ಕ್ರಿಕೆಟ್ ಇತಿಹಾಸವೇ ಬಹಳ ರೋಚಕ. ಕ್ರಿಕೆಟ್ ಲೋಕದ ಇತಿಹಾಸದ ಮಜಲುಗಳನ್ನು ತಿರುವಿ ಹಾಕಿ ನೋಡಿದಾಗ ಅದು ಸಿಹಿ ಮತ್ತು ಕಹಿಗಳ ಆಗರ. ವಿಶ್ವದೆಲ್ಲೆಡೆ ಇರುವ ಕ್ರಿಕೆಟ್ ಪ್ರೇಮಿಗಳಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಪ್ರೇಮಿಗಳಷ್ಟು ನತದೃಷ್ಟ ಕ್ರಿಕೆಟ್ ಪ್ರೇಮಿಗಳು ಬೇರೆ ಯಾರೂ ಇರಲಿಕ್ಕಿಲ್ಲ. ವಿಶ್ವಕಪ್ ನಂತಹ ಪಂದ್ಯಾವಳಿಗಳ ನಾಕ್‌ಔಟ್ ಹಂತದಲ್ಲಿ ದಕ್ಷಿಣ ಆಫ್ರಿಕಾ ತನ್ನ ಕೈಯಲ್ಲಿದ್ದ ಪಂದ್ಯಗಳನ್ನು ಸ್ವಯಂಕೃತ ಎಡವಟ್ಟುಗಳ ಮೂಲಕ ಸೋತು ಅಭಿಮಾನಿಗಳ ಕಣ್ಣಂಚಿನಲ್ಲಿ ನೀರು ತರಿಸುವುದು ಮಾಮೂಲು. ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಫ್ರಿಕಾ ನಾಕ್‌ಔಟ್ ಹಂತದಲ್ಲಿ ಮುಗ್ಗರಿಸಿ ಬೀಳುವ ವಿಚಿತ್ರ ಚಾಳಿ ಹೊಂದಿದೆ. ಹಾಗಾಗಿ ವಿಶ್ವಕಪ್ ಫೈನಲ್ ತಲುಪಲು ಒಮ್ಮೆಯೂ ಸಾಧ್ಯವಾಗಿಲ್ಲ ಆ ತಂಡಕ್ಕೆ. ಆದ್ದರಿಂದಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ಅನಾಯಾಸವಾಗಿ ದಕ್ಕಿಬಂದದ್ದು ಚೋಕರ್ಸ್ ಅನ್ನುವ ಹಣೆಪಟ್ಟಿ!!
ಅದು 1992ರ ವಿಶ್ವಕಪ್ ಸೆಮಿಫೈನಲ್. ಇಂಗ್ಲಂಡಿನ 253 ರನ್ನನ್ನು ಬೆನ್ನಟ್ಟುತ್ತಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 13 ಎಸೆತಗಳಿಂದ ಬೇಕಾಗಿದ್ದದ್ದು 22 ರನ್. ಮಳೆ ಬಂದು ಡಕ್ವರ್ತ್ ಲೂಯಿಸ್ ನಿಯಮ ಅನ್ವಯಿಸಿದಾಗ ಒಂದು ಎಸೆತದಲ್ಲಿ 21 ರನ್ನಿನ ಗುರಿ ,ನೀಡಲಾಯಿತು! ಪರಿಣಾಮ ಆಫ್ರಿಕಾ ಸೋತಿತು. 1996ರ ವಿಶ್ವಕಪ್. ಸತತ ಹತ್ತು ಪಂದ್ಯಗಳನ್ನು ಗೆದ್ದಿದ್ದ ಆಫ್ರಿಕಾದ ಎದುರಾಳಿ ವೆಸ್ಟಿಂಡೀಸ್. 