ಈ ಮಾರ್ಚ್ ಎಫ್ರಿಲ್ ತಿಂಗಳು ಹಬ್ಬ, ಜಾತ್ರೆಗಳ ಸೀಸನ್ ಅಷ್ಟೇ ಅಲ್ಲ, ಪರೀಕ್ಷೆಯ ಪರ್ವ ಕಾಲವೂ ಹೌದು. ಹಿಂದೆಲ್ಲಾ ಪರೀಕ್ಷೆಯೆಂದರೆ ಅದು ಕೇವಲ ಮಕ್ಕಳಿಗಷ್ಟೇ ಎಂಬ ಭಾವನೆಯಿತ್ತು. ಪೋಷಕರು ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ನಿರಾಳರಾಗಿರುತ್ತಿದ್ದರು. ಪ್ರಸ್ತುತ ಪರೀಕ್ಷಾ ಕಾಲದಲ್ಲಿ ಸ್ವತಃ ವಿದ್ಯಾರ್ಥಿಗಳಾದರೂ ನಿರಾಳರಾಗಿದ್ದಾರು, ಆದರೆ ಪೋಷಕರು ನೆಮ್ಮದಿಯಿಂದಿರುವ ಉದಾಹರಣೆ ಸಾವಿಲ್ಲದ ಮನೆಯ ಸಾಸಿವೆಯೇ ಸರಿ! ಸದ್ಯ ಈ ನೆಪದಲ್ಲಾದರೂ ಗಂಡಸರಿಗೆ ಟಿ.ವಿ ರಿಮೋಟ್ ಮೇಲೆ ಅಷ್ಟಿಷ್ಟು ಸ್ವಾತಂತ್ರ್ಯ ಸಿಗುತ್ತಿದೆಯಲ್ಲ ಎಂಬ ಸಮಾಧಾನ.
ತಾವು ಬರೀ ಮೂರೇ ಮೂರನೆ ತರಗತಿವರೆಗೆ ಓದಿ ಯಶಸ್ವೀ ಜೀವನ ಸಾಗಿಸುತ್ತಿದ್ದರೂ, ತಮ್ಮ ಮಕ್ಕಳು ಮಾತ್ರ ಎಲ್ಲಾ ವಿಷಯಗಳಲ್ಲೂ ನೂರಕ್ಕೆ ನೂರು ಅಂಕಗಳನ್ನೂ ಪಡೆಯಬೇಕೆಂಬ ಒತ್ತಡ ಹೇರುವ ತಂದೆ-ತಾಯಂದಿರೇ ಜಾಸ್ತಿ. ಹಾಗಾಗಿ ಈ ತಲೆಮಾರಿನವರಿಗೆ ಎಕ್ಸಾಮಿನೇಷನ್ ಎನ್ನುವುದು ಜೀವನದ ಮಹತ್ವದ ಕಂಡೀಷನ್ ಆಗಿ ಮಾರ್ಪಟ್ಟಿದೆ. ಅಂಕದ ಮೇಲಿನ ಅಂಕೆ ಮೀರಿದ ಆಸೆ ಮಕ್ಕಳನ್ನು ವೃಥಾ ಆತಂಕದ ಕಂದಕಕ್ಕೆ ನೂಕುತ್ತಿದೆ ಎನ್ನುವುದು ಮಾತ್ರ ಕಟು ಸತ್ಯ. ಪರೀಕ್ಷೆಯೆಂದರೆ ವಿದ್ಯಾರ್ಥಿ, ಪೋಷಕರಲ್ಲಿನ ಆತಂಕ ಒಂದೆಡೆಯಾದರೆ, ಇನ್ನೊಂದೆಡೆಯಲ್ಲಿ ಅದನ್ನು ಯಶಸ್ವಿಯಾಗಿ ನಡೆಸಲು ಹರಸಾಹಸಪಡುವ ಸರ್ಕಾರ ಹಾಗೂ ಮಂಡಳಿಗಳ ತೀರದ ಮಂಡೆ ಬಿಸಿ.
ಭಾರೀ ಕಟ್ಟಡ, ಅಣೆಕಟ್ಟುಗಳಲ್ಲಿನ ಸಣ್ಣ ಪುಟ್ಟ ಸೋರಿಕೆಯನ್ನೂ ಪತ್ತೆ ಹಚ್ಚಿ ಯಶಸ್ವಿಯಾಗಿ ತಡೆಯುವ ಸರಕಾರಕ್ಕೆ ಪ್ರಶ್ನೆ ಪತ್ರಿಕೆಯ ಪುಟಗಳ ಸೋರಿಕೆ ಪತ್ತೆಹಚ್ಚಿ ನಿಯಂತ್ರಿಸುವುದು ತ್ರಾಸದಾಯಕ ಕಾರ್ಯ. ವಿದ್ಯಾರ್ಥಿಗಳು ಯಾವುದೋ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೆ ಪರಿತಪಿಸಿದಂತೆಯೇ ಸರ್ಕಾರವೂ ನಿರ್ವಿಘ್ನವಾಗಿ ಪರೀಕ್ಷೆಗಳನ್ನು ನಡೆಸಲಾಗದೆ ಹೆಣಗುತ್ತಿರುತ್ತದೆ. ಇದನ್ನು ನೋಡಿ ನಾವಷ್ಟೇ ಅಲ್ಲಾ ನೀವೂ ಭಂಗಪಡಿ ಎಂದು ವಿದ್ಯಾರ್ಥಿಗಳು ಮುಸಿ ಮುಸಿ ನಗುತ್ತಿರುವುದಂತೂ ಸುಳ್ಳಲ್ಲ. ಕೆಲವರ, ಅತಿಯಾದ ಅಂಕಗಳ ಬಾಯಾರಿಕೆಯೂ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾಗುತ್ತಿದೆ.
