ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಮೈಸೂರು ಸಮೀಪ ಮಾವಿನ ಮರದ ಫಸಲಿನ ರಕ್ಷಣೆಗಾಗಿ ಬಲೆ ಹಾಕಿದ್ದರಿಂದ ನೂರಾರು ಗಿಣಿಗಳು ಸತ್ತಿರುವ ವರದಿ ಬಂದಿತ್ತು. ಆ ವರದಿಗೆ ಸ್ಪಂದಿಸಿದ ಅನೇಕರು, ರೈತರು ಭಯಂಕರ ಕ್ರೂರಿಗಳು, ಕರುಣೆಯೇ ಇಲ್ಲದವರು, ಬಲೆ ಹಾಕಿದ ರೈತನಿಗೆ ನೇಣು ಹಾಕಬೇಕು ಎಂಬಿತ್ಯಾದಿ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ! ಅವರುಗಳ ಪಕ್ಷಿ ಕಾಳಜಿ, ಪರಿಸರ ಪ್ರೇಮ ಮೆಚ್ಚುವಂತದ್ದೇ, ಆದರೆ ಆ ರೈತನ ಮೇಲೆ ಬೆರಳು ತೋರುವ ಮುನ್ನ ಹಕ್ಕಿಗಳು ಎಷ್ಟು ಆಹಾರ ತಿನ್ನುತ್ತವೆ, ಅದಕ್ಕೆ ಪರಿಹಾರ ಏನು? ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕೃಷಿಕನನ್ನು ಬೆಟ್ಟು ಮಾಡಿ ತೋರಲು ನಾವೆಷ್ಟು ಅರ್ಹರು ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಿದೆ.
ಈ ಎಲ್ಲಾ ಪ್ರಶ್ನೋತ್ತರಗಳನ್ನು ನನ್ನ ಮೊದಲಿನ ಕೆಲ ಲೇಖನಗಳಲ್ಲಿ ಪ್ರಸ್ತಾಪಿಸಿದ್ದೇನೆ. ಓದಿ: (link all these articles)
ಕೃಷಿಕರೇಕೆ ಪಕ್ಷಿಗಳನ್ನು ಗಮನಿಸಬೇಕು?
ಆದರೂ ಈ ಹೊತ್ತಿಗೆ ಮತ್ತೆ ಇದು ಅವಶ್ಯಕವೆಂದು ಹೀಗೊಂದು ವಿಶ್ಲೇಷಣೆ:
ಭಾರತದಲ್ಲಿ ಇದುವರೆಗೆ 1400 ಪ್ರಭೇದದ ಹಕ್ಕಿಗಳು ಲಭ್ಯವಾಗಿವೆ. ಅದರಲ್ಲಿ 80% ಹಕ್ಕಿಗಳು ಕೀಟಾಹಾರಿಗಳು / ಮಾಂಸಾಹಾರಿಗಳು. ಇನ್ನು ಮಿಕ್ಕ 20% ಹಕ್ಕಿಗಳು ಮಾತ್ರ ಸಸ್ಯಾಹಾರಿಗಳು. 80% ಹಕ್ಕಿಗಳ ಬಗೆಗೆ ಯಾವ ರೈತನ ತಕರಾರಿಲ್ಲ. ಆದರೆ ಈ 20 % ಇರುವ ಹಕ್ಕಿಗಳು ಸಂಖ್ಯೆಯಲ್ಲಿ 80% ಹಕ್ಕಿಗಳನ್ನು ಮೀರಿಸುತ್ತವೆ. ಇದರಲ್ಲಿ ಪ್ರಮುಖವಾದುವಗಳೆಂದರೆ ಗಿಳಿ, ಪಾರಿವಾಳ, ನವಿಲು ಮತ್ತು ಮುನಿಯಾಗಳು. ತೋಟಗಾರಿಕಾ ಇಲಾಖೆಯೇ ಇವುಗಳನ್ನು pest ಎಂದು ಘೋಷಿಸಿದೆ. ಈ ನಾಲ್ಕೂ ಪ್ರಭೇದಗಳಲ್ಲಿ ಮತ್ತೆ ಉಪಪ್ರಭೇದಗಳಿವೆ (ನವಿಲನ್ನು ಬಿಟ್ಟು). ಗಿಳಿಗಳ ಹಿಂಡು ಏನಿದ್ದರೂ ಅದು 100-200ರಲ್ಲಿರುತ್ತವೆ. ಇನ್ನು ಮುನಿಯಾಗಳೋ 500-1000 ಸಂಖ್ಯೆಯಲ್ಲಿ.
