ಅಂಕಣ

ತಿಳಿ ಮೂಢ ಮನವೇ, ಸತ್ಯದಸ್ತಿತ್ವವಿರಬಹುದು ನಡು ಹಾದಿಯಲ್ಲೂ..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೪

ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ |
ಸಿಲುಕದೆಮ್ಮಯ ತರ್ಕ ಕರ್ಕಶಾಂಕುಶಕೆ ||
ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ |
ತಿಳಿಮನದೆ ನೋಳ್ಪರ್ಗೆ – ಮಂಕುತಿಮ್ಮ || ೦೫೪ ||

ನಾವು ಕಾಣುವ, ಒಪ್ಪಬಯಸುವ ಪ್ರತಿಯೊಂದನ್ನು ತರ್ಕಬದ್ಧ, ವೈಜ್ಞಾನಿಕ, ಕಾರ್ಯ-ಕಾರಣ ಸಂಬಂಧಿ ಮಸೂರದಡಿ ಪರಿಶೀಲಿಸಿ ಅದರ ನಿಖರತೆಯನ್ನು ನಿಸ್ಸಂಶಯವಾಗಿ ಸಾಬೀತುಪಡಿಸಿಕೊಳ್ಳಬಯಸುವುದು ಆಧುನಿಕ ಜಗದ ಪ್ರಚಲಿತ ವಿಧಾನ. ಆದರೆ ನೈಜ ಜಗದಲ್ಲಿ ಎಲ್ಲವು ಹಾಗೆ ವಿವರಿಸಲು ಬರುವುದಿಲ್ಲ. ತತ್ತ್ವ ಸಿದ್ಧಾಂತಗಳ ಹಿಡಿತಕ್ಕೆ ಸಿಗದ, ತರ್ಕಬದ್ಧ ವಿವರಣೆಗೆಗೆ ನಿಲುಕದ ಎಷ್ಟೋ ವಿಷಯಗಳು ನಮ್ಮ ಸುತ್ತಲೆ ಇವೆ. ಎಷ್ಟೋ ಬಾರಿ ಅವುಗಳನ್ನರಿಯಲು ಹುಲ್ಲು ಸವರುವ ಕೊಡಲಿಯಂತಹ ಪರಿಕರದ ಅವಶ್ಯಕತೆ ಇರುವುದಿಲ್ಲ; ತಿಳಿಮನದ, ಸಾಮಾನ್ಯಜ್ಞಾನದ ಸರಳ ಗ್ರಹಿಕೆಯಷ್ಟೆ ಸಾಕು. ಕೇವಲ ಒಂದೇ ವಿಧಾನ, ಕಟ್ಟುಪಾಡಿಗೆ ಶರಣಾಗದೆ ವಿಶಾಲ ದೃಷ್ಟಿಕೋನದಲ್ಲಿ ಇತರ ಸಾಧ್ಯತೆಗಳನ್ನು ಪರಿಗಣಿಸಿ ಗ್ರಹಿಸಿ ಗೌರವಿಸುವ ಮನೋಭಾವ ಮುಖ್ಯ ಎನ್ನುವುದು ಮಂಕುತಿಮ್ಮನ ಆಶಯ. ಹೇಗೂ, ಯಾವುದೇ ಹಾದಿಯಲ್ಲಿ ಹೊರಟರೂ ಎಲ್ಲವನ್ನು ನಿಸ್ಸಂದೇಹವಾಗಿ, ನಿಸ್ಸಂಶಯವಾಗಿ ವಿವರಿಸಲು ಆಗದು ಅಂದ ಮೇಲೆ ಕೇವಲ ಒಂದೇ ವಾದಸರಣಿ, ತತ್ತ್ವ ಸಿದ್ದಾಂತಕ್ಕೆ ಜೋತು ಬೀಳುವುದರಲ್ಲಿ ಅರ್ಥವಿದೆಯೇ ? ಎನ್ನುವುದಿಲ್ಲಿನ ಮೂಲ ಪ್ರಶ್ನೆ. ಅದರಲ್ಲೂ ಈಗಿನ ದಿನಗಳಲ್ಲಿ ನಾವು ಕಾಣುವ ಏಕಪಂಥಿಯ-ಶರಣಾಗತ ಮನೋಭಾವದ ವಾದವಿವಾದ ವೈಖರಿಯ ಹಿನ್ನಲೆಯಲ್ಲಿ ಗಮನಿಸಿದರೆ, ಈ ಕಗ್ಗದ ವೈಚಾರಿಕ ಮತ್ತು ವಿಶಾಲ ಮನೋಭಾವದ ಮೂಲಸಾರ ನಿಲುಕಿಗೆ ಎಟುಕುವುದು ಮಾತ್ರವಲ್ಲದೆ, ಇಂದಿನ ಪರಿಸರದಲ್ಲೂ ಪ್ರಸ್ತುತವಾಗುವ ಅದರ ಮಹತ್ವವನ್ನು ಸಹ ಎತ್ತಿ ತೋರಿಸುತ್ತದೆ.

ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ |
ಸಿಲುಕದೆಮ್ಮಯ ತರ್ಕ ಕರ್ಕಶಾಂಕುಶಕೆ ||

ಈ ಸೃಷ್ಟಿಯ ಮೂಲ ರಹಸ್ಯವನ್ನರಿಯುವ ಹುನ್ನಾರದಲ್ಲಿ, ಆ ಮೂಲ ಸಿದ್ದಾಂತ-ತತ್ತ್ವದ ಒಗಟು ಬಿಡಿಸುವ ತರ್ಕಬದ್ಧ ಸಿದ್ದತೆಯಲ್ಲಿ ಸುತ್ತಲು ನಡೆಯುತ್ತಿರುವ ನಿಸರ್ಗದ ಪ್ರತಿಯೊಂದು ಕಾರ್ಯವನ್ನು ಗಮನಿಸುತ್ತ ಹೋಗುತ್ತೇವೆ.  ಹಾಗೆ ಗಮನಿಸಿದ್ದೆಲ್ಲದರ ಕಾರಣ ಮೂಲವನ್ನು ಶೋಧಿಸುತ್ತ, ಒಂದೊಂದೆ ಒಗಟನು ಬಿಡಿಸುತ್ತ ಹೋದರೆ ಮುಂದೊಮ್ಮೆ ಎಲ್ಲದರ ಸಮೀಕರಿಸಿದ ಪೂರ್ಣ ಚಿತ್ರವೊಂದು ಅನಾವರಣವಾಗುವುದೆಂಬ ಉತ್ಸಾಹದಲ್ಲಿ ಮುನ್ನುಗ್ಗುತ್ತೇವೆ. ಆದರೆ ಅದೊಂದು ಅಷ್ಟು ಸುಲಭದಲ್ಲಿ ನಮ್ಮ ಹಿಡಿತಕ್ಕೆ ಸಿಗುವ ತತ್ತ್ವವಲ್ಲವೆಂದು ನಮಗರಿವಾಗುವುದಿಲ್ಲ. ಆ ಅರಿವಿನರಿವಿಲ್ಲದೆ ತರ್ಕಬದ್ಧವಾಗಿ ಸಮಸ್ಯೆಯನ್ನು ಬಿಡಿಸಲೆತ್ನಿಸುವ ಮನ, ಆ ಕುಲುಮೆಯಲ್ಲಿ ಬಯಸಿದ ಫಲಿತ ಕೈಗೆ ಸಿಗದಾಗ, ಮದವೇರಿದ ಆನೆಯನ್ನು ಬಲ ಪ್ರಯೋಗಿಸಿ ಅಂಕುಶದ ಮೂಲಕ ಹಿಡಿತಕ್ಕೆ ತರಲೆತ್ನಿಸುವ ಹಾಗೆ ಕರ್ಕಶವಾದ, ನಯವಲ್ಲದ ವಿಧಾನಗಳನ್ನೆಲ್ಲವನ್ನು ಪ್ರಯೋಗಿಸಿ ನೋಡುತ್ತದೆ – ‘ಹಾಗಾದರೂ ಫಲಿತ ಸಿಕ್ಕೀತೆ ?’ ಎನ್ನುವ ಹವಣಿಕೆಯಲ್ಲಿ.

