ಕೊರೋನಾ ಎಂಬ ಕಾಣದ ಜೀವಿಗೆ (ವೈರಸ್) ಇಡೀ ಮನುಕುಲವೇ ಬೆಚ್ಚಿದೆ. ಮನುಷ್ಯ ಬಿಟ್ಟು ಇನ್ನುಳಿದ ಎಲ್ಲಾ ಜೀವಿಗಳೂ ತಮ್ಮ ದೈನಂದಿನ ಕಾರ್ಯಗಳನ್ನು ಯಾವ ಅಡಚಣೆಯಿಲ್ಲದೆ ಮಾಡುತ್ತಿವೆ. ಅಥವಾ ಅವುಗಳು ನಮ್ಮ ಇರುವಿಕೆ ಇಲ್ಲದಿರುವುದರಿಂದ ಬಲು ಆನಂದದಿಂದಲೇ ಇದೆ ಎನ್ನಬಹುದು. ಅದನ್ನೆಲ್ಲಾ ವಿಶ್ಲೇಷಣೆ ಮಾಡುತ್ತಾ ಹೋದರೆ ಅದುವೇ ಒಂದು ಪುಸ್ತಕವಾಗಬಹುದು. ಆದರೆ ಆ ವಿಶ್ಲೇಷಣೆ/ವಿಮರ್ಶೆ ಕೂಡಾ ಅಗತ್ಯ. ಅದನ್ನು ಇನ್ನೊಂದು ಲೇಖನದಲ್ಲಿ ಮಾಡೋಣವೆಂದೆಂದು ಕೊಂಡಿದ್ದೇನೆ. ಕೊರೋನಾ ಹೊಡೆತಕ್ಕೆ ತತ್ತರಿಸಿ, ಖಿನ್ನತೆಗೆ/ ಆತಂಕಕ್ಕೆ ತಳ್ಳಲ್ಪಟ್ಟಿರುವ ನಮಗೆ, ಈ ಸಂದರ್ಭದಲ್ಲಿ ವಿಮರ್ಷೆಯು ಖಿನ್ನತೆಯನ್ನು ಮತ್ತಷ್ಟು ಏರಿಸಬಹುದು. ಹಾಗಾಗಿ ಇಂದು ನಾವು, ನಾವಿರುವ ಸ್ಥಿತಿಯಲ್ಲೇ ಏನೇನು ನೋಡಬಹುದು, ಎಷ್ಟು ಖುಷಿಪಡಬಹುದು ಎನ್ನುವುದನ್ನು, ನನ್ನಿಷ್ಟದ, ನಮ್ಮ ನಿಮ್ಮ ಮನೆಯಲ್ಲಿರುವ ಜೇಡಗಳನ್ನು ಪರಿಚಯಿಸುವ ಮತ್ತು ಅದರ ಗುಣ ವಿಶೇಷಗಳನ್ನು ತಿಳಿಸುವ ಪ್ರಯತ್ನ ಮಾಡುತ್ತೇನೆ.
