ಅಂಕಣ

ಇವರು ನೋವುಗಳ ಹತ್ತಿಕ್ಕಿ ನಗುವನ್ನು ಹೊತ್ತಿಸುವ ಅದೃಶ್ಯವಾಣಿಗಳು …!!

ಮಹಾನಗರಿಗಳ ಟ್ರಾಫಿಕ್ ಜಾಮ್’ಗಳೆಂಬ ಕಿರಿಕಿರಿ ಯಾರಿಗೆ ತಾನೇ ಇಷ್ಟ? ಇಳಿ ವಯಸ್ಸಿನಲ್ಲೂ ತನ್ನ ಮಾಲೀಕನ ಜಿಪುಣುತನಕ್ಕೆ ಮಣಿದು ಸಾಯುವವರೆಗೂ ಗೇಯುವ ಎಂಜಿನ್’ಗಳ ಆಕ್ರಂದನದ ದಟ್ಟ ಹೊಗೆಯಾಗಲಿ, ಪಕ್ಕದಲ್ಲೆಲ್ಲೋ ಮರಳುಗಾಡಿನ ಬೆಟ್ಟವೇ ಎದ್ದು ಕೂತಿರುವಂತೆ ಕಣ್ಣು ಕಿವಿ ಮೂಗು ಬಾಯಿ ಎಲ್ಲೆಂದರಲ್ಲಿ ಹೊಕ್ಕು ಉಪದ್ರವ ಮಾಡುವ ಧೂಳಾಗಲಿ,  ಹುಚ್ಚು ನಾಯಿಗಳ ಸಂತೆಯೇ ತಮ್ಮನ್ನು ಅಟ್ಟಾಡಿಸಿಕೊಂಡು ಬಂದವೇನೋ ಎಂಬಂತೆ ಹೆದರಿ ಬೊಬ್ಬಿಕ್ಕುವ ವಾಹನಗಳ ರಣಕಹಳೆ ಅಥವಾ ತಲೆಗೆದರಿ ಚಿಂದಿ  ಬಟ್ಟೆಯನ್ನುಟ್ಟು ಅನುಕಂಪದ ಕಂಗಳಿಂದ ಕೈಯಲ್ಲಿರುವ ಹೂವನ್ನೋ, ದಿನಪತ್ರಿಕೆಗಳನ್ನೋ ಅಥವಾ ಮತ್ಯಾವುದೋ ಮಕ್ಕಳನ್ನು ಸೆಳೆಯುವ ಅಂದದ ಗೊಂಬೆಯನ್ನೂ ಹಿಡಿದು ಬೇಡವೆಂದರೂ ಕೊಂಡುಕೊಳ್ಳುವಂತೆ ಪೀಡಿಸುವ ಎಳೆವಯಸ್ಸಿನ ಹುಡುಗರ ಉಪಟಳ, ಇವೆಲ್ಲವನ್ನು ಘಂಟೆಗಳ ಕಾಲ ಅನುಭವಿಸಲು ಋಷಿಮುನಿಗಳ ತಾಳ್ಮೆ ಯೂ  ಕೆಲವೊಮ್ಮೆ ಸಾಲದು.

