ಅಂಕಣ

ರಾಜಕೀಯದ ಸುಳಿಯಲ್ಲಿ ಮತಯಂತ್ರ – ಅಪಾಯದಲ್ಲಿ ಪ್ರಜಾತಂತ್ರ

ರಾಜನೀತಿಯನ್ನು ಕುರಿತ ತನ್ನ ಕೃತಿಯಲ್ಲಿ  ಅರಿಸ್ಟಾಟಲ್ ಹೇಳುತ್ತಾನೆ, “ತೀವ್ರಗಾಮಿತ್ವ  ಸ್ಥಿರತೆಯಿದ್ದಾಗ ಮಾತ್ರ ಸಿಗುವ  ಭೋಗ (Radicalism is the luxury of stability). ಸರಾಗವಾಗಿ ನಡೆಯುತ್ತಿರುವ ಕಾನೂನನ್ನು  ಬದಲಾಯಿಸುವ ಧೈರ್ಯ ರಾಜಕೀಯ ಸ್ಥಿರತೆಯಿದ್ದಾಗ ಮಾತ್ರ  ಸಾಧ್ಯ. ಕಾನೂನುಗಳನ್ನು ಮನಸೋಯಿಚ್ಛೆ  ಬದಲಾಯಿಸುವ ಚಾಳಿ ಒಂದು ಪಿಡುಗು, ಬದಲಾವಣೆಯಿಂದ ಸಿಗುವ ಲಾಭ ಗಣನೀಯವಾಗಿಲ್ಲದಿದ್ದರೆ, ಕಾನೂನಿನಲ್ಲಿ ಮತ್ತು ಆಳುವವರಲ್ಲಿ ಇರುವ ಲೋಪಗಳನ್ನು ನಾವು ದಾರ್ಶನಿಕರ ರೀತಿ ಸಹಿಸಬೇಕು. ಒಬ್ಬ ಸಾಮಾನ್ಯ ನಾಗರೀಕ ತೀವ್ರಗಾಮಿ ಬದಲಾವಣೆಯಿಂದ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.” ವಿದ್ಯುನ್ಮಾನ ಮತಯಂತ್ರಗಳ ಪರ-ವಿರೋಧದ ಪ್ರಹಸನ ನೋಡಿದಾಗ, ಅರಿಸ್ಟಾಟಲ್’ನ ಮೇಲಿನ ಮಾತುಗಳು ನೆನಪಿಗೆ ಬರುತ್ತವೆ. ಶ್ರೀಸಾಮಾನ್ಯನ ಆಲೋಚನೆಗಳಿಗೆ, ಆಶಯಗಳಿಗೆ, ಕ್ಷೇಮಕ್ಕೆ ಎಳ್ಳಷ್ಟೂ ಬೆಲೆಕೊಡದೆ, ತೀವ್ರಗಾಮಿಗಳು ಮತ್ತು ಕೇಜ್ರಿವಾಲರಂಥ ಅರಾಜಕತಾವಾದಿಗಳು ಚುನಾವಣಾ ಆಯೋಗದ ಸಮಗ್ರತೆ, ನೈತಿಕತೆಯನ್ನೇ ಪ್ರಶ್ನಿಸುತ್ತಿರುವ ಈ ಸಮಯದಲ್ಲಿ ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆಯ ಕುರಿತು ಎದ್ದಿರುವ ಪ್ರಶ್ನೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಉತ್ತರಗಳನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚುವುದು  ಸಾಧ್ಯವೇ, ಅದಕ್ಕೆ ಬೇಕಾಗುವ ತಂತ್ರಜ್ಞಾನವೇನು, ವಿಶ್ವದ ಬೃಹತ್ ಪ್ರಜಾಪ್ರಭುತ್ವದಲ್ಲಿ ಇದು ಕಾರ್ಯಸಾಧ್ಯವೇ ಎಂಬ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅತಿಮುಖ್ಯ.

ಭಾರತಕ್ಕೆ ಸ್ವಾತಂತ್ರ್ಯ  ಬಂದ ಮೇಲೆ ೧೬ ಲೋಕಸಭಾ ಚುನಾವಣೆಗಳು ಘಟಿಸಿ ಹೋಗಿವೆ. ಭಾರತದ ಚುನಾವಣಾ ನೀತಿಗಳೂ ಕೂಡ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಬಂದಿವೆ. ರಾಜಕಾರಣಿಗಳು, ಅವರ ಚೇಲಾಗಳು, ಗೂಂಡಾಗಳು ಒಡ್ಡುವ ಅಡೆತಡೆಗಳನ್ನು ದಾಟುತ್ತ ಚುನಾವಣಾ ಆಯೋಗ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡು ಮುಕ್ತ ಮತ್ತು ವಿಶ್ವಾಸಾರ್ಹ ಚುನಾವಣೆಗಳನ್ನು ನಡೆಸಲು ತನ್ನ ಶಕ್ತಿ ಮೀರಿ ಶ್ರಮಿಸಿದೆ, ಶ್ರಮಿಸುತ್ತಿದೆ. ೧೯೯೦ರ ತನಕದ ಎಲ್ಲ ಚುನಾವಣೆಗಳಲ್ಲಿ ಮತಚೀಟಿಗಳು ಉಪಯೋಗಿಸಲ್ಪಡುತ್ತಿದ್ದವು. ೧೯೯೦ರಲ್ಲಿ  ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟ ತಜ್ಞರ ಸಮಿತಿಯ ವರದಿಯ ಶಿಫಾರಸಿನ ಮೇರೆಗೆ  ನಂತರದ  ಚುನಾವಣೆಗಳಲ್ಲಿ ಹಂತ ಹಂತವಾಗಿ ವಿದ್ಯುನ್ಮಾನ ಮತಯಂತ್ರಗಳು ಬಳಕೆಗೆ ಬಂದವು. ತಂತ್ರಜ್ಞಾನದ ಸಹಾಯದಿಂದ ಚುನಾವಣಾ ಅಕ್ರಮಗಳನ್ನು ಹತ್ತಿಕ್ಕುವ ಆಯೋಗದ ಕನಸು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿರುವುದು  ಸುಳ್ಳಲ್ಲ.

ವಿದ್ಯುನ್ಮಾನ ಮತಯಂತ್ರದ ಇತಿಹಾಸ  

೧೯೮೮ರ ಡಿಸೆಂಬರ್ ತಿಂಗಳಿನಲ್ಲಿ ಭಾರತದ ಸಂಸತ್ತು ೧೯೫೧ರ ಜನಪ್ರತಿನಿಧಿಗಳ ಕಾಯಿದೆಯಲ್ಲಿ ೬೧(ಎ) ಎಂಬ ಹೊಸ ವಿಧಿಯನ್ನು ಅಂಗೀಕರಿಸಿ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಗೆ ಹಸಿರು ನಿಶಾನೆ ತೋರಿಸಿತು. ೧೯೯೦ರಲ್ಲಿ ಕೇಂದ್ರ ಸರ್ಕಾರ ಸಮಸ್ತ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ಚುನಾವಣಾ ಸುಧಾರಣಾ ಸಮಿತಿಯನ್ನು ನೇಮಿಸಿತು. ಆ ಸುಧಾರಣಾ ಸಮಿತಿ, ಪ್ರೊ. ಎಸ್. ಸಂಪತ್,  ಪ್ರೊ. ಪಿ.ವಿ. ಇಂದಿರೇಸನ್ ಮತ್ತು ಡಾ. ಸಿ. ರಾವ್ ಕಸರಬದ ಅವರುಗಳನ್ನೊಳಗೊಂಡ ತಜ್ಞರ ಸಮಿತಿಯನ್ನು ವಿದ್ಯುನ್ಮಾನ ಮತಯಂತ್ರಗಳ ಸಾಧಕ-ಬಾಧಕಗಳ ಪರಿಶೀಲನೆಗಾಗಿ ರಚಿಸಿತು. ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ, ಸುಧಾರಣಾ ಸಮಿತಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಗೆ ಒಪ್ಪಿಗೆ ನೀಡಿತು. ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ (BEL) ಮತ್ತು ಭಾರತೀಯ ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ (ECIL) ಸಂಸ್ಥೆಗಳಿಗೆ ಮತಯಂತ್ರಗಳ ಉತ್ಪಾದನೆಗೆ ಆದೇಶ ನೀಡಲಾಯಿತು. ಅಂದಿನಿಂದ ಭಾರತದ ಮತಯಂತ್ರಗಳು ಈ ಎರಡೂ ಸಂಸ್ಥೆಗಳಲ್ಲಿ  ಉತ್ಪಾದಿಸಲ್ಪಡುತ್ತಿವೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ ಮತ್ತಷ್ಟು ಸುಧಾರಣೆ ತರುವುದಕ್ಕಾಗಿ ೨೦೦೬ರಲ್ಲಿ ಐ.ಐ.ಟಿ ದೆಹಲಿಯ ಪ್ರೊ. ಇಂದಿರೇಸನ್ , ಪ್ರೊ. ಡಿ.ಟಿ. ಸಹಾನಿ, ಮತ್ತು ಪ್ರೊ. ಎ.ಕೆ. ಅಗರ್ವಾಲ್  ಅವರುಗಳನ್ನೊಳಗೊಂಡ ಎರಡನೇ ತಜ್ಞರ ಸಮಿತಿಯನ್ನು ರಚಿಸಲಾಯಿತು. ಅವರ ಶಿಫಾರಸಿನ ಮೇರೆಗೆ ಮೊದಲನೇ ಮಾದರಿಯ ಮತಯಂತ್ರಗಳಲ್ಲಿ ಮಹತ್ತರ ಸುಧಾರಣೆಗಳನ್ನು ತರಲಾಯಿತು. ೨೦೦೪ರ ಮತ್ತು ನಂತರದ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ವಿದ್ಯುನ್ಮಾನ ಮತಯಂತ್ರಗಳನ್ನೇ ಬಳಸಲಾಗಿದೆ, ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಬರೋಬ್ಬರಿ ೩೨,೬೦,೦೦೦ ಮತಯಂತ್ರಗಳನ್ನು ಬಳಸಿತ್ತು.

ವಿದ್ಯುನ್ಮಾನ ಮತಯಂತ್ರ ತಂತ್ರಜ್ಞಾನ

ಭಾರತದ ಮತಯಂತ್ರಗಳಲ್ಲಿ ಎರಡು ಘಟಕಗಳಿವೆ. ಒಂದು ನಿಯಂತ್ರಣ ಘಟಕ  (Control unit) ಮತ್ತೊಂದು ಬ್ಯಾಲಟ್ ಘಟಕ (Ballot unit), ಐದು ಮೀಟರ್ ಉದ್ದದ ಕೇಬಲ್ ಎರಡೂ ಘಟಕಗಳ ಮಧ್ಯೆ  ಸಂಪರ್ಕ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ. ನಿಯಂತ್ರಣ ಘಟಕದಲ್ಲಿರುವ ಸೂಕ್ಷ್ಮ ನಿಯಂತ್ರಕ (Micro-controller) ಯಂತ್ರದ ಮೆದುಳಿನ ರೀತಿ ಕಾರ್ಯ ವಹಿಸುತ್ತದೆ, ಅದರಲ್ಲೇ ಯಂತ್ರದ ತಂತ್ರಾಂಶವೂ (Software) ಅಡಗಿದೆ. ೨೦೦೬ರಲ್ಲಿ ಉತ್ಪಾದನೆಯಾದ ಮತಯಂತ್ರಗಳು ೮-ಬಿಟ್ ಸಿಲಿಕಾನ್ ಚಿಪ್ನಿಂದ(Silicon chip) ಸೂಕ್ಷ್ಮ ನಿಯಂತ್ರಕವನ್ನೊಳಗೊಂಡಿವೆ. ಮತಗಳನ್ನು ಶೇಖರಿಸುವುದಕ್ಕಾಗಿ ಯಂತ್ರಗಳಲ್ಲಿ EEPROM ಎಂದು ಕರೆಯಲ್ಪಡುವ ಸೂಕ್ಷ್ಮ ಸಾಧನಗಳನ್ನು ಬಳಸಲಾಗುತ್ತದೆ. BEL ಮತ್ತು  ECILನ ಇಂಜಿನಿಯರಗಳು ಯಂತ್ರಕ್ಕ್ಕೆ ಬೇಕಾದ ತಂತ್ರಾಂಶವನ್ನ ಅಭಿವೃದ್ಧಿ ಪಡಿಸಿದ ನಂತರ, ಆ ತಂತ್ರಾಂಶವನ್ನ ಯಾಂತ್ರಿಕ ಭಾಷೆಗೆ ತರ್ಜುಮೆ ಮಾಡಿ ಹೊರದೇಶದ ಉತ್ಪಾದಕರಿಗೆ ಕಳುಹಿಸಲಾಗುತ್ತದೆ. ಭಾರತದಲ್ಲಿ ಸಿಲಿಕಾನ್ ಚಿಪ್ ಉತ್ಪಾದಿಸುವ ತಂತ್ರಜ್ಞಾನ ಇನ್ನೂ ಪ್ರೌಢಾವಸ್ಥೆ ಮುಟ್ಟದ ಕಾರಣ ನಿಯಂತ್ರಕವನ್ನು ಜಪಾನ್ ದೇಶದಲ್ಲಿ  ಉತ್ಪಾದಿಸಲಾಗುತ್ತದೆ. ಜಪಾನಿನಲ್ಲಿ ತಂತ್ರಾಂಶವನ್ನು ನಿಯಂತ್ರಕಕ್ಕೆ ಎರಕ ಹೊಯ್ದ ನಂತರ ಭಾರತದಲ್ಲಿ ನಿಯಂತ್ರಕವನ್ನು ಸರ್ಕ್ಯೂಟಿಗೆ ಬೆಸೆದು, ಗುಣಮಟ್ಟ ಮತ್ತು ರಕ್ಷಣಾ ವಿಧಿಗಳನ್ನು ಪರೀಕ್ಷಿಸಿ ಚುನಾವಣಾ ಆಯೋಗದ ಸುಪರ್ದಿಗೆ ಒಪ್ಪಿಸಲಾಗುತ್ತದೆ. ಬ್ಯಾಲಟ್ ಘಟಕದಲ್ಲಿ LED ಬಲ್ಬುಗಳ ಜೊತೆ, ಮತ ಹಾಕಲು ಗುಂಡಿಗಳು ಇರುತ್ತವೆ. ಮತದಾರ ಬ್ಯಾಲಟ್ ಘಟಕದ ಮೇಲಿರುವ ತನ್ನ ನೆಚ್ಚಿನ ಅಭ್ಯರ್ಥಿಯ ಹೆಸರಿನ,ಗುರುತಿನ ಮುಂದಿನ ಗುಂಡಿಯನ್ನು ಒತ್ತಿದ ತಕ್ಷಣ, LED ಬಲ್ಬು ಹತ್ತುವುದರ  ಜೊತೆಗೆ ನಿಯಂತ್ರಣ ಘಟಕದಲ್ಲಿ ಮತ ಶೇಖರಣೆಯಾಗುತ್ತದೆ. ಪ್ರತಿಯೊಂದು ಮತಯಂತ್ರ ಗರಿಷ್ಟ ೩೮೪೦ ಮತಗಳನ್ನು ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಪ್ರತಿಯೊಂದು ಬ್ಯಾಲಟ್ ಘಟಕದಲ್ಲಿ ೧೬ ಅಭ್ಯರ್ಥಿಗಳ  ಹೆಸರು ಮತ್ತು ಗುರುತುಗಳಿಗೆ ಅವಕಾಶವಿದೆ. ಹೆಚ್ಚಿನ ಅಭ್ಯರ್ಥಿಗಳಿದ್ದರೆ ಬ್ಯಾಲಟ್ ಘಟಕಗಳನ್ನು ಸಮಾನಾಂತರವಾಗಿ ಜೋಡಿಸಿ ಒಟ್ಟಾರೆಯಾಗಿ ೬೪ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬಹುದು. ಮತಯಂತ್ರ  ೬ ವೋಲ್ಟ್  ಕ್ಷಾರೀಯ (Alkaline) ಬ್ಯಾಟರಿಯಿಂದ ಶಕ್ತಿ ಪಡೆಯುತ್ತದೆಯಾದ್ದರಿಂದ ವಿದ್ಯುತ್ ಸರಬರಾಜು ಇಲ್ಲದ ಪ್ರದೇಶಗಳಲ್ಲಿಯೂ ಕೂಡ ಅಡಚಣೆ ಇಲ್ಲದೆ ಚುನಾವಣೆ ನಡೆಸಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಭಾರತದ ಮತಯಂತ್ರ ಒಂದು ಸರಳ ಗಣಕಯಂತ್ರ  (Calculator).

