ಅಂಕಣ

ಶಿಕ್ಷಣವ್ಯವಸ್ಥೆಯ (ಐಐಟಿ,ಜೆಇಇ)  ಎರಡು ಮುಖಗಳು

ಪ್ರತಿವರ್ಷ ಏಪ್ರಿಲ್-ಮೇ ತಿಂಗಳು ಬಂತೆಂದರೆ ರಾಷ್ಟ್ರೀಯ ಪತ್ರಿಕೆಗಳಲ್ಲಿ ಐಐಟಿ,ಜೆಇಇಯ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತದೆ. ಮೊದಲೆಲ್ಲ ಬೇರೆಬೇರೆ ತಾಂತ್ರಿಕ ಸಂಸ್ಥೆಗೆ ಪ್ರವೇಶ ಪರೀಕ್ಷೇ ಬೇರೆಬೇರೆಯೇ ಇತ್ತು. ಈಗ ಜೆಇಇ ಮೇನ್ಸ್ ಮಾಡಿ ಬಳಿಕ ಅದರಲ್ಲಿ ಆಯ್ಕೆ ಮಾಡಿ ಐಐಟಿ ಪ್ರವೇಶ ಪರೀಕ್ಷೇ ಮಾಡಲಾಗುತ್ತದೆ. ಉಳಿದವರು ಉಳಿದ ತಾಂತ್ರಿಕ ಸಂಸ್ಥೆಗೆ ಸೇರಬಹುದಾಗಿದೆ. ಇದು ಈಗಿನ ಪದ್ಧತಿ.

 ಏಪ್ರಿಲ್ ಮೇ ಬಂತೆಂದರೆ ರಾಷ್ಟ್ರೀಯ ಪತ್ರಿಕೆಗಳಲ್ಲಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಸಂಸ್ಥೆಗಳು ಕೊಡುವ ಜಾಹಿರಾತಿನಿಂದಲೇ ಪತ್ರಿಕೆಗಳ ಪುಟಗಳು ಭರ್ತಿಯಾಗುತ್ತವೆ; ಪತ್ರಿಕೆಗಳ ಖಜಾನೆಗಳು ಸಹ. ರಾಜಸ್ತಾನದ ಕೋಟಾದವರ ಜಾಹಿರಾತಿನಲ್ಲಂತೂ ಅವರಲ್ಲಿನ ಟಾಪ್ ಬಂದ ಸ್ಟಾರ್ ವಿದ್ಯಾರ್ಥಿಗಳ ಆತ್ಮವಿಶ್ವಾಸದ, ದಿಟ್ಟ ನೋಟದ ಫೋಟೊ ಜೊತೆ ರಾರಾಜಿಸುತ್ತಿರುತ್ತದೆ. ಆ ಫೋಟೊದಲ್ಲಿ ಪಾಲಕರು ತಮ್ಮ ಮಕ್ಕಳ ಪ್ರತಿಬಿಂಬವನ್ನೇ ಕಂಡುಕೊಂಡು ತಮ್ಮ ಮಕ್ಕಳನ್ನೂ  ಕೋಟಾಕ್ಕೇ ಕಳುಹಿಸುವ ಯೋಜನೆ ಹಾಕಿದರೆ ಅಚ್ಚರಿಯೇನಿಲ್ಲ. ಜಾಹಿರಾತು ಆ ಸಂಸ್ಥೆಯ ಯೋಗ್ಯತೆಯ ಚಿತ್ರಣವನ್ನು ಇನ್ನಷ್ಟು ಹೆಚ್ಚಿಸುವಂತಿರುತ್ತದೆ. ಇನ್ನು ರಿಸಲ್ಟ್ ಬಂದ ದಿನವಂತೂ ಟಾಪ್ ರ್ಯಾಂಕ್ ಬಂದವರ ಫೋಟೊ, ಅವರ ಪಾಲಕರ ಫೋಟೊ, ಅವರು ದಿನಕ್ಕೆ ಎಷ್ಟು ಹೊತ್ತು ಓದುತ್ತಿದ್ದರು, ಆಟ ಆಡುತ್ತಿದ್ದರೋ, ಯೋಗ ಮಾಡುತ್ತಿದ್ದರೋ? ಇವೆಲ್ಲ ಮುಖಪುಟದಲ್ಲಿ ಆ ದಿನದ ಮುಖ್ಯ ಸುದ್ದಿ.

