Featured ಪರಿಸರದ ನಾಡಿ ಬಾನಾಡಿ

ಶುಕಲೋಕದಲ್ಲೊಂದು ಸುತ್ತ

ಪಕ್ಷಿ ಎಂದೊಡನೆ ಎಲ್ಲರಿಗೂ ಮೊದಲಿಗೆ ನಮ್ಮ ರಾಷ್ಟ್ರ ಪಕ್ಷಿಯಾದ ಬಣ್ಣ ಬಣ್ಣದ ನವಿಲು ನೆನಪಾದೀತು. ಕೆಲವರಿಗೆ ಮಾಧುರ್ಯದ ಕೋಗಿಲೆಯಾದೀತು. ಇನ್ನು ಕೆಲವರಿಗೆ ಮನೆ ಮುಂದೆ ಹರಟುವ ಕಾಗೆ. ಮತ್ತೆ ಕೆಲವರಿಗೆ ಗಲೀಜು ಮಾಡುವ ಪಾರಿವಾಳ, ಆಗಾಗ ಮರೆಯಾಗುತ್ತಿರುವ ಗುಬ್ಬಚ್ಚಿ ನೆನಪಾದೀತು. ಹೀಗೆ ಪಕ್ಕನೆ ನೆನಪಾಗುವ ಹಕ್ಕಿಗಳ ಸಾಲಿನಲ್ಲಿ ಮೊದ ಮೊದಲಿಗೆ ಬರುವ ಇನ್ನೊಂದು ಹಕ್ಕಿ ಗಿಳಿ/ಗಿಣಿ. ಸಂಸ್ಕೃತದಲ್ಲಿ ಇದುವೇ ಶುಕ. ಶಾಲಾ ಪುಸ್ತಕಗಳಲ್ಲಿ ಇದು Parrot ವಾಸ್ತವದಲ್ಲಿ Parrot ಎಂಬುದು ಬಲು ದೊಡ್ಡ ಗುಂಪು. ಇದು ಸಿಟಾಸಿಫಾರ್ಮಿಸ್ ಗಣಕ್ಕೆ ಸೇರುತ್ತದೆ.  ಪ್ರಪಂಚದಾದ್ಯಂತ ಸುಮಾರು 370 ಪ್ರಭೇದದ Parrot ಗಳು ಲಭ್ಯ. Parrot ವಿಭಾಗದೊಳಗೆ cockatoos, lories & lorikeets, macaws, budgerigas, parakeets, kakapo, lovebirds, kea ಎಂಬ ದೊಡ್ಡ ದೊಡ್ಡ ಉಪ ವಿಭಾಗಗಳಿವೆ.  ನಮ್ಮ ಭಾರತದಲ್ಲಿ ಸಿಗುವುದು ಸಿಟಾಸಿಡೆ ಕುಟುಂಬಕ್ಕೆ ಸೇರಿದ ಸಿಟಾಕ್ಯುಲ ಜಾತಿಯ ವಿವಿಧ ಪ್ರಭೇದಗಳಿರುವ ಪರಾಕೀಟ್ ಮಾತ್ರ. ಅದಲ್ಲದೆ Indian lorikeet ಎಂಬ ಒಂದು ಜಾತಿಯ lorikeet ಮಾತ್ರ ಲಭ್ಯ. ಹಾಗಾಗಿ ನಮ್ಮ ಪಠ್ಯ ಪುಸ್ತಕದಲ್ಲಿರುವ ಗಿಳಿಯ ಚಿತ್ರಕ್ಕೆ Parrot ಎನ್ನುವ ಬದಲು parakeet ಎನ್ನುವುದು ಹೆಚ್ಚು ಸೂಕ್ತ. ಉಳಿದ ಹೆಚ್ಚಿನ Parrot/ಗಿಳಿ ಪ್ರಭೇದಗಳು ಆಫ್ರಿಕಾ, ಆಸ್ಟ್ರೇಲಿಯಾ, ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಲಭ್ಯ.

