ಅದೊಂದು ಶುಕ್ರವಾರ. ಮೋಡ ಕವಿದ ವಾತಾವರಣ. ಬಹುಷಃ ಸೂರ್ಯ ‘ವರ್ಕ್ ಫ್ರೊಮ್ ಹೋಮ್’ ಮಾಡುತ್ತಿದ್ದಿರಬೇಕು. ಇಡೀ ಜಗತ್ತೇ ವಾರಾಂತ್ಯದ ಗುಂಗಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಸೋಮವಾರ ಹಾಗೂ ಮಂಗಳವಾರ ಸಹ ರಜೆ ಇದ್ದಿದ್ದರಿಂದ ಅದೊಂದು ಉದ್ದದ ವಾರಾಂತ್ಯ ಎನ್ನಬಹುದು. ಹಾಗಾಗಿ ಸಾಫ್ಟ್‌ವೇರ್ ಕಂಪನಿಗಳಲ್ಲೆಲ್ಲ ಒಂದು ಸಣ್ಣ ಹಬ್ಬದ ವಾತಾವರಣ. ಕೆಲವರು ಇನ್ನೂ ಒಂದು ರಜೆ ತನ್ನ ಕಡೆಯಿಂದ ಇರಲಿ ಎಂದು ಬುಧವಾರ ಕೂಡ ರಜೆ ಹಾಕಿ ಈ ವಾರಾಂತ್ಯಕ್ಕೆ ಅಂತ್ಯವೇ ಇಲ್ಲವೇನೋ ಎಂಬಷ್ಟು ಖುಷಿಯಲ್ಲಿದ್ದರು. ಬೆಳಿಗ್ಗೆ ಬೇಗನೆ ಬಂದ ಕೆಲವರು ಮಧ್ನಾಹ್ನದ ಆರಂಭವಾಗುತ್ತಿದ್ದಂತೆ “ಹ್ಯಾಪ್ಪಿ ಹಾಲಿಡೇಸ್” ಎಂದು ಸದ್ದಿಲ್ಲದೇ ಪಿಸುಗುಟ್ಟಿ, ಬ್ಯಾಗ್’ಗಳನ್ನು ಹೊತ್ತು ತವರುಮನೆಗೆ ಹೊರಟಿದ್ದರು. ಮೊದಲೆಲ್ಲ “ಹ್ಯಾಪಿ ಹಾಲಿಡೇಸ್” ಅಂತ ಶುಭಾಶಯ ಹೇಳುತ್ತಿದ್ದದ್ದು ೨ ತಿಂಗಳು ಸಿಗುತ್ತಿದ್ದ ಏಪ್ರಿಲ್-ಮೇ ರಜೆಗೆ; ಇಲ್ಲವೇ ಅಕ್ಟೋಬರ್’ನ ದಸರಾ ರಜೆಗೆ. ಅಂದರೆ ಕನಿಷ್ಠ ಪಕ್ಷ ಒಂದು ತಿಂಗಳಾದರೂ ರಜೆ ಇದ್ದರೆ ಅದು ‘ಹಾಲಿಡೇಸ್’ ಎಂಬೊಂದು ಅನಾದಿಕಾಲದಿಂದ ಬಂದ ಪದ್ಧತಿ ಇತ್ತು. ಈಗ, ಸಿಗುವ ನಾಲ್ಕು ದಿನಕ್ಕೆ “ಹ್ಯಾಪ್ಪಿ ಹಾಲಿಡೇಸ್” ಎಂದು ಹೇಳಿಕೊಳ್ಳುವ ಹಣೆಬರಹಕ್ಕೆ ತಲೆ ಚಚ್ಚಿಕೊಳ್ಳಬೇಕು. ಆದರೆ ತಮ್ಮ ಕೆಲಸಕ್ಕೆ ತಲೆಯೇ ಮುಖ್ಯ. ಹಾಗಾಗಿ ಅದರ ಬದಲಾಗಿ ಕೀಬೋರ್ಡ್’ನ ‘Enter’ ಕೀ ಚಚ್ಚಿ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