ಸಂಖ್ಯೆ ದೃಷ್ಟಿಯಲ್ಲಿ ನವಿಲು ಹತ್ತಿಪ್ಪತ್ತು, ಆದರೆ ಒಂದೊಂದು ನವಿಲು 50-100 ಮುನಿಯಾಗಳಿಗೆ ಸಮ. ಗಿಳಿಗಳೋ ಅವು ಹಾರುವ ಮಂಗಗಳು! ತಮಗೆಷ್ಟು ಬೇಕೋ ಅಷ್ಟು ತಿನ್ನುವ ಜಾಯಮಾನ ಗಿಳಿಗಳದ್ದಲ್ಲ. ನಮ್ಮ ತೋಟದಲ್ಲಿನ ಕಮ್ರಾಕ್ಷಿ ಮರ ವರ್ಷಕ್ಕೆ ಏನಿಲ್ಲವೆಂದರೂ ಸುಮಾರು ಒಂದು ಲಕ್ಷ ಹಣ್ಣು ಬಿಡುತ್ತದೆ. ಕೇವಲ ಒಂದೇ ವಾರದಲ್ಲಿ ಇಷ್ಟೂ ಹಣ್ಣುಗಳನ್ನು , ಅಲ್ಲ ಅಲ್ಲ ಹಣ್ಣಾಗಲೂ ಪುರುಸೊತ್ತು ಬಿಡದೆ ಅಷ್ಟೂ ಕಾಯಿಗಳನ್ನು ಕೇವಲ ನೂರು ಗಿಳಿಗಳು ತಿಂದು ಮುಗಿಸುತ್ತವೆ. ತಿನ್ನುವುದಕ್ಕಿಂತ ಮೂರು ಪಟ್ಟು ಕೆಳಗೆ ಬೀಳಿಸುತ್ತವೆ. ಎಲ್ಲರೂ ಹೇಳುವ ಪರಿಸರ ಸ್ನೇಹಿ ಉಪಾಯವಾದ ಕಪ್ಪು ಬಟ್ಟೆ ಕಟ್ಟುವುದು, ಗಂಟೆ ಬಡಿಯುವುದು ಎಲ್ಲಾ ಮಾಡಿದರೂ ಒಂದೇ ಒಂದು ಕಾಯಿ ಉಳಿಸಿಕೊಳ್ಳಲಾಗುವುದಿಲ್ಲ.
ಒಂದು ಹಣ್ಣಿಗೆ ಒಂದು ರೂಪಾಯಿ ಅಂತ ತೆಗೆದುಕೊಂಡರೆ ಒಂದು ಲಕ್ಷ ರೂಪಾಯಿ ನಷ್ಟ. ನಮ್ಮ ಇಷ್ಟದಂತೆ ಲೆಕ್ಕವನ್ನು ಎಷ್ಟಾದರೂ ಹಾಕಬಹುದು. ನಮ್ಮ ತೋಟದಲ್ಲಿರುವ ಬಹುತೇಕ ಸಪೋಟ ಹಣ್ಣು ಹಗಲಲ್ಲಿ ಪಿಕಳಾರಗಳಿಗೆ (Bulbul) ಇರುಳಲ್ಲಿ ಸಾವಿರಗಟ್ಟಲೆ ಬರುವ ಬಾವಲಿಗಳಿಗೆ. ಇದರಲ್ಲಾಗುವ ನಷ್ಟ ಅಂದಾಜು 3 ಲಕ್ಷ ರೂಪಾಯಿ. ಇದೀಗ ಮಾವಿನ ಸಮಯ. ಎರಡೆರಡು ಆಲಿಕಲ್ಲು ಮಳೆಬಿದ್ದಿರುವುದರಿಂದ ಮಾವಿನ ಕಾಯಿ ಹಣ್ಣಾಗುವ ಮುಂಚೆಯೇ ಕೊಳೆಯುತ್ತಿವೆ. ಅಲ್ಲಲ್ಲಿ ಉಳಿದದ್ದು ಗಿಳಿಗಳ ಪಾಲು, ಮತ್ತೆ ಒಂದು ಲಕ್ಷ ನಷ್ಟ. ಇನ್ನು ದಾಳಿಂಬೆ ವಿಚಾರ ಬಿಡಿ. ಅದರ ಮೇಲೆ ನಮಗೆ ಯಾವುದೇ ಹಕ್ಕು ಉಳಿದಿಲ್ಲ. ಅಜೀರ್ಣ ಆದರೆ ಉಪಯೋಗಿಸಿ ಎಂದು ಹಕ್ಕಿಗಳು ಉದಾರವಾಗಿ ಬಿಟ್ಟ ಸಿಪ್ಪೆ ಮಾತ್ರ ನಮ್ಮ ಪಾಲಿಗೆ. 