ಅಂಕಣ

ಜಗಳ್’ಬಂಧಿ ಪಾರ್ಟಿಗಳು

ಮತ್ತೊಂದು ಜಗಳಾಪರ್ವಕ್ಕೆ ರಾಜ್ಯದಲ್ಲಿ ಗರಿಗೆದರಿದೆ. ಅತ್ತ ಬಾಹುಬಲಿ ಚಲನಚಿತ್ರದ ಪ್ರಚಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಹೊರತಾಗಿಯೂ ಮಾಧ್ಯಮಗಳಲ್ಲಿ ಯಡಿಯೂರಪ್ಪ-ಈಶ್ವರಪ್ಪನವರ ನಡುವಿನ ಜಂಗೀ ಕುಸ್ತಿಯ ಬಗ್ಗೆ ವರದಿ ಹಾಗೂ ಚರ್ಚೆಗಳು ಪ್ರಸಾರವಾಗುತ್ತಿವೆಯೆಂದರೆ ಅದರ ತೀವ್ರತೆ ಅರಿವಾಗಿಬಿಡುತ್ತದೆ. ಬ್ರಿಗೇಡ್ ಕಟ್ಟಿಕೊಂಡು ಬಿಗ್ರೇಡ್ ರಾಜಕಾರಣ ಮಾಡಲು ಮುಂದಾಗಿ ಕೈಸುಟ್ಟುಕೊಂಡಿರುವವರೇ ಈಗ ‘ಸಂಘಟನೆ ಉಳಿಸಿ’ ಎಂಬ ಕೂಗಿನೊಂದಿಗೆ ಅನಾವಶ್ಯಕ ಸಮಾವೇಶಗಳನ್ನು ಆಯೋಜಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿರುವ ನಿಷ್ಠಾವಂತ ಕಾರ್ಯಕರ್ತರು ಮಾತ್ರ, ಅಯ್ಯೋ, ಇದು ‘ಸಂಘಟನೆ ಉಳಿಸಿ’ ಅಲ್ಲ ‘ಸಂಘಟನೆ ಅಳಿಸಿ’ ಸಮಾ’ವೇಶ’ ಎಂದು ಹಲ್ಲುಕಡಿಯುತ್ತಿದ್ದಾರೆ.  ಆದರೂ ಪ್ರತಿಷ್ಠೆಯ ಬಾಹುಬಲವನ್ನು ಪ್ರದರ್ಶಿಸಲು ನಿಂತವರ ಮುಂದೆ ಪಕ್ಷದ ಹಿತ ಚಿಂದಿಯಾಗಿದೆ.