ಸಾಕಪ್ಪ ಸಾಕು ಎನ್ನುತ ನೀಲಕಂಠನ ಕತ್ತಿನ ಹಾವಿನಂತಿರುವ ‘ಹ್ಯಾಂಡ್ಸ್ -ಫ್ರೀ’ ಗಳನ್ನು ಎಳೆದು ಕಿವಿಯೊಳಗೆ ತೂರಿಸಿಕೊಂಡು, ಮೊಬೈಲ್ ನಿಂದ FM  ನ ಬಟನ್ ಅನ್ನು ಒಮ್ಮೆ ಒತ್ತಿದರೆ ಅಲ್ಲೂ ಸಹ  ‘ಹಾಡ್’ ಗಳಿಗಿಂತ  ಜಾಸ್ತಿ ತಲೆ ಚಿಟ್ಟಿಡಿಸುವ  ‘ಆಡ್’ಗಳ ಸಂತೆಯೇ! ಕೆಲವೊಮ್ಮೆ ಬೇರೆ ದಾರಿಯಿಲ್ಲದೆ ಈ ‘ಆಡ್’ಗಳ ಸಂಗೀತವನ್ನೇ ಚಿತ್ರಗೀತೆಗಳಂತೆ ಭಾವಿಸಿ ತೃಪ್ತರಾಗಬೇಕಾಗುತ್ತದೆ. ಸಾಲದಕ್ಕೆ ರೇಡಿಯೋ ಜಾಕಿಗಳು. ಮಾತಿನ ಯಂತ್ರದಂತೆ ಬಡಬಡಿಸುವ ಅವರ ಚೀರಾಟ. ಹಲವು ಬಾರಿ ಇವರುಗಳ ಬಣ್ಣಭರಿತ ಆ ಅದೃಶ್ಯ ನಟನೆಗೆ ಕೇಳುಗ ಕುಪಿತಗೊಂಡರೆ, ಕೆಲವೊಮ್ಮೆ ಈ ಚೀರಾಟಗಳೇ ತುಂಟಾಟಗಳಾಗಿ ಅವುಗಳಲ್ಲೇ ಮರೆತುಬಿಡುತ್ತಾನೆ. ಕೆಲವರಿಗಂತೂ ಸಂಜೆ ಸರಿಯಾಗಿ ಇದೆ ಸಮಯಕ್ಕೆ, ಇದೆ ಸಿಗ್ನಲ್’ನ ದಟ್ಟ ಸದ್ದಿನಲ್ಲಿ ತನಗರಿಯದಂತೆ ಕೈಗಳು FM  ಅನ್ನು ಹೊತ್ತಿಸಿಬಿಡುತ್ತವೆ, ಇಂತಹ ಕೆಲವು RJ  ಗಳ ಮಾತಿನ ಪುಳಕ ತಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯಲು ತವಕಿಸುತ್ತಿರುವಂತೆ!  ಆ ಮುದ್ದು ಮುದ್ದಾದ ಮಾತುಗಳು, ನೊಂದ ಮನಸ್ಸುಗಳಿಗೆ ಸಾಧ್ಯವಾದಷ್ಟೂ ಸಾಂತ್ವನ ತುಂಬುವ ಕಲೆ, ನಗಲು ಹಾಗು ನಗಿಸಲು ಪ್ರಯತ್ನಿಸುವ ಜೋಕುಗಳು ಹಾಗು ಅದಕ್ಕೆ ತಕ್ಕ ಮಟ್ಟಿನ ‘ಸೆನ್ಸ್ ಆಫ್ ಹ್ಯುಮರ್’ ಸಾಲದಕ್ಕೆ  ಫೋನ್ ಹಾಯಿಸಿ ಆಕಡೆಯಿಂದ ಮನಬಂದಂತೆ ಉಗಿಸಿಕೊಂಡರೂ ಮನ ಕುಗ್ಗದ ಕ್ಯಾರೆಕ್ಟರ್ ಈ RJ ಗಳದ್ದು.

ಕೋಳಿಯೂ ತನ್ನ ಕೊನೆ ಗೊರಕೆಯನ್ನು ಹೊಡೆಯುವ ಮುನ್ನವೇ, ದೂರದಲ್ಲೆಲ್ಲೋ ಸ್ವಯಂಘೋಷಿತ ನಗರಪಾಲಕ (ಗೂರ್ಖಾ) ತನ್ನ ಸೀಟಿಯನ್ನು ಊದುತ್ತಿರುವಾಗಲೇ, ಅರೆ ನಿದ್ರೆಯಲ್ಲೇ ಎದ್ದು, ಚುಮು ಚುಮು ಚಳಿಗೆ ಒಂದು ಲೀಟರ್’ನಷ್ಟು ದೊಡ್ಡ ಲೋಟದಲ್ಲಿ  ಕಾಫಿಯನ್ನೂ, ಟೀ ಯನ್ನೂ  ಹಿಡಿದು ಮೈಕ್ ಮುಂದೆ ಕೂತು ‘ಶುಬೋಧಯ’ ಎಂದು ದೀರ್ಘವಾಗಿ ಹೇಳಿದರೆ ಅದೇನೋ ಒಂದು ಬೆಳಗಿನ ಉಲ್ಲಾಸ ಪೇಪರ್ ಹಾಕುವ, ಹಾಲನ್ನು ಮಾರುವ  ಹಾಗು ಹೂವನ್ನು