ವಾರಾಂತ್ಯ ಆರಂಭವಾಗುತ್ತಿದ್ದಂತೆ ತನ್ಮಯ್’ಗೆ ಮನೆಯಲ್ಲಿ ಅಮ್ಮ ಮಾಡಿದ ಹೋಳಿಗೆ ತಿನ್ನುವ ತವಕವಾದರೆ, ರಘುಗೆ ತನ್ನ ಮದುವೆಯಾಗುವ ಹುಡುಗಿಯ ನಗುವ ಕಣ್ತುಂಬಿಕೊಳ್ಳುವ ತವಕ. ಸಾಗರ್’ಗೆ ‘ಬಿಗ್ ಬಿಲಿಯನ್ ಡೇ’ಯ ದಿನ ತಂಗಿಗೆ ತಾನು ಕೊಂಡಿರುವ ಹೊಸ ಮೊಬೈಲ್ ತಲುಪಿಸುವ ತವಕ. ರಶ್ಮಿಗೆ ತಾ ಕಲಿತ ಹೊಸರುಚಿಯನ್ನ ಮನೆಯವರೆಲ್ಲರಿಗೆ ಉಣಬಡಿಸುವ ತವಕ. ರುಕ್ಮಿಣಿಗೆ ಅಕ್ಕನ ಮದುವೆಯ ತಯಾರಿಯಲ್ಲಿ ಭಾಗವಹಿಸುವ ತವಕ. ಸಿದ್ಧಾರ್ಥ್’ನಿಗೆ ಹೊಸದಾಗಿ ಖರೀದಿಸಿದ ಕಾರಿನಲ್ಲಿ ಮನೆಮಂದಿಯನ್ನೆಲ್ಲ ಕೂರಿಸಿ ಸುತ್ತಾಡಿಸುವ ತವಕ. ಸುಹಾಸಿನಿಯ ತಂದೆ ಎರಡು ದಿನಗಳ ಹಿಂದೆ ಬೈಕಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದರಂತೆ, ಅವಳಿಗೆ ಅವರನ್ನು ನೋಡುವವರೆಗೂ ಮನಸಿಗೆ ಸಮಾಧಾನವಿಲ್ಲ. ಕರಣ್’ಗೆ ತೀರಾ ಆರೋಗ್ಯ ಹದಗೆಟ್ಟಿರುವ ತಾಯಿಯ ಯೋಗಕ್ಷೇಮ ವಿಚಾರಿಸುವುದು ಪ್ರತಿ ವಾರದ ಕಾಯಕ. ವಾರವಿಡೀ ಆತಂಕದಿಂದಲೇ ಕಳೆಯುವ ಅವನಿಗೆ ಪ್ರತಿ ವಾರವೂ ಕ್ಷೇಮವಾಗಿರುವ ಅಮ್ಮನ ಮೊಗ ನೋಡುವುದೇ ಅವನಿಗೊಂದು ವಾರಾಂತ್ಯದ ಖುಷಿ. ಇನ್ನು ಸಿದ್ಧಾಂತ್’ಗೆ ಪ್ರೀತಿಯ ತಂಗಿಯನ್ನು ಕಳೆದುಕೊಂಡ ನಂತರದ ಮೊದಲ ವಾರಾಂತ್ಯ. ಮನೆಗೆ ಹೋದ ಕೂಡಲೇ “ಏನ್ ತಂದಿದ್ಯೋ ಕೋತಿ” ಎನ್ನುತ್ತಾ ಬಾಗಿಲಿಗೆ ಓಡಿ ಬರುವ ಆಕೆಯ ನೆನಪಾಗುತ್ತಿದ್ದಂತೆ ಇನ್ಮುಂದೆ ಮನೆಗೇ ಹೋಗಲಾರೆ ಎಂಬಷ್ಟು ಹಿಂಸೆಯಾಗುತ್ತದವನಿಗೆ. ಆದರೂ ಹೋಗದೆ ಇರಲಾರ. ಹೊರಟಿದ್ದಾನೆ; ಕಣ್ಣಂಚಿನ ಪ್ರವಾಹಕ್ಕೊಂದು ಅಣೆಕಟ್ಟು ಕಟ್ಟಿಕೊಂಡು. ಹೀಗೆ ವಾರಾಂತ್ಯ ಎಂಬ ನೋವು-ನಲಿವುಗಳ ಸನಿಹ ಸುಳಿದಾಡುವ ತವಕಗಳನ್ನು ಹುದುಗಿಸಿಕೊಂಡ ಬದುಕಿನೊಳಗಿನ ಒಂದು ಪುಟ್ಟ ಬದುಕು ಇನ್ನೇನು ಆರಂಭವಾಗುವುದರಲ್ಲಿತ್ತು.
ಇನ್ನು ಈ ಉದ್ದದ ವಾರಾಂತ್ಯದಲ್ಲೇ ‘ಸಾವಿನ ಗೆರೆ’ ತಲುಪಬೇಕಾದವರಿದ್ದಾರೆ. ಗಾಬರಿಯಾಗುವಂಥದ್ದಿಲ್ಲ. ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ‘ಸಾವಿನ ಗೆರೆ (ಐ ಮೀನ್ ಡೆಡ್ ಲೈನ್)’. ಅವರಿಗೆ ಅಮ್ಮ ಮಾಡಿದ ಹೋಳಿಗೆಯ ಪರಿಮಳವಾಗಲಿ, ಗೆಳತಿ ಮುಡಿದ ಮಲ್ಲಿಗೆಯ ಪರಿಮಳವಾಗಲಿ ಸೋಕಲಾರದು. ಸೋಕಿದರೂ ಸೋಕದಂತೆ ನಿರ್ಲಿಪ್ತರಾಗಿರಬೇಕಾದ ಅನಿವಾರ್ಯತೆ. ಮನೆಗೆ ಹೊರಟವರೆಲ್ಲ ಈ ನಾಲ್ಕು ದಿನ ಮುಗಿಯುವುದೇ ಬೇಡ ಎನ್ನುತ್ತಿದ್ದರೆ ಈ ಸಾವಿನ ಗೆರೆ ದಾಟಬೇಕಾದವರು ಮಾತ್ರ ಇಂದೇ ನಾಲ್ಕೂ ದಿನ ಮುಗಿದು ಹೋಗಲಿ ಎಂಬಂತಿದ್ದಾರೆ. ಒಟ್ಟಾರೆ “ಇದೊಂದು ‘ಎಂಥಾ ಸಾವಿ’ನ ಗೆರೆ ಮಾರ್ರೆ” ಎಂದು ಮನಸಲ್ಲೇ ಅಂದುಕೊಳ್ಳುತ್ತಾ ದಿನಚರಿ ಮುಂದುವರಿಯಬೇಕಿತ್ತು. ಇವೆಲ್ಲದರ ನಡುವೆಯೂ ತಾವು ಮಾಡುತ್ತಿರುವ ಕೆಲಸ ಅಚ್ಚುಕಟ್ಟಾಗಿ ಮುಗಿಯಲಿ ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇತ್ತು. ಅದೇ ಹಂಬಲ ಅವರನ್ನು ತಾಳ್ಮೆಯಿಂದ ಕೆಲಸ ಮುಂದುವರೆಸಲು ಪ್ರೇರೇಪಿಸಿತ್ತು.
