ಪರಿಸರದ ನಾಡಿ ಬಾನಾಡಿ

ಮುನಿಯುವಂತಾಯ್ತಲ್ಲೊ ಮುನಿಯ

ನವಂಬರ ತಿಂಗಳಲ್ಲಿ ನಾವು ನೆಟ್ಟ ಭತ್ತದ ಸಸಿ ತೆನೆಹೊತ್ತು ಕೊಯಿಲಿಗೆ ಸಿದ್ಧವಾಗಿರುತ್ತದೆ.

ಭತ್ತ ನೆಡಲು ಗದ್ದೆಯನ್ನು ಹದ ಮಾಡುವುದು , ಅನಂತರ ಭತ್ತ ನೇಜಿ ನೆಡುವುದು, ನೀರು ನೋಡಿಕೊಳ್ಳ್ಳುವುದು, ಕಳೆ ನಿಯಂತ್ರಣ.  ಹೀಗೆ ಭತ್ತ ಬೆಳೆಯಲು ಅನೇಕ ಶ್ರಮದಾಯಕ ಕೆಲಸಗಳಿವೆ (ಓದಿ ಶ್ರೀ ಎ.ಪಿ ಚಂದ್ರಶೇಖರರು ಬರೆದ – ಅನ್ನದ ಅರಿವು ಕೃತಿ). ಇವೆಲ್ಲಕ್ಕಿಂತ ತ್ರಾಸದಾಯಕ ಭತ್ತ ತೆನೆ ಹೊತ್ತು ನಿಂತಾಗ! ಅದೇ ಫಸಲಿನ ಕಾವಲು. ಇದು ಕನ್ನಡದ ಕಾವಲಿಗಿಂತಲೂ ಕಷ್ಟ ಕಷ್ಟ .

ಮಾಡುವುದಾದರೆ, ರೈತರಿಗೆ ಕೊನೆಯ ಹದಿನೈದು ದಿನ ಇಪ್ಪತ್ತನಾಲ್ಕು ಗಂಟೆ ಕೆಲಸ ಇದೆ . ರಾತ್ರಿಯಲ್ಲಿ ಇಲಿ, ಹೆಗ್ಗಣ, ಹಂದಿಗಳ ಉಪಟಳ. ಹಗಲಲ್ಲಿ ಬಾನಾಡಿಗಳ ಉಪದ್ರ! ನವಿಲು , ಗಿಣಿ , ಗೀಜುಗ , ರಾಟೇವಾಳ ಹೀಗೆ ಬಾನಾಡಿಗಳ ಪಟ್ಟಿ ಮುಂದುವರಿಯುತ್ತದೆ. ಇವುಗಳ ಪೈಕಿ ಮೊದಲಿಗ ಈ ರಾಟೇವಾಳ / ಮುನಿಯಾ !

ಮುನಿಯಾಗಳಲ್ಲಿ 6 ವಿಧ

Tricoloured munia (Lonchura malacca) : ತ್ರಿವರ್ಣ ರಾಟೇವಾಳ

Tricoloured munia (Lonchura malacca) : ತ್ರಿವರ್ಣ ರಾಟೇವಾಳ

White-rumped munia  (Lonchura striata): ಬಿಳಿ ಬೆನ್ನಿನ ರಾಟೇವಾಳ

White-rumped munia  (Lonchura striata): ಬಿಳಿ ಬೆನ್ನಿನ ರಾಟೇವಾಳ

Scaly-breasted munia or spotted munia (Lonchura punctulata): ಚುಕ್ಕೆ ರಾಟೇವಾಳ

Scaly-breasted munia or spotted munia (Lonchura punctulata): ಚುಕ್ಕೆ ರಾಟೇವಾಳ

Black-throated munia  (Lonchura kelaarti): ಕಪ್ಪು ಕತ್ತಿನ ರಾಟೇವಾಳ

04

Red avadavat, red munia or strawberry finch (Amandava amandava): ಕೆಂಪು ರಾಟೇವಾಳ

Indian silverbill or white-throated munia (Lonchura malabarica):  ಬಿಳಿ ಕತ್ತಿನ ರಾಟೇವಾಳ

