ಅಂಕಣ

ಹೊರಗಿನದೆಲ್ಲವನ್ನೂ ಗೆದ್ದೇ, ನಿನ್ನೊಳಗಿನ ಕಥೆಯೇನಪ್ಪಾ ?

ಮಂಕುತಿಮ್ಮನ ಕಗ್ಗ ೬೨.

ಭೌತವಿಜ್ಞಾನಿ ರವಿತಾರೆಧರೆಗಳ ಚಲನ |

ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ||

ಪ್ರೀತಿರೋಷಗಳನವನಳೆವನೇನ್ ? ಅವ್ಯಕ್ತ |

ಚೇತನವನರಿವನೇಂ ? – ಮಂಕುತಿಮ್ಮ || ೬೨ ||

ಕಗ್ಗದ ಹಲವು ಪದ್ಯಗಳಂತೆ ಇಲ್ಲಿಯೂ ಮೊದಲೆರಡು ಸಾಲುಗಳು ಭೌತಿಕ ಜಗಕ್ಕೆ ಸಂಬಂಧಿಸಿದ್ದರೆ, ಕೊನೆಯೆರಡು ಸಾಲುಗಳು ಅಭೌತಿಕ ಸ್ವರೂಪಕ್ಕೆ ಕೊಂಡಿ ಹಾಕುತ್ತವೆ.

ಏನೆಲ್ಲಾ ಊಹಾತೀತ ಸಾಧನೆಗಳ ಅದ್ಭುತ ಮೇಳ ಮಾನವಜೀವಿಗಳ ಕಣ್ಮುಂದೆ ಇದ್ದರೂ ಅವೆಲ್ಲವೂ ಭೌತಿಕ ಸ್ವರೂಪದ, ಬಾಹ್ಯ ಜಗಕ್ಕೆ ಸಂಬಂಧಿಸಿದ ಸಂಗತಿಗಳು. ಆದರೆ ನಮ್ಮ ಅಂತರಾಳದಲಿದ್ದು, ನಮ್ಮ ಪ್ರತಿಯೊಂದು ಕ್ರಿಯೆ-ಪ್ರತಿಕ್ರಿಯೆ, ಗುಣಸ್ವಭಾವಗಳ ಮೇಲೆ ಪ್ರಭಾವ ಬೀರುವ ಅದೆಷ್ಟೋ ಸಂಗತಿಗಳ ಕಾರ್ಯತಂತ್ರದ ಅರಿವಾಗಲಿ, ನಿರ್ವಹಣೆಯ ಬಗೆಯನ್ನಾಗಲಿ ಅಳೆದು ‘ಹೀಗೇ’ ಎಂದು ಹೇಳಬಲ್ಲ ಸಾಮರ್ಥ್ಯ ನಮ್ಮಲ್ಲಿಲ್ಲ. ಬರಿಗಣ್ಣಿಗೆ ಕಾಣದ ಪ್ರಭಾವದಡಿ ಏನೋ ನಡೆಯುತ್ತಿದೆಯೆಂಬ ಅಂಶ ಗೋಚರವಾಗುತ್ತದೆಯೇ ಹೊರತು ಅದರ ಸ್ಥೂಲ, ಸೂಕ್ಷ್ಮ ಸ್ವರೂಪಗಳ ಚಿತ್ತಾರ ಅರಿವಿಗೆಟುಕುವುದಿಲ್ಲ.

