ಕೃಷಿಯೆಂದರೆ ನರಕ, ಮಾಡಲಸಾಧ್ಯ ಎಂದು ಭಾವಿಸುವವರೇ ಹೆಚ್ಚಾಗಿರುವ ಇಂದಿನ ಸಮಾಜದಲ್ಲಿ “Farm of Happiness” ಕಟ್ಟಿ ಬೆಳೆಸಿದ ದಂಪತಿ ಆದರ್ಶಪ್ರಾಯರಾಗುತ್ತಾರೆ ಎಂದರೆ ಉತ್ಪ್ರೇಕ್ಷೆಯಾಗದು. ರಾಹುಲ್ ಕುಲಕರ್ಣಿ- ಸಂಪದಾ ಈರ್ವರೂ ಚಿಕ್ಕಂದಿನಿಂದ ಕೃಷಿ ಜೀವನದಲ್ಲಿ ಬೆಳೆದವರಲ್ಲ, ಮುಂಬೈ ಎಂಬ ಮಾಯಾನಗರಿಯಲ್ಲಿ ವೈಟ್ ಕಾಲರ್ ಜಾಬ್ ಮಾಡುತ್ತಿರುವವರು ಇವರಿಬ್ಬರು.
ಏನಿದು “Farm of Happiness”?
ಮಹಾರಾಷ್ಟ್ರದ ರತ್ನಗಿರಿಯಲ್ಲಿ ‘ಆಗ್ರೋ ಟೂರಿಸಂ’ಗೆ ಪ್ರಸಿದ್ಧಿಯಾಗಿರುವ ಪುಟ್ಟ ಹಳ್ಳಿಯಲ್ಲಿದೆ ಈ Farm of Happiness. ಸಾವಯವ ಕೃಷಿಪ್ರದೇಶವೊಂದರಲ್ಲಿ ಹೋಮ್ ಸ್ಟೇ ರೀತಿ ನೀವು ಕೆಲವೊಂದಿಷ್ಟು ದಿನ ಹೋಗಿ ಹಾಯಾಗಿ ಇದ್ದು ಬರಬಹುದು, ಅಲ್ಲದೇ ಅಲ್ಲಿನ ಕೃಷಿ ಚಟುವಟಿಕೆ, ಪಕ್ಷಿ ವೀಕ್ಷಣೆ, ನಕ್ಷತ್ರ ವೀಕ್ಷಣೆ, ಟ್ರೆಕ್ಕಿಂಗ್, ರೈಡಿಂಗ್ ಹೀಗೆ ನಗರದ ಯಾವುದೇ ಜಂಜಾಟಗಳಿಲ್ಲದೇ ಪ್ರಕೃತಿಯ ಸಹಜ ಸೌಂದರ್ಯ ಅನುಭವಿಸಬಹುದು.
“Farm of Happiness” ಹಿಂದೆ ದಂಪತಿಗಳ ಹತ್ತು ವರುಷದ ಶ್ರಮ
೨೦೦೫ರ ಸಮಯ, ರಾಹುಲ್ ಕುಲಕರ್ಣಿ ಮುಂಬೈನಲ್ಲಿ ಅಡ್ವಟೈಸಿಂಗ್ ವಿಭಾಗದಲ್ಲಿ ದುಡಿಯುತ್ತಿದ್ದರೆ, ಪತ್ನಿ ಸಂಪದಾ ಮುಂಬೈಯಲ್ಲೇ ನಟಿಯಾಗಿದ್ದಳು. ಹತ್ತು ಹಲವು ರೆಸಾರ್ಟ್-ಹೋಂ ಸ್ಟೇ- ಹೈ-ಫೈ ಜೀವನ ನಡೆಸುತ್ತಿದ್ದವರಿಗೆ ಯಾಕೋ ಇವೆಲ್ಲವೂ ಸಾಕೆನಿಸಲು ಶುರುವಾಗಿತ್ತು, ಎಲ್ಲದಕ್ಕೂ ಒಂದು ಬ್ರೇಕ್ ಬೇಕು ಎನಿಸತೊಡಗಿತ್ತು. ಆಗ ಇವರಿಬ್ಬರಿಗೂ ನೆನಪಾಗಿದ್ದು ಹುಟ್ಟೂರಾದ ರತ್ನಗಿರಿಯ ಪುಟ್ಟ ಹಳ್ಳಿ. ರಾಹುಲ್ ಹೇಳುತ್ತಾರೆ “ನನ್ನ ಹಿರಿಯರೇನೋ ಕೃಷಿ ಮಾಡುತ್ತಿದ್ದವರಾದರೂ, ನಾನು ಎಂದಿಗೂ ಅದರ ಬಗ್ಗೆ ತಲೆಕೆಡಿಸಿಕೊಂಡವನೇ ಅಲ್ಲ.” ಹಳ್ಳಿಯತ್ತ ಮನ ಮಾಡಿದಾಗ ತಲೆಯಲ್ಲಿದ್ದ ಯೋಚನೆ ಒಂದೇ ಕೃಷಿ ಮಾಡುವುದು ಮಾತ್ರವಲ್ಲ ಅಲ್ಲೊಂದು ಅದ್ಭುತವಾದ ನೇಚರ್ ರೆಸಾರ್ಟ್ ನಿರ್ಮಾಣವಾಗಬೇಕು ಎಂದು.
