ಅಂಕಣ

ಆಲಿವರ್ ಸ್ಯಾಕ್ಸ್ ಎಂಬ ನರತಜ್ಞನ ಅದ್ಭುತ ಪುಸ್ತಕವಿದು..!

 ನೀವು ಕಣ್ಣುಮುಚ್ಚಿ ಕುಳಿತಿದ್ದೀರೆಂದು ಭಾವಿಸಿ. ನೀವು ಕಣ್ಣು ಮುಚ್ಚಿಕೊಂಡಿದ್ದರೂ ಕೂಡ ನಿಮ್ಮ ದೇಹ ಯಾವ ಭಂಗಿಯಲ್ಲಿದೆ ಎಂಬುದನ್ನ ಗ್ರಹಿಸಬಲ್ಲಿರಿ ತಾನೆ? ಕಣ್ಣು ಮುಚ್ಚಿಕೊಂಡಿದ್ದರೂ ಪ್ರತಿ ತುತ್ತು ಕೈಯ್ಯಿಂದ ಬಾಯಿಗೆ ಹೋಗುತ್ತದೆ ತಾನೆ? ನಮ್ಮ ಕೈ, ಕಾಲು, ಬೆರಳುಗಳು ಯಾವ ಭಂಗಿಯಲ್ಲಿದೆ, ಏನು ಮಾಡುತ್ತಿವೆ ಎನ್ನುವುದನ್ನು ನೋಡದಿದ್ದರೂ ಗ್ರಹಿಸಬಲ್ಲಿರಿ ತಾನೆ? ಒಂದು ವೇಳೆ ಅಂತ ಗ್ರಹಣಶಕ್ತಿ ಕಳೆದು ಹೋದರೆ??! ಪಂಚೇಂದ್ರಿಯಗಳ ಬಗ್ಗೆ ಹೇಳುತ್ತಿಲ್ಲ, ದೇಹಕ್ಕೆ ತನ್ನನ್ನು ತಾನು ಗ್ರಹಿಸಿಕೊಳ್ಳುವ ಶಕ್ತಿಯ ಬಗ್ಗೆ ಹೇಳುತ್ತಿರುವುದು. ’ಡಿಸ್’ಎಂಬಾಡೀಡ್’ (Disembodied) ಎನ್ನುವಂತಹ ಸ್ಥಿತಿ ಉಂಟಾದರೆ?!

ಸಾಕಷ್ಟು ವರ್ಷಗಳ ಹಿಂದೆ ಕ್ರಿಸ್ಟಿಯಾನ ಎಂಬಾಕೆ ಗಾಲ್’ಬ್ಲಾಡರ್ ಆಪರೇಷನ್’ಗೆಂದು ಆಸ್ಪತ್ರೆಯಲ್ಲಿದ್ದಳು. ಆಪರೇಷನ್’ಗೆ ಎರಡು ದಿನವಿದೆ ಎನ್ನುವಾಗ ಆಕೆಗೊಂದು ಕನಸು ಬಿದ್ದಿತ್ತು. ತನ್ನ ಕಾಲ ಮೇಲು ನಿಲ್ಲಲೂ ಅಗದೆ, ಓಲಾಡುವಂತಿದ್ದಂತೆ, ಕೈಯ್ಯಲ್ಲಿ ಯಾವ ವಸ್ತುಗಳನ್ನು ಹಿಡಿದುಕೊಳ್ಳಲಾಗದಂತಹ ಸ್ಥಿತಿ. ಅದೊಂದು ರೀತಿ ಬಹಳ ವಿಚಿತ್ರ ಕನಸಾಗಿತ್ತು. ಎಚ್ಚರವಾದ ನಂತರವೂ ಆ ಕನಸು ಆಕೆಯನ್ನು ಬಹಳ ಪೀಡಿಸುತ್ತಿತ್ತು. ಡಾಕ್ಟರ್ ಬಳಿ ಅದನ್ನು ಹೇಳಿಕೊಂಡಾಗ ’ಪ್ರಿ-ಆಪರೇಟಿವ್ ಆಂಕ್ಸೈಟಿ’ ಎಂದು ಬಿಟ್ಟರು. ಅದರೆ ಮರುದಿನ ಎನ್ನುವಷ್ಟರಲ್ಲಿ ಆಕೆಯ ಕನಸು ನನಸಾಗತೊಡಗಿತ್ತು. ಕನಸಲ್ಲಿ ತಾನು ನೋಡಿದಂತೆಯೇ ಆಗತೊಡಗಿತ್ತು. ಆಪರೇಷನ್ ನಡೆಯುವ ದಿನ ಎನ್ನುವಷ್ಟರಲ್ಲಿ ಇನ್ನಷ್ಟು ಹದಗೆಟ್ಟಿತ್ತು, ಮಲಗಿದ್ದವಳಿಗೆ ತಾನೆ ತಾನಾಗಿ ಎದ್ದು ಕೂರಲು ಆಗದಂತೆ. ತನ್ನ ಕಾಲ ಮೇಲೆ ನಿಲ್ಲಲೂ ಆಗುತ್ತಿರಲಿಲ್ಲ. ಕಾಲುಗಳನ್ನು ನೋಡುತ್ತಿದ್ದರೆ ಮಾತ್ರ ಸಾಧ್ಯವಾಗುತ್ತಿತ್ತು. ಅಂದು ಡಾಕ್ಟರ್ ಬಳಿ, “ ಐ ಕಾಂಟ್ ಫೀಲ್ ಮೈ ಬಾಡಿ, ಐ ಫೀಲ್ ಡಿಸ್’ಎಂಬಾಡೀಡ್” ಎಂದಿದ್ದಳು. ಹಲವಾರು ಪರೀಕ್ಷೆಗಳ ನಂತರ ಆಕೆ ತಲೆಯಿಂದ ಕಾಲಿನವರೆಗೂ ತನ್ನ ಪ್ರೊಪ್ರಿಯೋಸೆಪ್ಷನ್(Proprioception)’ನ್ನು ಕಳೆದುಕೊಂಡಿದ್ದಾಳೆ ಎನ್ನಲಾಯಿತು. ಈಗ ಸುಮಾರು ಎರಡು ದಶಕಗಳ ಹಿಂದೆ ಈ ರೀತಿ ಖಾಯಿಲೆಯೊಂದು ಉಂಟಾಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಕೊನೆಗೆ ಆಕೆಗೆ ಅದೆನ್ನೆಲ್ಲ ವಿವರಿಸಿದ ಡಾಕ್ಟರ್’ಗಳು ತನ್ನ ದೃಷ್ಟಿಯನ್ನು ಬಳಸಿಯೇ ಎಲ್ಲ ಕೆಲಸಗಳನ್ನು ಮಾಡುವಂತೆ ತಿಳಿಸಿದರು ಆಕೆಗೆ. ಅಂದರೆ ಪ್ರತಿ ಬಾರಿ ಹೆಜ್ಜೆ ಇಡುವಾಗ, ದೃಷ್ಟಿ ಕಾಲಿನ ಮೇಲೇಯೇ ಇರಬೇಕು. ಹಾಗೆ ಇದ್ದಾಗ ಕೈ ಯಾವ ರೀತಿ ಇದೆ, ಯಾವ ಭಂಗಿಯಲ್ಲಿದೆ, ಅಥವಾ ಇತರ ಭಾಗ ಯಾವ ರೀತಿ ಇದೆ ಎಂಬ ಸ್ವಲ್ಪ ಗ್ರಹಿಕೆಯೂ ಇರುವುದಿಲ್ಲ. ದೇಹ ತನ್ನನ್ನ ತಾನು ಗ್ರಹಿಸುವುದಿಲ್ಲ. ತಾನು ಯಾವ ಭಂಗಿಯಲ್ಲಿದ್ದೇನೆ ಎನ್ನುವುದನ್ನ ದೃಷ್ಟಿಯಿಂದಲೇ ಗ್ರಹಿಸಬೇಕು..!! ಆಕೆ ತನ್ನ ಸಂಪೂರ್ಣ ಜೀವನವನ್ನು ನಂತರ ಹಾಗೆಯೇ ವ್ಯಯಿಸುತ್ತಾಳೆ. ದೇಹ ತನ್ನನ್ನು ತಾನು ಗ್ರಹಿಸಿಕೊಳ್ಳುವುದನ್ನ ಕಳೆದುಕೊಂಡರೆ ನಮ್ಮ ಸ್ಥಿತಿ ಹೇಗಿರಬಹುದು ಎಂಬುದನ್ನ ಕಲ್ಪನೆ ಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ ನಮ್ಮಿಂದ.