ಪೋಣಿಸುವ ಸಾವಿರಾರು ವರ್ತಕರಿಗೆ. ಆ ಕ್ಷಣದಿಂದ ಶುರುವಾಗಿ ನಂತರದ ಮೂರೋ ನಾಲ್ಕೋ ಘಂಟೆಯೊ ಒಂದೇ ಸಮನೆ ಮುಂಗಾರಿನ ಮಳೆಯಂತೆ RJ ತನ್ನ ಮಾತುಗಳನ್ನು ಸುರಿಸಿದರೆ ಇತ್ತಕಡೆ ಅದೆಷ್ಟೋ ಲಕ್ಷ ಜನರಿಗೆ ಸೂರ್ಯ ಆಳೆತ್ತರಕ್ಕೆ ಬಂದಿರಬಹುದು ಎಂಬುದರ ಸಂದೇಶ ರವಾನೆಯಾಗುತ್ತದೆ. ಅದೇ ತುಸು ಒಳಗೆ ಹಳ್ಳಿಗಳಾದರೆ ಚಿಂತನ-ಮಂಥನ, ಕೃಷಿವಾರ್ತೆ, ಪ್ರದೇಶ ಸಮಾಚಾರ, ಹಿತವಚನ ಎಂಬ ಉದ್ದುದ್ದದ ಕಾರ್ಯಕ್ರಮಗಳು. ಎಲ್ಲದರಲ್ಲೂ ನಯವಾಗಿ, ವಿನಯದಿಂದ, ಕೇಳಿದರೆ ಮತ್ತೂ ಕೇಳಬೇಕೆನಿಸುವ ವಾಚಕರ ಮಧುರ ಧ್ವನಿ. ಸಿಟಿಯಲ್ಲಿ ಬೆಳಂಬೆಳ್ಳಗೆ ತ್ರಾಸನ್ನು ಕೊಡುವ ಪಟ್ ಪಟಾಕಿ, ಕಿರಿಕ್ ಹುಡ್ಗ, ತರ್ಲೆ ರಾಮ ಎಂಬ ಏನೇನೋ ಬಿರುದುಗಳನ್ನು ಹೆಣೆದುಕೊಂಡಿರುವ ಹುಡುಗ ಹುಡುಗಿಯರ ಸದ್ದು. ಅದೇನೇ ಆದರೂ ಬಹಳಷ್ಟು ಮಂದಿಗೆ ಒಂದು ದಿನ ಇವರುಗಳ ಸದ್ದೆನಾದರೂ ಕಿವಿಗೆ ಬೀಳದಿದ್ದರೆ ದಿನವೇ ‘ಕೋಯಾ ಕೋಯಾ ಚಾಂದ್, ಖುಲಾ ಆಸಮನ್’ ಎಂಬ ಹಾಡಿನಂತಾಗಿಬಿಡುತ್ತದೆ.

ಇವೆಲ್ಲವನ್ನು ಗಮನಿಸಿದರೆ, RJ  ಗಳ ಮಾತನ್ನು ಕೇಳುತ್ತಿದ್ದರೆ, ಇವರಿಗೇನು ನಿಜ ಜೀವನದಲ್ಲಿ ದುಃಖ, ಸಿಟ್ಟು, ನೋವು, ಚಿಂತೆ, ಎಂಬೆಲ್ಲ ಫ್ಯಾಕ್ಟರ್ ಗಳು ಸತಾಯಿಸುವುದಿಲ್ಲವೋ ಎಂದು ಅನ್ನಿಸದೆ ಇರುವುದಿಲ್ಲ. ಒಂದು ಪಕ್ಷ ಇದ್ದರೂ ಅವರು ತೋರಿಸಿಕೊಳ್ಳುವುದಿಲ್ಲ ಎಂಬೊಂದು ಲೋಕಾರೂಢದ ಮಾತು ನಮ್ಮನ್ನು ಸುಮ್ಮನಾಗಿಸುತ್ತದೆ. ಆದರೆ ತಕ್ಷಣ ಮತ್ತೊಂದು ಪ್ರಶ್ನೆ ನಮ್ಮನ್ನು ಬಹುವಾಗಿ ಕಾಡದೇ ಇರುವುದಿಲ್ಲ. ಅದೇನೇ ದುಃಖವಿದ್ದರೂ, ನೋವುಗಳ ಸರಮಾಲೆಯನ್ನು ಹೊತ್ತಿದರೂ ಅವೆಲ್ಲವುಗಳಿಗೆ ಕೆಲಕಾಲ ಬ್ರೇಕ್ ಹಾಕಿ ನಗುವೆಂಬ ಕಳಸವನ್ನು ಮುಖದ ಮೇಲೆ ತೊಡುವ ಕಲೆಯನ್ನು ಇವರುಗಳು ಕಲಿತಿದ್ದಾದರೂ ಹೇಗೆ? ಈ ಕೆಲೆ ಯಾವುದೇ ಆಸ್ಕರ್ ವಿಜೇತ ನಟ ಅಥವಾ ನಟಿಗೂ ಕಡಿಮೆ ಇರುವುದಿಲ್ಲ. ಇದೊಂದು ನಟಿಸುವ ಕಲೆಯೋ ಅಥವಾ ಸಂತೋಷದ ಜೀವನವನ್ನು ನೆಡೆಸಲು ಇರುವ ಸ್ಪೂರ್ತಿಯ ಸೆಲೆಯೋ?  RJ  ಗಳೇ ಬಲ್ಲರು!

