ಅಂಕಣ

ಅರೆಬರೆಯಾಗೇ ಪೂರ್ಣ, ತಿಳಿವುದಣ್ಣ ಬಾಳ ಗೋಳಿಗೂ ಕಾರಣ!

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೬೮.

ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಿಲ್ಲಿ |
ಎಲ್ಲಿ ಪರಿಪೂರಣವೊ ಅದನರಿಯುವನಕ ||
ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ ? |
ಎಲ್ಲ ಬಾಳು ರಹಸ್ಯ – ಮಂಕುತಿಮ್ಮ || ೦೬೮ ||

ಇದೊಂದು ಸೃಷ್ಟಿಯ ಮತ್ತು ನಮ್ಮ ಸುತ್ತಮುತ್ತಲಿನ ಬದುಕಿನ ನಿಗೂಢತೆಯನ್ನು ಕಂಡು ಉದ್ಗರಿಸಿದ ಪದ ಸಾಲು. ಇಲ್ಲಿ ಸೃಷ್ಟಿರಹಸ್ಯ ಮತ್ತು ನಮ್ಮ ಬಾಳನ್ನು ಒಂದೇ ನೆಲಗಟ್ಟಲ್ಲಿ ಜೋಡಿಸಿ ಹೋಲಿಸಿರುವುದು ಗಮನಾರ್ಹ. ಸೃಷ್ಟಿಯೆಂಬ ಗಹನ ವಿಷಯದ ಶೋಧದಲ್ಲಿ ತೇಲುವ ಮೊದಲ ಮೂರೂ ಸಾಲುಗಳು ತಟ್ಟನೆ ನಾಲ್ಕನೇ ಸಾಲಿನಲ್ಲಿ ಸರಳ ಲೌಕಿಕಕ್ಕೆ ಕೊಂಡಿಹಾಕಿಬಿಡುತ್ತವೆ – ಆ ಸಾಲಿನಲ್ಲಿ ಬರುವ ಬಾಳಿನ ಪ್ರಸ್ತಾಪದಿಂದ. ಸೃಷ್ಟಿಯ ನಿಗೂಢತೆಗೆ ತಾಳಮೇಳವಾಗಿದೆಯೇನೋ ಎಂಬಂತೆ ಅದೇ ತರಹದ ನಿಗೂಢತೆಯನ್ನು ಪ್ರದರ್ಶಿಸುವ ಬದುಕು, ಸೃಷ್ಟಿ ಮತ್ತು ಬಾಳಿನ ನಡುವಿರಬಹುದಾದ ಅವ್ಯಕ್ತ, ಅಗ್ರಾಹ್ಯ ಸಂಬಂಧವನ್ನು ಸಹ ಸೂಚಿಸುತ್ತದೆ. ಸೃಷ್ಟಿಯೆಷ್ಟು ನಿಗೂಢವೋ, ಪ್ರತಿಯೊಬ್ಬರ ಬಾಳೂ ಅಷ್ಟೇ ನಿಗೂಢ ಎನ್ನುವುದು ಇಲ್ಲಿನ ಇಂಗಿತಾರ್ಥ. ಪ್ರತಿಯೊಬ್ಬರೂ ವೈಯಕ್ತಿಕವಾಗಿ ತಮ್ಮ ತಮ್ಮ ಬಾಳಿನಲ್ಲಿರುವ, ಬದುಕಿನಲ್ಲಿ ನಡೆದುಹೋದ ಗುಟ್ಟು, ರಹಸ್ಯಗಳನ್ನೊಮ್ಮೆ ಅವಲೋಕಿಸಿಕೊಂಡರೆ ಸಾಕು – ಈ ಮಾತು ಎಷ್ಟು ನಿಜ ಎಂದರಿವಾಗುತ್ತದೆ.

ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಿಲ್ಲಿ |

ಸೃಷ್ಟಿಯ ಯಾವುದೆ ಗುಟ್ಟನ್ನು, ಒಗಟನ್ನು, ನಿಗೂಢತೆಯನ್ನು ಒಡೆಯಲು ಹೋದರು ಧುತ್ತನೆ ಎದುರಾಗುವ ಒಂದು ತೊಡಕಿನ ಅಂಶ – ಅದರ ಅರೆಬರೆ ಸತ್ಯಾಂಶದ, ಅರಬರೆ ಜ್ಞಾನ-ತಿಳುವಳಿಕೆಯ (ಅಜ್ಞಾನದ) ಮುಸುಕು. ಪ್ರತಿಯೊಂದೂ ತನ್ನ ಪೂರ್ಣ ರೂಪದಲ್ಲಿ ಗೋಚರಿಸದೆ, ಅರೆಗತ್ತಲ ಪಾಶದಡಿ ಬಂಧಿಯಾದ ಅರ್ಧಂಬರ್ಧ ಬೆಳಕಿನಂತೆ ಗೋಚರವಾಗುತ್ತದೆ. ಯಾವುದೋ ಕಾಣದ್ದರ ಅನ್ವೇಷಣೆಗೆ ಹೊರಟಾಗ ಸಿಕ್ಕುವ ಮಾರ್ಗದರ್ಶಿ ಮಾಹಿತಿ ಕುರುಹುಗಳು ಸಹ ಪೂರ್ತಿ ಚಿತ್ರಣ ಕೊಡದೆ ಅಪೂರ್ಣ ಸುಳಿವಿನಂತೆ ಭಾಸವಾಗಿ ಕಾಡಿ ಕಂಗೆಡಿಸುತ್ತವೆ. ಗೊತ್ತಿರುವ ವಿಚಾರಗಳು ಕೂಡ ಅಸಂಪೂರ್ಣ ಜ್ಞಾನದಂತೆ ಅನಾವರಣವಾಗುತ್ತವೆ – ಪೂರ್ಣ ಮಾಹಿತಿಯನ್ನರಿತು ಮುನ್ನಡೆವ ಸಮಾಧಾನಕ್ಕೂ ಕಲ್ಲು ಹಾಕುತ್ತ. ಹೀಗೆ ಯಾವುದನ್ನೇ ಬೆನ್ನಟ್ಟಿ ನಡೆದರೂ ಎಲ್ಲವು ಅರೆಬೆಂದ ಅಕ್ಕಿಯ ಹಾಗೆ; ಮೇಲ್ಪದರ ಕೆರೆದು ಪಡೆದ ಅರೆಬರೆ ಜ್ಞಾನ ಹಾಗು ಕುಶಲತೆಯೆ ಹೊರತು ಆಳದ ಪೂರ್ತಿ ಅರಿವಿನ ಸಂಪೂರ್ಣತೆಯ ನೆಮ್ಮದಿ ಕೈಗೆಟುಕುವುದೇ ಇಲ್ಲ. ಸೃಷ್ಟಿಯ ಗುಟ್ಟನ್ನರಸಿಕೊಂಡು ಹೋದರೂ ಅಷ್ಟೇ, ಬದುಕಿನ ಸಮಸ್ಯೆಗಳ ಬೆನ್ನಟ್ಟಿ ನಡೆದರೂ ಅಷ್ಟೇ – ಒಂದೇ ತರದ ಅಸಂತೃಪ್ತ, ಅರೆಬರೆ ಭಾವನೆಯೆ.

