Featured ಅಂಕಣ

ಲೈಕ್ ಒತ್ತುವ ಸಹಸ್ರಾರಲ್ಲಿ ಕಣ್ಣೊರೆಸುವ ಕೈ ಯಾರು?

ಮಂಗಗಳು ಸಂಘಜೀವಿಗಳು. ಪ್ರತಿಯೊಂದು ಕೋತಿ ಕಾಲೊನಿಯಲ್ಲೂ 20ರಿಂದ 50ರವರೆಗೆ ಸದಸ್ಯರಿರುತ್ತಾರೆ. ಸಂಘದ ಸದಸ್ಯರ ಸಂಖ್ಯೆ ಅದನ್ನು ಮೀರಿದಾಗ, ಅವುಗಳ ನಡುವೆಯೇ ಕಿತ್ತಾಟ, ವೈಮನಸ್ಯ, ಅಭಿಪ್ರಾಯಭೇದಗಳು ಮೂಡಿ ಜಗಳವಾಗಿ ಕೊನೆಗೆ ಇಡೀ ಗುಂಪು ಎರಡಾಗಿ ಒಡೆಯುವ ಸಾಧ್ಯತೆ ಇದೆ. ಹೀಗೆಯೇ ಪ್ರತಿ ಮನುಷ್ಯ ಹೆಚ್ಚೆಂದರೆ 150 ಮಂದಿಯನ್ನು ತನ್ನ ಅತ್ಯಂತ ಆಪ್ತವಲಯದಲ್ಲಿ ಇರಿಸಿಕೊಳ್ಳಲು ಸಾಧ್ಯವಂತೆ. ಜಗತ್ತಿನ ಅದೆಷ್ಟೇ ಜನಪ್ರಿಯ ವ್ಯಕ್ತಿಯಾದರೂ ತನ್ನ ಸುತ್ತ ಆಪ್ತರು ಎಂದು ಹೇಳಿಕೊಳ್ಳುವ ಅಜಮಾಸು 150 ಮಂದಿಯನ್ನಷ್ಟೇ ಇಟ್ಟುಕೊಳ್ಳಲು ಅಥವಾ ಬಿಟ್ಟುಕೊಳ್ಳಲು ಸಾಧ್ಯ. ಸ್ವಾರಸ್ಯವೆಂದರೆ ಫೋನು, ಟ್ಯಾಬ್ಲೆಟ್, ಲ್ಯಾಪ್‍ಟಾಪ್‍ಗಳಂಥ ಎಲ್ಲ ಆಧುನಿಕ ಸೌಕರ್ಯಗಳು ಇದ್ದಾಗಲೂ, ಮೂರೂ ಹೊತ್ತು ಅಂತರ್ಜಾಲದ ನಿರಂತರ ಸಂಪರ್ಕ ಇದ್ದಾಗಲೂ ಮನುಷ್ಯನಿಗೆ ಸ್ನೇಹವಲಯದಲ್ಲಿ ತುಂಬಿಸಲಾಗುವುದು ನೂರೈವತ್ತು ಜನರನ್ನಷ್ಟೇ. ಜಾಲತಾಣಗಳಲ್ಲಿ ಸಾವಿರಾರು ಮಂದಿಯನ್ನು ಗೆಳೆಯರಾಗಿ ಹೊಂದಿರುವವರಿಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳ ನಿಕಟ ಪರಿಚಯ ಇರುವುದಿಲ್ಲ. ಹಾಗಾದರೆ ಸಾವಿರ ಸಾವಿರ ಸಂಖ್ಯೆಯ ಗೆಳೆಯರ ಬಳಗವಾದರೂ ಯಾಕೆ ಬೇಕು? ಟ್ವಿಟ್ಟರ್‍ನಂಥ ಜಾಲತಾಣಗಳಲ್ಲಿ ಕೆಲವು ಸೆಲೆಬ್ರಿಟಿಗಳು ತಮಗೆ ಲಕ್ಷಾಂತರ ಅಭಿಮಾನಿಗಳ ಫಾಲೋಯಿಂಗ್ ಇದೆ ಎನ್ನುತ್ತಾರಲ್ಲ, ಯಾಕೆ? ಎಂದರೆ, ಹಾಗೆ ತಮ್ಮ ಬಳಗ ದೊಡ್ಡದು ಎಂದುಕೊಳ್ಳುವುದರಿಂದ ಅವರಿಗೊಂದು ಹುಸಿ ಸಮಾಧಾನ ಸಿಗುತ್ತದೆ. ತಾವು ಜಗತ್ತಿನಲ್ಲಿ ಜನಪ್ರಿಯತೆಯ ತುತ್ತತುದಿಯಲ್ಲಿದ್ದೇವೆ, ಉಳಿದವರೆಲ್ಲ ತಮ್ಮನ್ನು ಕತ್ತೆತ್ತಿ ನೋಡುತ್ತಿದ್ದಾರೆಂಬ ಭ್ರಮೆ ಅವರನ್ನು ಆವರಿಸಿಕೊಳ್ಳುತ್ತದೆ. ಅವರ ಸ್ವಮೋಹ ಅದರಿಂದ ತಣಿಯುತ್ತದೆ.

