ರಾಗ ಹಿಂಜುತಿದೆ
ಸುಣ್ಣದುಂಡೆಯ ಹೆಣಕೆ
ವಾಯುವಿಹಾರದ ಸಮಯ..
ಅಷ್ಟಷ್ಟೇ ಪೋಷಕಾಂಶ ತೇಗಿದ್ದಷ್ಟೇ,
ಕಡಲಿನಲ್ಲಿ ಉಪ್ಪು ಹುಟ್ಟಿದ್ದು
ತಿಳಿಯಲಿಲ್ಲ…
ಬತ್ತಿಸಿಕೊಳ್ಳುವ ಗುಣವೂ
ಇದೆ ಗಾಳಿಗೆ,
ಯಾರೂ ಅರುಹಲಿಲ್ಲ..
ದೊಡ್ಡ ನೀಲಿ ಚಾದರದಲ್ಲಿ
ಗುದ್ದಲಿಗಳ ಅತಿಕ್ರಮಣ
ನಿಯತ ಆಕಾರಕ್ಕೆ
ತೊಳೆದಿಟ್ಟ ಹಲ್ಲುಗಳ ಬಣ್ಣ..
ತೇಪೆಗಳ ತುದಿಯಲ್ಲಿ
ರಕ್ತ ಇಣುಕುವುದಿಲ್ಲ
ಹಿಡಿದಿಡುತ್ತದೆ ದಾರ
ಬೇರೆ ಬೇರೆಯದೇ ಪ್ರದೇಶವನ್ನು..
ಕೆಸರು ಮೆತ್ತಿದ್ದ ಕಾಲು
ಪುಡಿಕಲ್ಲುಗಳ ಸಾರಿಗೆ..
ಬಿದ್ದಲ್ಲೇ ನಿಲ್ದಾಣ
ಅಲ್ಲಲ್ಲೇ ಕಳೆದುಹೋಗೋ ಆಟ..
ಅಂಚೆಯಿಲ್ಲ ಈ ವಿಳಾಸಕ್ಕೆ
ಪತ್ರಕ್ಕೆ ಎಲ್ಲ ಕಡೆಯೂ
ತಲುಪೋ ಹಂಬಲ..
ಇಷ್ಟಕ್ಕೂ ತಟ್ಟೆ ಪಾಲಿಗೆ
ಹಗಲೆಲ್ಲ ತಂಗಳನ್ನ..
ಪೂರ ರಾತ್ರಿ ಹಸಿದ
ಒಳಾಂಗಣದಲ್ಲಿ ಗರ್ಭಪಾತ,
ಒಳಗೊಳಗೇ ಮುರಿದ ತಂಬೂರಿ
ಹೆಕ್ಕುತ್ತದೆ ಒಣ ಪದಗಳನ್ನ..
ಶವಕ್ಕೀಗ ಕವಿತೆ ಎನ್ನುತ್ತೇವೆ..!
ಬದುಕಿದ್ದಕ್ಕೆ?!!..
~`ಶ್ರೀ’
ತಲಗೇರಿ