Indian silverbill or white-throated munia (Lonchura malabarica):  ಬಿಳಿ ಕತ್ತಿನ ರಾಟೇವಾಳ

ಈ ಆರೂ ಮುನಿಯಾಗಳು ಉತ್ತಮ ಸ್ನೇಹಿತರು. ಸದಾ ಒಟ್ಟಿಗಿರುತ್ತವೆ. ಒಂದು ಮುನಿಯಾ ಗುಂಪಿನಲ್ಲಿ ಕನಿಷ್ಠ ಇಪ್ಪತ್ತಾದರೂ ಹಕ್ಕಿಗಳನ್ನು ಕಾಣಬಹುದು. ಕೆಲವು ಗುಂಪುಗಳಲ್ಲಿ ಸಾವಿರಕ್ಕೂ ಅಧಿಕ ಹಕ್ಕಿಗಳಿರುತ್ತವೆ.

08

ಈ ಆರೂ ಮುನಿಯಾಗಳಲ್ಲದೆ ಎರಡು ವಿಧದ ಗೀಜಗಗಳು ಗುಂಪಿನಲ್ಲಿ ಬೆರೆತಿರುತ್ತವೆ. ಇವುಗಳೆಂದರೆ

 Baya weaver (Ploceus philippinus): ಗೀಜಗ / ನೇಕಾರ ಪಕ್ಷಿ

06

Streaked weaver (Ploceus manyar): ಪಟ್ಟಿ ಗೀಜಗ

07

ಈ ಎಂಟೂ ಬಗೆಯ ಹಕ್ಕಿಗಳು ಒಟ್ಟಿಗೇ ಇರಬೇಕೆಂದೇನೂ ಇಲ್ಲ. ಊರಿಂದ ಊರಿಗೆ ಪ್ರಭೇದಗಳು ಬದಲಾಗುತ್ತವೆ.

ಉದಾ : ಕರಿಕತ್ತಿನ ರಾಟೇವಾಳವನ್ನು ಮಲೆನಾಡಿನಲ್ಲಿ ಮಾತ್ರ ಕಾಣಬಹುದು . ಇನ್ನು ಬಿಳಿಕತ್ತಿನ ರಾಟೇವಾಳ ಬಯಲು ಸೀಮೆಯಲ್ಲಿ ಬಲು ಸಾಮಾನ್ಯ , ಆದರೆ ಮಲೆನಾಡಿನಲ್ಲಿ ವಿರಳ .

ಇಂಥಾ ಮುನಿಯಾಗಳ ಹಿಂಡು ಗದ್ದೆಗೆ ಧಾಳಿ ಇಟ್ಟರೆ ಎಷ್ಟು ಫಸಲು ನಾಶವಾಗಬಹುದೆಂದು ನೀವು ಊಹಿಸಬಲ್ಲಿರಾ? ಅದು ಎಷ್ಟಾದರೂ ಆಗಬಹುದು. ಸೊನ್ನೆಯೂ ಆಗಬಹುದು.  Red-billed quelea (Quelea quelea) /  black-faced dioch ಎಂಬ ಆಫ್ರ್ರಿಕಾದ ಹಕ್ಕಿ ಹಿಂಡು ಹಿಂಡಾಗಿ ಒಮ್ಮೆ ಗದ್ದೆಗೆ ಭೇಟಿ ಇಟ್ಟರೆ ಒಂದೇ ದಿನದಲ್ಲಿ 60 ಟನ್ ಬೆಳೆ ನಾಶ ಮಾಡುತ್ತದಂತೆ) ಅವುಗಳನ್ನು ಓಡಿಸುವುದು ಯಾವುದೇ ರೈತನಿಗಾದರೂ ಇಂದಿನ ಕಾರ್ಮಿಕ ಕೊರತೆಯಲ್ಲಿ ಅಷ್ಟೊಂದು  ಸುಲಭವಾಗದು .

ಸಿ.ಡಿ ನೇತುಹಾಕುವುದು, ಹಳೇ ಬಟ್ಟೆ ಕಟ್ಟುವುದು, ಬೆರ್ಚಪ್ಪನನ್ನು ನಿಲ್ಲಿಸುವುದು, ಜಾಗಟೆ ಬಾರಿಸುವುದು, ಪಟಾಕಿ ಹಚ್ಚುವುದು  ಹೀಗೆ ಮುನಿಯಾಗಳಿಗೆ ಭಯೋತ್ಪಾದನೆಯನ್ನು ಮಾಡುವ ಅನೇಕ ವಿಧಾನಗಳು ಮೊದಲಿನಿಂದಲೂ ರೂಢಿಯಲ್ಲಿವೆ. (ಮುನಿಯಾಗಳು ಭತ್ತಕ್ಕೆ ಮಾತ್ರವಲ್ಲ, ಅವು ಜೋಳ, ರಾಗಿ, ನವಣೆ, ಇಂಥ ಯಾವುದೇ ಧಾನ್ಯಕ್ಕಾದರೂ ಹೀಗೆ ಧಾಳಿ ಮಾಡುತ್ತವೆ.)

09

ಮೇಲೆ ತಿಳಿಸಿದ  ಅನೇಕ ಉಪಾಯಗಳು ಸದ್ಯದ ರಿಯಲ್ ಎಸ್ಟೇಟ್ ಸ್ಥಿತಿಯಲ್ಲಿ  ಕೆಲಸ ಮಾಡದಿರಲು ರೈತ  ಬೆಳೆ ಉಳಿಸಿಕೊಳ್ಳುವುದಕ್ಕೆ ಗದ್ದೆ ಪೂರ್ತಿ ಬಲೆ ಹಾಕಿದ ದೃಷ್ಟಾಂತವನ್ನು ಕಳೆದ ವಾರವಷ್ಟೇ ಓದಿರುವಿರಿ.

ಒಟ್ಟಿನಲ್ಲಿ ಮುನಿಯಾಗಳು ರೈತರಿಗೆ ಶತ್ರುವೆಂದಾಯಿತು. ಇಂಥಾ ಮುನಿಯಾಗಳ ಕುರಿತು ಕೃಷಿಕ ಮುನಿಯದಿರುವುದೆಂತು !

ಮುನಿಯಾಗಳು ನಿಜಕ್ಕೂ ರೈತರಿಗೆ ಶತ್ರುವೇ?