ಯಾವುದೇ ಅಭಿವೃದ್ಧಿ ಹೊಂದಿದ ದೇಶ ತೆಗೆದುಕೊಳ್ಳಿ. ಅಲ್ಲಿ ಮಾನಸಿಕ ಚಿಕಿತ್ಸೆಗಾಗಿ ಬರುವ ರೋಗಿಗಳ ಪೈಕಿ 40%ರಷ್ಟು ಜನ ಬಳಲುತ್ತಿರುವುದು ಖಿನ್ನತೆಯ ರೋಗದಿಂದ. ಅರ್ಧ ಶತಮಾನದ ಹಿಂದೆ ನಮ್ಮಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಕೂಡುಕುಟಂಬಗಳಿದ್ದವು; ಪ್ರತಿಯೊಬ್ಬನ ಹಿಂದೆಮುಂದೆ ಅಕ್ಕ-ತಂಗಿ ಅಣ್ಣ-ತಮ್ಮ ಎಲ್ಲರೂ ಇದ್ದರು. ಮನೆಯ ಹಿರಿಯಣ್ಣ ಅಥವಾ ಅಕ್ಕ ತನ್ನ ಕೈ ಕೆಳಗಿನ ಏಳೆಂಟು ಚಳ್ಳೆಪಿಳ್ಳೆಗಳನ್ನು ಹಾಸ್ಟೆಲ್ಲಿನ ವಾರ್ಡನ್‍ರಂತೆ ಜವಾಬ್ದಾರಿ ವಹಿಸಿ ನೋಡಿಕೊಳ್ಳುತ್ತಿದ್ದರು. ಸರತಿಯಲ್ಲಿ ಕೊನೆಯವರಾಗಿ ಹುಟ್ಟಿದವರು ಉಳಿದೆಲ್ಲರ ಪ್ರೀತಿಯನ್ನು ಬೊಗಸೆ ತುಂಬ ಪಡೆಯುತ್ತಿದ್ದರು. ಸಮಸ್ಯೆಗಳನ್ನು ಹೇಳಿಕೊಳ್ಳಲು ಬೇಕಾದಷ್ಟು ಕಿವಿಗಳು ಸಿಗುತ್ತಿದ್ದವು. ಮನೆಯಲ್ಲಿ ಯಾರಾದರೊಬ್ಬರು ವಿಷಣ್ಣ ಮುಖ ಮಾಡಿದರೆ ಸಾಕು ಅಥವಾ ಒಂದು ಹೊತ್ತು ಊಟ ಬಿಟ್ಟು ಕೂತರೆ ಸಾಕು, ಮನೆಯ ಒಂದೆರಡಾದರೂ ಜೀವಗಳು ಸುಖಕಷ್ಟ ವಿಚಾರಿಸುವುದಕ್ಕೆ ಬಳಿ ಸಾರುತ್ತಿದ್ದವು. ಮನೆಯೆಂಬ ವ್ಯವಸ್ಥೆ ದೊಡ್ಡದೊಂದು ಕಾರ್ಖಾನೆಯಂತೆ ನಿಯಮಿತವಾಗಿ ನಡೆಯುತ್ತಿತ್ತು. ಆ ಕಾಲದಲ್ಲಿ ಕೈಯಲ್ಲಿ ಸ್ಮಾರ್ಟ್ ಫೋನ್, ಅಂತರ್ಜಾಲ, ಫೇಸ್‍ಬುಕ್, ವಾಟ್ಸ್‍ಆಪ್ ಯಾವುದೂ ಇರಲಿಲ್ಲ. ಟಿವಿ ಹಾಕಿದರೆ ನೆಟ್ಟಗೆ ದೂರದರ್ಶನ ಕೂಡ ಸರಿಯಾಗಿ ಪ್ರಸಾರವಾಗದೆ ಆಗಾಗ ಏಳುಬಣ್ಣಗಳ ಕಂಬಗಳು ಬಂದು ಅಡಚಣೆಗಾಗಿ ಕ್ಷಮಿಸಿ ಎಂದು ಬೋರ್ಡು ಕಾಣಿಸಿಕೊಳ್ಳುತ್ತಿದ್ದ ಕಾಲ ಅದು. ಹಾಗಿದ್ದರೂ ಪ್ರತಿಯೊಂದು ಮನೆಯಲ್ಲಿ ನೆಮ್ಮದಿ ಧಾರಾಳವಾಗಿತ್ತು. ಜೀವನದ ಏನೆಲ್ಲ ವ್ಯವಹಾರಗಳನ್ನು ಮಾಡಿ ಮುಗಿಸಿಯೂ ಮನುಷ್ಯನಿಗೆ ಮಧ್ಯಾಹ್ನದ ಊಟದ ನಂತರ ನಿದ್ದೆ ತೆಗೆಯಲು, ಮಾವಿನ ತೋಟದಲ್ಲಿ ದೋಟಿ ಕಟ್ಟಿ ಹಣ್ಣು ಕೊಯ್ಯಲು, ಹಲಸಿನ ತೊಳೆ ಬಿಡಿಸುತ್ತ ಮನೆಮಂದಿಯೊಡನೆ ಪಟ್ಟಾಂಗ ಹೊಡೆಯಲು, ಅಡಕೆ ಇಳಿಸಲು ಜನ ಬೇಕು ಎನ್ನುತ್ತ ಛತ್ರಿ ಹಿಡಿದು ಊರೆಲ್ಲ ಪ್ರದಕ್ಷಿಣೆ ಹಾಕಲು ಬೇಕಾದಷ್ಟು ಸಮಯ ಮಿಗುತ್ತಿತ್ತು. ಖಿನ್ನತೆ, ಹಾಗೊಂದು ರೋಗದ ಹೆಸರು ಕೇಳಿದ್ದೇ ಅಪರೂಪ.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಅವಿಭಕ್ತ ಸಂಸಾರಗಳೆಲ್ಲ ವಿದಳನಕ್ಕೊಳಗಾದ ಪರಮಾಣುಗಳಂತೆ ಒಂದು ಎರಡಾಗಿ ಹತ್ತು ನೂರಾಗಿ ಎಲ್ಲವೂ ನ್ಯೂಕ್ಲಿಯರ್ ಫ್ಯಾಮಿಲಿಗಳಾಗಿವೆ. ಸಿಟಿ ಸೇರಿರುವ ಮಕ್ಕಳು, ಎರಡು ಮೂರು ತಿಂಗಳಿಗೊಮ್ಮೆ ಅವರ ಮುಖದರ್ಶನ ಭಾಗ್ಯ ಪಡೆಯುವ ಊರ ಒಂಟಿಜೀವಗಳು – ಹೆತ್ತವರು, ಸಿಟಿಯಲ್ಲಿ ಮನೆ ಮಾಡಿದರೂ ಗಂಡನಿಗೆ ಹೆಂಡತಿ ಸಿಗದ ಹೆಂಡತಿಗೆ ಮಕ್ಕಳು ಸಿಗದ ವಿಚಿತ್ರ ಸನ್ನಿವೇಶ. ವಾರಾಂತ್ಯಕ್ಕೊಮ್ಮೆ ಮನೆಮಂದಿಯೆಲ್ಲ ಮುಖ ನೋಡಿಕೊಂಡರೆ ಅದೇ ದೊಡ್ಡದು ಎಂಬಂಥ ಗಡಿಬಿಡಿಯ ಧಾವಂತದ ಜೀವನ. ಬೆಂಗಳೂರಂಥ ಊರಲ್ಲಿ ಚಾಮರಾಜಪೇಟೆಯ ಹುಡುಗನಿಗೆ ಇಂಜಿನಿಯರಿಂಗ್ ಮುಗಿಸಿ ವೈಟ್‍ಫೀಲ್ಡ್ ಅಲ್ಲಿ ಕೆಲಸ ಸಿಕ್ಕರೆ ಆತ ತನ್ನ ಸ್ವಂತ ಮನೆ ಬಿಟ್ಟು ಆಫೀಸಿನ ಪಕ್ಕದಲ್ಲಿ ರೂಮು ಬಾಡಿಗೆ ಹಿಡಿಯಬೇಕಾದ ಪರಿಸ್ಥಿತಿ! ಹೀಗಿರುವಾಗ ಮನುಷ್ಯನನ್ನು ಆವರಿಸಿಕೊಳ್ಳುವುದು ಯಾವುದು? ಏಕಾಂತ ಮತ್ತು ಜಾಲತಾಣಗಳು! ವಿಚಿತ್ರವೆಂದರೆ ಇವೆರಡೂ ಪರಸ್ಪರ ವಿರುದ್ಧಾರ್ಥಕ ಸಂಗತಿಗಳು. ಮನುಷ್ಯ ಜಾಲತಾಣಕ್ಕೆ ಎಡತಾಕುವುದೇ ತನ್ನನ್ನು ಏಕಾಕಿತನ ಮತ್ತು ಬೋರ್‍ಡಮ್ ಕಾಡುತ್ತಿದೆ ಎಂಬ ಕಾರಣಕ್ಕೆ. ಜಾಲತಾಣದ ಕಿಂಡಿಯಲ್ಲಿ ಹೆಸರು ಮತ್ತು ಪಾಸ್‍ವರ್ಡ್ ಬರೆದು ಎಂಟರ್ ಎಂದೆವೋ ತಕ್ಷಣ ಪಾರ್ಟಿ ನಡೆಯುತ್ತಿರುವ ಕೋಣೆಯ ಬಾಗಿಲು ತೆರೆದು ಒಳಹೋದಂಥ ಅನುಭವ! ಸಾವಿರಾರು ಮಂದಿಯ ಮುಖ ನೋಡಲು ಸಾಧ್ಯವಾಗುವ ನಿತ್ಯಮಾರುಕಟ್ಟೆಯಲ್ಲಿ ಮನುಷ್ಯನಿಗೆ ತನ್ನ ಸಂಘಜೀವನದ ಬಯಕೆಗೆ ಸರಿಹೊಂದುವಂಥ ವಾತಾವರಣ ಸಿಗುತ್ತದೆ. ಅಲ್ಲಿ ತನ್ನ ಗೆಳೆಯರ ಪಟ್ಟಿಯಲ್ಲಿರುವ ಮಂದಿ ಆಗೀಗ ಬರೆದ, ಹಂಚಿಕೊಂಡ ಮಾಹಿತಿಗಳನ್ನು ನೋಡುತ್ತ ಕೆಲವೊಂದಕ್ಕೆ ತನ್ನ ಪ್ರತಿಕ್ರಿಯೆ ದಾಖಲಿಸುತ್ತ ಹೋಗುವಾಗ, ತಾನೂ ಅವರೊಡನೆ ಸಂವಹಿಸುತ್ತಿದ್ದೇನೆ ಎಂಬ ಭ್ರಮೆಗೊಳಗಾಗುತ್ತಾನೆ ಆತ.