265 ರನ್ನುಗಳ ಬೆನ್ನೆತ್ತಿದ್ದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ 3 ವಿಕೆಟ್ ಕಳೆದುಕೊಂಡು 186 ರನ್ ಮಾಡಿ ಗೆಲುವಿನತ್ತ ದಾಪುಗಾಲು ಹಾಕಿತ್ತು. ಆದರೆ ನಾಟಕೀಯ ಕುಸಿತ ಕಂಡ ಆಫ್ರಿಕಾ ಪಂದ್ಯವನ್ನು ಕೈಚೆಲ್ಲಿತ್ತು! 1999ರ ವಿಶ್ವಕಪ್ ಸೆಮಿಫೈನಲಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಕೊನೆಯ ಓವರಿನಲ್ಲಿ ಬೇಕಾಗಿದ್ದದ್ದು 9 ರನ್. ಕೈಲಿದ್ದದ್ದು ಒಂದು ವಿಕೆಟ್. ಅಂತಿಮ ಓವರಿನ ಮೊದಲೆರಡು ಎಸೆತಗಳನ್ನು ಲ್ಯಾನ್ಸ್ ಕ್ಲೂಸ್ನರ್ ಬೌಂಡರಿಗಟ್ಟಿದಾಗ ಹರಿಣಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ ಮುಂದಿನ ಎಸೆತದಲ್ಲಿ ಅಲನ್ ಡೊನಾಲ್ಡ್ ರನ್ ಔಟ್!! ಪಂದ್ಯ ಟೈ ಆಗುತ್ತದೆ. ಆದರೆ ಸೂಪರ್ ಸಿಕ್ಸ್ ಹಂತದಲ್ಲಿ ಹರಿಣಿಗಳ ವಿರುದ್ಧ ಗೆಲುವು ಸಾಧಿಸಿದ್ದ ಕಾರಣ ಕಾಂಗರೂ ಪಡೆ ಫೈನಲ್ ಪ್ರವೇಶಿಸಿತ್ತು!
2003ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ 269 ರನ್’ಗಳ ಟಾರ್ಗೆಟ್‌ನ ಉತ್ತರವಾಗಿ ಆಫ್ರಿಕಾ 45 ಓವರ್’ಗೆ ಆರು ವಿಕೆಟ್ ನಷ್ಟಕ್ಕೆ 229 ರನ್ ದಾಖಲಿಸುತ್ತೆ. ಮಳೆಯಿಂದಾಗಿ ಟೈ ಆದ ಆ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಲೆಕ್ಕಾಚಾರವನ್ನು ತಪ್ಪಾಗಿ ಅಂದಾಜಿಸಿದ್ದರಿಂದ ಆಫ್ರಿಕಾ ವಿಶ್ವಕಪ್‌ನಿಂದ ಹೊರ ಬಿದ್ದಿತ್ತು. 2011ರ ವಿಶ್ವಕಪ್ ಕ್ವಾರ್ಟರ್ ಫೈನಲ್. ನ್ಯೂಜಿಲೆಂಡ್ ನೀಡಿದ್ದ 222 ರನ್ ಬೆನ್ನೆತ್ತಿದ್ದ ಆಫ್ರಿಕಾ ಒಂದು ಹಂತದಲ್ಲಿ 108 ರನ್ನಿಗೆ ಕೇವಲ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮುಂದಿನ 8 ವಿಕೆಟ್ ಕೇವಲ 64 ರನ್ನಿಗೆ ಕಳೆದುಕೊಂಡು ಪಂದ್ಯಾವಳಿಯಿಂದ ಹೊರಬಿದ್ದಿತ್ತು! 2015ರ ವಿಶ್ವಕಪ್ ನಲ್ಲಿಯೂ ಆಫ್ರಿಕಾ ಕಪ್ ಗೆಲ್ಲುವುದು ಕನಸಾಗೇ ಉಳಿಯಿತು.
