ಅಲ್ಲಿ ನೆರೆದಿದ್ದ ಐದು ಲಕ್ಷ ಜನರ ಮಧ್ಯೆ, ಅರವತ್ತು ಅಡಿ ಎತ್ತರದ ರಥ ಬಿದ್ದಿತು! ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ನಾಲ್ಕೈದು ಜನರಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಷ್ಟೆ. ಆದರೆ ರಥೋತ್ಸವದ ಕೇಂದ್ರ ಬಿಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಶ್ರೀಗುರು ಕೊಟ್ಟೂರೇಶ್ವರನ ಬಂಗಾರದ ಮುಖಾರವಿಂದ ಅಂದು ಮುಕ್ಕಾಗಿ ಹೋಗಿತ್ತು.
ಎಲ್ಲಿಯ ದೇವರು? ಯಾಕೀ ಯಜ್ಞ ಯಾಗಾದಿಗಳು? ಭಕ್ತಿ ಭಾವಗಳೆಲ್ಲಾ ಬರಿ ಮಿಥ್ಯ, ತೋರಿಕೆ, ಆಡಂಬರ ಎನ್ನುವವರಿಗೆ ಅಂದು ಘಟಿಸಿದ ಘಟನೆ ಬಹಳಷ್ಟು ಹೇಳಿತ್ತು. ಲಕ್ಷಾನುಲಕ್ಷ ನಾಸ್ತಿಕ ಜನರನ್ನು ಆಸ್ತಿಕತೆಯ ಕಡೆ ಮುಖ ಮಾಡುವಂತೆ ಮಾಡಿತ್ತು. ಇಲ್ಲಿ ನಾನು ಹೇಳ ಹೊರಟಿರುವುದು ನನ್ನ ಅನುಭವವನ್ನು. ಅನುಭವಕ್ಕಿಂತ ಮಿಗಿಲಾದ ಸತ್ಯ ಬೇರೊಂದಿಲ್ಲ. ಇದು ನನ್ನದೊಂದೇ ಕಥಾನುಭವವಲ್ಲ. ಅಲ್ಲಿ ನೆರೆದಿದ್ದ ಜನಸ್ತೋಮದ ಮಾತು ಸಹಾ! ಆ ಅನುಭವಾಮೃತವನ್ನು ಹಂಚುವುದಕ್ಕೆ ಮುಂಚೆ ಒಂದೆರೆಡು ಮಾತು…
ನೌಕರಿ ನಿಮಿತ್ಯ ನಾನು ಊರು ಬಿಟ್ಟು ಸುಮಾರು ಇಪ್ಪತೈದು ವರ್ಷವಾಗಿರಬಹುದು. ಆದರೆ ನಮ್ಮೂರ ಶ್ರೀಗುರು ಕೊಟ್ಟೂರೇಶ್ವರನ ರಥೋತ್ಸವಕ್ಕೆ ಹೋಗುವುದನ್ನು ಮಾತ್ರ ಎಂದೂ ತಪ್ಪಿಸಬಾರದೆಂದು ಕಟ್ಟುನಿಟ್ಟಾಗಿ ನನ್ನಲ್ಲಿ ನಾನೇ ಹಾಕಿಕೊಂಡ ಪ್ರತಿಜ್ಞೆ ಮತ್ತು ಅದರಂತೆಯೇ ಹಲವಾರು ವರುಷ ಪ್ರತಿಜ್ಞೆಯ ಪರಿಪಾಲನೆಯನ್ನು ಚಾಚೂ ತಪ್ಪದೆ ಮಾಡಿದೆ ಆದರೆ..
…ಮೂರ್ನಾಲ್ಕು ವರುಷದ ಹಿಂದೆ, ಆಗ ತಾನೆ ಸಂಧಿವಾತಕ್ಕೆ ನನ್ನ ಕೈಕಾಲುಗಳು ಈಡಾಗಿದ್ದವು. ಚಳಿಗಾಲದಲ್ಲಿ ದಿನ ತಳ್ಳುವದೇ ಒಂದು ಹರಸಾಹಸವಾಗಿತ್ತು ಆದರೂ ಅನಿವಾರ್ಯ. ಫೆಬ್ರವರಿ ಕೊನೆಯ ವಾರದಂದು ನಮ್ಮೂರ ಜಾತ್ರೆ. ಹೆಂಡತಿ ಮಕ್ಕಳ ಸಮೇತ ಸ್ವಂತ ಕಾರನ್ನೇರಿ ಸಂಧಿವಾತ ನೋವಿದ್ದರೂ ಜಾತ್ರೆಗೆ ಹೊರಡಲು ಸಿದ್ಧನಾದೆ. ಒಂದು ವೇಳೆ ದಾರಿಯ ಮಧ್ಯದಲ್ಲಿಯೇ ಆರೋಗ್ಯ ಹೆಚ್ಚು ಹದಗೆಟ್ಟರೆ ಎಸ್.ಡಿ.ಎಮ್. ಧಾರವಾಡ ಆಸ್ಪತ್ರೆಯಲ್ಲಿ ತೋರಿಸಲು ಮೆಡಿಕಲ್ ರೆಫರೆನ್ಸ್ ಪತ್ರವನ್ನೂ ಸಹಾ ನಮ್ಮ ಕೈಗಾ ಆಸ್ಪತ್ರೆಯಲ್ಲಿ ತೆಗೆದುಕೊಂಡಿದ್ದೆ. ನನ್ನ ಉದ್ದೇಶ ಎಷ್ಟೇ ಕಷ್ಟವಾದರೂ ಶ್ರೀಗುರು ಕೊಟ್ಟೂರೇಶ್ವರನ ರಥೋತ್ಸವದಲ್ಲಿ ಪಾಲ್ಗೊಳ್ಳುವುದು, ಆರೋಗ್ಯದ ದೃಷ್ಠಿಯಿಂದ ಅದು ಆಗದೇ ಹೋದರೆ ಮರುದಿನವೇ ಆಸ್ಪತ್ರೆಗೆ ಬಂದು ದಾಖಲಾಗುವುದು. ಅದರಂತೆ ಕೈಗಾದಿಂದ ನನ್ನೂರ ಕಡೆಗೆ ಪ್ರಯಾಣ ಬೆಳೆಸಿದೆ. ಸಾಯಂಕಾಲ ಧಾರವಾಡ ತಲುಪುತ್ತಿದ್ದಂತೆ ನನ್ನ ಕೈಕಾಲು ಮತ್ತು ದೇಹ ಭಯಂಕರವಾಗಿ ನೋಯಲು ಶುರುವಾದವು. ಮರು ದಿನವೇ ಜಾತ್ರೆ ಇದ್ದ ಕಾರಣ ಅಂದು ರಾತ್ರಿ ನೋವು ಶಮನ ಮಾತ್ರೆಗಳನ್ನು ತೆಗೆದುಕೊಂಡು ನಮ್ಮ ಬೀಗರ ಮನೆಯಲ್ಲಿ ವಿಶ್ರಾಂತಿಗೈದೆ. ಮರುದಿನ ಸೂರ್ಯೋದಯವಾಗುತ್ತಿದ್ದಂತೆ ಕೊಟ್ಟೂರಿಗೆ ಪ್ರಯಾಣ ಬೆಳೆಸಿ ಸಾಯಂಕಾಲ ಮೂಲನಕ್ಷತ್ರದಲ್ಲಿ ತನ್ನಷ್ಟಕ್ಕೆ ತಾನೇ ಒಂದೆರೆಡು ಹೆಜ್ಜೆ ರಥವು ಮುಂದೆ ಉರುಳುತ್ತದೆ ಎನ್ನುವ ನಂಬಿಕೆಗೆ ನಾನೂ ಸಾಕ್ಷಿಭೂತನಾಗಲು ಮತ್ತು ಅಲ್ಲಿ ನೆರೆಯುವ ಜನಸ್ತೋಮವನ್ನು ಕಣ್ಣಾರೆ ನೋಡಿ ಮನಸಾರೆ ತುಂಬಿಕೊಳ್ಳಲು ಮನದಲ್ಲಿಯೇ ಎಣಿಸಿದೆ. ಆದರೆ ದುರಾದೃಷ್ಟವಶಾತ್ ನನ್ನ ದೇಹ ಯಾವುದೇ ರೀತಿಯಲ್ಲಿ ಪ್ರಯಾಣ ಬೆಳೆಸಲು ಸಹಕಾರ ಕೊಡುವ ಸ್ಥಿತಿಯಲ್ಲಿರಲಿಲ್ಲ. ಅದನ್ನು ಗಮನಿಸಿದ ನನ್ನ ಮಡದಿ ‘ಮೊದಲು ಆಸ್ಪತ್ರೆಗೆ ಹೋಗಿ ತೋರಿಸೋಣ..ಮುಂದಿನದು ಮುಂದೆ..’ ಎಂದು ಮನೆಯ ಮುಂದೆಯೇ ಇದ್ದ ಆಟೋರಿಕ್ಷಾವನ್ನು ಕರೆದು ತಡ ಮಾಡದೇ ಆಸ್ಪತ್ರೆಗೆ ಕರೆದೊಯ್ದಳು. ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ಪರಿಶೀಲನೆ ಮಾಡಿದ ನಂತರ.. ‘ನೀವು ಈಗಲೇ ಒಂದು ವಾರದ ಮಟ್ಟಿಗೆ ಅಡ್ಮಿಟ್ ಆಗಬೇಕಾಗುತ್ತೇ..’ ಎಂದು ವೈದ್ಯರು ಹೇಳಿದರು. ‘ತಪ್ಪಿತಲ್ಲಾ ಜಾತ್ರೆ ಎಂದು ನನಗೆ ಎಲ್ಲಿದ ಬೇಸರ, ಏನೋ ಕಳೆದುಕೊಳ್ಳುತ್ತಿರುವೆ ಎನ್ನುವ ಭಾವ ಆವರಿಸಿತು. ಆದರೂ ಆರೋಗ್ಯದ ದೃಷ್ಠಿಯಿಂದ ಅಲ್ಲಿಯೇ ಉಳಿದೆ.
ನಾನು ಸೇವೆ ಸಲ್ಲಿಸುತ್ತಿರುವುದು ಅಂತರಾಷ್ಟೀಯಮಟ್ಟದಲ್ಲಿ ಹೆಸರು ಮಾಡಿರು ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ವೈಜ್ಞಾನಿಕ ಸಹಾಯಕನಾಗಿ, ಹಾಗಾಗಿ ನನ್ನ ಮೂಲವೇತನದ ಅರ್ಹತೆಗೆ ತಕ್ಕಂತೆ ನನಗೆ ಸಿಗಬೇಕಾದ ಕೊಠಡಿ ಸೆಮಿಪ್ರವೇಟ್(ಮೂರು ಹಾಸಿಗೆ ಮತ್ತು ಟಿವಿ ಇರದ) ಆದರೆ ಅಂದು ಯಾವುದೇ ಕೊಠಡಿ ಖಾಲಿ ಇರಲಿಲ್ಲ. ಅದಕ್ಕೆಂದೇ ಸೆಮಿಸ್ಪೆಷಲ್(ಎರಡು ಹಾಸಿಗೆ ಮತ್ತು ಟಿವಿ ಇರುವ) ಕೊಠಡಿಯನ್ನು ಕೊಡುವುದಾಗಿ ಅಲ್ಲಿಯ ಸಿಬ್ಬಂದಿ ತಿಳಿಸಿದರು. ಆದರೆ ನಾನು ಅದಕ್ಕೊಪ್ಪಿಕೊಳ್ಳದೇ ಸೆಮಿಪ್ರವೇಟ್‍ನ್ನೇ ಕೊಡಲು ಒತ್ತಾಯಿಸಿದೆ ಕಾರಣ ನಮ್ಮ ಅರ್ಹತೆಗಿಂತ ಮೇಲಿನ ವರ್ಗದಲ್ಲಿ ದಾಖಲಾದರೆ ಹೆಚ್ಚುವರಿ ಹಣವನ್ನು ನಮ್ಮ ಕೈಯಿಂದಲೇ ಭರಿಸಬೇಕಾಗುತ್ತದೆ. ಅದು ನನಗೆ ಇಷ್ಟವಿರಲಿಲ್ಲ. ಆದರೆ ಅಲ್ಲಿನ ಸಿಬ್ಬಂದಿಯೊಬ್ಬರು.. ‘ನಿಮ್ಮ ಎಲ್ಜಿಬಿಲಿಟಿಗೆ ತಕ್ಕಂತೆ ರೂಮ್ ಇಲ್ಲದ ಕಾರಣ ಸ್ಪೆಷಲ್ ರೂಮ್ ಕೊಡುತ್ತೇವೆ ಆದರೆ ಅದು ಕೇವಲ ಇಂದಿನ ದಿನದ ಮಟ್ಟಿಗೆ, ನಾಳೆ ಒಂದು ಥ್ರೀ ಬೆಡ್ ಖಾಲಿ ಆಗುತ್ತೇ..ಆಗ ಅಲ್ಲಿಗೆ ಶಿಫ್ಟ್ ಆಗಬಹುದು..’ಎಂದು ಕನ್ವೀನ್ಸ್ ಮಾಡಿದರು ಮತ್ತು ಯಾವುದೇ ರೀತಿಯ ಹೆಚ್ಚುವರಿ ಹಣವನ್ನು ತೆಗೆದು ಕೊಳ್ಳುವುದಿಲ್ಲವೆಂದು ಖಚಿತಪಡಿಸಿದರು. ಅದಕ್ಕೊಪ್ಪಿಕೊಂಡು ನಮ್ಮ ಜೊತೆ ತಂದಿದ್ದ ಲಗೇಜಿನ ಜೊತೆ ಸೆಮಿಸ್ಪೆಷಲ್ ಕೊಠಡಿಯತ್ತ ನಾನು ಮತ್ತು ಪ್ರಭಾ ಕಾಲ್ಹಾಕಿದೆವು. ಇಷ್ಟೆಲ್ಲಾ ಮಾತುಕಥೆಯಾಗುವುದರೊಳಗೆ ವೇಳೆ ಸಾಯಂಕಾಲ ನಾಲ್ಕು ಗಂಟೆಯಾದದ್ದೇ ಗೊತ್ತಾಗಲಿಲ್ಲ. ನಾನು ದೈಹಿಕವಾಗಿ ಆಸ್ಪತ್ರೆಯಲ್ಲಿದ್ದರೂ ನನ್ನ ಮನಸ್ಸು ಮಾತ್ರ ನಮ್ಮೂರ ರಥೋತ್ಸವದ ಕಡೆಗೇ ಇತ್ತು.
