Featured ಪರಿಸರದ ನಾಡಿ ಬಾನಾಡಿ

ಟಿಟ್ಟಿಭ – 24*7

ಹಕ್ಕಿ ವೀಕ್ಷಣೆಯನ್ನು ನಾನು ಹವ್ಯಾಸವಾಗಿ ಕಳೆದ ಹತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಕರ್ನಾಟಕದ ದಕ್ಷಿಣ ಭಾಗ ಮತ್ತು ಪಶ್ಚಿಮದ ಕರಾವಳಿಯಲ್ಲಿ ಅಡ್ಡಾಡಿದ್ದೇನೆ. ನಾನೆಲ್ಲೇ ಹೋದರು ಅಲ್ಲಿನ ವಾತಾವರಣಕ್ಕನುಸಾರವಾಗಿ ಒಂದಿಲ್ಲಾ ಒಂದು ವಿಶಿಷ್ಠ ಪ್ರಬೇಧ ಸಿಗುತ್ತದೆ. ಅದು ಪ್ರಾಣಿ, ಪಕ್ಷಿ, ಚಿಟ್ಟೆ, ಜೇಡ. ಕೀಟ ಅಥವಾ ಗಿಡವಿರಬಹುದು. ಪ್ರಕೃತಿಯಲ್ಲಿ ಅಡಗಿದ್ದನ್ನು ನೋಡುವ ಹಂಬಲ. ಇಂಥಾ ಹೊಸತನ್ನು ಹಿಡುಕುವಾಗ ನನಗೆ ಪ್ರತಿಬಾರಿಯೂ, ಎಲ್ಲೆಡೆಯೂ ಎದುರಾಗುವ ಹಳೆಯ ಗೆಳೆಯನೊಬ್ಬನಿರುವನು. ಅವನೇ ಟಿಟ್ಟಿಭ – Red-wattled lapwing (Vanellus indicus). ಈ ಟಿಟ್ಟಿಭ ನನ್ನ ಮಿತಿಯಾದ ಕರ್ನಾಟಕ ಮಾತ್ರವಲ್ಲ, ರೇಖಾಂಶ ಹಿಡಿದು ಕನ್ಯಾಕುಮಾರಿಯಿಂದ ಹಿಮಾಲಯದ 1800 ಮೀಟರ್ ಎತ್ತರದವರೆಗೂ ಕಾಣಸಿಗುತ್ತದೆ. ಅಕ್ಷಾಂಶ ಹಿಡಿದು ಗುಜರಾತಿನಿಂದ ನಾಗಾಲ್ಯಾಂಡಿನತ್ತ ಹೋದರೆ ಅಲ್ಲೂ ಸಿಗುತ್ತದೆ. ಭಾರತದಾಚೆಗಿನ ಬಾಂಗ್ಲಾ,ಪಾಕಿಸ್ತಾನ, ಮಯನ್ಮಾರ್ ಮತ್ತು ಶ್ರೀಲಂಕಾದಲ್ಲೂ ಕೆಂಪು ಟಿಟ್ಟಿಭನ ಪ್ರಾಬಲ್ಯವಿದೆ.
ಜೌಗುಕೋಳಿಯ ಗಾತ್ರ, 33.ಸೆಂ.ಮೀ ಉದ್ದದ ಈ ಟಿಟ್ಟಿಭನಿಗೆ ಕಪ್ಪು ತಲೆ, ಕತ್ತು, ಎದೆ, ರೆಕ್ಕೆ ಮತ್ತು ಬಾಲದ ಅಂಚು ಕೂಡಾ ಕಪ್ಪು. ತಿಳಿಗಂದು ಬೆನ್ನು. ಕಿವಿ- ಹಿಂಗತ್ತಿನಿಂದ ಹಿಡಿದು ಕೆಳ ಮೈ ಬಿಳಿ, ಕಪ್ಪು ತುದಿಯ ಕೆಂಪು ಕೊಕ್ಕು. ಕಣ್ಣಿನ ಮುಂದೆ ಕೆಂಪು ಬಣ್ಣದ ಮಾಂಸದಂತಹ ಗುತ್ತಿ (Wattle). ಉದ್ದವಾದ ಹಳದಿ ಬಣ್ಣದ ಕಾಲುಗಳು.