ಇದಕ್ಕೆ ಉತ್ತರ ಕಂಡುಕೊಳ್ಳುವ ಮೊದಲು ನಾವು ನಮ್ಮ ಆಹಾರ ಪದ್ಧತಿಯನ್ನು ತುಸು ಅವಲೋಕಿಸಬೇಕು. ನಾವಿಂದು ಬಂದು ನಿಂತಿರುವ ಪರಿಸ್ಥಿತಿಯಲ್ಲಿ ಕೇವಲ ಅಕ್ಕಿ, ಗೋಧಿಯನ್ನಷ್ಟೇ ಆಹಾರ ಧಾನ್ಯಗಳನ್ನಾಗಿ ಬಳಸುತ್ತಿದ್ದೇವೆ. ರಾಗಿ, ಜೋಳ ಬಳಕೆ  ದಿನೇ ದಿನೇ ಕಡಿಮೆಯಾಗುತ್ತಿದೆ. ಇನ್ನು ಕಿರು ಧಾನ್ಯಗಳಾದ ನವಣೆ, ಸಾಮೆ, ಆರ್ಕ, ಊದಲು, ಬರಗು, ಸಜ್ಜೆ, ಕೊರಲು ಇಂಥವುಗಳ ಹೆಸರೇ ಬಹುತೇಕ ಮರೆತಿದ್ದೇವೆ. ತರಕಾರಿಗಳ ವಿಷಯಕ್ಕೆ ಬರುವುದಾದರೆ ಕ್ಯಾರೆಟ್, ಬೀಟ್‍ರೂಟ್, ಟೊಮೇಟೋ, ಬೀನ್ಸ್‍ಗಿಂತ ಮುಂದೆ ಸಾಗುವುದಿಲ್ಲ. ನೂರೊಂದು ಬೆರಕೆ ಸೊಪ್ಪುಗಳನ್ನು ಬಳಸುತ್ತಿದ್ದ ನಾವು ಇಂದು ಕೇವಲ ದಂಟು, ಪಾಲಾಕು, ಮೆಂತೆ ಸೊಪ್ಪುಗಳಿಗೆ ನಿಂತಿದ್ದೇವೆ. ನಮ್ಮ  ಆಹಾರದ ಸಾಧ್ಯತೆಗಳೇ ಕುಂಟಿರುವ ಈ ಕಾಲಘಟ್ಟದಲ್ಲಿ ಎಲ್ಲೆಲ್ಲೂ ಕೃತಕ ನೀರಾವರಿಯಲ್ಲಿ ಭತ್ತವನ್ನು ಬೆಳೆಯಹೊರಟಿದ್ದೇವೆ. ದಕ್ಷಿಣಕನ್ನಡ, ಕೊಡಗಿನಂಥಾ ಜಾಗಗಳಲ್ಲಿ ನೀರಾವರಿ ಯೋಜನೆಯಿಲ್ಲದೆ, ಮಳೆಯಾಶ್ರಯದಲ್ಲಿ ಭತ್ತ ಬೆಳೆಯುವ ಸಾಧ್ಯತೆ ಇದ್ದರೂ ಈಗ ಬೆಳೆಯುತ್ತಿಲ್ಲ. ಮೇಲೆ ತಿಳಿಸಿದ ಕಿರುಧಾನ್ಯಗಳನ್ನು ಯಾರೂ ಬೆಳೆಯುವ ಗೋಜಿಗೇ ಹೋಗುತ್ತಿಲ್ಲ.

ಎಲ್ಲೆಲ್ಲೂ ಭತ್ತವನ್ನೇ ಬಿತ್ತುತ್ತಿರುವಾಗ ಈ ಮುನಿಯಾಗಳಾದರೂ ಹೋಗುವುದು ಎಲ್ಲಿಗೆ? ತುಸು ಸೂಕ್ಷ್ಮವಾಗಿ ಗಮನಿಸಿದರೆ ಈ ಮುನಿಯಾಗಳಿಗೆ ಭತ್ತ ಪ್ರಿಯವಾದ ಆಹಾರವಲ್ಲ. ಅವಕ್ಕೆ ಕಿರುಧಾನ್ಯಗಳೇ ಶ್ರೇಷ್ಠ . ಅವಷ್ಟೇ ಅಲ್ಲ ಅವಕ್ಕೆ ಬೇಲಿಯಲ್ಲಿರುವ ಹುಲ್ಲಿನ ಬೀಜ, ಅಲ್ಲೇ ಇರುವ ನಾಯಿತುಳಸಿ ಬಲು ಪ್ರಿಯ. ಇನ್ನು ಗದ್ದೆಯೊಳಗೆ ಭತ್ತದೊಂದಿಗೆ ಬರುವ ಗಂಡುಭತ್ತ sÀvÀÛ (Echinochloa crus-galli) , Setaria viridis, ಮಾವು ( ಒಂದು ಜಾತಿಯ ಕಳೆ) ಎಂಬ ಕಳೆಯ ತೆನೆ ಅವಕ್ಕೆ ಮೆಚ್ಚಿನ ಖಾದ್ಯ. ಇವು ಯಾವುವೂ ಸಿಕ್ಕದಿದ್ದಾಗ ಕೊನೆಯಲ್ಲಿ ತಿನ್ನುವುದು ನಮ್ಮ ಭತ್ತವನ್ನು. ಅಷ್ಟಕ್ಕೂ ಭತ್ತವೂ ಒಂದು ಹುಲ್ಲೆಂದು ಅವಕ್ಕೆ ಗೊತ್ತು . ಹುಲ್ಲುಳಿಸದ ಹುಲು ಮಾನವನಿಗೀಗ ಕುತ್ತು .