ನಾನು ಕೊಠಡಿ ಒಳಹೊಕ್ಕಂತೆ ಅಲ್ಲಿದ್ದ ಟೀವಿಯನ್ನು ನೋಡಿ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಕಾರಣ ಪ್ರತ್ಯಕ್ಷವಾಗಿ ರಥೋತ್ಸವನ್ನು ನೋಡಲಾಗದಿದ್ದರೂ ಅಲ್ಲಿ ಜರುಗುವ ಎಲ್ಲಾ ಕಾರ್ಯಗಳನ್ನು ಟೀವಿ (ಸುದ್ದಿ ಚಾನಲ್) ಯಲ್ಲಾದರೂ ನೋಡಿ ಖುಷಿ ಪಡಬಹುದೆಂಬ ಯೋಚನೆಯಿಂದ. ಎಲ್ಲಾ ಲಗೇಜನ್ನು ಬೆಡ್‍ನ ಬದಿಯಲ್ಲಿಟ್ಟು ಟೀವಿ ಆನ್ ಮಾಡಲು ನನ್ನ ಹೆಂಡತಿಗೆ ಹೇಳಿದೆ. ಆದರೆ ಟೀವಿ ಆನ್ ಆಗಲಿಲ್ಲ. ಅದರೆಡೆಗೆ ಬಂದು ಹೋಗುವ ಎಲ್ಲಾ ವೈರ್‍ಗಳನ್ನು ಕೂಲಂಕುಶವಾಗಿ ಪರಿಶೀಲಿದೆವು. ಎಲ್ಲವೂ ಸರಿ ಇದೆ ಅನಿಸುತ್ತಿತ್ತು ಆದರೂ ಆನ್ ಆಗುತ್ತಿರಲಿಲ್ಲ ತಕ್ಷಣವೇ ರಿಸೆಪ್ಷನ್‍ಗೆ ಫೋನ್ ಮಾಡಿ ವಿಚಾರಿಸಿದೆ. ಟೀವಿಯಲ್ಲಿಯೇ ತೊಂದರೆ ಇರುವುದರಿಂದ ಆನ್ ಆಗುವುದಿಲ್ಲವೆಂದೂ ಮತ್ತು ಇನ್ನೊಂದು ಟೀವಿಯನ್ನು ಹಾಕಬೇಕೆಂದರೆ ಎಲ್ಲಾ ಕೆಲಸಗಾರರು ಮನೆಗೆ ಹೋಗಿದ್ದಾರೆಂದು ತಿಳಿಸಿದರು.
ನನ್ನ ಹೆಂಡತಿಯೂ ‘ಸರಿ ಬಿಡಿ..ನೋಡುವ ಭಾಗ್ಯ ಇಲ್ಲಾಂತಾ ಕಾಣುತ್ತೇ..’ ಎಂದು ನನ್ನನ್ನೂ ಸಮಾಧಾನ ಪಡಿಸಿದಳು. ಎಲ್ಲಾ ‘ಅವನ ಇಚ್ಛೆ..’ಎಂದು ಬೆಡ್‍ನ ತಲೆದಿಂಬಿಗೆ ತಲೆಯನ್ನಿಟ್ಟು ನೋವು ಆವರಿಸಿದ ದೇಹದೊಂದಿಗೆ ನಿಟ್ಟುಸಿರು ಬಿಟ್ಟೆ. ಸುಮಾರು ಐದು ಗಂಟೆ ಹದಿನೈದು ನಿಮಿಷಕ್ಕೆ ತಳ್ಳುವ ಗಾಡಿಯಲ್ಲಿ ಒಬ್ಬಾತ ಹೊಸದೊಂದು ಟೀವಿಯನ್ನು ತಂದು ಅಲ್ಲಿದ್ದ ಹಳೆಯದರೊಂದಿಗೆ ರೀಪ್ಲೇಸ್ ಮಾಡಿದ. ಈಗ ಸರಿಯಾಗಿದೆ ಎಂದು ಹೇಳಿ ಹೊರಟು ಹೋದ. ಮೊದಲು ಟೀವಿ ಹಚ್ಚು ಎಂದು ಹೇಳಿ ಅದನ್ನೇ ದಿಟ್ಟಿಸಿ ನೋಡುತ್ತಿದ್ದೆ. ಟೀವಿ ಆನ್ ಆಗುತ್ತಿದ್ದಂತೆ ತನ್ತಾನೆ ನನ್ನೆರಡೂ ಹಸ್ತಗಳು ಒಂದಕ್ಕೊಂದು ಕೂಡಿಕೊಂಡು ಟೀವಿಗೆ ನಮಸ್ಕರಿಸಿದವು. ಮನಃತುಂಬಿ ಕಣ್ಣಾಲೆಗಳು ಒದ್ದೆಯಾದವು. ನಾನು ಅತೀ ಭಾವುಕನಾಗಿ ಹೋಗಿದ್ದೆ ಕಾರಣ ಆ ಕ್ಷಣದಲ್ಲಿ ನಾ ಟೀವಿಯ ಪರದೆ ಮೇಲೆ ಕಂಡ ದೃಶ್ಯ ಶ್ರೀಗುರು ಕೊಟ್ಟೂರೇಶ್ವರನು ರಥದ ಪ್ರದಕ್ಷಿಣೆ ಸಂಪೂರ್ಣಗೈದು ಇನ್ನೇನು ರಥದೊಳಗೆ ಏರಬೇಕೆನ್ನುವ ಸದೃಶ. ಕೊಟ್ಟೂರು ಸ್ವಾಮಿ ರಥವೇರಿ ಒಂದೆರೆಡು ಹೆಜ್ಜೆ ರಥದ ಚಕ್ರಗಳು ಮುಂದುರುಳುತ್ತಿದ್ದಂತೆ ಲಕ್ಷಾನುಲಕ್ಷ ಭಕ್ತರು ಭಕ್ತಿ ಭಾವದಲಿ ಮಿಂದು ನಮಸ್ಕರಿಸುವ ದೃಶ್ಯ ನನ್ನನ್ನು ಇನ್ನೂ ಭಾವೋದ್ವೇಗಕ್ಕೆ ಒಳಪಡಿಸಿತ್ತು. ಈ ತನ್ಮಯತೆ ಕೇವಲ ಐದು ನಿಮಿಷದಲ್ಲಿ ಕೊನೆಗಾಣುತ್ತದೆಂದು ನಾನು ಎಣಿಸಿರಲಿಲ್ಲ. ಕಾರಣ ವಿದ್ಯುತ್ ಕಡಿತವಾಗಿ ಟೀವಿ ಮೊದಲಿನ ಸ್ಥಿತಿಗೆ ಬಂದಿತ್ತು. ಮತ್ತೇ ವಿದ್ಯುತ್ ಪ್ರಸರಣವಾಗಿದ್ದು ಮೂರು ತಾಸಿನ ನಂತರವೇ (ರಥೋತ್ಸವದ ಅವಧಿಯೂ ಅಷ್ಟೇ).