“ಒಂದರ ಅಂತ್ಯ ಇನ್ನೊಂದರ ಆರಂಭ” ಎಂಬ ಮಾತು ರಾಜಕೀಯ ಪಕ್ಷಗಳ ಒಳಜಗಳದ ವಿಷಯಕ್ಕೆ ತುಂಬಾ ಚೆನ್ನಾಗಿ ಅನ್ವಯವಾಗುತ್ತದೆ. ಇನ್ನೇನು ಒಂದು ಕಿತ್ತಾಟ ತಹಬಂಧಿಗೆ ಬಂತು ಎನ್ನುವಷ್ಟರಲ್ಲಿ ಇನ್ನೆಲ್ಲೋ ಅಪಸ್ವರ, ಅಸಮಾಧಾನ ಸ್ಪೋಟಗೊಂಡಿರುತ್ತದೆ. ಒಳಜಗಳ ಹಾಗೂ ಬಣಗಳ ನಡುವಿನ ಒಣ ಸಂಘರ್ಷದ ಬಾಧೆ ಯಾವ ರಾಜಕೀಯ ಪಕ್ಷವನ್ನೂ ಬಿಟ್ಟಿಲ್ಲ. ಯಾವುದೇ ಒಂದು ರಾಜಕೀಯ ಪಕ್ಷ ತನ್ನ ಎದುರಾಳಿ ಪಕ್ಷದಲ್ಲಿನ ಅಸಮಾಧಾನ ಬಂಡಾಯಗಳ ಬಗ್ಗೆ ಮಾತನಾಡುವುದು ಎಂದರೆ ‘ತನ್ನ ಮೊಬೈಲ್ ಪರದೆಯೇ ಬಿರುಕು ಬಿಟ್ಟ ಹೊರತಾಗಿಯೂ ಪಕ್ಕದವನ ಸ್ಕ್ರೀನ್’ಗಾರ್ಡ್ ಮೇಲಿನ ಗೀರುಗಳತ್ತ ಬೆರಳು ತೋರಿಸಿದಂತೆಯೇ ಸರಿ’! ಸಾವಿಲ್ಲದ ಮನೆಯ ಸಾಸಿವೆಯಷ್ಟೆ ಅಲ್ಲ ಇಂದಿಗೆ ಜಗಳವಿಲ್ಲದ ರಾಜಕೀಯ ಪಕ್ಷ ಸಿಗುವುದು ಅಸಾಧ್ಯವೇ ಸರಿ. ಎಷ್ಟೇ ಭಿನ್ನ, ಶಿಸ್ತಿನ ಸಿಪಾಯಿ, ಜನಪರ ಎಂದೆಲ್ಲಾ ಘೋಷಿಸಿಕೊಂಡು ಮೈಲೇಜ್ ಗಿಟ್ಟಿಸಿದರೂ  ಕಿತ್ತಾಟಕ್ಕೆ ಇಳಿದರೆ ಅದೆಲ್ಲಾ ಕ್ಷಣಮಾತ್ರದಲ್ಲಿ ಮಂಗಮಾಯ. ಇಲ್ಲಿ ಯಾವ ಜಗಳವೂ ಜನಹಿತಕ್ಕಾಗಿಯೋ ಅಥವಾ ಅಭಿವೃದ್ಧಿಯ ಮಂತ್ರದ ಕಾರಣಕ್ಕಾಗಿಯೋ ನಡೆಯುವುದಿಲ್ಲ. ಅವುಗಳು ನಡೆಯುವುದೇನಿದ್ದರೂ ವೈಯಕ್ತಿಕ ಲಾಭದ  ಲಾಲಸೆ ಹಾಗೂ ಆ ಸಂಬಂಧದ ತಂತ್ರ ಮತ್ತು ಕುತಂತ್ರಗಳ ಭಾಗವಾಗಿಯಷ್ಟೇ. ಯಾವ ಪಕ್ಷವಾದರೂ ಸರಿಯೇ ಒಮ್ಮೆ ಪರಸ್ಪರ ಜಗಳಕ್ಕೆ ನಿಂತರೆಂದರೆ ಅದು ಅಷ್ಟು ಸುಲಭಕ್ಕೆ ತಣ್ಣಗಾಗದು.

