ಅಂಕಣ

ಬುದ್ಧಿಜೀವಿಗಳು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುವ ಅಸ್ತ್ರವಾಗುತ್ತಿದೆಯೇ ಅಭಿವ್ಯಕ್ತಿ ಸ್ವಾತಂತ್ರ್ಯ?

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯ
ಸ್ವಾತಂತ್ರ್ಯ ಬಂದು ೭೦ ವರುಷಗಳೇ ಸಂದಿದ್ದರೂ ೨೦೧೪ರ ವರೆಗೆ ಕೆಲವೇ ಕೆಲವು  ಜನರಿಗೆ ತಿಳಿದಿದ್ದ ಈ ಪದಗಳು ಈಗ ಬಹುತೇಕ  ದೇಶದ ಎಲ್ಲಾ ಜನರಿಗೆ ತಿಳಿದಿರಬಹುದು. ಇದಕ್ಕೆ ಕಾರಣ ನಮ್ಮ ದೇಶದ ಡೋಂಗಿ ಬುದ್ಧಿಜೀವಿಗಳು, ಸೆಕ್ಯುಲರ್ ಮುಖವಾಡವನ್ನು ಹಾಕಿಕೊಂಡಿರುವ ಗಂಜಿಗಿರಾಕಿಗಳು, ಪತ್ರಕರ್ತರು ಮತ್ತು ಕೆಲವು ರಾಜಕಾರಣಿಗಳು. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅಂಡು ಸುಟ್ಟ ಬೆಕ್ಕಿನಂತೆ ಆಡುತ್ತಿರುವ ಈ ಅತೃಪ್ತ ಆತ್ಮಗಳಿಗೆ ತಮ್ಮ ಭವಿಷ್ಯದ ಬಗ್ಗೆ ಬಹಳ ಚಿಂತೆಯಾಗಿದೆ. ಎಲ್ಲಿ ತಮ್ಮ ಗಂಜಿ ಶಾಶ್ವತವಾಗಿ ನಿಲ್ಲುತ್ತೆ ಅನ್ನುವ ಭಯದಲ್ಲಿ ಅಭಿವ್ಯಕ್ತಿಯ ಹೆಸರಲ್ಲಿ ಭಯೋತ್ಪಾದಕರ ಸಮರ್ಥನೆಗೂ ಇಳಿಯುತ್ತಾರೆ. ದೇಶದ ವಿರುದ್ಧ ಮಾತನಾಡುವವರ ರಕ್ಷಣೆಗೂ ಧಾವಿಸುತ್ತಾರೆ. ಅಗತ್ಯ ಬಿದ್ದರೆ ಹೇಲು ತಿನ್ನಲೂ ಸೈ ಅನ್ನುವ ಮನಸ್ಥಿತಿ ಈ ಆಸಾಮಿಗಳದ್ದು. ದೇಶದ ವಿರುದ್ಧ ಹೇಳಿಕೆಯನ್ನೋ, ಘೋಷಣೆಯನ್ನೋ ಕೂಗಿದರೆ ದಿಢೀರ್ ಪ್ರಸಿದ್ಧಿ ಹೊಂದಲು ಸಾಧ್ಯ ಮತ್ತು ಸದಾ ಪ್ರಚಾರದಲ್ಲಿ ಇರಬಹುದು ಅನ್ನೋ ಭಾವನೆ ಇವರದ್ದು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮಗೆ ಬೇಕಾದ ಹಾಗೆ ಯಾವ ರೀತಿಯಲ್ಲಿ ಒಂದು ಅಸ್ತ್ರದ ಹಾಗೆ ಬುದ್ಧಿಜೀವಿಗಳು ಉಪಯೋಗಿಸುತ್ತಿದ್ದಾರೆ ಅನ್ನುವುದನ್ನು ಕೆಲವು ಉದಾಹರಣೆಗಳ ಮುಖಾಂತರ ನೋಡೋಣ.