ನಾನು ಮತ್ತು ಪ್ರಭಾ ಒಬ್ಬರಿಗೊಬ್ಬರು ಮುಖವನ್ನು ನೋಡಿಕೊಳ್ಳುತ್ತಾ ಮೂಕವಿಸ್ಮಯರಾಗಿದ್ದೆವು. ಯಾವ ಜವಾನರೂ ಇಲ್ಲವೆಂದು ರಿಸೆಪ್ಷನ್‍ನಲ್ಲಿ ಹೇಳಿದಾಗಲೂ ಯಾರಾ ವ್ಯಕ್ತಿ, ಅದು ಹೇಗೆ ಬಂದು, ಹೊಸ ಟೀವಿಯನ್ನು ತಂದು ಕನೆಕ್ಷನ್ ಮಾಡಿ ಹೋದ? ಅದು ನಾನು ನೋಡಿದ್ದು ಕೇವಲ ಐದು ನಿಮಿಷ ಅದರಲ್ಲೂ ರಥೋತ್ಸವದ ಮುಖ್ಯವಾದ ಘಟ್ಟ (ಮೂಲ ನಕ್ಷತ್ರದ ಸಮಯ..ಸ್ವಾಮಿ ರಥವೇರಿ..ರಥ ಮುಂದುರುಳುವ ಸಮಯ..)ಆ ಘಳಿಗೆಗೋಸ್ಕರ ವರುಷ ಪೂರ್ತಿ ಕಾದು ಕುಳಿತು ಕೊನೆಗೊಮ್ಮೆ ಯಾವುದೋ ಸಣ್ಣ ಕಾರಣದಿಂದಾಗಿ ಆ ಸನ್ನಿವೇಷವನ್ನು ಅದೆಷ್ಟೋ ಭಕ್ತಾದಿಗಳು ಕಳೆದು ಕೊಂಡಿದ್ದಾರೆ. ಅಂಥಹುದರಲ್ಲಿ ನಾನಿದ್ದಲ್ಲಿಗೇ ತನ್ನ ದರ್ಶನವನ್ನು ತೋರಿಸುವುದೆಂದರೆ..? ಅಬ್ಬಾ..ನಾನು ಧನ್ಯನಾದೆ. ನೂರಕ್ಕೆ ನೂರರಷ್ಟು ಈ ವರುಷ ಸ್ವಾಮಿಯ ದರ್ಶನವಾಗುವುದಿಲ್ಲವೆಂಬ ವಿಚಾರ ನನ್ನ ಮನದಲ್ಲಿ ಅಚ್ಚಾಗಿ ಹೋಗಿತ್ತು. ಆದರೆ ಆದುದ್ದೇ ಬೇರೆ. ನಿಷ್ಕಲ್ಮಷ ಮನಸಿನಿಂದ ಯಾವುದೇ ಕಾರ್ಯ ಮಾಡಲು ಹೋದಾಗ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆ ಇರಬಹುದೇ? ನಿಜವಾದ ಭಕ್ತರಿಗೆ ದೇವರು ಎಲ್ಲಿಯಾದರೂ, ಯಾವ ರೂಪದಲ್ಲಾದರೂ ಬಂದು ಭಕ್ತರ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾನೆ ಎಂದು ಕೇಳಿದ್ದೆ. ಆ ಅನುಭವ ಇದೇ ಆಗಿರಬಹುದೇ? ಬಹುಶಃ ಈ ಇನ್ಸಿಡೆಂಟ್ ಆದ ನಂತರ ನನ್ನಲ್ಲಿ ಆಳವಾಗಿ ಬೇರೂರಿದ್ದ ನಾಸ್ತಿಕ ವಿಚಾರದ ಬೇರುಗಳು, ಒಂದೊಂದೇ ಸಡಿಲಗೊಳ್ಳಲು ಶುರು ಆದವು ಆದರೆ ಸಂಪೂರ್ಣವಾಗಿ ಸಡಿಲಗೊಳ್ಳಲಿಲ್ಲ.
ನನ್ನ ನಾಸ್ತಿಕ ವಿಚಾರಕ್ಕೆ ಪೂರ್ಣ ವಿರಾಮವಿಟ್ಟು ಆಸ್ತಿಕನಾಗಿ ಬದುಕು ಕಟ್ಟಲು ಈ ಕೆಳಗಾಣಿಸಿದ ಅವಗಡ ಸಂಭವಿಸುತ್ತದೆ ಎಂದು ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ನನ್ನಂತೆ ಸಹಸ್ರಾರು ನಾಸ್ತಿಕಾಸ್ತರು ಇಂದು ಆಸ್ತಿಕರಾಗಿದ್ದಾರೆಂದರೆ ಆ ಮರೆಯಲಾರದ ದಿನಾಂಕ 21-02-2017…
ಆ ದಿನವನ್ನೇ ಕಾಯುತ್ತಿದ್ದವು ನನ್ನ ಕಣ್ಣುಗಳು ಕಾರಣ ಅಂದು ಶ್ರೀ ಗುರು ಕೊಟ್ಟೂರೇಶ್ವರನ ರಥೋತ್ಸವ. ನಾಲ್ಕು ದಿನ ಆಫೀಸಿಗೆ ರಜಾ ಹಾಕಿ ಬಸ್ಸತ್ತಿ ಊರಿಗೆ ಒಬ್ಬನೇ ಹೊರಟು ಬಂದೆ. ದಾರಿಯುದ್ದಕ್ಕೂ ಅದೇನು ಸಂಭ್ರಮ, ಅದೇನು ಸಡಗರ. ಇನ್ನೂ ಊರು ಮೂವತ್ತು ಕಿ.ಮೀ. ಇರುವುದೆನ್ನುವಷ್ಟರಲ್ಲಿ ಸಾವಿರಾರು ಪಾದಯಾತ್ರಿಗಳು. ಕೆಲವರು ಬಲು ಹುರುಪಿನಿಂದ, ಮತ್ತೆ ಕೆಲವರು ಬಲೂ ಸುಸ್ತಾಗಿ ಕೈಯಲ್ಲಿ ಆಸರೆಗೆ ಕೋಲನ್ನು ಹಿಡಿದುಕೊಂಡು, ಇನ್ನೂ ಕೆಲವು ಮಹಿಳೆಯರು ತಮ್ಮ ಅಣ್ಣನೋ, ತಮ್ಮನೋ, ಅಥವಾ ಗಂಡನ ಸಹಾಯದಿಂದ ಒಂದೊಂದೇ ಹೆಜ್ಜೆ ಹಾಕುತ್ತಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ‘ಅಬ್ಬಾ’ ಅದೆಂಥಹ ಭಕ್ತಿ, ಏನು ಶ್ರದ್ಧೆ, ಎಂದು ನನಗೆ ಅನಿಸದೇ ಇರಲಿಲ್ಲ. ನನ್ನ ಬಸ್ಸು ಮರಿಕೊಟ್ಟೂರೇಶ್ವರ ದೇವಸ್ಥಾನದ ಹತ್ತಿರ ಬರುತ್ತಿದ್ದಂತೆ ನಾನು ಬಸ್ಸಿನಿಂದ ಇಳಿಯಲು ತಯಾರಾದೆ. ಕಂಡಕ್ಟರ್ ಸೀಟಿ ಹೊಡೆದಾಕ್ಷಣವೇ ಬಸ್ಸು ನಿಂತಿತು. ನಾನು ಸಹ ನನ್ನ ಲಗೇಜಿನ ಸಮೇತ ಶ್ರೀ ಗುರು ಕೊಟ್ಟೂರೇಶ್ವರನ ಹೆಸರ ಮನದಲ್ಲಿ ನೆನೆದು ಊರಲ್ಲಿ ಕಾಲಿಟ್ಟೆ. ಅನಿತು ದೂರದಲ್ಲಿಯೇ ನನ್ನ ಅಣ್ಣ ನನಗಾಗಿ ಮೋಟಾರು ಗಾಡಿ ತೆಗೆದುಕೊಂಡುಬಂದು ನಿಂತಿದ್ದ. ನನ್ನ ನೋಡಿದೊಡನೆ ಮುಖದಲ್ಲಿ ಮಂದನಗೆಯಿಟ್ಟು ಸ್ವಾಗತಿಸಿದ. ಆತ ಇರುವುದು ಹಾಗೆಯೇ ಚಿತ್ರನಟ ರಮೇಶ ಅರವಿಂದ ತರಹ ಆದರೆ ಬಣ್ಣದಲ್ಲಿ ಕೃಷ್ಣನನ್ನು ಹೊಲುತ್ತಾನಷ್ಟೇ. ಅದಿರಲಿ ಇಬ್ಬರೂ ನಮ್ಮ ತಂದೆಯ ಟಿವಿಎಸ್ ಗಾಡಿಯ ಮೇಲೆ ಸವಾರಿ ಮಾಡಿದೆವು. ಅದು ಸ್ವಲ್ಪ ತ್ರಾಸಿನಿಂದಲೇ ನಮ್ಮನ್ನು ಮನೆಗೆ ಕರೆದೊಯ್ಯಿತು. ಮನೆ ಮುಟ್ಟಿದೊಡನೆಯೇ ತಂದೆಯವರ ಮುಖದಲ್ಲಿ ಅದೇನೋ ಆನಂದ. ಅಂದು ರಾತ್ರಿ ಔಪಚಾರಿಕತೆಯ ಮಾತುಗಳು ಮುಗಿದ ಮೇಲೆ ನಿದ್ರೆಗೆ ಜಾರಿದೆ. ಕಾರಣ ನಾಳೆ ಬೇಗನೆ ಎದ್ದು ಸ್ನಾನ ಮಾಡಿ ಪ್ರತಿ ವರ್ಷದ ಪುನರಾವರ್ತನೆಯ ಕಾರ್ಯಗಳನ್ನು ಮಾಡುವುದಿತ್ತು. ಆದರೆ ಅವ್ಯಾವುದರಲ್ಲಿಯೂ ಪ್ರತಿಶತಃ ಭಕ್ತಿ ನನ್ನಲ್ಲಿ ತುಂಬಿರುತ್ತಿರಲಿಲ್ಲ ಆದರೂ ತಾಯಿ ಆದೇಶ ಮೀರಬಾರದೆಂದು ಚಾಚೂ ತಪ್ಪದೆ ಮಾಡುತ್ತಿದ್ದೆ.
