ಅಂಕಣ

ನೆಲದ ನಂಟು…

ಅದು ಮಲೆನಾಡಿನ ಪುಟ್ಟ ಗ್ರಾಮ. ಹೆಚ್ಚೆಂದರೆ ಎಂಟತ್ತು ಮನೆಗಳು, ಒಂದು ಪುಟ್ಟ ದೇವಸ್ಥಾನ ಹಾಗು ಒಂದು ಹೊಳೆ. ದಿನನಿತ್ಯದ ಬಳಕೆಗೆ, ವ್ಯವಸಾಯಕ್ಕೆ, ಹಸು ಎತ್ತುಗಳಿಗೆ ಆ ಹೊಳೆಯ ನೀರೇ ಆಧಾರ. ಊರಿನ ಹಿರಿಕ ತಿಪ್ಪಜ್ಜ. ಆತನಿಗೆ ತಿಳಿದಿರುವ ಮಟ್ಟಿಗೆ ಒಮ್ಮೆಯೂ ಆ ಹೊಳೆಯ ನೀರು ಬತ್ತಿರುವ ನೆನಪಿಲ್ಲ. ಆದ ಕಾರಣಕ್ಕೆ ಬೇರ್ಯಾವ ಪರ್ಯಾಯ ನೀರಿನ ವ್ಯವಸ್ಥೆಯೂ ಆ ಪುಟ್ಟ ಗ್ರಾಮಕ್ಕೆ ಅವಶ್ಯಕೆತೆಯಿರಲಿಲ್ಲ. ತಿಪ್ಪಜ್ಜನಿಗೆ ಎರಡು ಗಂಡು ಮಕ್ಕಳು. ಅಣ್ಣ ಹರೀಶ ಹಾಗು ತಮ್ಮ ಗಿರೀಶ. ಓದಿನಲ್ಲಿ ಚಿಕ್ಕನಿಂದಲೂ ಮುಂದಿದ್ದ ಗಿರೀಶ ತನ್ನ ಹತ್ತನೇ ತರಗತಿಯ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ತೆರಳಿ ಅಲ್ಲಿಯೇ ಡಿಗ್ರಿಯನ್ನು ಪಡೆದು ನೌಕರಿಯನ್ನೂ ಗಿಟ್ಟಿಸಿಕೊಳ್ಳುತ್ತಾನೆ. ಆದರೆ ಸ್ಕೂಲು ಎಂದರೆ ಮೂರು ಮೈಲು ಓಡುತ್ತಿದ್ದ ಹರೀಶನಿಗೆ ಮಾತ್ರ ಪುಸ್ತಕದ ವಿದ್ಯೆಯ ಗಂಧ ಗಾಳಿ ಎಂಬುದು ತಗುಲಲಿಲ್ಲ. ಆದರೆ ವ್ಯವಸಾಯದ ವಿದ್ಯೆಯನ್ನು ಯಾವುದೇ ಪರಿಣಿತನಿಗೂ ಬಲ್ಲದ ಮಟ್ಟಿಗೆ ಕರಗತ ಮಾಡಿಕೊಂಡಿದ್ದ. ಭೂಮಿಯನ್ನು ತಾಯಿಯಂತೆ ಪ್ರೀತಿಸುತ್ತಿದ್ದ. ದಿನದ ಅಷ್ಟೂ ಸಮಯವನ್ನು ಜಮೀನಿನಲ್ಲೇ ಕಳೆಯುತ್ತಿದ್ದ. ಮಳೆ ಎಂದು ಶುರುವಾಗುತ್ತದೆ, ಎಷ್ಟು ದಿನ ಸುರಿಯುತ್ತದೆ, ಯಾವ ತರಕಾರಿಯನ್ನು ಯಾವ ಕಾಲದಲ್ಲಿ ಬೆಳೆದರೆ ಹೆಚ್ಚು ಲಾಭ ಅನ್ನುವುದಲ್ಲದೆ ಅತಿಯಾದ ಆಸೆಗಾಗಿ ನೆಲವನ್ನು ಹಣವನ್ನು ಸುರಿಯುವ ಯಂತ್ರದಂತೆ ನೋಡಬಾರದೆಂದೂ, ಅದಕ್ಕೂ ಜೀವಿಗಳಂತೆ ನೋವು, ನಲಿವು, ಕೋಪ-ತಾಪಗಳೆಂಬ ಭಾವನೆಗಳು ಇವೆಯೆಂದು ಅರಿತಿದ್ದನು. ಗಿರೀಶ ಯುಗಾದಿ ಹಾಗು ದೀಪಾವಳಿಗೆ ಊರಿಗೆ ಬಂದರೆ ಎರಡು ದಿನವಿದ್ದು ಹೋಗಿಬಿಡುತ್ತಿದ್ದ. ಜಮೀನಿನ ಕತೆ ಹೇಗಿದೆ, ಯಾವ ಬೆಳೆಯನ್ನು ಹಾಕಲಾಗಿದೆ, ದನಗಳು ಹೇಗಿವೆ ಎಂಬ ಯಾವ ಪ್ರಶ್ನೆಯೂ ಆತನಿನ ಬರದು. ಒಟ್ಟಿನಲ್ಲಿ ತಿಪ್ಪಜ್ಜನ ಆಷ್ಟೂ ಆಸ್ತಿಯ ಜವಾಬ್ದಾರಿಯು ಅಣ್ಣ ಹರೀಶನ ಹೆಗಲ ಮೇಲಿದ್ದಿತು.

ದಿನಗಳು ಕಳೆದವು. ತಿಪಜ್ಜ ತಾನು ಸಾಯುವ ಮೊದಲು ಮಕ್ಕಳಿಬ್ಬರಿಗೂ ಆಸ್ತಿಯ ಸಮಭಾಗವನ್ನು ಮಾಡಬೇಕೆಂದು ಇಚ್ಛಿಸಿ ಗಿರೀಶನನ್ನು ಊರಿಗೆ ಕರೆಯುತ್ತಾನೆ. ಇಬ್ಬರನ್ನು ಎದುರು ಕೂರಿಸಿಕೊಂಡು ನಾಲ್ಕು ಎಕರೆ ಜಮೀನನ್ನು ತಮ್ಮ ಗಿರೀಶನಿಗೆ, ಊರಿನ ಮನೆ ಹಾಗು ಮೂರು ಎಕರೆ ಜಮೀನನ್ನು ಅಣ್ಣ ಹರೀಶನ ಹೆಸರಿಗೆ ಬರೆದಿರುತ್ತಾನೆ. ವಿಷಯವನ್ನು ಮಕ್ಕಳ ಮುಂದಿಟ್ಟ ತಿಪ್ಪಜ್ಜ ಇಬ್ಬರಿಗೂ ತನ್ನ ತೀರ್ಮಾನದ ಬಗ್ಗೆ ಇರುವ ಸಮ್ಮತಿಯನ್ನು ಗಮನಿಸುತ್ತಾನೆ. ಇದಾದ ಕೆಲದಿನಗಳ ನಂತರ ಹರೀಶ ಅಣ್ಣನನ್ನು ಕಂಡು ತಾನು ಸಿಟಿಯಲ್ಲಿ ಒಂದು ಹೊಸ ಉದ್ದಿಮೆಯನ್ನು ಪ್ರಾರಂಭಿಸುವುದಾಗಿಯೂ ಅದಕ್ಕಾಗಿ ತನಗೆ ಹೆಚ್ಚಿನ ಹಣದ ಅವಶ್ಯಕೆತೆ ಇರುವುದರಿಂದ ತನ್ನ ಪಾಲಿನ ಜಮೀನನ್ನು ಮಾರಲಿಚ್ಚಿಸುವುದಾಗಿ ತಿಳಿಸುತ್ತಾನೆ. ತಮ್ಮನ ಮಾತನ್ನು ಏಕ್ ದಮ್ ನಿರಾಕರಿಸಿದ ಅಣ್ಣ, ಭೂಮಿ ನಮ್ಮ ತಾಯಿ, ನಮ್ಮ ಹೊಟ್ಟೆಬಟ್ಟೆಗೆ, ನಿನ್ನ ಓದಿಗೂ ಆಕೆಯ ಅನ್ನವೇ ಕಾರಣ. ಊರಿಗೆ ವಾಪಾಸ್ ಬಂದು ಇಲ್ಲೇ ವ್ಯವಸಾಯದೊಟ್ಟಿಗೆ ಡಿಗ್ರಿಗೆ ಪೂರಕವಾದ ಕೆಲಸವನ್ನೇನಾದರೂ ಮಾಡಿದರಾಯಿತು ಎಂದು ಬುದ್ದಿ ಮಾತು ಹೇಳುತ್ತಾನೆ. ಆದರೆ ಹಳ್ಳಿ ಎಂದರೆ ಅವಿದ್ಯಾವಂತರ ಸಂತೆ ಎಂದುಕೊಂಡಿದ್ದ ಗಿರೀಶ ಮಾತ್ರ ಅಣ್ಣನ ಮಾತನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಜಮೀನನ್ನು ಮಾರೆ ತೀರುತ್ತೇನೆಂಬ ಹಠಕ್ಕೆ ಬಿದ್ದವನಂತೆ ವರ್ತಿಸುತ್ತಾನೆ. ಆದರೆ ತಾನು ಬೆಳೆದ ನೆಲವನ್ನು ಕಂಡವರ ಪಾಲಾಗುವುದನ್ನು ಕಾಣದ ಅಣ್ಣ ಹರೀಶ, ಜಮೀನನ್ನು ಬೇರೆ ಯಾರಿಗೂ ಮಾರಬಾರದೆಂದು ಆತನ ಎಲ್ಲ ಜಮೀನನ್ನು ತಾನೇ ಖರೀದಿಸುವುದಾಗಿ ಹೇಳುತ್ತಾನೆ. ಕೆಲವೇ ದಿನಗಳಲ್ಲಿ ಕಾಗದ ಪತ್ರಗಳೆಲ್ಲ ರೆಡಿಯಾಗಿ ಜಮೀನು ಅಣ್ಣನ ಹೆಸರಿಗೆ ಮಾರಿ ಬಂದ ನಾಲ್ಕು ಲಕ್ಷಗಳಲ್ಲಿ ಉದ್ದಿಮೆಯ ಕನಸನ್ನು ಹೊತ್ತು ಗಿರೀಶ ಸಿಟಿ ಸೇರುತ್ತಾನೆ. ಸಾಕಷ್ಟು ಏಳು ಬೀಳುಗಳ ನಂತರ ಆತ ಉದ್ದಿಮೆಯಲ್ಲಿ ಲಾಭ ಕಾಣತೊಡಗುತ್ತಾನೆ.