Red wattled lapwing – ಟಿಟ್ಟಿಭ

 

ಗಂಡು, ಹೆಣ್ಣು ಒಂದೇ ನಮೂನೆ. ಹುಲ್ಲುಗಾವಲು, ಮೈದಾನ, ಗುಡ್ಡ, ಕಣಿವೆ ಅಥವಾ ದೊಡ್ಡ ಕೆರೆ ಯಾವುದೇ ಇರಲಿ ಎಲ್ಲೆಂದರಲ್ಲಿ, ಎಲ್ಲಾ ರೀತಿಯ ಭೂಪ್ರದೇಶದಲ್ಲಿ ಈ ಟಿಟ್ಟಿಭ ಲಭ್ಯ. ಚರಾಡ್ರಿಡೇ (charadriidae) ಕುಟುಂಬದ ವನೆಲಿನೆ (vanellinae) ಉಪಕುಟುಂಬಕ್ಕೆ ಸೇರಿದ ಈ ಟಿಟ್ಟಿಭ ಪಕ್ಷಿಲೋಕದ ಕಾವಲುಗಾರ. ಹಗಲಿರಲೀ,ಇರುಳಿರಲೀ ಈ ಟಿಟ್ಟಿಭ ಸದಾ ಎಚ್ಚರವಿರುತ್ತದೆ. ಅಪಾಯದ ಸಣ್ಣ ಮುನ್ಸೂಚನೆ ಸಿಕ್ಕರೂ ಸಾಕು ಇವು ಜಾಗರೂಕವಾಗುತ್ತವೆ. Did-he-do-it ಎಂಬ ಸ್ವರ ಹೊರಡಿಸುತ್ತದೆ. ಅಪಾಯ ಇಲ್ಲ ಎಂದು ಖಾತ್ರಿಯಾಗುವವರೆಗೂ ಕೂಗುತ್ತಾ ಇರುತ್ತದೆ. ಉಳಿದ ಪ್ರಾಣಿ ಪಕ್ಷಿಗಳನ್ನು ಎಚ್ಚರಿಸುತ್ತದೆ. ಬೇಟೆಗಾರರಿಗಂತೂ ಇದು ಬಲು ಕಿರಿ ಕಿರಿ ಹಕ್ಕಿ. ಬೇಟೆಗೆಂದು ಕಾಡು ಹೊಕ್ಕರೆ ಸಾಕು Did-he-do-it! ಸುಲಭದಲ್ಲಿ ಸಿಗಬಹುದಾಗಿದ್ದ ಬೇಟೆ ಕೈ ತಪ್ಪುವಂತೆ ಮಾಡುವುದು. ಹಾಗಾಗಿ ಇದು ಕಾಡಿನ ಕಾವಲುಗಾರ. ಕಾಡೇ ಕಡಿಮೆಯಾಗಿರುವ ಈ ಸಮಯದಲ್ಲಿ ಬೇಟೆಗಾರರೂ ಕಡಿಮೆಯಾಗುತ್ತಿದ್ದಾರೆ ಆದರೆ ಇರುವ ಸ್ವಲ್ಪ ಕಾಡಿನಲ್ಲಿ ಉಳಿದಿರುವ ಜೀವಿಗಳನ್ನು ಕ್ಯಾಮೆರಾ ಕಣ್ಣಲ್ಲಿ ಬೇಟೆಯಾಡಲು ನನ್ನಂತೆ ಹಲವು ಉತ್ಸಾಹೀ ಪರಿಸರಾಸಕ್ತರು ಮತ್ತು ಛಾಯಾಗ್ರಾಹಕರು ಕಾಡಿಗೆ ಹೋಗುತ್ತಾರೆ. ಹಲವು ಬಾರಿ ನಮ್ಮಂಥವರಿಗೂ ಈ ಟಿಟ್ಟಿಭ ಉಪದ್ರ ಕೊಟ್ಟಿರುವುದು ಸುಳ್ಳಲ್ಲ.
ನಮ್ಮ ತೋಟದ ಹತ್ತಿರ ಇರುವ ದಡದಳ್ಳಿ ಕೆರೆಯ ಸಮೀಪ ಕಲ್ಲುಗಳಿಂದ ಕೂಡಿದ ಭೂಪ್ರದೇಶವಿದೆ ಅಲ್ಲಿ ನತ್ತಿಂಗಗಳು /Night Jar ಹೇರಳವಾಗಿ ವಾಸಿಸುತ್ತವೆ. ಹಗಲಲ್ಲಿ ಅವನ್ನು ಹುಡುಕುವುದು ಬಲು ಕಷ್ಟ. ಇಲ್ನೋಡಿ : ಎಲ್ಲಿರುವೆ ನೀನು? ನತ್ತಿಂಗ!