ಏಕಾಂತ್’ಗೆ ವಾರಾಂತ್ಯ ಎನ್ನುವುದು ಇನ್ನೊಂದೇ ತರದ ಹೊಸತನ. ಆತನಿಗೆ ಪ್ರತಿ ವಾರಾಂತ್ಯ ಎನ್ನುವುದು ಅಂತರ್ಜಾಲದ ಜಾಲದಿಂದ ಹೊರಬಂದು ಮುಕ್ತವಾಗುವ ಸಮಯ. ಶುಕ್ರವಾರ ಮುಗಿಯುತ್ತಿದ್ದಂತೆ ಮೊಬೈಲ್, ಲ್ಯಾಪ್‌ಟಾಪ್ ಎಲ್ಲವನ್ನೂ ನಿರ್ಜೀವಗೊಳಿಸಿ, ಭಾವಗಳಿಗೊಂದಿಷ್ಟು ಜೀವ ತುಂಬುವ ಬಯಕೆ ಅವನದ್ದು. ತನ್ನೂರಿನ ಹಳೆ ಮನೆಯ ಮರದ ಕಿಟಕಿಯ ಪಕ್ಕ ಶಿವರಾಮ ಕಾರಂತರ ಪುಸ್ತಕ ಹಿಡಿದು ಕೂತನೆಂದರೆ ಆತನ ಕಲ್ಪನೆಯ ಪರದೆಯಲ್ಲಿ ಓದುವ ಕಥೆಗಳೆಲ್ಲ ಸಿನಿಮಾದಂತೆ ಚಿತ್ರಸಹಿತ ಮೂಡತೊಡಗುತ್ತದೆ. ಆ ಅನುಭವ ಯಾವ ಪಿ.ವಿ.ಆರ್’ನಲ್ಲಿ ಕುಳಿತು ಸಿನಿಮಾ ನೋಡುವ ಅನುಭವಕ್ಕೂ ಕಡಿಮೆಯಿಲ್ಲವೆನಿಸುತ್ತದೆ ಅವನಿಗೆ. ಅದೆಷ್ಟೋ ವರ್ಷಗಳ ಹಿಂದೆ ಇಂದಿನ ವಿದ್ಯಮಾನಗಳನ್ನ ಕಲ್ಪಿಸಿ ದಾಖಲಿಸಿರುವ ಕಾರಂತರ ಕಾದಂಬರಿಗಳಿಗೆ ಮಾರುಹೋದವನಾತ. ನಮ್ಮ ಶಿಕ್ಷಣ ಪದ್ಧತಿ ಬದಲಾಗಬೇಕೆಂಬ ಆಶಯವನ್ನ ಆಗಲೇ ವ್ಯಕ್ತಪಡಿಸಿದವರು ಕಾರಂತರು. ಬದಲಾಗದೇ ಇದ್ದರೆ ಏನಾಗುತ್ತದೆ ಎಂಬ ಸ್ಪಷ್ಟ ಚಿತ್ರಣವನ್ನೂ ಕೊಟ್ಟವರವರು. ಅವರಂದಂತೆ ಇಂದಿನ ನಮ್ಮ ಬದುಕು ಸಾಗುತ್ತಿರುವುದನ್ನ ಕಾಣುವಾಗ ಅಬ್ಬಾ! ಅದೆಂತಹ ಜ್ಞಾನ ಅವರದ್ದು ಎನಿಸುತ್ತದೆ ಅವನಿಗೆ. ಹೀಗೆ ಓದುವ ಹವ್ಯಾಸ ಇರುವ ಅವನ ವಾರಾಂತ್ಯ ಎನ್ನುವುದು ಉಳಿದವರಿಗಿಂತ ವಿಭಿನ್ನ.
