ಪರಿಸರದ ನಾಡಿ ಬಾನಾಡಿ

ಕೃಷಿಕರೇಕೆ ಪಕ್ಷಿಗಳನ್ನು ಗಮನಿಸಬೇಕು?

ಆರು ತಿಂಗಳ ಹಿಂದೆ ನಾನು ನಮ್ಮ  ಪಕ್ಕದ ತೋಟದಲ್ಲಿ ಗೂಡು ಮಾಡುತ್ತಿದ್ದ ಅಂಬರಕೀಚುಗದ (Ashy wood swallow) ಹಿಂದೆ ಬಿದ್ದೆ. ವಾರಕ್ಕೆ 3- 4 ದಿನದಂತೆ ಅದರ ಬಾಣಂತನವನ್ನು ಒಂದು ತಿಂಗಳ ಕಾಲ ದಾಖಲಿಸಿದ್ದೆ . ಆ ಕಾಲಾವಧಿಯಲ್ಲಿ ಕೀಚುಗವು ತನಗಾಗಿ ಮತ್ತು ತನ್ನ ಮಕ್ಕಳಿಗಾಗಿ ಎಂದು ಗಂಟೆಗೆ ಏನಿಲ್ಲವಾದರೂ ಸುಮಾರು 50 ಕೀಟಗಳನ್ನು ಹಿಡಿಯುತ್ತಿದ್ದುವು. ಕೀಟಗಳಲ್ಲೂ ವೈವಿಧ್ಯ . ಸುಮಾರು 15 ತರಹದ ಕೀಟಗಳನ್ನು ಭಕ್ಷಿಸುವುದನ್ನು ನನ್ನ ಮಿತಿಯಲ್ಲಿ ದಾಖಲಿಸಿರುವೆ. ಅಂತಹ ಅನೇಕ ದಾಖಲೆಗಳ ಮೊತ್ತವಾಗಿ ಸಿದ್ಧವಾಗಿರುವ “ಅಂಬರದೊಳಾಡುವ ಕೀಚುಗನ ಗುಟ್ಟು” ಎಂಬ ಪುಸ್ತಕ ನಿನ್ನೆಯಷ್ಟೇ (27-12-2015) ಅನಾವರಣಗೊಂಡಿದೆ . ಇದು ಬರಿ ಅಂಬರ ಕೀಚುಗನ ಕಥೆ. ಆದರೆ ಇಂಥಾ ಅನೇಕ ಕಥೆಗಳು ನಿಮ್ಮ ಮನೆ ಮುಂದೆ, ಹಿತ್ತಲಲ್ಲಿ ಹಿಂದೆ ದಿನನಿತ್ಯ ನಡೆಯುತ್ತಿರುತ್ತದೆ . ಗಮನಿಸಿದ್ದೀರಾ ?

ನೊಣಹಿಡುಕ / ಜೇನ್ನೊಣ ಬಾಕ ( bee- eater) ಎಂಬುದೊಂದು ಸುಂದರ ಪಕ್ಷಿ ( ನಿಮಗದು ಸುಂದರವಾಗಿ ಕಂಡರೆ ಸಂತೋಷ – ಕಾಣದಿದ್ದರೆ ನನ್ನ ಅಭ್ಯಂತರವೇನೂ ಇಲ್ಲ),

ಅವುಗಳಲ್ಲಿ  5 ರೀತಿಯವು ನಮ್ಮಲ್ಲಿ ಲಭ್ಯ .

  1. Small green bee eater – ಸಣ್ಣ ಹಸುರು ಜೇನ್ನೊಣ ಬಾಕ

     2.  Blue tailed bee eater – ನೀಲಿ ಬಾಲದ ಜೇನ್ನೊಣ ಬಾಕ

  1. Chestnut headed bee eater – ಕೆಮ್ಮಂಡೆ ಜೇನ್ನೊಣ ಬಾಕ

     4.  Blue bearded bee eater – ನೀಲಿ ಗಡ್ಡದ ಜೇನ್ನೊಣ ಬಾಕ

     5.  Europian bee eater – ಯುರೋಪಿನ ಜೇನ್ನೊಣ ಬಾಕ

ಈ  ನೊಣಹಿಡುಕಗಳು ಒಂಟಿಯಲ್ಲ. ಸದಾ 5 – 10ರ ಗುಂಪು. ಏನಿಲ್ಲವೆಂದರೂ ಗಂಟೆಗೆ 100ರ ಮೇಲೆ ನೊಣಗಳನ್ನು/ಕೀಟಗಳನ್ನು  ಭಕ್ಷಿಸುತ್ತವೆ .

ನೀಲಿ ಬಾಲದ ಜೇನ್ನೊಣ ಬಾಕ

ನೀಲಿ ಬಾಲದ ಜೇನ್ನೊಣ ಬಾಕ

ಸಣ್ಣ ಹಸುರು ಜೇನ್ನೊಣ ಬಾಕ

ಸಣ್ಣ ಹಸುರು ಜೇನ್ನೊಣ ಬಾಕ

ನೀಲಕಂಠ (Indian Roller ) ಎಂಬುದು  ನಮ್ಮ  ರಾಜ್ಯ ಪಕ್ಷಿ.  ಒಂದು ಅಧ್ಯಯನದ ಪ್ರಕಾರ Roller  ಪ್ರಭೇದದ ಹಕ್ಕಿಗಳು ಒಂದೇ ಸಂಜೆಯಲ್ಲಿ ಕನಿಷ್ಠ 600 – 700 ಗೆದ್ದಲು ಹುಳುಗಳನ್ನು ಹಿಡಿಯುವುದಂತೆ. ಇಂಥಾ ಸೂಕ್ಷ್ಮಗಳನ್ನು ನೀವು ಗಮನಿಸಿದ್ದೀರಾ ?

ನಮ್ಮ ನಮ್ಮ ತೋಟಗಳ ಚಿಕ್ಕು, ಕಾಫಿ, ಒಳ್ಳೆಮೆಣಸು, ದಾಳಿಂಬೆಯಂಥಾ  ಆಹಾರ್ಯ ವಾಣಿಜ್ಯ ಬೆಳೆಗಳಿಗೆ ದಾಳಿ ಇಡುವ ಕೂಟ್ರು ಪಕ್ಷಿ (Barbet), ಮಟ ಪಕ್ಷಿ (Treepai), ಗಿಣಿ ( Parakeet ), ಪಿಕಳಾರ(Bulbul)ಗಳನ್ನು ಖಂಡಿತವಾಗಿ ಅನೇಕರು ಗಮನಿಸಿರಬಹುದು ಹಾಗು ದಿನನಿತ್ಯ ಶಪಿಸಿರಬಹುದು. ಆದರೆ ಅದು ಹಳೆ ಮಾತೂ ಆಗಿರಬಹುದು. ಮನೆ ಮುಂದೆ ಅಜ್ಜ ನೆಟ್ಟ ಪೇರಳೆ, ತಾನಾಗಿ ಹುಟ್ಟಿದ ಪಪ್ಪಾಯಿ  ಹಕ್ಕಿಗಳಿಗೆ ಆಹಾರವಾಗಿರುವುದನ್ನು ಗಮನಿಸಿ ಬಹಳ ದಿನಗಳಾಗಿರಬಹುದು. ಕಾರಣ ಸೇಬು, ದ್ರಾಕ್ಷಿಗಳು ಇವುಗಳ ಸ್ಥಾನವನ್ನು ಇಂದು  ಅಲಂಕರಿಸಿರುವುದು.

ನೀಲಕಂಠ

ನೀಲಕಂಠ

ಕುಟ್ರು ಪಕ್ಷಿ

ಕುಟ್ರು ಪಕ್ಷಿ

ಕೆಮ್ಮೀಸೆ ಪಿಕಳಾರ

ಕೆಮ್ಮೀಸೆ ಪಿಕಳಾರ

ಗಿಣಿ

ಗಿಣಿ

ಇಷ್ಟಾದರೂ ಬಾಳೆಗೆ ಬಾಧಿಸಿರುವ ಸುರುಳೆರೋಗ, ತೆಂಗಿನ ಕಪ್ಪುತಲೆ ರೋಗ, ಇಡೀ ತೋಟಕ್ಕೆ ಲಗ್ಗೆ ಇಡುವ ಬಸವನಹುಳು (African giant snail), ಅವರೆ, ತೊಗರಿಗೆ ಬಾಧಿಸುವ ಕಾಯಿಕೊರಕ – ಇಂಥವನ್ನೆಲ್ಲಾ  ರೈತ ತಾನು ಗಮನಿಸದಿರುವುದಾದರೂ ಹೇಗೆ? ಇದನ್ನು ರೈತ ಮಾತ್ರ ಗಮನಿಸಿದ್ದಲ್ಲ, ಇದು ರಾಷ್ಟ್ರವ್ಯಾಪಿ ಸುದ್ದಿಯೂ ಹೌದು .