ಜೇಡಗಳನ್ನು ನೋಡದವರಿಲ್ಲ, ಅದರ ಬಲೆಯನ್ನು ಸ್ವಚ್ಚಗೊಳಿಸದವರೂ ಬಲು ವಿರಳ! ಸಾಮಾನ್ಯವಾಗಿ ನಮ್ಮ ಮನೆಯ ಮೂಲೆ ಮೂಲೆಯಲ್ಲಿ , ಚಾವಣಿಯಲ್ಲಿ ಗುಡಿಸಿದಷ್ಟೂ ಬೊಡಿಸುವ ಜೇಡಗಳನ್ನು ನೋಡಿರುತ್ತೇವೆ. ಉದ್ದನೆಯ ಎಂಟು ಕಾಲುಗಳು. ನೀಳ ದೇಹದ ಜೇಡವಿದು. ಫೋಲಿಸಿಡೇ (Pholcidae) ಕುಟುಂಬಕ್ಕೆ ಸೇರಿದ ಈ ಜೇಡವನ್ನು ಸಾಮಾನ್ಯವಾಗಿ Daddy long legs ಎಂದೂ ಕರೆಯುವರು. Daddy long legs, ಎಂಟೂ ಕಾಲುಗಳು ಸಮಾನವಾಗಿ ಉದ್ದವಿರುವುದರಿಂದ ಈ ಹೆಸರು. ಒಪಿಲಿಯೋನಸ {Opiliones (Harvest man)} ಅನ್ನು ಕೂಡಾ Daddy long legs ಎಂದು ಕರೆಯುವವರಿದ್ದಾರೆ. ಇದೂ ಕೂಡಾ ಅಷ್ಟಪದಿಯೇ. ಆದರೆ ಜೇಡಗಳಂತೆ ಎಂಟು ಕಣ್ಣುಗಳಿಲ್ಲ, ಜೇಡದಂತೆ ಬಲೆಯನ್ನೂ ಬಿಡುವುದಿಲ್ಲ. ನಮ್ಮ ಮನೆಯ ಚಾವಣಿಯ ಜೇಡಗಳಂತೆಯೇ ಇವೂ ಕೂಡಾ ನಮಗರಿವಿಲ್ಲದೆಯೇ ನಮ್ಮನೆಯೊಳಗಿದೆ. ಆದರೆ ಪೇಟೆಯ ಮನೆಗಳಲ್ಲಿ ತುಸು ವಿರಳ. ಮಡಿಕೇರಿ, ಸಕಲೇಶಪುರದಂಥಾ ಜಾಗದವರಿಗೆ ಇದು ಬಲು ಸಾಮಾನ್ಯ.
ಇನ್ನು ನಮ್ಮ ಫೋಲಿಸಿಡೇ ಜೇಡದತ್ತ ಮತ್ತೆ ನೋಡೋಣ. ಹರಿಯು ಎಲ್ಲೆಲ್ಲೂ ಇರುವಂತೆ ಈ ಜೇಡನೂ ಎಲ್ಲೆಲ್ಲೂ ಇರುವ. ಕುಗ್ರಾಮದ ಮನೆಯಲ್ಲೂ ಇರುವ, ಬೆಂಗಳೂರಿನ ಬಹು ಮಹಡಿ ಮನೆಯಲ್ಲೂ ಇರುವ. ಪ್ರತಿ ಮನೆಯ ಪಾಯಿಕಾನೆಯಲ್ಲಿರುವ, ನಿಮ್ಮನೆ ಅಟ್ಟದಲ್ಲಿರುವ, ಕಾರು ಶೆಡ್ಡಿನಲ್ಲಿರುವ, ದೂರದರ್ಶನದ ಹಿಂಬದಿಯಲ್ಲಿರುವ, ನಿಮ್ಮ ಚಪ್ಪಲ್ ಗೂಡಿನ ಮುಂಬದಿಯಲ್ಲೂ ಇರುವ. ಮೊದಲೇ ಹೇಳಿದಂತೆ ಇದನ್ನು Daddy long legs ಎಂದು ಆಂಗ್ಲರು ಹೇಳಿದರು. ಕೊರೋನಾದಂತೇ ಇದೂ ಕೂಡಾ ವಿಶ್ವದೆಲ್ಲೆಡೆ ಇದೆ. Cellar spider ಇದರ ಅನ್ವರ್ಥನಾಮ. ಮನೆಯ ಚಾವಣಿಯಲ್ಲೇ ಹೆಚ್ಚಿರುವುದರಿಂದ ಈ ಹೆಸರು. ಹಾಗಾಗಿ ಈ ಜೇಡವನ್ನು ಇನ್ನು ಮುಂದೆ, ನಮ್ಮ ಅಚ್ಚ ಕನ್ನಡದಲ್ಲಿ ಚಾವಣಿ ಜೇಡವೆಂದೇ ಕರೆಯೋಣ.