lorikeet ಮತ್ತು  parakeet ಬಿಟ್ಟು ಉಳಿದವೆಲ್ಲ ಭಾರೀ ಗಾತ್ರದ್ದಾಗಿವೆ(50 ಸೆಂ.ಮೀ ಮೇಲ್ಪಟ್ಟು). ಸಣ್ಣ ಕತ್ತು, ಒತ್ತಾದ ದೇಹ ಇವಕ್ಕೆ ದೈತ್ಯ ರೂಪವನ್ನು ಕೊಡುತ್ತವೆ. ಈ ದೈತ್ಯ ದೇಹದಿಂದಾಗಿ ಗಿಣಿಗಳು ಬಲು ದೂರ ಹಾರುವುದು ಕಡಿಮೆ. ಹಾಗಾಗಿ ಭಾರತಕ್ಕೆ ಯಾವ ಗಿಣಿಗಳೂ ವಲಸೆ ಬರುವುದಿಲ್ಲ. ಯುರೋಪ್ ಖಂಡದಲ್ಲಿ ಗಿಳಿಗಳೇ ಇಲ್ಲ! ಎಲ್ಲಾ ಗಿಳಿಗಳಿಗೆ ಮೇಲಿನ ಕೊಕ್ಕು ದೊಡ್ಡದಾಗಿಯೂ ಕೆಳಗಿನದ್ದು ಸಣ್ಣದಿರುತ್ತದೆ. ಕೊಕ್ಕಿನ ಮೇಲ್ಭಾಗ ತಲೆಬುರುಡೆಗೆ ಅಂಟಿಕೊಂಡಿರುತ್ತದೆ . ಬುರುಡೆಯಿಂದಲೇ ನೇರ ಬರುವುದರಿಂದ ಮೇಲ್ಕೊಕ್ಕು ಬಲು ಗಟ್ಟಿ. ಕೊಕ್ಕಿನ ಬುಡದಲ್ಲಿ ಸೆರೆ ಎಂಬ ಅಗಲವಾದ ಭಾಗವಿದೆ. ಇದರ ಮೂಲಕ ನಾಸಿಕ ರಂಧ್ರಗಳು ಹೊರತೆರೆಯುತ್ತವೆ. ಗಿಳಿಗಳು ತಮ್ಮ ಕೊಕ್ಕನ್ನು ಮೂರನೇ ಕಲ್ಲಿನಂತೆ ಬಳಕೆ ಮಾಡುತ್ತವೆ. ಮರವನ್ನೇರಲು ಕೊಕ್ಕನ್ನೂ ಬಳಸುತ್ತವೆ. ಗಿಳಿಯ ನಾಲಗೆ ಉರುಳೆಯಾಕಾರದ್ದೂ ತುಂಬ ಮೃದುವೂ ಹೌದು.  ಸಾಮಾನ್ಯವಾಗಿ ಹಕ್ಕಿಗಳು ತಮ್ಮ ಕಾಲುಗಳನ್ನು  ನೆಲದಲ್ಲೋ, ರೆಂಬೆಯಲ್ಲಿ ಕೂರಲು ಅಥವಾ ಕೆಲ ಹಿಂಸ್ರಪಕ್ಷಿಗಳು ಬೇಟೆಯಾಡಲು ಬಳಸುತ್ತವೆ. ಆದರೆ ಗಿಣಿಗಳು ತುಸು ವಿಕಾಸ ಹೊಂದಿದ ಹಕ್ಕಿ. ಕಾಲಿನ ನಾಲ್ಕು ಬೆರಳುಗಳಲ್ಲಿ ಎರಡು ಹಿಂದಕ್ಕೂ ಎರಡು ಮುಂದಕ್ಕೂ ಬಾಗಿವೆ. ಇದರಿಂದ ಗಿಳಿ ಮರದ ರೆಂಬೆಗಳನ್ನು