ಅಂಕಣ

೬೧. ಒಳಗ್ಹೊರಗಿನ ದನಿಯದ್ವೈತ, ಪರಬೊಮ್ಮವದಾಗಿ ಪ್ರತ್ಯಕ್ಷ !

ನಕ್ಷತ್ರಮಂಡಲದಿನಾಚೆಯಿಂದೊಂದು ದನಿ |
ವಕ್ಷೋಗುಹಾಂತರದಿನೊಂದು ದನಿಯಿಂತೀ ||
ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ |
ಪ್ರೇಕ್ಷೆ ಪರಬೊಮ್ಮನದು – ಮಂಕುತಿಮ್ಮ || ೬೧ ||

ಮೊದಲಿನ ಹಲವಾರು ಪದ್ಯಗಳಲ್ಲಿ ಪರಬ್ರಹ್ಮದ ಇರುವಿಕೆ, ಸ್ವರೂಪದ ಕುರಿತಾದ ಪ್ರಶ್ನೆ-ಟೀಕೆಯನ್ನು ಹರಿಸಿದ್ದ ಕವಿ ಮನ ಬಹುಶಃ ಕಾಲ ಕಳೆದಂತೆಲ್ಲ ಅನುಭವದ ಮೂಸೆಯಡಿ ಪಕ್ವಗೊಂಡೊ, ಜಿಜ್ಞಾಸೆಯ ಆಳದಡಿ ಸಂದೇಹ-ಸಂದಿಗ್ದಗಳನ್ನು ಪರಿಹರಿಸಿಕೊಂಡೊ ತನ್ನ ನಿಲುವಿನ ಕಾಠಿಣ್ಯತೆಯ ತುಸು ಪಾಲನ್ನು ಸಡಿಲಗೊಳಿಸಿಕೊಂಡಿರಬೇಕು. ಆ ಕುರುಹುಗಳು ಈ ಮೇಲಿನ ಪದ್ಯದಂತೆ ಹಲವಾರು ಪದ್ಯಗಳಲ್ಲಿ ಎದ್ದು ಕಾಣುತ್ತದೆ.