ಭೌತವಿಜ್ಞಾನಿ ರವಿತಾರೆಧರೆಗಳ ಚಲನ |

ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ||

ಈಗಿನ ಆಧುನಿಕ ವಿಜ್ಞಾನ ಮತ್ತು ಅಲ್ಲಿ ಕಾರ್ಯನಿರತರಾಗಿರುವ ವಿಜ್ಞಾನಿ ಸಮೂಹ ಏನೆಲ್ಲಾ ಸಂಶೋಧನೆ, ಆವಿಷ್ಕಾರಗಳ ಚಮತ್ಕಾರವನ್ನು ತೋರಿಸಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಭೂಮಿ-ಸೂರ್ಯ-ಚಂದ್ರಾದಿ ಗ್ರಹ-ತಾರೆ-ಉಪಗ್ರಹಗಳಂತಹ ಆಕಾಶಕಾಯಗಳ ಭೌತಿಕ ಚಲನೆ, ಅದರ ವೇಗ, ಶಕ್ತಿಯ ಮೊತ್ತ, ದಿಕ್ಕು, ದೆಸೆಗಳೆಲ್ಲದರ ಮಾಪನ ಮಾಡಿ, ಲೆಕ್ಕಾಚಾರ ಮಾಡಿ ಬೀಗುತ್ತಾನೆ, ಮಾನವ. ಅವು ಯಾವ ಪಥದಲ್ಲಿ, ಯಾವ ಸ್ಥಾನವನ್ನಾಕ್ರಮಿಸುತ್ತವೆ ಎಂದು ಬರಿಯ ಹಾಳೆ ಮೇಲಿನ ಲೆಕ್ಕಾಚಾರದಿಂದ, ಸಿದ್ಧ ಸೂತ್ರಗಳ ಸಹಾಯದಿಂದ ಮುಂಗಡವಾಗಿ ಹೇಳಬಲ್ಲ ಪರಿಣಿತಿಯೂ ನಮಗಿದೆ. ಪ್ರತಿಯೊಂದರ ಗಾತ್ರ, ಆಕಾರ, ಚಲನಾಗತಿ, ಪರಸ್ಪರ ದೂರಗಳ ಆಧಾರದ ಮೇಲೆ ಯಾವುದರ ಶಕ್ತಿ ಎಷ್ಟು ? ಅದರ ಪರಿಮಾಣ-ಪರಿಣಾಮಗಳ ಅಳತೆಯೆಷ್ಟು ? ಎಂದೆಲ್ಲಾ ಗುಣಿಸಿ, ಭಾಗಿಸಿ ಭೌತಶಾಸ್ತ್ರಸೂತ್ರದ ಚೌಕಟ್ಟಿನಲ್ಲಿ ಬಂಧಿಸಿ ಕೈಗುಟಕದ ಅಗಾಧ ವಿಶ್ವವನ್ನೂ ಅಂಗೈಯಗಲದ ಕಾಣ್ಕೆಯಲ್ಲಿ ಬಿಂಬಿಸುವ ಛಾತಿಯು ನಮ್ಮದಾಗಿದೆ. ಅಂದಮೇಲೆ ಇಂತಹ ಅದ್ಭುತ ಸಾಧನೆಗಳ ಕುರಿತು ಹೆಮ್ಮೆಯಿಂದ ಬೀಗದಿದ್ದೀತೆ ಮನುಕುಲ ? ಆ ಹಿರಿಮೆಯನ್ನು ಪ್ರತಿಬಿಂಬಿಸುವ ಆಶಯ ಮೊದಲಿನೆರಡು ಸಾಲುಗಳಲ್ಲಿವೆ.

ಮೊದಲೆರಡು ಸಾಲುಗಳಲ್ಲಿ ಕಂಡು ಬರುವ ಸಾಧನೆಯ ಹಿಗ್ಗು, ಹಿರಿಮೆಗಳು ಅತಿಶಯದ್ದೇ ನಿಜ. ಆದರೆ ಅವೆಲ್ಲ ಭೌತಿಕ ಕಾಯಗಳು; ದೂರ ಮತ್ತು ಗಾತ್ರದ ಅಗಾಧತೆಯ ಕಠಿಣತೆಯನ್ನು ಹೊರತಾಗಿಸಿಯೂ, ಅವೆಲ್ಲ ಗ್ರಹಿಕೆಗೆ ನಿಲುಕುವಂತ ಭೌತಿಕ ವಸ್ತುಗಳು. ಅದನ್ನಳೆಯುವುದು ಮಹಾನ್ ಸಾಹಸವೆ ಆದರು ಅದನ್ನೇನು ಅಸಾಧ್ಯವಾದ ಕಾರ್ಯ ಎಂದು ಹೇಳಲು ಬರುವುದಿಲ್ಲ. ಅದರ ಅಗಾಧ ಭೌತಿಕ ಸ್ವರೂಪ ವಿಸ್ಮಯದ್ದಾದರೂ, ಬುದ್ಧಿಶಕ್ತಿ ಮತ್ತು ಗೋಚರಿಕೆಯಳತೆಯಲ್ಲಿರುವ ಕಾರಣ ಅದರ ತಾರ್ಕಿಕ ಗ್ರಹಿಕೆ ಸಾಧ್ಯ. ಆದರೆ ಈ ಸಾಧನೆಯಿಂದಲೇ ಮಾನವ ಔನ್ನತ್ಯದ ಶಿಖರವನ್ನೇರಿ ಎಲ್ಲವನ್ನು ಜಯಿಸಿಬಿಟ್ಟನೆಂದು ಹೇಳಲು ಸಾಧ್ಯವೇ? ಖಂಡಿತ ಇಲ್ಲ! ಅದೇಕೆನ್ನುವುದರ ಸಾರ ಮುಂದಿನ ಎರಡು ಸಾಲುಗಳಲ್ಲಿ ವ್ಯಕ್ತವಾಗುತ್ತದೆ.