ಆದರೆ,

ಎದ್ದೂ ಬಿದ್ದೂ ಮನೋರಂಜನೆಯನ್ನೇ ಮನೋಕಾಮನೆಯಾಗಿಸಿಕೊಂಡಿರುವ ಇಂದಿನ RJ ಗಳಿಗೂ, ಮನೆಯ ಒಬ್ಬ ಅದೃಶ್ಯ ಸದಸ್ಯನಂತೆ ಜೊತೆಗೆ ಇರುತ್ತಿದ್ದ ಅಂದಿನ ರೇಡಿಯೋ ವಾಚಕರಿಗೂ ಅಜಗಜಾಂತರ ವ್ಯತ್ಯಾಸವಿರುವುದು ತಿಳಿದವರು ಬಲ್ಲ ವಿಷಯ. ಹೆಚ್ಚಾದ ರೇಡಿಯೋ ಕೇಂದ್ರಗಳ ಸ್ಪರ್ಧೆಯಲ್ಲಿ ನಾ ಮುಂದು ತಾ ಮುಂದು ಎನ್ನುತಾ ತಿಳಿದೋ ತಿಳಿಯದೆಯೋ ಸಿಕ್ಕ ಸಿಕ್ಕವರಿಗೆಲ್ಲ ಫೋನಾಯಿಸಿ, ಕಿಚಾಯಿಸಿ , ಸತಾಯಿಸಿ, ಕೊನೆಗೆ ‘ನಾವು ಮಾಡಿದೆಲ್ಲ ತಮಾಷೆಗಾಗಿ’ ಎಂದು ನಯವಾಗಿ ಚಾಪೆಯ ಅಡಿ ತೂರಿಕೊಂಡಂತೆ ನಟಿಸಿದರೆ ಮೌಂಟ್ ಎವರೆಸ್ಟ್ ನನ್ನು ಒಂದೇ ಉಸಿರಿನಲ್ಲಿ ಹತ್ತಿದ  ಸಾಧಕರಂತೆ ಅವರನ್ನು ಕಾಣಲಾಗುತ್ತದೆ. ಅಲ್ಲಿ’ಕುರಿ’ ಎನಿಸಿಕೊಂಡವನು ಪಡುವ ವೇದನೆಗಿಂತ, ಕೇಳುಗನಿಗಿಂತಲೂ ಹೆಚ್ಚಾಗಿ ನಗುವ RJ ಮಹಾರಾಜನೇ ಸರ್ವರಿಗೂ ಹಿತವಾಗುತ್ತಾನೆ. ಹಲವು ಬಾರಿ ಇಂತಹ ಎಡಬಿಡಂಗಿ ಕಾರ್ಯಕ್ರಮಗಳೇ ಅದೆಷ್ಟೋ ಜನರ ಪ್ರಾಣಕ್ಕೆ ಕುತ್ತು ತರುವುದು ಉಂಟು. ತಂದಿರುವುದೂ ಉಂಟು!  ಪ್ರೀತಿಸುವ ಹುಡುಗಿಯ ಅಪ್ಪನಾಗಿ, ಏರ್ಪೋರ್ಟ್ನ ಕಸ್ಟಮ್ಸ್ ಅಧಿಕಾರಿಯಾಗಿ, ಪಕ್ಕದ ಗಲ್ಲಿಯ ಪೊರ್ಕಿ ನಾಗರಾಜನಾಗಿ ಅಥವಾ ಯಾವುದಾದರೊಂದು ಆಸ್ಪತ್ರೆಯ ಡಾಕ್ಟರ್ ನಂತೆ  ಬೆಳ್ಳಂಬೆಳಗ್ಗೆ ಅಮಾಯಕರನ್ನು ಸತಾಯಿಸುವ ಜರೂರತ್ತಾದರೂ ಯಾರಿಗಿದೆ? ಜರೂರತ್ತಿರುವುದು ನಿಜವೇ ಆದರೆ ಅದು ಇವೇ ರೇಡಿಯೋ ಚಾನೆಲ್ ಗಳಿಗೆ. ನಾನೇ ನಂಬರ್ ಒನ್ ಆಗಬೇಕೆಂಬ ಅತಿಆಸೆಯ ಮನಸ್ಸುಗಳಿಗೆ. ಒಂದೊಳ್ಳೆ ಕಾರ್ಯಕ್ರಮವನ್ನು ನೀಡಿ ರಂಜಿಸಲಾಗದ ರಂಜನಾಕಾರರಿಗೆ, ಇಂತಹ ಕಳಪೆ ಕಾರ್ಯಕ್ರಮಗಳೇ ಆಧಾರ.

ಒಟ್ಟಿನಲ್ಲಿ ಮನೆಯೆಂಬ ಗುರಿಯನ್ನು ತಲುಪಲು ಎದುರಾಗುವ ಟ್ರಾಫಿಕ್  ಜಾಮ್ ಗಳೆಂಬ ಕಿರಿಕಿರಿಗಳ ಮದ್ಯೆ ಯಾವುದೊ ಲೋಕದಲ್ಲಿ ಕಳೆದು ಹೋಗುವ ಕೇಳುಗನ ಚಿತ್ತಕ್ಕೆ RJ ಗಳ ಬಗ್ಗೆ ಇಷ್ಟೆಲ್ಲಾ ವಿಶ್ಲೇಷಣೆ ಮಾಡುವ ಸಂಯಮವಿರುವುದಿಲ್ಲ. ‘ಎಂಥ ಸೂಪರ್ ವಾಯ್ಸು ಮಗ’ ಎನ್ನುತ್ತಾ ಕಲ್ಪಿತ ಲೋಕದಲ್ಲೊಂದು ಅಂದವಾದ ಚಹರೆಯನ್ನಿಟ್ಟುಕೊಂಡು ತನ್ನಲ್ಲೇ ತಾನು ಕಳೆದು ಹೋಗುವ ಅನೇಕರಿಗೆ ಇಹಲೋಕದ ಪ್ರಜ್ಞೆ ಬರುವುದು ಹಿಂದಿರುವ ಗಾಡಿಯ ರಣಚಂಡಿಯ ಕಹಳೆಯ ಜೊತೆಗೆ ಬೈಗುಳದ ಪದಗಳೂ ಕೇಳತೊಡಗಿದಾಗ. ಅಲ್ಲಿಂದ ಕೊಂಚ ದೂರದಲ್ಲಿ ಸಿಗುವ ಮತ್ತ್ತೊಂದು ಸಿಗ್ನಲ್ಲಲ್ಲಿ ಮತ್ತದೇ ಭಾವಲೋಕ! ಹೀಗೆ ಹ್ಯಾಂಡ್ಸ್ ಫ್ರೀ ಗಳನ್ನು ಹಾಕಿಕೊಂಡು RJ  ಗಳ ಮಾತುಗಳಿಗೆ ತನ್ನಲ್ಲೇ ತಾನು ನಗುವುದ ಕಂಡು ಪಕ್ಕದ ಆಂಟಿ ಅಂಕಲ್ ಗಳು ಮುಖ ಮುರಿದುಕೊಳ್ಳುವುದೂ ಉಂಟು.