ಮತಯಂತ್ರದ ತಿರುಚುವಿಕೆಯ ಸಾಧ್ಯಾಸಾಧ್ಯತೆಗಳು

ಕೇಂದ್ರ ಚುನಾವಣಾ ಆಯೋಗ ಮತಯಂತ್ರಗಳನ್ನು ಚಲಾವಣೆಗೆ ತಂದ ನಂತರ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಒಂದಲ್ಲಾ ಒಂದು ಬಾರಿ  ಪ್ರಶ್ನಿಸಿವೆ. ಮತಯಂತ್ರಗಳ ಉತ್ಪಾದನೆಯ ಕುರಿತ ಚುನಾವಣಾ ಆಯೋಗದ ಗೌಪ್ಯತೆ ಪ್ರಜಾತಂತ್ರಕ್ಕೆ ಶೋಭೆ ತರುವುದಿಲ್ಲ ಎಂದು ಬಹಳಷ್ಟು ಸರ್ಕಾರೇತರ ಕಾರ್ಯಕರ್ತರು, ಹೋರಾಟಗಾರರು ಹೇಳುತ್ತಲೇ ಇರುತ್ತಾರೆ. ೨೦೧೦ರಲ್ಲಿ ಹೈದೆರಾಬಾದ್ ಮೂಲದ ಟೆಕ್ಕಿ ಹರಿಪ್ರಸಾದ್ ಅನಾಮಧೇಯ ಮೂಲದಿಂದ ಒಂದು ಮತಯಂತ್ರವನ್ನು ಪಡೆದು, ಅಮೆರಿಕಾದ ಮಿಚಿಗನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಭದ್ರತೆ  ಪ್ರಾಧ್ಯಾಪಕರಾದ ಡಾ. Alex Halderman ಮತ್ತು ಇತರರ ಜೊತೆ ಸೇರಿ  ಪರಿಶೀಲನೆ ನಡೆಸಿ ಸಂಶೋಧನಾ ಲೇಖನವನ್ನು ಪ್ರಕಟಿಸಿದ್ದರು. ಅಕ್ರಮವಾಗಿ ಮತಯಂತ್ರವನ್ನು ಪಡೆದ ಹರಿಪ್ರಸಾದರ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಿತಾದರೂ ಅಂತಿಮವಾಗಿ ನ್ಯಾಯಾಲಯ ಹರಿಪ್ರಸಾದರನ್ನು ಬಿಡುಗಡೆ ಮಾಡಿ, ಅವರ ಸಂಶೋಧನೆಯನ್ನು ಪರಿಗಣಿಸಿ ಮತಯಂತ್ರಗಳ ತಿರುಚುವಿಕೆ ಸಾಧ್ಯವೇ ಎಂಬುದನ್ನು ಅಧ್ಯಯಿಸಲು ಚುನಾವಣಾ ಆಯೋಗಕ್ಕೆ ತಾಕೀತು ಮಾಡಿತು. ಪ್ರಸ್ತುತ ಮತಯಂತ್ರದ ತಂತ್ರಜ್ಞಾನವನ್ನು ಬಹಿರಂಗವಾಗಿ ಪ್ರಶ್ನಿಸಿದ ಹರಿಪ್ರಸಾದರ ಸಂಶೋಧನೆಯನ್ನು ಕೂಲಂಕುಷವಾಗಿ ಪರೀಕ್ಷಿಸುವುದು ಅವಶ್ಯಕ.

ಹರಿಪ್ರಸಾದರ ಸಂಶೋಧನಾ ಲೇಖನದಲ್ಲಿ ಮತಯಂತ್ರದ ಮತ್ತು ಚುನಾವಣಾ ಆಯೋಗದ  ಬಗೆಗಿನ ಮುಖ್ಯ ಆರೋಪಗಳು –

(೧) ೧೯೯೦ರ ಮತ್ತು ೨೦೦೬ರ ತಜ್ಞರ ಸಮಿತಿಗಳು ಮೂಲ ತಂತ್ರಾಂಶವನ್ನು ನೋಡದೆ ಕೇವಲ  BEL ಮತ್ತು  ECILನ ಇಂಜಿನಿಯರುಗಳು  ಕೊಟ್ಟ ಪ್ರಾತ್ಯಕ್ಷಿಕೆಯ ಆಧಾರದ ಮೇಲೆಯೇ ಮತಯಂತ್ರಗಳ ಸಾಧಕ – ಬಾಧಕಗಳ ನಿರ್ಧಾರ ತಳೆದಿದ್ದಾರೆ ಮತ್ತು ಸಮಿತಿಯ ಸದಸ್ಯರಿಗೆ ಕಂಪ್ಯೂಟರ್ ಭದ್ರತೆಯ ಓನಾಮವೂ ಗೊತ್ತಿಲ್ಲ. ಯಾರಾದರೂ ಒಬ್ಬ ಭ್ರಷ್ಟ ಇಂಜಿನಿಯರ್ ಮೂಲ ತಂತ್ರಾಂಶವನ್ನು ತೆಗೆದು ದೋಷಪೂರಿತ ತಂತ್ರಾಂಶವನ್ನು ಹಾಕುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮೂಲ ತಂತ್ರಾಂಶವನ್ನು ನೋಡದೆ ಸಮಿತಿ ಮತ್ತು ಚುನಾವಣಾ ಆಯೋಗ ಮತಯಂತ್ರ ದೋಷರಹಿತ ಎಂದು ಘೋಷಿಸಿರುವುದು ತಪ್ಪು.

(೨) ಮತಯಂತ್ರದ ಸೂಕ್ಷ್ಮ ನಿಯಂತ್ರಕ ವಿದೇಶದಲ್ಲಿ ತಯಾರಾಗುವುದರಿಂದ ಸಾಗಣೆಯಲ್ಲಿ ವೈರಿ ದೇಶಗಳ ಬೇಹುಗಾರಿಕಾ ಸಂಸ್ಥೆಗಳು ದೋಷಪೂರಿತ ಸೂಕ್ಷ್ಮನಿಯಂತ್ರಕವನ್ನು ಅಳವಡಿಸುವ ಸಾಧ್ಯತೆ.

(೩) ನಿಯಂತ್ರಕ ಘಟಕದಲ್ಲಿರುವ ಸರ್ಕ್ಯೂಟ್ ಬಹಳ ಸರಳವಾದದ್ದು ಯಾರಾದರೂ ಅದನ್ನು ಬದಲಾಯಿಸಿ ದೋಷಪೂರಿತ ಸರ್ಕ್ಯೂಟನ್ನು ಅಳವಡಿಸಬಹುದು. ತಳಮಟ್ಟದ ವಿದ್ಯುನ್ಮಾನ ಜ್ಞಾನವಿರುವ ಯಾರೇ ಆದರೂ ಸರ್ಕ್ಯೂಟನ್ನು ಬದಲಿಸಬಹುದು.