ಆದರೆ ಇಂಥಾ ಪರಿಸರದ ಸಮಸ್ಯೆಗಳಿಗೆ ಕೃಷಿ ಇಲಾಖೆಯನ್ನು, ಸರಕಾರೀ ವ್ಯವಸ್ಥೆಯನ್ನು ಪರಿಹಾರಕ್ಕಾಗಿ ಅಂಗಲಾಚಿದರೆ ಪ್ರಯೋಜನವಾದರೂ ಏನು? ಎಲ್ಲೆಲ್ಲೂ ಮೌನವಾಗಿ ನಮಗೆ ಉಪಕಾರವನ್ನು ಮಾಡುತ್ತ, ಕೀಟ ನಿಯಂತ್ರಣವನ್ನು ಮಾಡುತ್ತಿದ್ದ ಕಾಗೆ, ಮಟಪಕ್ಷಿ, ಕೆಂಬೂತ, ಕಾಜಾಣ, ಎಲೆಹಕ್ಕಿ , ಕಳಿಂಗಗಳನ್ನು ಮರೆತರೆ ಇನ್ನೇನಾದೀತು?  ರಾಸಾಯನಿಕವೇ ಪ್ರಧಾನವಾಗಿ ಪಕ್ಷಿ ಪರಿಸರ ಹಿಂದುಳಿದರೆ  ಎದುರಾಗದೆ ಇರದು ಆಪತ್ತು. ಇಲ್ಲಿರುವ ರೈತ ಎಲ್ಲೋ ಇರುವ ತಜ್ಞರ ಮೊರೆ ಹೋದರಲ್ಲಿ ಪರಿಹಾರ ದೊರಕಲದು ನೂರಂಕಿಯ ಪ್ರಶ್ನೆ ಪತ್ರಿಕೆಯೇನು?

ಕಳೆದ ವಾರವಷ್ಟೇ ನೀವು ಮಿಶ್ರಕೂಟ ಬೇಟೆಯ ಬಗೆಗೆ ಓದಿರುವಿರಿ. ಪಕ್ಷಿಗಳು ಅದೆಷ್ಟು ವ್ಯವಸ್ಥಿತವಾಗಿ ಕೀಟ ನಿಯಂತ್ರಣ ಮಾಡುತ್ತವೆ ಎಂಬುದನ್ನು ಗಮನಿಸಿರುವಿರಿ.

ಈಗ ಉತ್ತರ ಪಡೆಯಲು ನಮ್ಮೊಳಗೇ ಪ್ರಶ್ನಿಸೋಣ. ಯಾವುದಾದರೂ ಒಂದು ಕೀಟ/ರೋಗ ರಾಸಾಯನಿಕದಿಂದ ತೊಲಗಿದ್ದಿದೆಯೇ? ತಾತ್ಕಾಲಿಕ ಶಮನಕ್ಕಾಗಿ, ಆ ಫಸಲಿನ ರಕ್ಷಣೆಗಾಗಿ, ನಮ್ಮನ್ನು ಮಾತ್ರ ಕೇಂದ್ರೀಕರಿಸಿ, ಮಣ್ಣಿನ ಫಲವತ್ತತೆಯನ್ನು ಹಾಳು ಮಾಡಿ ಎಷ್ಟೋ ದಿನಗಳಾಗಿವೆ. ಪರಿಣಾಮವಾಗಿ  ರಾಸಾಯನಿಕಗಳು ನಿಷ್ಫಲವಾಗತೊಡಗಿವೆ . ಈಗಲಾದರೂ ನಮ್ಮ ಮನಸ್ಸು ಹಿಂದೆ ತಿರುಗಿ, ಪ್ರಕೃತಿಯ ಕಡೆಗೆ/ ಬಾನಾಡಿಗಳ ಕಡೆಗೆ ನೋಡಲೊಲ್ಲದಿದ್ದರೆ, ಬದಲಾಗಿ ಬಿ.ಟಿ (Bio-technology) ಎಡೆಗೆ ನುಗ್ಗಿದರೆ, ಸರ್ವಂ ಹೈಬ್ರೀಡ್ ಮಯಂ ಮಾಡಿದರೆ, ನಮ್ಮ ನಾಟಿತಳಿಗಳನ್ನು ಕಳೆದುಕೊಂಡರೆ ಹಕ್ಕಿಗಳೇನು? ಮುಂದೆ ಮನುಷ್ಯಕುಲವೇ ಅವಕ್ಕಿಂತ ಮೊದಲು ನಾಶವಾದರೆ ಅಚ್ಚರಿ ಪಡಬೇಕಿಲ್ಲ .