ಮೇಲಿನ ಕೆಲವು ದೃಷ್ಟಾಂತಗಳು ಸಾಕು ದಕ್ಷಿಣ ಆಫ್ರಿಕಾ ಅನ್ನುವ ಅದ್ಭುತ ಪ್ರತಿಭೆಗಳಿಂದ ಕೂಡಿದ ತಂಡಕ್ಕೇಕೆ ಚೋಕರ್ಸ್ ಅನ್ನುವ ಹೆಸರು ಬಂತೆಂದು ಹೇಳಲು. ದಕ್ಷಿಣ ಆಫ್ರಿಕಾ ವಿಶ್ವ ಕ್ರಿಕೆಟ್ ಕಂಡ ಅತ್ಯಂತ ನತದೃಷ್ಟ ತಂಡ. ಬಲಿಷ್ಠ ತಂಡವಾಗಿದ್ದರೂ ಇಲ್ಲಿಯವರೆಗೆ ಯಾವುದೇ ಐಸಿಸಿ ಟ್ರೋಫಿಯನ್ನ ಎತ್ತಿಹಿಡಿಯಲು ಅದಕ್ಕೆ ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಲೀಗ್ ಹಂತದಲ್ಲಿ ಅತ್ಯಧ್ಬುತವಾಗಿ ಆಡಿ ಇನ್ನೇನು ಫೈನಲ್ ಹಂತವನ್ನ ತಲುಪೇಬಿಟ್ಟಿತು ಅನ್ನುವಷ್ಟರಲ್ಲಿ ಊಹಿಸಲಸಾಧ್ಯವಾದ ರೀತಿಯಲ್ಲಿ ಪಂದ್ಯಾವಳಿಯಿಂದ ದಕ್ಷಿಣ ಆಫ್ರಿಕಾ ಹೊರಬೀಳುತ್ತದೆ. ಮೂರು ಬಾರಿ ವಿಶ್ವಕಪ್ ಸೆಮಿಫೈನಲ್ ಸೋಲುವ ಮೂಲಕ ಫೈನಲ್ ಮಾತ್ರ ಕೈಗೆ ಸಿಗದ ತುತ್ತಾಗಿದೆ ದಕ್ಷಿಣ ಆಫ್ರಿಕಾ ತಂಡಕ್ಕೆ!.
ಅದು 50 ಓವರುಗಳ ವಿಶ್ವಕಪ್ ಇರಲಿ ಅಥವಾ 20 ಓವರುಗಳ ಚುಟುಕು ವಿಶ್ವಕಪ್ ಇರಲಿ, ಅಥವಾ ಚಾಂಪಿಯನ್ಸ್ ಟ್ರೋಫಿನೇ ಇರಲಿ ವಿಶ್ವದ ಕ್ರಿಕೆಟ್ ಅಭಿಮಾನಿಗಳಲ್ಲಿ ನಿಮ್ಮ ಫೇವರೀಟ್ ತಂಡಗಳನ್ನು ಹೇಳಿ ಅಂದರೆ ದಕ್ಷಿಣ ಆಫ್ರಿಕಾ ಅವರ ಪಟ್ಟಿಯಲ್ಲಿ ಪಕ್ಕಾ ಇದ್ದೇ ಇರುತ್ತದೆ. ಬ್ಯಾರೀ ರಿಚರ್ಡ್ಸ್, ಗ್ರೇಮ್ ಸ್ಮಿತ್, ಜ್ಯಾಕ್ ಕಾಲೀಸ್, ಶಾನ್ ಪೊಲಾಕ್, ಅಲನ್ ಡೊನಾಲ್ಡ್, ಲ್ಯಾನ್ಸ್ ಕ್ಲೂಸ್ನರ್, ಹರ್ಷಲ್ ಗಿಬ್ಸ್, ಜಾಂಟಿ ರೋಡ್ಸ್, ಗ್ಯಾರಿ ಕರ್ಸ್ಟೆನ್, ಡೆಲ್ ಸ್ಟೇನ್, ಡಿವಿಲಿಯರ್ಸ್, ಆಮ್ಲಾ, ಡೂಪ್ಲೆಸಿಸ್, ಇಮ್ರಾನ್ ತಾಹೀರ್ ಮುಂತಾದ ಅತಿರಥ ಮಹಾರಥ ಆಟಗಾರರನ್ನು ವಿಶ್ವ ಕ್ರಿಕೆಟಿಗೆ ಕೊಟ್ಟಿರುವ ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲುವುದಿರಲಿ, ಫೈನಲಿಗೆ ಕೂಡಾ ಇಲ್ಲಿಯವರೆಗೆ ಬಂದಿಲ್ಲ ಅನ್ನುವುದೇ ಕ್ರಿಕೆಟ್ ಜಗತ್ತಿನ ದೊಡ್ಡ ಸೋಜಿಗ! ಇದೇ ಪರಿಸ್ಥಿತಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರಿದಿರುವುದು ಮತ್ತೊಂದು ದುರಂತ. ಪ್ರಥಮ ಚಾಂಪಿಯನ್ಸ್ ಟ್ರೋಫಿಯನ್ನು(ಆಗ ಚಾಂಪಿಯನ್ಸ್ ಟ್ರೋಫಿಯನ್ನು ‘ಐಸಿಸಿ ನಾಕೌಟ್’ ಎಂದು ಕರೆಯಲಾಗುತ್ತಿತ್ತು) ಆಫ್ರಿಕಾ ಗೆದ್ದದ್ದು ಬಿಟ್ಟರೆ ಮತ್ತುಳಿದ ಆವೃತ್ತಿಗಳಲ್ಲಿ ಮತ್ತದೇ ಹಳೇ ಗೋಳು! ಮೊನ್ನೆ ನಡೆದ ಪಂದ್ಯದಲ್ಲೂ ಭಾರತದ ವಿರುದ್ಧ ಸೋಲುವುದರ ಮೂಲಕ ದಕ್ಷಿಣ ಆಫ್ರಿಕಾ ಪಂದ್ಯಾವಳಿಯಿಂದ ಹೊರಬಿತ್ತು.
ಸೋಸರ್ ಆಟದಲ್ಲಿ ಸ್ಪೇನ್ ಕೂಡಾ ಚೋಕರ್ಸ್ ಹಣೆಪಟ್ಟಿಯನ್ನು ಹೊತ್ತಿತ್ತು. ಅತ್ಯುತ್ತಮ ತಂಡವನ್ನೇ ಹೊಂದಿದ್ದರೂ ಸೋಸರ್ ವಿಶ್ವಕಪ್ ನಾಕೌಟ್ ಹಂತಗಳಲ್ಲಿ ಸ್ಪೇನ್ ಹೊರ ಬೀಳುತ್ತಿತ್ತು. ಕೊನೆಗೂ 2008ರ ಯುರೋಪಿಯನ್ ಚಾಂಪಿಯನ್‌ಶಿಪ್ ಮತ್ತು 2010ರ ವಿಶ್ವಕಪ್ ಗೆಲ್ಲುವ ಮೂಲಕ ಚೋಕರ್ಸ್ ಹಣೆಪಟ್ಟಿಯನ್ನು ಸ್ಪೇನ್ ಕಳಚಿಕೊಂಡಿತ್ತು. ಆದರೆ ದಕ್ಷಿಣ ಆಫ್ರಿಕಾ ತಂಡದ ಹಣೆಪಟ್ಟಿ ಇನ್ನೂ ಕಳಚಿಲ್ಲ. ದಕ್ಷಿಣ ಆಫ್ರಿಕಾ ಪ್ರಮುಖ ಪಂದ್ಯಗಳಲ್ಲಿ ಒತ್ತಡದಲ್ಲಿ ಸೋಲುವಾಗ ಒಮ್ಮೊಮ್ಮೆ ಅನಿಸುತ್ತದೆ, ಅರೇ ಆಸ್ಟ್ರೇಲಿಯಾ ವಿರುದ್ಧ 438 ರನ್ ಹೊಡೆದು ಬಿಸಾಡಿದ್ದ ತಂಡ ಇದೇನಾ? ಹಲವು ಬಾರಿ ಟೆಸ್ಟ್ ಮತ್ತು ಏಕದಿನದ ರ್ಯಾಂಕಿಂಗಲ್ಲಿ ನಂಬರ್ ಒನ್ ಪಟ್ಟವನ್ನು ಅಲಂಕರಿಸಿದ್ದು ದಕ್ಷಿಣ ಆಫ್ರಿಕಾ ತಂಡವೇಯಾ? ಮಿ.360 ಡಿವಿಲಿಯರ್ಸ್ ಇರೋ ತಂಡ ಇದೇನಾ ಅಂತ! ಹಾಗಾಗಿ ಚೋಕರ್ಸ್ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಈ ಎರಡು ಪದಗಳು ಕ್ರಿಕೆಟ್ ಲೋಕದ ಸಮಾನಾರ್ಥಕ ಪದಗಳು ಎಂದರೆ ತಪ್ಪಾಗಲಾರದು.
