Featured ಅಂಕಣ

ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು?

ಅದೊಂದು ಶ್ರದ್ಧಾಂಜಲಿ ಸಭೆ. ಸಮಾಜದ ಗಣ್ಯವ್ಯಕ್ತಿಯೊಬ್ಬ ತೀರಿಕೊಂಡಿದ್ದಾನೆ. ಆತನನ್ನು ಹತ್ತಿರದಿಂದ ಬಲ್ಲ ಅನೇಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಒಡನಾಟದ ದಿನಗಳನ್ನು ಹಂಚಿಕೊಂಡಿದ್ದಾರೆ. ಎಲ್ಲರ ಮಾತುಗಳಾದ ಮೇಲೆ ಆಕೆ ಬಂದು ನಿಂತಿದ್ದಾಳೆ. “ಇಂವ, ಅಲ್ಲಿ ಗೋರಿಯಲ್ಲಿ ತಣ್ಣಗೆ ಮಲಗಿದಾನಲ್ಲ, ಹಾಗೆ ಅಲ್ಲಿ ಮಲಗಿರುವಾಗಲೂ ಸಶಬ್ದವಾಗಿ ಹೂಸು ಬಿಡುತ್ತಾನೆ ಅನಿಸುತ್ತೆ ನನಗೆ. ಒಂದೆರಡಲ್ಲ ಕಣ್ರೀ, ನಲವತ್ತು ವರ್ಷ ಅವನ ಜೊತೆ ರಾತ್ರಿ ಕಳೆದಿದ್ದೇನೆ. ಪ್ರತಿ ರಾತ್ರಿಯೂ ಆತ ಹಾಗೆ ಸಶಬ್ದವಾಗಿ ತನ್ನ ಅಸ್ತಿತ್ವವನ್ನು ಸದಾ ಸಾರುತ್ತಲೇ ಇದ್ದೋನು. ಅದೂ ಹೇಗಂತೀರಿ, ಕೆಲವೊಮ್ಮೆ ಪೊಲೀಸನ ಸೀಟಿಯ ಹಾಗೆ. ಕಾರ್ಖಾನೆಯ ಸೈರನ್ನಿನ ಹಾಗೆ. ರೈಲಿನ ಶಿಳ್ಳೆಯ ಹಾಗೆ. ಮಕ್ಕಳು ಊದೋ ಪೀಪಿಯ ಹಾಗೆ. ನೀರವ ಮೌನದಲ್ಲಿ ಸೊಳ್ಳೆಯೊಂದು ಮಂದ್ರದಲ್ಲಿ ಕೀರವಾಣಿ ಹಾಡಿದ ಹಾಗೆ. ದಿನಕ್ಕೊಂದು ಬಗೆಯಲ್ಲಿ ನನ್ನ ನಿದ್ದೆಗೆಡಿಸಿ ಬಿಡೋನು. ಮೊದಮೊದಲು ಕಿರಿಕಿರಿಯಾಗುತ್ತಿತ್ತು ನನಗೆ. ಜಗಳ ಆಡಿ ಬಿಟ್ಟಿದ್ದೆ. ಏನು ಮಾಡಕ್ಕಾಗುತ್ತೆ ಚಿನ್ನ, ದೇವರು ಕೊಟ್ಟ ವಾದ್ಯ. ಊದಬೇಕಾದಾಗ ಊದಲೇಬೇಕು, ಅವನಿಚ್ಚೆ ಅಂದು ಬಿಡತಾ ಇದ್ದ. ಆ ಕೋಪದ ಕ್ಷಣದಲ್ಲೂ ನಕ್ಕು ಸುಸ್ತಾಗುತ್ತಿದ್ದೆ. ಅಷ್ಟು ವರ್ಷಗಳ ಬಾಂಧವ್ಯ ನಿನ್ನೆಗೆ ಮುಗಿಯಿತು. ನಿನ್ನೆ ರಾತ್ರಿ ಮಲಗಿದ್ದಾಗ ಆ ನೀರವ ಪ್ರಶಾಂತಿ ಅಸ್ತಿತ್ವವನ್ನೇ ಅಲುಗಿಸಿ ಹಾಕಿತು. ಅದೆಷ್ಟೋ ವರ್ಷಗಳ ಹಿಂದೆ ಕಿರಿಕಿರಿಯಾಗಿದ್ದ, ಆಮೇಲೆ ಒಗ್ಗಿ ಹೋಗಿದ್ದ ಆ ಸ್ವರಕ್ಕಾಗಿ ನಿನ್ನೆ ಕಾತರಿಸಿದೆ. ಅವನಿಲ್ಲೇ ಪಕ್ಕದಲ್ಲೇ ಮಲಗಿದ್ದಾನೇನೋ, ಪ್ರಪಂಚದ ಜಂಜಡವೆಲ್ಲ ಮರೆತು ಸುಖನಿದ್ರೆ ಅನುಭವಿಸುತ್ತಿದ್ದಾನೇನೋ, ನಮ್ಮ ರಾತ್ರಿಯ ಸವಿನಿದ್ದೆಗೆ ವರ್ಷಗಳ ಕಾಲ ಹಿಮ್ಮೇಳ ಒದಗಿಸಿದ ಅವನ ಹೂಸು, ಕುಂಭಕರ್ಣನ ಗೊರಕೆ ಇನ್ನೇನು ಸ್ವಲ್ಪ ಹೊತ್ತಲ್ಲೇ ಶುರುವಾಗಬಹುದೋ ಏನೋ ಎಂಬ ನಿರೀಕ್ಷೆಯಲ್ಲೇ ಇಡೀ ರಾತ್ರಿ ನಿದ್ದೆಯಿಲ್ಲದೆ ಕಳೆದು ಹೋಯಿತು. ಹೋಗ್ಬಿಟ್ಟ ನೋಡಿ ಅಯೋಗ್ಯ ನನ್ನನ್ನ ಬಿಟ್ಟೇ ಬಿಟ್ಟು”. ಅಷ್ಟು ಮಾತುಗಳನ್ನಾಡಿದ ಮೇಲೆ ಅಲ್ಲಿ ಒಂದು ಅಸಹನೀಯ ಮೌನ ಆವರಿಸಿಕೊಂಡಿತು. ಕಣ್ಣಿಂದ ಇಳಿದ ಎರಡು ಹನಿ ಆ ಮೌನಕ್ಕೆ ಭಾಷ್ಯ ಬರೆಯುತ್ತಿರುವಂತೆ ಕಪೋಲಗಳ ಮೇಲೆ ನಿಧಾನವಾಗಿ ಇಳಿಯಿತು.

ಅಂತಹ ಒಬ್ಬ ಗೆಳೆಯ ಅಥವಾ ಗೆಳತಿ ನಮ್ಮ ಬದುಕಿನಲ್ಲಿ ಬಂದು ಹೋಗುತ್ತಾರೆ. ಇಂಗ್ಲೀಷಿನಲ್ಲಿ ಲವ್ ಅಟ್ ಫಸ್ಟ್ ಸೈಟ್ ಎನ್ನುತ್ತಾರೆ. ಮೊದಲ ನೋಟದಲ್ಲಿ ಪ್ರೇಮಾಂಕುರ – ಹಾಗೇನೂ ಆಗಿರುವುದಿಲ್ಲ ಇವರಿಬ್ಬರ ನಡುವೆ. ಮೊದ ಮೊದಲು ಆಕೆಯನ್ನು ಆತ ಅಷ್ಟೇನೂ ಇಷ್ಟಪಟ್ಟಿರುವುದಿಲ್ಲ. ಅವಳ ಮೂಗಿಗಿಂತ ಪಕ್ಕದ ಬೀದಿಯ ಮೀನಾಕ್ಷಿಯ ನಾಸಿಕವೇ ಅಚ್ಚುಕಟ್ಟಾಗಿದೆ ಅಂದುಕೊಂಡಿರುತ್ತಾನೆ. ನಡಿಗೆಯೇನೋ ಓಕೆ, ಆದರೆ ಸ್ವಲ್ಪ ಒಡ್ಡೊಡ್ಡಾಗಿ ಕಾಲು