ತಿಪ್ಪಜ್ಜನ ಕೊನೆಯ ಆಸೆಯಂತೆ ಹರೀಶ ಊರಿನ ಭಟ್ಟರ ಮಗಳನ್ನು ವರಿಸುತ್ತಾನೆ. ಗಿರೀಶ ಸಿಟಿಯಲ್ಲೇ ಒಬ್ಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಇಬ್ಬರಿಗೂ ಒಬ್ಬೊಬ್ಬ ಗಂಡು ಮಕ್ಕಳಾಗುತ್ತವೆ. ಹರೀಶನ ಮಗ ತಿಪ್ಪೇಶಿಗೆ ಊರ ಶಾಲಾ ಕಾಲೇಜಿನ ಸರ್ಕಾರಿ ವಿಧ್ಯಾಬ್ಯಾಸವಾದರೆ ಗಿರೀಶನ ಮಗ ಸೈದ್ಧಾಂತ್ ಗೆ ಸಿಟಿಯ ಅತಿ ಹೆಚ್ಚು ದುಡ್ಡನ್ನು ಕಸಿದು ದೊಡ್ಡ ಶಾಲೆ ಎನಿಸಿಕೊಂಡಿರುವಲ್ಲಿ.

ಊರಿನಲ್ಲಿ ಡಿಗ್ರಿ ಮುಗಿಸಿದರೆ ಸಾಕು, ಮಗನನ್ನು ಉತ್ತಮ ರೈತನಾಗಿ ಮಾಡುವುದು ಹರೀಶನ ಕನಸು. ಉತ್ತಮ ಎಂದ ಮಾತ್ರಕ್ಕೆ ಹೆಚ್ಚು ಲಾಭಗಳಿಸುವುದಲ್ಲದೆ ವೈಜ್ಞಾನಿಕ ಮಾದರಿಯ ಸಾವಯವ ಕೃಷಿ. ಆದರೆ ತಿಪ್ಪೇಶಿಗೆ ಮಾತ್ರ ದೂರದ ಬೆಟ್ಟ ನುಣ್ಣಗೆ ಎಂಬಂತೆ ಸಿಟಿಯ ರಂಗು ರಂಗಿನ ಜೀವನದ್ದೇ ಕನಸು. ವಯಸ್ಸು ಇಪ್ಪತ್ತು ಕಳೆದರೂ ಅಪ್ಪನೊಟ್ಟಿಗೆ ಬೆಳಗೆದ್ದು ಹೊಲದ ಕೆಲಸಕ್ಕೆ ಹೋಗನು. ಏನಿದ್ದರೂ ತಾನಾಯಿತು, ತನ್ನ ಕಾಲೇಜಾಯಿತು ಎಂದುಕೊಂಡಿರುತ್ತಿದ್ದ. ಕಾಟಾಚಾರಕ್ಕೆ ಎಂಬತೆ ವರ್ಷದಲ್ಲಿ ಕೆಲದಿನಗಳು ಮಾತ್ರ ಜಮೀನಿಗೆ ಹೋಗಿ ಕೊಯ್ತ ಪೈರನ್ನು ಸಿಟಿಗೆ ಸಾಗಿಸುವಲ್ಲಿ ಸಹಕರಿಸುತಿದ್ದ. ಮಗನ ಜೀವನದ ಬಗ್ಗೆ ಬಹು ದೊಡ್ಡ ಕನಸು ಕಟ್ಟಿಕೊಂಡಿದ್ದ ಅಪ್ಪ ಹರೀಶನಿಗೆ ತಿಪ್ಪೇಶಿಯ ಈ ನಡವಳಿಕೆ ದೊಡ್ಡ ಪ್ರೆಶ್ನೆಯಾಗಿ ಬಹುದಿನಗಳಿಂದ ಕಾಡುತಿತ್ತು.

ಅಲ್ಲದೆ ಊರ ಹೊಳೆಯೂ ದಿನ ಕಳೆದಂತೆ ಸೊರಗುತ್ತಾ ಹೋಗುತಿದ್ದದ್ದನ್ನು ಕಂಡು ದಿಗಿಲು ಪಡುತಿದ್ದ. ಹೀಗೆ ಮುಂದುವರೆದರೆ ಹೊಳೆಯ ನೀರನ್ನೇ ನಂಬಿ ಕೃಷಿಯನ್ನು ಮಾಡಬೇಕಿದ್ದ ತನ್ನ ಮಗನ ಕತೆ, ಹಳ್ಳಿಯ ಕಥೆ ಏನೆಂದು ಹಲವು ಬಾರಿ ಕೇಳಿಕೊಳ್ಳುತ್ತಿದ್ದ.

ಸಿಟಿಯಲ್ಲಿದ್ದ ಗಿರೀಶನ ಮಗ ಸೈದ್ಧಾಂತ್ ನಿಗೆ ಸಣ್ಣವನಿಂದಲೂ ಗಿಡ ಮರಗಳ ಒಡನಾಟ. ಹಲಸಿನ, ಮಾವಿನ ಹಣ್ಣನ್ನು ತಿಂದು ಉಳಿಯುವ ಬೀಜವನ್ನು ಮನೆಯ ಕೈದೋಟದಲ್ಲಿ ಹೂತು ಅದಕ್ಕೆ ದಿನ ನೀರೆರೆಯುವುದು, ಹೂವಿನ ಗಿಡಗಳನ್ನು ನೆಡುವುದು, ಸಂಬಾರ ಬೀಜಗಳನ್ನು ಉದುರಿಸಿ ಸಂಬಾರಸೊಪ್ಪನು ಬೆಳೆದು ಅಮ್ಮನಿಗೆ ತಂದು ಕೊಡುವುದು ಇವೆಲ್ಲ ಅವನಿಗೆ ಬಲು ಇಷ್ಟವಾದ ಕಾಯಕ. ಕೈ, ಬಟ್ಟೆ ಎಲ್ಲ ಮಣ್ಣಾಗುತ್ತದೆ ಬೇಡವೆಂದರೂ ಕೇಳುತ್ತಿರಲಿಲ್ಲ. ಅಕ್ಕ ಪಕ್ಕದ ಮೆನೆಯ ಮಕ್ಕಳೊಟ್ಟಿಗೆ ಆಟವಾಡುವುದೇ ಬಲು ಅಪೂರ್ವ. ಈ ಗಿಡ ಯಾವುದು, ಯಾವ ಹೂವು ಅಥವಾ ಹಣ್ಣು ಬಿಡುತ್ತದೆ, ಯಾವ ಗೊಬ್ಬರ ಹಾಕಬೇಕು? ಎಂಬ ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದ. ಇದನೆಲ್ಲ ಕಂಡು ಗಿರೀಶನಿಗೆ ಕಳವಳದ ಜೊತೆಗೆ ತನ್ನ ಅಪ್ಪನ ಮಾತು ಪದೇ ಪದೇ ನೆನಪಾಗುತಿತ್ತು.