ಈ ಬಾರಿ ಜೆಇಇ ಮೇನ್ಸ್ ಫಲಿತಾಂಶ ಬಂದ ದಿನ ರಾಷ್ಟ್ರೀಯ ಪತ್ರಿಕೆಗಳ ಮೊದಲ ಪುಟ ಮತ್ತು ಕೊನೆಯ ಪುಟದ ಎರಡು ಸುದ್ದಿಗಳು ಗಮನ ಸೆಳೆದವು. ಮೊದಲ ಪುಟದ ಸುದ್ದಿ ಕೋಟಾಕ್ಕೆ ಇನ್ನೊಂದು ಗರಿ ತಂದು ಕೊಟ್ಟ 17ರ ಯುವಕ ಕಲ್ಪಿತ್ ವೀರ್ವಾಲ್ ಅವನದು ಮೊದಲು ಗಮನ ಸೆಳೆಯಿತು. ಆತ ಒಬ್ಬ ದಲಿತನಾಗಿದ್ದು, ತಂದೆ ಕಾಂಪೌಂಡರ್, ತಾಯಿ ಸರ್ಕಾರಿ ಶಾಲೆ ಶಿಕ್ಷಕಿ. ಆತ ಕೋಟಾದ ಅತ್ಯುತ್ತಮ ಬ್ರ್ಯಾಂಚ್ ಆದ ಉದಯಪುರ ಬ್ರ್ಯಾಂಚ್‍ಗೆ ಸೇರಿದವನಾಗಿದ್ದು ಆತ ಪತ್ರಿಕೆಗೆ  ‘ತಾನು 8ನೇ ತರಗತಿಯಿಂದಲೇ ತಯಾರಿ ಆರಂಭಿಸಿದ್ದು, ಅಂತರ್ಜಾಲದಿಂದ ಮಾಹಿತಿ ಸಂಗ್ರಹಿಸುತ್ತಿದ್ದೆ. ದಿನಾಲೂ 7 ತಾಸು ಅಭ್ಯಾಸ ಮಾಡುತ್ತಿದ್ದೆ’ ಎಂದು ತಿಳಿಸಿದ ವರದಿಯಾಗಿದೆ. ಸಾಮಾಜಿಕ ಅಸಮಾನತೆ ತುಂಬಿರುವ ಸಮಾಜದಲ್ಲಿ ಈ ಫಲಿತಾಂಶವನ್ನು ಬೇರೆಯೇ ಅಳತೆಗೋಲಿನಿಂದ ನೋಡಲಾಗಿದ್ದು, ‘ಶಿಕ್ಷಣಕ್ಷೇತ್ರದ ಮೇಲ್ವರ್ಗದ ಪಾರಮ್ಯ, ಏಕಸ್ವಾಮ್ಯಕ್ಕೆ ಇದು ಸವಾಲು’ ಎಂದೆಲ್ಲ ವಿಶ್ಲೇಷಿಸಲಾಗಿದೆ. ಬುದ್ಧಿವಂತಿಕೆಗೆ ಜಾತಿ, ಅಂತಸ್ತು, ಹಣದ ಹಂಗಿಲ್ಲ ಬಿಡಿ.  ಅದು ಮೊದಲಪುಟದ ಸುದ್ದಿಯಾಯ್ತು.