‘ಅನ್ನ’ದ ಅರಿವು
ಆದರೆ ಹಳ್ಳಿಗೆ ಬಂದ ಮೇಲೆ ‘ನೇಚರ್ ರೆಸಾರ್ಟ್’ ಬೇರೊಂದು ತಿರುವನ್ನು ಕಂಡುಕೊಂಡಿತು. ಹಿರಿಯರಾದ ಅನುಭವಿಗಳಾದ ಶೇಖರ್ ಬಡ್ಸಾಲ್ವೆ ಅವರು ಈ ಕಿರಿಯ ದಂಪತಿಗಳಿಗೆ ಮೆಂಟರ್ ಆಗಿ ಬೆನ್ನಿಗೆ ನಿಂತರು ರೆಸಾರ್ಟ್ ಎಂದಿದ್ದುದು ‘ಆಗ್ರೋ ಟೂರಿಸಂ’ನತ್ತ ಹೊರಳಿತು. ರಾಹುಲ್ ನಗರ ಬಿಟ್ಟು ಬಂದಿದ್ದೇನೋ ಸರಿ, ಆದರೆ ಬರುವಾಗ ಅವರಿಗೆ ಯಾವುದೇ ಮಾಹಿತಿಯಿರಲಿಲ್ಲ. ಅವರೇ ಹೇಳುವಂತೆ “ಇಲ್ಲಿಗೆ ಬಂದ ಬಳಿಕವೇ, ಆಹಾರದ ಅಗತ್ಯತೆ ಬೆಳೆಯುವ ತೊಂದರೆಗಳು, ಭದ್ರತಾ ಅವ್ಯವಸ್ಥೆಗಳು ಎಲ್ಲಾ ತಿಳಿದಿದ್ದು. ಅಂದು ನಮ್ಮ ಆಹಾರವನ್ನು ನಾವೇ ಬೆಳೆದುಕೊಳ್ಳುವ ಆವಶ್ಯಕತೆ-ಅನಿವಾರ್ಯತೆಯ ಅರಿವಾಯಿತು”ಎಂದು.
“ನಾವು ಕೃಷಿಕರಾಗಬೇಕು ಎನ್ನುವ ಸತ್ಯದ ಅರಿವಾಯಿತು.” “ಕೃಷಿಯ ಮೂಲ ಅಗತ್ಯತೆಗಳಿಂದ ಶುರು ಮಾಡಿದೆವು. ನೀರು-ಮಣ್ಣು-ಬೀಜ ಬಿತ್ತನೆ-ಯಾವುದು ಸರಿಯಾಗುತ್ತದೆ-ಎಲ್ಲಿ ತಪ್ಪುತ್ತಿದ್ದೇವೆ ಹೀಗೆ ಹತ್ತು ಹಲವು ಪ್ರಯೋಗದ ಹಾದಿ. ಸರಿಸುಮಾರು ೫೦ ವಿಧದ ಬೆಳೆಗಳನ್ನು ಹಾಕಿದೆವು ಜೊತೆ ಜೊತೆಗೇ ಎಲ್ಲವನ್ನೂ ನೋಟ್ ಮಾಡಿಟ್ಟುಕೊಂಡು ಡಾಕ್ಯುಮೆಂಟರಿ ರೀತಿ ನಮ್ಮ ಅನುಭವಗಳನ್ನೆಲ್ಲಾ ದಾಖಲಿಸುತ್ತಾ ಹೋದೆವು. ಸಾಧಿಸಬೇಕೆಂಬ ಆತುರದಲ್ಲಿ ಆಧುನೀಕತೆಯತ್ತ ಸಾಗದೇ ಇದ್ದ ನಮ್ಮನ್ನು ನೋಡಿ ಹಳ್ಳಿಯವರೆಲ್ಲಾ ಇವರು ಹೇಗಪ್ಪಾ ಅಧಿಕ ಇಳುವರಿಯನ್ನು ಪಡೆಯಬಲ್ಲರು ಎಂದು ಚಿಂತಿಸಿದ್ದೂ ಇದೆ. ಆದರೆ ಇದರಲ್ಲಿ ನಮ್ಮ ಶಿಕ್ಷಣ ಬಹಳಷ್ಟು ಮಟ್ಟಗೆ ಕೈಹಿಡಿಯಿತು ಎನ್ನುವುದು ಸತ್ಯ. ಇಂಟರ್’ನೆಟ್ ಮೇಲೆ ಅವಲಂಬಿತರಾದೆವು, ಥೈಲಾಂಡ್’ನಿಂದ ಹಿಡಿದು ಕ್ಯಾಲಿಫೋರ್ನಿಯಾದವರೆಗೂ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಂಡೆವು, ಅದಕ್ಕೆ ಅನುಗುಣವಾಗಿ ವರ್ಷಪೂರ್ತಿಯ ಬೆಳೆಗಳ ಲೆಕ್ಕಾಚಾರ ಹಾಕುತ್ತಾ ಸಾಗಿದೆವು” ಎನ್ನುತ್ತಾರೆ ರಾಹುಲ್.