(೪) ಚುನಾವಣೆ  ಮುಗಿದ ನಂತರ, ಮತ ಎಣಿಕೆಯ ಮೊದಲು, ಮತಯಂತ್ರಗಳ ನಿಯಂತ್ರಣ ಘಟಕದಲ್ಲಿರುವ ಮತ ಶೇಖರಣಾ ಸಾಧನದಲ್ಲಿರುವ (EEPROM) ಮತಗಳನ್ನು ಅಳಿಸಿ ಹಾಕಿ ಹೊಸ ಮತಗಳ ಶೇಖರಣೆ  ಮಾಡಬಹುದು.

(೫) ಮತಶೇಖರಣೆಯಲ್ಲಿ ಯಾವುದೇ ರೀತಿಯ ಗೂಢಲಿಪೀಕರಣವನ್ನು (encryption) ಉಪಯೋಗಿಸಿಲ್ಲ.

ಮೇಲಿನ ಆರೋಪಗಳನ್ನು ಸಾಬೀತು ಪಡಿಸುವುದಕ್ಕೋಸ್ಕರ ಹರಿಪ್ರಸಾದ್ ಮತ್ತು ಸಂಗಡಿಗರು ವಿವಿಧ ಸಾಧನಗಳನ್ನು ಸಿದ್ಧಪಡಿಸಿ ಮತಯಂತ್ರದಿಂದ ಬರುವ ಫಲಿತಾಂಶವನ್ನು ಏರುಪೇರು ಮಾಡಿ ತೋರಿಸಿದ್ದಾರೆ. ಮೊದಲನೆಯದಾಗಿ ಮತಯಂತ್ರದ ನಿಯಂತ್ರಕದಲ್ಲಿ ಬ್ಲೂಟೂತ್ ಪಡೆಕವೊಂದನ್ನು (receiver) ಅಳವಡಿಸಿ ನಂತರ ತಮ್ಮ ಮೊಬೈಲ್ ಫೋನಿನಿಂದ ಯಂತ್ರದ ಉತ್ಪತ್ತಿಯನ್ನ ನಿಯಂತ್ರಿಸಿದರು. ಮತಶೇಖರಿಸುವ ಸೂಕ್ಷ್ಮಸಾಧನ EEPROMಗೆ  ಒಂದು ಲೇಖನಿಯಷ್ಟು ಸಣ್ಣದಾದ ಸಾಧನದಿಂದ ಅದರಲ್ಲಿರುವ ಮತಗಳನ್ನು  ಅಳಿಸಿ ಹೊಸ ಮತಗಳನ್ನು ತುಂಬಿ ಫಲಿತಾಂಶ ಏರುಪೇರು ಮಾಡಲು ಸಾಧ್ಯ ಎಂದು ಸಾಬೀತು ಮಾಡಿದರು. ಇಂದಿನ ತನಕ ಹರಿಪ್ರಸಾದರ ಸಂಶೋಧನೆಯೊಂದೇ ಭಾರತೀಯ ಮತಯಂತ್ರಗಳ ದೋಷಗಳ ಕುರಿತ ವಿಸ್ತೃತ ಅಧ್ಯಯನ.

ಹಾಗಾದರೆ ಮತಯಂತ್ರದ ತಿರುಚುವಿಕೆ ಸಾಧ್ಯವೇ?

ಎಲ್ಲಾ ಆರೋಪಗಳು ಮೇಲ್ನೋಟಕ್ಕೆ  ಸಾಧು ಎನಿಸಿದರೂ, ಹರಿಪ್ರಸಾದರ ಎಲ್ಲಾ ಪ್ರಯೋಗಗಳು ಯಶಸ್ಸು ಪಡೆಯಬೇಕಾದರೆ, ಚುನಾವಣಾ ಅಕ್ರಮ ನಡೆಸುವವರಿಗೆ ಮತಯಂತ್ರದ ಬಳಿ ಹೋಗುವ ಮತ್ತು ಅದನ್ನು ತೆರೆದು ತಮ್ಮ ಇಚ್ಛೆ ಬಂದಂತೆ ತಿರುಚುವ ಅವಕಾಶ ಅಥವಾ ಅಧಿಕಾರ ಇರಬೇಕು. ಹರಿಪ್ರಸಾದರ ಎಲ್ಲಾ ಆರೋಪಗಳಿಗೆ ಕೇಂದ್ರ ಚುನಾವಣಾ ಆಯೋಗ ಸಮಂಜಸ ಉತ್ತರಗಳನ್ನು ೨೦೧೦ರಲ್ಲೇ ಕೊಟ್ಟಿತ್ತು. ಮೊದಲನೆಯದಾಗಿ, ತಜ್ಞರ ಸಮಿತಿಯಲ್ಲಿದ್ದದ್ದು ಯಾರೋ ಅನಕ್ಷರಸ್ಥರಲ್ಲ, ದೇಶದ ಅತ್ಯುನ್ನತ ಸಂಸ್ಥೆಗಳಲ್ಲಿ ಸಂಶೋಧಕರಾಗಿದ್ದವರು. ಪ್ರೊ. ಎಸ್. ಸಂಪತ್ ಅಮೆರಿಕಾದ Stanford ವಿಶ್ವವಿದ್ಯಾಲದ ಪದವೀಧರ, ಕೇಂದ್ರ ರಕ್ಷಣಾ ಮತ್ತು  ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿದ್ದವರು, ಪದ್ಮಭೂಷಣ ಪ್ರೊ. ಇಂದಿರೇಸನ್  ಇಂಗ್ಲೆಂಡಿನ Birmingham ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದವರು, ಡಾ. ರಾವ್. ಕಸರಬದ ತ್ರಿವೆಂಡ್ರಮ್ಮಿನ ವಿದ್ಯುನ್ಮಾನ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿದ್ದವರು. ಮೂವರೂ ವಿದ್ಯುನ್ಮಾನ ಕ್ಷೇತ್ರದಲ್ಲಿ ಪರಿಣಿತರು ಎಂಬುದರಲ್ಲಿ ಎರಡು ಮಾತಿಲ್ಲ. ಸರಿಯಾದ ಮಾಹಿತಿಯಿಲ್ಲದೆ ವಿಜ್ಞಾನಿಗಳ ಅರ್ಹತೆಯನ್ನು, ಜ್ಞಾನವನ್ನು ಪ್ರಶ್ನಿಸುವುದು ಬಾಲಿಶ. BEL ಮತ್ತು  ECILನ ಇಂಜಿನಿಯರುಗಳು ಮತಯಂತ್ರದ ತಂತ್ರಾಂಶವನ್ನ ಬರೆದ ನಂತರ ಅದನ್ನು ಯಾಂತ್ರಿಕ ಭಾಷೆಗೆ ತರ್ಜುಮೆ ಮಾಡಿ ನಂತರವೇ ಅದನ್ನು ವಿದೇಶಿ ಉತ್ಪಾದಕರಿಗೆ ಕಳಿಸುವುದು. ಪ್ರತಿಲೋಮ (reverse) ಇಂಜಿನಿಯರಿಂಗಿನಿಂದ ಯಂತ್ರ  ಭಾಷೆಯಲ್ಲಿರುವ ತಂತ್ರಾಂಶದಿಂದ ಮೂಲ ತಂತ್ರಾಂಶವನ್ನು ಪಡೆಯುವುದು ಅಸಾಧ್ಯ. ಮೂಲತಂತ್ರಾಂಶದ ಅರಿವಿಲ್ಲದೆ ಸೂಕ್ಷ್ಮ ನಿಯಂತ್ರಕವನ್ನು ಮರು-ಪ್ರೋಗ್ರಾಮ್ ಮಾಡುವುದೂ ಅಸಾಧ್ಯ. ಮತಯಂತ್ರಗಳಲ್ಲಿ ಬಳಸುವ ಸಿಲಿಕಾನ್ ಚಕ್ಕೆಗಳನ್ನು ಒಂದು ಬಾರಿ ಮಾತ್ರ ಪ್ರೋಗ್ರಾಮ್ ಮಾಡಲು ಸಾಧ್ಯ  (One Time Programmable). ಮತಯಂತ್ರದಲ್ಲಿ ಉಪಯೋಗಿಸುವುದು ಮಾಸ್ಕ್ಡ್  ಸಿಲಿಕಾನ್ ಚಿಪ್  (masked Silicon chip), ಅದರಿಂದ ತಂತ್ರಾಂಶವನ್ನು ಪ್ರತಿಲೋಮಿಸಲಾಗುವುದಿಲ್ಲ. ವಿದೇಶದಿಂದ ನಿಯಂತ್ರಕವನ್ನು ತರುವಾಗ ವಿವಿಧ ಹಂತದ ಭದ್ರತೆ ಮತ್ತು ಪರಿಶೀಲನೆ ನಡೆಸಲಾಗುತ್ತದೆ. ಇವೆಲ್ಲದರ ಜೊತೆಗೆ ೨೦೦೬ರ ನಂತರ ಉತ್ಪಾದನೆಯಾದ ಎಲ್ಲ ಮತಯಂತ್ರಗಳಲ್ಲಿ ಸಮಯದ ಮುದ್ರೆ ಬೀಳುವ ಸೌಲಭ್ಯ ಕೂಡ ಅಡಕವಾಗಿದೆ. ಒಂದು ವೇಳೆ ಯಾರಾದರೂ ಅಕ್ರಮ ಮತದಾನ ಮಾಡಿದರೆ  ಅದರ ದಿನಾಂಕ ಮತ್ತು ಸಮಯ ಕೂಡಾ ನಮೂದಿಸಲ್ಪಡುತ್ತದೆ. ಭವಿಷ್ಯದಲ್ಲಿ ಗೂಢಲಿಪೀಕರಣವನ್ನೂ ಅಳವಡಿಸುವ ಯೋಜನೆಯಿದೆ. ಇದರಿಂದ ಚುನಾವಣಾ ಅಕ್ರಮಗಳು ನಡೆಯುವ ಸಾಧ್ಯತೆಗಳು ಬಹಳ ಕಡಿಮೆ.