ಹಿಡಿದುಕೊಂಡು ಚಲಿಸಬಲ್ಲುದು. ಅಲ್ಲದೆ ಆಹಾರವನ್ನು ಹಿಡಿದುಕೊಂಡು ಬಾಯಿಗೆ ಸಾಗಿಸುವ ಸೌಲಭ್ಯವೂ ಇದರಿಂದ ದೊರೆತಿದೆ. ಇದಲ್ಲದೆ ಕೆಲಸಾಕಿದ ಗಿಳಿಗಳು ತಮ್ಮ ಕಾಲುಗಳ ಸಹಾಯದಿಂದ ಸೈಕಲ್ ಬಿಡುವುದು, ರಿಂಗ್ ಎಸೆಯುವುದನ್ನು ಸರ್ಕಸ್‍ಗಳಲ್ಲಿ ಗಮನಿಸಿರಬಹುದು. ತಮ್ಮ ಕಾಲುಗಳಲ್ಲಿರುವ ಚೂಪಾದ ಉಗುರು ಕೊಕ್ಕೆಯಂತಿದ್ದು, ಮರದಲ್ಲಿ ನೇಲಲು ಸಹಕಾರಿ. ಇಂಥಾ ಕಾಲುಗಳ ರಚನೆ ಬೇರೆ ಯಾವ ಹಕ್ಕಿಗಳಲ್ಲೂ ಇಲ್ಲ . ನ್ಯೂಜಿಲ್ಯಾಂಡ್‍ನ kea (ಕಿಯಾ) ಎಂಬ ಗಿಳಿ ಬಿಟ್ಟರೆ ಉಳಿದವೆಲ್ಲಾ ಅಪ್ಪಟ ಸಸ್ಯಾಹಾರಿ. ಕಿಯಾ ಗಿಳಿಗಳು ರಣಹದ್ದುಗಳಂತೆ ಸತ್ತ ಪ್ರಾಣಿಗಳನ್ನು ತಿನ್ನುತ್ತವೆ. ಅದೇ ನ್ಯೂಜಿಲ್ಯಾಂಡ್‍ನಲ್ಲಿ ಅಪರೂಪದ Newzeland kakapo/ owl parrot  ಕೂಡಾ ಇದೆ. ಇವಕ್ಕೆ ಹಾರಲು ಬರುವುದಿಲ್ಲ. ಎಮೂ(emu) ಆಸ್ಟ್ರಿಚ್ ( ostrich) ನಂತೆ ನಡೆದಾಡುವ ಹಕ್ಕಿಗಳು. 85 ಸೆಂ.ಮೀ ಉದ್ದದ   scarlet macaw  ಮಧ್ಯ ಮತ್ತು ದಕ್ಷಿಣ ಅಮೇರಿಕಾದ ಗಿಳಿ ಪ್ರಪಂಚದ ಅತಿ ದೊಡ್ಡ ಗಿಳಿಯಾದರೆ, 8.6 ಸೆಂ.ಮೀ ಉದ್ದದ ನ್ಯೂಗಿನಿ, ಇಂಡೋನೇಶಿಯಾದ   buff-faced pygmy parrot (Micropsitta pusio) ಅತಿ ಸಣ್ಣ ಗಿಳಿ. ಸಾಮಾನ್ಯವಾಗಿ ಗಿಳಿಗಳು 30- 50 ವರ್ಷ ಬದುಕುತ್ತವೆಯಂತೆ. 75-80 ವರ್ಷ ಕಾಲ ಬದುಕಿದ ದಾಖಲೆಯೂ ಇದೆ.