50 ದಾಳಿಂಬೆ ಗಿಡದಲ್ಲಿ ಆಗುವ ನಷ್ಟದ ಲೆಕ್ಕ ಹಾಕುವ ಭಾರ ನಿಮ್ಮ ಪಾಲಿಗೆ. ಈ ವರ್ಷ ಬೆಳೆದ ಅರ್ಧ ಎಕರೆ ನವಣೆಯಲ್ಲಿ ಒಂದು ಕಾಳೂ ನಮಗಿಲ್ಲ. 5 ಗುಂಟೆ ಪ್ರದೇಶದ ರಾಗಿ ತಿಂದ ನವಿಲಿಗೇನು ಗೊತ್ತು ನಮ್ಮ ಶ್ರಮದ ಬೆಲೆ? ಇಷ್ಟಲ್ಲದೆ ಪ್ರತೀ ವರ್ಷ ಏನಿಲ್ಲವೆಂದರೂ 20,000 ತೆಂಗಿನ ಕಾಯಿಗಳನ್ನು ಮಂಗಗಳಿಗಾಗಿ ಮೀಸಲಿಡುತ್ತಿದ್ದೇವೆ, ಜೊತೆಗೆ ಇಲಿಗಳ ಪಾಲು 10,000 ಅಂದಾಜು. ಈಗಿನ ಬೆಲೆಯಲ್ಲಿ 30,000*15=4,50,000 ರೂಪಾಯಿ ನಷ್ಟ.
ನಮ್ಮ ತೋಟದ ಬೆಳೆಗಳ ಪಟ್ಟಿ ನಾನಿಲ್ಲಿ ಹಾಕಿದರೆ ಪುಟಗಳು ಸಾಲದು. ಇರಲಿ, ಒಟ್ಟು ಲೆಕ್ಕ ಹಾಕಿದರೆ 9,50,000 ರೂಪಾಯಿ ನಷ್ಟ. ಕೃಷಿ ಬಿಟ್ಟು ಇನ್ನುಳಿದ ಯಾವುದಾದರೂ ಕ್ಷೇತ್ರದಲ್ಲಿ ಇಷ್ಟು ನಷ್ಟಗಳನ್ನು ಸಹಿಸಿಯಾರೇ? ಸಹಿಸುತ್ತಿದ್ದರೆ B.B.M, M.B.A, M.H.A ಅಂಥಾ ಕೋರ್ಸುಗಳು ಇರುತ್ತಿತ್ತೇ? ವರ್ಷಂಪ್ರತಿ ನಿಗದಿಯಾದಂತೆ ಸಂಬಳ ಏರುತ್ತಿದ್ದರೂ, ಸಾಲದೆಂದೆನಿಸಿದಾಗ ಸಂಘಟನೆ ಕಟ್ಟಿ ಸಂಬಳವೇರುವಿಕೆಯನ್ನು ಇಮ್ಮುಡಿಸಲು ಸಾಧ್ಯವಿರುವಾಗ, ಇದನ್ನೆಲ್ಲಾ ನೋಡುವ ರೈತ ಮಾತ್ರ ಪ್ರಕೃತಿ ಪರವಾಗಿ ತನ್ನೆಲ್ಲಾ ನಷ್ಟಗಳನ್ನು ಪರಿಹರಿಸುವ ಪ್ರಯತ್ನವನ್ನೂ ಮಾಡದೆ ಋಜುತನವನ್ನು ಸಾಧಿಸಬೇಕೆಂಬುದು ಎತ್ತಣ ನ್ಯಾಯ?