ಆದರೂ ಹಗಲಲ್ಲಿ ಅವು ನಿದ್ದೆ ಮಾಡುವುದರಿಂದ ನಿಶ್ಯಬ್ದವಾಗಿ ಹುಡುಕಿದರೆ ಅವನ್ನು ಬಲು ಹತ್ತಿರದಿಂದ ಕಾಣಬಹುದು. ಆದರೆ ಅದೇ ಜಾಗದಲ್ಲಿ ಸುಮಾರು 10-15 ರುಧಿರ (ಕೆಂಪು) ಟಿಟ್ಟಿಭಗಳು ವಾಸಿಸುತ್ತವೆ. ಹಾಗಾಗಿ ನಾನು ಆ ಜಾಗಕ್ಕೆ ಕಾಲಿಡುವುದೇ ತಡ ಅವು ಒಂದೇ ಸಮನೆ ಕಿರುಚಲಾರಂಭಿಸುತ್ತವೆ. ಇದರಿಂದಾಗಿ ಆ ನಿದ್ದೆಯಲ್ಲಿರುವ ನತ್ತಿಂಗಗಳೂ ಎಚ್ಚರವಾಗುತ್ತವೆ, ಬಹುತೇಕ ನತ್ತಿಂಗಗಳ ಹತ್ತಿರ ಹೋಗುವುದಕ್ಕೆ ಮೊದಲೇ ಅವು ಜಾಗ ಖಾಲಿ ಮಾಡಿರುತ್ತವೆ.

ಟಿಟ್ಟಿಭಗಳು ಹಗಲಲ್ಲಿ ಎಷ್ಟು ಪ್ರಾಮಾಣಿಕವಾಗಿ ಪಹರೆ ಕಾಯುತ್ತವೆಯೋ ಅಷ್ಟೇ ನಿಶ್ಠೆಯಿಂದ ಇರುಳು ಕೂಡಾ ಕಾರ್ಯ ನಿರ್ವಹಿಸುತ್ತವೆ. ಆಹಾರ ಸೇವನೆಯನ್ನು ಹೆಚ್ಚು ರಾತ್ರಿ ವೇಳೆಯಲ್ಲೇ ಮಾಡುತ್ತವೆ. ಕೀಟಾಹಾರಿಗಳಾದ ಇವು ಗೊಬ್ಬರ ಹುಳು, ಬಸವನ ಹುಳು, ಹಲ್ಲಿ ಮುಂತಾದವುಗಳನ್ನು ತಿನ್ನುತ್ತವೆ. ಬೆಳದಿಂಗಳ ರಾತ್ರಿ ಇವು ಬಲು ಚುರುಕು ಎಂದು ಕೆಲವರ ಅನುಭವ. ಅಂಥಾ ಅನುಭವ ನಮ್ಮ ರಾಷ್ಟ್ರಕವಿ ಕುವೆಂಪುರವರಿಗೂ ಆದಂತಿದೆ. ಅವರು ಇದನ್ನು ತೆನೆ ಹಕ್ಕಿ, ಜೊನ್ನವಕ್ಕಿ ಮುಂತಾದ ಹೆಸರಿನಲ್ಲಿ ವರ್ಣಿಸಿದ್ದಾರೆ. ಅವರ ಕವಿಸಾಲು ಹೀಗಿದೆ:

ಜ್ಯೋತ್ಸ್ನೆ, ತುಂಬಿ ತುಳುಕಿ ಹರಿಯೆ
ಸ್ನಿಗ್ಧಶರತ್ಕಾಲದಿ,
ಮುಗಿಲು ರಂಗವಲ್ಲಿ ಬರೆಯೆ
ವ್ಯೋಮ ಪಟದ ನೀಲದಿ,
ವಿಯತ್ತಳದಿ ಮೌನ ಮುದ್ರೆ
ಜಗನ್ಮುಖದಿ ಶಾಂತ ನಿದ್ರೆ
ಮರೆಯೆ ಕೂಗಿ ಕರೆವೆ ನೀನು,
ಮುದ್ದು ಜೊನ್ನವಕ್ಕಿಯೇ
ಮೇಲೆ ನೋಡೆ ಬರಿಯ ಬಾನು;
ಕಾಣೆ ನೀನು ಹಕ್ಕಿಯೇ!

ತ್ಯಾಗಿಯಂತೆ ನೆಲವನುಳಿಯೆ;
ಮಮತೆ ಮರಿಯ ಗೂಡಿದು.
ಭೋಗಿಯಂತೆ ನಭವ ಹಳಿಯೆ;
ಸಿರಿಯ ತವರು ಬೀಡದು!
ಹಗಲಿನಲ್ಲಿ ನೆಲಕೆ ಸೇರಿ,
ಇರುಳಿನಲ್ಲಿ ಬಾನ್ಗೆ ಹಾರಿ
ಬಿಸಿಲು ತಂಪುಗಳನು ಮೀರಿ
ಸಮತೆಯಿಂದ ನಡೆವುದಂ
ಕಲಿಸು ನನಗೆ ಮೊದಲು; ಕೊನೆಗೆ
ನೆಲ ಬಾನ್ಗಳ ಪಡೆವುದಂ!

