ಅಂಕಣ

ರಾಮ್’ದೇವ್’ರಿಂದ ಸಾಧ್ಯವಾಗಿದ್ದು ಬೇರೆಯವರಿಗೇಕೆ ಸಾಧ್ಯವಾಗಿಲ್ಲ?

ಟೀವಿ ವಾಹಿನಿಗಳು,ಪತ್ರಿಕೆಗಳು ಅಷ್ಟೇ ಏಕೆ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳು, ಸಿನಿಮಾ ಕಾರ್ಯಕ್ರಮಗಳು ಎಲ್ಲವೂ ನಡೆಯುವುದು ಜಾಹೀರಾತುದಾರರಿಂದಲೇ. ನಾವು ಹಲವಾರು ವರ್ಷಗಳಿಂದ ನೋಡುತ್ತಿರುವಂತೆ ಹೆಣ್ಣಿನ ದೇಹವನ್ನು ಮಾದಕವಾಗಿ ತೋರಿಸಲೇಬೇಕೆನ್ನುವ ಅಲಿಖಿತ ನಿಯಮವನ್ನು ಎಲ್ಲಾ ಉತ್ಪನ್ನಗಳ ಜಾಹೀರಾತುಗಳೂ ಪಾಲಿಸಿಕೊಂಡು ಬರುತ್ತಿವೆ. ಶೇವಿಂಗ್ ಬ್ಲೇಡಿನ ಜಾಹೀರಾತಿನಲ್ಲಿ ಗಂಡಸೊಬ್ಬ ಶೇವಿಂಗ್ ಮಾಡಿಕೊಂಡರೆ ಆ ಕೂಡಲೇ ಆತನ ಮುಖಕ್ಕೆ ಸುಂದರಿಯೊಬ್ಬಳು ಆಕೆಯ ಕೆನ್ನೆಯನ್ನು  ​ತಂದು ​ ಉಜ್ಜದೇ ಆ ಜಾಹೀರಾತು ಪೂರ್ಣವಾಗುವುದಿಲ್ಲ. ಗಂಡಸೊಬ್ಬ ತನ್ನ ದೇಹಕ್ಕೆ ಅತ್ತರು ಪೂಸಿಕೊಂಡರೆ ನಾಲ್ಕಾರು ಅರೆಬೆತ್ತಲೆ ಸುಂದರಿಯರು  ​ಬಂದು ​ಆತನ ದೇಹದ ಮೇಲೆಲ್ಲಾ ಕೈಯಾಡಿಸುವವರೆಗೂ ಆ ಜಾಹೀರಾತು ಮುಗಿಯುವುದಿಲ್ಲ. ಗಂಡಸು ಕುಡಿಯುವ ಸೋಡಾ ಜಾಹೀರಾತಿನಲ್ಲೂ ಕೂಡಾ ಮಹಿಳೆಯರ ಮಾದಕ ಮೈಮಾಟ ತೋರಿಸಲೇಬೇಕು. ಅಷ್ಟೇ ಏಕೆ, ಗಂಡಸಿನ ಒಳಚಡ್ಡಿಗಳನ್ನು ವ್ಯಾಪಾರ ಮಾಡಲೂ ಜಾಹೀರಾತುದಾರರು ಬಳಸುತ್ತಿದ್ದುದು ಮಾದಕ ಚೆಲುವೆಯರ ದೇಹವನ್ನೇ!

ಪುರುಷರಷ್ಟೇ ಉಪಯೋಗಿಸುವ ಪದಾರ್ಥಗಳ ಜಾಹೀರಾತಿಗೇ ಇಷ್ಟೊಂದು ಮಹಿಳೆಯರ ಮೈಮಾಟ ತೋರಿಸುವ ಜಾಹೀರಾತು ನಿರ್ಮಾಣ ಸಂಸ್ಥೆಗಳು ಇನ್ನು ಮಹಿಳೆಯರೇ ಉಪಯೋಗಿಸುವ ಪದಾರ್ಥಗಳ ಜಾಹೀರಾತಿನಲ್ಲಿ ಮಹಿಳೆಯರ ಮೈಮಾಟ ತೋರಿಸದೆ ಬಿಟ್ಟಾರೆಯೇ? ​ಅದು ಮುಖಕ್ಕೆ ಹಚ್ಚುವ ಯಾವುದೋ ಕ್ರೀಮ್ ಇರಲಿ, ಅಲ್ಲಿ ಆಕೆಯ ಹೊಕ್ಕುಳನ್ನು ಕೂಡಾ ತೋರಿಸಲೇಬೇಕು. ಹಾಗಿರುವಾಗ ಇನ್ನು ಇಡೀ ದೇಹಕ್ಕೆ ಹಚ್ಚಿ ಸ್ನಾನ ಮಾಡುವ ಸಾಬೂನಿನ ಜಾಹೀರಾತಿಗೆ ಅವರು ಯಾವ ರೀತಿಯಲ್ಲಿ ಹೆಣ್ಣನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ​ನಿಮ್ಮ ಗಮನಕ್ಕೆ ಬರದೇ ಇರುವ ವಿಷಯವೇನೂ ಅಲ್ಲ.​