ಇನ್ನು, ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳನ್ನು ಎರಡು ವರ್ಗದವರನ್ನಾಗಿ ವಿಂಗಡಿಸಬಹುದು. ಒಂದು, ರಾತ್ರಿಯೆಲ್ಲಾ ನಿದ್ದೆ ಬಿಟ್ಟು, ಮಧ್ಯೆ ಮಧ್ಯೆ ‘ಟೀ’ ಕುಡಿಯುತ್ತಾ ಚೆನ್ನಾಗಿ ಓದಿಕೊಂಡು ಬಂದು ಪರೀಕ್ಷೆ ಬರೆಯುವವರು. ರಾತ್ರಿ ಗಡದ್ಧಾಗಿ ನಿದ್ದೆ ಮಾಡಿ, ಏನನ್ನೂ ಓದದೆ ಮರುದಿನ ‘ಕಾಪಿ’ ಮಾಡಿ ಬರೆಯಲೆತ್ನಿಸುವವರು ಇನ್ನೊಂದು ವರ್ಗದವರು. ಇಲ್ಲಿ ಮೊದಲಿನವರಿಗೆ ಪರೀಕ್ಷೆಯ ಹಾಲ್ ‘ಹಾಲಿನ ಪೇಡಾ’ದಂತಾದರೆ ಎರಡನೆಯ ವರ್ಗದವರಿಗದು ಮುಳ್ಳಿನ ಹಾಸಿಗೆ. ಏನೂ ಗೊತ್ತಿಲ್ಲದ ಪ್ರಶ್ನೆ ಬಂದರೂ ತಲೆಕೆಡಿಸಿಕೊಳ್ಳದೆ ಗೊತ್ತಿಲ್ಲದ ಉತ್ತರವನ್ನೇ ನೀಟಾಗಿ ಬರೆದಿಟ್ಟು ಬರುವಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸಿದ್ಧಹಸ್ತರು. ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆಗಿಂತಲೂ ತಮ್ಮ ಪರಿಸರ ಕಾಳಜಿಯೇ ಬಹುಮುಖ್ಯವೆನಿಸುತ್ತದೆ. ಹೇಗೆ ಅಂತೀರಾ? ಸೋ ಸಿಂಪಲ್. ಪರೀಕ್ಷೆಯಲ್ಲಿ ಹಾಳೆಗಳನ್ನು ಹೆಚ್ಚು ಬಳಸದೆ ಮರವನ್ನು ಉಳಿಸುವ ಮಹಾನ್ ಯೋಚನೆಯದು. ಆ ಮೂಲಕ ನಾವು ನೇಚರ್ ಫ್ರೆಂಡ್ಲಿ ಎಂದು ನಿರೂಪಿಸುವವರು. ಆದರೆ ಅಂಥವರು ಟೀಚರ್ ಫ್ರೆಂಡ್ಲಿ ಆಗಿರುವ ಸಾಧ್ಯತೆ ಮಾತ್ರ ಇಲ್ಲವೇ ಇಲ್ಲ..!
ಕೆಲವು ವಿದ್ಯಾರ್ಥಿಗಳು ಬರೆಯುವ ಉತ್ತರ ಹೇಗಿರುತ್ತದೆಯೆದರೆ, ಆ ಉತ್ತರ ಪತ್ರಿಕೆಯ ಮೇಲ್ಗಡೆ ಹೀಗೊಂದು ಡಿಸ್ಕ್ಲೇಮರ್ ಸೇರಿಸಿದರೆ ಸರಿಯಾಗಿ ಹೊಂದಾಣಿಕೆಯಾಗುತ್ತದೆ. “ಇಲ್ಲಿ ಬರೆದಿರುವ ಎಲ್ಲಾ ಉತ್ತರಗಳೂ ಕೇವಲ ಕಾಲ್ಪನಿಕ. ಒಂದೊಮ್ಮೆ ಇಲ್ಲಿ ಬರೆದಿರುವ ಯಾವುದೇ ಉತ್ತರಕ್ಕೂ ಹಾಗೂ ನಿಗದಿತ ವಿಷಯದ ಪಠ್ಯಪುಸ್ತಕದಲ್ಲಿ ಇರುವ ಅಂಶಗಳಿಗೂ ಯಾವುದೇ ರೀತಿಯ ಸಂಬಂಧ, ಹೋಲಿಕೆ ಕಂಡುಬಂದರೆ ಅದು ಬರೀ ಕಾಕತಾಳೀಯ ಮಾತ್ರ”.
ಓವರ್ ಡೋಸ್: ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗ ಯಾವ ಪ್ರಶ್ನೆಯನ್ನು ಇದು ಬರಲಿಕ್ಕಿಲ್ಲ ಎಂದು ಭಾವಿಸಿ ಓದದೇ ನಿರ್ಲಕ್ಷಿಸಿರುತ್ತೇವೆಯೋ ಆ ಪ್ರಶ್ನೆ ಪರೀಕ್ಷೆಗೆ ಬರುವ ಸಂಭಾವ್ಯತೆ ತುಂಬಾ ಹೆಚ್ಚು.