ಅಂಕಣ

ಹೆಚ್ಚಾಗುತ್ತಿದೆ ರಾನ್ಸಮ್ವೇರ್ ಎಂಬ ದರೋಡೆಕೋರನ ಅಟ್ಟಹಾಸ

21ನೇ ಶತಮಾನ ಮಾಹಿತಿ ತಂತ್ರಜ್ಞಾನಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಣೆ ಮಾಡಿಕೊಂಡಿದೆ. ಇಂದು ನಾವು ತಂತ್ರಜ್ಞಾನವೆಂಬ ಮಣೆಯ ಮೇಲೆ ಕೂತು ಬೆರಳ ತುದಿಯಿಂದ ಪ್ರಪಂಚವನ್ನೇ ಆಡಿಸುತ್ತಿದ್ದೇವೆ. ಈಗೇನಿದ್ದರೂ ಅಂಗೈಯಲ್ಲೇ ಅಂತರ್ಜಾಲ. ಹೀಗಿರುವಾಗ ಮಾನವ ತಾನೇ ತನ್ನ ಬುದ್ಧಿಶಕ್ತಿಯಿಂದ ಬೆಳೆಸಿದ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಂಡು ಹೋಗುವುದೆ ದೊಡ್ಡ ಸವಾಲಾಗಿರುವ ವಿಷಯ. ಹೌದು ಜಗತ್ತಿನಲ್ಲಿ ನಡೆಯುತ್ತಿರುವ ಹಾಗೂ ನಡೆದುಹೋಗಿರುವ ದೊಡ್ಡ ದೊಡ್ಡ ಯುದ್ಧಗಳ ಸಾಲಿಗೆ ಈ ಸೈಬರ್ ಅಟ್ಯಾಕ್ (Cyber Attack) ಎಂಬ ಸಾಫ್ಟ್’ವೇರ್ ಯುದ್ಧವೂ ಸೇರಿಕೊಳ್ಳುತ್ತದೆ ಎಂದರೆ ತಪ್ಪಾಗಲಾರದು. ಒಂದು ಸಣ್ಣ ಮಾಲ್’ವೇರ್ (Malware) ಎಂಬ ಹೆಸರು ಹೊತ್ತ ಸಾಫ್ಟ್’ವೇರ್ ತಂತ್ರಾಂಶ ದೊಡ್ಡ‌ ದೊಡ್ಡ ಮಾಹಿತಿಯನ್ನು ಹೊತ್ತ ಕಂಪ್ಯೂಟರ್’ಗಳನ್ನು ವಶಪಡಿಸಿಕೊಂಡು ಬೀಗ ಜಡಿದುಬಿಡುತ್ತವೆ ಎಂದರೆ ಊಹಿಸಿ ಸೈಬರ್ ಅಟ್ಯಾಕ್ ಎಂಬ ಭೂತದ ಅಟ್ಟಹಾಸ ಎಷ್ಟಿರಬಹುದು. ಮಾನವ ತಾನು ಒಳ್ಳೆ ಕೆಲಸಗಳಿಗಾಗಿ ಕಂಡುಹಿಡಿದ  ತಂತ್ರಜ್ಞಾನಗಳೇ ಇಂದು ಅವನಿಗೆ ಮುಳುವಾಗುತ್ತಿವೆ ಅನ್ನಿಸುತ್ತಿದೆ. ಇಷ್ಟೆಲ್ಲಾ ಪೀಠಿಕೆ ಯಾಕೆ ಹಾಕುತ್ತಿದ್ದೇನೆ ಎಂದರೆ, ಅದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಬಹಳಾ ಸುದ್ದಿ ಮಾಡುತ್ತಿರುವ ರಾನ್ಸಮ್ವೇರ್ (Ransomware) ಎಂಬ ಸಾಫ್ಟ್’ವೇರ್ ಭೂತವೇ ಕಾರಣ. ಅಯ್ಯೋ ಇದು ನಮಗೆ ಸಂಬಂಧವಿಲ್ಲದ ವಿಷಯ ಎಂದು ಉಢಾಫೆ ತೋರದಿರಿ. ಯಾಕೆಂದರೆ ನಾವೆಲ್ಲರೂ ಒಂದಿಲ್ಲೊಂದು ಕಾರಣಕ್ಕಾಗಿ ಇಂದು ಇಂಟರ್ನೆಟ್, ಸ್ಮಾರ್ಟ್’ಫೋನ್ ಹಾಗೂ ಕಂಪ್ಯೂಟರ್’ಗಳನ್ನು ಬಳಸುತ್ತೇವೆ. ಹಾಗೂ ಇವುಗಳು ನಮ್ಮ ದಿನನಿತ್ಯ ಜೀವನದ ಅವಶ್ಯಕತೆಗಳಲ್ಲಿ ಬೆರೆತುಹೋಗಿವೆ.