ಕಾಶ್ಮೀರದಲ್ಲಿ ಇವಿಎಂ ಹಿಡಿದು ಹೊರಟಿದ್ದ ಸಿಆರ್ಪಿಎಫ್ ಯೋಧರ ಮೇಲೆ ಕಾಶ್ಮೀರದ ಕಿಡಿಗೇಡಿ ಯುವಕರು ಹಲ್ಲೆ ನಡೆಸುತ್ತಿರುವ ವಿಡಿಯೋ ಸುದ್ದಿ ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಕೈಯಲ್ಲೇ ಲೋಡೆಡ್ ಗನ್ ಇದ್ದರೂ ತಮ್ಮ ಮೇಲೆ ಹಲ್ಲೆ ನಡೆಸಿ ತಮ್ಮ ಕಾರ್ಯಕ್ಕೆ ಅಡ್ಡಿ ಮಾಡುತ್ತಿರುವವರಿಗೆ ಏನೂ ಮಾಡಲು ಸಾಧ್ಯವಿಲ್ಲದೇ ಅಸಹಾಯಕರಾಗಿ ನಿಲ್ಲಬೇಕಾಗುತ್ತದೆ ನಮ್ಮ ಸೈನಿಕರು!! ಯಾಕೆಂದರೆ ಅವರ ಕೈಯಲ್ಲಿ ಇದ್ದದ್ದು ಮತಯಂತ್ರಗಳು. ಹಲ್ಲೆ ಮಾಡುತ್ತಿರುವವರ ಸೊಲ್ಲಡಗಿಸಲು ಹೋಗಿದ್ದರೆ ಚಲಾವಣೆಯಾಗಿದ್ದ ಮತಗಳನ್ನು ಹೊಂದಿದ್ದ ಮತಯಂತ್ರಗಳು ನಾಶವಾಗುವ ಸಾಧ್ಯತೆ ಇರುತ್ತಿತ್ತು. ಇನ್ನು ನಮಗೆಲ್ಲರಿಗೂ ಗೊತ್ತಿರುವಂತೆ  ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್‌ಭೂಷಣ್‌ ಜಾದವ್‌ ಗೆ  ಭಾರತದ ಪರ ಬೇಹುಗಾರಿಕೆ ನಡೆಸುತ್ತಿರುವ ಆರೋಪದಡಿಯಲ್ಲಿ ಮರಣದಂಡನೆಯ ಶಿಕ್ಷೆಯನ್ನು ಪಾಕಿಸ್ತಾನ ವಿಧಿಸಿದೆ. ಕೇಂದ್ರ ಸರಕಾರ ಕುಲಭೂಷಣ್ ಗೆ ಮರಣದಂಡನೆ ಜಾರಿಯಾದಲ್ಲಿ ಪರಿಣಾಮ ನೆಟ್ಟಗಿರಲ್ಲ ಅನ್ನುವ ಖಡಕ್ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ಕೊಟ್ಟಾಗಿದೆ. ಮೇಲ್ನೋಟಕ್ಕೆ ಕುಲಭೂಷಣ್ ಜಾದವರನ್ನು ಪಾಕಿಸ್ತಾನ ವ್ಯವಸ್ಥಿತ ಷಡ್ಯಂತ್ರದಲ್ಲಿ ಸಿಕ್ಕಿಸಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.!