ಟಿಟ್ಟಿಭಗಳು ಮಾರ್ಚಿನಿಂದ ಆಗಸ್ಟ್’ವರೆಗಿನ ಅವಧಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಇವು ಗೂಡು ನಿರ್ಮಿಸುವುದಿಲ್ಲ. ಮಣ್ಣಿನಲ್ಲಿ ಸಣ್ಣ ಗುಂಡಿ ಮಾಡಿ ಅದರಲ್ಲಿ ಕಲ್ಲುಗಳನ್ನು ಜೋಡಿಸುತ್ತವೆ, ಗದ್ದೆಗಳಲ್ಲಿ ಇವು ಸಣ್ಣ ಮಣ್ಣಿನುಂಡೆ ಮಾಡಿ ಜೋಡಿಸುವುದನ್ನೂ ನೋಡಿದ್ದೇನೆ. ಕಲ್ಲುಗಳ ಮಧ್ಯೆ 3-4 ಮೊಟ್ಟೆಗಳನ್ನು (42*30ಎಂ.ಎಂ) ಇಡುತ್ತವೆ. ತಂದೆ ತಾಯಿಯರಿಬ್ಬರೂ ಕಾವು ಕೊಡುವ ಕ್ರಿಯೆಯಲ್ಲಿ ತೊಡಗುತ್ತವೆ. ಮೊಟ್ಟೆಗಳು ಸದಾ ಅಪಾಯದಲ್ಲಿರುತ್ತವೆ. ಅಥವಾ ಮೊಟ್ಟೆಯನ್ನು ತಾಯಿಯು ಅಪಾಯ ಸಂಭಾವ್ಯ ಜಾಗದಲ್ಲೇ ಇಡುತ್ತದೆ. ಬಯಲಿನಲ್ಲಿ, ಹಸುಗಳು ಮೇಯುವಲ್ಲಿ, ನಾಯಿಗಳು ಅಡ್ಡಾಡುವಲ್ಲಿ ಇರುವುದರಿಂದ ಮೊಟ್ಟೆಗೆ ಆತಂಕ ಜಾಸ್ತಿ. ಪ್ರಕೃತಿಯು ಯಾಕಪ್ಪಾ ಹೀಗೆ ಮಾಡಿದೆಯೆಂದು ನಾನು ಅನೇಕ ಬಾರಿ ಅಂದುಕೊಳ್ಳುತ್ತಿದ್ದೆ.

