“ಏನೇನಿದೇಪ್ಪ?”
“ಸರ್, ಇಡ್ಲಿ, ದೋಸೆ….”
“ಸರಿ, ಸರಿ, ದೋಸೆಯಲ್ಲಿ ಏನೇನಿದೆ?”
“ಸರ್, ದೋಸೆ ಬಂದು ಪ್ಲೇನ್ ದೋಸೆ, ಸೆಟ್ ದೋಸೆ, ಬೆಣ್ಣೆ ದೋಸೆ, ಈರುಳ್ಳಿ ದೋಸೆ, ಅವಲಕ್ಕಿ ದೋಸೆ, ಗೋಧಿ ದೋಸೆ, ಬೀಟ್‍ರೂಟ್ ದೋಸೆ, ರಾಗಿ ದೋಸೆ, ಪೇಪರ್ ದೋಸೆ, ವೇಸ್ಟ್ ಪೇಪರ್ ದೋಸೆ ಇದೆ ಸಾರ್”
“ಮಸಾಲೆ ಇಲ್ಲೇನಪ?”
“ಇದೆ ಸಾರ್!”
“ಅದೇ ಒಂದು ನಾಲ್ಕು ಕೊಡಪ್ಪ!”
ಬಹುಶಃ ನಮ್ಮ ರಾಜ್ಯವೇನು, ಒಟ್ಟು ನಲವತ್ತು ಕೋಟಿ ಜನಸಂಖ್ಯೆಯ ಇಡೀ ದಕ್ಷಿಣ ಕರ್ನಾಟಕದಲ್ಲಿ ಯಾವುದೇ ಹೊಟೇಲಿನಲ್ಲಿ ಸರ್ವರ್ ಮತ್ತು ಗ್ರಾಹಕನ ನಡುವಿನ ಸಂಭಾಷಣೆ ಹೀಗೇ ಶುರುವಾಗಿ ಹೀಗೇ ಕೊನೆಯಾಗುತ್ತದೆ! ಭಾರತದ ಬಹುತೇಕ ಎಲ್ಲ ಕೋನಗಳನ್ನೂ ಅಳೆದು ಸುಳಿದಿರುವ ನನಗೆ ದಕ್ಷಿಣ ಭಾರತವನ್ನು ಬಿಟ್ಟು ಹೋದಾಗೆಲ್ಲ ಉದ್ಭವಿಸುವ ಬಹುದೊಡ್ಡ ಸಮಸ್ಯೆ ಬೆಳಗ್ಗಿನ ಉಪಹಾರದ್ದು. ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಬೆಳಗಿನ ತಿಂಡಿ ಎಂದು ದೋಕ್ಲಾ, ಕಾಕ್ರಾ, ಜಿಲೇಬಿಗಳನ್ನು ತಿನ್ನಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಲುಚಿ, ರೊಶೊಗುಲ್ಲ, ರಾಧಬಲ್ಲವಿಗಳನ್ನು ತಿನ್ನಬೇಕಾಗಿ ಬರುತ್ತದೆ. ಬಿಹಾರ, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶಗಳಲ್ಲಿ ಬೆಳಗಿನ ಉಪಹಾರವಾಗಿ ನಾವು ತಿನ್ನಬೇಕಾಗುವುದು