ಮೇಲಿನ ಎರಡೂ ಘಟನೆಗಳ ಕುರಿತಾಗಿ ನಮ್ಮ ಕೆಲವು ವಿರೋಧ ಪಕ್ಷದ ನಾಯಕರು, ಸ್ವಯಂಘೋಷಿತ ಬುದ್ಧಿಜೀವಿಗಳು, ಲಜ್ಜೆಗೆಟ್ಟ ದೇಶವಿರೋಧಿ ಪತ್ರಕರ್ತರು ಜಾಣ ಮೌನ ವಹಿಸಿದ್ದಾರೆ. ದೇಶದ ವಿರುದ್ಧ ಘೋಷಣೆ ಕೂಗಿ, ಸೈನಿಕರಿಗೆ ತೊಂದರೆ ಮಾಡುವ ಕಾಶ್ಮೀರದ ಯುವಕರ ಬೆನ್ನಿಗೆ ಫಾರೂಕ್ ಅಬ್ದುಲ್ಲಾರಂತಹ ನಾಯಕರ ಬೆಂಬಲವಿದೆ! ಸೈನಿಕರಿಗೆ ಕಲ್ಲು ಹೊಡೆದ ಜಿಹಾದಿ ಉಗ್ರನನ್ನು ಸೆರೆಹಿಡಿದು ಸೇನಾ ವಾಹನಕ್ಕೆ ಕಟ್ಟಿ ಮೆರವಣಿಗೆ ಮಾಡುವ ಮೂಲಕ ಸೇನೆ ಕಾಶ್ಮೀರಿ ಯುವಕರಿಗೆ ಬಹಳ ಸ್ಪಷ್ಟ ಸಂದೇಶ ರವಾನಿಸಿದೆ. ವಿಪರ್ಯಾಸವೆಂದರೆ ಫಾರೂಕ್ ಅಬ್ದುಲ್ಲಾರ ಪಕ್ಷದ ಪ್ರಕಾರ ಇದು ಕೂಡಾ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ! ಕುಲಭೂಷಣ್  ರೀತಿಯಲ್ಲೇ ನಮ್ಮ ದೇಶದಲ್ಲಿ ಯಾರೋ ಒಬ್ಬನಿಗೆ ಮರಣದಂಡನೆ ಘೋಷಣೆಯಾಗಿದ್ದರೆ ಪರಿಸ್ಥಿತಿ ಯಾವ ರೀತಿ ಇರುತ್ತಿತ್ತು?? ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಮಾನವ ಹಕ್ಕುಗಳ ಉಲ್ಲಂಘನೆ ಹೆಸರಿನಡಿಯಲ್ಲಿ ಯಾವೆಲ್ಲ ರೀತಿಯಲ್ಲಿ ಹೋರಾಟಗಳು ನಡೆಯುತ್ತಿದ್ದವು? ಅಫ್ಜಲ್ ಗುರು ವಿಷಯದಲ್ಲಿ ದೇಶವನ್ನು ತುಂಡು ತುಂಡಾಗಿಸಲೂ ಸಿದ್ಧ ಎಂದು ಘೋಷಣೆ ಕೂಗಿದವರಿಗೆ ಬೆಂಬಲ ಸೂಚಿಸಿದವರೆಲ್ಲಾ ಈಗ ಕುಲಭೂಷಣ್ ಜಾದವ್‌ ಬಗ್ಗೆ ತುಟಿ ಪಿಟಿಕ್ ಅನ್ನುತ್ತಿಲ್ಲ.! ಭಾರತದಂತೆ ಪ್ರಜಾಪ್ರಭುತ್ವ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಯಾಕೆ ಅಭಿವ್ಯಕ್ತಿಯ ಹೆಸರಲ್ಲಿ ದೇಶದ ವ್ಯವಸ್ಥೆಗೆ ಧಕ್ಕೆ ತರುವ ಹೋರಾಟ ನಡೆಯುವುದಿಲ್ಲ? ಪಾಕಿಸ್ತಾನದಲ್ಲಿ ವಿರೋಧ ಪಕ್ಷಗಳಿಲ್ಲವೇ? ಹೀಗಿದ್ದರೂ ಒಬ್ಬನೇ ಒಬ್ಬ ಪಾಕಿಸ್ತಾನಿ ಈ ತೀರ್ಪಿನ ಬಗ್ಗೆ ನಮ್ಮ ದೇಶದಲ್ಲಿರುವ ಆಜಾದಿ ಗ್ಯಾಂಗಿನವರಂತೆ ಸೊಲ್ಲೆತ್ತುತ್ತಿಲ್ಲ. ಕಾರಣ ಇಷ್ಟೇ. ರಾಜಕೀಯ ಲಾಭಕ್ಕಾಗಿ ದೇಶದ್ರೋಹಿಗಳಿಗೆ ಬೆಂಬಲಿಸುವ ನಾಯಕರಿರುವುದು ಕೇವಲ ಭಾರತದಲ್ಲಿ ಮಾತ್ರ ಅನ್ನಿಸುತ್ತೆ!!

