Featured ಅಂಕಣ

ಸವಾಲುಗಳಿಗೇ ಸವಾಲೊಡ್ದಿದ ಆರೋನ್..!

 

      “ನೋ..ನೋ.. ನನಗೆ ನೋವಾಗುತ್ತದೆ, ಬೇಡ” ಎಂದು  ಆಸ್ಪತ್ರೆಯಲ್ಲಿ ಮಲಗಿದ್ದ ಒಂಭತ್ತು ವರ್ಷದ ಹುಡುಗ ಕೂಗಾಡುತ್ತಿದ್ದ. ಡಾಕ್ಟರ್ ಹಾಗೂ ನರ್ಸ್ ಆತನ ಪಕ್ಕ ಅಸಹಾಯಕರಾಗಿ ನಿಂತಿದ್ದರು. ಆಪರೇಷನ್ ಆಗಿ ಹಲವು ದಿನ ಕಳೆದ ನಂತರ ಹೊಲಿಗೆ ಬಿಚ್ಚಲು ಪ್ರಯತ್ನಿಸುತ್ತಿದ್ದರು ಆ ಡಾಕ್ಟರ್. ಆದರೆ ಆ ಪುಟ್ಟ ಹುಡುಗ ಬಿಟ್ಟರೆ ತಾನೆ! ನೋವಾಗುವುದು ಸಹಜವೇ, ಯಾಕೆಂದರೆ ಅಲ್ಲಿ ದಾರದ ಬದಲು ಸ್ಟೇಪಲ್’ಗಳನ್ನು ಬಳಸಿದ್ದರು. ಅದನ್ನು ತೆಗೆಯುವಾಗ ಕೆಲವೊಮ್ಮೆ ಸಿಕ್ಕಿ ಹಾಕಿಕೊಂಡು ನೋವಾಗುವುದುಂಟು. ಹಾಗಾಗಿಯೇ ಆತ ಅದನ್ನು ಮುಟ್ಟಲು ಕೂಡ ಬಿಡದೆ ಹಠ ಮಾಡುತ್ತಾ ಕೂಗಾಡುತ್ತಿದ್ದ. ಆತನ ತಾಯಿ ಪಕ್ಕದಲ್ಲಿ ಕುಳಿತು ಸಮಾಧಾನ ಮಾಡುತ್ತಿದ್ದಳು. “ಸ್ಟೇಪಲ್’ಗಳನ್ನು ತೆಗೆಯಲೇಬೇಕು ಅಲ್ಲವೇ?” ಎಂದು ನಿಧಾನವಾಗಿ ತಿಳಿ ಹೇಳುತ್ತಿದ್ದಳು. ಆದರೆ ಆತ ಒಪ್ಪಲು ತಯಾರಿರಲಿಲ್ಲ. ಕೊನೆಗೆ ತಾಯಿ ಹತಾಶಳಾಗಿ, “ಆರೋನ್, ನೀನು ರಿಮೋಟ್’ನಿಂದ ಚಲಿಸುವ ಕಾರು ಬೇಕು ಎಂದು ಬಹಳ ದಿನಗಳಿಂದ ಹೇಳುತ್ತಿದ್ದೆಯಲ್ಲವೇ.. ಅದನ್ನು ಕೊಂಡುಕೊಳ್ಳಲು ಹಣ ಬೇಕು ತಾನೆ. ನೀನು ಈ ಸ್ಟೇಪಲ್’ಗಳನ್ನು ತೆಗೆಸಿಕೊಂಡರೆ ನಾನು ನಿನಗೆ ಹಣ ಕೊಡುತ್ತೇನೆ. ಒಂದು ಸ್ಟೇಪಲ್’ಗೆ ಒಂದು ಡಾಲರ್” ಎಂದಳು. ಪಾಪದ ಹುಡುಗನಿಗೆ ನೋವಿಗಿಂತ ಕಾರಿನ ಆಸೆ ದೊಡ್ದದಾಗಿತ್ತು ಒಪ್ಪಿಕೊಂಡ. ಕೊನೆಗೆ ಪೂರ್ತಿ ಹೊಲಿಗೆ ಬಿಚ್ಚಿದ ಮೇಲೆ ನೂರು ಡಾಲರ್’ಗಳನ್ನು ಗಳಿಸಿಕೊಂಡ. ಅಂದರೆ ನೂರು ಸ್ಟೇಪಲ್’ಗಳನ್ನು ಹಾಕಲಾಗಿತ್ತು!!