ಮರುದಿನ ಸೂರ್ಯ ಉದಯವಾಗುತ್ತಿದ್ದಂತೆ ಮನೆಯ ಮುಂದೆ ರಂಗೋಲಿಯ ಚಿತ್ತಾರ ಮೂಡಿ ಬಂದಿತ್ತು. ಮನೆ ಹೊರಗೂ ಒಳಗೂ ಸ್ವಚ್ಛಗೊಂಡಿತ್ತು. ಇನ್ನೇನಿದ್ದರೂ ನಾನಷ್ಟೇ ಶುಚಿಯಾಗಬೇಕಿತ್ತು. ಒಂದೆರೆಡು ತಾಸಿನಲ್ಲಿ ನಾನೂ ಸಹಾ ಶುಚಿಯಾಗಿ ಶುಭ್ರ ಬಟ್ಟೆ ಧರಿಸಿ ವರ್ಷದ ಕಾಯಕಕ್ಕೆ ತಯಾರಾದೆ. ಅದಕ್ಕೆ ಜೊತೆಯಾಗಿ ನನ್ನಣ್ಣ, ಅತ್ತಿಗೆ, ಅವರ ಚಿನ್ಣಾರಿಗಳೂ ಮತ್ತು ನನ್ನ ತಾಯಿ ಒಂದು ಬಿಂದಿಗೆ ಮತ್ತು ತಂಬಿಗೆಯೊಂದಿಗೆ ಕಾರಿನಲ್ಲಿ ಬಂದು ಕುಳಿತರು. ಸರಿಸುಮಾರು ಬೆಳಿಗ್ಗೆ ಒಂಬತ್ತುವರೆಗೆ ತೇರುಗಡ್ಡೆಯ (ರಥ ಸಾಗುವುದಕ್ಕೆ ಮುಂಚೆ ನಿಂತ ಸ್ಥಳ) ಹತ್ತಿರ ನಾವೆಲ್ಲರೂ ಬಂದು ಮುಟ್ಟಿದೆವು. ಅದಾಗಲೇ ಶ್ರೀಗುರು ಕೊಟ್ಟೂರೇಶ್ವರನ ರಥದ ಚಕ್ರಗಳಿಗೆ ಉದಕಾಭಿಷೇಕ ನಡೆದಿತ್ತು. ನೂರಾರು ಭಕ್ತಾದಿಗಳು ತಾವಂದು ಕೊಂಡಂತೆ ಭವಿಷ್ಯದಲ್ಲಿ ನಡೆಯುವುದಾದರೆ ಇಷ್ಟೊಂದು ವರ್ಷ ನಿನ್ನ ರಥದ ಚಕ್ರಗಳಿಗೆ ನೀರು ಹಾಕುತ್ತೇವೆ ಎಂದು ಬೇಡಿಕೊಂಡಿರುತ್ತಾರೆ. ಅದರಂತೇ ಅಲ್ಲಿ ಆ ಕಾರ್ಯ ನೆರವೇರಿತ್ತು. ನಾವುಗಳು ಸಹಾ ನಮ್ಮ ಮನೋಕಾಮನೆಗಳನ್ನು ಸ್ವಲ್ಪ ಈಡೇರಿಸಿದ್ದಕ್ಕೆ ಮತ್ತು ಇನ್ನೂ ಈಡೇರಬೇಕಾದುದಕ್ಕೆ, ನಾವು ತಂದಿದ್ದ ನೀರಿನಿಂದ ಎಲ್ಲ ಚಕ್ರಗಳಿಗೂ ಅಭಿಷೇಕ ಮಾಡಿದೆವು. ಯಾರೋ ಗಟ್ಟಿದ್ವನಿಯಲ್ಲಿ ಕೂಗಾಡುತ್ತಿರುವುದು ಕೇಳಿತು. ಅತ್ತ ನೋಡಿದರೆ ಪೋಲಿ ಪುಂಡನಿಗೆ ಹೊಡೆತದ ಮಳೆ ಸುರಿಯುತ್ತಿತ್ತು. ಕಾರಣವಿಷ್ಟೇ ಅ ಪೋಲಿ ಚಕ್ರಕ್ಕೆ ಹಾಕುವ ನೀರನ್ನು ಅಲ್ಲಿಯೇ ಹತ್ತಿರ ಭಕ್ತಿಯಿಂದ ಪೂಜೆ ಮಾಡುತ್ತಿದ್ದ ಹೆಂಗಸರ ಮೇಲೆ ಹಾಕುತ್ತಿದ್ದ ಅದನ್ನು ಗಮನಿಸಿದವನೊಬ್ಬ ಇವನಿಗೆ ಸರಿಯಾಗಿ ಪೂಜೆ ಮಾಡಿ ಕಳಿಸಿದ.