10 11 12

ಸಾವಿರಾರು ಎಕ್ಕರೆಗಳನ್ನು ಬೋಳು ಮಾಡಿ ಒಂದೆಡೆ ಏಕಬೆಳೆ ಪದ್ಧತಿ, ಇನ್ನೊಂದೆಡೆ  ಕಳೆಗಳೆಮ್ಮ ಶತ್ರುಗಳೆಂಬ ಅವಿವೇಕ. ಅಲ್ಪ ಸ್ವಲ್ಪ ತೋಟವಿರುವವರು ಕೂಡ Round-up ನಂಥ ಕಳೆನಾಶಕದ ಮೂಲಕ ಇಡೀ ತೋಟವನ್ನು ಹುಲ್ಲಿಲ್ಲದಂತೆ ಮಾಡಿದರೆ, ಮುನಿಯಾಗಳಿಗೆ ಸಿಗುವ ಹುಲ್ಲಿನ ಬೀಜಕ್ಕೂ ಸಂಚಕಾರ ತಂದರೆ  ಅವೇನು ಮಾಡಬೇಕು ಹೇಳಿ? ಈ ಮುನಿಯಾಗಳೊಂದಿಗೆ ಮುನಿಸು ತರವೇ ಮನುಜಾ ಎಂದು ಅದು ಕೇಳಬೇಕಷ್ಟೆ.

ಈಗ ನಾನು ಒಂದಷ್ಟು ಹಿಂದಿನ ಕಥೆ ಹೇಳುವೆನು ಕೇಳಿ – ಆತ ಹಳಬ, 70 ವರ್ಷ ದಾಟಿದವ. ನಮ್ಮ ತೋಟದ ಸಮೀಪವಿರುವ ಹೊಲವೊಂದರಲ್ಲಿ ಜೋಳ ಬೆಳೆದಿದ್ದ. ಆ ಜೋಳವನ್ನು ಅನೇಕ ಹಕ್ಕಿಗಳು ಮುತ್ತಿಕೊಂಡಿದ್ದ್ದುವು. ಅವನು ಒಂದು ಬದಿಯಿಂದ ಓಡಿಸುತ್ತಿದ್ದರೆ, ಹಕ್ಕಿಗಳು ಇನ್ನೊಂದು ಕಡೆಯಲ್ಲಿ ತಿನ್ನುತ್ತಿದ್ದುವು. ಅವನಲ್ಲಿ ಕೇಳಿದೆ. “ಹಕ್ಕಿಗಳಿಂದ ನಿಮಗೆ ಭಾರೀ ನಷ್ಟವಲ್ಲವೇ?’’ ಆತನ ಉತ್ತರ ಹೀಗಿತ್ತು  – “ನಾವು ಬೆಳೆದರೆ ತಾನೆ ಅವೂ ತಿನ್ನುವುದು . ಅವು ತಿಂದಿದ್ದರಿಂದಾಗಿ ನನ್ನ ಹೊಟ್ಟೆಗೇನೂ ಕಮ್ಮಿಯಾಗಿಲ್ಲ. ಅವು ತಿಂದು ಮಿಕ್ಕಿದ್ದು ನಮ್ಮ ಕುಟುಂಬಕ್ಕೆ ಧಾರಾಳ ಸಾಕು” ಇಂಥಾ ಉನ್ನತ ವಿಚಾರಗಳಿಂದ ಮಿಳಿತವಾಗಿತ್ತು ನಮ್ಮ ಸಂಸ್ಕೃತಿ.

