ಅಂಕಣ

ಸಿತಾರ್ ಲೋಕದ ತಾರೆ ಅನೌಷ್ಕ ಶಂಕರ್

ಸಿತಾರ್ ಎಂದಾಕ್ಷಣ ನೆನಪಾಗುವುದು ಪಂಡಿತ್ ರವಿಶಂಕರ್. ಭಾರತೀಯ ಶಾಸ್ತ್ರೀಯ ಸಂಗೀತವಾದ್ಯವಾದ ಸಿತಾರ್’ನ್ನು ಜಗತ್ತಿನ ಮೂಲೆ ಮೂಲೆಗೆ ತಲುಪಿಸಿದ್ದು ಸುಪ್ರಸಿದ್ಧ ಸಿತಾರ್ ವಾದಕ ಪಂಡಿತ್ ರವಿಶಂಕರ್. ಇಂದು ರವಿಶಂಕರ್ ಇಲ್ಲ ಆದರೆ ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಅವರ ಪುತ್ರಿ ಅನೌಷ್ಕ ಶಂಕರ್. ಅನೌಷ್ಕ ಇಂದು ಸಿತಾರ್ ಜಗತ್ತಿನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.  

ತಮ್ಮ ೯ನೇ ವಯಸ್ಸಿನಲ್ಲಿಯೇ ತಂದೆಯ ಮಾರ್ಗದರ್ಶನದಡಿಯಲ್ಲಿ ಸಿತಾರ್ ಅಭ್ಯಾಸವನ್ನು ಆರಂಭಿಸಿದ್ದ ಅನೌಷ್ಕ, ೧೩ನೇ ವಯಸ್ಸಿಗೆ  ಒಬ್ಬ ಸಿತಾರ್ ವಾದಕಿಯಾಗಿ ಮೊದಲ ಪ್ರದರ್ಶನ ನೀಡಿದ್ದರು. ೧೪ನೇ ವರ್ಷ ಎನ್ನುವಷ್ಟರಲ್ಲಿ ತಮ್ಮ ತಂದೆಯೊಂದಿಗೆ ವಿಶ್ವದ ವಿವಿಧ ಭಾಗಗಳಲ್ಲಾಗುತ್ತಿದ್ದ ಕಾರ್ಯಕ್ರಮಗಳಿಗೆ ಹೋಗುವುದನ್ನ ಶುರುವಿಟ್ಟುಕೊಂಡಿದ್ದರು. ೧೭ನೇ ವಯಸ್ಸಿನಲ್ಲಿ ಅವರ ಮೊದಲ ಆಲ್ಬಮ್ ಹೊರ ಬಂದಿತ್ತು ಹಾಗೂ ೨೦ನೇ ವರ್ಷ ಎನ್ನುವಷ್ಟರಲ್ಲಿ ಅವರ ಮೂರು ಆಲ್ಬಮ್’ಗಳು ಹೊರ ಬಂದಿದ್ದವು ಮತ್ತು ಆ ಚಿಕ್ಕವಯಸ್ಸಿನಲ್ಲಿಯೇ ಪ್ರತಿಷ್ಠಿತ ಗ್ರಾಮ್ಮಿ ಅವಾರ್ಡ್’ಗೆ ನಾಮಿನೇಟ್ ಆಗಿದ್ದರ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದ್ದಾರೆ. ಇಲ್ಲಿಯವರೆಗೆ ಅನೌಷ್ಕ ಐದು ಬಾರಿ ಗ್ರಾಮ್ಮಿ ಅವಾರ್ಡ್’ಗೆ ನಾಮಿನೇಟ್ ಆಗಿದ್ದಾರೆ.  ಅನೌಷ್ಕ ಗ್ರಾಮ್ಮಿ’ಗೆ ನಾಮಿನೇಟ್ ಆದ ಮೊದಲ ಭಾರತೀಯ ಮಹಿಳೆ ಕೂಡ ಹೌದು.