ಚಂದನ್’ಗೆ ವಾರಾಂತ್ಯ ಅಂದರೆ ನಿಸರ್ಗದ ಸನಿಹ ಸುಳಿವ ಸಲಿಗೆ ಇದ್ದಂತೆ. ಅವನ ಮನೆ ಇರುವುದು ಅಪ್ಪಟ ಹಸಿರಿನ ಸೊಗಡಿರುವ ಹಳ್ಳಿಗಾಡಿನ ಊರಿನಲ್ಲಿ. ಅಲ್ಲಿರುವವರಿಗೆಲ್ಲ ಆ ಊರಿನ ಕುರಿತಾದ ಸಮಸ್ಯೆಗಳ ದೂರಿನ ಪಟ್ಟಿಯೇ ಇದೆ. ವಿದ್ಯುತ್ ಇಲ್ಲ, ರಸ್ತೆ ಸರಿ ಇಲ್ಲ, ಅದಿಲ್ಲ, ಇದಿಲ್ಲ ಹೀಗೆ ಅನೇಕ ದೂರುಗಳು. ಆದರೆ ಸುವ್ಯವಸ್ತಿತ ಪಟ್ಟಣದಲ್ಲಿನ ಬದುಕನ್ನು ಅನುಭವಿಸಿರುವ ಚಂದನ್’ಗೆ ಮಾತ್ರ ತನ್ನ ಹಳ್ಳಿ ಹೀಗೆಯೇ ಇರಲಿ ಎಂಬ ಆಸೆ. ಅಕ್ವೇರಿಯಮ್’ನ ಮೀನಿನಂತೆ ದಿನವಿಡಿ ಎ.ಸಿ. ಕೋಣೆಯಲ್ಲಿ ಕುಳಿತು ನಡೆಸುವ ಚಡಪಡಿಕೆಯ ದಿನಚರಿಗಿಂತ ಸ್ವಚ್ಛಂದವಾಗಿ ತೋಟ, ಬಯಲುಗಳನ್ನು ಸುತ್ತಿಕೊಂಡು ನಡೆಸುವ ದಿನಚರಿ ಅತ್ಯಂತ ಮುದ ನೀಡುತ್ತದೆ ಅವನಿಗೆ. ತಾನು ಊರಿಗೆ ಹೋದಾಗೆಲ್ಲ “ನಿಂಗೆ ಇಲ್ಲಿ ಬಂದ್ರೆ ತುಂಬಾ ಬೇಜಾರು ಬರ್ತದಾ ಅಂತ, ಅಲ್ವಾ?” ಎಂದು ಕೇಳುವವರನ್ನು ನೋಡುವಾಗ ಒಳಗೊಳಗೇ ನಗುತ್ತಾನೆ. ಮಳೆ ಬರುವಾಗ ಮನೆ ಬಾಗಿಲುಗಳನ್ನೆಲ್ಲ ಮುಚ್ಚಿಕೊಂಡು ‘Feeling cool’ ಎಂದು ಫೇಸ್‌ಬುಕ್’ನಲ್ಲಿ ಸ್ಟೇಟಸ್ ಹಾಕುವುದಕ್ಕಿಂತ ಮಳೆಹನಿಯು ಮೃದುವಾಗಿಸಿದ ಮಣ್ಣಿನಲ್ಲಿ ಹೆಜ್ಜೆಯಿಟ್ಟು ಪಾದಗಳನ್ನು ರಂಗೇರಿಸುವುದೇ ಒಂದು ಚಂದ ಅನಿಸುತ್ತದೆ ಅವನಿಗೆ. ಮೈಮೇಲೆ ಹಾದುಹೋದಂತಾಗುವ ವಾಹನಗಳ ಗದ್ದಲಕ್ಕಿಂತ, ಮರದ ಮರೆಯಲ್ಲಿ ಅವಿತು ಕುಳಿತ ಪಕ್ಷಿಗಳಾಡುವ ಪಿಸುಮಾತುಗಳನ್ನು ಕದ್ದು ಕೇಳುವ ಚಟದಲ್ಲಿ ಅದೇನೋ ಆತ್ಮೀಯತೆ. ಇವೆಲ್ಲದಕ್ಕೂ ಚಂದನ್’ಗೆ ವಾರಾಂತ್ಯವೇ ವೇದಿಕೆ.
