ಅಂಕಣ

೫೮. ಸೌಮ್ಯ-ರೌದ್ರ ಕೆಳೆಕೂಟ,ಬೆಚ್ಚಿ ಬೆರಗಾಗೋ ಮನದೋಟ..!

ಮಲೆಕಣಿವೆಗಳ ಬೆರಗು ಪ್ರಕೃತಿ ಕೋಪದ ಗುಡುಗು |

ಕೆಳೆಯೊಲವು ನಲ್ಲೆಯ ವಿಯೋಗವಿಂತಹವು ||

ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ |

ನೊಳದನಿಯದೊಂದರಿಂ – ಮಂಕುತಿಮ್ಮ || ೫೮ ||

ಪ್ರಕೃತಿಯ ವೈವಿಧ್ಯಮಯ ರೂಪಗಳು ಮನದಲ್ಲುಂಟು ಮಾಡುವ ಪ್ರಭಾವದ ಮತ್ತೊಂದು ಚಿತ್ರಣ ಈ ಕಗ್ಗದಲ್ಲಿ ಕಾಣುತ್ತದೆ. ಆ ನಿಸರ್ಗ ಲೀಲೆಯ ಪರಿಣಾಮ ಒಳಿತೆ ಆಗಲಿ ಕೆಡುಕೆ ಆಗಲಿ – ಅದರ ಹಿನ್ನಲೆಯಲ್ಲಿರುವ ಅಪಾರ ಶಕ್ತಿಯ ಮನವರಿಕೆಯಾಗುವುದು ಅವುಗಳ ಫಲಿತ ದರ್ಶನವಾದಾಗಲಷ್ಟೆ. ಸೋಜಿಗವೆಂದರೆ ಒಂದೇ ಮೂಲಶಕ್ತಿ ವಿಹಂಗಮ ಭವ್ಯತೆಗೆ ಕಾರಣವಾದಂತೆ, ವಿಪರೀತ ವಿನಾಶಕ್ಕೂ ದಾಯಿತ್ವ ಹೊಂದಿರುವುದು. ದೈವಿಕ ಶಕ್ತಿಯ ಒಂದೇ ಮೂಲದನಿ ಎಲ್ಲದರ ಹಿಂದಿನ ಪ್ರೇರಕ ಶಕ್ತಿಯಾಗಿದ್ದುಕೊಂಡು ತಾಮಸ, ರಾಜಸ, ಸಾತ್ವಿಕ ಗುಣಗಳ ವಿಭಿನ್ನ ಆಯಾಮಗಳಲ್ಲಿ ತನ್ನ ಛಾಪು ಒತ್ತುವ ವಿಸ್ಮಯಕ್ಕೆ ಬೆರಗಾಗುವ ಕವಿಮನದ ಭಾವ ಇಲ್ಲಿ ಅನುರಣಿತ.

ನಮಗೆಲ್ಲ ತಿಳಿದಂತೆ ನಾವೇನೆ ಮಾಡುತ್ತಿರಲಿ – ಕೂತಿರಲಿ, ನಿಂತಿರಲಿ, ಕೆಲಸದಲ್ಲಿ ತೊಡಗಿಕೊಂಡಿರಲಿ, ಮಾತನಾಡುತ್ತಿರಲಿ – ನಮ್ಮ ಮನ ಮಾತ್ರ ಎಂದಿಗೂ ನಿಲ್ಲದ ಸತತ ಓಟವೊಂದರಲ್ಲಿ ನಿರತವಾಗಿರುತ್ತದೆ. ಸದಾ ಯಾವುದೊ ಚಿಂತನೆ, ಆಲೋಚನೆ, ಕಲ್ಪನೆಯ ಭ್ರಮಾವಿಲಾಸದಲ್ಲಿ ತನ್ನನ್ನೆ ನಿರತವಾಗಿಸಿಕೊಂಡ ಮನದೋಟ ಎಂದಿಗು ನಿಲ್ಲುವುದೆ ಇಲ್ಲವೇನೊ ಎನ್ನುವ ಅನುಮಾನ ಬರುವಷ್ಟು ಮಟ್ಟಿಗಿನ ಕಾರ್ಯಕ್ಷಮತೆ ಅದರದು. ಆದರೆ ಅಂತಹ ಅಸಾಧಾರಣ ಮನದೋಟಕ್ಕೂ ಅಡ್ಡಗಾಲು ಹಾಕಿ ನಿಲ್ಲಿಸುವ ಶಕ್ತಿಯಿರುವುದು – ಕೇವಲ ಕೆಲವೇ ಕೌತುಕಮಯ ವಿಸ್ಮಯಗಳಿಗೆ ಮಾತ್ರ.

