ಅಂಕಣ

ತ್ರಿವಳಿಗಳ ಹಾವಳಿ ಸಂತೆ – ಸಂತ ಹೃದಯದ ತಾಕಲಾಟ..

ಮಂಕುತಿಮ್ಮನ ಕಗ್ಗ ೫೬

ಮೇಲಿಂದ ನಕ್ಷತ್ರ ಜಯಘೋಷ ಸುತ್ತಣಿಂ |
ಭೂಲೋಕದರಚು ಕೆಳಗಿಂ ಮೂಳೆಯಳುವು ||
ಕೇಳಬರುತೀ ಮೂರು ಕೂಗೆನ್ನ ಹೃದಯದಲಿ |
ಮೇಳಯಿಸುತಿದೆ ಸಂತೆ – ಮಂಕುತಿಮ್ಮ || ೫೬||

ಈ ಮಾನವ ಜೀವನದಲ್ಲಿ ಕಾಡುವ ದ್ವಂದ್ವಗಳ ಪರಿ ಒಂದು ರೀತಿಯದಲ್ಲ. ಸುತ್ತಲಿಂದ ಬರುವ ಸಂಕೇತಗಳು ಗೊಂದಲವನ್ನು ಪರಿಹರಿಸುವುದಕ್ಕಿಂತ ಇನ್ನಷ್ಟು ಕ್ಲಿಷ್ಟಗೊಳಿಸುವುದೆ ಹೆಚ್ಚು. ಇದರ ಪ್ರಭಾವ ಕವಿ ಮನದಲ್ಲು ಆಗುವ ಪರಿಯನ್ನು ಈ ಪದ್ಯ ಹಿಡಿದಿಡಲೆತ್ನಿಸುತ್ತಿದೆ.

ಮೇಲಿಂದ ನಕ್ಷತ್ರ ಜಯಘೋಷ
ನಮ್ಮಲ್ಲಿ ಯಾವುದೇ ಅಲೌಕಿಕತೆ, ದೈವಿಕತೆಯ ಕುರುಹನ್ನು ಹುಡುಕಬೇಕಾದರೆ ಆಯಾಚಿತವಾಗಿ ಮೇಲೆ ನೋಡುತ್ತೇವೆ – ಆ ದೇವರೆನ್ನುವವನು ಅಲ್ಲೆಲ್ಲೊ ಮೇಲಿನ ಮೂಲೆಯಲ್ಲಿ ಕುಳಿತಿರುವ ಭಾವನೆಯಲ್ಲಿ. ಅಂತೆಯೆ ಮೇಲಿನ ಆಗಸದಲ್ಲಿ ಕಾಣುವ ನಕ್ಷತ್ರ ಜಯಘೋಷ ಕವಿಗೆ ಧನಾತ್ಮಕತೆ, ಹರ್ಷ, ಗೆಲುವಿನ ಸಂತೃಪ್ತವಾದನದಂತೆ ಅನಿಸುತ್ತದೆ. ಆ ಲೋಕದ ಊಹೆ, ಭ್ರಮೆ, ಕಲ್ಪನೆಗಳೆಲ್ಲದರ ಸಮ್ಮಿಶ್ರ ಸಂಗಮದಲ್ಲಿ ಅನುಭವಿಸಲಾಗದ ಅಲೌಕಿಕ ಲೋಕಕ್ಕೆಲ್ಲ ಸ್ವೇರವಿಹಾರ ಮಾಡಿಬಿಡುತ್ತದೆ ಮನ. ಅದರ ನಿಗೂಢತೆಯ ಕುರಿತಾದ ಅದಮ್ಯ ಕುತೂಹಲ-ಅರೆಬರೆ ಜ್ಞಾನ-ಅಲ್ಲಿನ ಸಾಮಾನ್ಯರ ಎಣಿಕೆಗೆ ನಿಲುಕದ ವಿಸ್ಮಯಸೋಜಿಗಗಳ ಕಲ್ಪನೆಗಳು ಅದನ್ನು ಮತ್ತಷ್ಟು ಅನನ್ಯವಾಗಿಸುತ್ತ ಇನ್ನಷ್ಟು ಮೇಲಿನ ಸ್ತರಕ್ಕೇರಿಸಿಬಿಡುತ್ತದೆ.

