ಹಿಂದೆ ಎತ್ತುಗಳ ಮೂಲಕ ಬಹಳ ಕಷ್ಟಪಟ್ಟು ಉಳುಮೆ ಮಾಡುತ್ತಿದ್ದ ರೈತಾಪಿ ವರ್ಗ ಇಂದು ಸುಲಭವಾಗಿ ಟ್ರಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾರೆ. ಹಿಂದೆ ಕಾರ್ಮಿಕರು ಲೇತಿನ ಮುಂದೆ ಗಂಟೆಗಟ್ಟಲೇ ನಿಂತು ತಯಾರಿಸುತ್ತಿದ್ದ ಗೇರ್, ನಟ್ಟು, ಬೋಲ್ಟ್ ಗಳು ಈಗ ಒಂದು ಪ್ರೋಗ್ರಾಮೀನ ಮೂಲಕ ಅಳತೆ ಸೆಟ್ ಮಾಡಿದರೆ ಕ್ಷಣಮಾತ್ರದಲ್ಲಿ ರಾಶಿ ರಾಶಿ ಸಂಖ್ಯೆಯಲ್ಲಿ ತಯಾರಾಗಿ ಬೀಳುತ್ತವೆ. ಹಿಂದೆ ಮ್ಯಾನ್ ಪವರ್ ಮೂಲಕ ದಿವ್ಸಾನುಗಟ್ಟಲೆ ಒಡೆಯಬೇಕಿದ್ದ ಬಂಡೆಗಳು, ಕೊರೆಯಬೇಕಿದ್ದ ಸುರಂಗಗಳು, ಕೆಡವಬೇಕಿದ್ದ ಕಟ್ಟಡಗಳು ಇಂದು ದೊಡ್ಡ ಮಷೀನ್ ಗಳ ಮೂಲಕ ಗಂಟೆಗಳಲ್ಲಿ ನೆಲಸಮವಾಗಿರುತ್ತವೆ. ದೊಡ್ಡ ಕಟ್ಟಡವೋ, ಸೇತುವೆಯೋ ಕಟ್ಟುವ ಸಮಯದಲ್ಲಿ ಕೆಳಗಿನಿಂದ ಮೇಲಕ್ಕೆ ಕೈಯಲ್ಲಿ ಹೊತ್ತು ಸಾಗಿಸಬೇಕಾಗಿದ್ದ ಕಲ್ಲು, ಜಲ್ಲಿ, ಸಿಮೆಂಟುಗಳನ್ನು ಟ್ರಾಲಿಗಳು ಕ್ಷಣ ಮಾತ್ರದಲ್ಲಿ ಸಾಗಿಸುತ್ತಿವೆ. ಹಿಂದೆ ದಿವಸಗಳ ಕಾಲ ಕೂತು ಕೈಯಲ್ಲಿ ಕಟ್ಟಡದ ನೀಲಿ ನಕಾಶೆ ಬಿಡಿಸುತ್ತಿದ್ದ ಸಿವಿಲ್ ಇಂಜಿನಿಯರ್ ಇವತ್ತು ಕೆಲವು ಘಂಟೆಗಳಲ್ಲಿ ಸಾಫ್ಟ್‌ವೇರ್ ಮೂಲಕ ನಕಾಶೆ ಮಾಡಿ ಮುಗಿಸುತ್ತಿದ್ದಾನೆ. ಅಟೋಮೋಬೈಲ್ ಇಂಡಸ್ಟ್ರಿಗಳಲ್ಲಿ ರೋಬೋಗಳು ಅದಾಗಲೇ ಕಾರ್ಯನಿರ್ವಹಿಸುತ್ತಾ ಇವೆ. ಅಂತರ್ಜಾಲ ಪಾಠಗಳು ಮತ್ತು ಕ್ಲಾಸುಗಳೂ ಶುರುವಾಗಿ ವರ್ಷಗಳೇ ಸಂದಿವೆ. ಚಾಲಕನಿಲ್ಲದ ಕಾರುಗಳ ಪ್ರಯೋಗವೂ ಚಾಲ್ತಿಯಲ್ಲಿದೆ. ಮಾಲ್ ಗಳಲ್ಲಿ ಸೆಲ್ಫ್ ಚೆಕ್ ಔಟ್ ಸಿಸ್ಟಮ್ ಕೂಡಾ ಇನ್ನು ಕೆಲವು ವರ್ಷಗಳಲ್ಲಿ ಜಾರಿಗೆ ಬರುವುದು ಖಚಿತ. ಪ್ರಪಂಚ ಅದ್ಯಾವ ಪರಿಯಲ್ಲಿ ಇಂದು ಅಟೋಮೇಶನನ್ನು ಅಪ್ಪಿಕೊಳ್ಳುತ್ತಿದೆ ಅನ್ನುವುದಕ್ಕೆ ಕೆಲವು ಉದಾಹರಣೆಗಳಿವು.