ರಾನ್ಸಮ್ವೇರ್ ಎಂಬುದು ಕಳೆದ ಕೆಲ ವರ್ಷಗಳಿಂದ ಕಾಣಿಸಿಕೊಂಡಿರುವ ವಿಚಿತ್ರವಾದ ಸೈಬರ್ ಅಟ್ಯಾಕ್. ಇದು ನಿಮ್ಮ ಕಂಪ್ಯೂಟರ್’ನಲ್ಲಿರುವ ಕಡತಗಳನ್ನು (Files) ಎನ್’ಕ್ರಿಪ್ಟ್ (Encrypt) ಮಾಡಿ ಅವುಗಳನ್ನು ಬಳಸಲು ಅಸಾಧ್ಯವಾಗುವಂತೆ ಮಾಡಿಬಿಡುತ್ತವೆ. ಒಂಥರಾ ಬೀಗ ಜಡಿದಂತೆ. ತದನಂತರ ನಿಮ್ಮ ಕಂಪ್ಯೂಟರ್’ನ ಪರದೆಯ ಮೇಲೆ ಈ ಕುತಂತ್ರಿಗಳು ಒಂದಷ್ಟು ಬೇಡಿಕೆಗಳನ್ನಿಡುತ್ತಾರೆ. ನೀವು ಈ ಬೇಡಿಕೆಗಳನ್ನು ಪೂರೈಸಿದರೆ ನಿಮ್ಮ ಕಂಪ್ಯೂಟರ್’ಗೆ ಜಡಿದ ಬೀಗವನ್ನು ತೆರೆಯುತ್ತೇವೆ ಎಂಬ  ಸಂದೇಶ ಕಂಪ್ಯೂಟರ್ ಪರದೆಯ ಮೇಲೆ ಬಂದು ನಿಂತುಬಿಡುತ್ತದೆ. ನೀವು ಪಾವತಿಸಬೇಕಾದ ಹಣ ಬಿಟ್’ ಕಾಯಿನ್ (Bit Coin) ರೂಪದಲ್ಲಿರುತ್ತದೆ. ಇದು ಒಂಥರಾ ಯಾರಿಗೂ ಕಾಣದ ಹಣ (Virtual Money).  ಒಂದು ಬಿಟ್ ಕಾಯಿನ್’ನ ಮೊತ್ತ ಎಷ್ಟುಗೊತ್ತೆ. ಬರೋಬ್ಬರಿ 1.14 ಲಕ್ಷ. ಈಗಷ್ಟೇ ಭಾರತ ಪ್ರವೇಶಿಸುತ್ತಿರುವ ಈ ರಾನ್ಸಮ್ವೇರ್ ಎಂಬ ಸೈಬರ್ ಭೂತ, ಅದಾಗಲೇ ಆಂಧ್ರ ಪ್ರದೇಶದ ಆರಕ್ಷಕ ಠಾಣೆಗೆ ಸಂಬಂಧಿಸಿದ ಹಲವಾರು ಕಂಪ್ಯೂಟರ್’ಗಳನ್ನುಸೇರಿಕೊಂಡಿವೆಯಂತೆ. ಈ ಮಾಲ್ವೇರ್ ಹುಟ್ಟಿಸಿರುವ ಆತಂಕ ಅಷ್ಟಿಷ್ಟಲ್ಲ. ಹೀಗೇ ಮುಂದುವರಿದು ರೇಲ್ವೆ, ಆಸ್ಪತ್ರೆ, ಖಾಸಗಿ ಸಂಸ್ಥೆಗಳು ಹಾಗೂ ಇನ್ನಿತರ ಸರ್ಕಾರಿ ಸೇವೆಗಳನ್ನೂ ಆವರಿಸಿಬಿಟ್ಟರೆ ಇದರಿಂದಾಗುವ ಸಮಸ್ಯೆಯನ್ನು ಊಹಿಸಲೂ ಅಸಾಧ್ಯ.