ಇಂತಹ ಹಲವು ನೈಜ ಘಟನೆಗಳನ್ನ, ಮಿದುಳಿಗೆ ಸಂಬಂಧಪಟ್ಟ ರೋಗಗಳನ್ನ ಆಲಿವರ್ ಸ್ಯಾಕ್ಸ್ ಎಂಬ ಪ್ರಖ್ಯಾತ ನರತಜ್ಞ ತನ್ನ ಪುಸ್ತಕ ’ದ ಮ್ಯಾನ್ ಹೂ ಮಿಸ್’ಟುಕ್ ಹಿಸ್ ವೈಫ್ ಫಾರ್ ಎ ಹ್ಯಾಟ್”(The man who mistook his wife for a hat) ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಈ ಪುಸ್ತಕ ಕೇವಲ ಡಾಕ್ಟರ್’ಗಳಿಗೆ ಸೀಮಿತವಾಗಿರದೆ ಒಬ್ಬ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತೆ ನಿರೂಪಿಸಿದ್ದಾನೆ ಆಲಿವರ್ ಸ್ಯಾಕ್ಸ್. ’ಮೆದುಳು ಎನ್ನುವುದು ಜಗತ್ತಿನ ದೊಡ್ಡ ರಹಸ್ಯಗಳಲ್ಲೊಂದು” ಎನ್ನುವ ಸ್ಯಾಕ್ಸ್, ತನ್ನ ವೃತ್ತಿಯಲ್ಲಿ ಕಂಡ ವಿಚಿತ್ರ ಘಟನೆಗಳನ್ನ ನಾಲ್ಕು ಭಾಗಗಳಾಗಿ, ಲಾಸಸ್, ಎಕ್ಸೆಸಸ್, ಟ್ರಾನ್ಸ್’ಪೋರ್ಟ್ಸ್ ಹಾಗೂ ದ ವರ್ಲ್ಡ್ ಆಫ್ ದ ಸಿಂಪಲ್ ವಿಂಗಡಿಸಿ ದಾಖಲಿಸಿದ್ದಾನೆ. “ಸಾಮಾನ್ಯವಾಗಿ ಕಥೆಗಳಲ್ಲಿ ನಾಯಕ, ಖಳನಾಯಕ, ಬಲಿಪಶುಯಾಗುವವ, ವೀರ ಹೀಗೆ ಹಲವಾರು ಜನರಿರುತ್ತಾರೆ. ಆದರೆ ಇಲ್ಲಿ ಬರುವ ಘಟನೆಗಳಲ್ಲಿ ಆ ಎಲ್ಲವೂ ಒಬ್ಬನೇ ಆಗಿರುತ್ತಾನೆ. ಅತ ರೋಗಿ. ಜೊತೆಗೆ ಆತ ಇವೆಲ್ಲವನ್ನೂ ಮೀರಿದವನೂ ಆಗಿರುತ್ತಾನೆ.” ಎನ್ನುತ್ತಾನೆ ಸ್ಯಾಕ್ಸ್.

