ಅಂಕಣ

ದೈವದದ್ಭುತದರಿವು, ಮನುಜ ಮಹನೀಯತೆಯಲಿದೆ ಸುಳಿವು !

ಮಂಕುತಿಮ್ಮನ ಕಗ್ಗ ೫೯

ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ |
ಮನಗಾಣಿಸಲು ನಿನಗೆ ದೈವದದ್ಬುತವ ? ||
ಮನುಜರೊಳಗಾಗಾಗ ತೋರ್ಪ ಮಹನೀಯ ಗುಣ |
ವನುವಾದ ಬೊಮ್ಮನದು – ಮಂಕುತಿಮ್ಮ || ೫೯ ||

ಇದಂತು ದೇವರ ಮಹಿಮೆಯನ್ನು ನಿರ್ಯೋಚನೆಯಿಂದ ಒಪ್ಪಿಕೊಂಡ ಮನಸೊಂದು ಆಡಿದ ಮಾತಿನಂತಿದೆ. ದೈವದ ಅದ್ಭುತ ಶಕ್ತಿಯ ನಿರೂಪಣೆಗೆ, ನಂಬಿಕೆ ಬರುವುದಕ್ಕೆ, ಮನಗಾಣಿಸುವುದಕ್ಕೆ ಸಾಕ್ಷಾಧಾರಗಳ ಅಗತ್ಯವಾದರು ಯಾಕೆ ಬೇಕು ? ಆ ಸಾಕ್ಷ್ಯದ ಹೆಸರಿನಲ್ಲಿ ನಡೆಸುವ ಮಣಿ-ಮಂತ್ರ-ತಂತ್ರಾದಿ ಆಚರಣೆಗಳು, ಸಿದ್ದಿಗಳು ನಿಜಕ್ಕೂ ಬೇಕಿವೆಯೆ? ಅದರ ಬದಲು ಆಗೀಗೊಮ್ಮೆ ಮನುಷ್ಯರು ತೋರುವ ಉದಾತ್ತ-ಪರೋಪಕಾರಿ-ಮಹನೀಯ ಗುಣಗಳ ಸಾಕ್ಷಿಯೆ ಸಾಲದೆ ? ಆ ಗುಣಗಳನ್ನು ತೋರಿದವರು ನರರಾದರು ಅದರ ಪ್ರೇರೇಪಣೆ, ನಿರ್ಮಾಣ, ನಿರ್ದೇಶನ ಅವರದಲ್ಲ. ಆ ಗುಣಗಳು ತಕ್ಕ ಸಮಯದಲ್ಲಿ ದೈವದ ಪ್ರೇರೇಪಣೆ ಎನ್ನುವ ಹಾಗೆ ಅನಾವರಣವಾಗುತ್ತವೆ. ಇಂತಿರುವಾಗ ಅವನ ಅದ್ಭುತವನ್ನು ಗ್ರಹಿಸೆ ಮತ್ತಾವ ಸಾಕ್ಷಿ ಬೇಕೆಂದು ತಲೆ ಕೆರೆದುಕೊಳ್ಳುತ್ತಿದ್ದಾನಿಲ್ಲಿ ಮಂಕುತಿಮ್ಮ.

ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ |
ಮನಗಾಣಿಸಲು ನಿನಗೆ ದೈವದದ್ಬುತವ ? ||

ದೇವರನ್ನು ಒಲಿಸಿಕೊಳ್ಳಲು, ದೈವತ್ವದ ಮಹತ್ವವನ್ನು ಸಾರಲು ಅನೇಕ ದಾರಿಗಳು. ಕೆಲವರು ಜಪಮಣಿ ಹಿಡಿದು ತಪಸ್ಸಿಗೋ, ಪೂಜೆಗೊ ಕೂತು ಅದನ್ನು ಸಾಧಿಸಲು ಯತ್ನ್ನಿಸಿಸುತ್ತಾರೆ. ಗುಡಿಯಲಿಟ್ಟು ಪೂಜಿಸಿ ಮಂತ್ರ ಹೇಳುತ್ತಾ ಓಲೈಸುವ ಜನರೂ ಅನೇಕ. ಸಿದ್ಧಿಯೊಂದರ ಸಾಧನೆಗಾಗಿ ವಾಮಮಾರ್ಗ ಹಿಡಿದು ಮಾಟ, ಮಂತ್ರ, ತಂತ್ರಗಳ ಮೊರೆಹೊಕ್ಕ ಸಾಧಕರೂ ಕಡಿಮೆಯೇನಿಲ್ಲ. ಅವರೆಲ್ಲರ ಪ್ರಯತ್ನದ ಹಿಂದಿರುವ ಒಂದು ಸಮಾನ ನಂಬಿಕೆ – ತಮಗೆ ಮೀರಿದ ದೈವವೆಂಬ ಅದ್ಭುತ ಶಕ್ತಿಯೊಂದಿದೆ, ಅದನ್ನು ಒಲಿಸಿಕೊಂಡರೆ ತಮ್ಮ ಗುರಿ ಮುಟ್ಟುವುದು ನಿಶ್ಚಿತ, ಖಚಿತ ಎನ್ನುವುದು. ಅವರನ್ನೆಲ್ಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನೋಡುವಾಗ ಒಂದೆಡೆ ಅವರ ಕುರಿತು ಭಯಭಕ್ತಿ ಹುಟ್ಟುವುದರ ಜೊತೆಗೆ ಅವರು ಆರಾಧಿಸುವ ದೈವದ ಮಹಿಮೆ, ಹಿರಿಮೆಯ ಬಗೆಯೂ ಭಯಭಕ್ತಿಯ ಜತೆಗೆ ತಿಳುವಳಿಕೆ ಹೆಚ್ಚುತ್ತದೆ. ಅಂತಹವರ ಯತ್ನ, ಶ್ರಮ, ಪರಿತಾಪ, ವೈಫಲ್ಯ, ಸಿದ್ಧಿಗಳೇ ಒಂದು ರೀತಿಯಲ್ಲಿ ಸಾಕ್ಷ್ಯವಾಗಿಬಿಡುತ್ತವೆ – ಆ ದೈವ ಶಕ್ತಿಗಳ ಅದ್ಭುತವನ್ನು ಎತ್ತಿ ತೋರಲು.

ಆದರೆ ನೈಜದಲ್ಲಿ ದೈವದ ಮಹತ್ವವನ್ನು ಸಾರಲು, ನಂಬಿ ಮನಗಂಡು ಅರ್ಥೈಸಿಕೊಳ್ಳಲು ಇಷ್ಟೆಲ್ಲಾ ತರದ ಜಟಾಪಟಿಗಳ ಅಗತ್ಯವಿದೆಯೇ? ಕೇವಲ ‘ಇಂತಹ ಸಾಕ್ಷ್ಯಾಧಾರಗಳಿದ್ದರೆ ಮಾತ್ರ ದೈವದ ಅದ್ಭುತ ಶಕ್ತಿಯನ್ನು ನಂಬುವೆ’ ಎನ್ನುವುದೇ ಆ ಶಕ್ತಿಗೆ ತೋರಿದ ಅಪನಂಬುಗೆಯಾಗುವುದಿಲ್ಲವೇ ? ನಾಸ್ತಿಕರಾಗಲಿ, ಆಸ್ತಿಕರಾಗಲಿ ಒಪ್ಪುವ ಒಂದು ಮಾತೆಂದರೆ ನಮ್ಮನ್ನು ಮೀರಿದದಾವುದೋ ಅಗೋಚರ ಶಕ್ತಿ ಅಸ್ತಿತ್ವದಲ್ಲಿದೆಯೆನ್ನುವುದು. ಆಸ್ತಿಕ ಭಕ್ತ ಅದನ್ನು ದೇವರೆಂದು ನಿಸ್ಸಂಶಯವಾಗಿ, ಸಾರಾಸಗಟಾಗಿ ನಂಬಿಬಿಡುತ್ತಾನೆ. ಆದರೆ ನಾಸ್ತಿಕವಾದಿ ಅದರ ಹಿಂದಿನ ವಿಜ್ಞಾನ, ಮತ್ತದನ್ನು ಸಾಧಿಸಿ ತೋರುವ ಸಾಕ್ಷ್ಯ ಹುಡುಕುತ್ತಾ ಹೋಗುತ್ತಾನೆಯೇ ಹೊರತು, ಅದೇ ದೈವಶಕ್ತಿಯೆಂದು ಸುಖಾಸುಮ್ಮನೆ ನಂಬುವುದಿಲ್ಲ. ಈ ಕಗ್ಗವನ್ನು ವಿಶೇಷವಾಗಿ ಅಂತಹವರಿಗೆ ಉದ್ದೇಶಿಸಿ ಹೇಳಿದಂತಿದೆ ಮೆಲುವಾದ ಕೆಣಕುವ ದನಿಯಲ್ಲಿ.