ಒಂದು ರೀತಿಯಲ್ಲಿ, ಅರಿವಿನ ಪ್ರಮಾಣ ಮತ್ತು ಗುಣಮಟ್ಟಗಳ ನಡುವಿನ ಅಗಾಧ ಅಂತರವನ್ನು ಎತ್ತಿ ತೋರಿಸುವ ಯತ್ನ ಈ ಸಾಲಿನಲ್ಲಿ ಅಡಕವಾಗಿದೆ ಎನ್ನಬಹುದು (ಅರೆಬರೆ ಜ್ಞಾನ ರಾಶಿರಾಶಿ ‘ಪ್ರಮಾಣ’ದಲ್ಲಿದ್ದರೂ ಅದರ ಸಾರ್ಥಕ ಬಳಕೆಯ ‘ಗುಣಮಟ್ಟ’ ಅವುಗಳ ಅಪರಿಪೂರ್ಣತೆಯಿಂದಾಗಿ ಸೀಮಿತವಾಗಿಬಿಡುವುದರಿಂದ). ಎಷ್ಟೊಂದು ಗೊತ್ತಿದೆಯಾದರು ಎಲ್ಲವು ಅಪರಿಪೂರ್ಣ, ಅಸಮರ್ಪಕತೆಗಳ ಕಲಸುಮೇಲೋಗರ ಎನ್ನುವ ಬೇಸರ ಈ ಸಾಲಿನ ಸಾರ ಎನ್ನಬಹುದು.

ಎಲ್ಲಿ ಪರಿಪೂರಣವೊ ಅದನರಿಯುವನಕ ||

ಹೀಗೆ ಹುಡುಕಿಕೊಂಡು ಹೊರಟ ಸೃಷ್ಟಿರಹಸ್ಯದ ಮೇಲ್ಪದರದ ತುಸು ಭಾಗ ಕೈಗೆ ಸಿಕ್ಕರೂ, ಮಿಕ್ಕ ಭಾಗವನ್ನು ಅರಿಯುವ ತನಕ ಆ ಒಗಟಿನ ಹೂರಣ ಎಲ್ಲಿ ತಾನೆ ಬಯಲಾದೀತು? ಅರಿವಿನ ಪರಿಪೂರ್ಣತೆ ಕೈಗೆ ಸಿಗದೆ ಸತ್ಯದ ಒಡಪೊಡೆಯದಲ್ಲಾ? ಅರೆಬರೆ ಭಾಗವನ್ನರಿತು ಎಷ್ಟೇ ಸಂಭ್ರಮಿಸಿದರು ಪೂರ್ತಿ ಅರಿವಾಗದೆ ಗುಟ್ಟಿನ ಸ್ಪಷ್ಟಚಿತ್ರ ಸಿಕ್ಕುವುದಿಲ್ಲವಲ್ಲಾ? ಹಾಗೆ ಅರಿವಾಗಲ್ಲದೆ ಪರಿಪೂರ್ಣತೆಯ ಸಮಾಧಾನವೂ ದಕ್ಕುವುದಿಲ್ಲ. ಕೆಲವೊಮ್ಮೆ ಒಂದಿನಿತೂ ಗೊತ್ತಾಗದೆ ಕಾಡುವ ವಿಷಯಗಳಿಗಿಂತ ಹೆಚ್ಚು ಕಾಡುವುದು ಅರೆಬರೆ ದಕ್ಕಿದ ವಿಷಯಗಳೇ ! ಇನ್ನೇನು ಉತ್ತರದ ಹತ್ತಿರ ಬಂದಿರಬಹುದೆನ್ನುವ ಹುರುಪು-ಉತ್ಸಾಹ, ಮಿಕ್ಕಿದ್ದು ಕೈಗೆಟುಕದೆ ಆಟವಾಡಿಸುವಾಗ ಅತೀವ ನಿರಾಶೆಯಲ್ಲಿ ಪರ್ಯಾವಸಾನವಾಗುತ್ತದೆ. ಆಗ ಉಂಟಾಗುವ ಅಪರಿಪೂರ್ಣತೆಯ, ಅಸಂತೃಪ್ತ ಭಾವ ಮಾತಿಗೆ ನಿಲುಕದ್ದು. ಗೊತ್ತಿಲ್ಲದ್ದನ್ನು ಪೂರ್ತಿ ಅರಿಯುವತನಕ ನಿದ್ರಾಹಾರಗಳ ಪರಿಗಣನೆಯಿಲ್ಲದೆ ಮುನ್ನಡೆಯಲು ಆ ಅಸಹನೆ, ಅತೃಪ್ತಿಯೇ ಒಂದು ವಿಧದ ಪ್ರೇರಕ ಶಕ್ತಿಯೂ ಆಗುತ್ತದೆಯೆನ್ನುವುದು ಇದರ ಮತ್ತೊಂದು ಆಯಾಮ. ಸೃಷ್ಟಿ ಅನ್ವೇಷಣೆಯ ಇದೇ ನಿಯಮ ಬದುಕಿನ ಶೋಧನೆಗೂ ಅನ್ವಯವಾಗುತ್ತದೆಯೆನ್ನುವುದು ಅವೆರಡಕ್ಕಿರುವ ಅಗೋಚರ ತಾದಾತ್ಮಕತೆಯ ಸಂಕೇತವೆನ್ನುವುದರಲ್ಲಿ ಸೋಜಿಗವೇನಿಲ್ಲ.