ನಾವಾದರೂ ನಮ್ಮ ತೋಟದಲ್ಲಿ ಲಕ್ಷಗಟ್ಟಲೆ ನಷ್ಟವಾದರೂ ಕೃಷಿಯಲ್ಲೇ ಖುಷಿ ಕಾಣುವುದು ಸಾಧ್ಯವಾಗಿದೆ. 220 ಪ್ರಭೇದದ ಹಕ್ಕಿಗಳಿಗೆ (ಕರ್ನಾಟಕದ 3/4 ಪಾಲು) ನಮ್ಮ ತೋಟವು ಆಶ್ರಯವಾಗಿದೆ. ಅದೇ ಕೃಷಿಯಿಂದ ನಾನು ವೈದ್ಯನಾಗಿದ್ದೇನೆ, ಮತ್ತು ಕೃಷಿಯೊಂದಿಗೇ ಇದ್ದೇನೆ. ಆದರೆ ಈ ಸ್ಥಿತಿ ಈಗ ಎಷ್ಟು ಮಂದಿಗಿದೆ? S.S.L.C ತೇರ್ಗಡೆ ಎಂದರೆ ಕೃಷಿಯಿಂದ ಬಿಡುಗಡೆ ಎಂಬ ಧ್ಯೇಯ ವಾಕ್ಯ ನಮ್ಮ ಹಳ್ಳಿ ಯುವಕರ ಮುಂದಿದೆ. ಅದನ್ನು ಇದನ್ನು ಎಲ್ಲಾ ಕೊಂದು ಯಾಕೆ ಪಾಪ ಕಟ್ಟಿಕೊಳ್ಳುವುದೆಂದು, ಪೇಟೆಯ ಪ್ರಾಣಿ ಪಕ್ಷಿ ಪ್ರಿಯರ ಕೆಂಗಣ್ಣಿಗ್ಯಾಕೆ ಗುರಿಯಾಗುವುದೆಂದು ಅವರೆಲ್ಲಾ ಸಭ್ಯವಾಗಿ ಪೇಟೆ ಸೇರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಹಳ್ಳಿಗಳು ಖಾಲಿಯಾಗುತ್ತಿವೆ. ಕೃಷಿ ಭೂಮಿಗಳು ಸೈಟ್’ಗಳಾಗುತ್ತಿವೆ.
ಹುಡುಕಿದರೂ ದೊಡ್ಡ ಮರಗಳು ಸಿಗದಂತಾಗುತ್ತಿವೆ. ಇದರಿಂದಾಗಿ ಕೃಷಿಯಲ್ಲೇ ಬದುಕು ಸಾಗಿಸುವವರಿಗೆ ಹಕ್ಕಿಗಳ ಉಪಟಳ ಮಿತಿ ಮೀರಿದೆ. ಹಂಚಿ ಹೋಗುತ್ತಿದ್ದ ಹಕ್ಕಿಗಳು, ಕೋತಿಗಳು ಇದೀಗ ಕೇವಲ ನಮ್ಮಂಥವರ ತೋಟಗಳಿಗೆ ಮಾತ್ರ ಬರುತ್ತಿವೆ. ಇನ್ನು ಪೇಟೆ ಸೇರಿದ ಮಂದಿಯಾದರೂ 30-40ರ ಮನೆ ಕಟ್ಟಿ ಬದುಕು ಸಾಗಿಸುತ್ತಿದ್ದವರು ರಕ್ಷಣೆ (safety) ಸಾಲದೆಂದು ದೊಡ್ಡ ದೊಡ್ಡ flat, apartmentಗಳ ಮೊರೆ ಹೋಗಿದ್ದಾರೆ. ರಸ್ತೆ ಬದಿಯಲ್ಲಿ ತರಕಾರಿ ಖರೀದಿಸುತ್ತಿದ್ದ ಮಂದಿ ಮಾಲ್‍ಗಳ ಮೊರೆ ಹೋಗಿದ್ದಾರೆ. ಇದೀಗ ಮಾಲ್‍ಗಳು ಸಾಲದೆಂದು ಆನ್‍ಲೈನ್ ಮೆರೆಯುತ್ತಿದೆ. ಹೀಗೆ ನಮ್ಮ ಸುತ್ತ ರಕ್ಷಣೆಯ ಬಲೆಗಳು ನೂರಾರು. ಬಲೆಗೆ ಗಿಳಿ ಎಂದೇನು? ಸಮಸ್ತ ಪ್ರಕೃತಿಯೇ ಬಲಿಯಾಗಿದೆಯಲ್ಲಾ? ವಿಶ್ವ, ನೆಲ, ಜಲ, ಅನಿಲ, ಆಕಾಶಗಳ ರಕ್ಷಣೆ ಮಾಡಿ ಮಾಡಿ ಎಂದು ಕರೆಕೊಡಲು ಹತ್ತಾರು ವಿಶ್ವದಿನಗಳು ನಿಗದಿಯಾಗಿದೆಯಲ್ಲಾ? ಪರಿಸ್ಥಿತಿ ಹೀಗಿರುವಾಗ ಕೇವಲ ಆ ರೈತ ತನ್ನ ಮಾವಿನ ಬೆಳೆಯ ರಕ್ಷಣೆಗೆ ಹಾಕಿದ ಬಲೆಯನ್ನು ಕತ್ತರಿಸಿದರೆ ಸಾಕೆ? ಸಾಧ್ಯವೇ? ನಾವುಗಳು ಹೆಣೆದಿರುವ ಮತ್ತು ಹೆಣೆಯುತ್ತಲೇ ಇರುವ ಬಲೆಯನ್ನು ಕತ್ತರಿಸುವುದು ಯಾವಾಗ?
ಬುದ್ಧಿವಂತರು, ಓದಿ ಡಿಗ್ರೀ ಮೇಲೆ ಡಿಗ್ರೀ ಸಂಪಾದಿಸಿದವರು, ನೂರೊಂದು ಬಲೆ ಬೀಸಿದವರು, ಬಡವ ಬೀಸಿದ ಕೃಷಿ ಬಲೆಯನ್ನು ಮಾತ್ರ ಬೊಟ್ಟು ಮಾಡಿ ತೋರಿಸಿದರೆ ಹೇಗೆ? ಎಂದೂ ಮಣ್ಣು ಮುಟ್ಟದ ಮಂದಿ ಕೃಷಿ ಸಲಹೆಗಳನ್ನು ಕೊಡುತ್ತಿರಲು, ಅಧಿಕ ಇಳುವರಿ ತೆಗೆಯುವುದೇ ವೈಜ್ಞಾನಿಕ ಎಂದು ಓದಿದವರು ಹೇಳುತ್ತಿರಲು, ರೈತರು ಅದನ್ನು ನಂಬಿ ನಡೆಯುತ್ತಿರಲು, ಇಂತು ನಾಲ್ಕಾರು ದಶಕಗಳುರುಳಿರಲು, ಇಂಥಾ ಅಧಿಕ ಇಳುವರಿಯ ಮೇಲೆ ರೈತನಿಗಿಂತ ಹೆಚ್ಚಾಗಿ ಪೇಟೆಯ ಬದುಕು ನಿಂತಿರಲು, ರೈತನಿಂದು ಅಸಹಾಯಕ. ಗಿಳಿಗೆ ಬಲೆ ಹಾಕಿ ಸಾಯಿಸುವುದು ನಮ್ಮ ಕಣ್ಣಿಗೆ ಕಾಣಿಸುತ್ತಿದೆ. ಆದರೆ ಇಂದು ಕೃಷಿಯ ಪ್ರತಿ ಹಂತಗಳಲ್ಲಿ ಬಳಸುವ ರಾಸಾಯನಿಕಗಳೆಂಬ ಬಲೆ(ಜ್ವಾಲೆ) ನಮ್ಮ ಕಣ್ಣಿಗೆ ಬೀಳುವುದಿಲ್ಲ. ಪರಿಣಾಮವಾಗಿ ಜೀವ ಸರಪಣ ದುರ್ಬಲ.ಒಂದನ್ನ ಸಂಸ್ಕೃತಿ(Monoculture)ಗೆ ಎಲ್ಲರ ಬೆಂಬಲ. ಮತ್ತೆ ಮತ್ತೆ ತೋಟಗಳಲ್ಲಿ ಇರುವ/ಬರುವ ಎಲ್ಲಾ ಗಿಡಮರಗಳನ್ನು ನುಣ್ಣಗೆ ಬೋಳಿಸುವ ಪರಿಪಾಠ ಗಿಳಿ ಹನನಕ್ಕಿಂತ ಸಾವಿರ ಪಟ್ಟು ಭಯಂಕರ. ಅಥವಾ ಈ ಭಯಂಕರದ ಅನಂತರ ಗಿಳಿ ಹನನದ ಪ್ರಯತ್ನ ಅನಿವಾರ್ಯವೆಂಬ ಮಟ್ಟಕ್ಕೆ ಬಂದಿರುವುದು.