ಮನುಜರೊಳಗಾಗಾಗ ತೋರ್ಪ ಮಹನೀಯ ಗುಣ |
ವನುವಾದ ಬೊಮ್ಮನದು – ಮಂಕುತಿಮ್ಮ ||

ಹಾಗೆಯೇ ಮುಂದುವರೆದ ತರ್ಕದಲ್ಲಿ ಮಂಕುತಿಮ್ಮ ಮನುಜರಲ್ಲಿ ನಡೆವ ಘಟಿತಗಳನ್ನೇ ಉದಾಹರಿಸುತ್ತ ಹೋಗುತ್ತಾನೆ – ತನ್ನ ವಾದಕ್ಕೆ ಪುಷ್ಟಿ ನೀಡಲು ಮತ್ತು ಸಾಕ್ಷ್ಯ ಒದಗಿಸಲು. ಮನುಜ ಸಂಘಜೀವಿಯೆನ್ನುವುದು ಎಷ್ಟು ನಿಜವೋ , ಸ್ವಾರ್ಥ ಜೀವಿಯೆನ್ನುವುದು ಅಷ್ಟೇ ನಿಜ. ತನ್ನ ಸ್ವಂತದ ಒಳಿತಿಗಾಗಿ , ಸ್ವಾರ್ಥ ಸಾಧನೆಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಮನಸ್ಥಿತಿ ತುಂಬಾ ಸಹಜವೆನ್ನುವ ಕಲಿಗಾಲವಿದು. ಅಂತಹ ಸಂದಿಗ್ದ , ಸಂಕೀರ್ಣ ಕಾಲಾಯಾನದಲ್ಲೂ ಆಗೀಗೊಮ್ಮೆ ಹುಟ್ಟಿಕೊಳ್ಳುವ ಯಾವುದೋ ಸಂಕಟಕರ ಸಂಧರ್ಭದಲ್ಲಿ ಇದ್ದಕ್ಕಿದ್ದಂತೆ ಜಾಗೃತವಾಗಿಬಿಡುತ್ತದೆ ಮನುಜ ಮನ. ತನಗೆ ಸಂಬಂಧಿಸಿರದ, ತನ್ನ ಕಟ್ಟುಪಾಡಿಗೊಳಪಡದ ಪರಿಸ್ಥಿತಿಯೊಂದಕ್ಕೆ ಕರುಣೆ, ಕನಿಕರದಿಂದ ಸ್ಪಂದಿಸುತ್ತ ತನ್ನ ಕೈಲಾದ ಸಹಾಯ ಮಾಡುತ್ತದೆ. ನೈಸರ್ಗಿಕ ವಿಕೋಪಗಳಾಗಿ ಜೀವಹಾನಿಯೋ, ನಿರ್ಗತಿಕ ಸ್ಥಿತಿಯೋ ಉಂಟಾದ ಹೊತ್ತಲಿ ಮನುಜನ ಮಹನೀಯ ಗುಣ ಮಾನವತೆಯ ರೂಪದಲ್ಲಿ ಪ್ರತ್ಯಕ್ಷವಾಗಿಬಿಡುತ್ತದೆ. ದೈವದ ಪರೋಕ್ಷ ಸಹಾಯ ಈ ರೀತಿಯಲ್ಲಿ ಅಪರಿಚಿತರ (ಯಾರೋ ಪರರ) ಮೂಲಕ ದೊರಕುತ್ತದೆ – ಆಯಾಚಿತವಾಗಿ ಮತ್ತು ಅನಿರೀಕ್ಷಿತವಾಗಿ. ಹಾಗೆ ಸಹಾಯ ಹಸ್ತ ಚಾಚುವಂತೆ ಪ್ರೇರೇಪಿಸಿದವನು ಆ ಭಗವಂತ (ಬೊಮ್ಮ). ಅಂತಹ ಮನೋಭಾವ ಇಲ್ಲದವರಲ್ಲು ತನ್ನ ಪ್ರಭಾವ ಬೀರಿ, ಅವರ ಮನದ ನೇತಾತ್ಮಕ ಭಾವಗಳನ್ನು ಧನಾತ್ಮಕ ಮಹನೀಯ ಗುಣಗಳಾಗುವಂತೆ ಅನುವಾದಿಸಿ (ಪರಿವರ್ತಿಸಿ) ತನ್ನ ಇರುವಿಕೆ ಮತ್ತು ಪ್ರಭಾವವನ್ನು ಸ್ಪಷ್ಟಪಡಿಸುತ್ತಾನೆ. ತನ್ನ ಕೈಲಾಗುವುದು ಸುಲಭದ ಕೆಲಸ; ಅದನ್ನು ಇತರರ ಕೈಲಿ ಮಾಡಿಸುವ ಸಾಮರ್ಥ್ಯ ತೋರುವುದು ನಿಜ ನಾಯಕತ್ವದ ಲಕ್ಷಣ. ಅದನ್ನು ನಿರಂತರವಾಗಿ ತೋರಿಸುತ್ತಲೇ ಇದ್ದಾನೆ ಆ ಪರಬ್ರಹ್ಮ. ಇದಕ್ಕಿಂತಲೂ ಸಾಕ್ಷಿ ಬೇಕೇ ? ಆಧಾರ ಬೇಕೇ ? ಅದಕ್ಕೂ ಮೀರಿದ ಸಾಕ್ಷ್ಯಾಧಾರಕ್ಕೆ ಯಾಕೋ ಒದ್ದಾಡುವಿರಿ ? ಎನ್ನುವ ಮಾರ್ಮಿಕ ಪ್ರಶ್ನೆ ಕೇಳುತ್ತಿದ್ದಾನಿಲ್ಲಿ – ಮಂಕುತಿಮ್ಮ.

ನಂಬಬೇಕೆಂದರೆ ನೂರೆಂಟು ಸಾಕ್ಷಿಗಳು ಕಾಣುತ್ತವೆ. ನಂಬುವುದಿಲ್ಲವೆಂದಾದರೆ ನೂರೆಂಟು ಹುಳುಕುಗಳು ಕಾಣಿಸಿಕೊಳ್ಳುತ್ತವೆ. ‘ಮನಸಿನಂತೆ ಮಹಾದೇವ’ ಎನ್ನುವ ಭಾವಕ್ಕೆ ಒತ್ತು ಕೊಡುವ ಕಗ್ಗವಿದು. ನಂಬಲಿ ಬಿಡಲಿ, ಪೂರ್ವಾಗ್ರಹವಿಲ್ಲದ ತೆರೆದ ಮನವಿರಲಿ ಎನ್ನುವ ಆಶಯ ಕೂಡ ಇಲ್ಲಿ ವ್ಯಕ್ತವಾಗಿದೆ.

– ನಾಗೇಶ ಮೈಸೂರು

#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!