ಒಟ್ಟಾರೆ ಅರ್ಧಂಬರ್ಧ ತಿಳುವಳಿಕೆ, ಗ್ರಹಿಕೆಗಳೆಲ್ಲ ಪೂರ್ತಿಯಾಗದೆ ಪರಿಪೂರ್ಣತೆಯೆಲ್ಲಿ ಸಿಗಲು ಸಾಧ್ಯ ? ಎನ್ನುವ ಪ್ರಶ್ನೆ ಈ ಸಾಲಿನ ಮುಖ್ಯ ಆಶಯ.

ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ ? |

ಹೀಗೆ ಸೃಷ್ಟಿಯ ರಹಸ್ಯವೆಲ್ಲ ಯಾವುದೊ ಪೆಟ್ಟಿಗೆಯೊಳಗಿಟ್ಟು (ಪೇಟಿ) ಬೀಗ ಹಾಕಿಬಿಟ್ಟಂತಿದೆ. ಅದರ ಕೀಲಿಕೈ ಹುಡುಕಿ ಆ ಪೆಟ್ಟಿಗೆಯ ಮುಚ್ಚಳವನ್ನು ಬಿಚ್ಚಿ, ಅದರ ಒಳಗಡಗಿರುವ ರಹಸ್ಯವನ್ನು ಹೇಳಬಲ್ಲವರು ಯಾರಾದರೂ ಇದ್ದಾರೆಯೇ ? ಯಾವುದಾದರೂ ವಿಧಾನದಲ್ಲಿ ಪ್ರತ್ಯಕ್ಷ-ಪರೋಕ್ಷ ಸಾಕ್ಷಿ, ಸಂಕೇತಗಳ ಮೂಲಕ ಕಂಡ-ಕಾಣದ ಅದರೊಳಗನ್ನು ಹೇಳಿಸಬಲ್ಲವರು (ಸೊಲ್ಲಿಸುವವರು) ಯಾರಾದರೂ ಸಿಗುತ್ತಾರಾ ? ಎಲ್ಲವನ್ನು ಹಣ್ಣಿನ ತೊಳೆಯಂತೆ ಬಿಡಿಸಿಟ್ಟು ‘ಸೃಷ್ಟಿಯ ಮೂಲ ಬಂಡವಾಳ ಇಷ್ಟೇ’ ಎಂದು ಹೆಮ್ಮೆಯಿಂದ ಬೀಗಬಲ್ಲ ಮೇಧಾವಿ ಎಂದಾದರೂ ಕಾಣಿಸಿಕೊಳ್ಳುತ್ತಾನಾ? ಸಂಕೀರ್ಣವಾಗಿ ಕಾಣುವ ಅಸಂಖ್ಯಾತ ಪ್ರಶ್ನೆಗಳಿಗೆಲ್ಲ ಉತ್ತರ ನೀಡಬಲ್ಲ ಆ ಪೆಟ್ಟಿಗೆ ನಿಜಕ್ಕೂ ಎಂದಾದರೊಮ್ಮೆ (ಭವಿತದಲ್ಲಾದರೂ) ತೆರೆದುಕೊಳ್ಳುತ್ತದೆಯೇ ? ಇತ್ಯಾದಿ ಅನುಮಾನಗಳು ಮಂಕುತಿಮ್ಮನನ್ನು ನಿರಂತರವಾಗಿ ಕಾಡಿವೆ. ಆ ಕಾಡುವಿಕೆಯ ಮೊತ್ತವೇ ಈ ಸಾಲಿನಲ್ಲಿ ಪ್ರಶ್ನಾರ್ಥಕವಾಗಿ ಕಾಣಿಸಿಕೊಂಡಿದೆ. ಸೃಷ್ಟಿ ಪೆಟ್ಟಿಗೆಯ ಗುಟ್ಟು ಬಯಲಾದಲ್ಲಿ ಬದುಕಿನ ಎಷ್ಟೋ ಅಗೋಚರ ಗುಟ್ಟುಗಳಿಗೂ ಉತ್ತರ ಸಿಗಬಹುದೆನ್ನುವ ಇಂಗಿತವೂ ಕೂಡ ಇದರೊಳಗಡಗಿದೆ.