 ಪತ್ರಿಕೆಯ ಹಿಂದಿನ ಪುಟದಲ್ಲಿ ಒಂದು ಸಾಲಿನ ಸುದ್ದಿ, ಕೋಟಾದಲ್ಲೆ ಓದುತ್ತಿದ್ದ ಪಶ್ಚಿಮ ಬಂಗಾಳದ ಅಜಿತ್ ಪ್ರಾಮಾಣಿಕ್ ಎಂಬಾತ ಮೇನ್ಸ್ ಪಾಸಾಗಲಾರದೆ ಆತ್ಮಹತ್ಯೆಗೆ ಶರಣಾಗಿದ್ದು, ಆತನ ತಂದೆ ಶವವನ್ನು ತೆಗೆದುಕೊಂಡು ಹೋಗುವುದಕ್ಕೆ ಬಂದಿರುವ ಒಂದು ಸಾಲಿನ ಸುದ್ದಿ ಕೊನೆಯ ಪುಟಕ್ಕೆ ಸೇರಿದ್ದು, ಶಿಕ್ಷಣ ವ್ಯವಸ್ಥೆಯ ಸೋಲಿನ ಬಗ್ಗೆ ಒಂದಷ್ಟು ಹೇಳುವಂತಿತ್ತು. ಯಶಸ್ಸಿನ ಒಂದಷ್ಟು ಕಥೆಯೊಡನೆ ನಮ್ಮ ಶಿಕ್ಷಣವ್ಯವಸ್ಥೆ ಸೃಷ್ಟಿಸುತ್ತಿರುವ ಹೆಚ್ಚಿನಪ್ರಮಾಣದ ದುರಂತವನ್ನೂ, ಅದರಲ್ಲೂ ವ್ಯಕ್ತಿಗತ ದುರಂತದ ಜೊತೆಯೇ ಸಾಮಾಜಿಕ ದುರಂತವನ್ನೂ ಆ ಸುದ್ದಿ ಸಾರುವಂತಿತ್ತು. ವ್ಯಕ್ತಿಗತ ದುರಂತ ಮತ್ತು ಸಾಮಾಜಿಕ ದುರಂತ ಇವೆರಡೂ ಪ್ರತ್ಯೇಕವಾಗಲು ಸಾಧ್ಯವಿಲ್ಲ.

