X

ಮಾಸ್ಕ್ ಮಹಿಳೆ – ಸುಹಾನಿ ಮೋಹನ್!

ಸುಹಾನಿ ಮೋಹನ್, ಐಐಟಿ ಬಾಂಬೆಯಲ್ಲಿ ಕಲಿತು ಬ್ಯಾಂಕಿಂಗ್ ನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಕೆಲಸದ ಮೇಲೆ ಒಮ್ಮೆ ಹಳ್ಳಿಗೆ ಹೋದಾಗ ಅಲ್ಲಿ ಹೆಂಗಸರ ತೊಂದರೆ ಅವಳ ಅನುಭವಕ್ಕೆ ಬರುತ್ತದೆ. ಒಳ್ಳೆಯ ಆದಾಯದ ಕೆಲಸವನ್ನು ಬಿಟ್ಟು ಸ್ಯಾನಿಟರಿ ಪ್ಯಾಡ್ ತಯಾರಿಕೆಯ ಒಂದು ಕಂಪನಿ ಶುರು ಮಾಡುತ್ತಾಳೆ. ಸರಳ್ ಡಿಸೈನ್ ಎನ್ನುವುದು ಕಂಪನಿಯ ಹೆಸರು. ಅವಳ ಈ ಪಯಣದಲ್ಲಿ ಜೊತೆ ಸೇರುತ್ತಾರೆ ಕಾರ್ತಿಕ್ ಮೆಹ್ತಾ. ಆತ ಐಐಟಿ ಮದ್ರಾಸ್‌ ನ ವಿದ್ಯಾರ್ಥಿ. ಅವರಿಬ್ಬರೂ ಸೇರಿ ಸ್ಯಾನಿಟರಿ ಪ್ಯಾಡ್ ಕಂಪನಿ ನಡೆಸುತ್ತಿರುತ್ತಾರೆ. ಅವರಿಗೆ ಈಗ ಕೇವಲ ಮೂವತ್ತು ವರ್ಷ ವಯಸ್ಸು. ಇದೇನು ಪ್ಯಾಡ್ ಮ್ಯಾನ್ ಕಥೆನಾ ಅಂತ ಕೇಳಬೇಡಿ. ಎರಡನೆಯ ಭಾಗ ಮುಂದಿದೆ…
ಕಥೆಯಲ್ಲಿ ತಿರುವು ಬಂದಿದ್ದು ಹಿಂದಿನ ವಾರ. ಸುಹಾನಿ ತನ್ನ ಗೆಳತಿ ಶೃತಿಗೆ ಕರೆ ಮಾಡುತ್ತಾಳೆ.‌ ಶೃತಿ ಐಐಟಿ ಬಾಂಬೆಯಲ್ಲಿ ಸುಹಾನಿಯ ಜ್ಯೂನಿಯರ್. ಆಕೆ ಈಗ ಆನಂದ್ ಮಹೀಂದ್ರಾರವರ ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾಳೆ. ‘ನಮ್ಮದು ಪ್ಯಾಡ್ ಕಂಪನಿ ಇದೆ, ಮಷಿನ್ ಇದೆ. ಇವತ್ತು ನಮ್ಮ ದೇಶದಲ್ಲಿ ಮಾಸ್ಕ್ ಕೊರತೆ ಇದೆ. ಮುಂದೆ ಕೊರತೆ ಇನ್ನಷ್ಟು ಹೆಚ್ಚಬಹುದು ನಾವು ಏನಾದರೂ ಮಾಡಬೇಕು’ ಎಂದು ಇಬ್ಬರೂ ಮಾತಾಡಿಕೊಳ್ಳುತ್ತಾರೆ. ತಕ್ಷಣವೇ ಶೃತಿ ತನ್ನ ಬಾಸ್ ಮಹೀಂದ್ರಾ ಅವರನ್ನು ಸಂಪರ್ಕಿಸಿ ತಮ್ಮ ವಿಚಾರವನ್ನು ಹೇಳುತ್ತಾಳೆ. ‘ಅವರ ವಿನ್ಯಾಸ, ನಮ್ಮ ಫ್ಯಾಕ್ಟರಿ ‘ ಎನ್ನುವ ಪ್ರಸ್ತಾಪ ಇಡುತ್ತಾಳೆ. ತಕ್ಷಣವೇ ಬಾಸ್ ಒಪ್ಪಿಗೆ ನೀಡುತ್ತಾರೆ.
ಮುಂಬಯಿಯಲ್ಲಿರುವ ಮಹೀಂದ್ರಾ ಫ್ಯಾಕ್ಟರಿಯಲ್ಲಿ ಸರಳ್ ಡಿಸೈನ್ ಕಂಪನಿಯ ಮಷಿನ್ ಬರುತ್ತದೆ. ಕೇವಲ 100 ತಾಸಿನಲ್ಲಿ ಪ್ಯಾಡ್ ಮಷಿನನ್ನು, ಮಾಸ್ಕ್ ಮಷಿನ್ ಆಗಿ ಬದಲಾಯಿಸಲಾಗುತ್ತದೆ. ಹೆಚ್ಚು ಜನ ಸೇರಬಾರದು ಅದಕ್ಕಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ರಿಮೋಟ್ ನಲ್ಲಿದ್ದು ಕಾರ್ತಿಕ್ ಡಿಸೈನ್ ಸಂಬಂಧಪಟ್ಟ ಕೆಲಸ ನೋಡಿಕೊಳ್ಳುತ್ತಾರೆ. ಈಗ ಅಲ್ಲಿ ಅತೀ ಕಡಿಮೆ ಬೆಲೆಯ ಮಾಸ್ಕ್ ತಯಾರಿಕೆಯ ಮಷಿನ್ ತಯಾರಾಗಿದೆ, ಕೆಲಸ ಮಾಡುತ್ತಿದೆ. ದಿನಕ್ಕೆ 10,000 ಮಾಸ್ಕ್ ಒಂದು ಮಷಿನ್ ತಯಾರಿಸಬಲ್ಲದು!