ಇವೆಲ್ಲಾ ಮತಯಂತ್ರದ ತಂತ್ರಜ್ಞಾನಕ್ಕೆ ಸಂಬಂಧ ಪಟ್ಟ ಭದ್ರತೆಯಾದರೆ, ಚುನಾವಣಾ ಸಮಯದಲ್ಲಿ ಆಯೋಗ ಆಡಳಿತಾತ್ಮಕ ಮತ್ತು ನಡಾವಳಿಗಳಿಗೆ ಸಂಬಂಧಪಟ್ಟ ಭದ್ರತೆಯನ್ನೂ ಬಹಳ ಗಂಭೀರವಾಗಿ  ಪರಿಗಣಿಸುತ್ತದೆ.ಪ್ರತಿ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಉತ್ಪಾದಕರ ಕಡೆಯ ತಂತ್ರಜ್ಞರಿಂದ ಮತಯಂತ್ರಗಳ ಮೊದಲ ಹಂತದ ತಪಾಸಣೆಯಾಗುತ್ತದೆ (first level checking, FLC), ಈ ಸಮಯದಲ್ಲಿ ಕಂಡ ದೋಷಪೂರಿತ ಮತಯಂತ್ರಗಳನ್ನು ಚುನಾವಣೆಯಲ್ಲಿ ಉಪಯೋಗಿಸುವುದಿಲ್ಲ. ಪ್ರಥಮ ಹಂತದ ತಪಾಸಣೆಯ ನಂತರ, ಪ್ರಥಮ ಯಾದೃಚ್ಛೀಕರಣ (first randomization) ಕೈಗೊಳ್ಳಲಾಗುತ್ತದೆ, ಇದರಲ್ಲಿ ಮತಯಂತ್ರಗಳನ್ನು ಯಾದೃಚ್ಛಿಕವಾಗಿ (random) ಶಾಸನ ಕ್ಷೇತ್ರಗಳಿಗೆ ಹಂಚಲಾಗುತ್ತದೆ. ಇದನ್ನು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ನಡೆಸಲಾಗುತ್ತದೆ. ಮೊದಲ ಯಾದೃಚ್ಛೀಕರಣದ ನಂತರ ಎರಡನೆಯ ಯಾದೃಚ್ಛೀಕರಣ ನಡೆಸಲಾಗುತ್ತದೆ, ಇದರಲ್ಲಿ ಮತಯಂತ್ರಗಳನ್ನು ಕ್ಷೇತ್ರದ ಮತಕಟ್ಟೆಗಳಿಗೆ ಹಂಚಲಾಗುತ್ತದೆ. ಇದನ್ನೂ ವಿವಿಧ ಪಕ್ಷಗಳ ಅಭ್ಯರ್ಥಿಗಳ ಸಮ್ಮತಿಯ ಸಹಿಯ  ನಂತರವೇ ಅಂಗೀಕರಿಸಲಾಗುತ್ತದೆ. ನಂತರ ಚುನಾವಣೆಗೆ ಕೆಲವೇ ದಿನಗಳಿರುವಾಗ BEL ಎಂಜಿನಿಯರುಗಳ  ಸಹಾಯದಿಂದ ಮತಯಂತ್ರಗಳ ಸಿದ್ಧತೆ ಮಾಡಲಾಗುತ್ತದೆ. ಸಿದ್ಧತಾ ಕೊಠಡಿಯಲ್ಲಿ ಯಾವುದೇ ರೀತಿಯ ವಿದ್ಯುನ್ಮಾನ  ಯಂತ್ರಗಳನ್ನು ಒಯ್ಯಲು ಯಾರಿಗೂ ಅವಕಾಶ ಕೊಡುವುದಿಲ್ಲ. ಬ್ಯಾಲಟ್ ಘಟಕದ ಮುಂಭಾಗ ತೆರೆದು ಅಭ್ಯರ್ಥಿಗಳಿಗೆ  ತೋರಿಸಲಾಗುತ್ತದೆ. ಚುನಾವಣೆಗೂ ಮುನ್ನ ಯಾದೃಚ್ಛಿಕವಾಗಿ ಮತಯಂತ್ರಗಳನ್ನು ಆರಿಸಿ ಅಣಕು ಮತದಾನವನ್ನು ಅಭ್ಯರ್ಥಿಗಳ ಮುಂದೆಯೇ ಮಾಡಲಾಗುತ್ತದೆ. ಅಭ್ಯರ್ಥಿಗಳೇ ತಮ್ಮ ಮನಸಿಗೆ ಬಂದ ಮತಯಂತ್ರವನ್ನು ಆರಿಸಿ ಮತದಾನವನ್ನು ಮಾಡಲೂ ಆಯೋಗ ಅವಕಾಶ ನೀಡುತ್ತದೆ.  ೧೦ ಮತಯಂತ್ರಗಳನ್ನು ಆರಿಸಿ ಕನಿಷ್ಠ ೧೦೦೦ ಮತಗಳನ್ನು ಹಾಕಿ ಮತಯಂತ್ರಗಳ ವಿಶ್ವಾಸಾರ್ಹತೆಯನ್ನ ಅಭ್ಯರ್ಥಿಗಳಿಗೆ ಮನದಟ್ಟು ಮಾಡಿ  ಕೊಡಲಾಗುತ್ತದೆ.ಅಣಕು ಮತದಾನದ ಫಲಿತಾಂಶವನ್ನು ಮುದ್ರಿಸಿ ಅಭ್ಯರ್ಥಿಗಳಿಗೆ  ಕೊಟ್ಟು ಅವರ ಸಹಿ ಪಡೆಯಲಾಗುತ್ತದೆ. ಮತ್ತೆ ಚುನಾವಣಾ ದಿನದಂದು ಮತದಾನ ಶುರುವಾಗುವ ಒಂದು ತಾಸಿನ ಮೊದಲು ಮತ್ತೊಂದು ಅಣಕು ಮತದಾನ ಮಾಡಿ ಕನಿಷ್ಠ ೧೦೦ ಮತಗಳನ್ನು ಹಾಕಿ ಅದನ್ನು ಅಭ್ಯರ್ಥಿಗಳಿಗೆ ತೋರಿಸಿ, ಅವರ ಸಮ್ಮತಿ ಪಡೆದು ಮತಯಂತ್ರಕ್ಕೆ ಮುದ್ರೆ ಹಾಕಲಾಗುತ್ತದೆ, ಅವಕಾಶವಿದ್ದಲ್ಲಿ ಇದರ ವಿಡಿಯೋ ಚಿತ್ರೀಕರಣವನ್ನೂ ಮಾಡಲಾಗುತ್ತದೆ. ಮತದಾನದ ನಂತರ ಮುದ್ರೆಹಾಕಲ್ಪಟ್ಟ ಮತಯಂತ್ರಗಳನ್ನು ಬಿಗಿಭದ್ರತೆಯಲ್ಲಿಟ್ಟು ಬೀಗ ಹಾಕಲಾಗುತ್ತದೆ. ಚುನಾವಣೆಯ ನಂತರ ಮತಯಂತ್ರಗಳನ್ನು ಶೇಖರಿಸಿಟ್ಟ ಭದ್ರ ಕೊಠಡಿಯ ಮೇಲೆ ಅಭ್ಯರ್ಥಿಗಳ ಹಿಂಬಾಲಕರೂ ಕೂಡ ಒಂದು ಕಣ್ಣಿಡಬಹುದು. ಮತ ಎಣಿಕೆಯ ದಿನ ಮುದ್ರೆ ವಿರೂಪಗೊಳ್ಳದೆ ಇರುವುದನ್ನು ಖಾತ್ರಿಪಡಿಸಿಕೊಂಡೇ ಬೀಗ ತೆಗೆದು ಸರ್ವರ ಸಮಕ್ಷಮದಲ್ಲೇ ಮತ ಎಣಿಕೆಯನ್ನು ನಡೆಸಲಾಗುತ್ತದೆ.  