ಸುತ್ತಣಿಂ ಭೂಲೋಕದರಚು
ಆದರೆ ಅದೆ ಹೊತ್ತಿನಲ್ಲಿ, ನಮ್ಮ ಸುತ್ತಮುತ್ತಲಲ್ಲೇ ಕಣ್ಣು ಹರಿಸಿ ನೋಡಿದರೆ ಕಾಣುವ (ಸುಲಭದ ಗ್ರಹಿಕೆಗೆ ಸಿಗುವ) ಭೂಲೋಕದ ದೃಶ್ಯ, ಮೇಲಿನದಕ್ಕೆ ವಿರುದ್ಧವಾದ ಮತ್ತೊಂದು (ಕೆಳಸ್ತರದ) ದಿಕ್ಕಿಗಿಳಿಸಿಬಿಡುತ್ತದೆ. ಸುಶ್ರಾವ್ಯ-ಮಧುರ ಗಾನಾನುಭೂತಿಯ ಬದಲು ಬರಿ ಅರಚಾಟ-ಕಿರುಚಾಟ-ಗದ್ದಲಗಳಿಂದ ಕೂಡಿದ ಇಳೆಯ ದಿಗ್ಭ್ರಮೆಗೊಳಿಸುವ ಚಿತ್ರ ನಮ್ಮನ್ನಾವರಿಸಿಕೊಳ್ಳುತ್ತದೆ. ದೈವಿಕ ಅಲೌಕಿಕತೆಯಿಂದ ಸಾಮಾನ್ಯತೆಯ ಸ್ಪಂದನ – ಆಕ್ರಂದನಗಳ ನಡುವಿಗೆಳೆದು, ಆ ದೈವೀಕತೆಯ ಇರುವಿಕೆಯನ್ನೆ ಅನುಮಾನಿಸುವಂತೆ ಮಾಡಿಬಿಡುತ್ತವೆ.

ಕೆಳಗಿಂ ಮೂಳೆಯಳುವು
ಇವೆರಡರ ನಡುವಿನಲ್ಲಿ ಸಿಕ್ಕ ದಿಗ್ಭ್ರಾಂತಿಯೆ ಸಾಲದೆನ್ನುವಂತೆ, ಭೂಮಿಯೊಳಗೆಲ್ಲೊ ಪಾತಾಳಲೋಕದಲ್ಲಿ ಅವ್ಯಕ್ತವಾಗಿ ಸೇರಿಕೊಂಡ ಗತ ಜೀವಿಗಳ ಆಕ್ರಂದನ, ವಿಲಾಪ, ಪ್ರಲಾಪಗಳು ಕಾಡತೊಡಗಿ ಮತ್ತಷ್ಟು ಕಂಗೆಡಿಸಿಬಿಡುತ್ತವೆ – ಯಾವುದು ನಿಜ? ಯಾವುದು ಭ್ರಮೆ? ಯಾವುದು ಸತ್ಯ ? ಯಾವುದು ಸುಳ್ಳು ? – ಒಂದೂ ಅರಿಯಲಾಗದಂತೆ.