  ಒಂದು ಪತ್ರಿಕೆಯ ವರದಿಯ ಪ್ರಕಾರ 2011ರಿಂದ 2015ರ ನಡುವಿನ ಅವಧಿಯಲ್ಲಿ ಕೋಟಾ ಪೊಲೀಸ್ ಸ್ಟೇಶನ್‍ನ ಡಾಟಾ ಪ್ರಕಾರ 72 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದವು. ನಮ್ಮಲ್ಲಿನ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಅದಕ್ಕೆ ನೆರವಾಗುವ ಕೋಚಿಂಗ್ ಸಂಸ್ಥೆಗಳು ಯಶಸ್ಸು ಮತ್ತು ವಿಫಲತೆ (ಪಾಸ್ ಅಥವಾ ಫೇಲ್) ಇದನ್ನೇ ಗುರಿಯಾಗಿಟ್ಟುಕೊಂಡ ‘ಉರು ಹೊಡೆಯುವ ಕಲಿಕಾ ಪದ್ಧತಿ’ಯನ್ನು ರೂಪಿಸಿವೆ. ಒಂದರ್ಥದಲ್ಲಿ ಇವು ಶಿಕ್ಷಣ ವ್ಯವಸ್ಥೆಯ ಕಿಲ್ಲಿಂಗ್ ಫೀಲ್ಡ್‍ಗಳಾಗಿವೆ ಎಂದರೂ ತಪ್ಪಲ್ಲ. ಇಂತಹ ಸಂಸ್ಥೆಗಳು ಕೇವಲ ಯಾಂತ್ರಿಕ ಕಲಿಕೆಗೆ ಬೇಕಾದ ವಿಲಕ್ಷಣ, ಅಸಾಮಾನ್ಯ ಬುದ್ದಿವಂತಿಕೆಯನ್ನು ಬೇಡುತ್ತದೆಯೇ ಹೊರತು, ವೈಜ್ಞಾನಿಕ, ತಾಂತ್ರಿಕ, ಸಾಮಾಜಿಕ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ಮೂಲಕ ಸಮಾಜದ ಹಲವಾರು ಸಮಸ್ಯೆಗೆ ಉತ್ತರ ನೀಡಬಲ್ಲ ಸೃಜನಾತ್ಮಕ ಕಲಿಕೆಗೆ ಇಲ್ಲಿ  ಹೆಚ್ಚು ಅವಕಾಶವೇ ದೊರಕುವುದಿಲ್ಲ. ಇಲ್ಲಿ ತನ್ನದೇ ಸಾಮಥ್ರ್ಯದಿಂದ ಇನ್ನೂ ಹೆಚ್ಚು ಸಾಧಿಸಬಹುದು ಎನ್ನುವ ವ್ಯಕ್ತಿಗತ ಅಭಿಪ್ರಾಯದ ಜೊತೆಯಲ್ಲೇ ‘ಸಮಾಜಕ್ಕೆ ಉಪಯೋಗವಾಗುತ್ತದೆ, ವೈಯಕ್ತಿಕವಾಗಿ ಭರವಸೆ ಒದಗಿಸುತ್ತದೆ’ ಎಂದು ನಾವೇನು ಶಿಕ್ಷಣ ವ್ಯವಸ್ಥೆಯ ಬಗ್ಗೆ ನಂಬಿದ್ದೇವೋ, ಆ ನಂಬಿಕೆಯನ್ನೇ ಬುಡಮೇಲು ಮಾಡುತ್ತದೆ. ಇದನ್ನು ನಾವು ಶಿಕ್ಷಣದ ನೀತಿಯ ವಿಫಲತೆ ಎಂದೇಕೆ ಹೇಳಬಾರದು? ಯಾಕೆಂದರ ಇಂತಹ ದುರಂತಗಳಿಂದ ನಮಗೆ ಶಿಕ್ಷಣ ವ್ಯವಸ್ಥೆಯ ಬಗ್ಗೆಯೇ ನಂಬಿಕೆ, ಸಂಶಯ ಮೂಡುವಂತಾಗುತ್ತದೆ. ಈ ಕೋಚಿಂಗ್ ಕೇಂದ್ರಗಳಲ್ಲಿ ಮನುಷ್ಯನ ಸಾಮರ್ಥ್ಯದ ವಿವಿಧ ಬಳಕೆಗಳ ಸಾಧ್ಯತೆಗಳನ್ನೇ ಸಾಯಿಸಲಾಗುತ್ತಿರುತ್ತದೆ. ಪ್ರತಿವರ್ಷ ಕೋಟಾಕ್ಕೆ ಹೋಗುವ ಸಾವಿರಾರು ವಿದ್ಯಾರ್ಥಿಗಳು ಅಂತಿಮವಾಗಿ ಉತ್ತಮ ಭರವಸೆಯನ್ನೇ ಪಡೆದಿರುತ್ತಾರೆ. ಅಜಿತ್ ಪ್ರಾಮಾಣಿಕ್‍ರಂತವರ ಸಾವು ಆ ಕುಟುಂಬಕ್ಕೆ ವೈಯಕ್ತಿಕ ದುರಂತವಾಗಿರಬಹುದು, ಅದೇ ವೇಳೆಗೆ ಇದೊಂದು ಸಮಾಜದ ಸಾಮಾಜಿಕ ಆತ್ಮಹತ್ಯೆಯೂ ಆಗಿರುತ್ತದೆ. ಅದು ನಾವು ಶಿಕ್ಷಣ ವ್ಯವಸ್ಥೆಯ ಬಗ್ಗೆ ಇಟ್ಟ ಕಲ್ಪನೆಯ ಸಾವೂ ಆಗಿರುತ್ತದೆ. ಆತನ ಸಾವಿನ ಹಿಂದೆ ನಾವು ಅಂಗೀಕರಿಸಿದ ಶಿಕ್ಷಣದ ಯಶಸ್ಸಿನ ಕಲ್ಪನೆಯ ಬಗ್ಗೆಯೇ ಸಂಶಯ ಮೂಡುವದನ್ನು ಅಲ್ಲಗಳೆಯಲಾಗದು. ಒಂದೇ ಶಿಕ್ಷಣ ವ್ಯವಸ್ಥೆಯಲ್ಲಿ ಒಬ್ಬ ಯಶಸ್ಸಿಗೆ ಸಾಗುತ್ತಾನೆ, ಇನ್ನೊಬ್ಬ ಸಾವಿನ ಹಾದಿ ಹಿಡಿಯುತ್ತಾನೆ ಎಂದರೆ ನಾವದನ್ನು ಅಷ್ಟು ಸುಲಭವಾಗಿ ಸ್ವೀಕರಿಸಲಾಗದು. ಶಿಕ್ಷಣ ನೀತಿಯಲ್ಲಿನ ದೋಷವೂ ಆಗಿರಬಹುದಲ್ಲವೇ?

