ಅಂಕಣ

ಪರಿಸರ ಕಾಳಜಿಯ ಮಾಧ್ಯಮ ರೂಪುಗೊಳ್ಳಲಿ

ಸಮಾಜದ ಕೈಗನ್ನಡಿ ಮಾಧ್ಯಮ. ಅತಿರೇಕಗಳನ್ನು ಪ್ರಶ್ನಿಸುವ, ಅವುಗಳನ್ನು ನಿಯಂತ್ರಿಸಲು ಪರಿಹಾರ ಸೂಚಿಸುವ ಎಲ್ಲಾ ಅವಕಾಶಗಳು ಮಾಧ್ಯಮಶಕ್ತಿಗಿದೆ. ಈ ಮೂಲಕ ಹೊಸ ಮತ್ತು ಆರೋಗ್ಯಯುತ ಮಾಹಿತಿ ಸರಬರಾಜಿನ ಮೂಲ ಪ್ರೇರಣೆಯಾಗಬಲ್ಲ ತಾಕತ್ತಿದ್ದರೇ ಅದು ಮಾಧ್ಯಮಕ್ಕೆ ಮಾತ್ರ. ಇದು ವಿಭಿನ್ನ, ಅತಿರೇಖದ ನಿರೂಪಣೆ ಎನಿಸಿದರೂ ಸತ್ಯ. ಈಗಾಗಲೇ ಕ್ರಮಿಸಿದ ದಾರಿ ಮಾಧ್ಯಮಕ್ಕೆ ಆ ಮಟ್ಟಿನ ಆತ್ಮವಿಶ್ವಾಸ ತಂದುಕೊಟ್ಟಿದೆ.

ದಿನಕ್ಕೊಂದರಂತೆ ನಾಯಿಕೊಡೆಗಳ ಹಾಗೆ ತಲೆಎತ್ತುತ್ತಿರುವ ಟಿವಿ ಚಾನೆಲ್‍ಗಳು, ಜಾಹೀರಾತುಗಳಿಂದಲೇ ಕಳೆದು ಹೋಗಿರುವ ಪತ್ರಿಕೆಗಳು ಜನಸಾಮಾನ್ಯರ ಅಸಮಾಧಾನಕ್ಕೆ ಆಹಾರವಾಗಿದೆ. ಹಾಗೆಂದು ಅವುಗಳು ತಮ್ಮ ಜವಾಬ್ದಾರಿಯನ್ನೇ ಮರೆತು ಬಿಟ್ಟಿವೆ ಎಂದರ್ಥವೇನಲ್ಲ. ಮೈಸುಡುವ ಬಿಸಿಲಿನ ತಾಪ, ಮುಗಿಲು ಮುಟ್ಟಿದ ಬರದ ಬಿಸಿ ಮಾಧ್ಯಮಗಳನ್ನೂ ಚಿಂತಿಸುವಂತೆ ಮಾಡಿದೆ. ಎಷ್ಟೇ ಹಣದ ಹಿಂದೆ ಓಡಿದರೂ ಕುಡಿಯಲು ನೀರೇ ಬೇಕು, ಉಣ್ಣಲು ಅನ್ನವೇ ಬೇಕು ಎಂಬುದನ್ನಂತೂ ತಿರುಚಲು ಮಾಧ್ಯಮಗಳಿಗೆ ಸಾಧ್ಯವಿಲ್ಲವಲ್ಲ. ಬ್ರೇಕಿಂಗ್ ನ್ಯೂಸ್‍ಗಳು ನಮ್ಮ ಹೊಟ್ಟೆ ತುಂಬಿಸುವಂತಿದ್ದರೆ ಮತ್ತೆ ಮತ್ತೆ ನಮ್ಮ ಸುತ್ತಮುತ್ತಲ ಪರಿಸರದಲ್ಲಿನ ಬದಲಾವಣೆಗಳ ಬಗ್ಗೆ ಸುದ್ದಿ ಮಾಡಿಕೊಂಡೇ ಕಾಲಕಳೆಯಬಹುದಿತ್ತು. ಆದರೆ ವಾಸ್ತವ ನಾವಂದುಕೊಂಡಂತೆ ಸಿನಿಕತನದೊಂದಿಗಿಲ್ಲ. ಯಾವ ಮಾಧ್ಯಮಗಳೂ ಆ ಪರಿಯ ದಾಷ್ಟ್ರ್ಯದಿಂದ ವರ್ತಿಸುವ ಧೈರ್ಯ ತೋರುವುದಿಲ್ಲ.