ಒಂದೋ ತನ್ನ ಆಟಗಾರರ ಎಡವಟ್ಟು ಇಲ್ಲವೋ ವರುಣನ ಮತ್ತು ಕ್ರಿಕೆಟ್ ಲೋಕದ ಡಕ್ ವರ್ತ್ ಲೂಯಿಸ್ ಅನ್ನುವ ತಲೆಬುಡವಿಲ್ಲದ ನಿಯಮದ ಕಾರಣದಿಂದ ದಕ್ಷಿಣ ಆಫ್ರಿಕಾದಂತಹ ಪ್ರತಿಭಾವಂತರ ತಂಡ ಚೋಕರ್ಸ್ ಅನ್ನುವ ಹೆಸರನ್ನು ತಲೆ ಮೇಲೆ ಹೊತ್ತುಕೊಂಡು ವಿಶ್ವಕಪ್ ಮೇಲೆ ವಿಶ್ವಕಪ್ ನಲ್ಲಿ ಪ್ರತೀ ಭಾರಿಯೂ ನೆಲಕಚ್ಚಿ ಪೆಚ್ಚುಮೋರೆ ಹಾಕಿ ವಾಪಾಸಾಗುವುದು ಖಯಾಲಿಯಾಗಿಬಿಟ್ಟಿದೆ. ಡಿವಿಲಿಯರ್ಸ್ ನೇತೃತ್ವದಲ್ಲಿ ೨೦೧೯ರ ವಿಶ್ವಕಪ್ ನಲ್ಲಾದರೂ ಚೋಕರ್ಸ್ ಅನ್ನುವ ಹಣೆಪಟ್ಟಿ ಜಾರಬಹುದೋ ಅನ್ನುವುದನ್ನು ಕಾದು ನೋಡಬೇಕಿದೆ! ಆಫ್ರಿಕಾ ತಂಡದಷ್ಟೇ ನತದೃಷ್ಟರಾಗಿದ್ದಾರೆ ಅದರ ಅಭಿಮಾನಿಗಳು! 50 ಓವರ್‌ಗಳ ವಿಶ್ವಕಪ್‌ನಲ್ಲಿ ಕ್ರಿಕೆಟ್ ಜನಕ ಇಂಗ್ಲೆಂಡ್ ಇನ್ನೂ ಚಾಂಪಿಯನ್ ಪಟ್ಟಕ್ಕೇರಿಲ್ಲ, ಕೇವಲ ಟಿ20 ವಿಶ್ವಕಪ್ ಒಂದು ಬಾರಿ ಜಯಿಸಿದೆ. ಆದರೂ ಚೋಕರ್ಸ್ ಹಣೆಪಟ್ಟಿ ಮಾತ್ರ ಹರಿಣಿಗಳ ತಲೆ ಮೇಲೆ ಭದ್ರವಾಗಿದೆ.