ಅನೌಷ್ಕ ಅವರ ಬದುಕು ಯಾವುದೇ ಕಾದಂಬರಿ ಅಥವಾ ಸಿನೆಮಾಗಳಿಗಿಂತ ಭಿನ್ನ ಎನಿಸುವುದಿಲ್ಲ. ಅವರ ಬದುಕಿನಲ್ಲಿ ಅಷ್ಟೊಂದು ವಿಚಿತ್ರ ಘಟನೆಗಳಿವೆ. ಅನೌಷ್ಕ ಹುಟ್ಟಿ ಬೆಳೆದಿದ್ದು ಲಂಡನ್’ನಲ್ಲಿ. ಅನೌಷ್ಕ ತಾಯಿ ಸುಕನ್ಯ ರಾಜನ್ ಹಾಗೂ ಪಂಡಿತ್ ರವಿಶಂಕರ್ ಮದುವೆಯಾಗಿರಲಿಲ್ಲ. ಆಗಿನ್ನೂ ಅನ್ನಪೂರ್ಣದೇವಿಯವರೇ ರವಿಶಂಕರ್ ಪತ್ನಿಯಾಗಿದ್ದರು. ಅನೌಷ್ಕ ರವಿಶಂಕರ್ ಅವರನ್ನು ’ಬಾಬಾ’ ಎಂದೇ ಕರೆಯುತ್ತಿದ್ದರೂ ಕೂಡ ಅಧಿಕೃತವಾಗಿ ಅನೌಷ್ಕ ವಿಶ್ವವಿಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ಮಗಳು ಎಂದಾಗಿರಲಿಲ್ಲ. ಆದರೆ ಅನೌಷ್ಕ ಅವರ ಬದುಕಿನಲ್ಲಿ ತಮ್ಮ ’ಬಾಬಾ’ಗೆ ಬಹಳ ವಿಶಿಷ್ಟ ಸ್ಥಾನವೇ ಇತ್ತು. ಅದನ್ನೇ ಅವರು ತಮ್ಮ “ಬಾಪಿ: ದ ಲವ್ ಆಫ್ ಮೈ ಲೈಫ್” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ರವಿಶಂಕರ್ ಅವರ ಬದುಕಿನಲ್ಲಿ ಹಲವಾರು ಸ್ತ್ರೀಯರು ಬಂದು ಹೋಗಿದ್ದರು, ಅದೆಲ್ಲದರ ಬಗ್ಗೆಯೂ ತಮ್ಮ ಪುಸ್ತಕದಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಾರೆ ಅನೌಷ್ಕ. ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ ತಂದೆ ಲಂಡನ್ನಿನ ತಮ್ಮ ಮನೆಗೆ ಭೇಟಿ ನೀಡಿದಾಗೆಲ್ಲಾ ಹಬ್ಬದ ವಾತಾವರಣ ಇರುತ್ತಿತ್ತು ಎನ್ನುತ್ತಾರೆ. ಅನೌಷ್ಕ ಯಾವಾಗಲೂ ರವಿಶಂಕರ್ ಹಾಗೂ ತಮ್ಮ ತಾಯಿಯ ಮದುವೆಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದರಂತೆ. ೧೯೮೯ರಲ್ಲಿ ಕೊನೆಗೂ ಅನೌಷ್ಕ ಅವರ ಪ್ರಾರ್ಥನೆ ಫಲಿಸಿ ರವಿಶಂಕರ್, ಸುಕನ್ಯ ಅವರನ್ನು ಮದುವೆಯಾದರು. (೧೯೮೨ರಲ್ಲಿಯೇ ಅನ್ನಪೂರ್ಣದೇವಿಯವರೊಂದಿಗೆ ರವಿಶಂಕರ್ ಅವರ ವಿಚ್ಛೇದನ ಆಗಿತ್ತು) ಅಂದು ಅಧಿಕೃತವಾಗಿ ಅನೌಷ್ಕ ’ಅನೌಷ್ಕ ಶಂಕರ್’ ಎಂದಾದರು!