13

ಇನ್ನೂ ಹಿಂದಿನ ಸಂಗತಿ ಕೇಳಿ, ಈ ಮುನಿಯಾಗಳನ್ನು ನಮ್ಮ ಹಿರಿಯರು  “ಪುತ್ರಿಕಾ” ಎಂದು ಕರೆದಿದ್ದರು. ಪುತ್ರಿಕಾ ಎಂದರೆ ಪ್ರೀತಿಯ ಮಗಳು . ಮುನಿಯಾಗಳು ನಮ್ಮ ಬೆಳೆಯನ್ನು ತಿನ್ನುತ್ತಿದ್ದರೆ ನಮ್ಮ ಮನೆಮಗಳೇ ಉಣ್ಣುತ್ತಿದ್ದಾಳೆ ಎಂಬ ಪ್ರೀತಿಯನ್ನು ನಮ್ಮ ಹಿರಿಯರು ತೋರಿದ್ದರು .

14

ಆದರೆ  ಈಗ? ಎಲ್ಲವೂ ಮನಿಯ (Money) ಮೂಲಕ ಅಳೆಯುವಾಗ ಮುನಿಯಾಕ್ಕೆ ಸ್ಥಾನವಿಲ್ಲವಾಗಿದೆ . ಪ್ರತಿಯೊಬ್ಬರೂ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಷ್ಟೆಲ್ಲಾ ಮಾಡಿದರೂ ಉಳಿದ ಉದ್ಯೋಗಕ್ಕಿಂತ ಕೃಷಿಯಲ್ಲಿನ ಆದಾಯ ಮತ್ತು ಗೌರವ ಎರಡೂ ಕಡಿಮೆಯಾಗುತ್ತಿದೆ  ಎಂಬುದನ್ನು ಈ ಸದರ್ಭದಲ್ಲಿ ಗಮನಿಸಿ. ಹಾಗಾಗಿ ಕೃಷಿಕ ತಾನು ಕಷ್ಟಪಟ್ಟದ್ದು ಸಾಕು, ತನ್ನ ಮಕ್ಕಳು ಪೇಟೆ ಉದ್ಯೋಗದಲ್ಲಿರಲಿ ಎಂದು ಆಶಿಸುತ್ತಿದ್ದಾನೆ.

ಮುಂದೊಂದು ದಿನ ಬರಲಿದೆ. ಆಗ ಮುನಿಯಾಗಳು ಭತ್ತ ತಿನ್ನಲಾರವು. ಏಕೆಂದರೆ ಆಗ ಭತ್ತ ಬೆಳೆಯುವ ರೈತನಿರುವುದಿಲ್ಲ . ಆದರೆ ಆ ಭತ್ತದ ಗದ್ದೆಗಳಲ್ಲಿ ಹುಲ್ಲಿರುತ್ತದೆ . ಮುನಿಯಾಗಳಾದರೂ ಆನಂದದಿಂದ ತಿನ್ನುತ್ತಿರುತ್ತವೆ . ಆಗ ಮನುಷ್ಯ ತಿನ್ನುವುದೇನು ?  ಇಂದು ಕೊಂದು ಮುಗಿಸಿದ ಹುಲ್ಲೇ ತಾನಂದು ಮನುಷ್ಯನ ತಿನ್ನಲಿದೆ .

ಚಿತ್ರಗಳು : ಡಾ. ಅಭಿಜಿತ್ ಎ.ಪಿ.ಸಿ. ; ವಿಜಯಲಕ್ಷ್ಮೀ ರಾವ್

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!