ಸದ್ಯ ಈ ರಾನ್ಸಮ್ವೇರ್ ಎಂಬ ಸೈಬರ್ ಅಟ್ಯಾಕ್’ನಿಂದ ನಾವು ಬಳಸುವ ಕಂಪ್ಯೂಟರ್’ಗಳನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದೇ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ. ಹಾಗಾದರೆ ಇದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲವೆ. ಹೇಗೆ ಒಮ್ಮೆ ವೈರಸ್ ವಾತಾವರಣದೊಳಗೆ ಅಥವಾ ಯಾವುದೋ ಒಂದು ಜೀವಿಯ ಒಳಗೆ ಸೇರಿ ಇತರರಿಗೂ ಹರಡುತ್ತಾ ಹೋಗುತ್ತದೆಯೋ ಹಾಗೆಯೇ ಈ ಮಾಲ್ವೇರ್’ಗಳೂ ಸಹಾ. ಯಾರು ಏತಕ್ಕೋಸ್ಕರ ಬಿಟ್ಟರು ಎಂಬುದನ್ನು ಕಂಡು ಹಿಡಯುವ ಜೊತೆ ಜೊತೆಗೆ ನಮ್ಮ ಕಂಪ್ಯೂಟರ್’ಗಳನ್ನು ಸುರಕ್ಷಿತವಾಗಿ ಬಳಸಬೇಕಾಗಿರುವುದು ಬಹಳ ಮುಖ್ಯ.

ಈ ರಾನ್ಸಮ್ವೇರ್ ಭೂತದ ಹೆಸರು ವಾನ್ನಕ್ರೈ (WannaCry). ಇದು ಹೇಗೆ ನಿಮ್ಮ ಕಂಪ್ಯೂಟರ್ ಒಳಗೆ ಬಂದು ಕೂರುತ್ತದೆ ಎಂಬುದೇ ದೊಡ್ಡ ಪ್ರಶ್ನೆ. ನೀವು ಸರಿಯಾದ ಸುರಕ್ಷತಾ ಕ್ರಮವನ್ನು ನಿಮ್ಮ ಕಂಪ್ಯೂಟರ್’ನಲ್ಲಿ ಅಳವಡಿಸದೇ ಅಂತರ್ಜಾಲಕ್ಕೆ ಸಂಪರ್ಕ ಸಾಧಿಸುತ್ತಿದ್ದೀರಿ ಎಂದರೆ, ನಿಮ್ಮ ಕಂಪ್ಯೂಟರ್ ಅಪಾಯದ ಅಂಚಿನಲ್ಲಿದೆ ಎಂದೇ ಅರ್ಥ. ಈ ಮಾಲ್ವೇರ್ ನಿಮಗೆ ತಿಳಿಯದಂತೆ ಯಾವುದೋ ಲಿಂಕ್’ಗಳ ರೂಪದಲ್ಲಿ ಅಥವಾ ಸಣ್ಣ ತಂತ್ರಾಂಶದ ರೀತಿಯಲ್ಲಿ ನಿಮ್ಮ ಕಂಪ್ಯೂಟರ್ ಒಳಹೊಕ್ಕಿಬಿಡುತ್ತವೆ. ಒಳಹೊಕ್ಕಿದ ತಕ್ಷಣ‌ ತನ್ನ ಕೆಲಸ ಪ್ರಾರಂಭಿಸುವ ಈ ರಾನ್ಸಮ್ವೇರ್ ನಿಮ್ಮ ಕಂಪ್ಯೂಟರ್’ನಲ್ಲಿರುವ ಎಲ್ಲಾ ಕಡತಗಳನ್ನು ಒಂದು ಫೈಲ್ ಒಳಗೆ ತಳ್ಳಿ ಬೀಗ ಹಾಕಿಬಿಡುತ್ತವೆ. ನೆನಪಿರಲಿ ಬೀಗದ ಕೈ ನಿಮ್ಮ ಕೈಗೆ ಸಿಗುವುದಿಲ್ಲ. ಇದನ್ನು ಕಂಪ್ಯೂಟರ್ ಭಾಷೆಯಲ್ಲಿ ಹೇಳುವುದಾದರೆ Encryption ಹಾಗೂ Decryption.