ಈ ಎಲ್ಲ ಭದ್ರತೆಯನ್ನೂ ಭೇದಿಸಿ ಮತಯಂತ್ರಗಳನ್ನು ತಿರುಚಬೇಕಾದರೆ, ದುಷ್ಕರ್ಮಿ ಉಳಿದೆಲ್ಲ ಅಭ್ಯರ್ಥಿಗಳ ಕಣ್ಣು ತಪ್ಪಿಸಿ ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ  ಎಲ್ಲರನ್ನೂ ಒಳಹಾಕಿಕೊಂಡು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಒಂದೊಂದೇ ಮತಯಂತ್ರವನ್ನು ತೆರೆದು ಮತಗಳನ್ನು ಅಳಿಸಿ ತನ್ನಿಷ್ಟದಂತೆ ಮತಗಳನ್ನು ತುಂಬಬೇಕು. ಒಂದು ಪಕ್ಷ ಚುನಾವಣಾ ಅಧಿಕಾರಿಗಳು ಭ್ರಷ್ಟರಾದರು, ಭದ್ರತಾ ಸಿಬ್ಬಂದಿಯೂ ಶಾಮೀಲಾದರೂ ಎಂದಿಟ್ಟುಕೊಳ್ಳೋಣ, ಆದರೆ ಪ್ರಶ್ನೆ ಬಹಳ ಸರಳವಾದದ್ದು, ಎಷ್ಟು ಮತಯಂತ್ರಗಳನ್ನು ತಿರುಚಲು ಸಾಧ್ಯ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಉಪಯೋಗಿಸಲ್ಪಟ್ಟ ಮತಯಂತ್ರಗಳ ಸಂಖ್ಯೆ  ೩೨,೬೦,೦೦೦. ಯಾದೃಚ್ಛೀಕರಣ ಮಾಡುವುದರಿಂದ ಯಾವ ಮತಯಂತ್ರ ಯಾವ ಮಾತಕಟ್ಟೆಗೆ ಹೋಗುತ್ತದೆಯೆಂದು ತಿಳಿಯುವುದು ಅಸಾಧ್ಯ. ಪ್ರತಿ ಮತಯಂತ್ರದ ಆಯಸ್ಸು ಅಂದಾಜು ೧೫ ವರ್ಷ, ಆಡಳಿತಾರೂಢ ಸರಕಾರ ಮನಸೋಯಿಚ್ಚೆ ಮತಯಂತ್ರಗಳ ಉತ್ಪಾದನೆಗೆ ಆದೇಶ ನೀಡಲಾಗುವುದಿಲ್ಲ. ಆಯಸ್ಸು ಮುಗಿದ ಯಂತ್ರಗಳ ಬದಲಿಗೆ ಹೊಸಯಂತ್ರಗಳಿಗೆಗಾಗಿ ಚುನಾವಣಾ ಆಯೋಗ ಬೇಡಿಕೆ ಇಟ್ಟ ಮೇಲೆಯೇ ಹೊಸ ಮತಯಂತ್ರಗಳ ಸೇರ್ಪಡೆ ಸಾಧ್ಯ. ತಂತ್ರಾಂಶಗಳ ಏರುಪೇರು ಮಾಡಲು BEL ಮತ್ತು  ECILನ  ಇಂಜಿನಿಯರುಗಳು ಭ್ರಷ್ಟರಾಗಿರಬೇಕು,ಒಂದು ವೇಳೆ ಇವರು ಭ್ರಷ್ಟರಾದರೂ, ಕೊನೆಯಲ್ಲಿ ಚುನಾವಣಾ ಆಯೋಗ ಮಾಡುವ ಪ್ರತಿಯೊಂದು ಪರೀಕ್ಷೆಗಳನ್ನೂ ದೋಷಪೂರಿತ ಮತಯಂತ್ರ ಯಶಸ್ವಿಯಾಗಿ ಪೂರೈಸಬೇಕು. ಒಂದು ಪಕ್ಷ  ಚುನಾವಣಾ ಆಯೋಗದ ಎಲ್ಲರೂ ಭ್ರಷ್ಟರಾದರೂ ಅಂತ ಇಟ್ಟುಕೊಳ್ಳೋಣ, ಆದರೆ ಯಾದೃಚ್ಛೀಕರಣ ಮಾಡುವುದರಿಂದ ಅಭ್ಯರ್ಥಿ ದೋಷಪೂರಿತ ಯಂತ್ರ ಅದೇ ಅಭ್ಯರ್ಥಿಯ ಕೈಗೆ ಸಿಗುವ ಸಂಭವವಾದರೂ ಏನು? ಇಷ್ಟೆಲ್ಲಾ ಕಷ್ಟ ಪಟ್ಟು ಮತಯಂತ್ರಗಳನ್ನು ತಿರುಚಿದರೂ ಸಿಗುವುದು ಬೆರಳೆಣಿಕೆಯ ಮತಗಳಷ್ಟೇ. ಇವೆಲ್ಲದರ ಹೊರತಾಗಿ ಚುನಾವಣಾ ಪೂರ್ವ ಮತ್ತು ನಂತರದ ಸಮೀಕ್ಷೆಗಳೂ  ಸುಳ್ಳಾದರೆ ಮತಯಂತ್ರದ ಮೇಲೆ ಸ್ವಾಭಾವಿಕವಾಗಿಯೇ ಅನುಮಾನ ಮೂಡುತ್ತದೆ. ಕನಿಷ್ಠ ಜ್ಞಾನ ಹೊಂದಿರುವ ಯಾವ ರಾಜಕೀಯ ಪಕ್ಷವೂ ತನ್ನ ಗುಂಡಿಯನ್ನು ತಾನೇ ತೋಡಿ, ಮಣ್ಣು ಮುಚ್ಚಿ  ಸಮಾಧಿ ಕಟ್ಟಿಕೊಳ್ಳುವುದಿಲ್ಲ. ೨೦೧೯ರ ಲೋಕಸಭಾ ಚುನಾವಣೆಯ ಹೊತ್ತಿಗೆ ಚುನಾವಣಾ ಆಯೋಗ ಬ್ಯಾಲಟ್ ಕಾಗದದ ಮೇಲೆ ಮತದಾರರು ಮತದಾನದ ನಂತರ ಪರಿಶೀಲಿಸಲು ಸಾಧ್ಯವಾಗುವ ತಂತ್ರಜ್ಞಾನವನ್ನು (VVPAT) ಮತಯಂತ್ರಕ್ಕೆ ಅಳವಡಿಸಲು ಸಿದ್ಧತೆ ನಡೆಸಿದ್ದಾರೆ. ಇದರಿಂದ ಈಗ ಮತಯಂತ್ರಗಳು ತಿರುಚಲ್ಪಟ್ಟಿವೆ ಎಂದು ಬೊಬ್ಬೆ ಹೊಡೆಯುತ್ತಿರುವ ಅಜ್ಞಾನಿಗಳೆಲ್ಲ ಬಾಯಿ ಮುಚ್ಚುವ ಹಾಗಾಗುತ್ತದೆ.    