ಈ ಜೇಡವು ಮನೆಯೊಳಗೆ ಬಲೆ ಕಟ್ಟಿದರೆ ಅವಲಕ್ಷಣವೆಂಬುದು ಹೆಚ್ಚಿನವರ ಅಭಿಪ್ರಾಯ. ಜೇಡ ಪ್ರಿಯನಾದ ನಾನೂ ನಮ್ಮನೆಯ ಪ್ರಮುಖ ಕೋಣೆಗಳಲ್ಲಿ ತಿಂಗಳಿಗೊಮ್ಮೆಯಾದರೂ ಬಲೆಯನ್ನು ಗುಡಿಸುತ್ತೇನೆ. ನೆಂಟರಿಷ್ಟರು ಬರುತ್ತಾರೆಂದರೆ ಮನೆಯ ಮುಖಮಂಟಪ ಲಕಲಕ. ನಾನೂ ಕೂಡಾ ಜೇಡನ ಬಲೆಯನ್ನು ಎಂದೂ ಗುಡಿಸದ ಮನೆಯೊಳಗೆ ಹೋಗಲು ಹಿಂಜರಿಯಬಹುದೇನೋ. ಇಲ್ಲಿಯವರೆಗೆ ಅಂಥಾ ಮನೆಯನ್ನು ನಾನಂತೂ ನೋಡಿಲ್ಲ! ಜೇಡನ ಬಲೆ ನಮ್ಮವರ ಶುಚಿತ್ವದ ಸಂಕೇತವೂ ಹೌದು. ಯಾರೆಷ್ಟು ಶುಚಿಗಳೆಂದು ಬಲು ಸುಲಭವಾಗಿ ಅಳಿಯಬಹುದು.
ಅಷ್ಟು ಶುಚಿಯಾಗಿರುವುದು ಅಗತ್ಯವೇ? ಪದೇ ಪದೇ ಗುಡಿಸಿದರೂ, ಕೆಲದಿನಗಳಲ್ಲಿ ಮತ್ತಷ್ಟೇ ಬಲೆಗಳದ್ಯಾಕೆ ಬರುತ್ತದೆ?
ಶುಚಿತ್ವದ ದೃಷ್ಟಿಯಲ್ಲೇ ಮತ್ತೆ ನೋಡುವುದಾದರೆ, ಇದು ನಮ್ಮ ಸೋಮಾರಿತನವನ್ನು ಮುರಿಯಲೋಸ್ಕರ, ಜೇಡನ ಬಲೆಯನ್ನು ಗುಡಿಸುವ ನೆಪದಲ್ಲಿ, ವಾರಕೊಮ್ಮೆಯಾದರೂ ಮನೆಯ ಧೂಳನ್ನು,ಕಲ್ಮಶವನ್ನು ಗುಡಿಸಲಿ ಎಂದು ತರ್ಕಿಸಬಹುದು!
ಆದರೆ ಪ್ರಕೃತಿಯಲ್ಲಿ ಬೇರೆಯದೇ ಉದ್ದೇಶವಿದೆ. ಜೇಡನ ಬಲೆ ಅಲ್ಲಿ ಇದೆ ಎಂದರೆ ಅದಕ್ಕೆ ಬೇಕಾದ ಆಹಾರ ಅಲ್ಲಿದೆ ಎಂದರ್ಥ! ನುಸಿ,ನೊಣ,ಹಾತೆಗಳೇ ಇದರ ಪ್ರಮುಖ ಆಹಾರ! ಕೊರೋನಾ ವೈರಸ್ಸಿಗಿಂತಲೂ ಭೀಕರ ರೋಗಗಳಾದ ಮಲೇರಿಯಾ,ಫೈಲೇರಿಯಾ, ಡೆಂಗೂ,ಚಿಕುನ್ ಗುನ್ಯಾವನ್ನು ಹರಡುವ ಸೊಳ್ಳೆಗಳೇ ಚಾವಣೆ ಜೇಡದ ಪ್ರಮುಖ ಆಹಾರ. ಇನ್ನು ನೊಣಗಳೇನು ಸಾಮಾನ್ಯವೇ? ಕಾಲರಾದಂಥಾ ಮಹಾಮಾರಿಯನ್ನು ಹರುಡುವಲ್ಲಿ ನಿಸ್ಸೀಮ! ಅಂಥಾ ನೊಣಗಳೂ ಈ ಜೇಡಕ್ಕೆ ಬಲು ಇಷ್ಟ. ಇವೆರಡಲ್ಲದೆ ಹಾತೆಗಳನ್ನು,ಜಿರಳೆ ಮತ್ತು ಚೇಳುಗಳನ್ನೂ ತಿನ್ನುವಿದುಂಟು. ಯಾವುದೇ ಜೀವಿಯು ಇದರ ಅಂದವಲ್ಲದ ಬಲೆಗೆ ಬಿದ್ದಾಕ್ಷಣ ಅಲ್ಲಿಗೆ ಹೋಗಿ,ತನ್ನ ತಂತುಕದಿಂದ ಬಲೆಯನ್ನು ಹೊರಹಾಕಿ,ತನ್ನ ಆಹಾರವನ್ನು ಬುತ್ತಿ ಕಟ್ಟಿದಂತೆ ಕಟ್ಟಿಬಿಡುತ್ತದೆ. ಬಲೆಯೊಳಗಿರುವ ಜೀವಿಯು ಕೆಲಹೊತ್ತಿನಲ್ಲಿ ಉಸಿರುಗಟ್ಟಿ ಸಾಯುತ್ತದೆ. ತನಗೆ ಹಸಿವಾದಾಗ ಬುತ್ತಿಯನ್ನು ಬಿಚ್ಚಿ ತಿನ್ನುತ್ತದೆ.
ಇಂಥಾ ಉಪಕಾರಿ ಜೇಡದ ಬಲೆಯನ್ನು/ ಅದರ ಮನೆಯನ್ನು ನಾವು ಹಾಗೆ ಗುಡಿಸಬಹುದೇ?
ಮೊದಲೇ ಹೇಳಿದಂತೆ,ನಮ್ಮ ಶುಚಿತ್ವಕ್ಕಾಗಿ, ನಮ್ಮ ಶಿಸ್ತಿಗಾಗಿ ಗುಡಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ನಮ್ಮನೆಯ ಕಾರ್ ಶೆಡ್, ಬಚ್ಚಿಲುಮನೆ,ಹಿಂಬದಿಯ ವರಾಂಡಗಳಲ್ಲಿ ಅಷ್ಟೋಂದು ಶುಚಿತ್ವದ ಅಗತ್ಯವಿಲ್ಲ. ಮತ್ತು ಜೇಡನ ಬಲೆಯಿಂದ ಯಾವ ಸೋಂಕು ಹರಡುವುದಿಲ್ಲ. ಅಲ್ಲದೆ ಜೇಡನ ಬಲೆಗೇ ಸೋಂಕು ನಿವಾರಕ ಗುಣವಿದೆ. ಇನ್ನು ಸೊಳ್ಳೆ, ನೊಣಗಳನ್ನು ನಿಯಂತ್ರಿಸುವ ಮೂಲಕ ಅದು ಮಾಡುತ್ತಿರುವ ಕೆಲಸ ಸಾಮಾನ್ಯವೇ?