ಆರೋನ್ ಆಂಡರ್ಸನ್ ಎಂಬ ಈ ಹುಡುಗ ಕ್ರಿಸ್’ಮಸ್ ಆಚರಿಸಲು ತನ್ನ ಅಜ್ಜಿಯ ಮನೆಗೆ ಹೋಗಿದ್ದಾಗ ಬೆನ್ನಿನ ಕೆಳಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿತ್ತು. ಡಾಕ್ಟರ್ ಬಳಿ ಹೋಗಿ, ಹಲವು ಸ್ಕ್ಯಾನ್’ಗಳ ನಂತರ ಆತನಿಗೆ ಕ್ಯಾನ್ಸರ್ ಉಂಟಾಗಿರುವುದು ತಿಳಿದು ಬಂದಿತ್ತು. ಬೆನ್ನಿನ ಕೆಳಭಾಗದಲ್ಲಿ ಒಂದು ದೊಡ್ಡ ನಿಂಬೆ ಹಣ್ಣಿನಷ್ಟು ಗಾತ್ರದ ಟ್ಯೂಮರ್ ಕಂಡು ಬಂದಿತ್ತು. ಆರೋನ್ ತನ್ನ ಎಂಟನೇ ಹುಟ್ಟುಹಬ್ಬವನ್ನು ಮೊದಲ ಕೀಮೋ ತೆಗೆದುಕೊಂಡು ಆಚರಿಸಿಕೊಂಡಿದ್ದ. ಅಲ್ಲಿಂದ ಆತನ ಬದುಕು ಬದಲಾಗಿದ್ದು. ಸುಮಾರು ಒಂದು ವರ್ಷಗಳ ಕಾಲ ಕೀಮೊಥೆರಪಿ ಹಾಗೂ ರೇಡಿಯೇಷನ್ ಮಾಡಲಾಯಿತು. ಆರೋನ್ ಒಂಭತ್ತನೇ ವರ್ಷಕ್ಕೆ ಕಾಲಿಟ್ಟಾಗ ಆ ಟ್ಯೂಮರ್’ನ್ನು ತೆಗೆಯಲು ಒಂದು ಮೇಜರ್ ಸರ್ಜರಿಯನ್ನು ಮಾಡಲಾಯಿತು. ಆ ಟ್ಯೂಮರ್’ನೊಂದಿಗೆ ಕೆಲವು ನರಗಳನ್ನು ಕೂಡ ತೆಗೆಯಬೇಕಾಯಿತು. ಪರಿಣಾಮವಾಗಿ ಆರೋನ್ ತನ್ನ ಕಾಲುಗಳ ಶಕ್ತಿಯನ್ನು ಕಳೆದುಕೊಂಡ. ಆದರೆ ಭರವಸೆಯನ್ನಲ್ಲ!!

