅಪರಿಪೂರ್ಣ ತೆಳುಗೆರೆ ಮಾತ್ರವಷ್ಟೆ ಹೊರತು ಸಂಪೂರ್ಣ ಚಿತ್ರಣವಲ್ಲ. ಇಲ್ಲಿ ಗೆರೆ ಎಂದಾಗ ಹೊರಗಿನ ಆವರಣದ ಪ್ರತೀಕವಾಗುತ್ತದೆ. ಅಂದರೆ ಬರಿಯ ಮೇಲ್ಪದರ ಮಾತ್ರ ಕಾಣಿಸುತ್ತದೆಯೇ ಹೊರತು ಒಳಗಿನ ಆಳದ, ಆಂತರ್ಯದ ಗುಟ್ಟು ಅನಾವರಣವಾಗುವುದಿಲ್ಲ. ಹೀಗಾಗಿ ಬರಿ ಗೆರೆಯ ಆಧಾರದ ಮೇಲೆ ಪೂರ್ಣ ಚಿತ್ರವನ್ನರಿಯುವುದಾಗಲಿ, ಸಂದಿಗ್ದಕ್ಕೆಡೆಯಿಲ್ಲದಂತೆ ವಿವರಿಸುವುದಕ್ಕಾಗಲಿ ಸಾಧ್ಯವಿಲ್ಲ. ಜೊತೆಗೆ ಮೇಲಿನ ಪದರದಲ್ಲಿ ಕಾಣುವ ಒಳ್ಳೆಯ ಮತ್ತು ಕೆಟ್ಟದರ ಮಿಶ್ರಣವನ್ನು ಆಳದಲ್ಲಿ ತಾಳೆ ನೋಡಿ ‘ಇಂತದ್ದೇ’ ಎಂದು ಖಚಿತಪಡಿಸಿಕೊಳ್ಳುವ ಸಾಧ್ಯತೆಯಿಂದಲೂ ವಂಚಿತರಾಗುತ್ತೇವೆ. ಒಂದು ರೀತಿ ಇದು ನಮಗಿರುವ ಸೀಮಿತತೆಯನ್ನು ತೋರಿಸುವುದರ ಜತೆಗೆ ಯಾವುದೇ ಖಚಿತ ತೀರ್ಮಾನಕ್ಕೆ ಬರಲಾಗದ ಅಸಹಾಯಕತೆಯನ್ನು ಪ್ರತಿಬಿಂಬಿಸುತ್ತದೆ.
ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ ? |
ಕ್ಲಿಷ್ಟದ ಸಮಸ್ಯೆಯದು – ಮಂಕುತಿಮ್ಮ ||
ಗೆರೆಯನ್ನು ಬಿಟ್ಟು ಒಳಗಿನದೇನು ಕಾಣದೆಂಬ ಕಾರಣಕ್ಕೆ, ಆ ಶಿಷ್ಟ ಸಿದ್ದಾಂತ, ತತ್ವರೂಪುರೇಷೆಗಳನ್ನೊಳಗೊಂಡ ಅದ್ಭುತ ಲಿಪಿ ಕೈಗೆ ಸಿಗದ ಹಾಗೆ ನಷ್ಟವಾಗಿ, ಕಳುವಾಗಿ ಹೋಗಿದೆ ಎಂದು ಹೇಳಲಾದೀತೆ? ಮೇಲಿನ ಪದರದ ಗುಟ್ಟನ್ನು ಮೀರಿಸುವ ಅಂತರಾಳದ ನಿಗೂಢ ಸತ್ವ ಕೈಗೆ ಎಟುಕದೆಂಬ ಕಾರಣಕ್ಕೆ ಅದನ್ನು ‘ಕೈಗುಟಕದ ದ್ರಾಕ್ಷಿ ಹುಳಿ’ಯ ಗುಂಪಿಗೆ ತಳ್ಳಿಬಿಡಲಾಗದು; ಅಥವಾ ಅಲ್ಲಿರುವ ಶಿಷ್ಠವಾದ (ಅಮೂಲ್ಯವಾದ, ಒಳ್ಳೆಯ) ಸರಕೆಲ್ಲ ನಮ್ಮರಿವಿನ ಪರಿಧಿಯಿಂದ ಸೋರಿಹೋಗಿ ನಷ್ಟವಾಯ್ತೆಂದು ಹಲುಬುವಂತೆಯೂ ಇಲ್ಲ. ಅರ್ಥಾತ್ ಈ ಕಾಣದಿರುವ ಲಿಪಿಯ ವಿಷಯ ಅಷ್ಟು ಸುಲಭದಲ್ಲಿ ತೀರ್ಮಾನಿಸಬಹುದಾದ ಸರಳ ಸಮಸ್ಯೆಯಲ್ಲ. ಸಮಸ್ಯೆಯ ಕ್ಲಿಷ್ಟತೆಯನ್ನರಿಯಲೇ ಆಗದಷ್ಟು ಸಂಕೀರ್ಣವಾಗಿರುವ ವಿಷಯವಿದು. ನಮಗದು ಸಿಗಲಿ ಬಿಡಲಿ ಅದರ ಅಸ್ತಿತ್ವವಂತೂ ನಿರ್ವಿವಾದವಾದದ್ದು. ನಮ್ಮೆಟುಕಿಗೆ, ಗ್ರಹಿಕೆಗೆ ಸಿಗಲಿಲ್ಲವೆಂದ ಮಾತ್ರಕ್ಕೆ ಅದು ಇಲ್ಲವೆಂದು, ನಷ್ಟವಾಗಿ ಹೋಯ್ತೆಂದು ಹೇಳಲಾಗದು ಎನ್ನುವುದು ಇದರ ಸಾರಾಂಶ.
ಇಡೀ ಬ್ರಹ್ಮಾಂಡದ ಸೃಷ್ಟಿಯ ಒಗಟಿನಲ್ಲಿ ನಮ್ಮ ಕಣ್ಣೆದುರಿಗೆ ಕಾಣುವ ಸತ್ಯ ತೃಣಮಾತ್ರ ಗಾತ್ರವೂ ಅಲ್ಲ. ಅದನ್ನು ಆಧಾರವಾಗಿಟ್ಟುಕೊಂಡು ಮಿಕ್ಕೆಲ್ಲದುದರ ತೀರ್ಮಾನ ಮಾಡಲು, ತೀರ್ಪು ಕೊಡಲು ನಮಗೆ ಅರ್ಹತೆಯಿಲ್ಲ, ಸಾಮರ್ಥ್ಯವಿಲ್ಲ ಎನ್ನಬಹುದೆ ಹೊರತು ಆ ಸತ್ಯವೇ ಅಸ್ತಿತ್ವ ಕಳೆದುಕೊಂಡು ನಷ್ಟವಾಗಿದೆಯೆನ್ನಲಾಗದು ಅಥವಾ ಅದರ ಇರುವಿಕೆಯನ್ನು ನಿರಾಕರಿಸಲಾಗದು. ಒಂದು ವೇಳೆ ಅದು ನಮ್ಮ ಸುತ್ತಲೆ ಇದ್ದರೂ, ಅದನ್ನು ಅರಿಯಲಾಗದ ನಮ್ಮಗಳ ದುರ್ಬಲತೆಯಿಂದ ಕಾಣಿಸಿಕೊಳ್ಳುತ್ತಿಲ್ಲವೆ ಹೊರತು ಅಸ್ತಿತ್ವ ಇಲ್ಲದಿರುವ ಅಥವಾ ನಷ್ಟವಾಗಿ ಕಳೆದುಹೋದ ಕಾರಣದಿಂದಲ್ಲ ಎನ್ನುವ ಕವಿಭಾವ ಇಲ್ಲಿ ಕಾಣಿಸಿಕೊಂಡಿದೆ.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