ನಮ್ಮ ಕೆಲಸವಾದ ಮೇಲೆ ದೇವರಲ್ಲಿ ನಾಲ್ಕಾರು ಬೇಡಿಕೆಗಳನ್ನಿಟ್ಟು ನಾವೆಲ್ಲ ಮನೆಗೆ ಬಂದೆವು. ಮಧ್ಯಾಹ್ನ ಹಬ್ಬದ ಊಟವಾದ ಮೇಲೆ ಪ್ರತಿ ವರ್ಷದಂತೆ ಈ ವರ್ಷವೂ ಅಣ್ಣ ತಮ್ಮನ ಜೊತೆಗೂಡಿ ಕೊಟ್ಟೂರೇಶನ ರಥ ಎಳೆಯಲು ರಥಬೀದಿಯತ್ತ ಸಾಗಿದೆವು. ಮೂಲ ನಕ್ಷತ್ರದಲ್ಲಿ ತನ್‍ತಾನೇ ಒಂದೆರಡು ಸುತ್ತು ಚಕ್ರಗಳು ಉರುಳುತ್ತವೆ ಎನ್ನುವ ನಂಬಿಕೆ ಮೊದಲಿನಿಂದಲೂ ಇದೆ. ಅದರಂತೆಯೇ ಈ ಬಾರಿಯೂ ಆಗುವುದೆಂಬ ನಂಬಿಕೆ. ಆ ಘಳಿಗೆಯನ್ನು ವೀಕ್ಷಿಸಲು ಲಕ್ಷಾನುಲಕ್ಷ ಭಕ್ತರು ಕಾತುರದಿಂದ ಕಾಯುತ್ತಿರುತ್ತಾರೆ. ಆಕಾಶದಲ್ಲಿ ಮೂಲನಕ್ಷತ್ರ ಗೋಚರಿಸಿತು. ಇತ್ತಕಡೆ ಶ್ರೀಗುರುವಿನ ರಥದ ಚಕ್ರಗಳು ಮುಂದಕ್ಕೆ ಉರುಳಿದವು. ಇಲ್ಲಿಯವರೆಗೆ ಪ್ರತಿವರ್ಷವೂ ಈ ಒಂದು ಸುಸಂದರ್ಭದಲ್ಲಿ ಬಾಳೆಹಣ್ಣುಗಳ ಮಳೆ ರಥದ ಮೇಲೆ ಸುರಿಯುತ್ತಿತ್ತು. ಸುರಿದ ಬಾಳೆಹಣ್ಣುಗಳನ್ನು ಭಕ್ತರು ದೇವರ ಆಶಿರ್ವಾದವೆಂದು ಸ್ವೀಕರಿಸಿ ಮನೆಗೆ ಕೊಂಡೊಯ್ಯುತ್ತಿದ್ದರು. ಬಾಳೆಹಣ್ಣನ್ನು ಎಸೆಯುವ ವ್ಯಕ್ತಿ ಯಾವ ಜಾತಿಗೇ ಸಂಬಂಧಪಟ್ಟಿರಲಿ, ಬಾಳೆಹಣ್ಣು ರಥದೆಡೆಗೆ ಹೋಗಿ ಮರಳಿ ಬರುವಾಗ ಅದು ದೇವರ ಆಶೀರ್ವಾದವಾಗಿ ಮಾರ್ಪಾಡಾಗುತ್ತದೆ ಎನ್ನುವ ನಂಬಿಕೆ ಮತ್ತು ಮೇಲು ಕೀಳೆಂಬ ಭೇದಭಾವವಿಲ್ಲದೆ ಆ ಬಾಳೆಹಣ್ಣನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಿದ್ದರು. ಈ ಹಂತದಲ್ಲಿ ಮಹತ್ತರವಾದ ಬದಲಾವಣೆಯನ್ನು ನಾನು ಗಮನಿಸಿದೆ. ಕಾರಣ ಬಾಳೆಹಣ್ಣು ಎಸೆಯುವುದಕ್ಕೆ ಈ ವರುಷ ನಿಷೇಧ ಹೇರಿದ್ದರು. ಅದರ ಜಾಗದಲ್ಲಿ ಉತ್ತುತ್ತಿ ಮತ್ತು ಧವನದ ಹೂವನ್ನು ರಥಕ್ಕೆ ಎಸೆಯಬಹುದೆಂದು ಊರಿನಲ್ಲಿ ತೀರ್ಮಾನವಾಗಿತ್ತು. ಅದನ್ನು ಚಾಚೂ ತಪ್ಪದೇ ಅಲ್ಲಿನ ಭಕ್ತಾಧಿಗಳು ಪಾಲಿಸಿದ್ದು ಇನ್ನೂ ವಿಶೇಷವಾಗಿತ್ತು. ಅಲ್ಲಿದ್ದ ಭಕ್ತಾಧಿಗಳು ಕೇವಲ ಕೊಟ್ಟೂರಿನವರಾಗಿರದೆ ಬೇರೆ ಬೇರೆ ಜಿಲ್ಲೆಗಳಿಂದಲೂ ಆಗಮಿಸಿದ್ದರು. ಈ ತರಹದ ಸಾಂಪ್ರದಾಯಿಕ ಬದಲಾವಣೆ ಅವಶ್ಯಕತೆ ಇತ್ತೇ? ಇರಬಾರದಿತ್ತೇ?.. ಎನ್ನುವದನ್ನು ನಾನು ವಿಮರ್ಶಿಸಲು ಹೋಗುವುದಿಲ್ಲ.
ಶ್ರೀ ಗುರುವಿನ ರಥವು ಮುಂದೆ ಸಾಗುತ್ತಿದ್ದಂತೆ ಲಕ್ಷಾನುಲಕ್ಷ ಭಕ್ತರು ಭಕ್ತಿಯಲ್ಲಿ ತನ್ಮಯರಾದರು. ಎಷ್ಟೋ ಜನರ ಕಣ್ಣುಗಳು ಆನಂದ ಭಾಷ್ಪದಿಂದ ಒದ್ದೆಯಾಗಿದ್ದವು. ಅಂದಿನ ಸ್ವರ್ಗ ಸದೃಶ ನೋಟವು ಎಲ್ಲರ ಮನದಲ್ಲಿ ಅಚ್ಚಾಗಿ ಹೋಯಿತು. ಪರಸ್ಥಳದಿಂದ ಬಂದಿದ್ದ ಹಲವಾರು ಭಕ್ತರು ತಮ್ಮ ಊರಿಗೆ ಹೋಗಲು ಸಿದ್ಧರಾಗಿ ಹೊರಟು ಹೋದರು. ನಾವು ಕೊಟ್ಟೂರಿನವರೇ ಆದ್ದರಿಂದ ತೇರು ಪಾದಗಟ್ಟೆಯನ್ನು ಮುಟ್ಟಿ ಪುನಃ ತೇರುಗಡ್ಡೆಯಲ್ಲಿ ಬಂದು ನಿಲ್ಲುವವರೆಗೆ ಅಲ್ಲಿಯೇ ಇರುವುದು ವಾಡಿಕೆ. ಸರಿಸುಮಾರು ಒಂದು ಕಿ.ಮಿ ಅಂತರದ ದಾರಿ ಇದು ಮತ್ತು ಇದನ್ನು ರಥವು ನಿಧಾನವಾಗಿ ಕ್ರಮಿಸುವುದಕ್ಕೆ ಕನಿಷ್ಠ ಎರಡು ಗಂಟೆಯ ಸಮಯವಾದರೂ ಬೇಕು.
ತೇರು ತೇರಗಡ್ಡೆಯಲ್ಲಿ ಬಂದು ವಿರಮಿಸಲು ಇನ್ನೇನು ಹತ್ತು ನಿಮಿಷವಿದೆ ಎನ್ನುವಷ್ಟರಲ್ಲಿ ನಾನು, ಅಣ್ಣ ಮತ್ತು ನನ್ನ ತಮ್ಮ ರಥಬೀದಿಯಿಂದ ನಮ್ಮನೆಯೆಡೆಗೆ ಕಾಲಿಟ್ಟೆವು. ದಾರಿಯುದ್ದಕ್ಕೂ ಅಲ್ಲಿ ನೆರೆದಿದ್ದ ಜನಜಂಗುಳಿ, ಬಾಳೆಹಣ್ಣಿನಿಂದ ಉತ್ತುತ್ತಿಗೆ ಬದಲಾದ ವಿಷಯ, ಅಂದು ಮುಂಜಾನೆ ಮತ್ತು ನಿನ್ನೆ ಪೂರ್ತಿ ನೆರವೇರಿದ ಉಚಿತ ಪ್ರಸಾದ ವಿತರಣೆ ಮತ್ತು ಎಲ್ಲಾ ದಿಕ್ಕುಗಳಿಂದ ಬರುತ್ತಿದ್ದ ಭಕ್ತಾಧಿಗಳು, ಇವುಗಳ ಬಗ್ಗೆಯೇ ಮಾತನಾಡುತ್ತಾ ಬರುತ್ತಿದ್ದೆವು. ಇದಕ್ಕೂ ಮುಂಚೆ ನಾನು ಸೀಡ್ಸ್ ಕೊಟ್ರೇಶಿ ಹತ್ತಿರ ಇಲ್ಲಿ ಒಂದು ಲಕ್ಷ ಜನ ಇರಬಹುದಾ? ಎಂದು ಕೇಳಿದ್ದೆ ಅದಕ್ಕೆ ಕೊಟ್ರೇಶಿ ‘..ಸಾರ್ ಎಲ್ಲಿದೀರಿ, ಬರೀ ಪಾದಯಾತ್ರಿಗಳೇ ಒಂದುವರೆಲಕ್ಷ ಜನ ಬಂದಿದ್ದಾರೆ, ಅದರಲ್ಲೂ ದಾವಣಗೇರಿ ಕಡೆಯಿಂದ ಎಂಬತ್ತು ಸಾವಿರ ಜನ ಬಂದಿದ್ದಾರೆ, ಒಂದು ಮೂರು ಮೂರುವರೆ ಲಕ್ಷ ಜನ ಇದ್ದಾರೆ..’ ಎಂದಾಗ ನನ್ನಲ್ಲಿ ಮಾತೇ ಹೊರಡಲಿಲ್ಲ. ಆಶ್ಚರ್ಯ ಚಕಿತನಾಗಿ ರಥವನ್ನೇ ನೋಡುತ್ತಿದ್ದೆ. ಕೊಟ್ರೇಶಿಯೂ ಸಹ ಆರು ಸಾವಿರ ಪಾದಯತ್ರಿಗಳಿಗೆ ಉಚಿತವಾಗಿ ಇಡ್ಲಿ ಸಾಂಬಾರ್, ಮಂಡಕ್ಕಿ ಒಗ್ಗರಣೆ ಮತ್ತು ಒಂದು ಸಣ್ಣ ನೀರಿನ ಬಾಟಲ್ ಅನ್ನು ಕೊಟ್ಟು ಬಂದೆ ಎಂದು ಹೇಳುವಾಗ ಆತನ ಕಣ್ಣಲ್ಲಿ ತೃಪ್ತಿ, ಮನಸ್ಸಿನಲ್ಲಿ ಸಂತೃಪ್ತ ಭಾವ ಎದ್ದು ಕಾಣುತ್ತಿತ್ತು. ಇಂತಹ ಅನೇಕ ಕೊಟ್ರೇಶಿಗಳು ಪಾದಯಾತ್ರಿಗಳಿಗೆ ನಾನಾ ರೀತಿಯಲ್ಲಿ ಉಪಚಾರ ಮಾಡುತ್ತಿದ್ದುದನ್ನು ಕಂಡು ನಾನೊಬ್ಬ ಕೊಟ್ಟೂರೇಶನ ಭಕ್ತ ಮತ್ತು ಕೊಟ್ಟೂರಿನವನೆಂದು ಗರ್ವ ಪಟ್ಟೆ.