ಹಾಕುತ್ತಾನೆ ಎಂದು ಆಕೆಯೂ ಮನಸ್ಸಲ್ಲೇ ಲೆಕ್ಕಾಚಾರ ಹಾಕಿರುತ್ತಾಳೆ. ಸ್ವಲ್ಪ ಕಾದಿದ್ದರೆ, ಸ್ವಲ್ಪ ಹೆಚ್ಚು ತಲಾಶ್ ಮಾಡಿದ್ದರೆ, ಬ್ರೋಕರಿಗೆ ಇನ್ನೊಂದೆರಡು ಸಾವಿರ ಹೆಚ್ಚಿಗೆ ಕೊಟ್ಟಿದ್ದರೆ ಇನ್ನೂ ಒಳ್ಳೆಯ ಜೋಡಿಯೇ ಸಿಗುತ್ತಿತ್ತು ಎಂಬ ಭಾವ ಒಂದಿಲ್ಲೊಂದು ಕ್ಷಣದಲ್ಲಿ ಬಂದು ಹೋಗಿರುತ್ತದೆ. ಆದರೆ ಬರಬರುತ್ತಾ ಅವರಿಬ್ಬರೂ ಪರಸ್ಪರರಿಗೆ ಅರ್ಥವಾಗುತ್ತಾ ಹೋಗುತ್ತಾರೆ. ಮೊದಮೊದಲಲ್ಲಿ ಐಸ್‍ಕ್ರೀಮು, ಕೇಕು, ಭರ್ಜರಿ ಊಟ ಕೊಡಿಸಿದ್ದ ಆತ ಅಷ್ಟೇನೂ ದುಂದು ವೆಚ್ಚದವನಲ್ಲ; ಸ್ವಲ್ಪ ಕಂಜೂಸಿಯನ್ನೂ ಮಾಡುತ್ತಾನೆ ಎಂಬುದು ಆಕೆಗೆ ಸೂಕ್ಷ್ಮವಾಗಿ ಅರ್ಥವಾಗಿರುತ್ತದೆ. ಈಕೆ ತನ್ನೊಡನೆ ಅದೆಷ್ಟೇ ಚೆನ್ನಾಗಿ ಬೆರೆತರೂ ಕಾಣದ ಅದೃಶ್ಯ ಪರದೆಯನ್ನು ನಮ್ಮಿಬ್ಬರ ಮಧ್ಯೆ ಎಳೆದಿದ್ದಾಳೆಂದು ಆತನಿಗೂ ಅರ್ಥವಾಗದೆ ಇರುವುದಿಲ್ಲ. ಆದರೆ, ಅವೆಲ್ಲ ಋಣಾಂಶಗಳನ್ನು ಕಂಡೂ, ಅರ್ಥೈಸಿಕೊಂಡೂ ಅವರಿಗೆ ಪರಸ್ಪರರ ಸಾಹಚರ್ಯ ಸುಖ ಕೊಡುತ್ತದೆ. ಸಣ್ಣಪುಟ್ಟ ಮನಸ್ತಾಪಗಳನ್ನೆಲ್ಲ ದೊಡ್ಡ ಹೊಂದಾಣಿಕೆ ಮರೆಸಿಬಿಡುತ್ತದೆ.

ಅದು ಪ್ರೀತಿಯಲ್ಲ. ಪ್ರೇಮವಲ್ಲ. ಲೋಕದ ಕಣ್ಣಿಗೆ ಒಟ್ಟಿಗಿದ್ದೇವೆಂದು ತೋರಿಸಲು ನಾಟಕೀಯವಾಗಿ ಬದುಕು ಶುರು ಮಾಡಿದರೂ ಬರಬರುತ್ತ ಅವರಿಬ್ಬರ ನಡುವೆ ಅಂತರ್ವಾಹಿನಿಯೊಂದು ಹರಿಯತೊಡಗುತ್ತದೆ. ಅವನಿಗಾಗಿ ಆಕೆ, ಆಕೆಗಾಗಿ ಅವನು ಕಾತರಿಸುವ ಕ್ಷಣಗಳು ಹುಟ್ಟಿಕೊಳ್ಳುತ್ತವೆ. ಆಕೆ ತಡವಾಗಿ ಬಂದರೆ ಆತನಿಗೆ ಆತಂಕವಾಗುತ್ತದೆ. ಅಡುಗೆಯಲ್ಲಿ ಉಪ್ಪು ಒಂದೆರಡು ಕಲ್ಲು ಹೆಚ್ಚಾದರೆ ಅದನ್ನವನು ಮೆಚ್ಚಿಯಾನೇ ಎಂದು ಅವಳಿಗೂ ಸಂಕೋಚದ ದಿಗಿಲುಗಳು ಹುಟ್ಟಿಕೊಳ್ಳತೊಡಗುತ್ತವೆ. ಅವನ ಊಟೋಪಚಾರದ ಸೂಕ್ಷ್ಮಗಳನ್ನು ಆಕೆ, ಆಕೆಯ ಅಲಂಕಾರದ ಸೂಕ್ಷ್ಮಗಳನ್ನು ಆತ ಪರಸ್ಪರ ಚರ್ಚಿಸಿಕೊಳ್ಳದೇ ಹೋದರೂ ಅರ್ಥ ಮಾಡಿಕೊಳ್ಳುವಷ್ಟರ ಮಟ್ಟಿಗೆ ಹತ್ತಿರವಾಗುತ್ತಾರೆ. ಒಬ್ಬರು ಗೆಳೆಯರು ಹಿಂದೊಮ್ಮೆ ಮಾತಿನ ಮಧ್ಯೆ ಹೇಳಿದ್ದರು, “ನಾನು ನಾಸ್ತಿಕನಲ್ಲ; ಹಾಗಂತ ಪೂಜೆ-ಪುನಸ್ಕಾರ ಮಾಡುತ್ತಿದ್ದ ಆಸ್ತಿಕನೂ ಅಲ್ಲ. ಆಕೆ ಬದುಕಿದ್ದಾಗ ದೇವರ ಡಿಪಾರ್ಟ್‍ಮೆಂಟ್ ಆಕೆಯದ್ದೇ. ಅವಳು ದಿನ ಮುಂಜಾನೆ ತುಳಸಿಗೆ ನೀರು ಹಾಕುತ್ತಿದ್ದಳು. ಸಂಜೆ ದೇವರಿಗೆ ನಂದಾದೀಪ ಹಚ್ಚುತ್ತಿದ್ದಳು. ಅರ್ಧಗಂಟೆ ಭಕ್ತಿಯಿಂದ ಲಲಿತಾ ಸಹಸ್ರನಾಮ ಪಾರಾಯಣ ಮಾಡುತ್ತಿದ್ದಳು. ನಾನು ಅವನ್ನೆಲ್ಲ ದೂರದಿಂದ ಗಮನಿಸಿದವನೇ ಹೊರತು ಅವಳ ಆಚರಣೆಯಲ್ಲಿ ಎಂದೂ ಪಾಲ್ಗೊಂಡವನಲ್ಲ. ನನ್ನನ್ನು ಆಕೆ ಒತ್ತಾಯಿಸಿದವಳೂ ಅಲ್ಲ. ಆದರೆ ಆಕೆ ತೀರಿಕೊಂಡು ಹದಿನೈದನೇ ದಿನಕ್ಕೆ ನೋಡಿ; ನನಗೆ ಹುಚ್ಚು ಆವೇಶ ಬಂದು ಬಿಟ್ಟಿತು. ತುಳಸಿಗೆ ನೀರು ಹನಿಸಿದೆ, ಸಂಜೆ ನಂದಾದೀಪ ಹಚ್ಚಿದೆ, ಅವಳಂತೆಯೇ ಕೂತು ಸಹಸ್ರನಾಮ ಓದಿದೆ. ಇಡೀ ದೇಹವನ್ನು ಶೂನ್ಯವೆಂಬ ಏಕಭಾವ ತುಂಬಿಕೊಂಡಂತಾಯಿತು. ಪ್ರೀತಿ, ದುಃಖ, ಆವೇಶ, ಹತಾಶೆ, ವೈರಾಗ್ಯ, ವಿರಹ ಈ ಯಾವುದೂ ಅಲ್ಲದ ಆದರೆ ಎಲ್ಲವೂ ಆಗಿದ್ದ ಆ ಭಾವದಲ್ಲಿ ಒಂದೆರಡು ಗಂಟೆಗಳ ಕಾಲ ಕಳೆದೇಹೋಗಿದ್ದೆ”.