ದೇಶದ ಹೊಟ್ಟೆ ತುಂಬಿಸುವುದೊಂದು ಸಮಸ್ಯೆಯೆಂಬ ಒಂದು ಸುಳ್ಳನ್ನು ಸಮರ್ಥಿಸಲು, ತಮ್ಮ ಸ್ವಾರ್ಥವನ್ನು ಮೆಚ್ಚಿಸಲು ಎಲ್ಲರೂ ಶ್ರಮಿಸುತ್ತಿದ್ದಾರೆ. ಹೊಟ್ಟೆ ತುಂಬಿಸುವುದು ಅಷ್ಟೊಂದು ಕಷ್ಟವೇ? ಎಲ್ಲಾ ದೃಷ್ಟಿಯಿಂದಲೂ ಮನುಷ್ಯನಿಗಿಂತ ಅತ್ಯಂತ  ಕನಿಷ್ಟವೆಂದು ನಾವೇ ತಿಳಿದಿರುವ ಕಿಟಗಳಿಗೆ, ಇರುವೆಗಳಿಗೆ, ಹಕ್ಕಿಗಳಿಗೆ ಎದುರಾಗದ ಸಮಸ್ಯೆ, ಅಷ್ಟೇ ಏಕೆ?  ಇಷ್ಟೆಲ್ಲಾ ಅರಣ್ಯ ನಾಶದ ಅನಂತರವೂ ಆನೆಗೂ ಕಾಡದ ಹೊಟ್ಟೆಯ ಸಮಸ್ಯೆ ಮನುಷ್ಯನಿಗೇಕೆ?

ಹುಟ್ಟಿಸಿದ ದೇವ ತಾ ಎಲ್ಲರನು ಗಟ್ಟ್ಯಾಗಿ ಸಲಹುತಿರಲು – ಆದಿಕೇಶವರಾಯ

ಮುಗಿಸುವ ಮುನ್ನ ಒಂದು ಘಟನೆಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತೇನೆ. ಕಳೆದ ಭಾನುವಾರ ನಾನೊಂದು ಕೆರೆಯತ್ತ ಹೋಗಿದ್ದೆ . ಆ ಕೆರೆಯ ಒಂದು ದಡದಲ್ಲಿ ಪೇಟೆ ಬೆಳೆಯುತ್ತಿದೆ, ಇನ್ನೊಂದು ದಡದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಆದರೂ ರೈತರ ಮನಸ್ಸು ಆ ದಡದತ್ತ ಸೆಳೆಯುತ್ತಿದ್ದರೆ ಅಚ್ಚರಿಯಿಲ್ಲ . ಇಂಥಾ ಎಡೆಬಿಡಂಗಿ ಸ್ಥಿತಿಯಲ್ಲಿ ಅಲ್ಲಿ ಹತ್ತಾರು ಎಕರೆ ಭತ್ತ ಬೆಳೆಯುತ್ತಿದ್ದಾರೆ. ಭತ್ತಕ್ಕೆ ಪ್ರಮುಖವಾಗಿ ಬಾಧಿಸುವ ಹಕ್ಕಿ ರಾಟೇವಾಳ (Munia). ಗುಬ್ಬಚ್ಚಿ ಗಾತ್ರದ ಈ ಪಕ್ಷಿ ಹಿಂಡು ಹಿಂಡಾಗಿ ಬಂದು ಭತ್ತವನ್ನು ತಿನ್ನುತ್ತದೆ. ಸಾಮಾನ್ಯವಾಗಿ ಹಳೆ ಬಟ್ಟೆಯನ್ನು, ಸಿ.ಡಿ ಯನ್ನು ನೇಲಿಸುವುದು, ಅಥವಾ ಬೆರ್ಚಪ್ಪನ್ನನ್ನು  ಕೂರಿಸುವುದು ರೂಢಿ ಉಂಟು. ಅದನ್ನು ಕಂಡು ಮುನಿಯಾಗಳು ಹೆದರಲಿ ಎಂಬುದು ಉದ್ದೇಶ . ಹೀಗಿದ್ದರೂ ಈ ರಾಟೇವಾಳಗಳು ಅಂಜಿಕೊಂಡೇ  ಭತ್ತವನ್ನೊಂದಷ್ಟು ತಿನ್ನುತ್ತಿದ್ದುವು. ಆದರೆ ಬೆರ್ಚಪ್ಪ ನಿಲ್ಲಿಸುತ್ತಿದ್ದ ಆ ದಿನಗಳಲ್ಲಿ ಎರಡು ದಡಗಳಿರಲಿಲ್ಲ. ಎಲ್ಲೆಲ್ಲೂ ಕೃಷಿ ನಡೆಯುತ್ತಿರಲು ಎಲ್ಲ ಜೀವಿಗಳಿಗೂ ಸಮಾನವಾಗಿ ಆಹಾರದ ಹಂಚಿಕೆಯಾಗುತ್ತಿತ್ತು.
ದಡಗಳು ಬಡಬಡಿಸುತ್ತಿರಲು ಬೆಳೆ ರಕ್ಷಣೆ ರೈತರಿಗಿಂದು ಸವಾಲು, ಈ ಸವಾಲನ್ನು ಪ್ರಸ್ತುತ ಕೆರೆಸುತ್ತಲಿನಲ್ಲಿ ರೈತ ಸ್ವೀಕರಿಸಿದ ರೀತಿ ನಮ್ಮ ದೃಷ್ಟಿದೋಷಕ್ಕೊಂದು ಉದಾಹರಣೆ. ರೈತ ಅತಿ ಬುದ್ಧಿವಂತಿಕೆ ಮಾಡಿದ್ದ . ಮೀನು ಹಿಡಿಯಲು ಉಪಯೋಗಿಸುತ್ತಿದ್ದ ಹಳೆಯ ಬಲೆಯನ್ನು ಗದ್ದೆಯ ಸುತ್ತಲೂ ಹತ್ತು ಅಡಿ ಎತ್ತರಕ್ಕೆ ಕಟ್ಟಿದ್ದ.