  

ಚಿಕ್ಕ ವಯಸ್ಸಿನಲ್ಲಿಯೇ ಆರೋನ್ ಬದುಕು ಒಡ್ಡಿದ ಸವಾಲನ್ನು ಎದುರಿಸಿದ್ದ. ಅದರ ನಂತರ ಸವಾಲುಗಳು ಒಂದು ರೀತಿ ಆತನ ಹವ್ಯಾಸವೇ ಆಗಿ ಹೋಯಿತು. ಹೊಸ ಹೊಸ ಸವಾಲುಗಳನ್ನು ತಾನೇ ತೆಗೆದುಕೊಂಡು ಅದನ್ನು ಸಾಧಿಸಲು ಸಾಧ್ಯವೇ ಎಂದು ನೋಡುವುದು ಆತನ ಬದುಕಿನ ಒಂದು ಭಾಗವೇ ಆಗಿ ಹೋಗಿದೆ. ನಾವುಗಳು ಕೆಲವನ್ನು ಇದು ಸಾಧ್ಯ ಇದು ಸಾಧ್ಯವೇ ಇಲ್ಲ ಎಂದು ವಿಂಗಡಣೆ ಮಾಡಿ ಅಲ್ಲೊಂದು ಬೇಲಿ ಹಾಕಿಟ್ಟು ಬಿಡುತ್ತೇವೆ. ಇಂತಹ ಬೇಲಿಗಳನ್ನೇ ಮುರಿಯುತ್ತಾ ಸಾಗಿದ್ದಾನೆ ಆರೋನ್!  ಆತನಿಗೆ ಕೂಡ ಸವಾಲುಗಳ ಮಧ್ಯೆ ನಮಗೆಲ್ಲ ಅನಿಸುವಂತೆಯೇ, “ಇದನ್ನ ಬಿಟ್ಟು ಬಿಡೋಣ” ಎನ್ನುವಂತಹ ಯೋಚನೆಗಳು ಕೂಡ ಬರುತ್ತದೆ. ಆದರೆ ಆಗೆಲ್ಲ ತಾನು ಇದನ್ನ ಏಕೆ ಮಾಡುತ್ತಿದ್ದೇನೆ ಎಂದು ಯೋಚಿಸುತ್ತಾನೆ.

ಆರೋನ್ ಆಲಾಂಡ್ ಸಮುದ್ರದಲ್ಲಿ ೩೭ ಕಿಲೋಮೀಟರ್ ಈಜಿ ದಡ ಸೇರಬೇಕೆಂಬ ಸವಾಲನ್ನ ಎತ್ತಿಕೊಂಡಿದ್ದ. ಆತನ ಕೇವಲ ತನ್ನ ಕೈಗಳನ್ನು ಮಾತ್ರ ಬಳಸಿ ಈಜಬೇಕಿತ್ತು. ಆತ ಏನು ಚಿಕ್ಕಂದಿನಿಂದ ಈಜು ಕಲಿತವನಲ್ಲ. ಈ ಸವಾಲಿಗಾಗಿ ಕಲಿತ. ಒಂದೇ ವರ್ಷದಲ್ಲಿ ಈ ಸವಾಲನ್ನು ಎದುರಿಸಲು ನೀರಿಗೆ ಜಿಗಿದಿದ್ದ. ಅಂದು ಸುಮಾರು ೨೦ ಕಿಲೋಮೀಟರ್ ಕ್ರಮಿಸುವಷ್ಟರಲ್ಲಿಯೇ ಆತನಿಗೆ ಸುಸ್ತಾಗತೊಡಗಿತ್ತು. ಕೈಗಳು ನೋಯಲಾರಂಭಿಸಿತ್ತು. ಅದೂ ಕೂಡ ಆ ಚಳಿಯಲ್ಲಿ ತಣ್ಣನೆಯ ನೀರಿನಲ್ಲಿ ಈಜುವುದು ಇನ್ನೂ ಕಷ್ಟವಾಗಿತ್ತು. ಆ ಕ್ಷಣದಲ್ಲಿ ಆತನಿಗೆ “ಆರೋನ್ ನಿಲ್ಲಿಸಿಬಿಡು.. ಸಾಕು” ಎಂಬ ಯೋಚನೆ ಬಂದಿತ್ತು. ಒಮ್ಮೆ ಹಿಂತಿರುಗಿ ನೋಡಿದ, ಸಪೋರ್ಟ್ ಬೋಟ್’ನಲ್ಲಿ ಆತನ ತಾಯಿ ನಿಂತಿದ್ದಳು. ಆಕೆಗೆ ಸೀ-ಸಿಕ್’ನೆಸ್ ಇದ್ದರೂ ಕೂಡ ಮಗನಿಗಾಗಿ ಅಲ್ಲಿದ್ದಳು. ಆಗಾಗ ಮಗನಿಗೆ ಎನರ್ಜಿ ಬಾರ್’ಗಳನ್ನ, ಮೀಟ್’ಬಾಲ್ಸ್’ನ್ನು ಕೊಡುತ್ತ ಆತನ ಬೆನ್ನೆಲುಬಾಗಿ ನಿಂತಿದ್ದಳು. ಆಗಲೇ ಆತ ನಿರ್ಧರಿಸಿದ್ದು, ಇದನ್ನ ಹೀಗೆ ಮಧ್ಯದಲ್ಲಿಯೇ ನಿಲ್ಲಿಸಬಾರದು ಎಂದು. ಅದೂ ಅಲ್ಲದೇ ಆತ ಇದನ್ನು ಕ್ಯಾನ್ಸರ್ ಸಂಶೋಧನೆಗೆ ಹಣ ಸಂಗ್ರಹಿಸಲು ಮಾಡುತ್ತಿದ್ದ. ಅಂತಹ ಒಳ್ಳೆಯ ಉದ್ದೇಶಕ್ಕೆ ಶುರು ಮಾಡಿದ ಕಾರ್ಯವನ್ನು ಮಧ್ಯದಲ್ಲಿ ಕೈಬಿಡುವುದಾದರೂ ಹೇಗೆ? ಕೊನೆಗೂ ಆತ ೩೭ ಕಿಲೋಮೀಟರ್ ಕ್ರಮಿಸಿ ದಡ ಸೇರಿದ್ದ. “ಅದೊಂದು ಅದ್ಭುತವಾದ ಅನುಭವ” ಎನ್ನುತ್ತಾನೆ ಆರೋನ್.

ಆರೋನ್ ಕ್ಯಾನ್ಸರ್’ನಿಂದ ಚೇತರಿಸಿಕೊಳ್ಳುತ್ತಿದ್ದಾಗ ಓಲಾ ಸ್ಕಿನ್ನಾರ್ಮೋ ಬಗ್ಗೆ ಬಹಳಷ್ಟು ಓದುತ್ತಿದ್ದ. ಓಲಾ ಸ್ಕಿನ್ನಾರ್ಮೋ ಸೌತ್ ಪೋಲ್’ನ್ನು ತಲುಪಿದ ಮೊದಲ ಸ್ವೀಡಿಶ್. ಅದೂ ಕೂಡ ಯಾರೊಬ್ಬರನ್ನೂ ತನ್ನೊಟ್ಟಿಗೆ ಇಟ್ಟುಕೊಳ್ಳದೇ, ಒಬ್ಬನೇ ಸೌತ್ ಪೋಲ್ ತಲುಪಿದಂತವನು. ಆತನ ಸಾಹಸ ಕಥೆಗಳು ಆರೋನ್’ನ ಮೇಲೆ ಬಹಳ ಪ್ರಭಾವ ಬೀರಿದ್ದವು. ಅಂದು ಹಾಸಿಗೆಯಲ್ಲಿ ಮಲಗಿದ್ದ ಹುಡುಗ ತಾನೂ ಕೂಡ ಒಂದು ದಿನ ಸೌತ್ ಪೋಲ್’ಗೆ ಹೋಗಬೇಕೆಂದು ಕನಸು ಕಾಣಲು ಆರಂಭಿಸಿದ್ದ. ನಮ್ಮಂತವರು ಬಹುಶಃ ಅದು ಸಾಧ್ಯವೇ ಇಲ್ಲ ಎಂದು ಬಿಡುತ್ತಿದ್ದೆವೇನೋ. ಆದರೆ ಅದು ಸಾಧ್ಯ ಎಂದು ಆರೋನ್ ಸಾಧಿಸಿ ತೋರಿಸಿದ್ದಾನೆ.!! ಡಿಸೆಂಬರ್ ೨೧, ೨೦೧೬ ರಂದು ಸೌತ್ ಪೋಲ್’ನ್ನು ತಲುಪಿ ಈ ಅಸಾಧ್ಯವನ್ನೂ ಸಾಧ್ಯಗೊಳಿಸಿದ್ದಾನೆ. ವೀಲ್’ಚೇರಿನಲ್ಲಿ ಸೌತ್ ಪೋಲ್ ತಲುಪಿದ ಮೊದಲ ವ್ಯಕ್ತಿ ಆರೋನ್ ಆಂಡರ್ಸನ್!! ಈ ಸವಾಲು ಕೂಡ ಸುಲಭದ್ದಾಗಿರಲಿಲ್ಲ. ಅಂಟಾರ್ಕ್’ಟಿಕ್’ನಿಂದ ಸೌತ್ ಪೋಲ್’ವರೆಗೆ ಸ್ಕೀಯಿಂಗ್ ಮಾಡುತ್ತಾ ಹೋಗುವುದು.( ಆತನಿಗಾಗಿ  ಸಿಟ್ ಸ್ಕೀ ಅಂದರೆ ಕುಳಿತೇ ಸ್ಕೀ ಮಾಡುವ ವ್ಯವಸ್ಥೆ ಮಾಡಲಾಗಿತ್ತು) ಅಂದರೆ ಸುಮಾರು ೬೪೦ ಕಿಲೋಮೀಟರ್’ಗಳಷ್ಟು ದೂರ. ಅದೂ ಕೂಡ -೨೭.೫ ಡಿಗ್ರಿ ಸೆಲ್ಸಿಯಸ್’ನಲ್ಲಿ!! ಜೊತೆಗೆ ವಿಪರೀತ ಗಾಳಿ. ಆದರೂ ೨೧ ದಿನಗಳಲ್ಲಿಯೇ ಆ ದೂರವನ್ನು ಕ್ರಮಿಸಿ ಸೌತ್ ಪೋಲ್’ನ್ನು ತಲುಪಿದ್ದ ಆರೋನ್. “ಮಂಜು ಮತ್ತು ವೀಲ್’ಚೇರ್ ಒಳ್ಳೆಯ ಕಾಂಬಿನೇಶನ್ ಅಲ್ಲ” ಎನ್ನುತ್ತಾನೆ ಆರೋನ್. ಆದರೂ, ಎಷ್ಟೇ ಕಷ್ಟಕರವಾಗಿದ್ದರೂ ಆತ ಅದನ್ನು ಸಾಧಿಸಿ ತೋರಿಸಿದ್ದಾನೆ.

ಆರೋನ್’ನ ಸಾಧನೆಗಳ ಪಟ್ಟಿಯನ್ನು ನೋಡಿದರೆ ನೀವು ನಿಬ್ಬೆರಗಾಗುತ್ತೀರಿ. ಬಹುಶಃ ಇಂತಹ ಪದಗಳಿಗೆ ನಿಜಕ್ಕೂ ಅರ್ಥ ನೀಡುವವರು ಆರೋನ್’ನಂಥವರೇ ಇರಬೇಕು. ಆರೋನ್ ಮೂರು ವಿಭಿನ್ನ ಕ್ರೀಡೆಯಲ್ಲಿ ನಾಲ್ಕು ಬಾರಿ ಪ್ಯಾರಾ-ಒಲಂಪಿಕ್’ನಲ್ಲಿ ಭಾಗವಹಿಸಿದ್ದಾನೆ. ವರ್ಲ್ಡ್ ಜ್ಯೂನಿಯರ್ ಚಾಂಪಿಯನ್’ಶಿಪ್ ಅಥ್ಲೆಟಿಕ್’ನಲ್ಲಿ ಹತ್ತು ಗೋಲ್ಡ್ ಮೆಡಲ್’ಗಳನ್ನು ಗೆದ್ದಿದ್ದಾನೆ. ಕೆಬ್ನೆಕೈಸಾ ಪರ್ವತವನ್ನು ವೀಲ್’ಚೇರಿನಲ್ಲಿ ಹತ್ತಿದ ಮೊದಲ ವ್ಯಕ್ತಿ. ಮ್ಯಾಲ್ಮೋ ಇಂದ ಪ್ಯಾರಿಸ್’ವರೆಗೆ ಹ್ಯಾಂಡ್ ಸೈಕ್ಲಿಂಗ್ ಮಾಡಿದ್ದಾನೆ, ಆಫ್ರಿಕಾದ ಕಿಲಿಮಂಜಾರೋ ಪರ್ವತವನ್ನು ಹತ್ತಿದ್ದಾನೆ. ಐರನ್ ಮ್ಯಾನ್ ಪೂರ್ಣಗೊಳಿಸಿದ್ದಾನೆ, ಇತ್ಯಾದಿ ಇತ್ಯಾದಿ.. ಇವೆಲ್ಲದರ ಜೊತೆ ಆರೋನ್ ಸ್ವೀಡನ್’ನ ಖ್ಯಾತ ವಾಗ್ಮಿ ಕೂಡ ಹೌದು. ಸ್ವೀಡಿಶ್ ಚೈಲ್ಡ್’ಹುಡ್ ಕ್ಯಾನ್ಸರ್ ಫೌಂಡೇಶನ್’ನ ರಾಯಭಾರಿಯಾಗಿರುವ ಈತ ತನ್ನ ಸಾಹಸಗಳಿಂದ ಹಣ ಸಂಗ್ರಹಿಸಿ ಅದನ್ನು ಈ ಸಂಸ್ಥೆಗೆ ನೀಡುತ್ತಾನೆ. ಮಕ್ಕಳಲ್ಲಿ ಕ್ಯಾನ್ಸರ್ ಕಡಿಮೆಯಾಗಲಿ, ಅವುಗಳ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯಲಿ ಎನ್ನುವುದು ಆತನ ಉದ್ದೇಶ.

“ನಮ್ಮ ಕಷ್ಟದ ಸಮಯ ನಮಗೆ ಶಕ್ತಿ ನೀಡುವಂತಾಗಬೇಕು, ಕನಸು ಕಾಣುವಂತೆ ಪ್ರೇರೇಪಿಸಬೇಕು” ಎನ್ನುತ್ತಾನೆ ಆರೋನ್. ಆತ ಯಾವಾಗಲೂ ವೀಲ್’ಚೇರ್ ತನಗೆ ಬಂಧನವಾಗದಿರಲಿ ಎಂದು ಬಯಸಿದ್ದ. ಆತನ ಎಲ್ಲಾ ಸಾಹಸಗಳು “ಏನೇನು ಸಾಧ್ಯ” ಎನ್ನುವುದನ್ನ ನೋಡುವುದಕ್ಕಾಗಿಯೇ ನಡೆದಿದ್ದು. ಸಾಧ್ಯ ಎನ್ನುವುದಕ್ಕೆ ಕೊನೆ ಯಾವುದು, ಎಲ್ಲಿ ಅದು ಮುಗಿಯುತ್ತದೆ ಎಂದು ನೋಡುತ್ತಾ ತಿಳಿದುಕೊಳ್ಳುತ್ತಲೇ ಇಷ್ಟು ಸಾಹಸ ಮಾಡಿದ್ದು ಹಾಗೂ ಮುಂದೆ ಮಾಡಲಿರುವುದು. ಆತ ಹೀಗೆಯೇ ಅಸಾಧ್ಯ ಎನ್ನುವುದಕ್ಕೆ ಹೊಸ ವ್ಯಾಖ್ಯಾನ ಬರೆಯಲಿ, ಆತನ ಸಾಧನೆಗಳ ಪಟ್ಟಿ ಇನ್ನೂ ಉದ್ದಕ್ಕೆ ಬೆಳೆಯಲಿ ಎಂದು ಹಾರೈಸೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!