ಈ ಸ್ವಯಂಘೋಷಿತ ಅಭಿವ್ಯಕ್ತಿ ಹೋರಾಟಗಾರರ ಪ್ರಕಾರ ಬಿಹಾರ ಸರಕಾರದ ಸಚಿವನೊಬ್ಬ ಪ್ರಧಾನಿ ಮೋದಿಯವರ ಫೋಟೋಗೆ ಚಪ್ಪಲಿಯಿಂದ ಹೊಡೆಯಿರಿ ಅನ್ನಬಹುದು. ಇನ್ನೊಬ್ಬ ಮೋದಿಯವರನ್ನು ರಕ್ತದ ದಲ್ಲಾಲಿ ಅನ್ನಬಹುದು. ಆದರೆ ಕಾಂಗ್ರೆಸ್ ಸರಕಾರವಿದ್ದಾಗ ನಡೆದ ಹಗರಣಗಳಿಗೆ ಮನ್ಮೋಹನ್ ಸಿಂಗ್ ರೈನ್ ಕೋಟಿನಂತಿದ್ದರು ಅಂದ್ರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ.! ನನ್ನ ಕೊರಳಿಗೆ ಚಾಕುವಿನಿಂದ ಇರಿದರೂ ಸೈ ಭಾರತ್ ಮಾತಾ ಕೀ ಜೈ ಅನ್ನಲಾರೆ ಅಂತ ನಮ್ಮ ದೇಶದ ಸಂಸದನೊಬ್ಬ ಹೇಳಿಕೆ ಕೊಟ್ಟರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ!! ಇತ್ತೀಚಿಗೆ ಬಹಳ ಸುದ್ದಿ ಮಾಡಿದ್ದ ಗುರ್ ಮೆಹರ್ ಕೌರ್ ಅವರನ್ನು ವೀರೇಂದ್ರ ಸೆಹ್ವಾಗ್ ಮತ್ತು ಸುಶೀಲ್ ಕುಮಾರ್ ಟ್ರಾಲ್ ಮಾಡಿದರೆ ಮಾನಹರಣ ಮಾಡಿದಂತೆ, ಆದರೆ ಇದೇ ಸೆಹ್ವಾಗ್ ಮತ್ತು ಸುಶೀಲ್ ಅವರನ್ನು ಜಾವೇದ್ ಅಖ್ತರ್ ಅವಿದ್ಯಾವಂತರು ಅಂತ ಟ್ರಾಲ್ ಮಾಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ.!! ಒಬ್ಬ ಉಗ್ರನಿಗೆ ಮರಣದಂಡನೆ ಶಿಕ್ಷೆಯಾಗಬಾರದೆಂದು ಮಧ್ಯರಾತ್ರಿ ನ್ಯಾಯಾಧೀಶರ ಮನೆ ಕದವನ್ನು ತಟ್ಟುವ ನಮ್ಮ ದೇಶದ ಬುದ್ಧಿಜೀವಿಗಳು ಕುಲ್ ಭೂಷಣ್ ವಿಷಯದಲ್ಲಿ ಮಾತ್ರ ಗಾಢ ನಿದ್ರೆಗೆ ಜಾರಿದ್ದಾರೆ! ಅಫ್ಜಲ್ ಗುರು, ಕಸಬ್ ಗೆ ಸಾಬೀತಾದ ಭಯೋತ್ಪಾದನೆ ಅಪರಾಧಕ್ಕೆ ಮರಣದಂಡನೆ ವಿಧಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆ, ಅದೇ ಮೇಲ್ನೋಟಕ್ಕೆ ಏನೂ ತಪ್ಪೇ ಮಾಡದ ಕುಲಭೂಷಣ್ ಜಾದವ್ ಗೆ ಪಾಪಿ ಪಾಕಿಸ್ತಾನ ಮರಣದಂಡನೆ ವಿಧಿಸಿದರೆ ಇವರುಗಳ ಪ್ರಕಾರ ಅದು ಪಾಕಿಸ್ತಾನದ ನ್ಯಾಯ ಪಾಲನೆ!!  ಅಫ್ಜಲ್ ಗುರು ಯಾಕೂಬ್ ಮೆಮನ್ ಪರ ಭಾರತದ ವಿರುದ್ಧ ಘೋಷಣೆ ಕೂಗಿದ್ದ ದೆಹಲಿಯ ಜೆಎನ್ಯು ನಲ್ಲಿ  ಕುಲಭೂಷಣ್ ಜಾದವ್‌ ಕುರಿತಾಗಿ ಯಾವುದೇ ಘೋಷಣೆ ಮೊಳಗುವುದಿಲ್ಲ!!

ಕೆಲ ದಿನಗಳ ಹಿಂದೆ ಯೋಧನೊಬ್ಬ ನಮಗೆ ಬಹಳ ದೊಡ್ಡ ಅಪಾಯವಿರುವುದು ಪಾಕಿಸ್ತಾನದ ಉಗ್ರರಿಂದಲ್ಲ, ನಕ್ಸಲ್ ಗಳಿಂದಲ್ಲ ಆದರೆ ಭಾರತದಲ್ಲಿದ್ದು ಭಾರತದ ವಿರುದ್ಧ ಘೋಷಣೆ ಕೂಗುವವರಿಂದ ಮತ್ತು ಇಂತಹ ದ್ರೋಹಿಗಳ ಪರ ಬೆಂಬಲಿಗರ ಪಡೆಯೇ ಎದ್ದು ನಿಲ್ಲುತ್ತದೆ ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಯೋಧನೊಬ್ಬನ ಈ ಹೇಳಿಕೆಯ ಗಂಭೀರತೆಯನ್ನು ಚರ್ಚೆ ಮಾಡುವ ಬದಲು ಸೈನಿಕರು ಬಹಿರಂಗವಾಗಿ ಹೇಳಿಕೆ ನೀಡಬಾರದು. ಇದು ಸೈನ್ಯದ ಆಶಯಕ್ಕೆ ಧಕ್ಕೆ ತರುವಂತಹ ವಿಚಾರ ಅಂತ ಎಡಚರರು ಮತ್ತು ಕಾಂಗ್ರೆಸ್ ಚಮಚಾಗಳು ಮತ್ತು ಬುದ್ಧಿಜೀವಿಗಳು ಬಾಯಿ ಬಡಿದುಕೊಳ್ಳುತ್ತಾರೆ ಅಂದರೆ  ಎಂತ ವಿಪರ್ಯಾಸ ನೋಡಿ! ಇವರು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ದೇಶದ ವಿರುದ್ಧವೇ ಘೋಷಣೆ ಕೂಗಬಹುದು. ಆದರೆ ನಮ್ಮ ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಸೈನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಾರದು.!!

ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೆ ಎಲ್ಲರಿಗೂ ಅನ್ವಯವಾಗಬೇಕಲ್ಲವೇ? ಕೆಲ ತಿಂಗಳುಗಳ ಹಿಂದೆ ತಾರೇಕ್ ಫತಾಹ್, ಮೇಜರ್ ಜನರಲ್ ಜಿ.ಡಿ.ಭಕ್ಷಿ, ಮೇಜರ್ ಗೌರವ್ ಆರ್ಯ ಅವರಿಗೆ ಕೋಲ್ಕತಾದಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಗಿತ್ತು. ಇತ್ತೀಚಿಗೆ ಶಾಜಿಯಾ ಎಲ್ಮಿಯವರಿಗೆ ಜಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಯಿತು. ಆ ಸಂದರ್ಭದಲ್ಲಿ ಸುಮ್ಮನಿದ್ದ ಈ ಅಭಿವ್ಯಕ್ತಿ ಹೋರಾಟಗಾರರು ಉಮರ್ ಖಾಲಿದ್, ಕನ್ನಯ್ಯ ಕುಮಾರ್ ಗೆ ಮಾತನಾಡಲು ಅವಕಾಶ ನಿರಾಕರಿಸಿದ್ದಲ್ಲಿ ಹಾದಿ ಬೀದಿಯಲ್ಲಿ ರಂಪ ಮಾಡುತ್ತಾರೆ!  ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರ ಹಕ್ಕು ನಿಜ. ಆದರೆ ಅದಕ್ಕೊಂದು ಮಿತಿ ಇದೆ ಅಲ್ಲವೇ? ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ದೇಶ ವಿರೋಧಿ ಹೇಳಿಕೆ ನೀಡುವುದನ್ನು ಇನ್ನೂ ಎಷ್ಟು ಸಹಿಸಿಕೊಳ್ಳಬೇಕು? ಮಾನವ ಹಕ್ಕು ಮತ್ತು ಅಭಿವ್ಯಕ್ತಿ ನೆಪದಲ್ಲಿ ಭಯೋತ್ಪಾದಕರ ಸಮರ್ಥನೆ ಮಾಡುವುದು ಇನ್ನೂ ಎಷ್ಟು ದಿನ ನೋಡಬೇಕು?? ಸಂಸತ್ತಿಗೇ ಬಾಂಬಿಟ್ಟ ಅಫ್ಜಲ್ ಗುರು, ಯಾಕೂಬ್ ಮೆಮನ್, ಬುರ್ಹಾನ್ ವಾನಿ ವಿನಂತವರ ಪುಣ್ಯತಿಥಿ ಆಚರಿಸಿ ದೇಶದ ವಿರುದ್ಧ ಕೂಗುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನಲಾದೀತೇ?? ಒಟ್ಟಿನಲ್ಲಿ ನಮ್ಮ ದೇಶದ ಬುದ್ಧಿಜೀವಿಗಳು ಮತ್ತು ಅಭಿವ್ಯಕ್ತಿ ಹೋರಾಟಗಾರರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮಗೆ ಬೇಕಾದ ರೀತಿಯಲ್ಲಿ ದೇಶದ ವಿರುದ್ಧ ಹೋರಾಡುವ ಅಸ್ತ್ರದಂತೆ ಉಪಯೋಗಿಸುತ್ತಿರುವುದು ವಿಷಾದವೇ ಸರಿ. ಇದಕ್ಕೊಂದು ತಾರ್ಕಿಕ ಅಂತ್ಯ ಆದಷ್ಟು ಬೇಗ ಸಿಗಲಿ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!