ನಕ್ಷತ್ರಮಂಡಲದಿನಾಚೆಯಿಂದೊಂದು ದನಿ |

ಇಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಿರುವ ವಿಷಯ – ಯಾವುದಾದರೊಂದು ರೀತಿಯಲ್ಲಿ ಕಾಣಿಸಿಕೊಳ್ಳುವ (ಪ್ರೇಕ್ಷೆ, ಸಾಕ್ಷಾತ್ಕಾರ) ಅಥವ ಅನುಭವವಕ್ಕೆ ನಿಲುಕುವ ಪರಬ್ರಹ್ಮ ಸ್ವರೂಪ. ಭೌತಿಕ ಇಂದ್ರೀಯಗಳ ನೆರವಿಲ್ಲದೆಯೂ ಅನುಭವಕ್ಕೆ ಬರುವ ಅಂತರ್ದನಿಗಳ ಕುರಿತು ಆಡುತ್ತಿರುವ ಮಾತಿದು. ಮೊದಲಿನೆರಡು ಸಾಲುಗಳು ಆ ಅಭೌತಿಕ ಸ್ತರದ, ಅಲೌಕಿಕ ದನಿಯ ಕುರುಹನ್ನು ಬಳಸಿಕೊಳ್ಳುತ್ತದೆ – ಬ್ರಹ್ಮಸಾಕ್ಷಾತ್ಕಾರ ಸಾಧ್ಯತೆಯನ್ನು ತಾತ್ವಿಕವಾಗಿ ನಿರೂಪಿಸಲು. ನಕ್ಷತ್ರಮಂಡಲದ ಆಚೆಯಿಂದ ಅದಾವುದೊ ದನಿತರಂಗವೊಂದು ನಮ್ಮಲ್ಲಿಗೆ ಬರುತ್ತಿರುತ್ತದೆಯಂತೆ ಅವಿರತವಾಗಿ – ತನ್ನ ನಿರಂತರ ಇರುವಿಕೆಯನ್ನು ಸೂಚಿಸುತ್ತ. ಅದು ಎಲ್ಲಿಂದ ಹೇಗೆ ಬರುತ್ತಿದೆಯೆಂಬ ಅರಿವು ನಮಗಿಲ್ಲದ ಕಾರಣ, ಅದೇನೆಂದು ವಿವರಿಸಿ ಹೇಳಲಾಗದು. ಆದರೆ ಅದು ನಮ್ಮೊಡನೆ ವ್ಯಕ್ತಿಗತ ಸ್ತರದಲ್ಲಿ ತೊಡಗಿಸಿಕೊಳ್ಳುವ ಸಂವಹನದ ದೆಸೆಯಿಂದ, ಯಾವುದೋ ಉದ್ದೇಶ-ಗುರಿ ಹಿಡಿದೇ ನಮ್ಮತ್ತ ಬರುತ್ತಿರಬೇಕು ಎನ್ನುವುದಂತೂ ಸ್ಪಷ್ಟ. ಕವಿಭಾವದಲ್ಲಿ ಹೇಳುವುದಾದರೆ ಅದು ಪರಬ್ರಹ್ಮ ಮೂಲದಿಂದ ಹೊರಟ, ಆಕಾಶದ ಯಾವುದೊ ಅರಿವಿಗೆಟುಕದ ಮೂಲೆಯಿಂದ ಬರುತ್ತಿರುವ ಸಂದೇಶ, ಆದೇಶದ ದನಿ. ಬಳಕೆಗೆ ಸಿದ್ದವಾದ ಮೂಲವಸ್ತುವಿನಂತೆ ನಮ್ಮೊಳಹೊರಗನ್ನಾವರಿಸಿಕೊಂಡು ನಿರ್ಲಿಪ್ತ-ನಿಷ್ಪಕ್ಷಪಾತ ಅಸ್ತಿತ್ವದಲ್ಲಿರುತ್ತದೆ – ಬೇಕಾದಾಗ ಉಪಯೋಗಕ್ಕೆ ದೊರಕುವ ಹಾಗೆ. ಇದು ಹೊರಗಿನಿಂದ ಬರುತ್ತಿರುವ ದನಿ.

ವಕ್ಷೋಗುಹಾಂತರದಿನೊಂದು ದನಿಯಿಂತೀ ||

ಅದೇ ಹೊತ್ತಿನಲ್ಲಿ ನಮ್ಮ ನಿಚ್ಚಳ ಅನುಭವಕ್ಕೆ ಬರುವ ಮತ್ತೊಂದು ದನಿಯೆಂದರೆ, ನಮ್ಮ ಎದೆಯೊಳಗಿನಿಂದ, ಅಂತರಂಗದ ಗುಹೆಯೊಳಗಿನಿಂದ ಬರುವ ನಮ್ಮೊಳಗಿನದೆನಿಸುವ ದನಿ. ವಕ್ಷೋಗುಹಾಂತರ ಎಂದಾಗ ಹೃದಯದಾಳದಿಂದ ಬಂದ ದನಿ ಎಂದರ್ಥ. ಈ ದನಿ ಮೂಲತಃ ನಿರ್ಲಿಪ್ತ-ನಿಷ್ಪಕ್ಷಪಾತ ಎನ್ನಲಾಗುವುದಿಲ್ಲ. ಅಂತರಂಗದ ಭಾವಗಳು, ಅಂತಃಕರಣದ ಪ್ರಭಾವಗಳು ಅದನ್ನು ಕಲುಷಿತಗೊಳಿಸಿರುತ್ತವೆ. ಈ ಎರಡೂ ದನಿಗಳು (ಅನುಭೂತಿಗಳು) ನಮ್ಮ ಗ್ರಹಿಕೆಗೆ ಸಿಗುವುದರಿಂದ ಅವುಗಳನ್ನು ಸಾಕ್ಷಿಯ ರೂಪವೆಂದು ಪರಿಗಣಿಸುವುದರಲ್ಲಿ ಅಸಹಜತೆ ಅಥವಾ ಅತಾರ್ಕಿಕತೆಯೇನೂ ಇಲ್ಲ.

ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ |
ಪ್ರೇಕ್ಷೆ ಪರಬೊಮ್ಮನದು – ಮಂಕುತಿಮ್ಮ ||

ಆದರೆ ಇವೆರಡು ದನಿಗಳ ಇರುವಿಕೆಯ ಸುಳಿವು ಸಿಕ್ಕಿತೆಂದ ಮಾತ್ರಕ್ಕೆ ಪರಬ್ರಹ್ಮದ ಸಾಕ್ಷಾತ್ಕಾರವಾದಂತಾಯಿತು, ಇರುವಿಕೆಗೆ ಸಾಕ್ಷಿ ಸಿಕ್ಕಿತು ಎನ್ನಲಾದೀತೆ? ಖಂಡಿತ ಇಲ್ಲ. ಜೀವಾತ್ಮ, ಪರಮಾತ್ಮದ ಈ ಎರಡು ದನಿಗಳು ಪರಬ್ರಹ್ಮದ ಅಸ್ತಿತ್ವಕ್ಕೆ, ಗ್ರಹಿಕೆಗೆ ಎರಡು ಪೂರಕ ಸಾಕ್ಷಿಗಳಿದ್ದ ಹಾಗೆ. ಆದರೆ ನಮಗೆ ಅದರ ಅರಿವಾಗುವುದು ಅವೆರಡು ಏಕೀಭವಿಸಿದಾಗ ಮಾತ್ರ. ಅದಾಗುವತನಕ ಬರಿಯ ಗೊಂದಲ, ಅಪರಿಪೂರ್ಣತೆಗಳು ಕಾಡುತ್ತಿರುತ್ತವೆ. ಇವೆರಡು ದನಿಗಳ ನಡುವಿನ ಅಂತರವೇ ಸೂಕ್ತಾಸೂಕ್ತತೆಗಳ ನಡುವಿನ ವ್ಯತ್ಯಾಸವೆಂದು ಹೇಳಬಹುದು. ಆದರೆ ಯಾವಾಗ ಇವೆರಡು ದನಿಗಳು ನಮ್ಮೊಳಗೆ ಒಂದುಗೂಡಿ ಸಮ್ಮಿಳಿತವಾಗುತ್ತವೆಯೊ, ಯಾವಾಗ ಎರಡೂ ಒಂದೇ ಸ್ತರದಲ್ಲಿ, ಒಂದೇ ರೀತಿ ಚಿಂತಿಸಲು ಮತ್ತು ವರ್ತಿಸಲು ಆರಂಭಿಸುತ್ತವೆಯೋ ಆಗ, ಅಲ್ಲುಂಟಾಗುವ ತಾದಾತ್ಮಕತೆಯ ಭಾವದಿಂದ ಏಕತ್ವದ ಅದ್ವೈತ ಸ್ವರೂಪ ಕಾಣಿಸಿಕೊಳ್ಳುತ್ತದೆ. ಆಗ ಆ ಏಕೋಭಾವ ಮಿಲನದಲ್ಲಿ ಪರಬ್ರಹ್ಮಸಾಕ್ಷಾತ್ಕಾರದ ಪ್ರಕ್ಷೇಪವಾಗುತ್ತದೆ, ಪರಬ್ರಹ್ಮದ ಅಂತರ್ದರ್ಶನ ಮಾಡಿಸುತ್ತದೆ ಎನ್ನುವ ಭಾವ ಇಲ್ಲಿ ವ್ಯಕ್ತವಾಗಿದೆ.