ಡೊನಾಲ್ಡ್ ಎಂಬಾತ ಪಿ.ಸಿ.ಪಿ ಎಂಬ ಡ್ರಗ್’ನ ವಶದಲ್ಲಿದ್ದಾಗ ತನ್ನ ಗರ್ಲ್’ಫ್ರೆಂಡ’ನ್ನು ಬಹಳ ಕ್ರೂರವಾಗಿ ಕೊಲೆ ಮಾಡಿಬಿಡುತ್ತಾನೆ. ಆತನಿಗೇ ಗೊತ್ತಿಲ್ಲದೇ ಆತನಿಂದ ಅಂತಹ ಒಂದು ದುಷ್ಕೃತ್ಯ ನಡೆದು ಹೋಗುತ್ತದೆ. ಅತ ತನ್ನ ಪ್ರಜ್ಞೆಗೆ ನಂತರ ಆ ಘಟನೆಯ ಒಂದಿನಿತೂ ನೆನಪು ಆತನಲ್ಲಿ ಉಳಿದಿರಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಹಿಪ್ನಟೈಸ್’ನಲ್ಲಿ ಕೂಡ ಆ ನೆನಪುಗಳನ್ನು ಹೊರತರಲು ಸಾಧ್ಯವಾಗಿರಲಿಲ್ಲ. ಅದಾಗಿ ಸುಮಾರು ಐದು ವರ್ಷಗಳ ನಂತರ ಪೆರೋಲ್ ಮೇಲೆ ಹೊರ ಬಂದ ಸಂದರ್ಭದಲ್ಲಿ ಅಪಘಾತಕ್ಕೀಡಾಗುತ್ತಾನೆ. ಆ ಅಪಘಾತದಲ್ಲಿ ಆತನ ಮೆದುಳಿಗೆ ಸಾಕಷ್ಟು ಪೆಟ್ಟಾಗಿದ್ದು ಆತ ಒಂದು ವಾರದ ಕಾಲ ಕೋಮಾಸ್ಥಿತಿಯಲ್ಲಿರುತ್ತಾನೆ. ಎಚ್ಚರಗೊಂಡಾಗ ಕಣ್ಣ ಮುಂದೆ ಬಂದಿದ್ದೇ ತಾನು ಮಾಡಿದ ಕೊಲೆ. ತನ್ನ ಪ್ರೀತಿಪಾತ್ರಳನ್ನು ತನಗೆ ಗೊತ್ತಿಲ್ಲದೇ ಬರ್ಬರವಾಗಿ ಕೊಂದ ದೃಶ್ಯಗಳು ಆತನ ಕಣ್ಣ ಮುಂದೆ ಬರಲಾರಂಭಿಸಿತ್ತು. ಅದು ಅತನನ್ನು ಮಾನಸಿಕವಾಗಿ ಎಷ್ಟು ಪೀಡಿಸುತ್ತಿತ್ತು ಎಂದರೆ ಆತ ಅಸ್ಪತ್ರೆಯಲ್ಲಿಯೇ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸುತ್ತಾನೆ! ಕಾಲ ಕಳೆದಂತೆ ಅದರೊಂದಿಗೆ ಬದುಕುವುದನ್ನ ಕಲಿತುಕೊಳ್ಳುತ್ತಾನೆ.