‘ನೀನು ಭೂಮ್ ತಾಯಿ ಬಿಟ್ಟು ಅದೆಷ್ಟೇ ದೂರ ಓಡಿದ್ರೂ ಅಷ್ಟೇಯ, ನಿನ್ ರಕ್ತದಾಗೆ ಹರಿತಾ ಇರದು ಅದೇ ಭೂಮ್ ತಾಯಿ ರಕ್ತಾನೆ! ಅದ್ ನಿನ್ನ ಒಂದಲ್ಲೊಂದ್ ದಿನ ಊರಿಗ್ ವಾಪಸ್ ಕರ್ಕಂಡ್ ಬರುತ್ತೆ ನೋಡ್ತಾ ಇರು’ ಎಂಬ ತಿಪ್ಪಜ್ಜನ ಮಾತು ಎಲ್ಲಿ ನಿಜವಾಗುತ್ತದೋ ಎಂಬ ಒಂದು ಆತಂಕ ಸೈದ್ಧಾಂತ್ ನನ್ನು ಕಂಡು ಗಿರೀಶನಿಗೆ ಪದೇ ಪದೇ ಕಾಡುತಿತ್ತು. ಅದಕ್ಕೆ ಪೂರಕವಾಗಿ ಆತ ತಾನು ಕಾಲೇಜಿನಲ್ಲಿ ಕೃಷಿ ವಿಜ್ಞಾನ ಪದವಿಯನ್ನೇ ಪಡೆಯಬೇಕು ಅಲ್ಲದೆ ಅದರಲ್ಲಿಯೇ ಉನ್ನತ ಶಿಕ್ಷಣವನ್ನೂ ಮಾಡಬೇಕೆಂದು ಹಠ ಹಿಡಿಯುತ್ತಾನೆ. ಅಪ್ಪ ಮಗನನ್ನು ಮನೆಯಿಂದ ಹೊರದಬ್ಬಿದರೂ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ತಾನು ಓದುವುದಾಗಿ ಹೇಳುತ್ತಾನೆ. ಮಗನ ಹಠಕ್ಕೆ ಅಪ್ಪ ಕೊನೆಗೂ ಮಣಿಯಲೇ ಬೇಕಾಗುತ್ತದೆ! ದೇವರ ಮೇಲೆ ಭಾರ ಹಾಕಿ ಮಗನ ಓದಿಗೆ ಅನುಮತಿ ಕೊಡುತ್ತಾನೆ. ತಾನು ಕಟ್ಟಿ ಬೆಳೆಸಿದ ಉದ್ದಿಮೆಯ ಭವಿಷ್ಯ ಏನಾಗುತ್ತದೆಂದು ಪ್ರತಿದಿನ ಚಿಂತಿಸತೊಡಗುತ್ತಾನೆ.

ಒಂದು ಹೊಸ ತಳಿಯ ಗಿಡವನ್ನು ನೆಟ್ಟು ಬೆಳೆಸಿ ಅದರಿಂದ ಅಂದುಕೊಂಡಿರುವ ಮಟ್ಟಿನ ಫಲಿತಾಂಶವನ್ನು ಪಡೆಯುವವರೆಗೂ ಸೈದ್ಧಾಂತ್ ಗೆ ನೆಮ್ಮದಿ ಇರುತ್ತಿರಲಿಲ್ಲ. ಅಲ್ಲದೆ ತಾನು ಓದಲೆಂದು ಹೋದ ಊರಿನಲ್ಲಿ ಕೈದೋಟವಿರುವ ಒಂದು ಸಣ್ಣ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದ. ತನ್ನ ಓದಿನ ವಿದ್ಯೆಯನ್ನೂ ಅಲ್ಲಿ ಬಳಸಿಕೊಳ್ಳುತ್ತಿದ್ದರಿಂದ ಉತ್ತಮ ಗುಣಮಟ್ಟದ ತರಕಾರಿಗಳೇ ಬೆಳೆಯತೊಡಗಿದವು. ಅಲ್ಲದೆ ತಾನು ರಜೆಗೆ ಮನೆಗೆ ಓದಾಗಲೆಲ್ಲ ವಾರಕ್ಕಾಗುವಷ್ಟು ತರಕಾರಿಗಳನ್ನು ಕೊಂಡೊಯ್ಯುತ್ತಿದ್ದ. ತನ್ನ ಅಮ್ಮನಿಗೂ ಹೊಸ ಬಗೆಯ, ಅಧಿಕ ಇಳುವರಿ ಕೊಡುವ ಗಿಡಗಳನ್ನು ಬೇರು ಸಮೇತ ಕಟ್ಟಿಕೊಂಡು ಕೊಟ್ಟು ಬರುತಿದ್ದ. ಅಲ್ಲದೆ ದಿನದಿಂದ ದಿನಕ್ಕೆ ನೀರಿನ ಅಭಾವ ಎಲ್ಲೆಂದರಲ್ಲಿ ಹೆಚ್ಚುತ್ತಿದನ್ನು ಕಂಡು ಅದಕೊಂಡು ಸೂಕ್ತ ಪರಿಹಾರವನ್ನು ಕಂಡುಹಿಡಿಯುವ ಸನಿಹದಲ್ಲಿದ್ದ.

ಹರೀಶನ ಮಗ ತಿಪ್ಪೇಶಿಗೆ ಸಿಟಿಯ ಹುಚ್ಚು ಕನಸು ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ತಿಂಗಳಿಗೊಮ್ಮೆ ಅಪ್ಪನಿಂದ ನೂರೋ, ಇನ್ನೂರೋ ರೂಪಾಯಿಗಳನ್ನು ಕಸಿದುಕೊಂಡು ಸಿಟಿಯ ಬಸ್ಸು ಹಿಡಿದರೆ ಸಿನಿಮಾ, ಜೂಜು ಎನ್ನುತ ಎರಡು ದಿನಗಳ ನಂತರ ಬರುತಿದ್ದ. ಸದಾ ಮನೆಯಲ್ಲಿ ಒಂದಿಲ್ಲೊಂದು ವಿಷಯಕ್ಕೆ ಜಗಳ ಕಾಯುತಿದ್ದ. ಅಲ್ಲದೆ ತನ್ನ ತಿಪ್ಪೇಶಿ ಎಂಬ ಹೆಸರು ಅಸಹ್ಯವಾಗಿದೆಯಂದು ಬದಲಾಯಿಸಿಕೊಳ್ಳುತ್ತೆನೆಂದು ಹೋಗಿ ಅಪ್ಪನಿಂದ ಚೆನ್ನಾಗಿ ಗೂಸಾ ತಿಂದಿರುವುದು ಉಂಟು. ಸೈದ್ಧಾಂತ್ ಹಾಗು ತಿಪ್ಪೇಶಿ ಹೆಸರಿಗೆ ಮಾತ್ರ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಾಗಿದ್ದರು. ಗಿರೀಶನೂ ಹೊಲ ಗದ್ದೆಗಳನ್ನು ಮಾರಿ ಹೋದ ನಂತರ ಊರ ಕಡೆ ಎಂದಾದರೊಮ್ಮೆ ಹಾಗೆ ಬಂದು ಹೀಗೆ ಹೋಗಿ ಬಿಡುತಿದ್ದ. ಅಲ್ಲದೆ ಸೈದ್ಧಾಂತ್ ನನ್ನು ಸಾಧ್ಯವಾದಷ್ಟು ಹಳ್ಳಿಯಿಂದ ದೂರವಿರಿಸಿದ್ದ. ಸೈದ್ಧಾಂತ್ ಗೆ ಅಣ್ಣ ತಿಪ್ಪೇಶಿ ಕಂಡರೆ ಹೆಚ್ಚಿನ ಆತ್ಮೀಯತೆ ಇದ್ದರೂ ತಿಪ್ಪೇಶಿಗೆ ತಮ್ಮನ ಸಿಟಿಯ ಸ್ಕೂಲು, ಅವನ ವೇಷ ಭೂಷಣ, ಬೈಕು ಕಾರುಗಳು ಇವನ್ನೆಲ್ಲ ಕಂಡು ಅಸೂಹೆ. ಹೇಗಾದರೂ ಮಾಡಿ ತಾನೂ ಸಿಟಿಯಲ್ಲಿ ಈ ಬಗೆಯ ಜೀವನವನ್ನು ನೆಡೆಸಬೇಕೆಂಬ ಕನಸು ಆತನಲ್ಲಿ ಹೆಮ್ಮರವಾಗಿ ಬೆಳೆದು ಅದೆಷ್ಟೋ ದಿನಗಳಾಗಿದ್ದವು.

