Featured ಅಂಕಣ

ಕಾರ್ಕಳದ ಮಿಯ್ಯಾರಿನಲ್ಲಿ ‘ಶಿಲ್ಪ’ ಶಿಕ್ಷಣ

ಇದು ಕರಿಶಿಲೆಗಳ ಬೀಡು, ಶಿಲ್ಪಕಲೆಯ ತವರು. ಪ್ರಕೃತಿ ಮಾತೆಯ ಕೃಪಾಕಟಾಕ್ಷದೊಂದಿಗೆ ಬಹುದೂರಕ್ಕೂ ತನ್ನ ಉಪಸ್ಥಿತಿಯನ್ನು ನೆನಪಿಸುವ ಗೊಮ್ಮಟಬೆಟ್ಟ. ಜೈನರ ಚತುರ್ಮುಖ ಬಸದಿ. ಪ್ರಖ್ಯಾತ ಶ್ರೀ ವೆಂಕಟರಮಣ ದೇವಸ್ಥಾನ. ಹೀಗೆ ಹತ್ತು ಹಲವು ವಿಶೇಷತೆಗಳನ್ನೇ ತನ್ನ ಒಡಲಲ್ಲಿ ಇರಿಸಿಕೊಂಡಿರುವ ಸಾಂಸ್ಕೃತಿಕ ಶಿಲ್ಪಕ್ಷೇತ್ರ ಉಡುಪಿ ಜಿಲ್ಲೆಯ ಕಾರ್ಕಳ.

ಕಟ್ಟಡ ಮತ್ತು ರಸ್ತೆ ಕಾಮಗಾರಿಗೆ ಬಳಸುವ ಜಲ್ಲಿಕಲ್ಲಿನಿಂದ ಹಿಡಿದು ಬೃಹತ್ ಏಕಶಿಲಾ ಮೂರ್ತಿಗಳಿಗೆ, ಸುಂದರ ವಿಗ್ರಹ ಕೆತ್ತನೆಗೆ ಬೇಕಾದ ಎಲ್ಲಾ ವಿಧದ ಕಲ್ಲುಗಳು ಕಾರ್ಕಳದ ಆಸುಪಾಸಿನಲ್ಲಿ ಲಭ್ಯ. ಶಿಲ್ಪಕಲೆಯ ವೈಭವದ ಇತಿಹಾಸಕ್ಕೆ ಸಾಕ್ಷಿಯಂತಿರುವ ಕಾರ್ಕಳದಲ್ಲಿ ಪ್ರಸಿದ್ಧ ಕೆತ್ತನೆಗಳು ಕಾಣಸಿಗುತ್ತವೆ. ಅಷ್ಟೇ ಅಲ್ಲದೇ ಈ ಪ್ರದೇಶದ ಶಿಲ್ಪಿಗಳಿಂದ ನಿರ್ಮಾಣಗೊಂಡ ಅನೇಕ ವಿಗ್ರಹಗಳು ವಿದೇಶದ ಬಾಗಿಲನ್ನೂ ತಟ್ಟಿವೆ, ತಟ್ಟುತ್ತಿವೆ.

ಆಧುನಿಕ ಪ್ರಪಂಚದಲ್ಲಿ ಶಿಲ್ಪಕಲೆಯ ಅಭಿರುಚಿ ಕ್ಷೀಣಿಸುತ್ತಿರುವುದು ತಿಳಿದೇ ಇದೆ. ಶಿಲ್ಪಶಾಸ್ತ್ರದ ಶಾಸ್ತ್ರೀಯ ಅಧ್ಯಯನಕ್ಕೆ ಇಂದು ಅವಕಾಶಗಳು ಬಹಳ ಕಡಿಮೆ. ಅದರಲ್ಲೂ ಕಲೆಗಳ ಬಗೆಗೆ ಯುವಕರ ಆಸಕ್ತಿಯೂ ಅಷ್ಟಕಷ್ಟೇ. ಹೀಗಿರುವಾಗ ಶಿಲ್ಪಕಲಾಸಕ್ತರಿಗೆ ಸೂಕ್ತ ತರಬೇತಿಯನ್ನು ನೀಡುವ ಧ್ಯೇಯೋದ್ದೇಶದೊಂದಿಗೆ ಸತತ 20 ವರ್ಷಗಳಿಂದ ಕಾರ್ಕಳದ ಮಿಯ್ಯಾರಿನಲ್ಲಿ ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ಸಿ. ಇ. ಕಾಮತ್ ಕರಕುಶಲ ತರಬೇತಿ ಸಂಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.