ಆದರೆ ಸಾಮಾಜಿಕ ಜಾಲತಾಣವೇ ಜೀವನವಲ್ಲ. ಅದೊಂದು ಮಿಥ್ಯಾವಾಸ್ತವದಂಥ ಲೋಕ. ಮನುಷ್ಯ ತಂತ್ರಜ್ಞಾನ ಜಗತ್ತಿನಲ್ಲಿ ಅದೆಷ್ಟೇ ಮುಂದುವರಿಯುತ್ತ ಹೋದರೂ ಜೀವವಿಕಾಸದ ದಾರಿಯಲ್ಲಿ ಆತನೊಳಗೆ ಸೇರಿಕೊಂಡಿರುವ ಜೈವಿಕ ಅಂಶಗಳು ಅಷ್ಟು ಬೇಗ ತಂತ್ರಜ್ಞಾನಕ್ಕೆ ತಕ್ಕಂತೆ ಹೆಜ್ಜೆ ಹಾಕುವವಲ್ಲ. ಅಂದರೆ ಮನುಷ್ಯ ಇಂದಿಗೂ ಬಯಸುವುದು ನೈಜ ಜೀವನದಲ್ಲಿ ಭೇಟಿಯಾಗಬಹುದಾದ ಗೆಳೆಯರನ್ನೇ. ವಾಸ್ತವದಲ್ಲಿ ಕೈಗೆಟುಕಬಲ್ಲ ಸಂಬಂಧಗಳನ್ನೇ. ಫೇಸ್‍ಬುಕ್‍ನಂಥ ಜಾಲತಾಣ ಕಳೆದ ಹತ್ತು ವರ್ಷಗಳಲ್ಲಿ ಬೆಳೆದು ಬಂದಿರುವ ರೀತಿ ನೋಡಿದರೆ ಈ ಸಂಗತಿ ಸ್ಪಷ್ಟ. ಮೊದಲು ಆ ಜಾಲತಾಣದಲ್ಲಿ ಪೋಸ್ಟ್ ಬರೆಯುವ, ಕಾಮೆಂಟ್ ಹಾಕುವ ಅನುಕೂಲ ಮಾತ್ರ ಇತ್ತು. ಆದರೆ ನಿಧಾನವಾಗಿ ಖುಷಿ, ಹಾಸ್ಯ, ಅಚ್ಚರಿ, ದುಃಖ ಎಂಬ ಹಲವು ಭಾವರಸಗಳನ್ನು ತೋರ್ಪಡಿಸುವ ಇಮೋಟ್‍ ಐಕಾನ್‍ಗಳು ಅಲ್ಲಿ ಬಂದವು. ಮನುಷ್ಯರ ಡಿಜಿಟಲ್ ಸಂಭಾಷಣೆಯ ಲೋಕದಲ್ಲಿ ಅದೊಂದು ಜಿಗಿತ! ಮತ್ತೂ ಮುಂದುವರಿದು, ಜಾಲತಾಣವನ್ನು ಇನ್ನಷ್ಟು ವಾಸ್ತವಕ್ಕೆ ಹತ್ತಿರ ತರಲು ಅಲ್ಲಿ ನೇರಪ್ರಸಾರ ಮಾಡಿ ಜನರೊಂದಿಗೆ ವ್ಯವಹರಿಸಬಹುದಾದ “ಫೇಸ್‍ಬುಕ್ ಲೈವ್” ಆಯ್ಕೆ ಬಂತು. ಇಬ್ಬರು ಗೆಳೆಯರು ನೇರಾನೇರ ಮುಖ ನೋಡಿಕೊಂಡು ಮಾತಾಡಬಹುದಾದ ಫೇಸ್‍ಬುಕ್ ವಿಡಿಯೋ ಚಾಟ್ ಬಂತು. ಇನ್ನೂ ಒಂದೆರಡು ವರ್ಷದಲ್ಲಿ, ಮೂರ್ನಾಲ್ಕು ಜನ ತಮ್ಮ ತಮ್ಮ ಜಾಗಗಳಲ್ಲೇ ಕುಳಿತು ತಮ್ಮನ್ನು ನೇರ ಪ್ರಸಾರ ಮಾಡಿಕೊಳ್ಳುವ ಮತ್ತು ಅದನ್ನು ಉಳಿದವರೆಲ್ಲ ನೋಡಬಹುದಾದ ಗ್ರೂಪ್ ಲೈವ್ ವಿಡಿಯೋ ಚಾಟ್ ಫೇಸ್‍ಬುಕ್ ಅಲ್ಲಿ ಜನಪ್ರಿಯವಾಗುತ್ತದೆ. ಅಂದರೆ ಆ ಜಾಲತಾಣವನ್ನು ಕಟ್ಟುತ್ತಿರುವ ತಂತ್ರಜ್ಞರು ಆ ಅವಾಸ್ತವಿಕ ಲೋಕವನ್ನು ಕೂಡ ಮನುಷ್ಯನ ಸಹಜ ವಾಸ್ತವ ಜಗತ್ತಿನ ಪ್ರತಿಬಿಂಬವಾಗಿಸಲು ಹೆಣಗುತ್ತಿದ್ದಾರೆ. ಅಂಥ ಪ್ರಯತ್ನದಲ್ಲೇ ಆ ಜಾಲತಾಣದ ಯಶಸ್ಸು ಅಡಗಿದೆ. ತಮಾಷೆ ಮತ್ತು ದುರಂತದ ಮಾತೆಂದರೆ ಹೀಗೆ ನಮ್ಮ ಅವಾಸ್ತವಿಕ ಜಾಲತಾಣದ ಜಗತ್ತು ಹೆಚ್ಚು ರಿಯಲಿಸ್ಟಿಕ್ ಆಗುತ್ತ ಹೋದಂತೆ, ನಮ್ಮ ವಾಸ್ತವ ಸಂಬಂಧಗಳು ತೆಳುಬೀಳುತ್ತ ಹೋಗುತ್ತವೆ. ಅಂದರೆ ನಮಗೀಗ ಬಹಳಷ್ಟು ಜನರು ಗೊತ್ತು; ಆದರೆ ಯಾರೂ ಸರಿಯಾಗಿ ಗೊತ್ತಿಲ್ಲ! ನೂರಾರು ಜನರೊಡನೆ ನಿತ್ಯ ವ್ಯವಹರಿಸುತ್ತೇವೆ, ಆದರೆ ಅವರ ಜೊತೆ ಒಮ್ಮೆಯಾದರೂ ಕೈ ಕುಲುಕಿ ಸಂಬಂಧದ ಬೆಚ್ಚನೆಯ ಸ್ಪರ್ಶಸುಖ ಅನುಭವಿಸಿಲ್ಲ. ಕೆಲವರ ಜೊತೆ ವರ್ಷಗಳಿಂದ ಸಂಪರ್ಕದಲ್ಲಿದ್ದು ನಮ್ಮ ಬದುಕಿನ ಎಲ್ಲ ಸುಖದುಃಖದ ಸಮಾಚಾರವನ್ನೂ ಹಂಚಿಕೊಂಡಿದ್ದೇವೆ, ಆದರೆ ಒಮ್ಮೆಯಾದರೂ ಭೇಟಿಯಾಗಿ ಜೊತೆ ಕೂತು ಚಹ ಕುಡಿದಿಲ್ಲ. ಭಾರತದಲ್ಲಿ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ ಎನ್ನಿ; ಆದರೆ ಅಮೆರಿಕಾ ಮತ್ತು ಯುರೋಪ್ ಖಂಡಗಳಲ್ಲಿ ಇಂಥ ಅವಾಸ್ತವಿಕ ಪ್ರಪಂಚ ಹಿಗ್ಗುತ್ತ ವಾಸ್ತವ ಜಗತ್ತು ಕುಗ್ಗುತ್ತ ಸಾವಿರಾರು ಜನರನ್ನು ಗೆಳೆಯರ ಬಳಗದಲ್ಲಿ ಹೊಂದಿರುವ ಏಕಾಕಿ ಶೋಕತಪ್ತರು ಜಾಸ್ತಿಯಾಗುತ್ತಿದ್ದಾರೆ. ಎಷ್ಟೊಂದು ಜನ – ಆದ್ರೆ ಇಲ್ಲಿ ಯಾರು ನನ್ನೋರು ಎಂಬ ಚಿನ್ನಾರಿಮುತ್ತರು ಇವರೆಲ್ಲ.