ಎಲ್ಲ ಬಾಳು ರಹಸ್ಯ – ಮಂಕುತಿಮ್ಮ ||

ಹಾಗೆ ನೋಡಿದರೆ ಬರಿಯ ಸೃಷ್ಟಿಯೇನು – ಪ್ರತಿಯೊಂದು, ಪ್ರತಿಯೊಬ್ಬ ವ್ಯಕ್ತಿಯ ಬಾಳೂ ಸಹ ರಹಸ್ಯಗಳ ಪೆಟ್ಟಿಗೆಯೆ ತಾನೆ? ಸೃಷ್ಟಿ ತನ್ನ ಮಡಿಲಲಿಟ್ಟುಕೊಂಡ ರಹಸ್ಯದ ಹಾಗೆ ಎಲ್ಲರ ಬಾಳುವೆಗಳು ಹೊರಬಿಟ್ಟುಕೊಡುವುದು ಅರ್ಧಸತ್ಯಗಳನ್ನು ಮಾತ್ರವೆ, ಇದಕ್ಕೆ ಮಾನವಜೀವಿಯೂ ಹೊರತಲ್ಲ ಎನ್ನುತ್ತಾನೆ ಮಂಕುತಿಮ್ಮ. ಸೃಷ್ಟಿರಹಸ್ಯದ ಕುರಿತಾದ ನಿಗೂಢತೆ ಕವಿಯನ್ನು ಎಡಬಿಡದೆ ಕಾಡಿದ ಬಗೆ, ಅದರ ಬಗೆಗಿರುವ ಅದಮ್ಯ ಕುತೂಹಲಕ್ಕೆ ಮತ್ತೊಂದು ಉದಾಹರಣೆ ಈ ಪದ್ಯ. ಅಂತೆಯೇ ಕವಿಗ್ಯಾಕೆ ಸೃಷ್ಟಿಯ ನಿಗೂಢತೆ ಕುರಿತಾಗಿ ಇಷ್ಟೊಂದು ವ್ಯಾಮೋಹ? ಎನ್ನುವ ಪ್ರಶ್ನೆಗೂ ಭಾಗಶಃ ಉತ್ತರ ನೀಡುತ್ತದೆ ಈ ಸಾಲು.