ಇನ್ನು ಈ ಜಗಳಗಳನ್ನು ಅತ್ಯಂತ ವ್ಯವಸ್ಥಿತವಾಗಿ ಬೆಳೆಸುವ ಕೆಲಸವನ್ನು, ತಮ್ಮನ್ನು ತಾವು ಸಾಮಾಜಿಕ ಕಳಕಳಿಯ ವಕ್ತಾರರುಗಳೆಂದು ಘೋಷಿಸಿಕೊಳ್ಳುವ ಮಾಧ್ಯಮಗಳು ಚಾಚೂತಪ್ಪದೆ ಮಾಡಿಕೊಂಡು ಬರುತ್ತಿವೆ. ರಾಜಕೀಯ ಮುಖಂಡನೋರ್ವ ಎಲ್ಲೋ ಯಾವುದೋ ಸಂದರ್ಭದಲ್ಲಿ ಬೇರೊಬ್ಬರ ಬಗ್ಗೆ ಆಡಿದ ಮಾತಿಗೇ ಇನ್ನೊಂದಷ್ಟು ಸ್ಪೆಷಲ್ ಇಪೆಕ್ಟ್ ಸೇರಿಸಿ ಬಿತ್ತರಿಸುತ್ತಲೇ ಹೊತ್ತಿ ಉರಿಯುವಂತೆ ತುಪ್ಪಸುರಿಯುತ್ತವೆ. ಇನ್ನು ಜಗಳದ ತೀವ್ರತೆ ಹೆಚ್ಚುತ್ತಿದ್ದಂತೆ ಹೇಳಿಕೆ ಪ್ರತಿಹೇಳಿಕೆಗಳನ್ನು ಅಕ್ಕಪಕ್ಕ ಒಂದೇ ಫ್ರೇಮ್’ನಲ್ಲಿ ಬಿತ್ತರಿಸುವ ಮೂಲಕ ಗುಂಪುಗಾರಿಕೆಗೆ ಪರೋಕ್ಷ ಪ್ರಚೋದನೆ ಒದಗಿಸುತ್ತವೆ. ಇನ್ನು ಇದನ್ನೆಲ್ಲಾ ಆಧರಿಸಿ ಅಲ್ಲಲ್ಲಿ ಆಯಾ ನಾಯಕರ ಹಿಂಬಾಲಕರು ಮೌತ್ ಪೀಸ್’ಗಳಂತೆ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಲಾರಂಭಿಸುತ್ತಾರೆ. ಎಂಬಲ್ಲಿಗೆ ಜಗಳವೂ ತಾರಕಕ್ಕೇರುತ್ತದೆ. ಕೊನೆಗೊಂದು ಸಂಧಾನ ಒಂದಷ್ಟು ಆಮಿಷ ಸದ್ಯಕ್ಕೆ ಎಲ್ಲವನ್ನೂ ತಣ್ಣಗೆ ಮಾಡಿಬಿಡಬಹುದಾದರೂ ಅದನ್ನು ಶಾಶ್ವತ ಪರಿಹಾರ ಎನ್ನಲಾಗದು. ಇವುಗಳನ್ನೆಲ್ಲಾ ಆದ್ಯಂತ ಲೈವ್ ಬಿತ್ತರಿಸುವ ಮೂಲಕ  ಸುದ್ದಿವಾಹಿನಿಗಳು ತಮ್ಮ ಹೊಟ್ಟೆತುಂಬಿಸಿಕೊಳ್ಳುತ್ತವೆಯಷ್ಟೇ!

ತಾವು ಪ್ರತಿನಿಧಿಸುವ ಪಕ್ಷದ ತತ್ವ ಸಿದ್ಧಾಂತಗಳನ್ನು ಹೀಗೆ ಹಾದಿ-ಬೀದಿಯಲ್ಲಿ ಕೆ.ಜಿ ಲೆಕ್ಕದಲ್ಲಿ ಮಾರಾಟಕ್ಕೆ ಹಾಕಿ ಅನಾವಶ್ಯಕ ಮಾರಾಮಾರಿಗಿಳಿಯುವವರ ಸಂಖ್ಯೆ ಎಲ್ಲಾ ಪಕ್ಷದಲ್ಲೂ ಹೆಚ್ಚುತ್ತಿದೆ. ಇದರಿಂದ ನಿರಂತರವಾಗಿ ಯಾಮಾರುತ್ತಿರುವವರು ಮಾತ್ರ ಕಾರ್ಯಕರ್ತರು. ಹೀಗೆ ತಮ್ಮದೇ ಪಕ್ಷದ ಮಾನ ಮರ್ಯಾದೆಯನ್ನು ಹರಾಜು ಹಾಕುವುದೇ ರಾಜಕೀಯ ತಂತ್ರಗಾರಿಕೆ ಎಂದುಕೊಳ್ಳುವವರ ಮಾನಸಿಕ ಅರಾಜಕತೆಗೆ ಏನೆನ್ನಬೇಕೋ ತಿಳಿಯದು.  ನಿಷ್ಠೆಯೆನ್ನುವುದು ಕನಿಷ್ಠವಾದಾಗ ಇಂಥ ಅನಿಷ್ಟಗಳು ನಡೆಯುತ್ತಲೇ ಇರುತ್ತವೆ. ನಿಷ್ಠ, ಸಂತುಷ್ಟ ಹೊಸಮುಖಗಳ ಪ್ರತಿಷ್ಠಾಪನೆಯೇ ಇದಕ್ಕೆಲ್ಲಾ ಪರಿಹಾರವೇನೋ?!!

ಓವರ್ ಡೋಸ್: ಕೆಲವು ರಾಜಕೀಯ ಮುಖಂಡರು ಭಾರೀ ಚಟುವಟಿಕೆಯಿಂದಿರುತ್ತಾರೆ. ಆದರೆ ಅದು ಪಕ್ಷವಿರೋಧಿ ಆಗಿರುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!