ಉಡುಪಿಯ ಕೆಲಭಾಗಗಳಲ್ಲಿ, ಮೈಸೂರಿನ ಕೆಲ ಪ್ರಾಂತ್ಯಗಳಲ್ಲಿ ಜೇಡನ ಬಲೆಯನ್ನು ನವರಾತ್ರಿಯ ತಿಂಗಳಲ್ಲಿ ಗುಡಿಸುವುದಿಲ್ಲವಂತೆ! ಕೆಲ ಭಾಗದಲ್ಲಿ ಈ ಜೇಡವನ್ನು ಸಾಯಿಸಿದರೆ ಬ್ರಹ್ನ ಹತ್ಯಾ ದೋಷ ಬರುವುದೆಂಬ ನಂಬಿಕೆಯುಂಟಂತೆ. ನಂಬಿಕೆ ಏನೇ ಇರಲಿ, ಅದನ್ನು ಮೂಢವೆಂದು ಹೇಳುವುದು ಬೇಡ. ಅಂಥಾ ನಂಬಿಕೆಗಳಿಂದ ಯಾರಿಗೂ ಹಾನಿಯಿಲ್ಲ, ಬದಲಾಗಿ ಪ್ರಕೃತಿಗೆ ಬಲು ಲಾಭವುಂಟು. ಇಂಥಾ ನಂಬಿಕೆಗಳನ್ನು ನಾವು ತೆಗೆದದ್ದಿರಿಂದ ನಾವು ಸಾಧಿಸಿದ್ದಕ್ಕಿಂತ ಕಳೆದುಕೊಂಡದ್ದೇ ಜಾಸ್ತಿ !
ಸಂತಾನೋತ್ಪತ್ತಿ
ಹಾಂ ಈ ನವರಾತ್ರಿಯ ತಿಂಗಳಾದ ಅಕ್ಟೋಬರದಲ್ಲಿ ಚಾವಣಿ ಜೇಡದ ಸಂತಾನೋತ್ಪತ್ತಿ ಜಾಸ್ತಿ ಎಂಬುದು ನನ್ನ ಐದು ವರ್ಷದ ಅಧ್ಯಯನದಲ್ಲಿ ಕಂಡುಕೊಂಡಿರುವ ಸತ್ಯ!
ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೈಕೆ, ಇದನ್ನು ನಾವು ನೀವೆಲ್ಲರೂ ಬಲು ಹತ್ತಿರದಿಂದ ಕಾಣಬಹುದು. ನಾವು ಮನುಷ್ಯರನ್ನು ನಾಚಿಸುವಂತೆ ಇವು ತಮ್ಮ ಮರಿಗಳನ್ನು ಸಾಕುತ್ತವೆ. ಮಿಲನ ನಂತರ ಕೆಲ ದಿನಗಳಲ್ಲೇ ಮೊಟ್ಟೆಯನ್ನಿಡುತ್ತವೆ. ಮೊಟ್ಟೆಯನ್ನು ಒಂದರ ಮೇಲೊಂದು ಜೋಡಿಸಿ, ತಮ್ಮ ಬಲೆಯ ಸಹಾಯದಿಂದು ವೃತ್ತಾಕಾರದಲ್ಲಿ ಚೆಂಡಿನಾಕೃತಿ ಮಾಡುತ್ತದೆ. ನೋಡಲು ಥೇಟ್ ದ್ರಾಕ್ಷಿಯ ಗೊಂಚಲು! ಅದನ್ನು ತನ್ನ ಬಾಯಲ್ಲಿ ಗಟ್ಟಿಯಾಗಿ ಹಿಡಿದು ತನ್ನ ಬಲೆಯಲ್ಲಿ ನೇಲುತ್ತದೆ. ಬಾಯಲಿ ಮೊಟ್ಟೆಯಿರುವಾಗ ಬಹುತೇಕ ಇವು ಉಪವಾಸವೇ. ಆಹಾರವನ್ನು ಬಲೆಯಲ್ಲಿ ಸುರುಳಿ ಕೆಡದಂತೆ ಕಾಪಿಡುತ್ತದೆ. ಮೊಟ್ಟೆಯೊಡೆದು ಮರಿ ಹೊರಬರಲು ಮೂರುವಾರಗಳು ಬೇಕು. ಅಷ್ಟೂ ಸಮಯ ಮೊಟ್ಟೆಯನ್ನು ಸುರಕ್ಷಿತವಾಗಿ ಹೊರುತ್ತದೆ. ಆಹಾರವನ್ನು ತಿನ್ನುವುದನ್ನು ನಾನಂತೂ ಕಂಡಿಲ್ಲ. ನನ್ನ ಕಣ್ಣೂ ತಪ್ಪಿಸಿ ತಿಂದಿರಬಹುದೇನೋ ! ?