ಅನೌಷ್ಕ ೧೬ನೇ ವಯಸ್ಸಿನವರಾದಾಗ ತಮ್ಮ ಹಾಫ್’ಸಿಸ್ಟರ್ ಆದ ನೋರಾ ಜೋನ್ಸ್ ಅವರನ್ನು ಭೇಟಿಯಾಗಿದ್ದು. ನೋರಾ  ರವಿಶಂಕರ್ ಹಾಗೂ ಸ್ಯೂ ಜೋನ್ಸ್’ರ ಮಗಳು. ಅಲ್ಲಿಯ ತನಕ ಅನೌಷ್ಕಾಗೆ ನೋರಾ ತನ್ನ ಸಹೋದರಿ ಎನ್ನುವ ಬಗ್ಗೆ ಕಲ್ಪನೆಯೂ ಇರಲಿಲ್ಲ. ಆಗ ನೋರಾ ೧೮ ವರ್ಷದ ಹುಡುಗಿಯಾಗಿದ್ದಳು. ಅಂದು ಈ ಇಬ್ಬರು ಸಹೋದರಿಯರು ಭೇಟಿ ಸಾಕಷ್ಟು ಜನರ ಕುತೂಹಲಕ್ಕೆ ಕಾರಣವಾಗಿತ್ತು. ಮೊದಲ ಭೇಟಿಯಲ್ಲೇ ಇವರಿಬ್ಬರು ಒಬ್ಬರನ್ನೊಬ್ಬರು ಸಹೋದರಿಯರಂತೆ ನೋಡುತ್ತಾರಾ? ಅವರಲ್ಲಿ ಆ ಪ್ರೀತಿ, ಸಲುಗೆ ಹುಟ್ಟುವುದಾ ಎಂದು ಸಾಕಷ್ಟು ಜನ ಯೋಚಿಸುತ್ತಿದ್ದರು. ಅದೊಂದು ರೀತಿಯ ವಿಚಿತ್ರ ಸನ್ನಿವೇಶವಾಗಿತ್ತು. ಮೊದಲ ಭೇಟಿಯಲ್ಲಿ ಎಷ್ಟರ ಮಟ್ಟಿಗೆ ಪ್ರೀತಿ ಹುಟ್ಟಿತೋ ಇಲ್ಲವೋ ಆದರೆ ಇಂದು ಅವರಿಬ್ಬರು ಉತ್ತಮ ಗೆಳತಿಯರಂತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಪಂಡಿತ್ ರವಿಶಂಕರ್ ಅವರ ಮರಣದ ನಂತರ ಅವರಿಗೆ ನೀಡಲಾದ ಗ್ರಾಮ್ಮಿ ಜೀವಮಾನ ಸಾಧನೆಯ ಅವಾರ್ಡ್’ನ್ನು ಈ ಇಬ್ಬರೂ ಸಹೋದರಿಯರೂ ತಂದೆಯ ಪರವಾಗಿ ಸ್ವೀಕರಿಸಿದ್ದು.! ನೋರಾ ಒಬ್ಬ ಗಾಯಕಿ, ಈಗಾಗಲೇ ಆಕೆ ಸುಮಾರು ಒಂಭತ್ತು ಗ್ರಾಮ್ಮಿ ಅವಾರ್ಡ್’ನ್ನು ಪಡೆದುಕೊಂಡಿದ್ದಾರೆ. ರವಿಶಂಕರ್ ಅವರ ಇಬ್ಬರೂ ಪುತ್ರಿಯರೂ ಅವರದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.

೨೦೦೯ರಲ್ಲಿ ಅನೌಷ್ಕ ದಿಲ್ಲಿಗೆ ಬಂದಾಗ ಯಾವುದೋ ಕಾರ್ಯಕ್ರಮದಲ್ಲಿ ನಿರ್ದೇಶಕ ಜೋ ರೈಟ್’ನ್ನು(ಸುಪ್ರಸಿದ್ಧ ಪ್ರೈಡ್ ಅಂಡ್ ಪ್ರಿಜುಡೈಸ್ ಚಿತ್ರದ ನಿರ್ದೇಶಕ) ಭೇಟಿಯಾಗಿದ್ದರು. ಜೋ ರೈಟ್ ತಮ್ಮ ಒಂದು ಚಿತ್ರದ ಕುರಿತು ವಿಷಯ ಸಂಗ್ರಹಣೆಗೆ ಭಾರತಕ್ಕೆ ಬಂದಿದ್ದರು. ಅದಾದ ನಂತರ ಇಬ್ಬರೂ ಮತ್ತೊಮ್ಮೆ ಭೇಟಿಯಾಗಿದ್ದು ಲಾಸ್ ಎಂಜಲೀಸ್’ನಲ್ಲಿ. ಆ ಎರಡು ಭೇಟಿಯಲ್ಲಿ ಒಬ್ಬರಿಗೊಬ್ಬರು ಸಾಕಷ್ಟು ಹತ್ತಿರವಾಗಿದ್ದ ಇವರಿಬ್ಬರೂ ಅದಾದ ಕೆಲವೇ ತಿಂಗಳುಗಳಲ್ಲಿ ಮದುವೆಯಾದರು. ಇಂದು ಅವರಿಬ್ಬರಿಗೆ ಜ಼ುಬಿನ್ ಶಂಕರ್ ರೈಟ್ ಹಾಗೂ ಮೋಹನ್ ಶಂಕರ್ ರೈಟ್ ಎಂಬ ಇಬ್ಬರು ಪುಟ್ಟ ಮಕ್ಕಳಿದ್ದಾರೆ.