ವಿವೇಕ ಶಾನಭಾಗರ “ಸುಧೀರನ ತಾಯಿ” ಎಂಬ ಕತೆಯಲ್ಲಿ ಒಂದು ಪ್ರಸಂಗ ಬರುತ್ತದೆ. ಸುಧೀರನ ತಾಯಿ ಸರೋಜಿನಿ ಊರ ಉಳಿದೆಲ್ಲರಿಗಿಂತ ಎತ್ತರ ಬೆಳೆದು ಬಿಟ್ಟದ್ದರಿಂದ ಗಂಡು ಸಿಗುವುದು ಕಷ್ಟವಾಗಿ ಕೊನೆಗೆ ಉಪೇಂದ್ರನೆಂಬ ವಿಚಿತ್ರ ಮನುಷ್ಯನನ್ನು ಗಂಟು ಹಾಕಿಕೊಳ್ಳಬೇಕಾದ ಅನಿವಾರ್ಯತೆಗೆ ಬೀಳುತ್ತಾಳೆ. ಈಕೆಯೋ ಸೂಕ್ಷ್ಮ ಮನಸ್ಸಿನ ಹೆಣ್ಣು; ಅವನದ್ದು ಅದಕ್ಕೆ ತದ್ವಿರುದ್ಧವೆಂಬಂಥ ಜಡ ದೇಹ – ಜಡ ಮನಸ್ಸಿನ ವ್ಯಕ್ತಿತ್ವ. ತಾನು ಈಕೆಗೆ ಗುಲಗಂಜಿಯಷ್ಟೂ ತಕ್ಕವನಲ್ಲ ಎಂಬುದು ಗೊತ್ತಿದ್ದರಿಂದಲೇ ಆತ ರಾತ್ರಿಯ ಹೊತ್ತು ಅವಳನ್ನು ಹಿಂಜರಿಕೆಯಿಂದಲೇ ಮುಟ್ಟುತ್ತಾನೆ. ಅವಳಿಗೆ ಅವನ ಮೇಲೆ ಅಭಿಮಾನವೇ ಇಲ್ಲದ್ದರಿಂದ, ಪ್ರೀತಿಯೂ ಇರಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಅವನನ್ನು ಬಯಸುವುದು ಅವಳಿಗೆ ಸಾಧ್ಯವಾಗುವುದೇ ಇಲ್ಲ. ದಾಂಪತ್ಯವೆಂಬ ಬಂಡಿ ಹೀಗೆ ಯಾವುದೇ ಕೀಲೆಣ್ಣೆಯ ಉಪಚಾರವಿಲ್ಲದೆ ಒರಟೊರಟಾಗಿ ಸಾಗುತ್ತಿರುವಾಗ, ಆಕೆಗೊಂದು ದಿನ ತನ್ನ ಗಂಡನೆಂಬೋ ಗಂಡ ಮನೆ ಬಿಟ್ಟು ಹೋದ ಸುದ್ದಿ ಸಿಗುತ್ತದೆ. ಎಲ್ಲಿ ಹೋದ, ಯಾಕೆ ಹೋದನೆಂಬ ಯಾವೊಂದು ವಿವರಗಳೂ ಗೊತ್ತಿಲ್ಲದೆ ಆಕೆ ಹತಾಶಳಾಗಿ ಅವನ ನಿರೀಕ್ಷೆಗೆ ಕೂತುಬಿಡುತ್ತಾಳೆ. ಆದರೆ ಆತನ ಗೈರಿನಲ್ಲೇ ಆಕೆಗೆ ಅವನ ಮೇಲೆ ಪ್ರೀತಿ, ಮೆಚ್ಚುಗೆ, ಬಾಂಧವ್ಯಗಳು ಹುಟ್ಟುತ್ತವೆ. ಒಬ್ಬ ವ್ಯಕ್ತಿ ಕಣ್ಣೆದುರಿಂದ ದೂರವಾದಾಗ ಹುಟ್ಟುವ ಈ ಭಾವಕ್ಕೆ ಏನು ಹೆಸರು? ಕವಿಗಳಂತೂ ಹೆಸರಿಸಲು ಯತ್ನಿಸಿ ಸೋತಿದ್ದಾರೆ.