ಪ್ರೀತಿರೋಷಗಳನವನಳೆವನೇನ್ ? ಅವ್ಯಕ್ತ |

ಚೇತನವನರಿವನೇಂ ? – ಮಂಕುತಿಮ್ಮ ||

ಮನುಕುಲದ ಜಯ ಇನ್ನೂ ಶಿಶುವಿಜ್ಞಾನದ ಹಾಗೆ. ಯಾಕೆಂದರೆ ಆ ವಿಜ್ಞಾನ ಮತ್ತು ವಿಜ್ಞಾನಿಗೆ ಇನ್ನೂ ಮಾನವ ಮನದ ಪ್ರೀತಿ, ರೋಷಗಳ ರೀತಿಯ ಪರಸ್ಪರ ವೈರುದ್ಧ್ಯದ ಭಾವ ಸಮೀಕರಣವನ್ನು ಅಳೆಯಲು ಸಾಧ್ಯವಾಗಿಲ್ಲ. ಒಂದೇ ಮನಸ್ಸತ್ವ ಕೆಲವೊಮ್ಮೆ ಪ್ರೀತಿ, ಪ್ರೇಮದ ವರ್ಷಧಾರೆಯಾದರೆ, ಮತ್ತೊಮ್ಮೆ ರೋಷಾವೇಶದಿಂದ ಸೇಡಿನಹಕ್ಕಿಯಾಗುವ ಕುಟಿಲತೆಯನ್ನು ತೋರುತ್ತದೆ. ಒಂದೇ ಮೂಲಸತ್ವ ವಿಭಿನ್ನ ಸಂಧರ್ಭ-ಪರಿಸರದಲ್ಲಿ ವಿಭಿನ್ನವಾಗಿ ವರ್ತಿಸುತ್ತದೆ. ಆ ಸ್ಥಿತ್ಯಂತರಗಳನ್ನು ಮುಂಗಡವಾಗಿ ಅಳೆಯುವ ಮತ್ತು ನಿಯಂತ್ರಿಸುವ ಪರಿಕರಗಳು ಇನ್ನೂ ಅವನಲ್ಲಿಲ್ಲ. ಅಂತಃಕರಣದ ಭಾವಗಳನ್ನಳೆಯುವ ಯಾವ ವಿಧಾನವು ಅವನ ಹಿಡಿತಕ್ಕೆ ಸಿಕ್ಕಿಲ್ಲ. ಮನಸಿನ ನಡುವಳಿಕೆ, ಸ್ವಭಾವವನ್ನು ಅರಿತು ನಿಖರವಾಗಿ ದಾಖಲಿಸಿ ವಿಶ್ಲೇಷಿಸುವ ಸಾಮರ್ಥ್ಯವಾಗಲಿ, ತತ್ವ ಸೂತ್ರ ಸಿದ್ದಾಂತಗಳಾಗಲಿ ಅವನಿಗಿನ್ನೂ ಸಿದ್ದಿಸಿಲ್ಲ.