ಇವಿಷ್ಟು ಗಿಣಿಗಳ ಬಗೆಗಿನ ಕೆಲ ಅಂಕಿ ಅಂಶಗಳಾದರೆ ಇನ್ನು ನಮ್ಮ ಪೌರಜರು ಗಿಣಿಗಳ ಬಗೆಗೆ ಇಟ್ಟುಕೊಂಡಿದ್ದ ಭಾವನಾತ್ಮಕ ವಿಚಾರಗಳ ಕುರಿತು ಒಂದಿಷ್ಟು ತಿಳಿಯೋಣ. ಹಿಂದಿನ ಕಾವ್ಯಗಳಲ್ಲಿ ಗಿಳಿಯನ್ನು ಚೆಂದಕ್ಕೆ, ಮಾತಿಗೆ ಮತ್ತು ಮುಗ್ಧತೆಗೆ ಅಲ್ಲಲ್ಲಿ ಉಪಮೆಯಾಗಿ ಬಳಸಿದ್ದಾರೆ. ಇಂದಿಗೂ ಗಿಣಿಯಿಂದ ಮನುಷ್ಯನ ಭವಿಷ್ಯ ಓದಿಸುತ್ತಾರೆ.

ಸಂಸ್ಕೃತದಲ್ಲಿ ಶುಕವೆಂದು ಕರೆಸಿಕೊಳ್ಳುವ ಗಿಳಿಗದು ಅನ್ವರ್ಥ ನಾಮವೇ ಹೌದು, ಎಂದರೆ ಸುಂದರವಾದ ಗತಿ (ಚಲನೆ) ಉಳ್ಳದ್ದು ಎಂದು ಅರ್ಥ. ಅಥವಾ ಮನ ಬೆಳಗುವ ರೂಪ, ಶಬ್ಧಗಳುಳ್ಳ ಪಕ್ಷಿ ಎಂದೂ ಅರ್ಥವಿದೆ. ಈ ಗಿಳಿಗಳು ಎಷ್ಟು ಚಂದವೋ ಅಷ್ಟೇ ಚಂದ ಅದರ ಹಾರಾಟ ಕೂಡಾ. ಒಂದು ಹಿಂಡಿನಲ್ಲಿ 30-40 ಗಿಳಿಗಳಿದ್ದರೂ ಅವು ಒಂದು ತಂಡವಾಗಿ ಹಾರುತ್ತದೆ. ಅಡ್ಡಾದಿಡ್ಡಿಯಾಗಿ, ಮೇಲೆಕೆಳಗೆ, ಹೇಗೆಂದರೆ ಹಾಗೆ ವೇಗವಾಗಿ ಹಾರಿದರೂ ಅವು ಎಲ್ಲೂ ಬೇರ್ಪಡುವುದಿಲ್ಲ, ಒಂದಕ್ಕೊಂದು ಡಿಕ್ಕಿ ಹೊಡೆಯುವುದಿಲ್ಲ, ನಡುವಿನ ಅಂತರದಲ್ಲಿ ಹೆಚ್ಚಿನ ಅಂತರವಿರುವುದಿಲ್ಲ. ಎಲ್ಲವಕ್ಕೂ ಅದೇ ವೇಗ! ಅವು ಅಷ್ಟು ವೇಗದಲ್ಲಿದ್ದರೂ ಒಮ್ಮೆಲೆ ಒಂದೆಡೆ ಕೂರುವ ಪರಿ ನೋಡುವುದೇ ಒಂದು ರೋಮಾಂಚನ ಅನುಭವ. ಇದನ್ನು ನೋಡುವಾಗ ನಮ್ಮ ಮನ ಬೆಳಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ಗಿಣಿಗಳಿಗೆ ಸಂಸ್ಕೃತದಲ್ಲಿ ಮೇಧಾವಿ, ದಾಡಿಮಪ್ರಿಯ, ಪ್ರಿಯದರ್ಷಿನ್, ವಕ್ರಚಂಚು (ವಕ್ರವಾದ ಕೊಕ್ಕು), ಚಿಮಿ, ತ್ರಿಮಿಕ, ಮಂಜುವಾಚ ಎಂಬ ಹೆಸರೂ ಇದೆ.