“ಮಲೆಕಣಿವೆಗಳ ಬೆರಗು ಪ್ರಕೃತಿ ಕೋಪದ ಗುಡುಗು”

ಅದು ಮಲೆ-ಕಣಿವೆಗಳ ಬೆರಗು ಹುಟ್ಟಿಸುವ ಅಗಾಧ, ಅದ್ಭುತ ಸೌಂದರ್ಯವಾಗಿರಬಹುದು; ಪ್ರಕೃತಿ-ರೋಷದ ಅಪರಾವತಾರದಂತೆ ತೋರುವ ಗುಡುಗು-ಸಿಡಿಲಾಗಿರಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ – ಇವೆರಡು ಪ್ರಕೃತಿಯ ಸಂಘಟನೆಗಳೇ ಆದರೂ, ಪರಸ್ಪರ ವಿರುದ್ಧ ಸ್ವರೂಪವನ್ನು ಪ್ರತಿನಿಧಿಸುವಂತಹವು. ಮಲೆ-ಕಣಿವೆಗಳು ಸ್ಥಾಯಿರೂಪದಲ್ಲಿ ಅಚಲವಾಗಿ ನಿಂತ ರಮಣೀಯ ಸೌಂದರ್ಯದ ಪ್ರತಿಬಿಂಬವಾದರೆ, ಗುಡುಗು ಸಿಡಿಲಾಗಿ ಪ್ರಕೃತಿ ವಿಕೋಪದ ಕರಾಳ ಸ್ವರೂಪ ತೋರುವ ಪರಿಯಲ್ಲೂ ಮತ್ತೊಂದು ಬಗೆಯ ರೌದ್ರ-ರಮಣೀಯ ಸೌಂದರ್ಯದ ಲೇಪನವಿದೆ. ಒಂದೆಡೆ ಸೌಮ್ಯರೂಪ ತೋರುವ ನಿಸರ್ಗ ಮತ್ತೊಂದೆಡೆ ಭಯಾನಕ ಮುಖವನ್ನು ಪ್ರದರ್ಶಿಸುತ್ತ ತನ್ನ ವ್ಯಾಪ್ತಿ, ವೈವಿಧ್ಯಗಳನ್ನು ಅನಾವರಣಗೊಳಿಸುತ್ತದೆ. ಆದರೆ ಇವೆರಡೂ ಎಲ್ಲೋ ಓಡುವ ಮನದ ಓಘಕ್ಕೆ ತಡೆಹಾಕಿ ತಮ್ಮ ಕಡೆಗೆ ಗಮನವಿಯುವಂತೆ ತಿರುಗಿಸಿಕೊಳ್ಳಬಲ್ಲ ಸಾಮರ್ಥ್ಯವುಳ್ಳವು – ಮುದಾನುಭವದಿಂದಲಾದರೂ ಸರಿ, ಭೀತಿಯ ಪ್ರೇರಣೆಯಿಂದಾದರೂ ಸೈ..! ಇವೆರಡೂ ಬದುಕೆಂಬ ತೋಟದಲ್ಲಿ ಎದುರಾಗುವ ಕಷ್ಟಾಸುಖಗಳ ಸಂಕೇತವೂ ಹೌದು. ಬೇರೆಲ್ಲೊ ಹರಿದಾಡುವ ಮನಸಿನ ಹೆಡೆಮುರಿ ಕಟ್ಟಿ ತಮ್ಮತ್ತ ಗಮನವೀಯುವಂತೆ ಮಾಡಬಲ್ಲ ಸಾಮರ್ಥ್ಯ ಇವುಗಳದು.

“ಕೆಳೆಯೊಲವು ನಲ್ಲೆಯ ವಿಯೋಗವಿಂತಹವು”

ಸಂಗಾತಿಯೆಡೆಗೆ ಇರುವ ಒಲವು ನಮ್ಮಲ್ಲಿರುವ ಸಹಜ ಪ್ರವೃತ್ತಿ. ಆದರೆ ಆ ಒಲವು ಸ್ನೇಹ, ಗೆಳೆತನದಂತಹ ‘ಪರಸ್ಪರರನ್ನು ಗೌರವಭಾವದಿಂದ ಕಾಣುವ’ ವಿನಯವನ್ನೂ ಮೈಗೂಡಿಸಿಕೊಂಡಿದ್ದರೆ ಅದೊಂದು ಅದ್ಭುತವಾದ ಮಧುರ ಅನುಭೂತಿ ಎಂದೆನಿಸುವುದು. ಹಾಗೆಯೇ, ಅಂತಹ ಸಂಗಾತಿಯ ವಿಯೋಗವಾದಾಗ ಉಂಟಾಗುವ ಖೇದ, ವಿಷಾದ, ದುಃಖಕ್ಕೆ ಯಾವ ಮದ್ದೂ ಪರಿಹಾರ ನೀಡಲು ಸಾಧ್ಯವಾಗದು. ಇವೆರಡೂ ಸಹ ಸುಖದುಃಖವೆಂಬ ವಿರುದ್ಧ ತುದಿಗಳ ಆರಾಧನೆ-ತಪನೆ-ಯಾತನೆಯಾದರು, ಎರಡಕ್ಕೂ ಮನವನ್ನು ತನ್ನೆಡೆಗೆ ತಿರುಗಿಸಿಕೊಂಡು ನಿಯಂತ್ರಿಸುವ ಸಾಮರ್ಥ್ಯವಿದೆ.

“ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ”

ಬೆಟ್ಟಗುಡ್ಡಗಳ ಪ್ರಕೃತಿ ಸೌಂದರ್ಯವಾಗಿರಬಹುದು, ಪ್ರಕೃತಿ ವಿಕೋಪದ ಪ್ರಕಟರೂಪಗಳಾಗಿರಬಹುದು;

ಮಾತಿನಲಿ ಹಿಡಿದಿಡಲಾಗದ ಅವರ್ಣನೀಯ ಗೆಳೆತನದ ಪ್ರೀತಿಯಾಗಿರಬಹುದು ಅಥವಾ ಮನಸಾರೆ, ಪ್ರಾಣಕ್ಕಿಂತಲು ಹೆಚ್ಚು ಪ್ರೀತಿಸಿದ್ದ ನಲ್ಲೆ ಜತೆಗಿರದ ವಿಯೋಗವನ್ನು ಸಹಿಸುತ್ತ ಕೊರಗುವ ತೀವ್ರತೆಯ ಪರಿಯಿರಬಹುದು – ಅವೆಲ್ಲವು ತಮ್ಮದೆ ಆದ ರೀತಿಯಲ್ಲಿ, ಓಡುವ ಮನಕ್ಕೊಂದು ತಡೆಯೊಡ್ಡಿ ನಿಲ್ಲಿಸುವುದಷ್ಟೆ ಅಲ್ಲದೆ, ತಮ್ಮದೇ ಗುಂಗಿನಲ್ಲಿ ಸೆರೆ ಹಿಡಿದು ಮೈಮರೆಸಿ ಮೂಕವಿಸ್ಮಿತವಾಗಿಸಿಬಿಡುವುವು. ಇಲ್ಲಿ ಮನದೋಟ ಎನ್ನುವುದನ್ನು ‘ಮನದ ತೋಟ’ ಎನ್ನುವ ಭಾವದಲ್ಲೂ ಅರ್ಥೈಸಬಹುದು – ತೋಟದ ಹೂವು, ಗಿಡ, ಮರ, ಬಳ್ಳಿ ಇತ್ಯಾದಿಗಳ ನೈಸರ್ಗಿಕ ವಾತಾವರಣಕ್ಕೆ ಸಮೀಕರಿಸುತ್ತ.

“ನೊಳದನಿಯದೊಂದರಿಂ – ಮಂಕುತಿಮ್ಮ”

ಬೇರೆಯ ಹೊತ್ತಲ್ಲಿ ಬೇಕೆಂದರೂ ನಿಲ್ಲಿಸಲಾಗದ ಮನದೋಟವನ್ನು ಈ ಬಾಹ್ಯ ಪ್ರಕೃತಿಯ ಭಾವ ಸಂಕಲನಗಳು ಪ್ರಭಾವಿಸಿ ತಮ್ಮತ್ತ ಆಕರ್ಷಿಸಿಕೊಳ್ಳುವುದಂತೆ. ಅದರ ಜತೆಜತೆಗೆ ಅದುವರೆಗೂ ಸುಪ್ತವಾಗಿದ್ದ, ಪ್ರಕಟವಾಗದೆ ಮರೆಯಾಗಿದ್ದ ಅಂತರಂಗದದಾವುದೊ ಒಳದನಿಯೊಂದನ್ನು ಬಡಿದೆಬ್ಬಿಸಿ ಜಾಗೃತವಾಗಿಸಿಬಿಡುತ್ತದೆಯಂತೆ. ಒಳದನಿಯ ಆ ಧ್ಯಾನಸ್ಥ ಸಮಾಧಿ ಸ್ಥಿತಿಯಲ್ಲಿ ಸಾಮಾನ್ಯ ಸ್ಥಿತಿಯಲ್ಲಾಗದ ಅದೆಷ್ಟೋ ಅದ್ಭುತಗಳು ನಡೆದುಹೋಗುತ್ತವೆ (ಉದಾಹರಣೆಗೆ : ಕಾವ್ಯ ಸೃಷ್ಟಿಯ ಹಾಗೆ). ಇದೆಲ್ಲಾ ಸಂಧರ್ಭಗಳಲ್ಲೂ ಅನುಭವ, ಅನುಭೂತಿಗಳು ವಿಭಿನ್ನವಾದರೂ ಜಾಗೃತವಾಗುವ ಮೂಲದನಿ ಮಾತ್ರ ಒಂದೇ; ಅದರಿಂದುದ್ಭವಿಸುವ ಪುಳಕ-ಕ್ಲೇಷಗಳು ಒಂದೇ ತರದ ಪರಿಣಾಮ ಉಂಟುಮಾಡುವಂತಹವು ಎಂದು ಹೇಳುತ್ತಿದ್ದಾನಿಲ್ಲಿ ಮಂಕುತಿಮ್ಮ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!