ಇವೆಲ್ಲ ರಾಗದ್ವೇಷಭಾವಗಳ ಮಾತಾಯ್ತು. ಅಭೌತಿಕವಿದ್ದೂ, ಅವೆಲ್ಲವೂ ಗ್ರಹಿಕೆಗೆ ನಿಲುಕುವ ಅನುಭವ, ಅನುಭೂತಿಗಳು. ಅದೆಲ್ಲಕ್ಕು ಮೀರಿದ್ದೆಂದರೆ ಅವೆಲ್ಲವನ್ನೂ ಮತ್ತು ನಮ್ಮೆಲ್ಲರನ್ನು ನಡೆಸುವ ಅವ್ಯಕ್ತ ಚೇತನದ್ದು. ಏಕೆಂದರೆ, ಆ ಚೇತನ ಇವೆಲ್ಲವುಗಳ ಮೂಲಶಕ್ತಿ ಮತ್ತು, ಮೂಲಾಧಾರ. ತಾನು ಹಿನ್ನಲೆಯಲ್ಲಿದ್ದುಕೊಂಡೇ ಮಿಕ್ಕೆಲ್ಲವನ್ನು ಕುಣಿಸುತ್ತಿರುವ ಕಾಣದ ಸೂತ್ರವದು. ಆ ಚೇತನವಾವುದು ? ಅದರ ಸ್ವರೂಪವೇನು ? ಅದರ ಅಳತೆ, ಗಾತ್ರಗಳೇನು ? ಅದು ಹೇಗೆ ನಮ್ಮ ಸೃಷ್ಟಿ, ಸ್ಥಿತಿ, ಲಯಕಾರಕಗಳನ್ನು ನಿಯಂತ್ರಿಸಿ ನಿರ್ದೇಶಿಸುತ್ತಿದೆ? ಎಂಬುದನ್ನು ಅರಿತು ವಿವರಿಸಬಲ್ಲ ಶಕ್ತಿಯಾಗಲಿ, ಸಾಮರ್ಥ್ಯವಾಗಲಿ ನಮ್ಮಲ್ಲಿ ಇಲ್ಲ. ಹೊರಗಿನ, ಭೌತಿಕವಿರುವುದೆಲ್ಲವನ್ನು ಜಯಿಸಿ ಹಣ್ಣಿನ ತೊಳೆ ಬಿಡಿಸಿಟ್ಟಂತೆ ಅನಾವರಣಕ್ಕಿಡಬಲ್ಲ ಮಾನವ ಜೀವಿಯ ಸಾಮರ್ಥ್ಯ, ಅಂತರಂಗದ ಸಾಮಾಗ್ರಿಗಳ ವಿಷಯಕ್ಕೆ ಬಂದರೆ ‘ಠುಸ್ ಪಟಾಕಿ’ಯ ಹಾಗೆ. ನಮ್ಮೊಳಗನ್ನೇ ಇನ್ನು ಜಯಿಸಲಾಗದಿದ್ದರು ಹೊರಗಿನದೆಲ್ಲದರ ಮೇಲೆ ದಂಡಯಾತ್ರೆಗೆ ಹೊರಟಿರುವ, ಜಯಿಸುತ್ತಿರುವ ವಿಚಿತ್ರ-ವಿಪರ್ಯಾಸದ ಪರಿಸ್ಥಿತಿ ಮನುಕುಲದ್ದು. ಒಂದೆಡೆ ಅತೀವ ಸಾಮರ್ಥ್ಯವನ್ನು ಎತ್ತಿ ತೋರುವ ಹಾಗೆ ಮತ್ತೊಂದೆಡೆ ಅಸಹಾಯಕ ದೌರ್ಬಲ್ಯವನ್ನು ಬಿಚ್ಚಿಡುವಂತದ್ದು. ಇದೇ ಸತ್ತ್ವ ಪ್ರತಿ ಮಾನವನಲ್ಲೂ ಸಾಮರ್ಥ್ಯ-ದೌರ್ಬಲ್ಯಗಳ ಸಂಯೋಜನೆಯಾಗಿ ಅಸ್ತಿತ್ವದಲ್ಲಿರುವುದೂ ಬಹುಶಃ ಕಾಕತಾಳೀಯವೇನಲ್ಲ.

ದೈವದ ಅಸ್ತಿತ್ವವನ್ನು ನಂಬದೆ ಕೇವಲ ನಾಸ್ತಿಕವಾದವೆ ಅಂತಿಮವೆನ್ನುವ ವಾದದತ್ತ ಕೂಡ ಇಣುಕಿ ನೋಡುವ ಸಾಲುಗಳಿವು. ಅರಿವಿಗೆಟುಕುವ – ನಿಲುಕಿಗೆಟುಕುವ ವಿಷಯಗಳಷ್ಟೇ, ಗ್ರಹಿಕೆಗೆ ಸಿಗದ – ತಾರ್ಕಿಕ ಚೌಕಟ್ಟಿನಲ್ಲಿ ವಿವರಿಸಲಾಗದ ಸಂಗತಿಗಳೂ ಇವೆ ಎನ್ನುವುದು ಕಠೋರ ವಾಸ್ತವ. ಈ ಪರಿಸ್ಥಿತಿಯಲ್ಲಿ ಕಾಣದಿರುವುದನ್ನು ಅಲ್ಲಗಳೆಯುವ ಬದಲು ವಿಜ್ಞಾನ ಮತ್ತು ಅಲೌಕಿಕ ಜ್ಞಾನದೆರಡು ನಂಬಿಕೆಗಳಲ್ಲು ಪರಸ್ಪರ ಗೌರವ, ವಿಶ್ವಾಸ, ನಂಬಿಕೆಯಿಟ್ಟುಕೊಂಡು ಸತ್ಯದ ಮೂಲ ಹುಡುಕಬೇಕು ಎನ್ನುವುದು ಇದರ ಸಾರ. ಅಂತಿಮವಾಗಿ ಯಾವುದು ಸತ್ಯ ಎನ್ನುವುದರ ಶೋಧನೆ ಮುಖ್ಯವೇ ಹೊರತು ಅದರ ಹಾದಿಯ ಕವಲುಗಳ ಅರೆಕೊರೆಗಳಲ್ಲ ಎಂಬುದಿಲ್ಲಿನ ಮಥಿತಾರ್ಥ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!