ಈ ಸಮಸ್ಯೆಯ ಮುಂದಿನ ಹಂತ ಏನು? ಮಂಗಗಳದ್ದೇ ಕತೆ! ಹೇಗೆ ಸದಸ್ಯರ ಸಂಖ್ಯೆ ಐವತ್ತು ದಾಟಿದರೆ ಎಲ್ಲ ಮಂಗಗಳೂ ಕಚ್ಚಾಡಿಕೊಂಡು ತಮ್ಮಲ್ಲೇ ಎರಡು ಮೂರು ಪಾರ್ಟಿ ಮಾಡಿಕೊಂಡು ಛಿದ್ರವಾಗುತ್ತವೋ ಹಾಗೆಯೇ ಮನುಷ್ಯನೂ ತನ್ನ ಗೆಳೆಯರ ಸಂಖ್ಯೆ ಹೆಚ್ಚಿಸಿಕೊಂಡು ಹಲವು ಗುಂಪುಗಳಾಗಿ ಒಡೆದು ಹೋಗುತ್ತಿದ್ದಾನೆ. ಯಾಕೆಂದರೆ ತನ್ನ ಗೆಳೆಯರ ಬಳಗ ಹೆಚ್ಚಿಸಿಕೊಂಡರೂ ಮನುಷ್ಯನಿಗೆ ತೀರಾ ಆತ್ಮೀಯರು ಎಂಬ ವಲಯದಲ್ಲಿ ತುಂಬಿಕೊಳ್ಳಬಹುದಾದವರು ನೂರು-ನೂರೈವತ್ತು ಜನರು ಮಾತ್ರ. ಮಿಕ್ಕಿದ್ದೆಲ್ಲ ಆತ ಜಗತ್ತಿಗೆ ತನ್ನ ಹುಸಿ ಸೆಲಬ್ರಿಟಿ ಸ್ಥಾನವನ್ನು ಘೋಷಿಸಲು ಬಳಸಬಹುದಾದ ಸಂಖ್ಯೆಗಳು. ಗೆಳೆಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಹೋದ ಹಾಗೆ ಅದೂ ಒಂದು ಚಟವಾಗಿ ಕೆಲವರನ್ನು ಸುತ್ತಿಕೊಳ್ಳುವುದೂ ಉಂಟು. ಕೋತಿಗಳ ಬಳಗದಂತೆ ಮನುಷ್ಯರ ಗುಂಪಲ್ಲೂ ಜನಸಾಂದ್ರತೆ ಹೆಚ್ಚಾದೊಡನೆ ಅದುವರೆಗೆ ಒಂದಾಗಿದ್ದವರೆಲ್ಲ ಜಾತಿ, ಪಂಥ, ಪಕ್ಷ, ಐಡಿಯಾಲಜಿ ಎನ್ನುತ್ತ ತಮ್ಮ ತಮ್ಮದೇ ಹಲವು ವೃತ್ತಗಳನ್ನು ರಚಿಸಿಕೊಂಡು ಅದರೊಳಗೆ ತಮ್ಮವರಿಗಷ್ಟೇ ಜಾಗ ಕೊಡುತ್ತ ಸಂಕುಚಿತಗೊಳ್ಳುತ್ತಾರೆ. ಜಗತ್ತಿನ ಎಲ್ಲರನ್ನೂ ಬೆಸೆಯಬೇಕಿದ್ದ ತಂತ್ರಜ್ಞಾನ ಇಂಥ ವಿಚಿತ್ರ ವಿಘಟನೆಗಳಿಗೆ ಹೇತುವಾಗುತ್ತಿದೆ. ಜಗತ್ತು ಗ್ಲೋಬಲ್ ವಿಲೇಜ್ ಆಗುತ್ತಿರುವಾಗಲೇ ಹಲವು ವಿಲೇಜ್‍ಗಳ ಗ್ಲೋಬ್ ಆಗುತ್ತಿರುವುದೂ ಸತ್ಯ. ಈ ವಿಪರ್ಯಾಸ ಅಥವಾ ವಿರೋಧಾಭಾಸವನ್ನು ಮೀರುವುದು ಹೇಗೆ? ಜಗತ್ತಿನೆಲ್ಲರೂ ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡುವುದು ಹೇಗೆ? ಜಾಲತಾಣಗಳಲ್ಲಿ ನಡೆಯುತ್ತಿರುವ ಗೌಜಿಗಲಾಟೆಗಳನ್ನು ತಹಬದಿಗೆ ತರುವುದು ಹೇಗೆ? ವಿಜ್ಞಾನ ಹೇಳುತ್ತದೆ – ಕೋತಿಗಳನ್ನು ನೋಡಿ! ಸದ್ಯಕ್ಕೆ ಅಂಥ ವಿದಳನವನ್ನು ತಡೆಯುವ ಯಾವ ಮೆಕ್ಯಾನಿಸಮ್ಮೂ ನಮ್ಮ ಕೈಯಲ್ಲಿಲ್ಲ, ಎಂದು!

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!