ಒಟ್ಟಿನಲ್ಲಿ ಹೆಸರಿಗೆ ತಕ್ಕಂತೆ ಆಕಾಶದಿಂದ ಬರುವ ಈ ವಾಣಿಗಳು ಕೇಳುಗರನ್ನು  ನಗಿಸಿ, ನಲಿಸಿ, ಆಡಿಸಿ, ಹಾಡಿಸಿ, ಸತಾಯಿಸಿ, ಸಾಕು ಸಾಕಾಗಿಸಿ, ಬೇಕು ಬೇಡವಾಗಿಸಿ, ಚರ್ಚಿಸಿ, ಚಿಂತನೆಗೊಳಪಡಿಸಿ, ಕೊನೆಗೆ ಮಲಗುವ ಜೋಗುಳವೂ ಆಗುವುದುಂಟು. ಅಲ್ಲದೆ ಹಲವು ಬಾರಿ ಯಾರೊಟ್ಟಿಗೂ ಹೇಳಿಕೊಳ್ಳಲಾಗದ ನೋವು ನಲಿವುಗಳನ್ನು ಬಹಳಷ್ಟು ಜನರು RJಗಳೊಟ್ಟಿಗೆ ತೋಡಿಕೊಳ್ಳುವುದನ್ನು ಕೇಳಬಹುದು. ಯಾವುದೊ ಒಂದು ಅತಿಮಾನುಷ ಶಕ್ತಿಯಂತೆ ಅವರ ಮಾತುಗಳು ನೊಂದವರನ್ನು ಸಂತೈಸಿ ಕೊಂಚ ಮಟ್ಟಿನ ಜೀವನ ಪ್ರೀತಿಯನ್ನಾದರೂ ಅವರಲ್ಲಿ ಜಾಗೃತಗೊಳಿಸುತ್ತದೆ. ಹೀಗೆ ವರ್ಷವಿಡೀ ಅದೇ ಸಮಯಕ್ಕೆ ಅದೇ ಜಾಗದಲ್ಲಿ ಅದೇ ಜೀವನೋತ್ಸಾಹವನ್ನು ಬೀರುವ ಅವರ ಅವಿರತ ಮಾತುಗಳು ಕೇಳುಗನಲ್ಲಿ ತಾವೂ ಸಹ ಅಂತಹ ವ್ಯಕ್ತಿತ್ವಧಾರಿಗಳಂತಾಗಲು ಪ್ರೇರೇಪಿಸದಿರವು.

ಅದೇನೇ ಕಷ್ಟ ನೋವುಗಳಿದ್ದರೂ ಎಲ್ಲವನ್ನು ಮರೆತು ಕೆಲಕಾಲಕ್ಕಾದರೂ ಬೇರೆಯವರ ನಗುವಿಗಾಗಿ ತಮ್ಮನ್ನು ಮುಡಿಪಿಡುವ ಇವರ ಆ ಡೆಡಿಕೇಶನ್ ನೂರಕ್ಕೆ ನೂರು ಅನುಕರಣಾ ಯೋಗ್ಯ. ದಿನವಿಡೀ ಮುಖವನ್ನು ಗಂಟ್ಟಿಕ್ಕಿಕೊಂಡು, ಚಿಟಿಕೆಯಷ್ಟು ಕಷ್ಟವನ್ನೇ ಬೆಟ್ಟದಷ್ಟು ಮಾಡಿ ಕೊರಗುವ ಹಲವರಿಗೆ ಇಂತಹ ಅದೃಶ್ಯ ವ್ಯಕ್ತಿತ್ವಗಳು ಸ್ಪೂರ್ತಿಯ ದೀಪಗಳಾಗಬಹುದು. ‘ನಗು ನಗುತ ನಲಿ ನಲಿ ಏನೇ ಆಗಲಿ’ ಎಂಬ ಹಾಡಿನಂತೆ ನಗುವೆಂಬ ಟಾನಿಕ್ ನನ್ನು ಆಗಾಗ ಸೇವಿಸುತ್ತಿದ್ದರೆ ಬದುಕಿನ ಬಂಡಿಗೆ ಅಗತ್ಯವಾದ ಕೀಲೆಣ್ಣೆಯ ಅಭಾವವನ್ನು ಇದು ಬರಿಸಬಲ್ಲದು.. ಮಗುವಿನ ನಗುವಿನ ಅಪ್ಪಟ ಒಳಪಿನಂತೆ ನಲಿಯುವ ಇವರುಗಳೂ ಸಹ ಇಂತಹ ಟಾನಿಕ್ನ ಸಣ್ಣ ಸಣ್ಣ ಫ್ಯಾಕ್ಟರಿಗಳಂತೆ! ಆದರೆ ‘ತಮಾಸೆ ಹೋಗಿ ಅಮಾಸೆ ಆಗ್ಬಾರ್ದು’ ಎಂಬ ಮಾತಿನಂತೆ ಕನಿಷ್ಠದ ಸಾಮಾಜಿಕ ಕಾಳಜಿಯೊದಿಂಗೆ ಜನಮಾನಸದಲ್ಲಿ ಬೆರೆಯುವ ಹಂಬಲವಿದ್ದರೆ ಇವರು ಯಾವ ದೊಡ್ಡ ಆದರ್ಶ ವ್ಯಕ್ತಿಗಳಿಗೂ ಕಡಿಮೆಯಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!