ಸಿರಿ, ಗೂಗಲ್ ವಾಯ್ಸ್ ಸರ್ಚ್ ಮತ್ತು ಕೊರ್ಟಾನ ಮುಂತಾದ ಆಪ್ಗಳ ಮೇಲೆ ಕ್ಲಿಕ್ ಮಾಡಿ ನೀವು ಮಾತಾಡಿದರೆ ಅವುಗಳ ಕುರಿತಾದ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ. ಫೇಸ್ಬುಕ್ಕಿನಲ್ಲಿ ನೀವೊಂದು ಫೊಟೋ ಅಪ್ಲೋಡ್ ಮಾಡಿದ ಕೂಡಲೇ ನಿಮ್ಮ ಗೆಳೆಯರನ್ನು ಗುರುತಿಸಿ ಅವರನ್ನು ಟ್ಯಾಗ್ ಮಾಡಿ ಅನ್ನುವ ನೋಟಿಫಿಕೇಶನ್ ನಿಮಗೆ ಬರುತ್ತದೆ.ಇದೆಲ್ಲಾ ಹೇಗೆ ಸಾಧ್ಯ ಅನ್ನುವ ಪ್ರಶ್ನೆಗೆ ಉತ್ತರವೇ ಕೃತ್ರಿಮಜಾಣ್ಮೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್!! ಇವುಗಳಷ್ಟೇ ಅಲ್ಲ ಫಾರ್ ಕ್ರೈ ಮತ್ತು ಕಾಲ್ ಆಫ್ ಡ್ಯೂಟಿ ಎನ್ನುವ ವಿಡಿಯೋ ಗೇಮ್ ಗಳಲ್ಲಿ ಬಳಕೆಯಾಗುವುದೂ ಕೃತ್ರಿಮಜಾಣ್ಮೆ. ಕೆಲವೊಂದು ಆಪ್ ಅಥವಾ ವೆಬ್ಸೈಟ್ ಗಳಲ್ಲಿ ಯಾವುದಾದರೂ ವಸ್ತುಗಳ ಬಗ್ಗೆ ನೀವು ವಿಚಾರಿಸಿದ ಕೆಲವು ಸಮಯದ ಬಳಿಕ ನಿಮಗೆ ರಿಮೈಂಡರ್ ರೀತಿಯಲ್ಲಿ ಅದೇ ವಸ್ತುಗಳ ಬಗ್ಗೆ ನೋಟಿಫಿಕೇಶನ್ ಬರುತ್ತಲ್ಲ ಅದರ ಹಿಂದೆ ಇರುವುದೂ ಕೃತ್ರಿಮ ಜಾಣ್ಮೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅಟೋಮೇಶನ್ ಮತ್ತು ಕೃತ್ರಿಮಜಾಣ್ಮೆ ಪ್ರಭಾವ ಅತಿಯಾಗಿರುವಾಗ ಉದ್ಯೋಗ ವಲಯದಲ್ಲಿ ದೊಡ್ಡಣ್ಣನಾಗಿರುವ ಐಟಿ(ಮಾಹಿತಿ ತಂತ್ರಜ್ಞಾನ) ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಇದರ ಪರಿಣಾಮ ಹೇಗಿರಬಹುದು ಅನ್ನುವುದು ಬಹಳ ಕುತೂಹಲಕರ.
ಐಟಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಅಟೋಮೇಶನ್ ಮತ್ತು ಕೃತ್ರಿಮಜಾಣ್ಮೆ ಬಹಳ ವೇಗದಲ್ಲಿ ಮುಂದಕ್ಕೆ ದಾಪುಗಾಲಿಡುತ್ತಿದೆ. ವಿಶೇಷವಾಗಿ ಪುನರಾವರ್ತನೆ ಮಾಡಬೇಕಾದಂತಹ ಮತ್ತು ಕಡಿಮೆ ಪ್ರಮಾಣದಲ್ಲಿ ಮಾನವ ಮಧ್ಯಸ್ಥಿಕೆ ವಹಿಸಬಹುದಾದಂತಹ ಕೆಲಸಗಳು ಇನ್ನು ಕೆಲವು ವರ್ಷಗಳಲ್ಲಿ ಐಟಿಯಲ್ಲಿ ಕಾಣ ಸಿಗುವುದು ಬಹಳ ವಿರಳವಾಗಬಹುದು. ಹಿಂದೆ ಟೆಸ್ಟಿಂಗ್, ಡಾಟಾ ಎಂಟ್ರಿ, ಮ್ಯಾನುಯಲ್ ಜಾಬ್ ಪ್ರೋಸೆಸಿಂಗ್ ಅಂತ ತುಂಬಾ ಸಮಯ ವ್ಯಯಿಸುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ಇಂದು ತಾನೇ ತಯಾರಿಸಿದ ಪ್ರೋಗ್ರಾಮ್ ಮೂಲಕ ಅದನ್ನೆಲ್ಲ ಅಟೋಮೇಟ್ ಮಾಡಿದ್ದಾನೆ. ಕೃತಕ ಕಾಲ್ ಸೆಂಟರ್ ಅದಾಗಲೇ ಜಾರಿಯಲ್ಲಿದೆ. ಇದರಿಂದ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗುವುದು ಪಕ್ಕಾ. ಬಿಪಿಒ, ಡಾಟಾ ಶೇಖರಣೆ ಮುಂತಾದವುಗಳಲ್ಲಿ ರೋಬೋ ಅದಾಗಲೇ ಬಂದಾಗಿದೆ. ಇವಿಷ್ಟು ಐಟಿಯ ಕಥೆಯಾದರೆ ಹಿಂದೆ ಬ್ಯಾಂಕುಗಳಲ್ಲಿ ಪಾಸು ಪುಸ್ತಕ ಅಪ್ಡೇಟ್ ಮಾಡಿಸಿಕೊಳ್ಳಲು ದೊಡ್ಡ ಕ್ಯೂನಲ್ಲಿ ಕಾಯಬೇಕಾಗಿತ್ತು. ಕ್ಯಾಶ್ ಡಿಪಾಸಿಟ್ ಮಶೀನ್, ಎಟಿಎಮ್ ಬಂದು ಕ್ಯಾಶಿಯರ್ ಕೆಲಸ ಕಡಿಮೆಯಾಗಿ ಬಿಟ್ಟಿದೆ. ಅದಲ್ಲದೇ ಈಗ ಬ್ಯಾಂಕಿಗೆ ಹೋಗುವ ಜನರ ಪ್ರಮಾಣ ಗಣನೀಯವಾಗಿ ಇಳಿದು ಬಿಟ್ಟಿದೆ. ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಶುರುವಾದ ಮೇಲೆ ಜನ ಬ್ಯಾಂಕಿನ ಕಡೆ ಮುಖಮಾಡುವುದು ತೀರಾ ಅನಿವಾರ್ಯ ಪರಿಸ್ಥಿತಿಗಳಲ್ಲಿ.