ರಾನ್ಸಮ್ವೇರ್ ಅಟ್ಯಾಕ್ ಆಗುತ್ತದೆ ಎಂದು ಕಂಪ್ಯೂಟರ್ ಬಳಸದೆ ಕೂರಲೂ ಸಾಧ್ಯವಿಲ್ಲ. ಒಂದಷ್ಟು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಹಾಗಾದರೆ ಏನು ಮಾಡಬೇಕು.

  1. ನೀವು ಬಳಸುವ ಸಾಫ್ಟ್’ವೇರ್ಗಳು ಅಪ್ಡೇಟ್ ಆಗಿವೆಯೇ ಎಂದು ಪರೀಕ್ಷಿಸಿಕೊಳ್ಳಿ.

ಒಂದು ವೇಳೆ ನೀವು ಬಹಳಾ ಹಳೆಯ ಸಾಫ್ಟ್’ವೇರ್’ಗಳನ್ನು ಬಳಸುತ್ತಿದ್ದರೆ, ದಯವಿಟ್ಟು ಅವುಗಳನ್ನು ಅಪ್ಡೇಟ್ ಮಾಡಿಕೊಳ್ಳಿ. ನೆನಪಿರಲಿ ಈ ಸಾಫ್ಟ್’ವೇರ್’ಗಳು ವಿಶ್ವಾಸಾರ್ಹವೇ (Trusted) ಎಂಬುದನ್ನು ಬಹು ಮುಖ್ಯವಾಗಿ ತಿಳಿದುಕೊಳ್ಳಿ. ನೀವಿನ್ನೂ ವಿಂಡೋಸ್ XP ಆಪರೇಟಿಂಗ್ ಸಿಸ್ಟಮ್ ಬಳಸುತ್ತಿದ್ದರೆ ಅವಶ್ಯವಾಗಿ ವಿಂಡೋಸ್ 10 ಗೆ ಅಪ್ಡೇಟ್ ಮಾಡಿಕೊಳ್ಳಿ.

2.Anti – Virus ಬಳಸಿ.

ಈ ಮಾಲ್ವೇರ್’ಗಳು ಕೇವಲ ಅಂತರ್ಜಾಲದಿಂದ ಬರುತ್ತದೆ ಎಂದರೆ ತಪ್ಪಾದೀತು. ನಾವು ಬಳಸುವ ಕಂಪ್ಯೂಟರ್’ನಲ್ಲಿ ಬಳಸುವ ತಂತ್ರಾಂಶದ ಮೂಲಕವೂ ಬರುವ ಸಾಧ್ಯತೆಗಳಿವೆ. ಹಾಗಾಗಿ Anti – Virus ಬಳಸುವುದು ಒಳ್ಳೆಯದು.