ಸ್ವಲ್ಪ ಹೊತ್ತಿನಲ್ಲಿಯೇ ತಮ್ಮನ ಫೋನಿಗೆ ಒಂದು ಕರೆ ಬಂತು ‘..ಹಲೋ ಏನಾಯ್ತು..?’ ಎನ್ನುತ್ತಿದ್ದಂತೆ, ವಿಷಯ ಕೇಳಿ ತಮ್ಮ ಸ್ಥಬ್ಧನಾದ. ‘ಯಾಕೆ ಏನಾಯ್ತು, ಯಾರು..? ಎಂದು ನಾವು ಕೇಳಿದೆವು.
‘ರಥ ಬಿದ್ದಿತಂತೆ…’ ಎಂದ. ನನ್ನ ಮೈಯೆಲ್ಲಾ ಜುಮ್ ಎಂದಿತು. ಕಾರಣ ಅಲ್ಲಿ ಸೇರಿದವರು ಲಕ್ಷ ಜನರು. 60 ಅಡಿಯ ರಥ ಬಿದ್ದಿತೆಂದರೆ ಕನಿಷ್ಟ ಪಕ್ಷ ನೂರಾರು ಜನರಿಗೆ ಗಾಯಗಳಾಗಿರಬಹುದು. ಮತ್ತು ಇಪ್ಪತ್ತರಿಂದ ಮೂವತ್ತು ಜನರ ಮರಣವಾಗಿರಬಹುದೆಂದು ಯೋಚಿಸಿ, ನಮ್ಮೂವರಿಗೂ ಮಾತೇ ಬಾರದಾಯಿತು. ಅದರೊಂದಿಗೆ ಮತ್ತೊಂದು ಚಿಂತೆ ಕಾಡುತ್ತಿತ್ತು. ಅದೇನೆಂದರೆ ನಮ್ಮ ಜೊತೆ ನಮ್ಮ ಅತ್ತಿಗೆ, ನಾದಿನಿ, ತಾಯಿ, ಮತ್ತು ಅವರ ಮಕ್ಕಳೆಲ್ಲರೂ ತೇರು ನೋಡಲು ಬಂದಿದ್ದರು. ಈ ಅವಘಡದಲ್ಲಿ ಅವರೇನಾದರೂ ಸಿಕ್ಕಿ ಹಾಕಿಕೊಂಡರೇ..? ಎಂಬ ಭಯ ನಮ್ಮಲ್ಲಿ ಆವರಿಸಿತು. ತಕ್ಷಣವೇ ‘ಇಲ್ಲ..’ ಅವರೆಲ್ಲ ಮನೆಗೆ ಈಗಾಗಲೇ ಬಂದಿರಬಹುದು ಎಂದು ತಿಳಿದು ಮನೆಯಲ್ಲಿಯೇ ಇದ್ದ ತಂದೆಗೆ ಫೋನಾಯಿಸಿದಾಗ ‘ಇಲ್ಲ.. ಇನ್ನೂ ಯಾರು ಮನೆಗೆ ಬಂದಿಲ್ಲ..’ ಎಂದರು. ಮತ್ತೆ ಮನದಲ್ಲಿ ದುಗುಡ ಶುರುವಾಗಿತು. ತಕ್ಷಣವೇ ಅಣ್ಣ ತಮ್ಮ ಇಬ್ಬರೂ ಬೈಕಿನಲ್ಲಿ ಮತ್ತೆ ರಥಬೀದಿಯತ್ತ ನಡೆದರು. ದಾರಿಯ ಮಧ್ಯದಲ್ಲಿಯೇ ನಮ್ಮವರೆಲ್ಲರನ್ನೂ ಕಂಡಾಗ ಖುಷಿ ನೂರ್ಮಡಿಯಾಯಿತು. ಆದರೆ ರಥದ ಆಗಿನ ಪರಿಸ್ಥಿತಿಯ ಬಗ್ಗೆ ಏನೂ ಗೊತ್ತಾಗಲಿಲ್ಲ. ಅಲ್ಲಿಗೆ ಹೋಗಿ ನೋಡಬೇಕೆಂದರೆ ಜನಜಂಗುಳಿ. ನನ್ನಲ್ಲಂತೂ ಆ ಧೈರ್ಯ ಇರಲಿಲ್ಲ ಕಾರಣ…ಏನೋ ಭಯ!
ಒಂದೆರಡೇ ತಾಸಿನಲ್ಲಿ ಅನೇಕನೇಕ ಸುದ್ದಿಗಳು ಗಾಳಿಯಲ್ಲಿ ಹರಡಿದವು, ಅವುಗಳೆಲ್ಲವನ್ನೂ ಸರಿಯಾಗಿ ಪರಾಮಶ್ರಿಸದೇ ಎಲ್ಲಾ ಟೀವಿ ಚಾನಲ್‍ಗಳು ಸುದ್ದಿಯನ್ನು ಪ್ರಸಾರಣ ಮಾಡಿದವು. ತೇರಿನಡಿಯಲ್ಲಿ ಐವತ್ತು ಜನ ಸಿಕ್ಕಿಹಾಕಿಕೊಂಡಿದ್ದಾರಂತೆ, ಅದರಲ್ಲಿ ಹತ್ತಹನ್ನೆರಡು ಜನರ ಸ್ಥಿತಿ ಚಿಂತಾ ಜನಕವಾಗಿದೆಯಂತೆ ಇತ್ಯಾದಿ.. ಇತ್ಯಾದಿ.