ಮೊಬೈಲ್ ಫೋನ್ ಜಾಹೀರಾತಿಗೂ ಕೂಡಾ ಮಹಿಳೆಯ ಮೈಮಾಟವೇ ಆಧಾರ. ಒಂದು ಕಾರಿನ ಜಾಹೀರಾತು ನೋಡಬೇಕೆಂದರೆ ನೀವು ಕಡ್ಡಾಯವಾಗಿ ಒಂದು ಹೆಣ್ಣಿನ ಅಂಗಾಂಗಗಳ ಆಕಾರವನ್ನು ನೋಡಲೇ ಬೇಕು.ತಂಪು ಪಾನೀಯವೊಂದರ ಜಾಹೀರಾತು ನೋಡಬೇಕೆಂದರೂ ಒಂದು ಹೆಣ್ಣಿನ ಮಾದಕ ತುಟಿಗಳ ಅಂದವನ್ನು ನೀವು ಸವಿಯಲೇಬೇಕು. ಹೀಗೆ ಇದುವರೆಗೂ ಬಹುತೇಕ ಎಲ್ಲಾ ಕಂಪನಿಗಳೂ ಹೆಣ್ಣಿನ ಅಂದವನ್ನು ತೋರಿಸಿ ಗ್ರಾಹಕರನ್ನು ಮರುಳು ಮಾಡಬಹುದು ಎಂದುಕೊಂಡಿದ್ದವು ಮತ್ತು ಹಾಗೆ ತೋರಿಸಿದ್ದರಿಂದಾಗಿಯೇ ನಾವು ಅವರ ಉತ್ಪನ್ನವನ್ನು ಖರೀದಿಸುತ್ತಿದ್ದೇವೆ ಎಂದುಕೊಂಡಿದ್ದವು. ಹೀಗೆ ಪ್ರತಿಯೊಂದು ಪದಾರ್ಥವನ್ನೂ ಹೆಣ್ಣಿನ ದೇಹವನ್ನೇ ಬಳಸಿ ವ್ಯಾಪಾರ ಮಾಡುತ್ತಿದ್ದ ಕಂಪನಿಗಳಿಗೆ ಎದುರಾಗಿ ಬಂದಿದ್ದೇ ಸ್ವದೇಶೀ ಕಂಪೆನಿಯಾದ ಪತಂಜಲಿ.

ಪತಂಜಲಿ ಸಂಸ್ಥೆ ಇದುವರೆಗೂ ನೂರಾರು ದಿನಬಳಕೆ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.ಅವುಗಳ ಜಾಹೀರಾತುಗಳೂ ನಿತ್ಯವೂ ಟೀವಿ, ಪತ್ರಿಕೆಗಳಲ್ಲಿ ಪ್ರಸಾರವಾಗುತ್ತಿವೆ. ಆದರೆ ಎಲ್ಲಾದರೂ ಅವರ ಜಾಹೀರಾತುಗಳಲ್ಲಿ ಅಶ್ಲೀಲವಾಗಿ ಅಥವಾ ಅನಗತ್ಯವಾಗಿ ಹೆಣ್ಣಿನ ದೇಹವನ್ನು ಪ್ರದರ್ಶಿಸಿದ್ದನ್ನು ಕಂಡಿದ್ದೀರಾ? ಖಂಡಿತಾ ಸಾಧ್ಯವಿಲ್ಲ. ಅಲ್ಲಿ ಆ ಉತ್ಪನ್ನವೇ ರೂಪದರ್ಶಿ. ರಾಮ್ ದೇವ್ ಅವರೇ ರಾಯಭಾರಿ. ಅಗತ್ಯವಿರುವಲ್ಲಿ ಮಾತ್ರ ಅತ್ಯಂತ ಸಭ್ಯ ರೀತಿಯಲ್ಲಿ ಮಹಿಳಾ ಕಲಾವಿದರನ್ನು ಬಳಸಿಕೊಳ್ಳಲಾಗುತ್ತದೆ. ಬಹುತೇಕ ಕಂಪೆನಿಗಳು ಇದುವರೆಗೂ ನಂಬಿಕೊಂಡು ಬಂದಂತೆ ಮಹಿಳೆಯರ ದೇಹವನ್ನು ಮಾದಕವಾಗಿ ತೋರಿಸುವುದಿಂದ ಮಾತ್ರ ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತವೆ ಎನ್ನುವುದನ್ನು ಒಪ್ಪುವುದೇ ಆದರೆ ಪತಂಜಲಿ ಸಂಸ್ಥೆಯ ಉತ್ಪನ್ನಗಳು ಮಾರಾಟವಾಗದೆ ಉಗ್ರಾಣಗಳಲ್ಲಿ ಕೊಳೆಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಮಹಿಳೆಯರನ್ನು ತೋರಿಸದೆಯೂ ಅಥವಾ ಮಹಿಳೆಯರನ್ನು ಸಭ್ಯ ರೀತಿಯಲ್ಲಿ ತೋರಿಸಿಯೂ ತಮ್ಮ ಉತ್ಪನ್ನಗಳನ್ನು ಜನರಿಗೆ ಮುಟ್ಟಿಸಬಹುದು ಎನ್ನುವುದನ್ನು ​ವ್ಯಾಪಾರೀ ಜಗತ್ತಿಗೆ ​ಪತಂಜಲಿ ಸಂಸ್ಥೆ ತೋರಿಸಿಕೊಟ್ಟಿತು.

ತಲೆಗೆ ಹಚ್ಚಿದ ಶಾಂಪೂ ನೊರೆಯಾಗಿ ಪಾದದವರೆಗೂ ಜಾರುವುದನ್ನು ತೋರಿಸುತ್ತಿದ್ದ ಬ್ರಾಂಡ್ ಗಳಿಗಿಂತಲೂ ಪತಂಜಲಿ ಕೇಶ್ ಕಾಂತಿ ನಾಲ್ಕಾರು ಪಟ್ಟು ಹೆಚ್ಚು ಮಾರಾಟವಾಗುತ್ತಿದೆ! ತುಂಡು ಬಟ್ಟೆ ತೊಟ್ಟ ಯುವತಿ ಸ್ನಾನ ಮಾಡುವ ದೃಶ್ಯ ತೋರಿಸುತ್ತಿದ್ದ ಬ್ರಾಂಡ್’ಗಿಂತಲೂ  ಹತ್ತು ಪಟ್ಟು ಪತಂಜಲಿ ನೀಮ್ ಕಾಂತಿ, ರೋಸ್ ಕಾಂತಿ ಸಾಬೂನುಗಳು ಮಾರಾಟವಾಗುತ್ತಿವೆ!

ಮಹಿಳೆಯರ ದೇಹವನ್ನು ವ್ಯಾಪಾರೀ ಸರಕನ್ನಾಗಿ ಮಾಡಿಕೊಳ್ಳುವುದನ್ನು ಈ ದೇಶ ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿತ್ತು. ಆದರೆ ವಿದೇಶೀ ಕಂಪನಿಗಳಿಗೆ ಮತ್ತು ಅವುಗಳ ಮಾದರಿಯನ್ನು ಅನುಸರಿಸುವ ಕೆಲವು ಸ್ವದೇಶೀ ಕಂಪನಿಗಳಿಗೆ ಇದು ಅರ್ಥವಾಗಿರಲಿಲ್ಲ ಅಥವಾ ತಮ್ಮ ಯಶಸ್ಸಿಗೆ ಅದೊಂದು ಸಿದ್ಧ ಸೂತ್ರ ಎಂದೇ ಅವು ನಂಬಿದ್ದವು. ಪತಂಜಲಿ ಅವರ ಆ ಸಿದ್ಧ ಸೂತ್ರಕ್ಕೆ ಕಲ್ಲು ಹಾಕಿದೆ. ಸ್ವದೇಶೀ ಎನ್ನುವ ಕಾರಣವೊಂದಾದರೆ ಅದರ ಮಾರಾಟದಲ್ಲೂ ಸ್ವದೇಶೀ ಚಿಂತನೆಯನ್ನು, ಮಹಿಳೆಯರನ್ನು ಗೌರವಿಸುವ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡ ಪರಿಣಾಮ ಇದೀಗ ಮನೆ ಮನೆಯಲ್ಲೂ ಪತಂಜಲಿ ಉತ್ಪನ್ನಗಳು ಬೇರೆಲ್ಲಾ ಉತ್ಪನ್ನಗಳಿಗಿಂತಲೂ ಮೇಲುಗೈ ಸಾಧಿಸಿವೆ.

ಹಾಗಾದರೆ ಬಾಬಾ ರಾಮ್ ದೇವ್ ಅವರು ಮಹಿಳೆಯರ ಮೈಮಾಟವನ್ನು ತೋರಿಸದೆಯೂ ತಮ್ಮ ಪತಂಜಲಿ ಉತ್ಪನ್ನಗಳನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಬಲ್ಲರು ಎಂದರೆ ಬೇರೆಯವರಿಗೇಕೆ ಅದು ಸಾಧ್ಯವಾಗಿಲ್ಲ?

Facebook ಕಾಮೆಂಟ್ಸ್

ಲೇಖಕರ ಕುರಿತು

Praven Kumar Mavinakadu

ಮೂಲತಃ ಪರಿಸರಪ್ರೇಮಿ.ಹವ್ಯಾಸೀ ಬರಹಗಾರ.
ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಪರಿಸರ ಸ್ನೇಹಿ ಸೋಲಾರ್ ಅಡುಗೆ ಉಪಕರಣಗಳ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ಮುಂದೆ ಅವುಗಳನ್ನು ದೇಶದ ಮನೆಮನೆಗೂ ಮುಟ್ಟಿಸಬೇಕೆನ್ನುವ ಕನಸಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!