ಹೀಗೆ ಸಮಸ್ಯೆಯ ಬಿಡಿಸಾಟದಲ್ಲಿ, ಎರಡು ವಿರುದ್ಧ ದಿಕ್ಕಿನ ತುಟ್ಟ ತುದಿಗಳ ತತ್ತ್ವ-ಸಿದ್ದಾಂತಗಳಲ್ಲೊಂದಕ್ಕೆ ಚಂದಾದಾರರಾಗುತ್ತಾ, ‘ಉತ್ತರವಿರುವುದು ಆ ತುದಿಯಲ್ಲೇ’ ಎಂದು ಸಾಧಿಸಿ ತೋರಿಸಲು ಹೆಣಗುತ್ತೇವೆಯೆ ವಿನಃ, ಸತ್ಯ ಆ ಎರಡು ತುದಿಗಳ ನಡುವಲೆಲ್ಲೋ ಕೂಡ ಇರಬಹುದಾದ ಸಾಧ್ಯತೆಯನ್ನು ಒಪ್ಪಿಕೊಳ್ಳದೆ ಅಲ್ಲಗಳೆಯುತ್ತೇವೆ. ಇದರಿಂದಾಗಿ ನಾವು ಕಾಣುವ, ಕಂಡುಕೊಳ್ಳುವ ಸತ್ಯ – ಅರ್ಧಸತ್ಯವಾಗಿರುತ್ತದೆಯೇ ಹೊರತು ಪರಿಪೂರ್ಣ, ಅಂತಿಮ ಸತ್ಯವಲ್ಲ. ಅದೇ ನೆಲಗಟ್ಟಿನಲ್ಲಿ ಮಿಕ್ಕರ್ಧ ಸತ್ಯದ ಶೋಧನೆಗೂ, ಅದೇ ರೀತಿಯ ಹಾದಿ ಹಿಡಿದಾಗ ಅದು ನಿರ್ಮಿಸುವ ಅರೆಬರೆ ಸತ್ಯದ ಸರಣಿ ಕೊನೆಗೆ ನಾವೇ ವಿವರಿಸಲಾಗದ, ಬಿಡಿಸಲಾಗದ ಗೊಂದಲದ ಗೂಡಾಗುತ್ತದೆಯೇ ಹೊರತು ನೈಜ ಸತ್ಯವಾಗುವುದಿಲ್ಲ. ಜತೆಗೆ ಹೇಗಾದರೂ ಸರಿ , ನಾವು ನಂಬಿಕೊಂಡ ಸಿದ್ಧಾಂತವೇ ಸರಿಯಾದದ್ದು ಎಂದು ಸಾಧಿಸಿ ತೋರಿಸಬೇಕೆಂಬ ಭಾವಾವೇಶದ ಒತ್ತಡ, ಪ್ರಲೋಭನೆಗೂ ಸಿಲುಕಿ ನೈತಿಕಾನೈತಿಕ ವಿವೇಚನೆಗೂ ಎಳ್ಳುನೀರು ಬಿಡುವಷ್ಟು ಹೊಂದಾಣಿಕೆ, ರಾಜಿಯ ಮಟ್ಟಕ್ಕಿಳಿದುಬಿಡುತ್ತೇವೆ. ಅದನ್ನೆಲ್ಲ ಕೇವಲ ಈ ಎರಡು ಕಗ್ಗದ ಸಾಲುಗಳಲ್ಲಿ ಮಾರ್ಮಿಕವಾಗಿ ಬಿಂಬಿಸಿದ್ದಾನೆ – ಮಂಕುತಿಮ್ಮ.

ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ |
ತಿಳಿಮನದೆ ನೋಳ್ಪರ್ಗೆ – ಮಂಕುತಿಮ್ಮ ||

ಅಂತಿಮ ಫಲಿತದಲ್ಲಿ ತರ್ಕ ವಾದವೆ ಆಗಲಿ, ಕರ್ಕಶಾಂಕುಶ ಪಥವೆ ಆಗಲಿ ಕೆಲಸಕ್ಕೆ ಬರುವುದಿಲ್ಲ. ಎಷ್ಟೊ ಸತ್ಯಗಳು ಆ ತರ್ಕ ಮತ್ತು ಒರಟುತನದ ನೆಲೆಯಲ್ಲಿ ಗ್ರಹಿಕೆಗೆ ಸಿಕ್ಕುವುದಿಲ್ಲ. ಎಷ್ಟೋ ಬಾರಿ ಇಂತಹ ಚಿಂತನೆಯ ಗ್ರಹಿಕೆಗಳು ಏನೂ ಯತ್ನಿಸದೆಯು, ಸಂಬಂಧಪಡದ ಅನೇಕ ಸೂಕ್ಷ್ಮ ಅನುಭವಗಳಲ್ಲಿ ಪ್ರತ್ಯಕ್ಷವಾಗಿಯೊ, ಪರೋಕ್ಷವಾಗಿಯೊ ಕಾಣಿಸಿಕೊಳ್ಳಬಹುದು. ಪೂರ್ವಗ್ರಹಪೀಡಿತರಾಗದೆ ಅವುಗಳನ್ನು ಪರಿಶೀಲಿಸಿದರೆ ಸರಳ, ನೈಜ, ನಂಬಲರ್ಹ ತುಣುಕು-ಹೊಳಹುಗಳ ರೂಪದಲ್ಲಿ ಗ್ರಹಿಕೆಗೆ ನಿಲುಕುತ್ತವೆ – ಅದನ್ನು ಗಮನಿಸಿ ನೋಡುವ, ಸರಳ ತಿಳಿ ಮನಸಿನಿಂದ ಗ್ರಹಿಸುವ ನೋಡುಗರಿಗೆ. ಅಂತಹ ಅವಕಾಶ ಸಿಕ್ಕಿದಾಗ , ಅನುಭವವಾದಾಗ ಅದನ್ನು ಹಿಡಿದು ಜ್ಞಾನದ ಗೂಡಿನಲ್ಲಿ ಶೇಖರಿಸಿಟ್ಟುಕೊಂಡುಬಿಡಬೇಕು ಎನ್ನುತ್ತಿದ್ದಾನಿಲ್ಲಿ ಮಂಕುತಿಮ್ಮ.

ಈ ಗಹನ ತತ್ತ್ವದ ಅರ್ಥ ಮಾಡಿಕೊಳ್ಳುವಿಕೆ ಬರಿಯ ತರ್ಕ, ವಿಜ್ಞಾನಗಳಂತ ಸೂತ್ರಬದ್ಧ, ಸಾಕ್ಷ್ಯ ಪ್ರೇರಿತ ಪರಿಕರಗಳಿಂದ ಮಾತ್ರವೆ ಸಾಧ್ಯವಾಗುವುದಿಲ್ಲ; ತರ್ಕದ ನಿಲುಕಿಗೆ ಸಿಗದ ಆದರೆ ಅನುಭವಗಮ್ಯವಾದ, ಅಂತಃಕರಣ ಪ್ರೇರಿತ ಸಲಕರಣೆಗಳ ಸಹಕಾರವೂ ಬೇಕು ಎನ್ನುವ ಭಾವ ಕೂಡ ಇಲ್ಲಿ ಅಡಕವಾಗಿದೆ.
#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

 

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!