ನೇತ್ರಾವತಿಯ ನೀರನ್ನು ಬರದ ಜಿಲ್ಲೆಗಳಿಗೆ ಹರಿಸುವ ಯೋಚನೆಯನ್ನು ಪತ್ರಿಕೆಗಳು ಕಟುವಾಗಿಯೇ ವಿರೋಧಿಸಿದ್ದವು. ಪರಿಸರ ಕುರಿತಾದ ಕಾಳಜಿಯೊಂದಿಗೆ ಜನರ ಪರವಾಗಿ ವಾದಿಸಿದ ಮಾಧ್ಯಮಕ್ಕೆ ಮೊದಲ ಹಂತದಲ್ಲಿ ಹಿನ್ನೆಡೆಯಾದರೂ, ಇತ್ತೀಚೆಗೆ ಸರ್ಕಾರಕ್ಕೆ ಅದರ ವಾಸ್ತವತೆ ಅರಿವಾಗುವಷ್ಟರ ಮಟ್ಟಿಗೆ ಮಾಧ್ಯಮಗಳ ಪಾತ್ರ ಹಿರಿದು. ಹೀಗೆಂದು ಎಲ್ಲರೂ ಈ ಪರಿಯ ಸಂವೇದನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದಲ್ಲ. ಆದರೆ ಜನರನ್ನು ಹಾದಿ ತಪ್ಪಿಸುವ ಕೆಲಸವನ್ನು ಆಡಳಿತ ವ್ಯವಸ್ಥೆ ಮಾಡುತ್ತಿರುವಾಗ ಅವರನ್ನು ಎಚ್ಚರಿಸುವ ಯೋಚನೆಯನ್ನಾದರೂ ಬೆರಳೆಣಿಕೆಯ ಮಾಧ್ಯಮಮಿತ್ರರು ಮಾಡುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.

ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲಿ ನೀರನ್ನು ಉಳಿಸುವ ಬಗೆಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿಯೂ ಎಸ್‍ಡಿಎಂ ಶಿಕ್ಷಣ ಸಂಸ್ಥೆ ಆಹಾರ ಮತ್ತು ನೀರಿನ ಸುರಕ್ಷತೆ ಮತ್ತು ಸಂರಕ್ಷಣೆಯ ಹಿತದೃಷ್ಟಿಯಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ತುಸು ಗಂಭೀರವಾಗಿಯೇ ಮಾಡುತ್ತಿದೆ. ಈ ಆರಂಭಕ್ಕೆ ಇನ್ನಷ್ಟು ಶಕ್ತಿ ಕೊಡುವ ಕೆಲಸ ಆಗಬೇಕಾದ್ದು ವಿದ್ಯಾರ್ಥಿಗಳಿಂದ ಎಂಬುದು ಎಷ್ಟು ಸತ್ಯವೋ, ಇದಕ್ಕೆ ಒಂದಿಷ್ಟು ಒಳ್ಳೆಯ ಪ್ರಚಾರ ಲಭ್ಯವಾಗಬೇಕಾದ್ದು ಮಾಧ್ಯಮಗಳಿಂದ ಎಂಬುದು ಅಷ್ಟೇ ಸತ್ಯ. ಕಾಳಜಿಯ ಕೆಲಸಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕಾ ಎಂಬ ಮಾತು ಇಲ್ಲಿ ಪರಿಗಣನೆಗೆ ಬರುವುದಿಲ್ಲ. ಬದಲಾಗಿ ಸಮಾಜದಲ್ಲಿ ಪರಿಸರದ ಕುರಿತಾಗಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಮಾಧ್ಯಮಗಳು ಎಷ್ಟು ಗಂಭೀರವಾಗಿ ಪರಿಗಣ ಸಿದೆ ಎಂಬುದನ್ನು ಅರ್ಥೈಸುವ ಸಲುವಾಗಿ ಈ ರೀತಿಯ ಪ್ರಯೋಗಗಳು ನಡೆಯಬೇಕಿದೆ.