ಉದ್ದುದ್ದ ಅಗಲಗಲದ, ಎಣ್ಣೆ ಇಳಿಯುವ ಪೂರಿ ಮತ್ತು ಎರಡೆರಡು ಕೇಜಿ ಬೇಯಿಸಿದ ಆಲೂಗಡ್ಡೆ! ಪಂಜಾಬಿನಲ್ಲಿ ಕಾಲು ಇಂಚು ದಪ್ಪದ ಬೆಣ್ಣೆಯ ಟೋಪಿ ಹೊದ್ದ ಅರ್ಧ ಇಂಚು ದಪ್ಪದ ಆಲೂ ಪರಾಟವನ್ನು ಗಡಿಗೆ ಮೊಸರಿನಲ್ಲಿ ಮುಳುಗಿಸಿ ಉಪ್ಪಿನ ಕಾಯಿಯಲ್ಲಿ ನೆಚ್ಚಿ ಬಾಯೊಳಗಿಡುವುದೇ ಒಂದು ಬಗೆಯಲ್ಲಿ ಬೆಳಗಿನ ವ್ಯಾಯಾಮ! ಹಾಗಾಗಿ ಉತ್ತರ ಭಾರತದ ಪ್ರವಾಸ ಮುಗಿಸಿ ಬೆಂಗಳೂರಲ್ಲಿ ಇಳಿದಾಗೆಲ್ಲ ನಾನು ಮೊದಲು ಓಡುವುದು ದೋಸೆ ಹೊಟೇಲಿಗೆ. ಮೈಲಿಗೆ ಮುಟ್ಟಿದ ಬ್ರಾಹ್ಮಣನಿಗೆ ಪಂಚಗವ್ಯ ಕುಡಿದು ಸಮಾಧಾನವಾಗುವಂತೆ, ಎಲ್ಲೆಲ್ಲೋ ಲೋಕಸಂಚಾರ ಮಾಡಿ ಬಂದ ದಕ್ಷಿಣ ಭಾರತೀಯನಿಗೆ ಹದವಾದ ಬಿಸಿಯ ದೋಸೆಯನ್ನು ಮುರಿದು ಮೊದಲ ತುತ್ತು ಬಾಯಲ್ಲಿಟ್ಟಾಗಲೇ ಸಮಾಧಾನ! ಅದೂ ಎಂಥಾ ದೋಸೆ? ಅಂತಿಂಥಾದ್ದಲ್ಲ, ಮಸಾಲೆ ದೋಸೆಯೇ ಆಗಬೇಕು. ಆಕಾಶಾತ್ ಪತಿತಯಂ ತೋಯಂ ಯಥಾಗಚ್ಛತಿ ಸಾಗರಂ ಎನ್ನುವಂತೆ, ಲೋಕದ ಸಮಸ್ತ ತಿಂಡಿತೀರ್ಥಗಳನ್ನು ಮೆನುವಿನಲ್ಲಿ ಹರವಿ ಕೊಟ್ಟರೂ ಗ್ರಾಹಕನ ಕಣ್ಣು ಹೋಗುವುದು ದೋಸೆ ವಿಭಾಗಕ್ಕೆ, ಅದರಲ್ಲಿ ಬರೆದ ಮಸಾಲೆ ದೋಸೆ ಎಂಬ ಸಾಲಿಗೇ! ಸಾಹಿತ್ಯದಲ್ಲಿ ಕಾವ್ಯ, ಕಾವ್ಯದಲ್ಲಿ ಕಾಳಿದಾಸ ಎನ್ನುವ ಶ್ಲೋಕದಂತೆ, ತಿಂಡಿಗಳಲ್ಲಿ ದೋಸೆ, ದೋಸೆಗಳಲ್ಲಿ ಮಸಾಲೆಯೇ ಪರಮಶ್ರೇಷ್ಠ. ಉಳಿದದ್ದೆಲ್ಲ ಚರಿಗೆ ಭರ್ತಿಗಿವೆ ಅಷ್ಟೇ ಎಂಬುದೇ ದೋಸೆಪ್ರಿಯನ ವ್ಯಾಖ್ಯಾನ.
ದೋಸೆಯ ಬಗ್ಗೆ ಭಾರತೀಯರ ಪ್ರೀತಿ ಇಂದು ನಿನ್ನೆಯದಲ್ಲ. ಸಂಗಂ ಸಾಹಿತ್ಯದಲ್ಲೇ ಅಡೈ, ದೋಸೈ ಎಂಬ ಪದಗಳು ಬಂದು ಹೋಗಿವೆಯೆಂದು ಭೋಜ್ಯಪ್ರಿಯರು ಸಂಶೋಧನೆ ಮಾಡಿಬಿಟ್ಟಿದ್ದಾರೆ. 1051-54ರ ಸುಮಾರಿಗೆ ರಚಿತವಾಯಿತೆಂದು ಹೇಳಲಾಗುವ ಮೂರನೇ ಸೋಮೇಶ್ವರ ರಚಿತ “ಮಾನಸೋಲ್ಲಾಸ” ಎಂಬ ಎನ್‍ಸೈಕ್ಲೋಪೀಡಿಯಾ ಮಾದರಿಯ ಉದ್ಗ್ರಂಥದಲ್ಲಿ ದೋಸೆಯ ಪ್ರಸ್ತಾಪವಿದೆ. ಅಂದರೆ, ಆ ಕಾಲಕ್ಕಾಗಲೇ ದಕ್ಷಿಣ ಭಾರತದಲ್ಲಿ ದೋಸೆ ತನ್ನ ಮಾಯಾಪ್ರಭಾವವನ್ನು ಬೀರಿ ಹುಲುಮಾನವರನ್ನು ವಶೀಕರಿಸಿಕೊಂಡಿತ್ತೆಂದು ಊಹಿಸಬಹುದು. ಭಾರತೀಯ ತಿಂಡಿ ತಿನಿಸುಗಳ ಮೇಲೆ ಅಪಾರವಾದ ಸಂಶೋಧನೆ ಮಾಡಿದ ಪ್ಯಾಟ್ ಚಾಪ್‍ಮನ್ ಮತ್ತು ಲೀಸಾ ರೇನರ್ ಎಂಬಿಬ್ಬರು ಫುಡೀಗಳು ದೋಸೆಯ ಮೂಲ ಯಾವುದೋ ತಿಳಿಯದು; ಆದರೆ ಮಸಾಲೆ ದೋಸೆ ಹುಟ್ಟಿದ್ದು ಮಾತ್ರ ಕರ್ನಾಟಕದಲ್ಲಿ; ಇಲ್ಲಿನ ಕರಾವಳಿಯ ಪುಟ್ಟ ಊರಾದ ಉಡುಪಿಯಲ್ಲಿ ಎಂಬ ಘನ ಸಂಶೋಧನೆ ಮಾಡಿದ್ದಾರೆ. ಎಲ್ಲ ಮಹಾಯಾತ್ರೆಗಳೂ ಒಂದು ಪುಟ್ಟ ಹೆಜ್ಜೆಯಿಂದ ಪ್ರಾರಂಭವಾಗುತ್ತವೆ ಎಂಬ ಹಾಗೆ, ಮಸಾಲೆ ದೋಸೆಯ ದೀರ್ಘಯಾತ್ರೆಯೂ ಒಂದು ದಿನ ಉಡುಪಿಯ ಪುಟ್ಟ ಹೊಟೇಲೊಂದರ ಸಾಮಾನ್ಯ ಮುಂಜಾನೆ ಶುರುವಾಯಿತಂತೆ. ದಿನವೂ ದೋಸೆಯನ್ನೂ ಚಟ್ನಿಯನ್ನೂ ಗ್ರಾಹಕರಿಗೆ ಬಡಿಸುತ್ತಿದ್ದ ಹೊಟೇಲಿನವನು ಅದೊಂದು ದಿನ, ಚಟ್ನಿ-ಸಾಂಬಾರುಗಳು ಖಾಲಿಯಾದ ಪರಿಣಾಮವೋ ಏನೋ, ಮಸಾಲೆಯನ್ನು ದೋಸೆಯ ಜೊತೆಗಿಟ್ಟು ಕೊಟ್ಟರೆ ಹೇಗೆ ಎಂದು ಯೋಚಿಸಿದನಂತೆ. ದೋಸೆಯ ಪಕ್ಕ ಮಸಾಲೆ ಇಟ್ಟರೆ ಅಷ್ಟೇನೂ ಆಕರ್ಷಕವಲ್ಲವೆಂದು ಬಗೆದ ಆ ಸೌಂದರ್ಯಮೀಮಾಂಸಕ, ಕಾವಲಿಯಲ್ಲಿ ದೋಸೆ ಹಬೆಯಾಡುತ್ತಿದ್ದಾಗಲೇ ಮಸಾಲೆಯನ್ನು ಅದರ ಮೇಲಿಟ್ಟು, ದೋಸೆಯನ್ನು ಸುತ್ತಿ ತಟ್ಟೆಗೆ ಹಾಕಿದನಂತೆ. ದಿನವೂ ಸೀರೆಯುಡುವ ಹೆಂಡತಿ ಒಂದು ದಿನ ಚೂಡಿದಾರ್ ತೊಟ್ಟರೆ ಗಂಡನಿಗೆಂಥ ಆನಂದಾನುಭೂತಿಗಳು ಮೂಡುತ್ತವೋ, ಅಂಥ ಖುಷಿ ಗ್ರಾಹಕನಿಗಾಯಿತೆಂದು ಕಾಣುತ್ತದೆ. ಮಸಾಲೆ ದೋಸೆ ಎಂಬ ಅದ್ಭುತ ಸಂಶೋಧನೆಯೊಂದು ಹಾಗೆ ಜನ್ಮ ತಳೆಯಿತು. ಇಂದು ಬೆಂಗಳೂರೊಂದರಲ್ಲೇ ದಿನಕ್ಕೆ ಐದು ಲಕ್ಷ ಮಸಾಲೆ ದೋಸೆಗಳು ತಯಾರಾಗಿ ಗ್ರಾಹಕನ ಉದರಸೇವೆ ಮಾಡುತ್ತಿವೆಯೆಂದರೆ ಆ ದಿನದ ಐತಿಹಾಸಿಕತೆಯನ್ನೊಮ್ಮೆ ನೆನೆಯಿರಿ!
ಮಸಾಲೆ ದೋಸೆಯ ದೆಸೆಯೋ ಅದನ್ನು ಮಾಡುವುದರಲ್ಲಿ ಎತ್ತಿದ ಕೈಯೆಂದು ಕರೆಸಿಕೊಂಡ ಉಡುಪಿ ಬ್ರಾಹ್ಮಣರ ದೆಸೆಯೋ ಅಂತೂ ಉಡುಪಿಯ ಅಡುಗೆಭಟ್ಟರು ದೇಶಾದ್ಯಂತ ಚದುರಿ ಹೋಗಿ ಹೊಟೇಲುಗಳನ್ನು ತೆರೆದರು. ಹೊಟೇಲಿನಲ್ಲಿ ಏನಿಲ್ಲವೆಂದರೂ ಮಸಾಲೆ ದೋಸೆಯನ್ನು ಮಾತ್ರ ಖಾಯಂಗೊಳಿಸಿ ಕುಲದೇವತೆಯಂತೆ ಗೌರವದಿಂದ ನಡೆಸಿಕೊಂಡರು. ಬೆಂಗಳೂರಿನ ಬಸವನಗುಡಿಯಲ್ಲಿರುವ ವಿದ್ಯಾರ್ಥಿ ಭವನ, ದ್ವಾರಕಾ, ಮಲ್ಲೇಶ್ವರದ ಜನತಾ ಹೊಟೇಲು, ಚಿತ್ರದುರ್ಗದ ಮೈಸೂರು ಕೆಫೆ, ಶಿವಮೊಗ್ಗದ ಗೋಪಿ ಹೊಟೇಲು, ಸತ್ಕಾರ್ ಹೊಟೇಲು, ಚಿತ್ರದುರ್ಗದ ಲಕ್ಷ್ಮೀ ಭವನ, ಮದ್ರಾಸಿನ ದಾಸ್ ಪ್ರಕಾಶ, ವುಡ್‍ಲ್ಯಾಂಡ್ಸ್ – ಇವೆಲ್ಲ ಪ್ರಸಿದ್ಧವಾಗಿದ್ದೇ ಅಲ್ಲಿನ ವಿಶಿಷ್ಟ ಮಸಾಲೆ ದೋಸೆಗಳಿಂದಾಗಿ. ಇದರ ಜೊತೆ ಮಸಾಲೆಗೊಂದಿಷ್ಟು ದಾಯಾದಿಗಳೂ ಇದ್ದಾರೆ. ಒಂದು ಉತ್ತರದ ದಾವಣೆಗೆರೆಯ ಬೆಣ್ಣೆ ಮಸಾಲೆ ದೋಸೆಯಾದರೆ ಇನ್ನೊಂದು ದಕ್ಷಿಣದ ಮೈಸೂರು ಮಸಾಲೆ ದೋಸೆ. ಊರಲ್ಲೆಲ್ಲ ತನ್ನ ಕಾವಲಿಯೇ ದೊಡ್ಡದಿರಬೇಕೆಂದು ಬಯಸಿ ಹಾಕಿಸಿಕೊಂಡ ಚಾಪೆಯಗಲದ ಕಾವಲಿಯಲ್ಲಿ ಬಿಡಿಸಿದ ದೋಸೆಯ ನಡುವಲ್ಲೂ ಯಾರೋ ಮಸಾಲೆ ಇಟ್ಟು ಅದನ್ನು ಪೇಪರ್ ಮಸಾಲೆ ದೋಸೆ ಎಂದು ಕರೆದರು. ನಾವೆಲ್ಲ ಚಿಕ್ಕವರಿದ್ದಾಗ, ಅದನ್ನೊಂದನ್ನು ಆರ್ಡರ್ ಮಾಡಿದರೆ ಹೊಟೇಲಿನ ಸಮಸ್ತ ಗ್ರಾಹಕಗಡಣವೂ ನಮ್ಮನ್ನು ಅಚ್ಚರಿಯಿಂದ ನೋಡುತ್ತದೆಂಬ ಕಾರಣಕ್ಕೇ ಖುಷಿಯಿಂದ ಹಿಗ್ಗಿ ಹೋಗುತ್ತಿದ್ದುದುಂಟು.
ದೋಸೆ ಎಂದಾಗ ನೆನಪಾಗುವುದು ಶಿವರುದ್ರಪ್ಪನವರ ಇಂದ್ರಭವನದ ಚುಟುಕ. ಕೊರವಂಜಿ ಪತ್ರಿಕೆಯಲ್ಲಿ ನಿರಂತರವಾಗಿ ಹಾಸ್ಯ ಬರಹಗಳನ್ನು ಪ್ರಕಟಿಸುತ್ತಿದ್ದ ನಾ. ಕಸ್ತೂರಿಯವರು ಒಮ್ಮೆ ತನ್ನ ಸಹೋದ್ಯೋಗಿ ಮಿತ್ರ ಜಿ.ಎಸ್. ಶಿವರುದ್ರಪ್ಪನವರಿಗೆ “ಯಾವತ್ತೂ ಗಂಭೀರವಾಗಿರುವುದು ಒಳ್ಳೆಯದಲ್ಲ. ಸ್ವಲ್ಪ ಹಾಸ್ಯ ಕವಿತೆಗಳನ್ನೂ ಬರಿ” ಎಂದು ತಾಕೀತು ಮಾಡಿದರಂತೆ. ಆಗ ಶಿವರುದ್ರಪ್ಪನವರು ಅದನ್ನು ಗುರು ಆಜ್ಞೆ ಎಂದೇ ಬಗೆದು ದೀಕ್ಷೆ ತೊಟ್ಟಂತೆ ಹಾಸ್ಯಕವಿತೆ, ಚುಟುಕಗಳನ್ನು ಬರೆಯತೊಡಗಿದರು. ಅಂಥದೊಂದು, ಕೊರವಂಜಿಯಲ್ಲಿ ಪ್ರಕಟವಾದ ಈ ಕವಿತೆ:
ಇಂದ್ರಭವನದಲಿ ಚಂದ್ರ ಮೂಡಿತೋ
ದೋಸೆ ಹೆಂಚಿನಲ್ಲಿ
ಮೂಡಿತೆಂಬೆಯೋ, ಮತ್ತೆ ಮುಳುಗಿತೋ
ಉದರ ಗಗನದಲ್ಲಿ!