ಇಷ್ಟು ವೇಗವಾಗಿ ನಿರ್ಧಾರ ತೆಗೆದುಕೊಳ್ಳುವ, ವೇಗವಾಗಿ ಒಂದು ಗುರಿ ತಲುಪುವ, ಎರಡು ಕಂಪನಿಗಳು ಒಂದೇ ಉದ್ದೇಶಕ್ಕೆ ಕೆಲಸ ಮಾಡುವ ಹೊಸತನ ಈ ಕೊರೋನಾ ಸಮಯದಲ್ಲಿ ಕಂಡುಬರುತ್ತಿದೆ. ದೇಶಕ್ಕೆ ಈ ಸಮಯಕ್ಕೆ ಏನು ಬೇಕು ಎನ್ನುವುದು ಮುಖ್ಯ. ಲಾಭವೊಂದೇ ವ್ಯಾಪಾರದ ಗುರಿ ಆಗಬಾರದು. ಪ್ಯಾಡ್ ಅಗತ್ಯ ಇತ್ತು ಪ್ಯಾಡ್ ಮಹಿಳೆ ಆದಳು. ಈಗ ಮಾಸ್ಕ್ ಬೇಕು ಅದಕ್ಕೂ ರೆಡಿ. ಯೋಜನೆಗೆ ತಕ್ಕಂತೆ ಕೆಲಸಾದರೆ ಸುಹಾನಿ ನಿಜವಾಗಿಯೂ ಮಾಸ್ಕ್ ಮಹಿಳೆ. ಇಂತಹ ಒಂದು ಒಳ್ಳೆಯ ವಿಚಾರಕ್ಕೆ ಸ್ಪಂದಿಸಬಲ್ಲ ಮಹೀಂದ್ರಾರಂತಹ ಇಂಡಸ್ಟ್ರಿಯಲಿಸ್ಟ್ ಗಳು ನಮ್ಮ ದೇಶದ ರತ್ನಮಣಿಗಳು. ಭಾರತವು ಬೆಳೆಯಲು ಇಂತವರ ಸಂಖ್ಯೆ ಸಾವಿರವಾಗಬೇಕು!

Facebook ಕಾಮೆಂಟ್ಸ್

Vikram Joshi: ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.
Related Post