ಆತ್ಮಹತ್ಯೆ ವೈಯಕ್ತಿಕ ಹಾಗೂ ಸಾಮಾಜಿಕವಾಗಿರುವುದಕ್ಕೆ ಹಿಂದೆ ವಿವಿಧ ನಟರಿದ್ದಾರೆ. ಪರೀಕ್ಷೆ ಎನ್ನುವ ಉದ್ದಿಮೆಯಲ್ಲಿ ಬಂಡವಾಳ ತೊಡಗಿಸಿರುವ ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪನಿಗಳಿದ್ದು, ಅದಕ್ಕೆ ರಾಜ್ಯಗಳು ಮೈದಾನವನ್ನು ಸಿದ್ದಪಡಿಸಿ, ನಿರ್ವಹಣೆ ಮಾಡುತ್ತಿರುತ್ತವೆ. ಖಾಸಗಿ ಲಾಭ ಹಾಗೂ ಸಾರ್ವಜನಿಕ ನಿರಾಸಕ್ತಿ ಇವೆರಡರ ನಡುವೆ ಇರುವ ತರುಣ ಪೀಳಿಗೆ ತಮಗೆ ಹೊಂದದ ಯಾಂತ್ರಿಕ ಕಲಿಕೆಯಿಂದಾಗಿ ಸದಾಕಾಲ ವಿಫಲತೆಯ ಮಾರ್ಕ್ ಹಾಕಿಕೊಂಡೇ ಇರಬೇಕಾಗಿದೆ. ಅಪರೂಪವಾಗಿ ಕೆಲವು ಖಾಸಗಿ ಬಂಡವಾಳ ಹೂಡಿಕೆಯು ಸಮಾಜದ ಮುಂದಿನ ಒಳಿತಿಗಾಗಿ ಮಾಡಲ್ಪಟ್ಟರೂ, ರಾಜ್ಯದ ಶೈಕ್ಷಣಿಕ ನೀತಿಯು ಅದನ್ನು ಗುರುತಿಸಲು ವಿಫಲವಾದಲ್ಲಿ, ಆಗ ನಮ್ಮ ಶಿಕ್ಷಣ ಕ್ಷೇತ್ರ ಪ್ರಪಾತದಲ್ಲಿದೆ ಎಂದೇ ಅರ್ಥೈಸಬೇಕಾಗುತ್ತದೆ. ರಾಜ್ಯ ಶಿಕ್ಷಣ ವ್ಯವಸ್ಥೆಯು ಅನ್ಯ ಉದ್ದೇಶವಿಟ್ಟು ಶಿಕ್ಷಣಕ್ಕೆ ಇಷ್ಟು ಸಂಕುಚಿತ ವ್ಯಾಖ್ಯೆ ನೀಡಿದರೆ, ರಿಸರ್ಚ ಸಂಸ್ಥೆಗಳೆಂದು ಕರೆಸಿಕೊಳ್ಳುವ ನಮ್ಮ ಯೂನಿವರ್ಸಿಟಿಗಳು ಸಾಮಾಜಿಕ ಸಮಸ್ಯೆಗೆ ಉತ್ತರಿಸಬಲ್ಲ ಗುಣಾತ್ಮಕ ಸಂಶೋಧನೆ ಹೊರತರದಿದ್ದರೆ ಅದರಲ್ಲಿ ಯಾವ ಅಚ್ಚರಿಯೂ ಆಗುವುದಿಲ್ಲ. ಸೃಜನಾತ್ಮಕ ಕಲಿಕೆಯೇ ಇಲ್ಲದ ಕಡೆಯಿಂದ ನಾವು ಗುಣಾತ್ಮಕ ಸಂಶೋಧನೆ ನಿರೀಕ್ಷಿಸುವುದಾದರೂ ಹೇಗೆ?