ಅದೊಂದು ದಿನ ನನಗೆ ಆ ಮೊಟ್ಟೆಯನ್ನು ನೋಡುವ ಭಾಗ್ಯ ಒದಗಿಬಂತು. ನಾನು ಪ್ರತಿದಿನ ಚಿಕಿತ್ಸಾಲಯಕ್ಕೆ ಹೋಗಿಬರುವ ದಾರಿ ಬದಿಯ ಪಾಳು ಬಿದ್ದ ತೋಟದಲ್ಲಿ ಟಿಟ್ಟಿಭವೊಂದು ಕುಳಿತಿರುತ್ತಿತ್ತು. ಪ್ರತಿದಿನ ಅಲ್ಲೇ ಕೂರುವುದನ್ನು ಕಂಡ ನಾನು ಅಲ್ಲಿ ಮೊಟ್ಟೆಗೆ ಕಾವು ಕೊಡುತ್ತಿರಬಹುದೆಂದು ಊಹಿಸಿ ಮೃದು ಹೆಜ್ಜೆಯೊಂದಿಗೆ ಅಲ್ಲಿ ಹೋದೆ. ಆದರೂ ನನ್ನ ಹೆಜ್ಜೆ ಕಂಡ ಆ ರೋಹಿತ ಟಿಟ್ಟಿಭವು ಯಾವ ಸದ್ದೂ ಮಾಡದೆ (ಸಾಮಾನ್ಯವಾಗಿ Did-he-do-it ಗಲಾಟೆ ಇರುವುದೆಂಬುದನ್ನು ನೆನಪಿಸಿಕೊಳ್ಳಿ) ಕುಳಿತಿದ್ದ ಜಾಗದಿಂದ ತುಸು ದೂರ ನಡೆದುಕೊಂಡೇ ಸಾಗಿತು. ಅದು ಕುಳಿತಿದ್ದ ಜಾಗದಲ್ಲಿ ನಾನು ಕಣ್ಣಾಡಿಸಿದೆ, ಹತ್ತು ನಿಮಿಷ ಹುಡುಕಾಡಿದೆ, ಅಲ್ಲಲ್ಲಿ ಹಸುವಿನ ಸಗಣ, ಮನುಷ್ಯನ ಲದ್ದಿ ಬಿಟ್ಟರೆ ಮತ್ತೇನು ಕಾಣಲಿಲ್ಲ! ಮತ್ತೆ ಕತ್ತು ತಿರುಗಿಸಿದರೆ ಅಲ್ಲೇ ಸುತ್ತ 5-6 ದನಗಳು ಮೇಯುತ್ತಿದ್ದವು. ಆ ದಿನ ನನಗಷ್ಟೇ ದಕ್ಕಿದ್ದು. ಮರುದಿನವೂ ಆ ಟಿಟ್ಟಿಭ ಮತ್ತದೇ ಜಾಗದಲ್ಲಿ ಕುಳಿತಿತ್ತು. ಈ ಬಾರಿ ನಾನು ಮತ್ತೂ ಎಚ್ಚರಿಕೆಯಿಂದ ಅದಿದ್ದ ಜಾಗಕ್ಕೆ ಹೋದೆ. ಆ ಟಿಟ್ಟಿಭ ನಿನ್ನೆಯಂತೆ ಇಂದೂ ಓಡಿ ಹೋಯಿತು. ಈ ಬಾರಿ ನನ್ನ ಕಣ್ಣು ಮತ್ತಷ್ಟು ಸೂಕ್ಷ್ಮವಾಗಿತ್ತು. ಅಲ್ಲಿನ ಸಣ್ಣ ಕಲ್ಲುಗಳನ್ನು ಗಮನಿಸುತ್ತಾ ಬಂದೆ. ಅಬ್ಬಬ್ಬಾ! ಎಂಥಾ ವರ್ಣತಾದ್ರೂಪ್ಯ! ಆ ಕಲ್ಲುಗಳ ನಡುವೆ ನಾಲ್ಕು ಮೊಟ್ಟೆಗಳಿದ್ದವು. ಕಲ್ಲೊಳಗೆ ಕಲ್ಲಾಗಿ ಸೇರುವುದರಿಂದಲೇ ಆ ಮೊಟ್ಟೆಗಳು ಯಾರ ಕಣ್ಣಿಗೂ ಬೀಳುವುದಿಲ್ಲ.

ಮೇಲಿನ ಛಾಯಾಚಿತ್ರದಲ್ಲಿ ವರ್ಣವ್ಯತ್ಯಾಸ ಗೊತ್ತಾಗುವುದಾದರೂ, ಆ ವಿಶಾಲ ಬಯಲಲ್ಲಿ ಅದು ವ್ಯತ್ಯಾಸವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ.

ಆದರೂ ಅದನ್ನು ಅಕಸ್ಮಾತ್ತಾಗಿ ಮನುಷ್ಯನಾಗಲೀ, ದನಗಳಾಗಲೀ ಯಾವ ಸಮಯದಲ್ಲಾದರೂ ಮೆಟ್ಟಿಬಿಡಬಹುದು. ಮುಂಗುಸಿ,ಹಾವುಗಳಿಗೆ ಇದರ ಮೊಟ್ಟೆ ಬಲು ಪ್ರಿಯ, ಹಾಗಾಗಿ ಅವುಗಳಿಂದಲೂ ಇದಕ್ಕೆ ಅಪಾಯ ಖಾತ್ರಿ. ಅಕಸ್ಮಾತ್ತಾಗಿ ಮಳೆಯಾದರೆ ಮರುದಿನ ಆ ಜಾಗವನ್ನು ಊಳುವುದರಿಂದಲೂ ಮೊಟ್ಟೇ ನಾಶವಾಗಬಹುದು. ಒಂದು ಅಧ್ಯಯನದ ಪ್ರಕಾರ ಮೊಟ್ಟೆ ಮರಿಯಾಗುವ ಪ್ರಮಾಣ ಕೇವಲ 40%. ವಿಶ್ವಮೋಹನ ತಿವಾರಿ ಎಂಬ ಹಿರಿಯ ಪಕ್ಷಿವೀಕ್ಷಕರು ಟಿಟ್ಟಿಭಗಳು ಮೊಟ್ಟೇ ಇಟ್ಟ ನಂತರವೂ ಪ್ರಣಯಚೇಷ್ಟೆ (courtship) ಮಾಡುತ್ತವೆ ಎಂದು ಗಮನಿಸಿದ್ದಾರೆ.ಇಂಥಾ ನಡವಳಿಕೆ ಬೇರಾವ ಪ್ರಾಣಿ ಪಕ್ಷಿಗಳಲ್ಲೂ ಇಲ್ಲ!