ಬೆಂಗಳೂರು ಮೈಸೂರನ್ನು ಅಂಟಿಸಿ ಆಗಿದೆ. ಅಭಿವೃದ್ಧಿಯೆಂದರೆ ಕಾರು, ಬೈಕು, ಮೊಬೈಲು, ಇಂಟರ್‍ನೆಟ್ ಎಂದು ನಂಬಿಸಿ ಆಗಿದೆ. ರೈತರಿಗೆ ಈ ಅಭಿವೃದ್ಧಿಯ ರಂಗು ಕಾಣಿಸುತ್ತದೆಯೇ ಹೊರತು ಅಲ್ಲಿ ಬಲೆಗೆ ಬೀಳುವ ಗಿಳಿಗಳಲ್ಲ! ದುಡ್ಡೇ ದೊಡ್ಡಪ್ಪ ಎಂದು ಇಡೀ ಜಗತ್ತು ನಂಬಿರುವಾಗ ರೈತ ಅದರಿಂದ ಹೊರತಾಗುವುದಾದರೂ ಎಂತು?
ಹಾಗಾದರೇನು ಪರಿಹಾರ?
ಯಾವುದೇ ಗಂಟೆ, ಜಾಗಟೆ, ಟಾರ್ಚ್, ಕಪ್ಪು ಬಟ್ಟೆಗಳಲ್ಲ. ರಾತ್ರಿ ಹಗಲೆನ್ನದೆ ದಿನದೆಲ್ಲ ಹೊತ್ತಿನಲ್ಲೂ ಬರುವ ಒಂದಿಲ್ಲೊಂದು ವೈರಿಗಳನ್ನಟ್ಟುವ ಹಟ ಸೇನೆ ಕಟ್ಟಲು ರೈತನಿಗೆಂದೂ ಸಾಧ್ಯವಾಗುವುದಿಲ್ಲ. ಅಷ್ಟು ಮಾತ್ರ ಅಲ್ಲ. ಅಲ್ಲೋ ಇಲ್ಲೋ ಹರಸಾಹಸ ಮಾಡಿ ರೈತ ಬಲೆ ಹಾಕಿದರೆ, ಅಲ್ಲೊಂದಿಷ್ಟು ಗಿಳಿ ಸತ್ತರೆ, ಅದರಿಂದ ಪರಿಸರ ಅಸಮತೋಲನಗೊಳ್ಳಲು ಇನ್ನು ಏನೂ ಉಳಿದಿಲ್ಲ. ಹಳ್ಳಿಯಿಂದ ದಿಲ್ಲಿಗೆ ಹೋಗುವ ಧಾವಂತ ಕಮ್ಮಿಯಾಗದೆ ಪರಿಹಾರ ಸಾಧ್ಯವಿಲ್ಲ. ನಾವೆಲ್ಲ ನೈದಿರುವ ರಾಶಿ ಬಲೆಗಳನ್ನು ಒಂದೊಂದಾಗಿ ಕತ್ತರಿಸದೆ ಬೇರೆ ಗತಿ ಇಲ್ಲ.