ಬಹಳ ವರ್ಷಗಳ ನಂತರ ಜಾತ್ರೆಗೆಂದು ಊರಿಗೆ ಬಂದಿದ್ದ ಸೈದ್ಧಾಂತ್ ತನ್ನ ದೊಡ್ಡಪ್ಪನ ಮನೆಯ ಹೊಲ ಗದ್ದೆಯನ್ನು ಕಂಡು ಮೂಕವಿಸ್ಮಿತನಾಗುತ್ತಾನೆ. ಆಧುನಿಕ ಬಗೆಯ ಯಾವುದೇ ತಂತ್ರಜ್ಞಾನವಿಲ್ಲದೆಯೇ, ಕೇವಲ ಸಗಣಿ ಗೊಬ್ಬರದಲ್ಲೇ ಅಗಾಧವಾದ ಫಸಲನ್ನು ಬೆಳೆಯಬಲ್ಲ ನೈಪುಣ್ಯತೆಯನ್ನು ಆತ ಬೇರೆಲ್ಲೂ ಕಂಡಿರಲಿಲ್ಲ. ಇದರ ಬಗ್ಗೆ ದೊಡ್ಡಪ್ಪನ್ನು ವಿಚಾರಿಸಿದಾಗ ಆತ ‘ನಾನು ಭೂಮಿಯಲ್ಲಿ ಬೆಳೆಯನ್ನು ಬೆಳೆಯುತ್ತೇನೆ ಹಣವನ್ನಲ್ಲ’ ಎಂದು ಸುಮ್ಮನಾಗುತ್ತಾನೆ. ಆದರೆ ದೊಡ್ಡಪ್ಪನ ವ್ಯವಸಾಯದ ಬಗೆಯನ್ನು ಪೂರ್ತಿಯಾಗಿ ತಿಳಿಯಲೇಬೇಕೆಂಬ ಹಠ ಹಾಗು ಆಸಕ್ತಿ ಒಳಗೊಳಗೇ ಮೂಡುತ್ತದೆ. ದಿನ ಬೆಳೆಗೆದ್ದು ದೊಡ್ಡಪ್ಪನೊಟ್ಟಿಗೆ ಜಮೀನಿಗೆ ಹೋಗುವುದು, ಅವರು ಮಾಡುವ ಪ್ರತಿಯೊಂದು ಕಾರ್ಯವನ್ನು ತದೇಕಚಿತ್ತದಿಂದ ನೋಡುವುದು, ನೋಟ್ ಬುಕ್ಕಿನಲ್ಲಿ ಗುರುತು ಹಾಕಿಕೊಳ್ಳುವುದು, ಸಾಧ್ಯವಾದಷ್ಟು ತಾನೂ ಕೆಲಸದಲ್ಲಿ ಕೈ ಜೋಡಿಸುವುದು ಮಾಡತೊಡಗಿದ.

ಅತ್ತ ಕಡೆ ತಿಪ್ಪೇಶಿ ಸೂರ್ಯ ಆಳೆತ್ತರಕ್ಕೆ ಬಂದರೂ ಏಳುತ್ತಿರಲಿಲ್ಲ, ಇತ್ತ ಕಡೆ ತನ್ನ ತಮ್ಮನ ಮಗ ಸಿಟಿಯಲ್ಲಿದ್ದುಕೊಂಡು ಬೆಳೆದರೂ ಕೊಂಚವೂ ಅಂಜದೆ ತಮ್ಮೊಟ್ಟಿಗೆ ಹೊಲ ಗದ್ದೆಗಳಿಗೆ ಬಂದು ಕೆಸರಿನಲ್ಲಿ ದುಡಿಯುವುದ ಕಂಡು ಹರೀಶನಿಗೆ ಕಳವಳವಾಗುತ್ತದೆ. ಸೈದ್ಧಾಂತ್ ನ ನಡವಳಿಕೆ, ಮಾತಿನ ರೀತಿ ಎಲ್ಲವೂ ಅವನಿಗೆ ಅಪ್ಪ ತಿಪ್ಪಜ್ಜನನ್ನು ನೆನಪಿಸುತ್ತದೆ. ಒಂದು ದಿನ ಬೆಳಗ್ಗೆ ಮನೆಯಿಂದ ಹೊಲಕ್ಕೆ ನಡೆದುಕೊಂಡು ಬರುತ್ತಿರುವಾಗ ಹರೀಶ ತಿಪ್ಪೇಶಿಯನ್ನು ಕುರಿತು ಊರ ಹೊಳೆಯ ನೀರು ಕುಂದುತ್ತಿರುವುದಾಗಿಯೂ, ಹೀಗೆ ಮುಂದುವರೆದರೆ ಇನ್ನೊಂದೆರೆಡು ವರ್ಷಗಳಲ್ಲಿ ಕುಡಿಯಲು ಹಾಗು ಜಮೀನುಗಳಿಗೆ ನೀರಿರದೆ ಊರ ಜನರ ಜೀವನ ಅಸ್ತವ್ಯಸ್ಥವಾಗುತ್ತದೆಯೆಂದೂ ಅಲ್ಲದೆ ಮುಂಬರುವ ನೀರಿನ ಅಭಾವ ತನಗೂ ದಿನೇ ದಿನೇ ಕಾಡುತ್ತಿದೆಯೆಂದು ಹೇಳಿಕೊಳ್ಳುತ್ತಾನೆ.. ಮೊದಲ ಬಾರಿಗೆ ದೊಡ್ಡಪ್ಪ ತನ್ನ ಬಳಿ ಆತನ ಮನದ ತುಮುಲವನ್ನು ಹೇಳತೊಡಗಿದ್ದು ಸೈದ್ಧಾಂತ್ ನಿಗೆ ಸಂತೋಷವಾಗುತ್ತದೆ. ಕೆಲಹೊತ್ತು ಸುಮ್ಮನಿದ್ದ ಆತ ಊರಿನಲ್ಲಿ ವರ್ಷಕ್ಕೆ ಎಷ್ಟು ಮಳೆಯಾಗುತ್ತದೆ ಎಂದು ಕೇಳುತ್ತಾನೆ. ಮೊದಲೆಲ್ಲ ವರ್ಷಕ್ಕೆ ಸುಮಾರು ಎಂಬತ್ತರಿಂದ ನೂರು ಇಂಚಿನವರೆಗೂ ಆಗುತ್ತಿತೆಂದೂ ಇತ್ತೀಚೆಗೆ ಅದು ನಲ್ವತ್ತು ಇಂಚಿನವರೆಗೆ ಇಳಿದಿದೆಯೆಂದು ಹೇಳುತ್ತಾನೆ. ಸೈದ್ಧಾಂತ್ ಅದನ್ನು ತನ್ನ ನೋಟ್ ಬುಕ್ಕಿನಲ್ಲಿ ಗುರುತುಹಾಕಿಕೊಳ್ಳುತ್ತಾನೆ.