ನಮ್ಮ ರಾಜಕಾರಣಿಗಳು ಅತೀ ಬುದ್ಧಿವಂತರು, ತಲೆ ಕೆಡಿಸಿಕೊಂಡು ಇಷ್ಟೆಲ್ಲಾ ಮಾಡುವುದರ ಬದಲು ಮತದಾರರಿಗೆ ದುಡ್ಡು, ಸೀರೆ, ಟಿ.ವಿ., ಮಿಕ್ಸಿ, ಅನ್ನ  ಭಾಗ್ಯ, ಶಾದಿ ಭಾಗ್ಯ, ಮಟನ್ ಭಾಗ್ಯ, ಎಣ್ಣೆ  ಭಾಗ್ಯ, ಹೀಗೆ ಇರುವ ಬರುವ ಭಾಗ್ಯಗಳನ್ನೆಲ್ಲಾ ದಯಪಾಲಿಸಿ ಮತದಾರರ ಮೂಗಿಗೆ ತುಪ್ಪ ಸವರುವುದನ್ನು ಚನ್ನಾಗಿಯೇ ತಿಳಿದುಕೊಂಡಿದ್ದಾರೆ.ಅವರಿಗೆ ಮತಯಂತ್ರ ತಿರುಚುವಂಥ ಅತೀತ ತಂತ್ರಜ್ಞಾನದ ಮೊರೆ ಹೋಗುವ ಅವಶ್ಯಕತೆಯೇ  ಇಲ್ಲ, ಅವರ ಬತ್ತಳಿಕೆಯಲ್ಲಿ ಜಾತಿವಾದ ಮತ್ತು ಅಹಿಂದಗಳೆಂಬ ಬ್ರಹ್ಮಾಸ್ತ್ರಗಳಿವೆ, ಮತಯಂತ್ರಗಳನ್ನು ತಿರುಚುವ ಗೋಜಲಿಗೆ ಬೀಳದೆ ಸುಲಭವಾಗಿ ಗೆಲ್ಲುವ ನವರಂಗಿ ಆಟಗಳನ್ನಾಡುವುದರಲ್ಲಿ ನಿಸ್ಸೀಮರು.

ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ ಮತಯಂತ್ರಗಳಲ್ಲಿ ದೋಷವೇ ಇಲ್ಲ ಎಂದರ್ಥವಲ್ಲ. ಮತಯಂತ್ರದ ತಂತ್ರಾಂಶದಲ್ಲಿ ಪಾರದರ್ಶಕತೆಯ ಕೊರತೆಯಿದೆ, ಮತಯಂತ್ರಗಳಿಗೆ ಇನ್ನೂ ಬಹಳ   ಭದ್ರತಾ ವಿಧಿಗಳನ್ನಳವಡಿಸುವ ಅವಶ್ಯಕತೆಯಿದೆ. ಆದರೆ ೧೯೯೯ರ ಮುಂಚಿನ ಚುನಾವಣೆಗಳ ಕಡೆ ನೋಡಿದಾಗ ಮತಗಟ್ಟೆ ಅಕ್ರಮಗಳು, ನಕಲಿ ಮತದಾನ, ಬ್ಯಾಲಟ್ ಕಾಗದಗಳ ಬಳಕೆ, ಮತಗಳ ಎಣಿಕೆ ಪ್ರತಿಯೊಂದೂ ಸಂಕೀರ್ಣವಾಗಿತ್ತು. ಮತಯಂತ್ರಗಳ ಬಳಕೆ ಮತದಾರರಲ್ಲಿ ಚುನಾವಣಾ ಆಯೋಗದ ಕಾರ್ಯಗಳಲ್ಲಿ ವಿಶ್ವಾಸ ಮೂಡಿಸಿರುವುದು ಸುಳ್ಳಲ್ಲ. ಮತಯಂತ್ರಗಳ ಬಳಕೆಯಿಂದ ಪ್ರತಿ ಲೋಕಸಭೆ ಚುನಾವಣೆಯಲ್ಲಿ ಉಳಿದ ಬ್ಯಾಲಟ್ ಕಾಗದ ೧೦೦೦೦ ಟನ್, ಇದು ಪ್ರತಿ ಚುನಾವಣೆಯಲ್ಲಿ ೨೦೦೦೦೦ ಮರಗಳ ಮಾರಣ ಹೋಮವನ್ನು  ತಪ್ಪಿಸಿದೆ. ರಾಜ್ಯ ಚುನಾವಣೆಗಳು, ಸ್ಥಳೀಯ ಸಂಸ್ಥೆ ಚುನಾವಣೆಗಳು ಎಲ್ಲದರಲ್ಲೂ ಬ್ಯಾಲಟ್ ಕಾಗದದ ಬಳಕೆ ನಿಂತಿದ್ದರಿಂದ ಪರಿಸರದ ಮೇಲೆ ಆಗಿರುವ ಪರಿಣಾಮ ಊಹಿಸಲಸಾಧ್ಯ. ಈಗ ಬ್ಯಾಲಟ್ ಕಾಗದದ ಮುದ್ರಣ ಮೊದಲಿನಷ್ಟಿಲ್ಲದ್ದರಿಂದ ಶ್ರೀಸಾಮಾನ್ಯ ಕಟ್ಟಿದ ಸಾವಿರಾರು ಕೋಟಿ ತೆರಿಗೆ ಹಣ ಅರ್ಥವಿಲ್ಲದೆ ವ್ಯರ್ಥವಾಗುವುದು ತಪ್ಪಿದೆ. ಅಮೆರಿಕಾ, ಯುರೋಪುಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ನಿಲ್ಲಿಸಲಾಗಿದೆ, ಭಾರತದ ಮತಯಂತ್ರಗಳೇನು ಅವಕ್ಕಿಂತ ಮಹತ್ತರವಾದವೇ ಎಂದೂ ಕೆಲವು ಸ್ವಘೋಷಿತ ಬುದ್ಧಿಜೀವಿಗಳು ಪ್ರಶ್ನಿಸುತ್ತಿದ್ದಾರೆ. ಅಮೆರಿಕಾ, ಬ್ರಿಟನ್ ಮಾಡಿದ್ದೆಲ್ಲಾ ಸರಿ, ಅವರು ಮಾತ್ರ ತಂತ್ರಜ್ಞಾನವನ್ನು ಅರಿತವರು-ನುರಿತವರು, ಭಾರತದ ವಿಜ್ಞಾನಿಗಳು,ತಂತ್ರಜ್ಞರು ಮೂರ್ಖರು ಅನ್ನುವ ರೀತಿ ಮಾತನಾಡುವ ಬುದ್ಧಿಜೀವಿಗಳಿಗೆ ಆತ್ಮಾಭಿಮಾನದ ಕೊರತೆಯಿದೆ, ಬ್ರಿಟಿಷರು ಭಾರತ ಬಿಟ್ಟು ಹೋದರೂ ಈ ಬೌದ್ಧಿಕ ದಾಸ್ಯದ ಸಂಕಲೆಗಳು ಇನ್ನೂ ಕಳಚಿಲ್ಲ ಎನ್ನುವುದು ವಿಷಾದದ ವಿಷಯ.        

