ಅಂಕಣ

ಸುತ್ತಮುತ್ತಲ ಸಕಲ, ಅಂತರಂಗದಿ ಕಟ್ಟುವ ಜಾಲ !

ಮಂಕುತಿಮ್ಮನ ಕಗ್ಗ  ೫೭

ಆಗುಂಬೆಯಸ್ತಮಯ ದ್ರೋಣಪರ್ವತದುದಯ |
ತ್ಯಾಗರಾಜನ ಗಾನ ವಾಲ್ಮೀಕಿ ಕವನ ||
ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ |
ಯೋಗಪುಲಕಾಂಕುರವ ? – ಮಂಕುತಿಮ್ಮ || ೫೭ ||

ಮಾನವನಲ್ಲಿ ಪುಳಕ ಹುಟ್ಟಿಸುವ ಅನುಭೂತಿ ಹಲವಾರು ವಿಧದಲ್ಲಿ, ಹಲವಾರು ಮಾರ್ಗ-ವಿಧಾನಗಳ ಮೂಲಕ ಸಂಭವಿಸುವಂತದ್ದು. ಅದನ್ನು ‘ಹೀಗೇ’ ಎಂದು ನಿರ್ದೇಶಿಸಿ, ನಿಯಂತ್ರಿಸಿ ಪ್ರಕ್ಷೇಪಿಸಿಕೊಳ್ಳಲು ಸಾಧ್ಯವಿರದಿದ್ದರು ಕೆಲವು ನಿಸರ್ಗ ಸಹಜ ಸಂಘಟನೆ-ಸಂಧರ್ಭ-ಪರಿಸರದ ಪ್ರಕ್ರಿಯೆಗಳು ಅಯಾಚಿತವಾಗಿ ಆ ಅನುಭವವನ್ನೊದಗಿಸಿಕೊಡಬಹುದು. ನಮಗರಿವಿಲ್ಲದಂತೆ ನಮ್ಮೊಳಗೇನನ್ನೊ ಪ್ರೇರೇಪಿಸಿ, ಧನ್ಯತಾಭಾವ ಮೂಡಿಸಿ, ಪುಳಕದ ಅನುಭವವನ್ನುಂಟು ಮಾಡಿಬಿಡಬಹುದು. ಸತ್ಯ ಸಾಕ್ಷಾತ್ಕಾರಕ್ಕೆ ಅಂತಹ ಸಹಜ ಸಾಧಾರಣ ಅನುಭವಗಳೇ ಸಾಕು, ದೊಡ್ಡ ಹುಡುಕಾಟದ ಅಗತ್ಯವಿಲ್ಲವೆನ್ನುವುದು ಈ ಕಗ್ಗದ ಮೂಲ ಆಶಯ.

ಅದರಲ್ಲು ಸರಳ ನಿಸರ್ಗ ಪ್ರಕ್ರಿಯೆಗಳಾದ ಸೂರ್ಯೋದಯ-ಸೂರ್ಯಾಸ್ತಮಾನಗಳು, ಕಿವಿಗೆ ಇಂಪೀವ ಗಾನಾಲಾಪಗಳು ಎಂತಹ ಅರಸಿಕ ಮನದವನನ್ನು ಸಹ ಕೆಲವು ಚಣದ ಮಟ್ಟಿಗಾದರೂ ತನ್ಮಯಗೊಳಿಸಿ ಮೈ ಮರೆಸಬಲ್ಲವು . ಅವನೊಳಗಿನ ಭಾವಸಹಜ ಸಂವೇದನೆಗಳನ್ನು ಮಿಡಿಸಿ, ಬೇರೊಂದು ಲೋಕಕ್ಕೆ ಕರೆದೊಯ್ದುಬಿಡಬಲ್ಲವು. ಎಂತಹವನನ್ನೂ ಕೂಡ ಆ ಸೊಗಡಿನ ಆಸ್ವಾದನೆಯಲ್ಲಿ ಮುಳುಗಿಸಿ, ಕೊಂಚ ಹೊತ್ತಿನ ಮಟ್ಟಿಗಾದರು ಪುಳಕಿತ ಭಾವದಲ್ಲಿ ಮಜ್ಜನ ಮಾಡಿಸಿಬಿಡಬಲ್ಲವು. ಈ ಕಗ್ಗ ಅಂತಹ ಕೆಲವು ಅಪೂರ್ವ ಅನುಭೂತಿಗಳನ್ನು ಉದಾಹರಿಸುತ್ತಲೆ ಅವು ಅಂತರಂಗದಲ್ಲಿ ಹುಟ್ಟಿಸಬಲ್ಲ ಪುಳಕಭಾವದ ಪ್ರಸ್ತಾಪ ಮಾಡುತ್ತದೆ.