ಕೆಲದಿನಗಳ ನಂತರ ಹೊಲದ ಹಾದಿಯಲ್ಲಿ ನೆಡೆದು ಬರುವಾಗ ಸೈದ್ಧಾಂತ್ ದೊಡ್ಡಪ್ಪನ್ನು ಉದ್ದೇಶಿಸಿ ತಾನು ಈ ಊರಿನ ನೀರಿನ ಸಮಸ್ಯೆಗೆ ಒಂದು ಪರಿಹಾರವನ್ನು ಯೋಚಿಸಿರುವುದಾಗಿಯೂ ಅದನ್ನು ಸಾಧಿಸಿ ತೋರಿಸಲು ಅವರ ಸಹಾಯ ಬೇಕೆಂದೂ ಕೇಳಿಕೊಳ್ಳುತ್ತಾನೆ. ಹುಡುಗ ಹುಡುಗಾಟಿಕೆಯ ಮಾತನಾಡುತ್ತಿದ್ದಾನೆ ಎಂದುಕೊಂಡು ಹರೀಶ ಮುಗುಳ್ ನಗುತ್ತ ಮುಂದೆ ಸಾಗುತ್ತಾನೆ. ಅಲ್ಲದೆ ಸೈದ್ಧಾಂತ್ ಯಾವ ಡಿಗ್ರಿಯನ್ನು ಮಾಡಿದ್ದಾನೆ, ಈಗ ಏನು ಮಾಡುತ್ತಿದ್ದಾನೆ ಎಂಬುದೂ ಅರಿಯದ ಆತನಿಗೆ ತನ್ನ ಮುಗುಳ್ನಗೆಯೇ ಅವನ ಪ್ರೆಶ್ನೆಗಳಿಗೆ ತಕ್ಕ ಉತ್ತವೆನ್ನುತಾ ಸುಮ್ಮನಾಗುತ್ತಾನೆ. ಆದರೆ ಕಳೆಗುಂದದ ಸೈದ್ಧಾಂತ್ ತಾನು ಈಗಾಗಲೇ ಊರಿನ ಭಟ್ಟರ ಮನೆಯ ಮೇಲ್ಚಾವಡಿಯಲ್ಲಿ ಅದಕ್ಕೆ ಬೇಕಾದ ಸಿದ್ಧತೆಯನು ಮಾಡಿರುವುದಾಗಿಯೂ ಯಥಾವತ್ತಾದ ಸಿದ್ದತೆಯನ್ನು ತಮ್ಮ ಮನೆಯಲ್ಲೂ ಮಾಡುವುಗಾಗಿ ಹೇಳುತ್ತಾನೆ. ಊರ ಭಟ್ಟರು ನನ್ನ ಮಾವ. ಮಾವನ ಮನೆಗೇ ತನಗೆ ತಿಳಿಸದೆ ಹೋಗಿ ಇಷ್ಟೆಲ್ಲಾ ಮಾಡಿರುವುದು ಹರೀಶನಿಗೆ ಕೊಂಚ ಕೋಪವನ್ನು ತಂದರೂ ಈತ ಮಾಡಿರುವ ಆ ವ್ಯವಸ್ಥೆ ಏನಿರಬಹುದೆಂಬ ಕುತೂಹಲ ಮೂಡುತ್ತದೆ. ಸರಿ ಹೋಗಿ ನೋಡೇ ಬಿಡುವ ಎನ್ನುತ್ತಾ ಅಂದು ಇಬ್ಬರೂ ಹೊಲದ ಕೆಲಸವನ್ನು ಆಳುಗಳಿಗೆ ಹೇಳಿ ಭಟ್ಟರ ಮನೆಯ ಹಾದಿಯನ್ನು ತುಳಿಯುತ್ತಾರೆ.

ಭಟ್ಟರ ಮನೆಯ ಮೇಲಿನ ಛಾವಣಿಯ ಪೈಪಿನಿಂದ ಬೀಳುವ ನೀರನ್ನು ಮೊದಲು ಮರಳು ಹಾಗು ಇದ್ದಿಲಿನಿಂದ ಕೂಡಿದ ಒಂದು ಡಬ್ಬದ ಮೂಲಕ ಹಾಯಿಸಿ ಮತ್ತೊಂದು ಪೈಪಿನ ಮೂಲಕ ಒಂದು ಸಣ್ಣ ಹೊಂಡಕ್ಕೆ ಜೋಡಿಸಲಾಗಿದ್ದಿತು. ಸೈದ್ಧಾಂತ್ ದೊಡ್ಡಪ್ಪನ್ನು ಭಟ್ಟರ ಮನೆಯ ಬಳಿ ಕರೆತಂದು, ಚಾವಣಿಯ ವಿಸ್ತಿರ್ಣ ಐನೂರು ಚದರ ಮೀಟರ್, ಊರಿನಲ್ಲಿ ಬೀಳುವ ಮಳೆಯ ಪ್ರಮಾಣ 40 ಇಂಚು ಅಂದುಕೊಂಡರೂ ಬೀಳುವ ಅಷ್ಟೂ ಮಳೆಯನ್ನು ಶೇಖರಿಸಿದರೆ ಸುಮಾರು 5,00,000 ಲೀಟರ್ ನಷ್ಟು ನೀರನ್ನು ನೀವು ವಾರ್ಷಿಕವಾಗಿ ಶೇಖರಿಸಬಹುದು ಎನ್ನುತ್ತಾನೆ. ನೀರು ಮರಳು ಹಾಗು ಕಲ್ಲಿದ್ದಲ ಮೂಲಕ ಹರಿಯುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸೋಸಲ್ಪಟ್ಟಿರುತ್ತದೆ. ದಿನ ಬಳಕೆಗೆ ಹೇಳಿ ಮಾಡಿಸಿದ ಹಾಗಿರುತ್ತದೆ. ಒಂದು ಕುಟುಂಬದ ದಿನನಿತ್ಯದ ಬಳಕೆ ಸಾವಿರ ಲೀಟರ್ ನಷ್ಟಾದರೂ ವರ್ಷ ಪೂರ್ತಿ ಬೇರ್ಯಾವ ನೀರಿನ ಅವಶ್ಯಕತೆ ಇಲ್ಲದೆಯೇ ಜೀವಿಸಬಹುದು ಎನ್ನುತ್ತಾನೆ.

ಒಂದು ನಿಮಿಷ ಯೋಚಿಸುತ್ತ ನಿಂತ ದೊಡ್ಡಪ್ಪ, ‘ಅದೆಲ್ಲ ಸರಿ ಮಗ, ನಮಗೆ ಕುಡಿಯೋದಕ್ಕಿಂತ ಹೆಚ್ಚಾಗಿ ನಮ್ಮ ಭೂಮ್ ತಾಯಿ ಕುಡಿಬೇಕು. ಅವ್ಳ ಬಾರ್ಯಾಕೆ ಹೋದ್ರೆ ನಮ್ಮ್ ಹೊಟ್ಟೆ ತುಂಬಿದಾಗೆ’ ಎನ್ನುತ್ತಾನೆ.

‘ದೊಡ್ಡಪ್ಪ, ಸಾಕು, ಪ್ಲೀಸ್. ನೀವು ನಿಮ್ಮ ಹೊಲ ಗದ್ದೇನ ಮಾತ್ರ ಭೂಮಿ ತಾಯಿ ಅನ್ಕೊಂಡ್ರೆ ಸಾಲಲ್ಲ. ಇಡೀ ನೆಲ ಈ ಊರೇ ಭೂಮಿ ತಾಯಿ. ಅಲ್ಲಿರೋ ಕಾಡು, ಜಿಗ್ಗು, ಹುಲ್ಲು, ಕಳ್ಳಿ ಎಲ್ಲದಕ್ಕೂ ನೀರ್ ಬೇಕು. ಅದ್ರ ಬಗ್ಗೆನೂ ಸ್ವಲ್ಪ ಯೋಚಿಸಿ. ಅವೂ ಇದ್ರೆ ತಾನೇ ಹಸಿರು. ಮೋಡ, ಮಳೆ?’ ಎನ್ನುತ್ತಾನೆ.

‘ಹುನಪ್ಪ, ನೀನ್ ಹೇಳೋದ್ ನಿಜ. ಆದ್ರೆ ಏನ್ ಮಾಡೋದು. ಈಗ ನೀರಿನ ಸಮಸ್ಯೆಗೆ ಪರಿಹಾರ ಹುಡುಕೋದ ಅತ್ವ ಕಾಡು, ಜಿಗ್ಗು, ಹುಲ್ಲು, ಕಳ್ಳಿ ಗಿಡಗಳನ್ನ ನೆಡುತ್ತಾ ಕೂರೋದಾ?’ ಎಂದು ಮಾರ್ಮಿಕವಾಗಿ ಅಲ್ಲದೆ ಅಷ್ಟೇ ಚಿಂತಾಗ್ರಸ್ತನಾಗಿ ಕೇಳುತ್ತಾನೆ.

‘ನೆಡಿ, ಆದ್ರೆ ಕಡಿ ಬೇಡಿ. ಇರೋ ಹಸಿರನ್ನ ಹಾಗೆಯೇ ಉಳಿಸಿಕೊಳ್ಳಿ .ಈಗ ನಿಮ್ಮ ಹೊಲಗದ್ದೆಗಳ ವಿಷಯಕ್ಕೆ ಬಂದ್ರೆ ಇದೆ ಬಗೆಯ ದೊಡ್ಡ ಹೊಂಡವನ್ನ ಹೊಲದ ಸಮೀಪಕ್ಕೆ ಮಾಡಿ, ಒಂದು ದೊಡ್ಡ ಪೈಪನ್ನು ಅದಕ್ಕೆ ಜೋಡಿಸಿ, ಊರಿನ ಮನೆಯ ಛಾವಣಿಗಳ ನೀರನ್ನು ಆ ಪೈಪಿಗೆ ಸೇರುವಂತೆ ಮಾಡಬೇಕು . ಅಲ್ಲದೆ ಹೊಂಡವನ್ನು ತುಸು ಆಳಕ್ಕೆ ತೊಡುವುದರಿಂದ ಅಂತರ್ಜಲವು ಸೇರಿ ವರ್ಷವಿಡೀ ಹೊಲ ಗದ್ದೆಗಳಿಗೆ ನೀರು ಸಿಗುತ್ತದೆ. ಅಲ್ಲದೆ ಈ ಕೂಡಲೇ ಊರಿನ ಎಲ್ಲ ರೈತರು ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಬೇಕಾಗಿ, ಹನಿ ನೀರಾವರಿ ಸಾಂಪ್ರದಾಯಿಕ ಪದ್ದತಿಯ ನೀರಾವರಿಗಿಂತ ಕೇವಲ ‘ಅರ್ದದಷ್ಟು’ ನೀರಿನಲ್ಲೇ ಉತ್ತಮ ಫಸಲನ್ನು ಬೆಳೆಯಬಹುದಾದ ವಿಧಾನ ಎಂದು ತಿಳಿಸುತ್ತಾನೆ. ಅಷ್ಟರಲ್ಲಾಗಲೇ ಊರಿನ ಹಲವು ಜನರು ಭಟ್ಟರ ಮನೆಯ ಮುಂದೆ ಸೈದ್ಧಾಂತ್ ಹೇಳುತ್ತಿದ್ದ ವಿಷಯವನ್ನು ತದೇಕಚಿತ್ತದಿಂದ ಕೇಳಿಸಿಕೊಳುತ್ತಿರುತ್ತಾರೆ. ಸೈದ್ಧಾಂತ್ ಹೇಳಿ ಮುಗಿಸಿದ ನಂತರ ಕೆಲವರು ಮಳೆ ನೀರಿನ ಸಂರಕ್ಷಣೆಯ ವಿಧಾನವನ್ನು ಮೆಚ್ಚಿದರೆ ಇನ್ನು ಕೆಲವರು ಇದು ಸಾಧ್ಯವೇ ಇಲ್ಲವೆಂದು ನಾನಾ ತರ್ಕಗಳಿಂದ ಈ ವಿಧಾನವನ್ನು ಅಲ್ಲಗೆಳೆಯುತ್ತಾರೆ. ಆದರೆ ನೆಲಕ್ಕಾಗಿ ಯಾವ ಸವಾಲನ್ನೂ ಸ್ವೀಕರಿಸಬಲ್ಲವನಾಗಿದ್ದ ಹರೀಶ, ಸೈದ್ಧಾಂತ್ ನ ಲೆಕ್ಕಾಚಾರವನ್ನು ಮತ್ತೊಮ್ಮೆ ಕೇಳಿಸಿಕೊಳ್ಳತೊಡಗುತ್ತಾನೆ.

ಮಾರನೇ ದಿನ ಬೆಳಗಾಗುವ ಮೊದಲೇ ಮನೆಯ ಹೊರಗಡೆ ಏನೋ ಸದ್ದನ್ನು ಕೇಳಿ ಹೊರಬಂದ ಸೈದ್ಧಾಂತ್ ದೊಡ್ಡಪ್ಪ ಹೊಂಡವನ್ನು ಅಗೆಯುವುದನ್ನು ನೋಡುತ್ತಾನೆ. ಅಲ್ಲದೆ ಮನೆಯ ಛಾವಣಿಗೆ ಜೋಡಿಸಲು ಪೈಪುಗಳನ್ನೂ ತಂದು ಇಡಲಾಗಿರುತ್ತದೆ. ಊರಿನ ಬಹುತೇಕ ಮಂದಿ ತನ್ನ ಮಳೆ ನೀರಿನ ಸಂರಕ್ಷಣೆಯ ವಿಷಯವನ್ನು ಕಾಟಾಚಾರವಾಗಿ ತೆಗೆದುಕೊಂಡರು ತನ್ನ ದೊಡ್ಡಪ್ಪ ಮಾತ್ರ ಇಷ್ಟು ಬೇಗ ಅದನ್ನು ಗ್ರಹಿಸಿರುವುದಲ್ಲದೆ, ಅದಕ್ಕಾಗಿ ಕಾರ್ಯೋನ್ಮುಖವಾಗಿದ್ದು ಸೈದ್ಧಾಂತ್ ಗೆ ಅತೀವ ಸಂತೋಷವನ್ನು ತರುತ್ತದೆ. ತನ್ನ ಅಪ್ಪ ಏನಾದರು ಅವರ ಪಾಲಿನ ಜಮೀನನ್ನು ಮಾರದೆಯೇ ಉಳಿಸಿಕೊಂಡಿದ್ದರೆ ಇಂದು ತಾನು ಇದೆ ಊರಿನಲ್ಲಿ ನೆಲೆಸಿ ಆದರ್ಶ ಕೃಷಿಕನಾಗುತ್ತಿದ್ದೆ ಎಂದುಕೊಳ್ಳುತ್ತಾನೆ.
ನೆಲವನ್ನು ತನಗಿಂತ ಹೆಚ್ಚಾಗಿ ಪ್ರೀತಿಸುವ ದೊಡ್ಡಪ್ಪನನ್ನು ಒಮ್ಮೆ ನೋಡುತ್ತಾನೆ. ವಯಸ್ಸಾಗಲೇ ಅರವತ್ತು ತಲುಪುತ್ತಿದೆ. ಅವರ ಪ್ರತಿ ಗುದ್ದಲಿಯ ಅಗೆತಕ್ಕೂ ಸೈಕಲ್ ಪಂಪಿನಂತೆ ಬರುವ ಏದುಸಿರನ್ನು ಕೇಳಿ ಸೈದ್ಧಾಂತ್ ಕಳವಳಗೊಳ್ಳುತ್ತಾನೆ. ನೋಡಲಾರದೆ ಅವರ ಬಳಿ ಹೋಗಿ ತಾನು ಅಗೆಯುತ್ತೇನೆಂದು ಕೈಲಿದ್ದ ಗುದ್ದಲಿಯನ್ನು ತೆಗೆದುಕೊಳ್ಳುತ್ತಾನೆ.

‘ನನ್ನ ಸೋಂಬೇರಿ ಮಗನಿಗಾದ್ರೂ ಈ ಬುದ್ದಿ ಬರ್ಬರದಿತ್ತಾ!’ ಎಂದು ಹೇಳಿದ್ದು ಸೈದ್ಧಾಂತ್ ನ ಕಿವಿಗೆ ಬೀಳುತ್ತದೆ.

‘ಊರಲ್ಲಿ ಯಾರಿಗೂ ಇದು ಅರ್ಥ ಆಗಿಲ್ಲ ಅನ್ಸುತ್ತೆ ಮಗ.. ನಂಗೆ ಮಾತ್ರ ಏನೋ ನಿನ್ ಮಾತಿನ್ ಮೇಲೆ ತುಂಬ ನಂಬಿಕೆ ಬಂದ್ ಬಿಟ್ಟಿದೆ. ಮೊದ್ಲು ಮನೆ ಹತ್ರ ಮಾಡಿ ಊರೋರಿಗೆ ತೋರ್ಸನ. ಅವುಕ್ಕೆ ಆಮೇಲೆ ಅರ್ಥ ಆದ್ರೂ ಆಗ್ಬಹುದು. ನಿಮ್ಮಜ್ಜ ತಿಪ್ಪಜ್ಜಂಗೂ ನಿನ್ನ್ ಅಂಗೇ ಏನೋ ಹೊಸದು ಮಾಡ್ಬೇಕು ಅಂತ ಇಷ್ಟ ಇತ್ತು.. ಆಗಿನ್ ಕಾಲ್ದಾಗೆ ಬರಿ ಅರ್ಧ ಎಕ್ರೆ ಹೊಲ ಇಟ್ಕೊಂಡು, ಬೆಳ್ದು, ಉಳ್ಸಿ, ಏಳ್ ಎಕ್ರೆ ತನಕ ಮಾಡಿದ್ರು..ಅವ್ರ್ ಸತ್ಯನೇ ಇವತ್ತಿಗೂ ನಮ್ಮ್ ಮೇಲ್ ಎಲ್ಲ ಇರಾದು’ ಎನ್ನುತ್ತಾನೆ. ಸೈದ್ಧಾಂತ್ ಹೊಂಡವನ್ನು ಅಗೆಯುತ್ತಾ ದೊಡ್ಡಪ್ಪನ ಮಾತನ್ನು ಕೇಳಿಸಿಕೊಳ್ಳುತ್ತಿರುತ್ತಾನೆ.

‘ನಾಡಿದ್ದು ಜಾತ್ರೆ ದಿನ ಎರ್ಡ್ ಇಂಚ್ ಮಳೆ ಖಂಡಿತಾ ಬರುತ್ತೆ..ನೋಡಣ ಎಷ್ಟ್ ನೀರ್ ಸಿಗುತ್ತೆ ಅಂತ. ಮತ್ತೆ ಮಗ ಅದೇನೋ ಅಂದಲ್ಲ, ಹನಿ ನೀರಾವರಿ ಅಂತ.. ಅದನ್ನು ಒಂಚೂರು ಅಮ್ಯಾಗೆ ಹೇಳ್ಕೊಡು.. ನೋಡಣ, ಆದ್ರೆ ಅದನ್ನು ಹಾಕೆಬಿಡೋಣ’ ಎನ್ನುತ್ತಾ ನಿಧಾನವಾಗಿ ಮನೆಯೊಳಗೆ ನೆಡೆಯುತ್ತಾನೆ. ದೊಡ್ಡಪ್ಪನ ಮಾತುಗಳನ್ನು ಕೇಳಿ ಇನ್ನೂ ಹೆಚ್ಚಿನ ಉತ್ಸಾಹದಿಂದ ಸೈದ್ಧಾಂತ್ ಹೊಂಡವನ್ನು ತೆಗೆಯತೊಡಗುತ್ತಾನೆ.