ಕೋಚಿಂಗ್ ಕ್ಲಾಸ್‍ಗಳು ಮತ್ತು ಪರೀಕ್ಷೆ ಇವೆರಡನ್ನೂ ಶಿಕ್ಷಣದ ಕುಚೋದ್ಯದ ಅಣಕವೆಂದೇ ವ್ಯಾಖ್ಯಾನಿಸಲಾಗುತ್ತದೆ. ಇವು ನಿಜವಾದ ಶಿಕ್ಷಣವನ್ನು ನೀಡುವುದಿಲ್ಲವೆಂದೇ ಹೇಳಲಾಗುತ್ತದೆ. ದುರದೃಷ್ಟವಶಾತ್ ನಿಜವಾದ ಶಿಕ್ಷಣ ಹಾಗೂ  ಅದನ್ನು ಪ್ರತಿನಿಧಿಸುವ  ಕ್ಯಾರಿಕೇಚರ್ ಇವೆರಡರ ನಡುವೆ ತುಂಬಾ ಅಂತರವಿಲ್ಲ. ಶಿಕ್ಷಣದ ತಿರುಚಿದ ರೂಪದಿಂದ ಅದರ ನಿಜರೂಪವನ್ನು ಪ್ರತ್ಯೇಕಿಸುವುದೇ ಕಠಿಣವಾಗಿದೆ. ಪತ್ರಿಕೆಗಳು ಅಜಿತ್ ಪ್ರಾಮಾಣಿಕ್ ಆತ್ಮಹತ್ಯೆಯನ್ನು ತೀರಾ ಸಹಜವಾದ ಸಂಗತಿ ಎಂಬಂತೆ ವರದಿ ಮಾಡಿದ ರೀತಿಯಿಂದಲೇ ನಮ್ಮ ಆಲೋಚನೆ ವಿಕಾರತೆಗೆ ತಿರುಗಿದ ಮಟ್ಟವನ್ನು ನಾವು ಅಳೆಯಬಹುದಾಗಿದೆ.  ಒಂದು ಸಾಧನೆ ಮುಖಪುಟದಲ್ಲಿ ನಮ್ಮ ಗಮನ ಸೆಳೆಯುವಂತಿದ್ದರೆ, ಹಲವು ವಿಫಲತೆಗಳು ಅದೇ ಪತ್ರಿಕೆಯ ಇನ್ನೊಂದಿಷ್ಟು ಪುಟದಾಚೆ ಒಂದು ಸಾಲಿನಲ್ಲಿ ಕಳೆದು ಹೋಗಿರುತ್ತದೆ.

  ಮನುಷ್ಯನ ಸಾಮರ್ಥ್ಯವನ್ನೇ ತಿರಸ್ಕರಿಸಿದಂತಾಗಿ, ರಕ್ತ ಕಾಣಿಸಿಕೊಳ್ಳುತ್ತದೆ. ಅದೇ ರಕ್ತ ಸಂಪೂರ್ಣ ದೇಹದಿಂದ ತೊಟ್ಟಿಕ್ಕುತ್ತದೆ.

ಮೂಲ ಲೇಖನ : ಸಂಜಯ್ ಶ್ರೀವಾಸ್ತವ್

ಅನುವಾದ : ಸರೋಜಾ ಪ್ರಭಾಕರ್

pg.saroja@gmail.com

(ಕೃಪೆ : scroll.in)

Facebook ಕಾಮೆಂಟ್ಸ್

ಲೇಖಕರ ಕುರಿತು

Saroja Prabhakar

‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!