ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೯
ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕೆ |
ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು ||
ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ ? |
ದಂಡವದನುಳಿದ ನುಡಿ – ಮಂಕುತಿಮ್ಮ || ೦೪೯ ||
ಸುತ್ತಲ ಜಗಸೃಷ್ಟಿಯ ನಿಗೂಢತೆಯ ಅರೆಬರೆ ತಿಳುವಳಿಕೆ, ಅದನ್ನು ಮೂಗಿನ ನೇರಕ್ಕೆ ಬಿಂಬಿಸಿಕೊಂಡು ಮತ್ತಷ್ಟು ಸಂಕೀರ್ಣವಾಗಿಸುವ ಜನ ಸಮೂಹ, ಕೈ ಸಿಕ್ಕಂತೆನಿಸಿದ ಹೊತ್ತಲ್ಲೆ ಜಾರಿಹೋಗುವ ಗ್ರಹಿಕೆ – ಹೀಗೆ ತರತರದ ತಹತಹಿಕೆಯಲ್ಲಿ ಮುಳುಗಿಹೋಗಿದೆ ಕವಿಮನ. ಇದೆಲ್ಲದರ ನಡುವೆಯೂ ಸತ್ಯಶೋಧಕ-ಪ್ರಚಾರಕರ ಸೋಗಿನಲ್ಲಿ ಕೆಲವು ವಿದ್ವಾಂಸರ, ಪಂಡಿತರ, ಶಾಸ್ತ್ರಿಗಳ ವಾದ-ಬೋಧನೆಯಲ್ಲಿರುವ ಎಡಬಿಡಂಗಿತನ ಮತ್ತು ದೌರ್ಬಲ್ಯಗಳನ್ನು ಗುರುತಿಸಿದ ಕವಿಮನ ಆಕ್ರೋಶಗೊಳ್ಳುತ್ತದೆ. ಆ ಕೋಪದಲ್ಲೆ ಅವರ ವಾದಸರಣಿಯತ್ತ, ಸಿದ್ದಾಂತ -ತತ್ತ್ವಗಳತ್ತ ಬೊಟ್ಟು ಮಾಡಿ ಪ್ರಶ್ನೆ ಕೇಳುತ್ತದೆ – ಅದರ ಮೂಲ ಉದ್ದೇಶವನ್ನೆ ಕೆಣಕುತ್ತ.
ಈ ಪಂಡಿತ-ಶಾಸ್ತ್ರಿಗಳೆನಿಸಿದ ವಿದ್ವಾಂಸಗಣದ ನಿಜವಾದ ಮೂಲೋದ್ದೇಶ , ಕಾಣಿಸಿದ್ದು – ಕಾಣಿಸದರ, ನಿಜ – ಸುಳ್ಳುಗಳ, ಸತ್ಯ – ಮಿಥ್ಯಗಳ ನಡುವೆಯಿರುವ ಕಂದಕವನ್ನು ಮುಚ್ಚಿಹಾಕಲು ಅಥವಾ ದಾಟಲು ಬೇಕಾಗಿರುವ ಸೇತುವೆಯಾಗುವುದು ತಾನೆ? ನಿಜಕ್ಕು ಅವರಿಗೆಲ್ಲ ಹೃದಯದಾಳದಿಂದ ಆ ಕಾಳಜಿಯಿದ್ದರೆ, ನಿಜಾಯತಿಯಿಂದ ಆ ಸೇತುವೆ ಕಟ್ಟಬೇಕೆಂದಿದ್ದರೆ ಅದಕ್ಕೆ ಬರಿಯ ಪುಸ್ತಕ ಜ್ಞಾನವಾಗಿದ್ದರೆ ಸಾಲದು. ಅದು ಕೇವಲ ಯೋಜನೆಯ ರೂಪುರೇಷೆಗಳನ್ನು, ಸಿದ್ದಾಂತರೂಪಿ ಆಕಾರವನ್ನು ಒದಗಿಸುತ್ತದಷ್ಟೆ ಹೊರತು ನೈಜ ಕಾರ್ಯಜ್ಞಾನವನ್ನಲ್ಲ. ಆ ಕಾರ್ಯಸಾಧುತ್ವ ಅರಿವಾಗಬೇಕಾದರೆ ಕಂದಕದ ಅಳ, ಅಗಲ, ಉದ್ದದ ಅರಿವಿರಬೇಕು. ಆಗಷ್ಟೆ ಸೇತುವೆಯಿರಬೇಕಾದ ಸ್ಥೂಲ ರೂಪದ ಚಿತ್ರಣ ಸಿಗುವುದು. ಅಲ್ಲದೆ ಪುಸ್ತಕದಿಂದ ಮಸ್ತಕಕೆ (ಮೆದುಳಿಗೆ) ಮಾತ್ರ ಸೇತುವೆಯಾದರೆ ಸುಖವಿಲ್ಲ (ಅರ್ಥಾತ್ ತಾರ್ಕಿಕವಾಗಿ ಸರಿಯಿರುವುದು). ಯಾಕೆಂದರೆ, ನಿಜಜೀವನದ ಪ್ರತಿನಿತ್ಯದ ಆಗುಹೋಗುಗಳಲ್ಲಿ – ಅದರಲ್ಲೂ ಮಾನವ ಸಂಬಂಧದ ಜಂಜಾಟದಲ್ಲಿ, ಮೆದುಳಿನ ಹಾಗೆ ಹೃದಯವೂ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ವಿಷಯಗಳಲ್ಲಿ ನಿರ್ಧಾರವನ್ನಾಳುವುದು ಬರಿ ಹೃದಯದೆ ಕರೆಯೇ ಹೊರತು ಮೆದುಳಿನ, ಪುಸ್ತಕ ಜ್ಞಾನದ ತರ್ಕವಲ್ಲ.