Yellow wattled lapwing mating

ಮೊಟ್ಟೆಗಳು ನಾಶವಾದರೆ ಕೂಡಲೇ ಇವು ಪುನಃ ಮೊಟ್ಟೆ ಇಡುತ್ತವೆಯಂತೆ! ನಾನು ಕಂಡ ಮೊಟ್ಟೆಗೆ ಯಾವ ಹಾನಿಯೂ ಆಗಲಿಲ್ಲ.

22ನೇ ದಿನ ಮೊಟ್ಟೆಯೊಡೆದು ಮರಿ ಹೊರ ಬಂದಿತ್ತು (give title)

22 ದಿನವೂ ಟಿಟ್ಟಿಭ ಯಾವ ಸದ್ದೂ ಮಾಡುತ್ತಿರಲಿಲ್ಲ. ಅಂದು ಮಾತ್ರ ನಾನು ಹೆಜ್ಜೆ ಇಡುತ್ತಿದ್ದಂತೆ ಬರೀ ಸದ್ದು. ನಡೆದುಕೊಂಡೇ ಹೋಗುತ್ತಿದ್ದ ಟಿಟ್ಟಿಭ ಅಂದು ಸುತ್ತು ಸುತ್ತು ಹಾರತೊಡಗಿತು. ಸದಾ ಒಂದು ಟಿಟ್ಟಿಭವನ್ನು ಕಾಣುತ್ತಿದ್ದ ನಾನು ಅಂದು ಎರಡನ್ನು ಕಂಡೆ. ಈಗ ಅವು ನನ್ನನ್ನು ಹೆದರಿಸತೊಡಗಿದವು. ನನ್ನ ಮುಖದ ನೇರಕ್ಕೆ ಹಾರುತ್ತಿದ್ದವು. ಮರಿಗಳಿಗೆ ಅಪಾಯದ ಮುನ್ಸೂಚನೆ ಕೊಟ್ಟಿದ್ದವು. ಎಲ್ಲಾ ಮರಿಗಳು ಅಡಗಿ ಕೊಂಡಿದ್ದವು. ಈ ಟಿಟ್ಟಿಭಗಳ ಮರಿಗಳೇ ಹಾಗೆ, ಹುಟ್ಟಿದ ಕೆಲ ನಿಮಿಷಗಳಲ್ಲಿ ಓಡಾಡುತ್ತವೆ. ಅಪ್ಪ ಅಮ್ಮ ತುತ್ತು ಕೊಡುವುದಿಲ್ಲ. ಆಹಾರ ಎಲ್ಲಿದೆಯೆಂದು ನಿರ್ದೇಶಿಸುವುದಷ್ಟೇ ತಂದೆತಾಯಿಯ ಕೆಲಸ. ಅಂತೂ ಇಂತೂ ಬಯಲಲ್ಲಿ ಬೆತ್ತಲಾಗಿ ಬಿದ್ದ ಮೊಟ್ಟೆಗಳು ಮರಿಗಳಾದರೆ ಸಾಯುವುದು ಬಲು ವಿರಳವಂತೆ. 90% ಮರಿಗಳು ದೊಡ್ಡವಾಗುತ್ತವೆಂದು ಅದೇ ಅಧ್ಯಯನ ತಿಳಿಸುತ್ತದೆ.

ಮರಿಗಳಿರುವ ಸಮಯದಲ್ಲಿ ಟಿಟ್ಟಿಭಗಳು ಬಲು ಜೋರು. ಅತ್ತ ಸುಳಿದಾಡುವ ಕಾಗೆ, ಕೆಂಭೂತ ಮತ್ತು ಹಿಂಸ್ರ ಪಕ್ಷಿಗಳನ್ನು ಓಡಿಸಿ ಬಿಡುತ್ತವೆ. ಮೊಟ್ಟೆ ಇದ್ದಾಗ ಇಲ್ಲದ ಈ ವೀರತ್ವ ಮರಿಯಾದಾಗ ಹೇಗೆ ಮತ್ತು ಯಾಕೆ? ನನಗಂತೂ ಯಕ್ಷಪ್ರಶ್ನೆ!