ಏಳು-ಬೀಳುಗಳು, ಹಲವು ಪ್ರಯೋಗಗಳು ನಡೆಸುತ್ತಾ ರಾಹುಲ್ ದಂಪತಿ ಫಾರ್ಮ್ ಸ್ಟೇ ಆರಂಭಿಸಿಯೇ ಬಿಟ್ಟರು. ಅದು ಕೇವಲ ಹೋಂ ಸ್ಟೇ ರೀತಿಯಾಗಿರದೇ, ಅಲ್ಲಿಗೆ ಬಂದ ಪ್ರತಿಯೊಬ್ಬನೂ ಕೃಷಿಜೀವನದ ಅಗತ್ಯತೆಯನ್ನು, ಆಹಾರ ಬೆಳೆದುಕೊಳ್ಳುವ ಅನಿವಾರ್ಯತೆಯನ್ನು ಅರಿವು ಮೂಡಿಸುವ ತಾಣವಾಗಿ ಮಾರ್ಪಟ್ಟಿತು.
ಸ್ವಾಭಾವಿಕ – ಸಾವಯವ ಕೃಷಿ ವಿಧಾನಗಳನ್ನು ಅನುಸರಿಸುತ್ತಾ ಬಂದಿರುವ “Farm of Happiness” ಇಂದು ಭತ್ತ-ರಾಗಿ-ಆಲ್ಫಾನ್ಸೋ ಮಾವಿನಹಣ್ಣು-ವಿವಿಧ ರೀತಿಯ ಹಲಸಿನಹಣ್ಣು-ಹಲವು ಕಾಯಿಪಲ್ಲೆಗಳನ್ನು ತನ್ನೊಡಲಲ್ಲಿ ಬೆಳೆಸುತ್ತಿದೆ.
“Farm of Happiness”ಗೆ ಭೇಟಿ ನೀಡುವ ಅತಿಥಿಯ ಮೊದಲ ಅನುಭವವಾಗಿ ಪೂರ್ತಿ ಕೃಷಿಪ್ರದೇಶದಲ್ಲೊಂದು ನಡಿಗೆಯಿರುತ್ತದೆ, ಅದು ಸುಖಾಸುಮ್ಮನೇ ‘ವಾಕ್’ ಆಗಿರದೇ ರಾಹುಲ್-ಸಂಪದಾ ಇಬ್ಬರೂ ಜೊತೆಯಾಗಿರುತ್ತಾರೆ ಅಲ್ಲದೇ ಅಲ್ಲಿನ ಕೃಷಿಕರೊಂದಿಗೆ ಕೃಷಿಕರಾಗಿ ಕೆಲಸ ಮಾಡಲು, ಕೃಷಿ ಜೀವನದ ನೈಜತೆಯನ್ನು ಅರಿವು ಮೂಡಿಸುವ ಪ್ರಯತ್ನಮಾಡುತ್ತಾರೆ. ಎತ್ತಿನಗಾಡಿ,ಟ್ರೆಕ್ಕಿಂಗ್, ಪಕ್ಷಿವೀಕ್ಷಣೆ, ರಾತ್ರಿಯ ಹೊತ್ತಲ್ಲಿ ನಕ್ಷತ್ರ ವೀಕ್ಷಣೆ ಹೀಗೆ ಭರಪೂರ ಮಾಹಿತಿಯನ್ನೇ ನೀಡುತ್ತಾರೆ ಈ ದಂಪತಿಗಳು.