1997ರಲ್ಲಿ ಆರಂಭಗೊಂಡ ಈ ಸಂಸ್ಥೆಯಲ್ಲಿ, ಶಿಲ್ಪ, ಮರ, ಲೋಹ ಮತ್ತು ಕುಂಭಕಲೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಸದ್ಯ ಶಿಲ್ಪ, ಮರ ಮತ್ತು ಲೋಹದ ತರಬೇತಿಗಳನ್ನು ನೀಡಲಾಗುತ್ತಿದ್ದು, ಸುಮಾರು ಒಂದೂವರೆ ವರ್ಷಗಳ ಕಾಲ ಆಸಕ್ತರು ಇಲ್ಲಿ ತರಬೇತಿ ಪಡೆಯುತ್ತಾರೆ. ಕೇವಲ ವೃತ್ತಿಕಲೆಯಾಗಿ ಇದನ್ನು ಕಲಿಸದೇ ಶಾಸ್ತ್ರೋಕ್ತವಾಗಿ ಶಿಲ್ಪಕಲೆಯ ಎಲ್ಲಾ ಮಜಲುಗಳನ್ನು ವಿದ್ಯಾರ್ಥಿಗಳು ಕಲಿಯುವಂತೆ ಮಾಡುವ ಮಹದಾಸೆಯಿಂದ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪ್ರಕ್ರಿಯೆ ಸಂಪನ್ನವಾಗುತ್ತಿದೆ.

ಶಿಲ್ಪಕಲೆಯ ಮೂಲ ನಿಂತಿರುವುದೇ ಚಿತ್ರಕಲೆಯಲ್ಲಿ. ಹೀಗಾಗಿ ಸುಮಾರು 3 ತಿಂಗಳ ಕಾಲ ಇಲ್ಲಿ ಚಿತ್ರಕಲಾ ತರಬೇತಿಯನ್ನು ನೀಡಲಾಗುತ್ತದೆ. ಚಿತ್ರಕಲಾ ತರಬೇತಿಯ ನಂತರದಲ್ಲಿ ಕೆತ್ತನೆಯ ಕೆಲಸವನ್ನು ಕಲಿಸಲಾಗುತ್ತದೆ. ಕಾರ್ಕಳದ ಆಸುಪಾಸಿನಲ್ಲಿ ಲಭ್ಯವಿರುವ ಕೆತ್ತನೆ ಕಲ್ಲುಗಳನ್ನು ತಂದು ನಂತರ ಕೆತ್ತನೆ ಕಾರ್ಯಕ್ಕೆ ಬಳಸಲಾಗುತ್ತದೆ. ಒಬ್ಬ ವಿದ್ಯಾರ್ಥಿ ಶಿಲ್ಪ ಮತ್ತು ಮರ ಎರಡೂ ರೀತಿಯ ಕೆತ್ತನೆಯನ್ನು ಕಲಿಯುವ ಅವಕಾಶವಿರುವುದರಿಂದ ವಿವಿಧ ಪ್ರಯೋಗಗಳೊಂದಿಗೆ ವಿದ್ಯಾರ್ಥಿಗಳ ಕೈಯಿಂದ ಆಕರ್ಷಕ ವಿಗ್ರಹಗಳು ರೂಪುಗೊಳ್ಳುವ ಪರಿಯನ್ನು ನೋಡುವುದೇ ಕಣ್ಣಿಗೆ ಹಬ್ಬ.

ಅತ್ಯಂತ ಆಕರ್ಷಕ ಮತ್ತು ಕಣ್ಣಿಗೆ ಹೊಳಪಿನ ಅನುಭವ ನೀಡುವ ವಿಭಾಗ ಲೋಹದ ಕೆತ್ತನೆ ಅಥವಾ ಲೋಹ ವಿಗ್ರಹ ತಯಾರಿ ವಿಭಾಗ. ಇಲ್ಲಿ ಎರಡು ರೀತಿಯ ಲೋಹ ವಿಗ್ರಹ ತಯಾರಿ ಮಾದರಿಯನ್ನು ಹೇಳಿಕೊಡಲಾಗುತ್ತದೆ. ಒಂದು ಕಾಸ್ಟಿಂಗ್ ವಿಧಾನ ಮತ್ತೊಂದು ಉಬ್ಬು ಶಿಲ್ಪ ಅಥವಾ ಎಂಬೂಸಿಂಗ್ ವಿಧಾನ.

ಹೀಗೆ ಶಿಲ್ಪಕಲೆಯ ಮೂರು ವಿಭಾಗಗಳನ್ನು ಇಲ್ಲಿ ಹಂತ ಹಂತವಾಗಿ ಕಲಿಸಲಾಗುತ್ತದೆ. ಈಗಾಗಲೇ 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸುವಲ್ಲಿ ಸಿ.ಇ.ಕಾಮತ್ ಕರಕುಶಲ ತರಬೇತಿ ಸಂಸ್ಥೆ ನೆರವಾಗಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು ಶ್ರದ್ಧೆಯಿಂದ ತಯಾರಿಸಿದ ವಿಗ್ರಹಗಳನ್ನು ಯಾರಾದರೂ ಖರೀದಿಸಿದರೆ ಅದರ ಮುಖಬೆಲೆಯ ಶೇಕಡಾ 25ರಷ್ಟು ಹಣವನ್ನು ಆ ವಿಗ್ರಹ ರೂಪಿಸಿದ ವಿದ್ಯಾರ್ಥಿಯ ಖಾತೆಗೆ ಜಮೆ ಮಾಡಲಾಗುತ್ತದೆ.