ಒಂದು ನಂಬಿಕೆಯ ಪ್ರಕಾರ ಟಿಟ್ಟಿಭಗಳು ಎತ್ತರದ ಜಾಗವಾದ ಬಂಡೆ ಅಥವಾ ಗುಡಿಸಿಲಿನ ಮಾಡಿನ ಮೇಲೆ ಮೊಟ್ಟೆ ಇಟ್ಟರೆ ಅವು ಅದು ಪ್ರಳಯದ ಮುನ್ಸೂಚನೆಯಂತೆ. ಅದೇ ಮಣ್ಣನ್ನು ಹೆಚ್ಚು ಅಗೆದು ಮೊಟ್ಟೇ ಇಟ್ಟರೆ ಬರಗಾಲದ ಸೂಚನೆಯಂತೆ. ಇದರ ಸತ್ಯಾಸತ್ಯತೆ ಬಗ್ಗೆ ನನಗಂತೂ ಗೊತ್ತಿಲ್ಲ. ಯಾಕೆಂದರೆ ಟಿಟ್ಟಿಭಗಳು ಮೊಟ್ಟೆ ಇಟ್ಟದ್ದು ಪಕ್ಕನೆ ಗೊತ್ತಾಗುವುದೇ ಇಲ್ಲ!

ರುಧಿರ ಟಿಟ್ಟಿಭದಂತೆ ಭಾರತದಾದ್ಯಂತ (ಈಶಾನ್ಯ ಭಾರತ ಹೊರತು ಪಡಿಸಿ) ಹರಡಿಕೊಂಡಿರುವ ಇನ್ನೊಂದು ಪ್ರಭೇದ ಪೀತ ಟಿಟ್ಟಿಭ/ ಹಳದಿ ಟಿಟ್ಟಿಭ. ಆಕಾರದಲ್ಲಿ ಏನೂ ವ್ಯತ್ಯಾಸ ಇಲ್ಲ, ಮರಳುಗಂದು ಬಣ್ಣದ ಈ ಪಕ್ಷಿಯ ಹೊಟ್ಟೆ ಭಾಗ ಬಿಳುಪಾಗಿದ್ದು ತಲೆಗೆ ಟೊಪ್ಪಿಯಿಟ್ಟಂತೆ ಕಪ್ಪು ಬಣ್ಣವಿರುವುದು, ಕಣ್ಣಿನ ಮೇಲಿನ ಹಾಗು ಮುಂಬದಿಯಲ್ಲಿ ಉಜ್ಜಲ ಹಳದಿಯ ಮಾಂಸಲ ಮಡಿಕೆಗಳು (wattle/lappets) ಕಂಡುಬರುತ್ತವೆ.


ಪೀತ ಟಿಟ್ಟಿಭ/ ಹಳದಿ ಟಿಟ್ಟಿಭ

ಹಾರುವಾಗ ಕರಿ ರೆಕ್ಕೆಯಲ್ಲಿ ಬಿಳಿ ಪಟ್ಟಿ ಎದ್ದು ಕಾಣುವುದು. ಈ ಟಿಟ್ಟಿಭ ಕೆಂಪು ಟಿಟ್ಟಿಭದಂತೆ ಎಲ್ಲಾ ಕಡೆ ಕಾಣಸಿಗದು. ಶುಷ್ಕವಾದ ತೆರೆದ ಬಯಲುಗಾಡು, ಬೀಳು ಬಿದ್ದ ಜಮೀನುಗಳಲ್ಲಿ ಮಾತ್ರ ಕಾಣಿಸುವುದು. ಇವು ಕೂಡಾ ಆ ಮಟ್ಟಿಗೆ 24*7 ಕಾಯಕ ನಿರ್ವಹಿಸುತ್ತವೆ. ಹಳದಿ ಟಿಟ್ಟಿಭವು ಸದಾ 10-20ರ ಗುಂಪಿನಲ್ಲಿ ಇರುತ್ತವೆ. ಟ್ವಿಟ್ ಟ್ವಿಟ್ ಟ್ವಿಟ್ ಎಂಬ ಬೇಗ ಬೇಗ ಪುನರಾವೃತ್ತಿಗೊಳ್ಳುವ ಶಬ್ದ. ಗೂಡು, ಮರಿಗಳ ನಡವಳಿಕೆ, ಪಾಲನೆ ಎಲ್ಲಾ ಕೆಂಪು ಟಿಟ್ಟಿಭದಂತೆ. ತುಂಬ ಸೆಖೆ ಇರುವಾಗ ತಾಯಿ ಟಿಟ್ಟಿಭವು ರೆಕ್ಕೆಯನ್ನು ಒದ್ದೆ ಮಾಡಿ ಬಂದು ಮೊಟ್ಟೆಯನ್ನು ತೇವ ಮಾಡುತ್ತದೆ.