ತಂತ್ರಜ್ಞಾನದ ಓನಾಮವೂ ತಿಳಿಯದವರು ನಮ್ಮನ್ನು ಆಳುತ್ತಿರುವುದು ನಮ್ಮ ದೌರ್ಭಾಗ್ಯ. ಸೋತ ನಂತರ ಮತಯಂತ್ರಗಳ  ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ರಾಹುಲ್ ಗಾಂಧೀ, ಮಾಯಾವತಿಯಂಥ ಅರೆಬೆಂದ, ತಂತ್ರಜ್ಞಾನ ಅನಕ್ಷರಸ್ಥರ ಮಾತುಗಳಿಗೆ ಚುನಾವಣಾ ಆಯೋಗ ಉತ್ತರಿಸಬೇಕಾಗಿರುವುದು ನಮ್ಮ ವ್ಯವಸ್ಥೆಯ ಅವಸ್ಥೆ. ಇದಕ್ಕೆ ಯಾವ ರಾಜಕೀಯ ಪಕ್ಷವೂ ಹೊರತಲ್ಲ, ಈಗ ಆಡಳಿತಲ್ಲಿದ್ದು ದೊಡ್ಡ ದೊಡ್ಡ ಮಾತುಗಳನ್ನಾಡುವ ಭಾಜಪದ ಜಿ.ವಿ.ಎಲ್.ನರಸಿಂಹರಾವ್, ವಿದ್ಯುನ್ಮಾನ ಮತಯಂತ್ರಗಳನ್ನು ತೆಗಳುವುದಕ್ಕಾಗಿಯೇ “ಅಪಾಯದಲ್ಲಿ ಪ್ರಜಾತಂತ್ರ” ಎಂಬ ಹೊತ್ತಿಗೆಯನ್ನು ೨೦೧೦ರಲ್ಲಿ ಹೊರತಂದಿದ್ದರು. ಸೋತಾಗ, ವಿರೋಧ ಪಕ್ಷದಲ್ಲಿದ್ದಾಗ ಚುನಾವಣಾ ಆಯೋಗ, ಮತಯಂತ್ರಗಳನ್ನು ದೂರುವ  ಆಷಾಡಭೂತಿ, ಅವಕಾಶವಾದಿ ರಾಜಕಾರಣ ಕೊನೆಯಾಗುವ ತನಕ ಪ್ರಬುದ್ಧ  ಪ್ರಜಾತಂತ್ರದ ನಿರ್ಮಾಣ ಸಾಧ್ಯವಿಲ್ಲ. ಆಲ್-ಸೇಷನ್ ಎಂದೇ ಹೆಸರುವಾಸಿಯಾಗಿದ್ದ, ಭಾರತದ ಚುನಾವಣೆಗಳ ದಿಕ್ಕು ದೆಸೆಯನ್ನೇ ತಿರುಗಿಸಿದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ. ಎನ್. ಶೇಷನ್ ಒಂದು ಸಂದರ್ಶನದಲ್ಲಿ ಹೇಳಿದ್ದರು, ಇಂದಿನ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಮತ್ತು ಸಮಗ್ರತೆ ಅನ್ನುವುದು  ಮರೆಯಾಗುತ್ತಾ ಇವೆ. ರೌಡಿಗಳು ಮತ್ತು ಅಪರಾಧಿಗಳು ಸಂಸತ್ತಿಗೆ ಆರಿಸಿ ಹೋಗುತ್ತಿದ್ದಾರೆ, ಭಾರತದ ಪ್ರಜಾತಂತ್ರ ಹೀನ ಸ್ಥಿತಿ ತಲುಪಿದೆ. ಏನೇ ಆದರೂ ನಾನು ರಾಜಕಾರಣಿಗಳಿಗೆ ಪ್ರಜಾತಂತ್ರದ ದರೋಡೆ ಮಾಡಲು ಬಿಡುವುದಿಲ್ಲ. ಅವರ ಮಾತಿನಂತೆ ಚುನಾವಣಾ ಆಯೋಗ ರಾಜಕಾರಣಿಗಳನ್ನು ಹಿಡಿತದಲ್ಲಿಟ್ಟು ಪ್ರಜಾತಂತ್ರದಲ್ಲಿ ನಂಬಿಕೆಯನ್ನು ಉಳಿಸುವ ಕೆಲಸವನ್ನು ಆಸ್ಥೆಯಿಂದ ಮಾಡುತ್ತಿದೆ. ಪ್ರತಿಯೊಬ್ಬರನ್ನೂ ಭ್ರಷ್ಟರೆಂದು ನೋಡುವ ಸಂಶಯದ ಪೊರೆಯನ್ನು ತ್ಯಜಿಸಿ, ಚುನಾವಣಾ ಆಯೋಗದ ಕಾರ್ಯವೈಖರಿಯನ್ನ ಶ್ಲಾಘಿಸುವ ಕಾರ್ಯವಾಗಬೇಕಿದೆ. ಏಕೆಂದರೆ ಮತದಾನದ ಪ್ರಕ್ರಿಯೆಯಲ್ಲೇ ನಂಬಿಕೆ ಹೋದರೆ, ಪ್ರಜಾತಂತ್ರದಲ್ಲೇ ನಂಬಿಕೆ ಹೊರಟು ಹೋಗುತ್ತದೆ!

Shrinidhi

srinidhi1947@gmail.com


REFERENCES:

  1. GVL Narasimha Rao. Democracy at risk. 2010.
  2. Manish Shrivastava and Anita Khanna. Improvement on existing Indian EVMs. 2012 International Conference on Information and Network Technology (ICINT 2012), Singapore. 2012
  3. Know your electronic voting machine. URL: documents.gov.in/central/11946.pdf
  4. GC Shekhar. Autumn of Al-Seshan: Lest we forget how bad it was till he cleaned it up. April 7, 2014. The Telegraph.
  5. P. V. Indiresan. Case for electronic voting machines. May 17, 2010. Business line.
  6. Credibility of Electronic Voting Machines. March 16, 2017. Press Information Bureau, Government of India Election Commission
  7. EEPROM – Wikipedia
  8. Rop Gonggrijp, Willem-Jan Hengeveld. Nedap/Groenendaal ES3B voting computer a security analysis. October, 2006.
  9. Hari K Prasad, J Alex Halderman et al. Security Analysis of India’s Electronic Voting Machines. ACM 978-1-4503-0244-9/10/10. 2010

      10.Suman K. Jha. EVMs — the debate so far. September 2, 2010. Business line.

      11.P. V. Indiresan. EVMs vote against half-truths. September 6, 2010. Business line

  12.Hari K. Prasad, J. Alex Halderman, Rop Gonggrijp et al. Security Analysis of India’s Electronic Voting Machines. October, 2010. Proc. 17th ACM Conference on Computer and Communications Security (CCS ’10).

13.Report of the expert comittee for evaluation of the upgraded electronic voting machine (EVM). September 5, 2006. Election commission of India.

14.Tim McGirk. India’s scourge of money, muscle and ministers. 27 April, 1996. The Independent

15.Independent technical team review report version 4.0. July 09, 2009.

16.Comprehensive instructions on use of EVMs after first level checking of EVMs (FLC). January 19th, 2012. Election commission of India

17.B. Sivakumar. Polls to cost country Rs 3,500 crore this year. February 18, 2014. Times of India

18.Rs 30,000 crore to be spent on Lok Sabha polls. March 16, 2014. Election news. Press Trust of India.

19.Shymalal Yadav. Shelf-life of 50% EVMs ending, have to buy 14 lakh for 2019: EC. October 25, 2015. The Indian Express.

20.P. V. Indiresan. Too much loose talk on EVMs. August 23, 2010. Business line.

21.P. V. Indiresan. Travails of a democracy. May 31, 2010. Business line.

Facebook ಕಾಮೆಂಟ್ಸ್

ಲೇಖಕರ ಕುರಿತು

Team readoo kannada

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!