ಹಾಗಾದರೆ ರೋಬೋಟ್ ಗಳು ಐಟಿ ಕ್ಷೇತ್ರದಲ್ಲಿ ಮನುಷ್ಯ ಮಾಡುತ್ತಿದ್ದ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಯಾಕೆ ಅಂತಲೂ ಸಣ್ಣ ಉದಾಹರಣೆ ಕೊಡುತ್ತೇನೆ ನೋಡಿ. ಸಾಮಾನ್ಯವಾಗಿ ಐಟಿಯಲ್ಲಿ ಡೆವಲಪ್ಮೆಂಟ್, ಸಪೋರ್ಟ್ ಮತ್ತು ಟೆಸ್ಟಿಂಗ್ ಪ್ರಮುಖವಾದ ವಿಭಾಗಗಳು. ಈಗ ಡೆವಲಪ್ಮೆಂಟ್ ವಿಭಾಗವನ್ನು ತೆಗೆದುಕೊಂಡರೆ ಹೊಸತಾಗಿ ಡೆವಲಪ್ ಮಾಡುತ್ತಿರುವ ಸಾಫ್ಟ್‌ವೇರ್ ಮೋಡ್ಯೂಲ್ ಅದಾಗಲೇ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಾಫ್ಟ್ವೇರ್ ಮೇಲೆ ಏನಾದರೂ ಪರಿಣಾಮ ಬೀರಬಹುದಾ ಅನ್ನುವುದನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ನಂತರ ಪ್ರಾರಂಭ ಮಾಡುತ್ತಾರೆ. ಸಾಮಾನ್ಯ ಮನುಷ್ಯರೇ ಹಲವಾರು ಎಡವಟ್ಟುಗಳು ಮಾಡುವಾಗ ಇಲ್ಲಿ ರೋಬೋ ಅಷ್ಟು ನಿಖರವಾಗಿ ಅಂದಾಜಿಸಲು ಅಸಾಧ್ಯ. ಸಾಫ್ಟ್‌ವೇರ್ ಲಾಂಗ್ವೇಜ್ ಗಳನ್ನು ಫೀಡ್ ಮಾಡಿದರೆ ರೋಬೋಗಳು ಡೆವಲಪ್ಮೆಂಟ್ ಮಾಡಬಲ್ಲವಾದರೂ ಲಾಜಿಕ್ ಗಳನ್ನು ಬೇಕಾದಲ್ಲಿ ಉಪಯೋಗಿಸುವುದು ಅನುಮಾನಕರ. ಸಾಫ್ಟ್‌ವೇರ್ ಡೆವಲಪ್ಮೆಂಟ್ ನಲ್ಲಿ ಬಿಸ್ನೆಸ್ ಅನಾಲಿಸ್ಟ್ ಗಳ ಪಾತ್ರ ಮಹತ್ತರ. ಕ್ಲೈಂಟ್ ಹೇಳಿದ್ದನ್ನ ಟೆಕ್ನಿಕಲ್ ಶಬ್ದಗಳಲ್ಲಿ ಬದಲಾಯಿಸಿ ಡಿಸೈನ್ ಒಂದನ್ನು ಸಿದ್ಧಪಡಿಸಿದ ಮೇಲೆ ಡೆವಲಪ್ಮೆಂಟ್ ಮಾಡಲಾಗುತ್ತದೆ. ಹಾಗಾಗಿ ಈ ಕೆಲಸವನ್ನು ರೋಬೋ ಮಾಡುವುದು ಅನುಮಾನಕರ. ರೋಬೋಗಳು ಟೆಸ್ಟಿಂಗ್ ಮಾಡಬಲ್ಲವಾದರೂ ಮನುಷ್ಯ ಮಾಡಿದಷ್ಟು ಪರಿಣಾಮಕಾರಿಯಾಗಿ ಟೆಸ್ಟ್ ಮಾಡುವುದು ಅನುಮಾನಕರ. ಅದೂ ಅಲ್ಲದೇ ಹೊಸ ಸಾಫ್ಟ್‌ವೇರ್ ಟೆಸ್ಟ್ ಮಾಡಲು ಫಂಕ್ಷನಲ್ ಮಾಹಿತಿ ಕೂಡಾ ಇರಬೇಕಾದದ್ದು ಅನಿವಾರ್ಯ. ಟೆಸ್ಟ್ ಮಾಡಬೇಕಾದ ಎಲ್ಲಾ ಕಾಂಬಿನೇಶನ್ ಗಳನ್ನೂ ರೋಬೋಗೆ ಫೀಡ್ ಮಾಡುವುದು ಕಷ್ಟ. ಇನ್ನು ಸಪೋರ್ಟ್ ವಿಭಾಗದಲ್ಲೂ ಬರಬಹುದಾದ ಎಲ್ಲಾ ಪ್ರಾಬ್ಲಮ್ ಗಳನ್ನು ಫೀಡ್ ಮಾಡುವುದು ಖಂಡಿತಾ ಅಸಾಧ್ಯ. ಅಲ್ಲದೇ ಕೆಲವೊಮ್ಮೆ ಸಪೋರ್ಟ್ ಮಾಡಲು ಕಾಲಾವಕಾಶ ಬಹಳ ಕಮ್ಮಿ ಇರುತ್ತದೆ. ತ್ವರಿತಗತಿಯಲ್ಲಿ ಗ್ರಾಹಕರಿಗೆ ಪರಿಹಾರ ನೀಡಬೇಕಾಗುತ್ತದೆ.
೨೦೧೬ರಲ್ಲಿ ಚೆನ್ನೈನ ಬ್ಯಾಂಕೊಂದು ರೋಬೋವನ್ನು ಕೃತ್ರಿಮ ಜಾಣ್ಮೆ ಉಪಯೋಗಿಸಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವ ಪ್ರತಿನಿಧಿಯಾಗಿ ನೇಮಿಸಿತ್ತು. ಇತರ ಬ್ಯಾಂಕ್ ಗಳೂ ರೋಬೋವನ್ನು ನೇಮಕ ಮಾಡುವ ಹಾದಿಯಲ್ಲದೆ. ರೋಬೋ ಉತ್ತರಿಸಲಾಸಧ್ಯವಾದ ಪ್ರಶ್ನೆಗಳಿಗೆ ಮ್ಯಾನೇಜರನ್ನು ಸಂಪರ್ಕಿಸಿ ಅಂತ ಉತ್ತರಿಸುತ್ತದೆ.ಬ್ಯಾಂಕುಗಳ ಲೋನಿನ ವಿಭಾಗಗಳಲ್ಲಿ ರೋಬೋ ಬಳಸುವ ಬಗ್ಗೆ ಚಿಂತನೆಗಳು ಜಾರಿಯಲ್ಲದೆ. ಅಟೋಮ್ಯಾಟಿಕ್ ಅಂಡರೈಟಿಂಗ್ ಅದಾಗಲೇ ಜಾರಿಯಲ್ಲಿದೆ. ಲೋನು ಕೊಡವುದೋ ಬಿಡುವುದೋ ಎನ್ನುವುದನ್ನು ನಿರ್ಧರಿಸುವುದು ಅಂಡರೈಟರ್ಸ್. ರೂಲ್ ಇಂಜಿನ್ ಮುಖಾಂತರ ಅದನ್ನೂ ಅಟೋಮೇಟ್ ಮಾಡಲಾಗುತ್ತಿದೆ. ಒಂದು ವೇಳೆ ಪ್ರೋಗ್ರಾಮಿನಲ್ಲಿ ಸ್ವಲ್ಪ ಎಡವಟ್ಟಾಗಿ ಎರ್ರಾಬಿರ್ರಿ ಲೋನು ಕೊಟ್ಟರೆ ಬ್ಯಾಂಕಿನ ಕಥೆ ಗೋವಿಂದ! ಅದಾಗ್ಯೂ ಬ್ಯಾಂಕಿನ ಕಸ್ಟಮರ್ ಕೇರ್ ಕೆಲಸಕ್ಕೂ ಕುತ್ತು ಖಂಡಿತ. ಕೆಳಹಂತದ ಕೆಲಸಗಳು ಅಟೋಮೇಶನ್ ಹೊಡೆತಕ್ಕೆ ಅದಾಗಲೇ ಸಿಕ್ಕಿಕೊಂಡಿದೆ.