Yellow wattled lapwing Chick – ಮರಿ ಹಳದಿ ಟಿಟ್ಟಿಭ

ವಿಶ್ವದಾದ್ಯಂತ 60 ಪ್ರಭೇದದ ಚರಾಡ್ರಿಡೇ ಕುಟುಂಬದ ಹಕ್ಕಿಗಳು ಲಭ್ಯ. ಇದರಲ್ಲಿ ಪ್ರಮುಖವಾದುದು ಟಿಟ್ಟಿಭ ಮತ್ತು ಗೊರವಗಳು (plovers). ಭಾರತದಲ್ಲಿ ಏಳು ತೆರನಾದ ಟಿಟ್ಟಿಭಗಳು ಲಭ್ಯವಿದ್ದರೂ ಕರ್ನಾಟಕದಲ್ಲಿ ಮೂರು ತೆರನಾದ ಟಿಟ್ಟಿಭಗಳು ಮಾತ್ರ ಕಾಣಸಿಗುವುದು. ಮೊದಲೆರಡರ ಪರಿಚಯ ಈಗಾಗಲೇ ನಿಮಗಾಗಿದೆ. ಮೂರನೆಯದು ಅಪರೂಪಕ್ಕೆ ಯುರೋಪಿನಿಂದ ಬರುವ ಚಳಿಗಾಲದ ವಲಸೆಗಾರ. ಅದುವೇ ಬೂದು ತಲೆಯ ಟಿಟ್ಟಿಭ. ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುವ ಇದು ದಕ್ಷಿಣ ಭಾರತದಲ್ಲಿ ವಿರಳ. ನಾನು ವಾಸಿಸುವ ಮೈಸೂರಿನಲ್ಲಿ ವಿರಳಾತಿ ವಿರಳ. ಇದುವರೆಗೆ ಇಲ್ಲಿ ನಾಲ್ಕು ಬಾರಿ ದಾಖಲಾಗಿದೆ.


ಚಳಿಗಾಲದ ವಲಸೆಗಾರ – ಬೂದು ತಲೆಯ ಟಿಟ್ಟಿಭ / Grey headed lapwing

ಈ ವರ್ಷ (2017) ಮೈಸೂರಿನ ಹೃದಯ ಬಾಗದಲ್ಲಿರುವ ಕುಕ್ಕರಳ್ಳಿಕೆರೆಯಲ್ಲಿ ಕಾಣಿಸಿಕೊಂಡು ಪರಿಸರಾಸಕ್ತರನ್ನು ಪುಳಕಗೊಳಿಸಿದ್ದು ಸುಳ್ಳಲ್ಲ. ಅಂತೆಯೇ ಮಂಗಳೂರಿನ ಕೆಂಜಾರಿನಲ್ಲೂ ಕಳೆದೆರಡು ವರ್ಷಗಳಿಂದ ನೋಡಿದವರಿದ್ದಾರೆ. ಕೆಂಪು ಟಿಟ್ಟಿಭಕ್ಕಿಂತ ತುಸು ಎತ್ತರ ಇರುವ ಬೂದು ತಲೆಯ ಟಿಟ್ಟಿಭವು ಇಲ್ಲಿ ಸ್ಥಳೀಯ ಟಿಟ್ಟಿಭಗಳೊಂದಿಗೆ ಮೂರು ತಿಂಗಳ ಕಾಲ ಸೌಹಾರ್ದತೆಯಿಂದ ಇತ್ತು.

24*7- ಸದಾಕಾಲ ಕ್ರಿಯಾಶೀಲವಾಗಿರುವ, ಜಾಗೃತವಾಗಿರುವ ಸಾಧು ಸ್ವಭಾವದ ಟಿಟ್ಟಿಭಗಳು ನಮಗೆ ಜೀವನಾದರ್ಶವನ್ನು ತೋರುತ್ತಿವೆ, ಪಕ್ಷಿ ವೀಕ್ಷಕರಿಗೊಂದು ಸ್ಫೂರ್ತಿಯೇ ಹೌದು.

ಚಿತ್ರಗಳು: ಡಾ. ಅಭಿಜಿತ್ ಎ.ಪಿ.ಸಿ., ಗುರುಮ್ ಏಕಲವ್ಯ, ಸದಾಶಿವ ರಾವ್ ಮಾಯ್ಲಂಕೋಡಿ, ವಿಜಯಲಕ್ಷ್ಮಿ ರಾವ್ ನಂಜನಗೂಡು.

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!