ಇನ್ನೊಂದು ಘಟನೆ ಎಷ್ಟು ವಿಚಿತ್ರವಾಗಿದೆ ಎಂದರೆ, ಸ್ಟೀಫನ್ ಎಂಬ ೨೨ ವರ್ಷದ ಹುಡುಗ ಡ್ರಗ್ಸ್’ನ ನಶೆಯಲ್ಲಿ ತಾನೊಂದು ನಾಯಿಯಾದಂತೆ ಕನಸು ಕಾಣುತ್ತಾನೆ. ಮರುದಿನದಿಂದ ಆತ ನಾಯಿಯಂತೆಯೇ ಆದ್ಭುತವಾಗಿ ವಾಸನೆಯನ್ನು ಗ್ರಹಿಸಲು ಆರಂಭಿಸುತ್ತಾನೆ. ಹಾಗೆಯೇ ಆತನ ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯ ಕೂಡ. ಡಜನ್’ಗಟ್ಟಲೆ ಕಂದು ಬಣ್ಣವನ್ನು ಗುರುತಿಸಬಲ್ಲವನಾಗಿದ್ದ. ಜನರ ಭಾವಗಳನ್ನು ಕೂಡ ವಾಸನೆಯಿಂದ ಗ್ರಹಿಸಬಲ್ಲವನಾಗಿದ್ದ. ಇದು ಯಾವುದೋ ಕಾಲ್ಪನಿಕ ಕಥೆಯಲ್ಲ. ನೈಜ ಘಟನೆ. ಇನ್ನೊಂದು ಘಟನೆಯಲ್ಲಿ ಸುಮಾರು ೮೦ ವರ್ಷದ ವೃದ್ಧೆ, ಕಿವಿ ಅಷ್ಟೊಂದೇನು ಚುರುಕಾಗಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಆಕೆಗೆ ’ಈಸ್ಟರ್ ಪರೇಡ್’ ಹಾಡು ಕೇಳಿಸಲಾರಂಭಿಸಿತು. ಅದು ಆಕೆಗೆ ಮಾತ್ರ ಕೇಳಿಸುತ್ತಿತ್ತು. ಯಾರೋ ತಲೆಯೊಳಗೆ ರೇಡಿಯೊ ಆನ್ ಮಾಡಿಟ್ಟ ಹಾಗೆ. ಆಲಿವರ್ ಅದನ್ನ ’ಮ್ಯುಸಿಕಲ್ ಎಪಿಲೆಪ್ಸಿ’ ಎಂದು ಕರೆಯುತ್ತಾನೆ.

ಇವುಗಳು ಕೆಲವೇ ಕೆಲವು ಉದಾಹರಣೆಗಳಷ್ಟೇ. ಇಂತಹ ಹತ್ತು ಹಲವಾರು, ಇದಕ್ಕೂ ವಿಚಿತ್ರ ಎನಿಸುವ ಘಟನೆಗಳು ಈ ಪುಸ್ತಕದಲ್ಲಿವೆ. ಅಲ್ಲಿ ಆತ ಕೇಸ್ ಸ್ಟಡಿಯನ್ನು ಮಾತ್ರ ನೀಡದೆ, ಪ್ರತಿ ಘಟನೆಯನ್ನು ವಿವರಿಸಿದ ನಂತರ ಪೋಸ್ಟ್ ಸ್ಕ್ರಿಪ್ಟ್’ನಲ್ಲಿ ಅದಕ್ಕೆ ಕಾರಣಗಳೇನಿರಬಹುದು ಎನ್ನುವುದನ್ನು ಕೂಡ ವಿವರಿಸುವ ಪ್ರಯತ್ನ ಮಾಡುತ್ತಾನೆ.

ಆಲಿವರ್ ಒಬ್ಬ ಉತ್ತಮ ವೈದ್ಯ ಎನ್ನುವುದರ ಜೊತೆಗೆ ಒಬ್ಬ ಉತ್ತಮ ಮನುಷ್ಯ ಕೂಡ ಹೌದು ಎನ್ನುವುದನ್ನ ಕೆಲ ಘಟನೆಗಳು ತೋರಿಸಿಕೊಡುತ್ತದೆ. ಜಿಮ್ಮಿ ಎಂಬಾತ ಅತಿಯಾದ ಮದ್ಯ ಸೇವನೆಯ ಪರಿಣಾಮವಾಗಿ ಕಾರ್ಸಕೋವ್ ಎಂಬ ರೋಗಕ್ಕೆ ತುತ್ತಾಗುತ್ತಾನೆ. ಪರಿಣಾಮ, ಕೆಲ ನಿಮಿಷಗಳ ಹಿಂದೆ ಏನಾಯಿತು ಎನ್ನುವುದು ಕೂಡ ನೆನಪಿರುವುದಿಲ್ಲ ಆತನಿಗೆ. ಸುಮಾರು ೩೦ ವರ್ಷಗಳ ಹಿಂದಿನ ನೆನಪುಗಳಷ್ಟೆ ಆತನ ಪಾಲಿಗೆ ಇದ್ದಿದ್ದು. ಅದರ ನಂತರ ಯಾವುದೇ ನೆನಪುಗಳಿಲ್ಲ, ನೆನಪುಗಳನ್ನು ಮಾಡಿಕೊಳ್ಳುವ ಅವಕಾಶವೂ ಇಲ್ಲ. ಆಲಿವರ್ ಆತನನ್ನು “ಡು ಯು ಫೀಲ್ ಅಲೈವ್?” ಎಂದು ಪ್ರಶ್ನಿಸಿದಾಗ, ಆತ “ನಾನು ಎಷ್ಟೋ ಕಾಲದಿಂದ ಬದುಕಿಯೇ ಇಲ್ಲ ಎನಿಸುತ್ತದೆ” ಎಂದಾಗ ಆತನಿಗಿಂತ ಹೆಚ್ಚು ನೊಂದುಕೊಳ್ಳುವುದು ಆಲಿವರ್. ಅಷ್ಟೇ ಅಲ್ಲದೇ, ದ ವರ್ಲ್ಡ್ ಆಫ್ ಸಿಂಪಲ್ ಎಂಬ ಭಾಗದಲ್ಲಿ ’ವಿಶೇಷ ಮಕ್ಕಳ’(Special child) ಬಗ್ಗೆ ಹೇಳುವ ಆಲಿವರ್, ಅವರೊಂದಿಗಿನ ತನ್ನ ಸಂಬಂಧವನ್ನೂ ಕೂಡ ಬರೆಯುತ್ತಾನೆ. ಅವರಲ್ಲಿಯ ಕೊರತೆಯನ್ನು ನೋಡದೆ, ಅವರಲ್ಲಿರುವ ವಿಶೇಷತೆಯನ್ನು ಗಮನಿಸಿ ಅದಕ್ಕೆ ಪ್ರೇರೇಪಿಸುತ್ತಾನೆ. ಅಂತಹ ಮಕ್ಕಳಲ್ಲಿ ನಮ್ಮೆಲ್ಲರಿಗೂ ಮೀರಿದ ಅದ್ಭುತ ಕಲ್ಪನೆಗಳಿರುತ್ತವೆ. ಅವರ ಕಲ್ಪನಾ ಶಕ್ತಿಯನ್ನು ಗಮನಿಸಿ ಎನ್ನುತ್ತಾನೆ.

ಆಲಿವರ್ ಸ್ಯಾಕ್ಸ್ ಮ್ಯುಸಿಕೊಫಿಲಿಯ, ಹ್ಯಾಲುಸಿನೇಷನ್ಸ್, ಅವೇಕನಿಂಗ್ಸ್ ಎಂಬ ಹಲವು ಪುಸ್ತಕಗಳನ್ನ ಬರೆದಿದ್ದಾನೆ. ಅದರಲ್ಲಿ ಅವೇಕನಿಂಗ್ಸ್ ಎಂಬ ನೈಜ ಘಟನೆಯಾಧಾರಿತ ಪುಸ್ತಕ ೧೯೯೦ರಲ್ಲಿ ಸಿನಿಮಾ ಕೂಡ ಆಗಿದೆ. ಆದರೆ ಆತನಿಗೆ ಹೆಚ್ಚು ಮನ್ನಣೆ ದೊರಕಿಸಿಕೊಟ್ಟಿದ್ದು, ’ದ ಮ್ಯಾನ್ ಹೂ ಮಿಸ್’ಟುಕ್ ಹಿಸ್ ವೈಫ್ ಫಾರ್ ಎ ಹ್ಯಾಟ್”(The man who mistook his wife for a hat) ಪುಸ್ತಕ. ವಿಚಿತ್ರವಾದ ಹಲವು ರೋಗಗಳ ಬಗೆಗಿನ ತಿಳುವಳಿಕೆಯನ್ನ ಜನ ಸಾಮಾನ್ಯನಿಗೂ ತಲುಪುವಂತೆ ಮಾಡಿದ ಆಲಿವರ್ ಇಂದಿಗೂ ನೆನಪಿರುವುದು ಈ ಪುಸ್ತಕದ ಮೂಲಕವೇ!

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!