ಹಾಗೆಯೇ, ವಾರಾಂತ್ಯದ ಹಬ್ಬ ಆಚರಿಸಲು ಒಂದಷ್ಟು ಜನ ಗೆಳೆಯರು ಗುಂಪು ಕಟ್ಟಿಕೊಂಡು ಚಾರಣಕ್ಕೆ ಹೊರಡಲು ಅನುವಾಗಿದ್ದಾರೆ. ಇನ್ನೂ ಕೆಲವರು “ಸಿಕ್ಕೀತೇ ಮುಂದಿನ ದಾರಿ, ನನ್ನೆಲ್ಲ ಕಲ್ಪನೆ ಮೀರಿ…ಇನ್ನೊಂದೇ ವಿಸ್ಮಯ ತೋರಿ” ಎನ್ನುತ್ತಾ ಒಂದು ಅಜ್ಞಾತ ಬುಲೆಟ್ ಯಾನಕ್ಕೆ ತಯಾರಾಗಿದ್ದಾರೆ. ಇನ್ನೊಂದೆಡೆ ಎಂಜಿನಿಯರಿಂಗ್’ನ ಕಿರಿಕ್ ಪಾರ್ಟಿಗಳೆಲ್ಲ ಒಟ್ಟಾಗಿ ಹಳೆಯ ನೆನಪುಗಳನ್ನು ಕೂಡಿಟ್ಟ ಖಜಾನೆಯ ಬೀಗ ಒಡೆಯಲು ಸಜ್ಜಾಗುತ್ತಿದ್ದಾರೆ. ಗೆಳತಿಯರೊಂದಿಷ್ಡು ಜನ ‘ಬೆಸ್ಟಿ’ಯ ಮದುವೆಯ ಮೆಹೆಂದಿ ಸಂಭ್ರಮಕ್ಕೆ ಸಾಕ್ಷಿಯಾಗಲು ಸರ್ವಾಲಂಕೃತ ಭೂಷಿತೆಯರಾಗಿ ಹೊರಟಿದ್ದಾರೆ.
ಅದೆಷ್ಟೋ ಪಂಚದೈನಿಕ ಯೋಜನೆಗಳು ಅನುಷ್ಠಾನಕ್ಕೆ ಸಜ್ಜಾಗಿವೆ. ಸೋಮವಾರದಿಂದ ಶುಕ್ರವಾರದವರೆಗೆ ಕಂಪ್ಯೂಟರ್ ಭಾಷೆಯಲ್ಲಿ ಬರೆಯುವ ಮೋಡ್ಯುಲಾರ್ ಕಾದಂಬರಿಗಳಲ್ಲಿ ಬಿಟ್ಟುಹೋದ ಅರ್ಧವಿರಾಮ(ಸೆಮಿಕೋಲನ್)ಗಳ ಹುಡುಕಾಟದ ನಡುವೆಯೇ ಕಳೆದುಹೋಗುವ ವಾರದ ಬದುಕಿಗೆ, ನಾಲ್ಕು ದಿನದ ಮಟ್ಟಿಗೆ ನೆಮ್ಮದಿಯ ಪೂರ್ಣವಿರಾಮ ಬೀಳುವುದರಲ್ಲಿದೆ. ಹೊಟ್ಟೆಪಾಡಿಗಾಗಿ ನಡೆಯುವ ಕೀಬೋರ್ಡ್ ಹಾಗೂ ಬೆರಳುಗಳ ಯುದ್ಧಕ್ಕೆ ತಾತ್ಕಾಲಿಕ ಕದನ ವಿರಾಮ ಘೊಷಣೆಯಾಗಿ ‘ವಾರ್’ಅಂತ್ಯ ಆಗುವ ಸೂಚನೆಗಳು ಕಂಡುಬಂದಿವೆ.