ಪರಿಸರದ ಮೇಲೆ ದಿನನಿತ್ಯ ನಾವು ಮಾಡುತ್ತಿರುವ ದೌರ್ಜನ್ಯದ ಕುರಿತು ವೈಜ್ಞಾನಿಕ ವಿಶ್ಲೇಷಣೆಗಳೊಂದಿಗೆ ಬರೆಯುವವರಿಗೆ ಧನಾತ್ಮಕ ಪ್ರತಿಕ್ರಿಯೆ ಸಿಗುವ ದೃಷ್ಟಿಯಿಂದ ಮಾಧ್ಯಮಗಳು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗೆಂದು ಪರಿಸರ ಕುರಿತಾದ ಕಾಳಜಿ ಕೇವಲ ಸುದ್ದಿಗೋ, ಲೇಖನಗಳಿಗೋ ಸೀಮಿತವಾಗದೆ ನೈಜ ದೃಷ್ಟಾಂತಗಳೊಂದಿಗೆ ಜನರನ್ನು ಜಾಗೃತಗೊಳಿಸುವ ಕೆಲಸವಾಗಬೇಕು. ಉದಾಹರಣೆಗೆ ದೇಶದ ವಿಜ್ಞಾನ ಮತ್ತು ಪರಿಸರ ಸಂಶೋಧನಾ ಸಂಸ್ಥೆಯಿಂದ ಪರಿಸರದ ಕುರಿತಾಗಿ ನಡೆಯುವ ಅದೆಷ್ಟೋ ಆವಿಷ್ಕಾರಗಳನ್ನು ಡೌನ್ ಟು ಅರ್ಥ್ ನಿಯತಕಾಲಿಕೆಯ ಮೂಲಕ ತಿಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಸಂಶೋಧನಾ ಅನ್ವೇಷಣೆಗಳು ಅದೆಷ್ಟೋ ರಾಜ್ಯಗಳ ಪರಿಸ್ಥಿತಿಯನ್ನು ಸರಿಪಡಿಸುವಲ್ಲಿ ಒಂದಿಷ್ಟು ಕೊಡುಗೆ ನೀಡಿವೆ. ಅದರಲ್ಲಿ ಗುಜರಾತ್‍ನಲ್ಲಿದ್ದ ಅನಾವೃಷ್ಟಿ, ಹಸಿರುಮನೆ ಪರಿಣಾಮ, ದೆಹಲಿಯ ಮಾಯುಮಾಲಿನ್ಯ ಕುರಿತಾದ ಕೆಲಸಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಲೇಬೇಕು. ಈ ಅಧ್ಯಯನಗಳ ಮೂಲಕ ಜನಜಾಗೃತಿಯನ್ನು ಮೂಡಿಸುವಲ್ಲಿ ಈ ನಿಯತಕಾಲಿಕೆಯ ಪಾತ್ರ ಹಿರಿದು.

ಮಾಧ್ಯಮಗಳು ನೈಸರ್ಗಿಕ ಸಂಪನ್ಮೂಲಗಳ ಕುರಿತಾಗಿ ಅದೆಷ್ಟೇ ಕಾಳಜಿ ತೋರಿದರೂ, ಬೇಲಿಯೇ ಎದ್ದು ಹೊಲ ಮೇಯ್ದಾಗ (ಆಡಳಿತ ವರ್ಗ ಸರಿಯಾದ ಪ್ರತಿಕ್ರಿಯೆ ನೀಡದಿದ್ದಾಗ) ನಮ್ಮೆಲ್ಲಾ ಪ್ರಯತ್ನಗಳೂ ಸಾಗರದ ನೀರನ್ನು ಬೊಗಸೆಯಲ್ಲಿ ಸಂಗ್ರಹಿಸುವ ಪ್ರಯತ್ನವೆಂದೇ ಅನಿಸುತ್ತದೆ. ಆದರೆ ಇತ್ತೀಚೆಗೆ ಜನರಲ್ಲಿಯೂ ಪರಿಸರ ಕುರಿತು ಅರಿವು ಹೆಚ್ಚುತ್ತಿರುವುದರಿಂದ ಜನರಿಗಾಗಿ ಮಾಧ್ಯಮಗಳು, ಪರಿಸರ ಪರವಾದ ಕೆಲಸಗಳಲ್ಲಿ ಸಕ್ರಿಯರಾಗಬೇಕು ಎಂಬ ಆಶಯ ನಮ್ಮದು.

Facebook ಕಾಮೆಂಟ್ಸ್

ಲೇಖಕರ ಕುರಿತು

Pavithra Bidkalkatte

ಪವಿತ್ರ ಬಿದ್ಕಲ್'ಕಟ್ಟೆ
ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್.ಡಿ.ಎಮ್ ಕಾಲೇಜು ಉಜಿರೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!