ಕೇಳಬರುತೀ ಮೂರು
ಮೇಲಿನ ಲೋಕ ಎನ್ನುವುದು ಪರದ ಚಿಂತೆಯ ಸಂಕೇತವಾದರೆ ಭೂಮಿ ಇಹದ ಚಿಂತೆಯ ಚಿತ್ರಣ; ಭೂತದ ಪಳೆಯುಳಿಕೆಗಳ ಇತಿಹಾಸ ಗತದ ಅಳಲು. ಹಾಗೆಯೇ ಮೇಲಿಂದ ಎನ್ನುವುದು ಉದಾತ್ತ, ಉನ್ನತ ಸ್ತರದ ಚಿಂತನೆಯ ಸಂಕೇತ; ತಲುಪಬಹುದಾದ ಗಮ್ಯ, ಗುರಿ, ಎತ್ತರದ ಸಾಧ್ಯತೆಗಳ ಅವಲೋಕನ. ಅವುಗಳ ಕುರಿತು ಯೋಚಿಸಿದಾಗ ಅದರ ನೇರ, ಸ್ವಚ್ಚ ಸಾಧ್ಯತೆಗಳ ಕಲ್ಪನೆ ಮುದ ನೀಡುತ್ತದೆ. ಆದರೆ ನಾವಿರುವ ವಾಸ್ತವ ಜಗವೆ ಬೇರೆ (ಭೂಮಿ). ಅಲ್ಲಿ ಸುತ್ತಮುತ್ತಲಿನಿಂದ ಹಲವಾರು ಅಡಚಣೆ, ಪ್ರಭಾವ, ಪ್ರಲೋಭನೆಗಳು ಬೆರೆತು ಮೇಲಿನ ಸ್ತರದ ಶುದ್ಧ ಆಲೋಚನೆಗಳೂ, ಅಷ್ಟಿಷ್ಟು ಕಲುಷಿತವಾಗುತ್ತವೆ. ಇನ್ನು ಅಂತರಾಳವೆಂಬ ಪಾತಾಳದಲ್ಲಿ ಹುಟ್ಟುವ ಕಲ್ಮಶಗಳು, ದ್ವಂದ್ವಗಳು, ಸ್ವಾರ್ಥಾಸ್ವಾರ್ಥದ ತಾಕಲಾಟಗಳು ಹೊರಗೆ ಪ್ರಕಟವಾಗದೆಯೇ ತಮ್ಮ ತಾಕತ್ತು ತೋರಿಸಿಬಿಡುತ್ತವೆ.

ಇಲ್ಲಿ ಗಮನಿಸಬೇಕಾದ ಸಂಕೇತವೆಂದರೆ ಮೇಲಿನ ಮೂರು ಉಪಮೆಗಳು ಕಾಲದ ಮೂರು ಆಯಾಮವನ್ನು ಸಂಕೇತಿಸುತ್ತವೆ ಎಂಬುದನ್ನು. ದೂರದಲ್ಲಿರುವ ಆಕಾಶದ ನಕ್ಷತ್ರ ಜಯಘೋಷ ಮುಂಬರುವ ಭವಿತದ, ಆಶಾವಾದದ ಸಂಕೇತವಾದರೆ, ಭೂಮಿಯ ಅರಚಾಟ ಪ್ರಸ್ತುತ ವರ್ತಮಾನದ ಸಂದಿಗ್ದತೆಯನ್ನು, ದುಗುಡ, ಕಳವಳ, ತುಮುಲಗಳನ್ನು ಬೊಟ್ಟು ಮಾಡಿ ತೋರಿಸುತ್ತದೆ. ಅವೆರಡರ ನಂತರದ ಭೂಮಿಯಡಿಯಲ್ಲಿ ಹೂತುಹೋದ ಮೂಳೆಯ ಅಳುವು ಗತಿಸಿ ಹೋದ ಭೂತಕಾಲವನ್ನು, ಅದು ಬಿಟ್ಟು ಹೋದ ಅಸಹಾಯಕತೆಯನ್ನು ಬಿಂಬಿಸುತ್ತದೆ.