ಕೃಷಿಯ ಅನುಭವವಷ್ಟೇ ಆದರೆ ಸಾಲದು ಎನ್ನುವದನ್ನು ದಂಪತಿಗಳು ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಇಂದಿನ ಮುಖ್ಯವಾದ ಆವಶ್ಯಕತೆಯೆಂದರೆ, ಆಹಾರದ ಬಿಕ್ಕಟನ್ನು ತಿಳಿಯಪಡಿಸುವುದು. ರೆಡಿ ಟು ಈಟ್ ಫುಡ್ ಪ್ಯಾಕೇಜ್’ಗಳೇ ಆಹಾರವಾಗಿರುವಾಗ, ವರ್ಷಪೂರ್ತಿ ಎಲ್ಲಾ ಹಣ್ಣು-ತರಕಾರಿಗಳು ಸಿಗುತ್ತಿರುವಾಗ ಬಿಕ್ಕಟ್ಟೆಲ್ಲಿಂದ ಬಂತೆಂದು ಆಶ್ಚರ್ಯವಾಗುವುದೇನೋ ಸರಿ, ಆದರೆ ಇವೆಲ್ಲವೂ ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿದೆ ಎನ್ನುವ ವಾದವನ್ನು ಬಿಚ್ಚಿಡುತ್ತಾರೆ ರಾಹುಲ್. “ಹೌದು, ನಾನು ಚಿಕ್ಕವನಿದ್ದಾಗ ಮಾವಿನಹಣ್ಣು ವರ್ಷದ ಕೆಲವೇ ತಿಂಗಳು ಲಭ್ಯವಿತ್ತು. ಅದೇ ಇಂದು, ಜನವರಿಯಿಂದ-ಡಿಸೆಂಬರ್ ಯಾವತ್ತೂ ಬೇಕಿದ್ದರೂ ನೀವು ಮಾವಿನಹಣ್ಣನ್ನು ಆಸ್ವಾದಿಸಬಹುದು. ಒಳ್ಳೆಯದೇ ಅಲ್ವಾ, ಅಂದರೆ ಅದು ನಮ್ಮ ಮೂರ್ಖತನದ ಪರಮಾವಧಿಯಲ್ಲದೇ ಬೇರೆನೂ ಅಲ್ಲ. ಪ್ರಕೃತಿಯ ನೈಜವಾದ ಆಹಾರ ಚಕ್ರವನ್ನೇ ಬದಲಾಯಿಸುತ್ತಿದ್ದೇವೆ, ಇದರ ಪರಿಣಾಮ ಈಗಾಗಲೇ ಅನುಭವಿಸುತ್ತಿದ್ದೇವೆ. ಆದರೂ ಪಾಠ ಕಲಿತುಕೊಂಡಿಲ್ಲ ಎನ್ನುವುದು ದುರಂತ.”
ಈ ದಂಪತಿಗಳು ತಮ್ಮ ಕೃಷಿಭೂಮಿಯಲ್ಲಿ, ಆಯಾಯ ಕಾಲಕ್ಕೆ ಯಾವ್ಯಾವ ಬೆಳೆಗಳನ್ನು ಬೆಳೆಯಬೇಕೋ ಅದನ್ನೇ ಬೆಳೆಯುತ್ತಿದ್ದಾರೆಯೇ ಹೊರತು ವರ್ಷಪೂರ್ತಿ ಇಳುವರಿ ಪಡೆಯುವ ಧಾವಂತಕ್ಕೆ ಬಿದ್ದಿಲ್ಲ. ಅತಿಥಿಗಳೂ ಅಷ್ಟೇ, ಅಲ್ಲಿಯೇ ಬೆಳೆದ ಬೆಳೆಗಳಿಂದ ತಯಾರಿಸಿದ ಊಟ-ಉಪಹಾರ ನೀಡಲಾಗುತ್ತದೆ.
ಆರಂಭದಿಂದಲೇ ಊರಿನವರನ್ನೇ ತಮ್ಮೊಂದಿಗೆ ಕೆಲಸಕ್ಕೆ ಹಚ್ಚಿಕೊಂಡಿರುವ ಇವರು ಇಂದು, ಹತ್ತು ಜನ ನುರಿತ ಕೃಷಿಕರ ಟೀಮ್ ಒಂದನ್ನು ಹೊಂದಿದ್ದಾರೆ. ಇವರೊಂದಿಗೆ ಕೆಲಸ ಮಾಡುವವರು ಕೇವಲ ಕೃಷಿಯ ಕೆಲಸ ಮಾಡುವವರಲ್ಲ, ಅವರೆಲ್ಲರೂ, ಅಗತ್ಯ ಬಿದ್ದರೆ ಪ್ಲಂಬರ್-ಎಲೆಕ್ಟಿಷಿಯನ್-ಬಾಣಸಿಗರಾಗಬಲ್ಲರು.
ಇವೆಲ್ಲವನ್ನೂ ಸಾಧಿಸಲು, ಆರ್ಥಿಕ ಬಲ ಸಾಕಷ್ಟು ಬೇಕು, ಇದಕ್ಕಾಗಿಯೇ ದಂಪತಿಗಳು ಮುಂಬೈನಲ್ಲಿದ್ದುಕೊಂಡು ಪ್ರೊಫೆಷನಲ್ ಜೀವನ ಸಾಗಿಸುತ್ತಿದ್ದಾರೆ. ಮೊದಮೊದಲು ವೀಕೆಂಡ್ ಎಲ್ಲಾ ಹಳ್ಳಿಯಲ್ಲಿ ಕಳೆಯುತ್ತಾ ಡ್ರೀಮ್ ಪ್ರಾಜೆಕ್ಟ್ ನಡೆಸತೊಡಗಿದರು, ಈಗ ಒಂದು ಹಂತಕ್ಕೆ ಬಂದ ಮೇಲೆ ನುರಿತ ಕೆಲಸಗಾರರ ನಂಬುಗೆಯ ಮೇಲೆ ಮುಂಬೈನಲ್ಲಿ ತಮ್ಮ ಮಗಳ ಶಿಕ್ಷಣದ ಜೊತೆಗೆ ತಮ್ಮ ಪ್ರೊಫೆಷನಲ್ ಜೀವನ ಕಳೆಯುತ್ತಿದ್ದಾರೆ. ಆದರೆ ಹಳ್ಳಿಯೇ ತಮ್ಮ ನೆಚ್ಚಿನ ಗೂಡಾಗಲು- ಅಲ್ಲಿಯೇ ತಮ್ಮ ಜೀವನಪೂರ್ಣವಾಗಿ ಕಳೆಯಲು-ಕನಸು ನನಸಾಗಲು ಹೆಚ್ಚು ಸಮಯವಿಲ್ಲವೆಂದು ಹೇಳಲು ರಾಹುಲ್ ಮರೆಯುವುದಿಲ್ಲ.
ತಮ್ಮ ಕೃಷಿಭೂಮಿಯನ್ನು ವಿಸ್ತರಿಸುವುದರ ಬಗ್ಗೆ ಮಾತನಾಡಿದರೆ ರಾಹುಲ್ ಹೇಳುವುದಿಷ್ಟು : “ವಿಸ್ತರಿಸುವ ಬಗ್ಗೆ ಯಾವುದೇ ಆಲೋಚನೆಗಳಿಲ್ಲ. ಅದರ ಬದಲು ಉತ್ತಮ ಗುಣಮಟ್ಟದ ಬೆಳೆಯನ್ನು – ಸಮಯವನ್ನು ಪಡೆಯುವುದಷ್ಟೇ ಉದ್ದೇಶ. ಸ್ವಾಭಾವಿಕ – ಸಾವಯವ ಕೃಷಿಯ ಒಳಹೊರಗುಗಳನ್ನು – ತೊಂದರೆ ತಾಪತ್ರಯಗಳನ್ನು ಅರಿತುಕೊಂಡಿರುವ ದಂಪತಿಗಳು “ತಾವು ಅಸಾಧ್ಯವಾದುದನ್ನು ಸಾಧಿಸಿದ್ದೇವೆ ಎನ್ನಲು ಇಷ್ಟಪಡುವುದಿಲ್ಲ, ಬದಲಾಗಿ ನಮ್ಮ ಆಹಾರದ ಅರಿವು ಎಲ್ಲರಲ್ಲೂ ಮೂಡಲಿ ಎನ್ನುವ ಇಂಗಿತ ನಮ್ಮದು. ಇದೇ ರೀತಿ ಕೃಷಿಯತ್ತ ಉತ್ಸುಕರಾಗಿರುವವರಿಗೆ ಸದಾ ಸಹಾಯಕ್ಕೆ ಬೆನ್ನಿಗಿದ್ದೇವೆ ಎನ್ನಲು ಪರೆಯುವುದಿಲ್ಲ.”
ಚಿತ್ರಗಳು : http://www.farmofhappiness.com
ಮಾಹಿತಿ : ಬೆಟರ್ ಇಂಡಿಯಾ ಜಾಲತಾಣ