ಇಲ್ಲಿ ತರಬೇತಿ ಪಡೆಯಲು 16ರಿಂದ 35ವರ್ಷದವರೆಗಿನವರಿಗೂ ಅವಕಾಶವಿದ್ದು, ಶ್ರದ್ಧೆ ಮತ್ತು ತಲ್ಲೀನತೆಯಿದ್ದರೆ ಮಾತ್ರ ಶಿಲ್ಪಕಲೆಯನ್ನು ಮೈಗೂಡಿಸಿಕೊಳ್ಳಬಹುದು. ಒಬ್ಬ ವಿದ್ಯಾರ್ಥಿ ಇಲ್ಲಿ ತರಬೇತಿ ಪಡೆದು ಮುಂದಿನ ಶಿಲ್ಪ ಜೀವನಕ್ಕೆ ಸಿದ್ಧನಾಗಲು ಸುಮಾರು 18 ತಿಂಗಳು ಬೇಕಾಗುತ್ತದೆ. ಊಟ, ವಸತಿ ವ್ಯವಸ್ಥೆ ಸೇರಿದಂತೆ ಇಂಗ್ಲೀಷ್ ಸಂವಹನ, ಗಣಕ ಯಂತ್ರ ತರಬೇತಿಯನ್ನೂ ಉಚಿತವಾಗಿ ನೀಡಲಾಗುತ್ತಿದೆ. ಅನ್ಯ ರಾಜ್ಯಗಳಿಂದಲೂ ತರಬೇತಿಗಾಗಿ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ವರ್ಷಕ್ಕೆ ಸುಮಾರು 60ಕ್ಕೂ ಹೆಚ್ಚು ಶಿಲ್ಪಕಲಾಸಕ್ತರು ವೃತ್ತಿಪರ ಶಿಲ್ಪಿಗಳಾಗಿ ಇಲ್ಲಿ ರೂಪುಗೊಳ್ಳುತ್ತಿದ್ದಾರೆ.

ಶಿಲ್ಪಕಲೆಗೆ ಹೆಸರುವಾಸಿಯಾದ ಕಾರ್ಕಳದಲ್ಲಿ ಶಿಲ್ಪಕಲೆಯ ಕುರಿತಂತೆ ತರಬೇತಿ ನೀಡುತ್ತಾ, ದೇಶದ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರಧಾನ ಕುರುಹಾದ ಶಿಲ್ಪಕಲೆಯನ್ನು ಇನ್ನಷ್ಟು ಪ್ರಖ್ಯಾತಗೊಳಿಸುವ ಕೆಲಸವನ್ನು ಖಾಸಗಿ ಸಂಸ್ಥೆಯೊಂದು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದೆ. ಈ ಮೂಲಕ ಶಿಲ್ಪಕಲೆಯ ಗತವೈಭವವನ್ನು ಇನ್ನಷ್ಟು ಪ್ರಸ್ತುತಗೊಳಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಲು ಮುಂದಿನ ಪೀಳಿಗೆಯನ್ನು ಸಜ್ಜುಗೊಳಿಸುತ್ತಿದೆ.

“ಸಾಮಾಜಿಕ ಜವಾಬ್ದಾರಿಯೊಂದಿಗೆ ಕೆನರಾ ಬ್ಯಾಂಕ್ ವಿಭಿನ್ನ ಪ್ರಯತ್ನ ಮಾಡುತ್ತಿದೆ. ಹಲವಾರು ವಿಭಿನ್ನ ಪ್ರಯೋಗಗಳೊಂದಿಗೆ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಈಗಾಗಲೇ ಕೆಲವು ದೇವಸ್ಥಾನಗಳಿಗೆ ಅಗತ್ಯವಿದ್ದ ಕೆತ್ತನೆ ಕೆಲಸವನ್ನು ನಮ್ಮ ವಿದ್ಯಾರ್ಥಿಗಳೇ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.”

ಬೈಟ್: ಸುರೇಂದ್ರ ಕಾಮತ್, ನಿರ್ದೇಶಕರು ಸಿ.ಇ.ಕಾಮತ್ ಇನ್ಸಿಟ್ಯೂಷನ್ ಆಫ್ ಆರ್ಟಿಸನ್ಸ್.

 

Facebook ಕಾಮೆಂಟ್ಸ್

ಲೇಖಕರ ಕುರಿತು

Pavithra Bidkalkatte

ಪವಿತ್ರ ಬಿದ್ಕಲ್'ಕಟ್ಟೆ
ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್.ಡಿ.ಎಮ್ ಕಾಲೇಜು ಉಜಿರೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!