ಕೂಗೆನ್ನ ಹೃದಯದಲಿ ಮೇಳಯಿಸುತಿದೆ ಸಂತೆ
ಹೃದಯದಲ್ಲಿ ಮೂಡುವ  ಪ್ರತಿಯೊಂದು ಯೋಚನೆ – ಆಲೋಚನೆಯೂ ಈ ಮೂರಂಶಗಳ ಮೂಸೆಯಲ್ಲಿ ಬಿದ್ದೆದ್ದು ಬರುವುದರಿಂದ – ಸಿಕ್ಕುವ ಉತ್ತರಗಳು ‘ಸಂತೆಯ ಹಾಗೆ’ ಗೊಂದಲದಿಂದ ಕೂಡಿರುವುದು ಸಹಜ. ಸಂತೆಯಲ್ಲಿ, ಕಾಸಿಗೆ ತಕ್ಕಂತೆ ಬೇಕಾದ್ದು ಆಯ್ದುಕೊಳ್ಳುವ ಹಾಗೆ, ಇಲ್ಲಿಯೂ ನಾವು ನಮಗೆ ಬೇಕಾದ್ದನ್ನು ಆರಿಸಿಕೊಳ್ಳುತ್ತೇವೆ. ಯಾವ ಆಯ್ಕೆ ಮೂರೂ ಸ್ತರದ ನಡುವೆ ಗೊಂದಲ ಹುಟ್ಟಿಸುವುದಿಲ್ಲವೋ – ಅದು ಸೂಕ್ತವಾಗಿರುವ ಆಯ್ಕೆಯಾಗಿರುತ್ತದೆ.

ಅಂದರೆ, ಬದುಕಿನ ಹೋರಾಟದಲ್ಲಿ ಸುಂದರ ಭವಿತಕ್ಕಾಗಿ ವರ್ತಮಾನದೊಡನೆ ಗುದ್ದಾಡುತ್ತ, ಜೋತುಬಿದ್ದ ಭೂತದ ಹೊರೆಯೊಡನೆ ಹೆಣಗಾಡುತ್ತ ಭೂತ-ಭವಿತಾ-ಪ್ರಸ್ತುತಗಳೆಲ್ಲವೂ ಕಲಸಿ ಹೋದ ಸಂತೆಯೊಂದರಲ್ಲಿ ನಮ್ಮ ಯುದ್ಧ ನಡೆಯುತ್ತಲೆ ಇರುತ್ತದೆ. ಕವಿಯಂತೆ ಎಲ್ಲರ ಹೃದಯದಲ್ಲೂ ಈ ಮೂರರ ಕೂಗು, ಪ್ರಭಾವ ಸದಾ ನಿರಂತರವಾಗಿ ಮೊಳಗುತ್ತಲೆ ಇರುತ್ತದೆ.  ‘ನನಗಿದು ಬೇಕು, ಅದು ಬೇಡ’ ಎಂದು ವಿಂಗಡಿಸಲಾಗದಂತೆ ಎಲ್ಲವು ಸಂತೆಯಲ್ಲಿ ಒಟ್ಟಾಗಿ ಮೇಳೈಸಿಕೊಂಡುಬಿಟ್ಟಿರುತ್ತವೆ. ಇದೆಲ್ಲ ತರಹದ ಸೂಕ್ಷ್ಮಗಳನ್ನು ಸಾಂಕೇತಿಕವಾಗಿ ಬಿಂಬಿಸುತ್ತಿದೆ ಈ ಕಗ್ಗ.

ಆ ಸಂತೆಯ ಗದ್ದಲದಲ್ಲೆ ನಮಗೆ ಬೇಕಾದುದನ್ನು ಹುಡುಕಿ ಹೆಕ್ಕಿಕೊಳ್ಳುವುದು ಈ ಜೀವನಯಾತ್ರೆಯ ಉದ್ದೇಶ, ಗುರಿ, ಅನಿವಾರ್ಯ ಎನ್ನುತ್ತಾನಿಲ್ಲಿ ಮಂಕುತಿಮ್ಮ.

#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

ನಾಗೇಶ ಮೈಸೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!