ಈ ವಿದ್ವಾಂಸರೆನಿಸಿಕೊಂಡ ಜನರು ನಿಜಕ್ಕೂ ಸತ್ಯ-ಮಿಥ್ಯಗಳ ನಡುವೆ ಸೇತುವೆ ಕಟ್ಟಲು ಹೊರಟರೆ ಮೊದಲು ನರಮಾನವನ ಹೃದಯದಾಳದ ತೊಳಲಾಟ, ಸಂಘರ್ಷ, ಭಾವಾಭಾವಗಳನ್ನು ಪರೀಕ್ಷಿಸಿ ಅರಿತುಕೊಳ್ಳುವ ಯತ್ನ ಮಾಡಬೇಕು. ಆ ಪರೀಕ್ಷಣೆಯಲ್ಲೆ ಮಾನವರ ಹೃದಯದಾಳದಲ್ಲಿಯ ನಂಬಿಕೆ, ಅನಿಸಿಕೆ, ಕಷ್ಟ, ಕಾರ್ಪಣ್ಯ, ಮೃದುತ್ವ, ಒರಟುತನ, ಕಾಠಿಣ್ಯತೆ (ಬಿರುಬು) ಇತ್ಯಾದಿ ತರತರದ ಒಳಿತುಕೆಡುಕಿನ ಭಾವಗಳೆಲ್ಲದರ ಅನಾವರಣವಾಗುತ್ತದೆ. ಅಲ್ಲಿನ ನಿರೀಕ್ಷೆ, ತಳಮಳ, ಸತ್ಯದ ಅರಿವಿನಿಂದಿರುವ ಸಾಮೀಪ್ಯ-ದೂರ ಇತ್ಯಾದಿಗಳೆಲ್ಲ ಸೂಕ್ಷ್ಮಅಂಶಗಳ ಸ್ಥೂಲ ಅರಿವಾದರೂ ಇಲ್ಲದೆ, ಅವರು ಸೇತುವೆ ಕಟ್ಟಲಾದರೂ ಹೇಗೆ ಸಾಧ್ಯ? ಮಾನವ ಹೃದಯದ ನೈಜ ಅಗತ್ಯಗಳ ಸ್ಪಷ್ಟ ಅರಿವಿಲ್ಲದೆ, ಬರಿಯ ತಾರ್ಕಿಕ ತೀರ್ಮಾನಗಳ ಸಾಧ್ಯಾಸಾಧ್ಯತೆ-ಕಾರ್ಯಸಾಧುತ್ವದ ಪರಿಗಣನೆಯಿಲ್ಲದೆ, ಪುಸ್ತಕ ತತ್ವದ ಮಾತನಾಡಿದರೆ ಅದೆಲ್ಲವು ಬರಿ ಅಲಂಕಾರಿಕ; ಆ ಪುಸ್ತಕದ ಬದನೆಯ ಶ್ರಮವೆಲ್ಲ ದಂಡ, ವ್ಯರ್ಥ, ಅದರಿಂದೇನು ಸುಖವಿಲ್ಲ ಎನ್ನುತ್ತಾನೆ ಮಂಕುತಿಮ್ಮ.
ಸಾಮಾನ್ಯ ಓದಿ, ತಿಳಿದವರೆಂಬ ಹಮ್ಮಿನಲ್ಲಿ ಅನುಭವದಿಂದ ತಮ್ಮ ಕೈ ಕೆಸರಾಗಿಸಿಸಿಕೊಳ್ಳದೆ, ನೆಲದ ಮೇಲಿನ ಕಷ್ಟಸುಖಗಳ ಪರಿಗಣನೆಯಿರದೆ ತಾವು ಊಹಿಸಿಕೊಂಡ ಸ್ಥಿತಿಯೆ ನೈಜವೆಂದು ತೀರ್ಮಾನಿಸಿ ತಮ್ಮದೆ ರೀತಿಯ ಸೇತುವೆ ಕಟ್ಟ ಹೊರಟರೆ ಅದು ಯಾರ ಪ್ರಯೋಜನಕ್ಕು ಬರದು ಎನ್ನುವ ಭಾವವು ಇಲ್ಲಿದೆ. ಜತೆಗೆ ಹಿಂದಿನ ಪದ್ಯದಲ್ಲಿ ನುಡಿದ ಹಾಗೆ ಒಬ್ಬೊಬ್ಬರು ಒಂದೊಂದು ಸತ್ಯಾಂಶದ ಅನ್ವೇಷಣೆಗೆ ಹೊರಟಾಗ, ಆ ಅನ್ವೇಷಣೆಗಳೆಲ್ಲವು ಈ ಮೂಲಕಾಳಜಿಯನ್ನು ಸಾಮಾನ್ಯ ಅಂಶದಂತೆ ಗಮನದಲ್ಲಿಟ್ಟುಕೊಂಡಿರಬೇಕೆಂಬ ಆಶಯವು ಇದೆ.