ಜಾತ್ರೆಯ ದಿನ ಬೇಗನೆ ಎದ್ದು ಶುಚಿಯಾಗಿ ದೇವಾಲಯದ ಬಳಿ ಹೋದ ಹರೀಶ, ದೇವಾಲಯದ ಕೆಲಸ ಕಾರ್ಯಗಳಲ್ಲಿ ನಿರತನಾಗುತ್ತಾನೆ. ತೋರಣ ಕಟ್ಟುವುದು, ಕೆಂಡಕ್ಕಾಗಿ ಸೌದೆಯ ಉರಿ ಹಚ್ಚುವುದು, ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುವು ಎನ್ನುತ ಅತ್ತಿತ್ತಾ ಓಡಾಡುತ್ತಿರುತ್ತಾನೆ. ಸಮಯ ಸಿಕ್ಕಾಗೆಲ್ಲ ನೆರಳಲ್ಲಿ ಕೂತು ಧಣಿವಾರಿಸಿಕೊಳ್ಳುತ್ತಿರುತ್ತಾನೆ. ಆದರೆ ಇಂದೇಕೋ ಆತನ ಹೃಧಯ ಒಂದೇ ಸಮನೆ ಬಡಿದುಕೊಳ್ಳುತ್ತಿರುತ್ತದೆ. ಸಮಯ ಕಳೆದಂತೆ ಜನಜಂಗುಳಿ ಹೆಚ್ಚಾಗುತ್ತಾ ತೊಡಗಿತು. ಸೈದ್ಧಾಂತ್ ದೇವಾಲಯದ ಆಲದ ಮರದ ಬಳಿ ನಿಂತು ಜಾತ್ರೆಯನ್ನು ವೀಕ್ಷಿಸುತ್ತಿರುತ್ತಾನೆ. ಆಗಾಗ ಆಕಾಶವನು ನೋಡುತ್ತಾ ಮಳೆಬರುತ್ತದೆಂದು ದೊಡ್ಡಪ್ಪ ಹೇಳಿದ ಮಾತು ಅದೆಷ್ಟು ನಿಜವಿರಬಹುದೆಂದು ಕಾಯತೊಡಗುತ್ತಾನೆ. ಮೋಡದ ಒಂದು ಚೂರು ಕುರುವಿರದ ಬರಿದಾದ ನೀಲಿ ಆಕಾಶವನ್ನೂ ಲೆಕ್ಕಿಸದೆ ಊರ ಜನ ಮಳೆ ಬರೊದೊಳಗೆ ಕೆಂಡ ಹಾಯಬೇಕು ಎನ್ನುತ ಕೆಂಡದ ಬಳಿಗೆ ಹೋದದ್ದನ್ನು ಕಂಡು ದಿಗ್ಬ್ರಾಥನಾಗುತ್ತಾನೆ. ಇದೆಂತಹ ನಂಬಿಕೆ ಇವರದು ಎನ್ನುತ್ತಾ ತನ್ನ ದೊಡ್ಡಪ್ಪನನ್ನು ಅರಸತೊಡಗುತ್ತಾನೆ.

ದೇವಾಲಯದ ಹಿಂದಿನ ಹಲಸಿನ ಮರದ ಬುಡದಲ್ಲಿ ಕೂತಿದ್ದ ದೊಡಪ್ಪ ಒಂದೇ ಸಮನೆ ತನ್ನ ಎದೆಯನ್ನು ತಿಕ್ಕಿಕೊಳ್ಳುತ್ತಿರುತ್ತಾನೆ. ಕೂಡಲೇ ಅವನ ಬಳಿಗೆ ಧಾವಿಸಿದ ಸೈದ್ಧಾಂತ್ ಏನಾಯಿತೆಂದು ಕೇಳುತ್ತಾನೆ. ಇದು ತೀರಾ ಸಹಜವೆಂಬಂತೆ ಹರೀಶ ದೇವರ ಕೆಂಡವನ್ನು ಹಾಯ್ದು ಹೋಗು ಎಂದು ಸೈದ್ಧಾಂತ್ ಗೆ ಹೇಳುತ್ತಾನೆ. ಅಷ್ಟರಲ್ಲಾಗಲೇ ಬಹುಪಾಲು ಮಂದಿ ಕೆಂಡವನ್ನು ಹಾಯ್ದಿರುತ್ತಾರೆ. ಚಿಕ್ಕವನಿದ್ದಾಗ ಕೆಂಡ ಹಾಯುವುದನ್ನು ಕಂಡಿದ್ದನಾದರೂ ಒಮ್ಮೆಯೂ ಆತ ಹಾಯುವ ರೇಜಿಗೆ ಹೋಗಿರಲಿಲ್ಲ. ಆದ ಕಾರಣ ಕೊಂಚ ಅಳುಕುತ್ತಲೇ ಕೆಂಡದ ರಾಶಿಯ ತುದಿಯಲ್ಲಿ ನಿಂತಿರುತ್ತಾನೆ. ಹಿಂದಿನಿಂದ ಒಮ್ಮೆಲೇ ಬಂದ ದೊಡ್ಡಪ್ಪ ‘ಹೇ.. ಬಾ ಮಗ ಏನಾಗಕಿಲ್ಲ’ ಎನ್ನುತ್ತಾ ಸೈದ್ಧಾಂತ್ ನ ಕೈಯನ್ನು ಹಿಡಿದುಕೊಂಡು ಮುನ್ನುಗ್ಗುತ್ತಾನೆ. ಹುಲ್ಲು ಹಾಸಿನ ಮೇಲೆ ನಡೆದ ಅನುಭವ ಸೈದ್ಧಾಂತ್ ನಿಗೆ ಆಗುತ್ತದೆ .ಹೀಗೆ ದೇವಾಲಯದ ಸುತ್ತ ನಾಲ್ಕು ಸುತ್ತನ್ನು ದೊಡ್ಡಪ್ಪನ್ನ ಕೈಯನ್ನು ಹಿಡಿದೇ ನೆಡೆಯುತ್ತಾನೆ. ಅಲ್ಲಿಯವರೆಗೂ ಒಂದೇ ಸಮನೆ ನೆಡಯುತಿದ್ದ ದೊಡಪ್ಪ ಕೊನೆಯ ಸುತ್ತಿನಲ್ಲಿ ಒಂದೇ ಸಮನೆ ಕಂಪಿಸತೊಡಗುತ್ತಾನೆ. ಕೊನೆಯ ಸುತ್ತಿನ ಕೆಂಡದ ಮೇಲೆ ಕಾಲಿಡುತ್ತಿದ್ದಂತೆ ದೊಪ್ಪನೆ ಬಿದ್ದುಬಿಡುತ್ತಾನೆ.

ಸೈದ್ಧಾಂತ್ ಹಾಗು ಊರಿನ ಜನರೆಲ್ಲರೂ ಸೇರಿ ಹರೀಶನನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ನಾಪತ್ತೆಯಾಗಿದ್ದ ತಿಪ್ಪೇಶಿ ವಿಷಯ ತಿಳಿದು ಸಂಜೆಯ ವೇಳೆಯಷ್ಟೊತ್ತಿಗೆ ಆಸ್ಪತ್ರೆಗೆ ಬರುತ್ತಾನೆ. ದೊಡ್ಡಪ್ಪನ ಮಾತಿನಂತೆ ಆಸ್ಪತ್ರೆಯ ಕಿಟಕಿಯ ಮೂಲಕ ಸೈದ್ಧಾಂತ್ ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿರುತ್ತಾನೆ. ಸ್ವಲ್ಪ ಸಮಯದ ನಂತರ ಹೊರ ಬಂದ ಡಾಕ್ಟರ್ ನನ್ನು ಏನಾಯಿತೆಂದು ವಿಚಾರಿಸಿದ ತಿಪ್ಪೇಶಿಗೆ ಡಾಕ್ಟರ್ ಆತನ ಹೆಗಲ ಮೇಲೆ ಕೈ ಹಾಕಿ ‘ಸಾರಿ’ ಎಂದು ಮುನ್ನೆಡೆಯುತ್ತಾರೆ. ಹೃದಯಘಾತದಿಂದ ಹರೀಶ ಮೃತಪಟ್ಟಿರುತ್ತಾನೆ. ಎಲ್ಲರೂ ಮೌನವಾಗುತ್ತಾರೆ. ಸೈದ್ಧಾಂತ್ ನಿಂತಲ್ಲೇ ಕುಸಿಯುತ್ತಾನೆ. ತಿಪ್ಪೇಶಿ ಡಾಕ್ಟರ್ ಹಿಂದೆಯೇ ಹೋಗಿ ಮರಣ ದೃಢೀಕರಣ ಪತ್ರಕ್ಕೆ ಸಹಿ ಹಾಕಿ ಕೊಡಬೇಕೆಂದು ಕೇಳಿಕೊಳ್ಳುತ್ತಾನೆ.