3.ಬ್ಯಾಕ್ಅಪ್ (Backup) ಇದ್ದರೆ ಒಳ್ಳೆಯದು

ಆದಷ್ಟು ಬಹಳಾ ಮುಖ್ಯವಾದ ಕಡತಗಳನ್ನು ಎರಡು ಮೂರು ಜಾಗಗಳಲ್ಲಿ ಸೇವ್ ಮಾಡಿ ಇಡುವುದು ಉತ್ತಮ. ಬೇಕಾದಷ್ಟು ಆನ್ ಲೈನ್ ಬ್ಯಾಕ್ಅಪ್ ಸೇವೆಗಳು ಲಭ್ಯವಿದೆ. ಒಂದುವೇಳೆ ಕಂಪ್ಯೂಟರ್’ಗೆ ಸಮಸ್ಯೆಯಾಗಿ ಬಹಳಾ ಮುಖ್ಯವಾದ ಕಡತಗಳು ಕಳೆದುಹೋದರೆ ಬ್ಯಾಕ್ಅಪ್ ಇದ್ದರೆ ಸುಲಭವಾಗಿ ರೀಲೋಡ್ ಮಾಡಬಹುದು.

  1. ಅನುಮಾನಾಸ್ಪದ ಸಂದೇಶಗಳಿಂದ ದೂರವಿರಿ.

ನಿಮಗೆ ತಿಳಿಯದಿರುವ ಅನುಮಾನಾಸ್ಪದ ವಿಳಾಸಗಳಿಂದ ಬರುವ ಇಮೇಲ್ ಗಳನ್ನು ತೆರೆಯದೇ ಇರುವುದು ಒಳ್ಳೆಯದು. ರಾನ್ಸಮ್ವೇರ್ ಹರಡುವುದಕ್ಕೆ ಬಹು ಮುಖ್ಯ ಕಾರಣಗಳಲ್ಲಿ ಇಮೇಲ್ ಸಹಾ ಒಂದು.

5.ಆನ್’ಲೈನ್ ಶಾಪಿಂಗ್ ಮಾಡುವಾಗ ಎಚ್ಚರ.

ಅನ್’ಲೈನ್ ಶಾಪಿಂಗ್ ಮಾಡುವಾಗ ಎಚ್ಚರವಹಿಸಿ. ನಿಮಗೇ‌ ತಿಳಿಯದಂತೆ ಕೆಲವೊಂದು ತಂತ್ರಾಂಶಗಳು ನಿಮ್ಮ ಕಂಪ್ಯೂಟರ್’ನಲ್ಲಿ ಇನ್’ಸ್ಟಾಲ್ ಆಗುವ ಸಾಧ್ಯತೆಗಳಿರುತ್ತವೆ. ಹಾಗು ಇವುಗಳಿಂದ ಮಾಲ್ವೇರ್’ಗಳು ಸುಲಭವಾಗಿ ಕಂಪ್ಯೂಟರ್ ಒಳಗೆ ಬಂದು ಕೂತುಬಿಡುತ್ತವೆ.

ಕಂಪ್ಯೂಟರ್’ಗಳು ಜಗತ್ತಿಗೆ ಕಾಲಿಟ್ಟ ದಿನದಿಂದಲೂ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿವೆ. ಆದರೆ ಒಂದಂತು ಸತ್ಯ ಇದೆಲ್ಲದರ ಹಿಂದಿರುವ ಕೈ ಮಾತ್ರ ಮಾನವನದ್ದೇ ಹೊರತು ಮತ್ತಿನ್ಯಾವ ಪ್ರಾಣಿಯದ್ದಾಗಲಿ ಅಲ್ಲ. ಜಗತ್ತಿನ ಹಲವಾರು ಸಾಫ್ಟ್’ವೇರ್’ ಮೇಧಾವಿಗಳ ತಲೆ ಕೆಡಿಸಿದ Y2K ಸಮಸ್ಯೆಯ ಜೊತೆಗೆ ಈ ರಾನ್ಸಮ್ವೇರ್ ಸಹಾ ಸೇರಿಕೊಳ್ಳಬಹುದೇನೋ. ಅದೇನೇ ಇರಲಿ ಕಂಪ್ಯೂಟರ್ ಬಳಸುವಾಗ ಅದರಲ್ಲೂ ಅಂತರ್ಜಾಲದ ಜೊತೆ ಸಂಪರ್ಕದಲ್ಲಿರುವಾಗ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!