ದೋಸೆಯ ಮಹಿಮೆ ಅಂಥಾದ್ದು! ಅದು ಅತ್ತ ದೋಸೆ ಹಂಚಿನಲ್ಲಿ ಚಂದ್ರನಂತೆ ಮೂಡಿ ಬರುತ್ತಲೇ ಇತ್ತ ಉದರ ಗಗನದಲ್ಲಿ ಮುಳುಗಿ ಹೋಗುತ್ತದೆ! ದೋಸೆಯನ್ನು ಲಡ್ಡು, ಹೋಳಿಗೆಯಂತೆ ಒಂದೇ ಸಲಕ್ಕೆ ನೂರಿನ್ನೂರು ಮಾಡಿ ಶೇಖರಿಸಿಡಲು ಸಾಧ್ಯವಿಲ್ಲ. ದೋಸೆಯ ಗಮ್ಮತ್ತೇನಿದ್ದರೂ ಅದರ ಬಿಸಿಯಲ್ಲಿ. ಹಬೆಯಾಡುವ ಕಾವಲಿಯಲ್ಲಿ ಉರುಟಾಗಿ ಉಜ್ಜಿ ತೀಡಿ ಬೇಯಿಸಿ ತೆಗೆದ ದೋಸೆಯೇ ಆಪ್ಯಾಯಮಾನ. ಅದನ್ನು ಹತ್ತು ನಿಮಿಷ ಆರಲು ಬಿಟ್ಟರೆ ಆರಿ ಹೋದ ಕಾಫಿಯಂತೆ, ಮುರಿದು ಬಿದ್ದ ಸಂಬಂಧದಂತೆ; ಅಷ್ಟೇನೂ ಆಸಕ್ತಿಕರವಲ್ಲ. ಹಾಗೆಯೇ, ದೋಸೆಯನ್ನು ಬೆಕ್ಕಿನಂತೆ ತಣ್ಣಗೆ ಮನೆಯಲ್ಲಿ ಕೂತು ತಿನ್ನುವುದರಲ್ಲಿ ಅಷ್ಟೇನೂ ರುಚಿಯಿಲ್ಲ. ಎಲ್ಲ ರೀತಿಗಳಲ್ಲೂ ಸಿದ್ಧರಾಗಿ ಸರ್ವಾಲಂಕಾರಭೂಷಿತರಾಗಿ ಹೊಟೇಲಿಗೆ ಧೌಡಾಯಿಸಿ ಟೇಬಲ್ ಹಿಡಿದು ಕೂತು ಮೆನು ಮೇಲೆ ಸಿಂಹಾವಲೋಕನ ಮಾಡಿ ಸರ್ವರನ್ನು ಕರೆದು ಏನೇನಿವೆ ಎಂದು ವಿಚಾರಿಸಿ ದೌಲತ್ತಿನಿಂದ ಮಸಾಲೆ ದೋಸೆಗೆ ಆರ್ಡರ್ ಮಾಡುವುದರಲ್ಲಿರುವ ಖದರೇ ಬೇರೆ. ಈ ಭೂಲೋಕದಲ್ಲಿ ಮಾನವ ಜನ್ಮವಿರುವಷ್ಟು ದಿನ, ಆ ಮಾನವನಿಗೆ ಜಿಹ್ವೆಯೊಂದಿರುವಷ್ಟು ದಿನ, ಆ ಜಿಹ್ವೆಗೆ ಚಾಪಲ್ಯ ಹಸಿಯಾಗಿರುವಷ್ಟು ದಿನ ಮಸಾಲೆ ದೋಸೆಗೆ ಅಳಿಗಾಲವಿಲ್ಲ!