ಮೊದಲ ನೋಟದಲ್ಲಿ ಅತಿಭಯಂಕರವಾದ ಪ್ರೇಮೋನ್ಮಾದ ಹುಟ್ಟಿ ನಂತರ ಅದು ಮಂಜಿನಂತೆ ಕರಗುತ್ತಾ ಹೋಗುವುದು ಒಂದು ಬಗೆ. ಮೊದಮೊದಲು ದ್ವೇಷಿಸಿ, ದ್ವೇಷವಿಲ್ಲದಿದ್ದರೂ ತಿರಸ್ಕಾರದಿಂದ ನೋಡಿ, ಕೊನೆಗೆ ಪ್ರೀತಿ ಬೆಳೆಯುವುದು ಇನ್ನೊಂದು ಬಗೆ. ಆದರೆ ಈ ಎರಡು ವೈರುಧ್ಯಗಳ ನಡುವೆ ಪ್ರೀತಿ-ತಿರಸ್ಕಾರಗಳ ನಡುವಿನ ದಾರಿಯಲ್ಲಿ ನಡೆಯುವ ಪಯಣ ನಿಜಕ್ಕೂ ವಿಚಿತ್ರಾನುಭೂತಿ. ಈ ಭಾವ ಗಂಡಹೆಂಡಿರ ನಡುವಲ್ಲಿ ಮಾತ್ರ ಹುಟ್ಟಬೇಕೆಂದಿಲ್ಲ. ಅಣ್ಣ-ತಮ್ಮಂದಿರು, ಗೆಳೆಯರು, ನೆಂಟರ ನಡುವಲ್ಲಿ ಕೂಡ ಹುಟ್ಟಿ ಹಬ್ಬಬಹುದು. ಇಷ್ಟು ದಿನ ಜತೆಗಿದ್ದ, ಆದರೆ ಅರ್ಥವಾಗದೇ ಹೋಗಿಬಿಟ್ಟ ಎಂದು ಗೋಳಾಡುವವರನ್ನು ನೋಡಿದ್ದೇವೆ. ಬದುಕಿದ್ದಾಗ ಅರ್ಥ ಮಾಡಿಕೊಳ್ಳಬೇಕು ಎಂದು ಅನಿಸಿರುವುದಿಲ್ಲ. ಅಥವಾ ಅರ್ಥ ಮಾಡಿಕೊಳ್ಳಲು ಹೋದರೆ ಎಲ್ಲಿ ದೂರಾಗಿ ಬಿಡುತ್ತೇವೋ ಎಂಬ ಭಯದಲ್ಲಿ ಕೆಲವೊಮ್ಮೆ ನಮ್ಮ-ನಮ್ಮೊಳಗೆ ವೃತ್ತ ಎಳೆದು ನಿಂತು ಬಿಟ್ಟಿರುತ್ತೇವೆ. ಆದರೆ ಎದುರಿದ್ದ ವ್ಯಕ್ತಿ ಒಂದು ದಿನ ಇದ್ದಕ್ಕಿದ್ದಂತೆ ಇಲ್ಲವಾದಾಗ ವೃತ್ತಗಳಿಗೆ ಅರ್ಥವಿಲ್ಲವಾಗಿ ಹತಾಶೆ ತುಂಬಿಕೊಳ್ಳುತ್ತದೆ. ನಮ್ಮ ಬದುಕಿನ ಕೆಲವೊಂದು ಕ್ಷಣಗಳನ್ನು ಆ ವ್ಯಕ್ತಿಯ ಜೊತೆಗೂ ಹಂಚಿಕೊಂಡಿರುವುದಿಂದ ಅವನಿಲ್ಲವಾದಾಗ ಆ ಕ್ಷಣಗಳ ಅಸ್ತಿತ್ವಕ್ಕೆ ಸಾಕ್ಷಿಯಿಲ್ಲವಾದ ಬೇಸರ ನಮ್ಮೊಳಗೆ ಹಬ್ಬುತ್ತದೆ. ಜಯಂತ ಕಾಯ್ಕಿಣಿಯವರ “ಸೇವಂತಿ ಪ್ರಸಂಗ”ದಲ್ಲಿ ಭಾಷಾಶಾಸ್ತ್ರಿ ಭಾರ್ಗವ ತಿಪ್ಪೇಕ್ರಾಸಿನ ಬಲೂನು ಮಾರುವ ಹುಡುಗಿ ಸೇವಂತಿಯನ್ನು ಆರಿಸಿ ಸುಸಂಸ್ಕೃತ ಹೆಣ್ಣೆಂಬಂತೆ ರೂಪಿಸಿ ಅವಳೊಂದು ಪ್ರಶಸ್ತಿ ಗೆಲ್ಲುವಂತೆ ಮಾಡಿ ಕೊನೆಗೆ ನಿನ್ನ ಅಗತ್ಯ ಇನ್ನಿಲ್ಲ, ಹೋಗು ಎಂದು ಅಟ್ಟಿ ಬಿಡುತ್ತಾನೆ. ಆರು ತಿಂಗಳು ಭಾರ್ಗವನ ಭಾಷಾಭ್ಯಾಸದ ಭರಾಟೆಯಲ್ಲಿ ಹಣ್ಣುಗಿಣ್ಣಾದ ಸೇವಂತಿ ಮರು ಮಾತಾಡದೆ ತನ್ನ ಹಳೇ ತಿಪ್ಪೇಕ್ರಾಸಿಗೆ ಹೋಗುತ್ತಾಳೆ. ಆದರೆ ಆಕೆ ಅತ್ತ ನಿರ್ಗಮಿಸಿದ ಮೇಲೆಯೇ ಭಾರ್ಗವನಿಗೆ ತಪ್ಪಿನ ಅರಿವಾಗುತ್ತದೆ. ತನ್ನ ಬದುಕನ್ನು ಆ ಹೆಣ್ಣು ಅದೆಷ್ಟು ಬಗೆಯಲ್ಲಿ ಆವರಿಸಿಕೊಂಡಿದ್ದಳೆಂಬ ಜ್ಞಾನೋದಯವಾದ ಮೇಲೆ ಆಕೆಯನ್ನು ಹುಡುಕಿಕೊಂಡು ತಿಪ್ಪೇಕ್ರಾಸಿಗೆ ಬರುತ್ತಾನೆ. “ನಿನ್ನನ್ನೇನೂ ಹುಡುಕಿಕೊಂಡು ಬರಲಿಲ್ಲ. ಆದ್ರೆ ಮನೆಯಲ್ಲಿ ರೇಡಿಯೋ ಮರೀನ ಬಿಟ್ಟು ಬಂದಿದೀಯಲ್ಲ. ಅದನ್ನ ನೋಡಿಕೊಳ್ಳೋರು ಯಾರು?” ಎಂದು ಹುಸಿಕೋಪದಿಂದ ಗದರಿಸಿ ಆಕೆಯನ್ನು ಮತ್ತೆ ತನ್ನ ಮನೆಗೆ ಆಮಂತ್ರಿಸುತ್ತಾನೆ.

ಭಾರ್ಗವನೇನೋ ಅದೃಷ್ಟವಂತ. ಹುಡುಗಿ, ಹುಡುಕಿಕೊಂಡು ಬಂದಲ್ಲೇ ಸಿಕ್ಕಿದಳು. ಆದರೆ ಜೀವಮಾನಪೂರ್ತಿ ಜೊತೆಗಿದ್ದು ಕೊನೆಗೆ ವಿಳಾಸವಿಲ್ಲದ ಕ್ರಾಸಿಗೆ ಮಾಯವಾಗಿ ಹೋಗುವ ಸೇವಂತಿಯರ ನೆನಪು ಮಾತ್ರ ದಾರುಣ. ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನಗಳನ್ನೆಲ್ಲ ಕೊಟ್ಟು ಮೈಮರೆಸಿ ಕೊನೆಗೆ ಮರೆಯಾದವನು ನೆನಪಾಗಿ ಕಾಡುವುದರಲ್ಲೇನೂ ವಿಶೇಷವಿಲ್ಲ. ಆದರೆ ಒಂದಷ್ಟು ದೂರವನ್ನು ಸದಾ ಕಾಯ್ದುಕೊಂಡು ಸಮಾನಾಂತರವಾಗಿ ಹರಿಯುವ ರೇಖೆ ಒಂದು ದಿನ ಕಳೆದು ಹೋಗಿಬಿಟ್ಟರೆ ಉಳಿದು ಬಿಟ್ಟ ರೇಖೆಯಾದರೂ ಹೇಗೆ ಸಹಿಸಬೇಕು? ಇಷ್ಟು ದಿನ ಜೋಗುಳ ಹಾಡಿದ ಗರಗಸದಂತಹ ಗೊರಕೆಯ ಸದ್ದು ನಿಂತರೆ ಹುಟ್ಟುವ ಮೌನದ ಅಸಹನೀಯತೆಯನ್ನು ಅನುಭವಿಸಿದವರಷ್ಟೇ ಅರ್ಥ ಮಾಡಿಕೊಂಡಾರು.

 

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!