ಪೌರಾಣಿಕವಾಗಿ ನೋಡುವುದಾದರೆ ಪ್ರಜಾಪತಿಗಳಲ್ಲಿ ಒಬ್ಬರಾದ ಕಶ್ಯಪ ಋಷಿಗಳ ಪತ್ನಿ ( ಇವರಿಂದಲೇ ಪ್ರಪಂಚದ ಎಲ್ಲಾ ವಿಧದ ಗಿಡಮರ ಬಳ್ಳಿ, ಸರೀಸೃಪ ಇತ್ಯಾದಿ ಸಮಸ್ತವೂ ಸೃಷ್ಟಿಯಾದುದಂತೆ) ಶುಕೀಯವರಿಂದ ಶುಕ ಸಂತತಿ ಆರಂಭವಾಯಿತಂತೆ. ಇದೇ ಋಷಿಗೆ ತಾಮ್ರೆ ಎಂಬ ಪತ್ನಿಯಿಂದ ಕಾಗೆ, ಗೂಬೆ ಜಾತಿಗೆ ಸೇರಿದ ವಿವಿಧ ಪಕ್ಷಿಗಳ ಸಂತತಿಯು ಜನಿಸಿದವಂತೆ. “ಶುಕ ಸಪ್ತತಿ” ಎಂಬ ಒಂದು ಗ್ರಂಥ, ಅದರಲ್ಲಿ ಹೆಣ್ಣುಗಿಳಿ ಮತ್ತು ಗಂಡು ಗಿಳಿಗಳ ನಡುವೆ ಸಂಭಾಷಣೆ ರೂಪದಲ್ಲಿ 70 ಕಥೆಗಳಿವೆಯಂತೆ. ಪಂಚತಂತ್ರ, ಬಾಣ, ಕಾಳಿದಾಸರ ಕಾದಂಬರಿಯಲ್ಲೂ ಉಪಮೆಯಾಗಿ ಅಲ್ಲಲಿ ಗಿಳಿಗಳನ್ನು ಬಳಸಿದ್ದಾರೆ. ಶುಕ ಕಾಮದೇವನ ವಾಹನ, ಆದುದರಿಂದ ಮನ್ಮಥನಿಗೆ ಶುಕವಾಹಿ ಎಂಬ ಹೆಸರಿದೆ. ನಮ್ಮ ಕನ್ನಡದ ಕವಿಗಳೂ ಗಿಳಿಯನ್ನು ಅಲ್ಲಲ್ಲಿ ಸೌಂದರ್ಯಕ್ಕೆ, ಮಾಧುರ್ಯಕ್ಕೆ ಉಪಮೆಯಾಗಿ ಬಳಸಿದ್ದಾರೆ. ಗಿಳಿಯನ್ನು ಪಂಡಿತವಕ್ಕಿ, ಕನ್ನಡವಕ್ಕಿ, ಕೀರು ಶುಕ ಎಂದು ಕರೆದಿದ್ದಾರೆ. ಹೆಣ್ಣೂ ಗಿಳಿಯನ್ನು ಪುರುಳಿ ಎಂಬ ಹೆಚ್ಚುವರಿ ಹೆಸರಿನಿಂದ ಕರೆದು ತಮ್ಮ ವಿಶೇಷ ಪ್ರೀತಿಯನ್ನು ಕವಿಗಳು ವ್ಯಕ್ತಪಡಿಸಿದ್ದಾರೆ. ನಮ್ಮ ಸಿನಿಮಾ, ನಾಟಕಗಳಲ್ಲಿ ಕೂಡಾ ಗಿಳಿಯನ್ನು ಬಳಸಿದ ಅನೇಕ ಪದ್ಯಗಳಿವೆ. ಇವೆಲ್ಲವನ್ನೂ ಗಮನಿಸಿದಾಗ ಗಿಣಿಯು ಅಂದಿನಿಂದಲೇ ಮಾನವನ ಜೀವನದ ಒಂದು ಭಾಗವಾಗಿದೆ ಎಂಬುದನ್ನು ನಾವು ತಿಳಿಯಬಹುದು.

ಇನ್ನು ನಮ್ಮ ಭಾರತದಲ್ಲಿ ಯಾವ ಯಾವ ಗಿಳಿಗಳಿವೆ ಇಂಬುದನ್ನು ನೋಡೋಣ. ಮೊದಲೇ ತಿಳಿಸಿದಂತೆ ನಮ್ಮಲ್ಲಿ parakeetಗಳು ಮತ್ತು ಒಂದು lorikeet ಮಾತ್ರ ಲಭ್ಯ. ಇಲ್ಲಿ ಒಟ್ಟು 12 ಪ್ರಭೇದಗಳಿವೆ.

ಅವುಗಳೆಂದರೆ

1.   Red-breasted parakeet (Psittacula alexandri)

2.   Slaty-headed parakeet (Psittacula himalayana)

3.   Grey-headed lovebird or Madagascar lovebird (Agapornis canus)

4.   Blossom-headed parakeet (Psittacula roseate)

5.   Lord Derby’s parakeet (Psittacula derbiana)

6.   Nicobar parakeet (Psittacula caniceps)

7.   Long-tailed parakeet (Psittacula longicauda)

8.   Alexandrine parakeet  (Psittacula eupatria)

9.   Rose-ringed parakeet (Psittacula krameri)

10.            Plum-headed parakeet (Psittacula cyanocephala)

11.             Malabar parakeet (Psittacula columboides)

12.            Indian Lorikeet /  Vernal Hanging Parrot (Loriculus vernalis)

ಇವುಗಳಲ್ಲಿ ಮೊದಲಿನ 7 ಪ್ರಭೇದಗಳು ಕರ್ನಾಟಕದಲ್ಲಿ ಲಭ್ಯವಿಲ್ಲ. ಹಾಗಾಗಿ ಅವುಗಳ ಬಗ್ಗೆ ನನಗೆ ಗೊತ್ತಿಲ್ಲ. ಉಳಿದ 5 ಗಿಳಿಗಳ ಬಗೆಗೆ ನಾನಿಲ್ಲಿ ತಿಳಿಸುವೆ.

1. ರಾಮ ಗಿಳಿ: Alexandrine parakeet  (Psittacula eupatria)

53 ಸೆಂ.ಮೀ ಉದ್ದದ ಈ ಗಿಳಿಯು ಭಾರತದ ಅತ್ಯಂತ ಎತ್ತರದ ಗಿಳಿ. ಉತ್ತರ ಮತ್ತು ಮಧ್ಯಭಾರತದಲ್ಲಿ ಬಲು ಸಾಮಾನ್ಯವಾದ ಈ ಗಿಳಿಯು ಕರ್ನಾಟಕದ ಮಟ್ಟಿಗೆ ತುಸು ವಿರಳ. ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಆಗಾಗ ಕೆಲವರು ಇದನ್ನು ಕಂಡದ್ದುಂಟು. ಹಸಿರು ಬಣ್ಣದ ಈ ಗಿಳಿಗೆ ಕೆಂಪು ಕೊಕ್ಕು ಮತ್ತು ಕೆಂಪನೆಯ ಭುಜ. ಗಂಡು ಹಕ್ಕಿಗೆ ಕೆಂಪನೆಯ ಉಂಗುರವನ್ನು ಕತ್ತಿನಲ್ಲಿ ಕಾಣಬಹುದು.

Alexadrine parakeet

Alexadrine parakeet

2. ಗುಲಾಬಿ ಸರದ ಗಿಳಿ: Rose-ringed parakeet (Psittacula krameri)