ಆಗುಂಬೆಯಸ್ತಮಯ ದ್ರೋಣಪರ್ವತದುದಯ |
ತ್ಯಾಗರಾಜನ ಗಾನ ವಾಲ್ಮೀಕಿ ಕವನ ||

ಆಗುಂಬೆಯೆಂದ ತಕ್ಷಣ ಅದನ್ನು ಕಣ್ಣಾರೆ ನೋಡದವನ ಮನದಲ್ಲೂ ಏನೋ ಒಂದು ವಿಶಿಷ್ಠ ಭಾವ ಮೂಡದೇ ಇರದು. ಕನ್ನಡನಾಡಿನ ಆಗುಂಬೆಯ ಅದ್ಭುತ ಸೂರ್ಯಾಸ್ತಮಯವನ್ನು ನೋಡಿ ಮೆಚ್ಚದವರಾದರು ಯಾರು? ಅಂತೆಯೇ ಅಸ್ತಮಿಸಿದ ದಿನಕರನ ಮರುದಿನದ ಪಾಳಿಗೆ ವೇದಿಕೆಯಾಗಿ ರಮ್ಯ, ರಮಣೀಯ ಸೂರ್ಯೋದಯಕ್ಕೆ ತಾವೀವ ದ್ರೋಣಪರ್ವತದ ಸೌಂದರ್ಯಕ್ಕೆ ಹೋಲಿಕೆಯಾದರು ಉಂಟೆ ? ಇಂತಹ ಬರಿಯ ಕಣ್ಣಿಂದಲೇ ನೋಡಿ ಮನದುಂಬಿಸಿಕೊಳ್ಳಬಲ್ಲ ಅದೆಷ್ಟು ಅದ್ಭುತಗಳು ನಮ್ಮ ಸುತ್ತಲೇ ಇಲ್ಲಾ ?

ನೇತ್ರಾಸ್ವಾದಿತವಾದ ಈ ಉದಾಹರಣೆಗಳೋ ನೈಸರ್ಗಿಕ ಸಹಜ ನಿರ್ಮಿತಿಗಳು. ಆದರೆ ಪ್ರಕೃತಿಯೊಡನೆ ಅವಿನಾಭಾವ ಸಮತೋಲನದಲ್ಲಿ ತಾಳಮೇಳ ಹೊಂದಾಣಿಕೆಯೊಂದಿಗೆ ಬಾಳುವ ಆಶಯದಲ್ಲಿ ಮನುಜನೂ ಸಹ ತನ್ನದೇ ಆದ ರಸಾನುಭವಗಳನ್ನು ಸೃಜಿಸಿಕೊಂಡಿದ್ದಾನೆ. ಅದನ್ನು ಕರ್ಣಾನುಭೂತಿಯ ಉದಾಹರಣೆಯ ಮೂಲಕ ಎತ್ತಿ ತೋರಿಸುತ್ತದೆ ಕಗ್ಗದ ಎರಡನೇ ಸಾಲು. ಕಿವಿಯೆಂಬ ಮತ್ತೊಂದು ಇಂದ್ರಿಯದ ಮೂಲಕ ಗ್ರಹಿಸಿ ಆಸ್ವಾದಿಸುವ ಗಾನ-ಕೀರ್ತನ-ಕಾವ್ಯಾದಿ ಅನುಭೂತಿಗಳು ಇಲ್ಲಿ ಕಾಣಿಸಿಕೊಂಡಿವೆ – ತ್ಯಾಗರಾಜ, ವಾಲ್ಮೀಕಿಯಂತಹ ಮಹನೀಯರ ಉಲ್ಲೇಖದ ಮೂಲಕ.