ಹರೀಶನ ಅಂತ್ಯಕ್ರಿಯೆಗೆ ತಮ್ಮ ಗಿರೀಶನೂ ಬಂದಿರುತ್ತಾನೆ. ತಿಪ್ಪಜ್ಜನ ಪಕ್ಕದಲ್ಲಿಯೇ ಅಂತ್ಯಕ್ರಿಯೆಗೆ ಜಾಗ ಮಾಡಲಾಗಿರುತ್ತದೆ. ಮಾರನೇ ದಿನ ಗಿರೀಶ ಮಗನನ್ನು ಊರಿಗೆ ಬರಲು ಹೇಳಿದರೂ ಸೈದ್ಧಾಂತ್ ನಿರಾಕರಿಸುತ್ತಾನೆ. ಅವರು ಹೊರಡಬೇಕೆಂದು, ತಾನು ಕೆಲವು ದಿನಗಳ ನಂತರ ಫೋನ್ ಮಾಡುವುದಾಗಿ ತಿಳಿಸುತ್ತಾನೆ. ಕೇವಲ ಒಂದು ದಿನ ಬಂದ ಮಳೆಗೆ ಸಾಕಷ್ಟು ಪ್ರಮಾಣದ ತಿಳಿ ನೀರು ತಾನು ಹಾಗು ದೊಡಪ್ಪ ತೋಡಿದ ಹೊಂಡದಲ್ಲಿ ಶೇಕರಿಸಲ್ಪಟ್ಟಿದ್ದನ್ನು ಕಂಡು ಊರ ಜನ ಸೈದ್ಧಾಂತ್ ನಲ್ಲಿಗೆ ಬಂದು ಅದರ ಬಗ್ಗೆ, ಹನಿ ನೀರಾವರಿಯ ಬಗ್ಗೆ ಹಾಗು ಇನ್ನು ಹಲವು ಕೃಷಿ ವಿಚಾರಗಳ ಬಗ್ಗೆ ತಿಳಿಯತೊಡಗುತ್ತಾರೆ. ಸೈದ್ಧಾಂತ್ ನಿಗೆ ಈಗ ತಾನು ಊರ ಬಿಡುವುದು ಕಷ್ಟಸಾಧ್ಯವೆಂದೆನಿಸಿರುತ್ತದೆ. ಜೀವನವೆಲ್ಲ ಈ ಊರು ಹಾಗು ಜಮೀನಿನಲ್ಲೇ ಕಳೆಯಬೇಕೆಂಬ ಉತ್ಕಟ ತವಕ ಆತನ ಮನದೊಳಗೆ ದಿನೇ ದಿನೇ ಮೂಡಿ ಬೆಳೆಯುತ್ತಿರುತ್ತದೆ.

ಕೆಲ ದಿನಗಳ ನಂತರ ತಿಪ್ಪೇಶಿ ಸೈದ್ಧಾಂತ್ ನಲ್ಲಿಗೆ ಬಂದು ತಾನು ಊರ ಹೊಲವನ್ನೆಲ್ಲ ಮಾರಲು ನಿಶ್ಚಹಿಸಿರುವುದಾಗಿಯೂ ಸಿಟಿಗೆ ಹೋಗಿ ಉದ್ಯಮೆಯೊಂದನ್ನು ಶುರು ಮಾಡುವುದಾಗಿ ತಿಳಿಸುತ್ತಾನೆ. ತಿಪ್ಪೇಶಿಯ ಸಿಟಿಯ ಹುಚ್ಚುಕನಸಿನ ಬಗ್ಗೆ ಚೆನ್ನಾಗಿ ತಿಳಿದಿದ್ದ ಸೈದ್ಧಾಂತ್ ಏನೇ ಹೇಳಿದರೂ ಕೇಳುವ ಮನಸ್ಥಿತಿಯಲ್ಲಿರದ ತಿಪ್ಪೇಶಿ ಮಾರಲು ಬೇಕಾದ ಕಾಗದ ಪತ್ರವನ್ನೆಲ್ಲ ತಯಾರು ಮಾಡಿಕೊಂಡಿರುತ್ತಾನೆ.

ರಾತ್ರಿಯೆಲ್ಲ ಯೋಚಿಸಿದ ಸೈದ್ಧಾಂತ್ ಮಾರನೇ ದಿನ ಅಪ್ಪನಿಗೆ ಫೋನ್ ಮಾಡಿ ತನಗೆ ತಕ್ಷಣ ಇಪ್ಪತ್ತು ಲಕ್ಷ ಬೇಕೆಂದೂ, ಕಾರಣ ಏನೆಂದು ಕೇಳಬಾರದೆಂದು ಹೇಳುತ್ತಾನೆ. ಒಂದೇ ಬಾರಿಗೆ ಮಗ ಇಷ್ಟೊಂದು ಭಾರಿ ಮೊತ್ತದ ಹಣವನ್ನು ಕೇಳುತ್ತಿರುವುದು ಇದೆ ಮೊದಲ ಬಾರಿಯಾದರೂ ಗಿರೀಶನಿಗೆ ತನ್ನ ಮಗನ ಮೇಲೆ ಸಂಪೂರ್ಣ ಭರವಸೆಯಿರುತ್ತದೆ. ಇನ್ನೆರೆಡು ದಿನದಲ್ಲಿ ಹಣವನ್ನು ಹೊಂದಿಸುವುದಾಗಿಯೂ ಮನೆಗೆ ಬಂದು ತೆಗೆದುಕೊಂಡು ಹೋಗಬೇಕಾಗಿ ಹೇಳುತ್ತಾನೆ. ಅಪ್ಪನಿಂದ ಹಣವನ್ನು ಪಡೆದ ಸೈದ್ಧಾಂತ್ ಹಣವನ್ನು ಇನ್ನು ಕೆಲವೇ ವರ್ಷದಲ್ಲಿ ಹಿಂದಿರುಗಿಸುವುದಾಗಿಯೂ ಹೇಳಿ, ಅಷ್ಟೂ ಹಣವನ್ನು ಹಳ್ಳಿಗೆ ತಂದು ತಿಪ್ಪೇಶಿಯ ಮುಂದಿಡುತ್ತಾನೆ. ಅಲ್ಲದೆ ಆತನ ಅಷ್ಟೂ ಆಸ್ತಿಯನ್ನು ತಾನು ಖರೀದಿಸುವುಗಾಗಿ, ಊರ ಮನೆ ಮಾತ್ರ ಹಾಗೆಯೇ ಇರಲಿ ಎಂದು ಹೇಳುತ್ತಾನೆ. ಸೈದ್ಧಾಂತ್ ನ ಮಾತನ್ನು ಕೇಳಿ ತಿಪ್ಪೇಶಿಗೆ ಸ್ವರ್ಗವೇ ತನ್ನ ಮುಂದೆ ಬಂದು ನಿಂತ ಅನುಭವವಾಗುತ್ತದೆ. ನಂತರದ ಎರಡೇ ದಿನಗಳಲ್ಲಿ ಕಾಗದ ಪತ್ರವೆಲ್ಲ ತಯಾರು ಮಾಡಿ ಅಪ್ಪನಿಂದ ಬಂದ ಆಸ್ತಿಯನ್ನು ಸೈದ್ಧಾಂತ್ ನ ಹೆಸರಿಗೆ ಮಾರಿಬಿಡುತ್ತಾನೆ.

ದಿನಗಳು ಕಳೆದವು..
ನೋಡ ನೋಡುತ್ತಲೇ ತಿಪ್ಪೇಶಿ ಸಿಟಿಯ ಹಾದಿಯನ್ನು ಹಿಡಿದಿರುತ್ತಾನೆ. ನೇಗಿಲ ಹೊತ್ತು, ಎತ್ತುಗಳ ಹಿಂದೆ ಸೈದ್ಧಾಂತ್ ಹೊಲದ ಕಡೆ ಹೋಗುತ್ತಿರುತ್ತಾನೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!