ಹಂತ ಹಂತವಾಗಿ ನಮ್ಮ ಅಗತ್ಯಗಳನ್ನು ಕಮ್ಮಿ ಮಾಡುವುದು, ವಾರಕೊಮ್ಮೆಯಾದರೂ ಮಣ್ಣಿನ ಸಂಪರ್ಕ ಮಾಡುವುದು, ಸ್ವಂತ ಜಮೀನಿರುವವರು ಮರಳಿ ಭೂಮಿಗೆ ಹಿಂತಿರುಗುವುದು, ಅಧಿಕ ಧನವಿರುವವರು ಜಮೀನು ಖರೀದಿಸಿ ಹಸನು ಮಾಡುವುದು. ವೃಕ್ಷಾಧಾರಿತ ಕೃಷಿಯನ್ನು ಮಾಡುವುದು, ಗಿಳಿಯ ಹಸುರನ್ನು ಉಳಿಸಲು ಕಾರಣವಾದೀತು.
ಜಮೀನು ಖರೀದಿಸಲು ಶಕ್ತರಾಗದವರು ಮತ್ತದೇ ಪಾರ್ಕಿನಲ್ಲಿ ಸುತ್ತುವ ಬದಲು, ಮಾಲ್‍ಗಳಲ್ಲಿ ಅಡ್ಡಾಡುವ ಬದಲು ತಮ್ಮ ಸಮೀಪವಿರುವ ತೋಟಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಚಟುವಟಿಕೆಗಳಿಗೆ ಸಹಕರಿಸುವುದರಿಂದ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಪ್ರೋತ್ಸಾಹಿಸುವುದರಿಂದ ಉಪಯೋಗವಾದೀತು. ಪ್ರಕೃತಿಯ ವೈಶಾಲ್ಯದಲ್ಲಿ ನಾವು ಬೇಡವೆಂದರೂ ಬೆಳೆಯುವ ಕಳೆಗಳಲ್ಲಿರುವ ಆಹಾರ, ಔಷಧಿಗಳನ್ನು ಗುರುತಿಸುವ, ಗೌರವಿಸುವ, ಬಳಸುವ ಪ್ರಯತ್ನ ನಿಶ್ಚಯವಾಗಿ ಗಿಣ -ಬಲೆ ಸಮಸ್ಯೆಗೆ ಪರಿಹಾರ ಕೊಟ್ಟೀತು. ಹಣ್ಣು ತರಕಾರಿಗಳಿಗೆ ವಿಷ ಸಿಂಪಡನೆ ಬೇಡ, ಹುಳ ಬಿದ್ದರೂ ನಾವದನ್ನು ಖರೀದಿಸುತ್ತೇವೆ ಎಂಬ ಮನಃಸ್ಥಿತಿ ಬೆಳಸದೇ ಹೋದರೆ ಕಾಣುವ ಮತ್ತು ಕಾಣದ ಬಲೆಗಳನ್ನು ಹಾಕದೇ ರೈತನಿಗೆ ಬೇರೆ ಉಪಾಯ ಉಳಿಯುವುದಿಲ್ಲ. ಬರಿದು ವೇದನೆ ಮತ್ತು ಭೋಧನೆಗಳಿಂದೇನೂ ಆಗುವುದಿಲ್ಲ.
ಕಟುಸತ್ಯ: ವಾಸ್ತವವೇನೆಂದರೆ ಗಿಣಿ-ಬಲೆಯನ್ನು ವಿರೋಧಿಸುವವರ ಆ ಬರಹಗಳಿಂದಲೂ ಏನೂ ಆಗುವುದಿಲ್ಲ, ನಾನಿಂತು ವಿಮರ್ಶಿಸುವುದರಿಂದಲೂ ಏನೂ ಆಗುವುದಿಲ್ಲ. ವಿಷಯವಿದು ಗಂಭೀರ. ಅದೇ ಆ ಗಿಣಿಗಳಂತೆ ಅಂತರ್ಜಾಲದೊಳಗೆ ನಾವೆಲ್ಲ ಸಿಲುಕಿರಲು ಹಾರುವುದೇನು? ಹಾಡುವುದೇನು?
ಚಿತ್ರ: ಡಾ.ಅಭಿಜಿತ್ ಎ.ಪಿ.ಸಿ, ವಿಜಯಲಕ್ಷ್ಮಿ ರಾವ್
Facebook ಕಾಮೆಂಟ್ಸ್