ಸೃಷ್ಟಿ ಮತ್ತು ನಮ್ಮ ಬಾಳುವೆ ಹೋಲಿಕೆಯ ದೃಷ್ಟಿಯಲ್ಲಿ ಒಂದೇ ಮೂಸೆಯಲ್ಲಿ ಎರಕ ಹೊಯ್ದ ಅಚ್ಚಿನ ಹಾಗಿರುವುದರಿಂದ (ಮತ್ತು ಬಾಳು ಸೃಷ್ಟಿಯ ಉಪ ಉತ್ಪನ್ನವೂ ಆಗಿರುವ ಕಾರಣ), ಸೃಷ್ಟಿಯ ಉತ್ತರಗಳು ಬಾಳುವೆಯ ಸಮಸ್ಯೆಗಳಿಗೂ ಉತ್ತರವಾದೀತೆಂಬ ಅಂತರ್ಗತ ನಿರೀಕ್ಷೆ ಇಲ್ಲಿದೆ. ಬಿಡಿಸಲಾಗದ ಬಾಳಿನ ಗೋಳಿಗೆ ಸಮರ್ಪಕ ಉತ್ತರ ಸೃಷ್ಟಿಯ ಗುಟ್ಟಿನಲ್ಲಿರಬಹುದೆಂದು ಹುಡುಕ ಹೊರಟ ಪರಿಯೇ, ಗೋಚರ ಲೌಕಿಕಕ್ಕೂ ಅಗೋಚರ ಗಹನಕ್ಕೂ (ತನ್ಮೂಲಕ ಪಾರಮಾರ್ಥಿಕಕ್ಕೂ) ನಂಟು ಹಾಕುವ ಯತ್ನವಾಗಿ ಕಾಣಿಸಿಕೊಳ್ಳುತ್ತದೆ. ಗಹನವನ್ನು ಬಿಡಿಸಿ ತನ್ಮೂಲಕ ಸರಳವನ್ನು ಅರಿಯುವ, ಅನಾವರಣಗೊಳಿಸುವ ಕುತೂಹಲಕರ ವಿಧಾನದ ಮೇಲೂ ಬೆಳಕು ಚೆಲ್ಲುತ್ತದೆ. ಸೃಷ್ಟಿಯ ಅರಿವು ಬಾಳಿನ ಅರಿವಿಗೆ ಸಹಾಯ ಮಾಡುವ ಹಾಗೆ, ಬಾಳಿನ ಸರಳ ತಿಳುವಳಿಕೆ ಸೃಷ್ಟಿಯ ಅಗಾಧ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಹಾಯಕವಾಗುತ್ತದೆ. ಜತೆಗೆ ಒಂದನ್ನು ಬಳಸಿ ಮತ್ತೊಂದನ್ನರಿಯುವ ನಿರಂತರ ಚಾಕಚಕ್ಯತೆಯ ಸುಳಿವನ್ನೂ ನೀಡುತ್ತದೆ. ಹೀಗೆ ಒಂದಕ್ಕೊಂದರ ಪೂರಕತೆ ಅಂತಿಮವಾಗಿ ಎರಡರ ಅರಿವಿಗೆ ದಾರಿ ಮಾಡಿಕೊಡುತ್ತದೆ – ಇಷ್ಟಿಷ್ಟಾಗಿಯೇ (ಎರಡರ ತಾರ್ಕಿಕ ಅಂತ್ಯ ತಲುಪಿದಾಗ). ಆಧ್ಯಾತ್ಮಿಕವಾಗಿ ನೋಡಿದರೆ ಈ ಬಗೆಯ ಜಂಜಾಟವನ್ನೇ ಅಜ್ಞಾನದ ಪರದೆ ಸರಿಸಬಿಡದ ಮಾಯೆಯ ಸ್ವರೂಪವೆಂದು ಭಾವಿಸಬಹುದು – ಜ್ಞಾನದ ಅನ್ವೇಷಣೆಯ ಹಾದಿಯಲ್ಲಿ ಹೊರಟಾಗ. ಯಾಕೆಂದರೆ, ಪರಸ್ಪರ ಪೂರಕವಾಗುವ ಹಾಗೆಯೇ ಪರಸ್ಪರ ದಿಕ್ಕು ತಪ್ಪಿಸುವ ಸಾಮರ್ಥ್ಯವೂ ಇವೆರಡಕ್ಕಿರುವುದರಿಂದ.

#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!