ಮೊಟ್ಟೆಯಿಂದ ಮರಿಗಳು ಹೊರಬಂದ ನಂತರವೂ ಎರಡು ದಿನ ಮರಿಗಳು ಹಾಗೇ ಇರುತ್ತವೆ. ಆಮೇಲೆ ಚದುರಿ, ಅಮ್ಮನು ಸುತ್ತಿಟ್ಟ ಬುತ್ತಿಯೂಟವನ್ನು ತಿನ್ನುತ್ತವೆ. ಕೆಲದಿನಗಳಿಲ್ಲಿ, ಬದುಕುಳಿದ ಮರಿಗಳು ಬೇರೆ ಚಾವಣಿಯನ್ನು ಹುಡುಕಿ ಹೊರಡುತ್ತದೆ. ಮತ್ತೆ ಪುನಃ ನಮಗೆ ಗುಡಿಸಲು ಅನುವು ಮಾಡುತ್ತದೆ.
ಈ ಜೇಡಕ್ಕೆ ಬುದ್ದಿವಂತಿಕೆಯೂ ಕಮ್ಮಿ ಇಲ್ಲ. ಒಮ್ಮೆ ನಮ್ಮನೆಯ ಹಿಂಬದಿಯ ಬಾಗಿಲಲ್ಲಿ ಸುಮಾರು ಕೆಂಜುಗಗಳು ಇದ್ದವು. ಅವುಗಳಲ್ಲಿ ಎರಡು ಗುಂಪಿನ ನಡುವೆ ಕಚ್ಚಾಟವಾಗುತ್ತಿತ್ತು. ಸುಮಾರು ಇರುವೆಗಳೂ ಸತ್ತು ನೆಲಕ್ಕುರುಳುತ್ತಿತ್ತು. ಈ ಕಿಲಾಡಿ ಚಾವಣಿ ಜೇಡ, ಇರುವೆಗಳು ಸತ್ತು ಬೀಳವ ಜಾಗದಲ್ಲೇ ಬಲೆಕಟ್ಟಿತು. ನೆಲಕ್ಕುದುರುವ ಬದಲು ಬಲೆಯಲ್ಲೇ ನೇತಾಡಿ ಜೇಡಕ್ಕೆ ಆಹಾರವಾಯಿತು.
ಇದರ ಬುದ್ದಿವಂತಿಕೆ ಅಷ್ಟಕ್ಕೆ ನಿಲ್ಲುವುದಿಲ್ಲ. ನಿಮ್ಮ ಮನೆಯ ವಿಧ್ಯುದ್ದೀಪವನ್ನು ಗಮನಿಸಿ. ದೀಪದ ಸುತ್ತಲೂ ಬಲೆ ಇರುತ್ತದೆ. ಬೆಳಕಿಗೆ ಆಕರ್ಷಿತವಾಗಿ ಬರುವ ಕೀಟಗಳು ಈ ಚಾವಣಿ ಜೇಡದ ಸುಲಭದ ತುತ್ತು.
ಎಲ್ಲಾ ನಾನೇ ಹೇಳಿದರೆ ಹೇಗೆ, ಕೊರೋನಾದಿಂದ ಬಂಧಿಯಾಗಿರುವ ಈ ದಿನಗಳಲ್ಲಿ ನೀವೂ ಇನ್ನಷ್ಟು ಚಾವಣಿ ಜೇಡನ ಕಥೆಗಳನ್ನು ನನಗೆ ತಿಳಿಸಿ. ನಾನು ನಿಮಗೆ, ನಿಮ್ಮ ಮನೆಯಲ್ಲಿರುವ ಇನ್ನಷ್ಟು ಜೇಡಗಳನ್ನು ಮುಂದಿನ ಭಾಗದಲ್ಲಿ ಪರಿಚಯಿಸುವೆ.
Facebook ಕಾಮೆಂಟ್ಸ್