Net around paddy field

Net around paddy field

ಆದರೆ ಭತ್ತ ತಿನ್ನುವ ಮುನಿಯಾ ಹಕ್ಕಿಗಳು ಗಾತ್ರದಲ್ಲಿ ಚಿಕ್ಕದಾದುದರಿಂದ ಬಲೆಯ ರಂಧ್ರದ ಒಳಗೆ ಸುಲಭವಾಗಿ ತೂರುತ್ತಿದ್ದುವು.  ಭತ್ತ ತಿನ್ನದ, ಗದ್ದೆಯ  ಹುಳುಹುಪ್ಪಟೆಯನ್ನು  ತಿಂದು  ರೈತನಿಗುಪಕರಿಸುವ ಗೊರವಗಳು, ಬಕ ಪಕ್ಷಿಗಳು ಗಾತ್ರದಲ್ಲಿ ದೊಡ್ಡದಿರುವುದರಿಂದ ಆ ಬಲೆಯ ರಂಧ್ರದಲ್ಲಿ ಸಿಕ್ಕಿ ಸತ್ತಿದ್ದುವು. ಭತ್ತದ ಕೀಟ ನಿಯಂತ್ರಣಕ್ಕೆಂದೇ ಬರುವ ಕೀಚುಗ, ಕೆಂಬೂತಗಳೂ ಅಸುನೀಗಿದ್ದುವು. ಇಲ್ಲಿ ರೈತ ಬಲೆ ಕಟ್ಟಿದ್ದರಿಂದ ಅತ್ತ ಮುನಿಯಾಗಳಿಂದ  ರಕ್ಷಣೆಯೂ ಆಗಲಿಲ್ಲ, ಇತ್ತ ತನ್ನ ಬೆಳೆ ರಕ್ಷಿಸುವ ಅನೇಕ ಗೆಳೆಯರನ್ನೂ ಕಳೆದುಕೊಂಡ.

ಅಸುನೀಗಿದ ಗೊರವ

ಅಸುನೀಗಿದ ಗೊರವ

ಎತ್ತಿಗೆ ಜ್ವರ ಎಮ್ಮೆಗೆ ಬರೆ ! ತನ್ನ ದೃಷ್ಟಿ ದೋಷ ತನಗೇ ಹೊರೆ.

ಚಿತ್ರಗಳು : ಡಾ ಅಭಿಜಿತ್ ಎ.ಪಿ.ಸಿ

ಮುಂದಿನವಾರ : ಮುನಿಯಾಗಳೂ ನಿಜಕ್ಕೂ ರೈತನಿಗೆ ಶತ್ರುವೇ?

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!