42 ಸೆಂ.ಮೀ ಉದ್ದದ ಈ ಗಿಣಿ ಜನಸಾಮಾನ್ಯರಿಗೆಲ್ಲರಿಗೂ ಪರಿಚಯವಿರುವ ಗಿಣಿ. ಹೆಚ್ಚಾಗಿ ಇದುವೇ ಪಂಜರದ ಗಿಣಿ. ಕರ್ನಾಟಕದಾದ್ಯಂತ ಹೇರಳವಾಗಿ ಲಭ್ಯವಿರುವ ಈ ಗಿಣಿ ಕೊಡಗು ಮತ್ತು ದಕ್ಷಿಣ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಅತಿ ವಿರಳ. ಸದಾ ಗುಂಪು ಗುಂಪಾಗಿಯೇ ಇವುಗಳ ಹಾರಾಟ. ದಟ್ಟದವಿ, ಕುರುಚಲು ಕಾಡು, ಕೃಷಿಭೂಮಿ, ಜನವಸತಿ ಪ್ರದೇಶ ಮತ್ತು ಪೇಟೆಗಳಲ್ಲೂ ಇವು ಲಭ್ಯ, ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುವ ಇವುಗಳ ಸಾಮರ್ಥ್ಯ ಬಲು ವಿಶೇಷ, ಈ ಗಿಳಿಗಳು ಸಂಖ್ಯೆ ಆಧಾರದಲ್ಲಿ ಭಾರತದ ಪ್ರಮುಖ 5 ಪಕ್ಷಿಗಳಲ್ಲಿ ಒಂದಾಗಿದೆ. ಮೈಸೂರು ಪಕ್ಷಿಗಣತಿಯಲ್ಲಿ ಅತಿ ಹೆಚ್ಚಿರುವ ಹಕ್ಕಿಗಳಲ್ಲಿ ಎರಡನೇ ಸ್ಥಾನ ಇದಕ್ಕಿದೆ. ಬೀದಿ ಪಾರಿವಾಳ  ಮೊದಲ ಸ್ಥಾನದಲ್ಲಿದೆ. ನೀಳದೇಹದ ಈ ಗಿಳಿಗೆ ಕೆಂಪು ಕೊಕ್ಕು. ಗಂಡಿಗೆ ಕತ್ತಿನ ಮೇಲೆ ಗುಲಾಬಿ ಮತ್ತು ಕಪ್ಪು ಸರ.  ಈ ಗಿಳಿಯು ಮಾನವನ ಸ್ವರವನ್ನು ಸ್ವಲ್ಪ ಮಟ್ಟಿಗೆ ಅಣಕಿಸುತ್ತದೆ. ಹಾಗಾಗಿ ಇದನ್ನು ಹಿಡಿದು ಮಾರಾಟ ಮಾಡುವ ಜಾಲ ನಮ್ಮಲ್ಲಿದೆ. ಗಿಣಿ ಶಾಸ್ತ್ರಕ್ಕೆ ಬಳಸುವುದೂ ಇದೇ ಗಿಣಿಯನ್ನು. ಮುದ್ದಿನ ಗಿಣಿ ಎಂದು ಎಲ್ಲರೂ ಕೊಂಡಾಡುವುದೂ ಇದೇ ಗಿಳಿಯನ್ನು.

Rose ringed parakeet

Rose ringed parakeet

3. ಕೆಂದಲೆ ಗಿಳಿ: Plum-headed parakeet (Psittacula cyanocephala)

36ಸೆಂ.ಮೀ ಉದ್ದದ ಈ ಗಿಳಿಗಳು ಕರ್ನಾಟಕದ ಕೆಲಪ್ರದೇಶಗಳಿಗೆ ಮಾತ್ರ ಸೀಮಿತ. ಕರಾವಳಿ, ಮಲೆನಾಡಿನಲ್ಲಿ ಯಥೇಚ್ಛವಾಗಿರುವ ಇವು ಘಟ್ಟಪ್ರದೇಶಗಳಲ್ಲಿ ಅಪರೂಪ. ಮೈಸೂರು ಪ್ರಾಂತ್ಯಕ್ಕೆ ಬಲು ಅಪರೂಪದ ಭೇಟಿ. ಗಂಡು ಹಕ್ಕಿಯು ಕೆಂಪು ತಲೆ ಹೊಂದಿದ್ದು ಅದಕ್ಕೆ ಹಳದಿ ಕೊಕ್ಕು ಮತ್ತು ಅಚ್ಚಗೆಂಪು ಭುಜದ ಪಟ್ಟಿ. ಹೆಣ್ಣಿಗೆ ಬೂದು ತಲೆ ಮತ್ತು ಹಳದಿ ಕೊಕ್ಕು. ಚಾಯ್ ಚುಯ್ ಕೂಗಿನೊಂದಿಗೆ ಕಾಡುಗಳಲ್ಲಿ ಗುಂಪಿನಲ್ಲಿ ಹಾರಾಟ.