ನನಗಂತೂ ‘ಛೇ ಏನಿದು ದುರಂತ.. ಎಲ್ಲಿಯ ಜಾತ್ರೆ, ಎಲ್ಲಿಯ ದೇವರು..? ಎಂದು ದೇವರ ಅಸ್ಥಿತ್ವದ ಬಗ್ಗೆ ನಂಬಿಕೆಯೇ ಹೊರಟು ಹೋಯಿತು. ದೇವರು ಅಥವಾ ಶ್ರೀಗುರು ಕೊಟ್ಟುರೇಶ್ವರ ಅಸ್ಥಿತ್ವ ಇದ್ದಿದ್ದೇ ಆದರೆ ಯಾರಿಗೂ ಪ್ರಾಣಹಾನಿ ಸಂಭವಿಸಿರಬಾರದು ಮತ್ತು ಒಂದು ವೇಳೆ ಈ ಅವಗಡದಲ್ಲಿ ಪ್ರಾಣಹಾನಿಯಾಗಿದ್ದೇ ಆದರೆ ಮುಂದೆಂದೂ ರಥೋತ್ಸವಕ್ಕೆ ಬರಬಾರದೆಂದು ನನ್ನಲ್ಲಿ ನಾನೇ ತೀರ್ಮಾನಿಸಿದೆ ಆದರೆ ಬಹಿರಂಗವಾಗಿ ಎಲ್ಲೂ ವ್ಯಕ್ತಪಡಿಸಲಿಲ್ಲ. ನನ್ನ ನೋವು, ದುಗುಡ, ಆತಂಕ, ದೇವರ ಮೇಲಿನ ಮುನಿಸು, ಕೋಪ, ಎಲ್ಲವೂ ನನ್ನಲ್ಲೇ ಸುಪ್ತವಾಗಿದ್ದವು.
ರಾತ್ರಿ ಹತ್ತು ಗಂಟೆ ಸುಮಾರಿಗೆ, ಏನೂ ತೊಂದರೆ ಆಗಿಲ್ಲವಂತೆ, ಐದು ಜನರಿಗೆ ಸ್ವಲ್ಪ ಗಾಯವಾಗಿದೆ. ಒಬ್ಬ ಹುಡುಗಿಗೆ ಸ್ವಲ್ಪ ಹೆಚ್ಚು. ಆತಂಕದ ವಿಷಯ ಏನೂ ಇಲ್ಲ ಎಂದು ಪಕ್ಕದ ಮನೆಯ ಗುರು ಹೇಳಿದಾಗ ನನಗೆ ಸಂತೋಷದ ಜೊತೆಗೆ ಆಶ್ಚರ್ಯವೋ ಆಶ್ಚರ್ಯ. ಅಂಥ ಮಹಾರಥ ಅತೀವ ಜನಜಂಗುಳಿ ಇದ್ದ ಸ್ಥಳದಲ್ಲಿ ಬಿದ್ದರೂ ಯಾವುದೇ ದೊಡ್ಡ ಮಟ್ಟದಲ್ಲಿ ಅನಾಹುತ ಆಗದಿರುವುದನ್ನು ಕಂಡು ನನ್ನಲ್ಲಿ ಮಾತು ಹೊರಡದೇ ತೇರಿದ್ದ ದಿಕ್ಕಿನೆಡೆಗೆ ಮನದಲ್ಲಿಯೇ ಒಂದು ದೊಡ್ಡ ಶಿರಸಾಷ್ಟಾಂಗ ನಮಸ್ಕಾರವನ್ನು ಶ್ರೀ ಗುರು ಕೊಟ್ಟೂರೇಶನಿಗೆ ಸಲ್ಲಿಸಿದೆ. ‘ಕೊಟ್ಟೂರ ದೊರೆಯೇ ನಿನಗಾರು ಸರಿಯೆ.. ಸರಿ ಎಂದವರ ಹಲ್ಲು ಮುರಿಯೇ..’ ಎನ್ನುವ ಉಕ್ತಿ ನನ್ನ ಮನದಿ ಒಮ್ಮೆ ಬಂದು ಹೋಯಿತು.
ಗುರು ಮತ್ತೂ ಮುಂದುವರೆಸಿ.. ದೊಡ್ಡ ಅನಾಹುತ ಆಗದೇ ಇರುವುದಕ್ಕೆ ಕಾರಣ ರಥ ಬಿದ್ದ ಜಾಗ ಮತ್ತು ಬೀಳುವ ವೇಗದ ಮಿತಿಯ ಬಗ್ಗೆ ತಿಳಿಸಿದ. ಇನ್ನೇನು ರಥ ಬೀಳಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಬಂದ ‘ಬಸವ’ ಅಲ್ಲಿದ್ದ ಜನರನ್ನು ಚದುರಿಸಿತು ಎಂಬ ಮಾತುಗಳು, ರಥ ಬೀಳುತ್ತಿದ್ದರೂ ಸಹಾ ನಿಧನಗತಿಯಲ್ಲಿಯೇ ಬಿತ್ತೆಂದು, ಅಲ್ಲಿ ಸುತ್ತುವರೆದಿದ್ದ ಜನರಿಗೆ ಚದುರಲು ಸಾಕಷ್ಟು ಸಮಯವಿತ್ತೆಂದು ಮತ್ತು ತನ್ನ ಭಕ್ತಾಧಿಗಳಿಗೆ ಯಾವುದೇ ರೀತಿಯಿಂದಲೂ ತೊಂದರೆಯಾಗಬಾರದೆಂದು ಶ್ರೀ ಗುರು ಕೊಟ್ಟೂರೇಶ್ವರ ತಾನೇ ಎಲ್ಲ ನೋವುಗಳು ತನಗಿರಲೆಂದು, ಮೂರ್ತಿರೂಪದಲ್ಲಿದ್ದ ಗುರುವಿನ ಮುಖ ವಿಕೃತವಾಯಿತೆಂದು ಹೇಳಿದ.
ಇವೆಲ್ಲಾ ಮಾತುಗಳನ್ನು ಕೇಳಿದ ಮೇಲೆ ನನ್ನಲ್ಲಿ ಇನ್ನೂ ಉಳಿದು ಕೊಂಡಿದ್ದ ನಾಸ್ತಿಕ ವಿಚಾರದ ಬೇರುಗಳು ಸಂಪೂರ್ಣವಾಗಿ ಕಿತ್ತು ಹೋದವು ಮತ್ತು ಆಸ್ತಿಕ ಬೇರುಗಳು ಚಿಗುರೊಡೆಯಲು ಶುರುವಾದವು. ಇದು ನನ್ನೊಬ್ಬನ ಮಾತಾಗಿರದೇ ಊರಿನಲ್ಲಿ ಪ್ರತಿಯೊಬ್ಬರೂ ಮಾತನಾಡುತ್ತಿರುವರ ಮಾತಾಗಿದೆ.
ರಥದಲ್ಲಿ ದೋಷವೇನೇ ಇರಲಿ, ಅಲ್ಲಿ ನಡೆದ ಘಟನೆಯ ಹಿಂದೆ ಯಾವುದೇ ತಾಂತ್ರಿಕ ದೋಷವಿರಲಿ ಅಥವಾ ಸಂಪ್ರದಾಯ ದೋಷವಿರಲಿ, ಆದರೆ ಬೆಟ್ಟದಂತೆ ಬಂದೆರಗುತ್ತಿದ್ದ ಅನಾಹುತ ಹುಲ್ಲಿನ ಗಾತ್ರದಲ್ಲಿ ಮುಗಿಯುತ್ತದೆ ಎಂದು ಯಾರೂ ಎಣಿಸಿರಲಿಲ್ಲ ಹಾಗಾಗಿ ಎಷ್ಟೋ ನಾಸ್ತಿಕರನ್ನೂ ಈ ಘಟನೆ ಆಸ್ತಿಕರನ್ನಾಗಿ ಬದಲಾಯಿಸಿದೆ ಎಂದರೆ ಅತಿಶಯೋಕ್ತಿಯಲ್ಲ!
*-*-*-*