ಅನೌಷ್ಕ ಕೇವಲ ಸಂಗೀತ ಕ್ಷೇತ್ರ ಮಾತ್ರವಲ್ಲದೇ, ಒಬ್ಬ ಉತ್ತಮ ಲೇಖಕಿ ಕೂಡ ಹೌದು ಎನ್ನುವುದಕ್ಕೆ ಅವರ ’ಬಾಪಿ: ದ ಲವ್ ಆಫ್ ಮೈ ಲೈಫ್” ಸಾಕ್ಷಿ. ಅಷ್ಟೇ ಅಲ್ಲದೇ ಅವರು ಒಬ್ಬ ಅಂಕಣಕಾರರಾಗಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ದಿಲ್ಲಿಯ ’ಫ಼ಸ್ಟ್ ಸಿಟಿ ಮ್ಯಾಗಜ಼ೀನ್’ ಹಾಗೂ ’ಹಿಂದುಸ್ಥಾನ್ ಟೈಮ್ಸ್’ಗೆ ಅಂಕಣಗಳನ್ನು ಬರೆದಿದ್ದಾರೆ ಅನೌಷ್ಕ.

’ನಿರ್ಭಯ ಪ್ರಕರಣದ’ ಸಂದರ್ಭದಲ್ಲಿ ಮೊದಲ ಬಾರಿ ಅನೌಷ್ಕ ತಾವು ಚಿಕ್ಕಂದಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಸತ್ಯವನ್ನು ಜಗತ್ತಿನೆದುರು ಬಿಚ್ಚಿಟ್ಟಿದ್ದರು. ದಿಲ್ಲಿಯಲ್ಲಿ ಅಂದು ನಡೆದ ಹೀನ ಕೃತ್ಯವನ್ನು ಖಂಡಿಸುತ್ತಾ ವೀಡಿಯೋವೊಂದರಲ್ಲಿ ತಮ್ಮ ಪೋಷಕರಿಗೆ ಬಹಳ ಆಪ್ತರೆನಿಸಿದ್ದ ಒಬ್ಬ ವ್ಯಕ್ತಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರ ಬಗ್ಗೆ ಹೇಳಿಕೊಳ್ಳುತ್ತಾರೆ. ವರ್ಷಗಳ ಕಾಲ ಆ ಭಯದಿಂದ ಹಿಂಸೆ ಅನುಭವಿಸುತ್ತಿದ್ದರ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ಕೊನೆಗಾಣಿಸಬೇಕು ಎಂದು ‘ಒನ್ ಬಿಲಿಯನ್ ರೈಸ್’ ಎಂಬ ಕ್ಯಾಂಪೇನ್’ನ್ನು ಕೂಡ ಆರಂಭಿಸಿದ್ದರು ಅನೌಷ್ಕ.

ಅನೌಷ್ಕ ಅವರ ಸಾಮಾಜಿಕ ಕಳಕಳಿಗೆ ಇನ್ನೊಂದು ಉದಾಹರಣೆ ’ಲ್ಯಾಂಡ್ ಆಫ್ ಗೋಲ್ಡ್” ಎಂಬ ಅವರ ಆಲ್ಬಮ್. ಇದನ್ನು ನಿರಾಶ್ರಿತರಿಗೆ ಅರ್ಪಿಸಿದ್ದರು. “ಒಂದು ಆಲ್ಬಮ್ ನಿರಾಶ್ರಿತರ ಸ್ಥಿತಿಯನ್ನು ಬದಲಿಸಿಬಿಡುತ್ತದೆ ಎಂದಲ್ಲ, ಆದರೆ ಆ ನಿಟ್ಟಿನಲ್ಲಿ ಒಂದು ’ಆರಂಭ’ ಆಗಬಹುದು” ಎನ್ನುತ್ತಾರೆ ಅನೌಷ್ಕ.

೩೫ನೇ ವರ್ಷಕ್ಕೆ ಕಾಲಿಟ್ಟಿರುವ ಅನೌಷ್ಕ ಈಗಾಗಲೇ ಸಾಧನೆಯ ಉತ್ತುಂಗದಲ್ಲಿದ್ದಾರೆ, ಆ ಕುರಿತಾಗಿಯೇ ಮಾತನಾಡುತ್ತಾ, ”ಸಂಗೀತಗಾರನಿಗೆ ಹೊರಗಿನದಕ್ಕಿಂತ ಆಂತರ್ಯದ ಸಾಧನೆ ಮುಖ್ಯ” ಎನ್ನುತ್ತಾರೆ. ಅನೌಷ್ಕ ಅವರ ಕಾನ್ಸರ್ಟ್’ನ ಒಂದು ಝಲಕ್ ಇಲ್ಲಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!