ರೋಬೋಗಳೂ ಯಂತ್ರಗಳಾಗಿರುವುದರಿಂದ ಯಾವುದೇ ಸಮಯದಲ್ಲಿಯೂ ಕೈ ಕೊಡಬಹುದು. ಅದರನ್ನು ಪುನಃ ರಿಪೇರಿ ಮಾಡಲು ಮನುಷ್ಯರೇ ಬೇಕಲ್ಲ? ಪರಿಸ್ಥಿತಿ ಹೀಗಿರುವಾಗ ರೋಬೋ ಮಾಡುವ ಕೆಲಸವನ್ನು ಮಾನಿಟರ್ ಮಾಡುವುದೂ ಅತ್ಯಾವಶ್ಯಕ. ಹಾಗಾಗಿ ಮತ್ತೊಂದು ಕೆಲಸದ ನಿರ್ಮಾಣ ಮಾಡಿದಂತಾಯಿತು! ಇದಲ್ಲದೇ ರೋಬೋಗಳ ಖರ್ಚು ವೆಚ್ಚುಗಳೂ ಅಧಿಕ. ರ್ಯಾನ್ಸಮ್ ವೇರ್ ನಂತಹ ವೈರಸ್ ಅಟ್ಯಾಕ್ ಆದರೆ ರೋಬೋದ ಕಥೆ ಅಷ್ಟೆ. ಮತ್ತೆ ಪುನಹ ಮಾನವನ ಸಹಾಯವಿಲ್ಲದೇ ರೋಬೋಗಳು ಕಾರ್ಯನಿರ್ವಹಿಸುವುದು ಕಷ್ಟಕರ! ಏನೇ ಹೇಳಿದರೂ ಆಟೊಮೇಶನ್ ಮತ್ತು ಕೃತ್ರಿಮ ಜಾಣ್ಮೆ ಈ ಎರಡು ಪದಗಳು ಇತ್ತೀಚಿನ ದಿನಗಳಲ್ಲಿ ಮಾಡುತ್ತಿರುವ ಸದ್ದು ಅಷ್ಟಿಷ್ಟಲ್ಲ. ಎಂಜಿನಿಯರಿಂಗ್, ಉತ್ಪಾದನಾ ಕ್ಷೇತ್ರ, ಆಟೋಮೊಬೈಲ್ಸ್, ಐಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅದಾಗಲೇ ಆಟೊಮೇಶನ್ ಮತ್ತು ಕೃತ್ರಿಮ ಜಾಣ್ಮೆ ದೊಡ್ಡ ಮಟ್ಟದಲ್ಲಿ ಧೂಳನ್ನೆಬ್ಬಿಸಲು ಸನ್ನದ್ಧವಾಗಿವೆ. ತಜ್ಞರ ಪ್ರಕಾರ 2021ರ ವೇಳೆಗೆ 10ರಲ್ಲಿ 4 ಜನ ಕೆಲಸ ಕಳೆದುಕೊಳ್ಳಲಿದ್ದಾರೆ ಮತ್ತು ಇದರಲ್ಲಿ ಒಬ್ಬ ಭಾರತೀಯನಾಗಿರುತ್ತಾನೆ.! ಎಲ್ಲಾ ಉದ್ಯೋಗ ಕ್ಷೇತ್ರಗಳನ್ನೂ ಬೆಂಬಿಡದ ಪೆಡಂಭೂತವಾಗಿ ಆಟೊಮೇಶನ್ ಮತ್ತು ಆರ್ಟಿಫಿಷಿಯಲ್ ಇಂಟಲಿಜಾನ್ಸ್ ಕಾಡುತ್ತಿದೆ!