Plum headed parakeet

Plum headed parakeet 

4. ಮಲೆಗಿಳಿ: Malabar parakeet (Psittacula columboides)

38ಸೆಂ.ಮೀನ ಈ ಮಲೆನಾಡ ಗಿಳಿಗೆ ಬೂದು ಮಿಶ್ರಿತ ಹಸಿರು ಮೈ. ಅಚ್ಚ ನೀಲಿ-ಹಸಿರು ಮತ್ತು ಕಪ್ಪು ಬಣ್ಣದ ಸರ, ಹಳದಿ ತುದಿಯ ನೀಲಿ ಬಾಲ. ಉಳಿದ ಗಿಳಿಗಳಂತೆ ಇಲ್ಲೂ ಹೆಣ್ಣಿಗೆ ಸರ ಇಲ್ಲ. ನೀಲಿ ರೆಕ್ಕೆ ಇವಕ್ಕಾದುದರಿಂದ Blue-winged parakeet ಎಂಬ ಹೆಸರೂ ಇದೆ. ಮಲೆನಾಡಿನಲ್ಲಿ ಮಾತ್ರ ಇವು ಲಭ್ಯ ಹಾಗಾಗಿ ಇದು Malabar parakeet ಚು. ಚುಮೀ ಎಂಬ ಕೂಗಿನೊಂದಿಗೆ ದಟ್ಟಡವಿಗಳಲ್ಲಿ ಹಾರಾಟ.

Malabar parakeet

Malabar parakeet

5. ಚಿಟ್ಟು ಗಿಳಿ:  Indian Lorikeet (Loriculus vernalis)

ಭಾರತದಲ್ಲಿನ ಏಕೈಕ Lorikeet ಇದು. 14 ಸೆಂ.ಮೀನ ನೀಳ ಬಾಲವಿಲ್ಲದ ಪುಟ್ಟ ಹಸಿರು ಗಿಳಿ. ಕೆಂಪು ಕೊಕ್ಕು ಮತ್ತು ಪೃಷ್ಠ. ಗಂಡು ಹಕ್ಕಿಗೆ ನೀಲಿ ಗಂಟಲು. ಇವೂ ಕೂಡಾ ನಮ್ಮ ಕರ್ನಾಟಕದಲ್ಲಿ ಮಲೆನಾಡಿಗೆ ಸೀಮಿತ. ಅಪರೂಪಕ್ಕೆ ಬೇರೆಡೆಯಲ್ಲೂ ದಾಖಲಾದದ್ದುಂಟು. ನೇಲಾಡುವ ಸ್ವಭಾವ ಇದರದ್ದಾದುದರಿಂದ vernal hanging parrot ಎನ್ನುವರು.ರಾತ್ರಿ ವೇಳೆ ಬಾವಲಿಯಂತೆ ನೇತಾಡಿಕೊಂಡು ನಿದ್ರಿಸುತ್ತದೆ. ಬಾಳೆಮೋತೆಯ ಮಕರಂದ, ಅಡಿಕೆಯ ಸಿಂಗಾರ, ಹಲಸಿನ ಹಣ್ಣು, ಚೂರಿ ಹಣ್ಣು, ಸರೋಳಿ/ಸಿಳ್ಳೆ ಹಣ್ಣು, ಅಂಕೂಲೆ, ಮುಳ್ಳಂಕೋಲೆ ಇವಕ್ಕೆ ಬಲುಪ್ರಿಯ. ಹಾರಾಟದಲ್ಲಿ ಮಾತ್ರ ಸ್ಚಿ. ಚಿ. ಚಿ… ಕೂಗು.

Indian lorikeet

Indian lorikeet

06

ಮುಂದುವರಿಯುವುದು… …

ಚಿತ್ರಗಳು : ಡಾ ಅಭಿಜಿತ್ ಎ.ಪಿ.ಸಿ , ಅರ್ನಾಲ್ಡ್ ಗೋವಿಸ್ , ವಿಜಯಲಕ್ಷ್ಮಿ ರಾವ್, ಶಿವಶಂಕರ ಕಾರ್ಕಳ .

 

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!