ಇಲ್ಲಿನ ಗಮನೀಯ ಅಂಶವೆಂದರೆ ಪ್ರಕೃತಿಗೂ ನಮಗೂ ಇರುವ-ಇರಬೇಕಾದ ಸಮತೋಲಿತ ಸಂಬಂಧವನ್ನು ಈ ಎರಡು ಇಂದ್ರಿಯಾನುಭೂತಿಗಳ ಮೂಲಕ ವಿವರಿಸಿರುವ ರೀತಿ. ತನ್ಮೂಲಕ ಈ ಸಮತೋಲನದಲ್ಲಿ ಮನುಕುಲಕ್ಕಿರುವ ಹೊಣೆಗಾರಿಕೆಯನ್ನು ಪರೋಕ್ಷವಾಗಿ ಚಿತ್ರಿಸುತ್ತವೆ ಈ ಕಗ್ಗದ ಸಾಲುಗಳು. ಅಂತೆಯೇ, ಅದೊಂದು ಕರ್ತವ್ಯ ಮಾತ್ರವಾಗದೆ ಆನಂದಾನುಭವವು ಆಗಬಹುದೆಂಬುದನ್ನು ಸರಳರೂಪದಲ್ಲಿ ವಿವರಿಸುತ್ತದೆ. ಇವುಗಳನ್ನು ವಾಚಿಸುವ ಆಲಿಸುವ ಆನಂದಿಸುವ ಕ್ರಿಯೆಯಲ್ಲಿ ಮಿಕ್ಕ ಇಂದ್ರಿಯಗಳು ತಾನಾಗೇ ಪಾಲ್ಗೊಳ್ಳುವುದರಿಂದ ಇದೊಂದು ಪಂಚೇಂದ್ರಿಯಗಳ ಒಟ್ಟಾರೆ ಸಂವೇದನೆಯ ಪ್ರತಿಮೆ ಎಂದೂ ಪರಿಗಣಿಸಬಹುದು.

ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ |
ಯೋಗಪುಲಕಾಂಕುರವ ? – ಮಂಕುತಿಮ್ಮ ||

ಅದ್ಭುತವೆನಿಸುವ ಆಗುಂಬೆಯ ಸೂರ್ಯಾಸ್ತವಾಗಲಿ, ಮನೋಹರ-ರುದ್ರ-ರಮ್ಯಲೇಪಿತ ದ್ರೋಣಪರ್ವತದ ಸೂರ್ಯೋದಯವಾಗಲಿ, ತ್ಯಾಗರಾಜರ ಕೃತಿಗಳ ಮಧುರ ಗಾಯನವಾಗಲಿ, ರಾಮಾಯಣವನ್ನು ವಿರಚಿಸಿದ ವಾಲ್ಮೀಕಿಯ ಕಾವ್ಯವಾಚನ ಸುಖವಾಗಲಿ – ಈ ತರಹದ್ದೆಲ್ಲಾ ಅನುಭವಗಳು ಮನಸನ್ನು ಮುದಗೊಳಿಸಿ, ಆಹ್ಲಾದದ ಪುಲಕವನ್ನೆಬ್ಬಿಸಿಬಿಡುವಂತಹವು. ಆದರೆ ಇವೆಲ್ಲಾ ಭಾವತರಂಗಗಳು ಕೇವಲ ಗ್ರಹಿಸುವಿಕೆ-ವೀಕ್ಷಿಸುವಿಕೆ-ಆಲಿಸುವಿಕೆ-ಪಠಿಸುವಿಕೆ ಮಾತ್ರದಿಂದಲೇ ನಿರಂತರ ಮನದಲ್ಲುಳಿದಿರುವುದೆಂದು ಹೇಳಲು ಬರುವುದಿಲ್ಲ. ಆ ಗಳಿಗೆಯ ಪುಳಕ, ಉನ್ಮೇಷಗಳು ತುಸುಕಾಲದ ಅಲೌಕಿಕ ಜಾಗೃತಿಯ ನಂತರ ವಾಸ್ತವ ಜಗದ ಜಂಜಾಟದಲ್ಲಿ ಕರಗಿ ಕಲುಷಿತವಾಗುತ್ತ ಅಂತರ್ಗತವಾಗದೆ ಮರೆಯಾಗಿಬಿಡಬಹುದು.

ಒಂದು ವೇಳೆ ಹಾಗೆ ಮರೆಯಾಗಲು ಬಿಡದೆ, ಅವುಗಳೆಲ್ಲದರ ಅನುಭೂತಿಗೆ ನಮ್ಮಂತರಂಗದಲ್ಲಿ ತಾವಿತ್ತರೆ (ಜಾಗ ಕೊಟ್ಟರೆ) ಮಾತ್ರ, ಅವುಗಳು ಶಾಶ್ವತವಾಗಿ ನೆಲೆಗೊಳ್ಳಲು ಸಾಧ್ಯ. ಆಗಷ್ಟೇ ಅವು ತಮ್ಮ ನಿಜವಾದ, ಸತ್ಯಯೋಗ ಸಮಾನವಾದ ಮತ್ತು ನಿರಂತರ ಪುಳಕಕ್ಕೆ ಬೀಜಾಂಕುರ ಮಾಡಬಲ್ಲ ಗಹನಶಕ್ತಿಯನ್ನು ಪ್ರಕಟಿಸಲು ಸಾಧ್ಯ. ಅಂದರೆ ಇವೆಲ್ಲವನ್ನು ಬರಿಯ ಜ್ಞಾನೇಂದ್ರಿಯಗಳ ಮಟ್ಟದಲ್ಲಿ ಮಾತ್ರ ಗ್ರಹಿಸಿ ಆಸ್ವಾದಿಸಿದರೆ ಬರಿಯ ಭೌತಿಕ ಪುಳಕವಷ್ಟೆ ಸಾಧ್ಯ; ಅದೇ ಅವುಗಳನ್ನು ಜ್ಞಾನೇಂದ್ರಿಯಗಳಾಚೆಯ ಅಂತಃಕರಣದ ಗಡಿ ದಾಟಿಸಿ, ಅಂತರಂಗಿಕವಾಗಿ ಆಸ್ವಾದಿಸತೊಡಗಿದರೆ ಭೌತಿಕಸತ್ವವನ್ನು ಮೀರಿಸಿದ ಆಧ್ಯಾತ್ಮಿಕ ಸತ್ಯವನ್ನು ಅರಿಯುವ ಹಾದಿಗೆ ಅವೇ ಮೊದಲ ಮೆಟ್ಟಿಲಾಗಿಬಿಡುತ್ತವೆ. ಆಗ ಅವುಗಳ ಭೌತಿಕಸ್ತರದ ಪುಳಕ ಕೂಡ ಅಲೌಕಿಕಸ್ತರದ ಸತ್ಯಯೋಗ ಸಾಧನೆಗೆ ಬೀಜಾಂಕುರ ಮಾಡಬಲ್ಲವು.

ನಮ್ಮ ಗೀತ-ಸಂಗೀತ-ಕಾವ್ಯ-ಗಾಯನ-ವಾಚನದಂತಹ ಸರಳ ಆಸ್ವಾದನೆಗಳು ಲೌಕಿಕ ಸ್ತರದವೆ ಆದರು, ಅದನ್ನು ಭೌತಿಕ ಹಂತದಿಂದ ಮೇಲಕ್ಕೆ ಒಯ್ದರೆ, ಅಲೌಕಿಕ ಅನುಭವಕ್ಕೆ ಅವೇ ದಾರಿ ತೋರಿಸುತ್ತವೆ ಎಂಬುದು ಇಲ್ಲಿನ ಇಂಗಿತ.

#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!