ಸಾರಾಂಶದಲ್ಲಿ ಹೇಳುವುದಾದರೆ, ನಮ್ಮನ್ನೆಲ್ಲ ಸೃಜಿಸಿದ ಆ ಮೂಲಶಕ್ತಿ, ನಮ್ಮೊಡನೆಯ ಸಂಬಂಧವನ್ನು ನಾವು ಭೌತಿಕವಾಗಿ ಗ್ರಹಿಸಲಾಗದ ಅಂತರ್ದನಿಯೊಂದರ, ಸಾಕ್ಷಿಪ್ರಜ್ಞೆಯೊಂದರ ರೂಪದಲ್ಲಿ ಏರ್ಪಡಿಸಿಕೊಂಡಿರುತ್ತದೆ – ನಿರಂತರವಾಗಿ. ಆಗಾಗ ಆ ಮತ್ತೊಂದು ದನಿಯ ಅವ್ಯಕ್ತ ಕುರುಹು, ಸುಳಿವು ಸಹ ಸಿಗುತ್ತಲೆ ಇರುತ್ತದೆ. ಇದರೊಂದಿಗೆ ನಮಗೆಲ್ಲರಿಗು ನಮ್ಮೊಳಗಿನ ಹೃದಯದ ಇನ್ನೊಂದು ದನಿಯ ಅನುಭವವಾಗುತ್ತಲೆ ಇರುತ್ತದೆ. ಅದರ ಭೌತಿಕ ಆಯಾಮದಿಂದಾಗಿ ಅದರ ಗ್ರಹಿಕೆ ಸುಲಭ ಗ್ರಾಹ್ಯ. ಮೊದಲಿನದು ಪರಿಶುದ್ಧ ಅಸ್ತಿತ್ವದ ಶಿಖರ ರೂಪವಾದರೆ ಎರಡನೆಯದು ಪರಿಸರದ ಪ್ರಭಾವಕ್ಕೆ ಸಿಲುಕಿ ಅದರಂತೆ ಪ್ರವರ್ತಿಸುವ ಸ್ವಭಾವದ್ದು. ಈ ಎರಡನೆಯ ದನಿ, ಮೊದಲನೆಯದನ್ನು ಅರ್ಥೈಸಿಕೊಂಡು ತನ್ನನ್ನು ಅದರೊಡನೆ ಸಮೀಕರಿಸಿಕೊಳ್ಳುತ್ತ, ಅದರಂತೆಯೇ ತಾನೂ ಆಗಲು ಹೊರಡಬೇಕು, ಹೋರಾಡಬೇಕು. ಅದಾದಾಗ ಪರಬ್ರಹ್ಮದ ದರ್ಶನವಾಗುತ್ತದೆ. ಆದರೆ ದೈನಂದಿನ ಜಂಜಾಟಗಳಲ್ಲಿ ಸಿಲುಕಿದ ನಾವು, ಅವೆರಡನ್ನು ಸಮೀಕರಿಸಿ, ಸಮಷ್ಟಿಸಲಾಗದೆ ಇರುವ ಕಾರಣ ಆ ಪರಬ್ರಹ್ಮದ ದರ್ಶನವಾಗಲಿಕ್ಕೆ ಅವಕಾಶವಾಗುತ್ತಿಲ್ಲ. ಅದರ ಅರಿವು ಮೂಡಿ, ಐಹಿಕದಿಂದ ಹೊರ ಬಂದು ಎರಡು ದನಿಗಳ ಮಿಲನ ಸಾಧನೆಗೆ ಶ್ರಮಿಸಿದರೆ, ಅದರ ಮೂಲಕ ಭಗವಂತನ ಸಾಕ್ಷಾತ್ಕಾರದ ಅನುಭವವಾಗುತ್ತದೆ. ಅದನ್ನು ಅರಿತು ಅದರ ಸಾಕಾರವಾಗಿಸುವತ್ತ ಪ್ರಯತ್ನ ನಡೆಸಬೇಕು ಎನ್ನುವುದು ಇಲ್ಲಿನ ಸಂದೇಶ.

#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!